ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Showing posts with label ಮನೆತನದ ಪತ್ರಿಕೆ 'ಕವಿಕಿರಣ'. Show all posts
Showing posts with label ಮನೆತನದ ಪತ್ರಿಕೆ 'ಕವಿಕಿರಣ'. Show all posts

Tuesday, August 2, 2011

ಸಾರ್ಥಕ - ಪ್ರೇರಕ - ಅರ್ಥಪೂರ್ಣ

ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧುಬಳಗದವರ ಚತುರ್ಥ ಸಮಾವೇಶದ ವರದಿ
     ದಿನಾಂಕ ೨೭-೧೨-೨೦೦೯ರ ಮುಂಜಾನೆ ಬಿದ್ದ ಅಕಾಲಿಕ ತುಂತುರು ಮಳೆಯಿಂದ ನೆನೆದ ಭೂಮಿ ತಂಪಾಗಿತ್ತು. ಡಿಸೆಂಬರ್ ತಿಂಗಳಾದರೂ ಚಳಿಯ ಹೆಸರಿರಲಿಲ್ಲ. ತೀರ್ಥಹಳ್ಳಿಯ ದೀಕ್ಷಿತರ ಕಾಶಿ ಕಲಾಭವನ ಕೆಳದಿ ಕವಿಮನೆತನದವರು ಹಾಗೂ ಬಂಧು ಬಳಗದವರನ್ನು ಸ್ವಾಗತಿಸಲು ಸಜ್ಜಾಗಿತ್ತು. ಒಬ್ಬೊಬ್ಬರಾಗಿ ಹಾಗೂ ಗುಂಪಿನಲ್ಲಿ ಬಂದವರನ್ನು ದೀಕ್ಷಿತ ಸಹೋದರರು ಮತ್ತು ಕುಟುಂಬ ವರ್ಗದವರು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲರಿಗೂ ಉಪಾಹಾರವಾದ ನಂತರ ಬೆ.೧೦-೩೦ಕ್ಕೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಗೆ ಆಹ್ವಾನಿಸಿಲಾಗಿದ್ದ ಶ್ರೀ ಮತ್ತು ಶ್ರೀಮತಿ ಶೇಷಾದ್ರಿ ದೀಕ್ಷಿತ್, ಶ್ರೀ ಮತ್ತು ಶ್ರೀಮತಿ ಸುಬ್ರಹ್ಮಣ್ಯ ದೀಕ್ಷಿತ್, ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಶ್ರೀ ಕವಿ ನಾಗರಾಜಭಟ್ಟರು ವೇದಘೋಷಸಹಿತ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಗೊಳಿಸಿದರು.

     ಪ್ರಾರಂಭದಲ್ಲಿ ೧೪-೦೭-೦೯ರಂದು ನಿಧನರಾದ ಕವಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶಿವಮೊಗ್ಗದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು   ೧೪-೦೫-೦೯ರಂದು ನಿಧನರಾದ ಹಿರಿಯರಾದ ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ (ಕವಿ ಶ್ರೀಕಂಠಯ್ಯ ಮತ್ತು ಭಾಗೀರಥಮ್ಮನವರ ಪುತ್ರಿ)ರವರ ನಿಧನಕ್ಕೆ ಸಂತಾಪ ಮತ್ತು ಶ್ರದ್ಧಾಂಜಲಿ ಸೂಚಕವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
     ಕಾಶೀಬಾಯಿಯವರ ಸುಶ್ರಾವ್ಯ ಪ್ರಾರ್ಥನೆಯ ಬಳಿಕ ಕವಿ ಶ್ರೀಕಂಠರವರು ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಂಧವ್ಯಗಳ ಬೆಸುಗೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು ಎಲ್ಲಾ ಬಂಧು ಬಳಗದವರು ಪೂರ್ಣ ಸಹಕಾರ ನೀಡಬೇಕೆಂದು ಕೋರಿದರು. ಅನಾರೋಗ್ಯದ ಕಾರಣ ಸಮಾರಂಭಕ್ಕೆ ಬರಲಾಗದಿದ್ದ ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಸಂದೇಶವನ್ನು ಓದಿ ಹೇಳಲಾಯಿತು.


     ಶ್ರೀ ಕ.ವೆಂ. ನಾಗರಾಜ್‌ರವರು ಮಾತನಾಡುತ್ತಾ ಕೌಟುಂಬಿಕವಾಗಿ ಅಲ್ಲದೆ ಐತಿಹಾಸಿಕವಾಗಿ ಸಹ ಈ ಸಮಾವೇಶ ಮಹತ್ವದ್ದಾಗಿದೆ; ಎಷ್ಟೋ ಜನಕ್ಕೆ ಹೆಚ್ಚೆಂದರೆ ೩-೪ ತಲೆಮಾರುಗಳ ವಿವರ,  ಅದೂ ಅಪೂರ್ಣವಾಗಿ, ಗೊತ್ತಿರಬಹುದು. ಆದರೆ ೧೨ ತಲೆಮಾರುಗಳ ವಿವರ ಲಭ್ಯವಿರುವ ಕೆಳದಿ ಕವಿಮನೆತನ ವಿಶಿಷ್ಟವಾದುದು ಎಂದರು. ನಮ್ಮ ಪೂರ್ವಜರು ಸಾಮಾನ್ಯರಂತೆ ಜೀವಿಸಿದ್ದರೆ ಈ ವಿವರ ತಿಳಿಯುತ್ತಿರಲಿಲ್ಲ. ಕಲೆ, ಸಾಹಿತ್ಯ, ಆಡಳಿತ, ಧಾರ್ಮಿಕ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದರಿಂದಲೇ ಈ ವಿವರ ಲಭ್ಯವಾದುದನ್ನು ಮರೆಯದೆ, ನಾವುಗಳೂ ಸಹ ನಮ್ಮಗಳ ಗುರುತು ಮುಂದಿನ ಪೀಳಿಗೆಗೆ ಉಳಿಯುವಂತೆ ಸಾಧಕರಾಗಬೇಕೆಂದು ಕರೆಯಿತ್ತರು. ಈ ಸಮಾವೇಶಗಳಲ್ಲಿ ಕವಿ ಕುಟುಂಬಗಳಲ್ಲದೆ ಅವರ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳನ್ನು ಮತ್ತು ಬಂಧು ಬಳಗದವರನ್ನು ಆಹ್ವಾನಿಸುತ್ತಿರುವುದು ತುಂಬಾ ಉತ್ತಮ ಮತ್ತು ಔಚಿತ್ಯಪೂರ್ಣವೆಂದ ಅವರು, ಹೆಣ್ಣುಮಕ್ಕಳಿಗೆ ತಮ್ಮ ತವರಿನ ಬಗ್ಗೆ ಅಭಿಮಾನವಿದ್ದು, ತವರಿನವರ ಏಳಿಗೆಗೆ ಹರ್ಷ ಪಡುತ್ತಾರೆಂದರು. ಮೊದಲ ಎರಡು ವಾರ್ಷಿಕ ಸಮಾವೇಶಗಳನ್ನು ಕವಿ ಕುಟುಂಬಗಳವರು ಆಯೋಜಿಸಿದ್ದರೆ, ಹಿಂದಿನ ಮತ್ತು ಈಗಿನ ಸಮಾವೇಶಗಳನ್ನು ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಕುಟುಂಬಗಳವರು ಆಯೋಜಿಸಿರುವುದಕ್ಕೆ ಕವಿ ಮನೆತನದ ಹೆಣ್ಣು ಮಕ್ಕಳ ತವರಿನ ಅಭಿಮಾನ ಮತ್ತು ವಾಂಛಲ್ಯವೇ ಕಾರಣವಲ್ಲದೆ ಮತ್ತೇನೂ ಅಲ್ಲವೆಂದು ಶ್ಲಾಘಿಸಿದರು. ಕವಿಕಿರಣ ಪತ್ರಿಕೆಯ ಉದ್ದೇಶ ಉತ್ತಮ ಬಾಂಧವ್ಯ ಮತ್ತು ಸಜ್ಜನಶಕ್ತಿಯ ಜಾಗರಣಕ್ಕೆ ಪ್ರೇರಿಸುವುದೇ ಆಗಿದೆಯೆಂದರು.

    ಕವಿಕಿರಣ ಪತ್ರಿಕೆಯ ಡಿಸೆಂಬರ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ದೀಕ್ಷಿತರು ಸಮಾರಂಭಕ್ಕೆ ಹಾಜರಾದ ಎಲ್ಲರಿಗೂ ಆಭಾರ ವ್ಯಕ್ತಪಡಿಸುತ್ತಾ  ಇಂತಹ ಉತ್ತಮ ಕೆಲಸಕ್ಕೆ  ತಮ್ಮ ಮತ್ತು ತಮ್ಮ ಸಹೋದರರುಗಳ ಸಹಕಾರ ಸದಾ ಇರುವುದೆಂದು ತಿಳಿಸಿದರು.


     ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮಾತನಾಡುತ್ತಾ ಮಾನವ ಪ್ರಾಣಿಗಿಂತ ಭಿನ್ನವಾಗಿದ್ದು, ಕೇವಲ ತಿಂದು, ಉಂಡು ಸಾಯುವುದಾದಲ್ಲಿ ಪ್ರಾಣಿಗೂ ಅವನಿಗೂ ವ್ಯತ್ಯಾಸವಿರುವುದಿಲ್ಲ; ಸಾಯುವ ಮುನ್ನ ಏನನ್ನಾದರೂ ಸಾಧಿಸಬೇಕೆಂದೂ, ಜೀವನದಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದೂ ಕರೆಯಿತ್ತರು. ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡುದು ಅವಿಸ್ಮರಣೀಯವಾಗಿತ್ತು. ಸುಮಾರು ೫೫ಸಾವಿರ ಕಿಲೋಮೀಟರ್ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ ಸಂದರ್ಭದಲ್ಲಿ ಆದ ಕೆಲವು ಅನುಭವಗಳನ್ನು ತಿಳಿಸಿದಾಗ ಎಲ್ಲರೂ ವಿಸ್ಮಿತರಾದರು. ೩ವರ್ಷಗಳಿಗೂ ಹೆಚ್ಚಿನ ಸಮಯದ ಪ್ರವಾಸದ ಬಗ್ಗೆ ಒಂದು ಗಂಟೆಯಲ್ಲಿ ತಿಳಿಸುವುದು  ಕಷ್ಟವಾದರೂ ತಿಳಿಸಿದಷ್ಟು ಸಾಧನೆಯ ವಿವರ ಕೇಳಿದವರಿಗೆ ತಾವೂ ಏನನ್ನಾದರೂ ಸಾಧಿಸಬೇಕೆಂಬ ಪ್ರೇರಣೆ ಆಗಿರಲಿಕ್ಕೂ ಸಾಕು. ಈ ಅಪ್ರತಿಮ ಸಾಧನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇವರ ಸಾಧನೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದು, ಸುಮಾರು ೩೦ ವರ್ಷಗಳ ನಂತರವಾದರೂ ಸರ್ಕಾರ ಸಹ ಇತ್ತೀಚೆಗೆ ನವದೆಹಲಿಯಲ್ಲಿ ಇವರನ್ನು ಸನ್ಮಾನಿಸಿದ ಸಂಗತಿ ತಿಳಿದು ಎಲ್ಲರಿಗೂ ಸಂತೋಷವಾಯಿತು. ಇವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಸನ್ಮಾನ, ಪ್ರಶಸ್ತಿಗಳನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದು ಇವು ಎಲ್ಲರಿಗೂ ಪ್ರೇರಣೆ ನೀಡಿತು ಎಂಬುದರಲ್ಲಿ ಸಂಶಯವಿಲ್ಲ.


     ಕವಿ ನಾಗರಾಜಭಟ್ಟರು ಮಾತನಾಡಿ ಕವಿ ಮನೆತನದ ಪೂರ್ವಜರು ಸಾಧಕರಾಗಿದ್ದು ಅವರ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಬೇಕೆಂದು ಕರೆ ನೀಡಿದರು.
     ಸಂಶೋಧನಾ ರತ್ನ ಶ್ರೀ ಕೆಳದಿ ಗುಂಡಾಜೋಯಿಸರು ಕೆಳದಿ ಕವಿ ಮನೆತನ, ಕೆಳದಿ ಜೋಯಿಸ್ ಮನೆತನ ಹಾಗೂ ದೀಕ್ಷಿತ್ ಕುಟುಂಬಗಳ ನಡುವೆ ಇರುವ ಸಂಬಂಧ, ಪರಸ್ಪರರ ಅಭಿವೃದ್ಧಿಗೆ ಪೂರಕರಾಗಿರುವ ಕುರಿತು ದಾಖಲೆಗಳ ಸಹಿತ ಪ್ರಸ್ತುತ ಪಡಿಸಿದ್ದು ಸಭೆಗೆ ಮೆಚ್ಚುಗೆಯಾಯಿತು.
   
    ಶ್ರೀ ಕವಿ ಸುರೇಶ್‌ರವರು ಮರೆಯಲಾಗದ ಕೆಳದಿ ಸಾಮ್ರಾಜ್ಯ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಕ್ಕಾಗಿ ಬಂದ ಸಂಭಾವನೆಯ ಅರ್ಧಭಾಗವನ್ನು ಕವಿಮನೆತನದ ಮಂಗಳನಿಧಿಗೆ ನೀಡುವುದಾಗಿ ಘೋಷಿಸಿದ್ದು ಸಭೆ ಇವರನ್ನು ಅಭಿನಂದಿಸಿತು.
     ದೀಕ್ಷಿತ್ ಸಹೋದರರು ಸನ್ಮಾನದ ಸಲುವಾಗಿ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪುಣ್ಯಕ್ಷೇತ್ರಗಳಿಗೆ ಸಹ ಹೋಗಿ ಬಂದಿದ್ದರ ನಿಮಿತ್ತ ಕಾಶಿ ಸಮಾರಾಧನೆ ಸಹ ಇದೇ ದಿನ ಇಟ್ಟುಕೊಂಡಿದ್ದು, ಎಲ್ಲಾ ಅತಿಥಿಗಳಿಗೆ ಸುಗ್ರಾಸ ಭೋಜನ ಏರ್ಪಾಡಾಗಿತ್ತು.
     ಶ್ರೀಮತಿಯರಾಧ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್, ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶ ಜೋಯಿಸ್ ಇವರುಗಳು ಪ್ರಧಾನ ಸೂತ್ರಗಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಲ್ಲದೆ ಸೃಜನಾತ್ಮಕವಾಗಿದ್ದವು. ಆ ಸಂದರ್ಭದಲ್ಲಿ ಸ್ವತಃ ರಚಿಸಿ ಹಾಡಿದ ಶ್ರೀಮತಿ ಹೇಮಾ ಮಾಲತೇಶ ಮತ್ತು ಸಂಗಡಿಗರ ಹಾಡುಗಳಿಗೆ ನೃತ್ಯ ಬಾರದ ಸಭಿಕರುಗಳೂ ವಯಸ್ಸಿನ ತಾರತಮ್ಯವಿಲ್ಲದೆ ಹೆಜ್ಜೆ ಹಾಕಿ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವುದರ ಸಂಕೇತವಾಗಿತ್ತಲ್ಲದೆ, ಸಮಾವೇಶವನ್ನು ಅರ್ಥಪೂರ್ಣ ಎನ್ನಿಸಿತ್ತು. ಆಶುಭಾಷಣ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಹಲವರು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು.

     ಮುಂದಿನ ಸಮಾವೇಶ: ತಮ್ಮ ತಾಯಿ ದಿ. ವಿನೋದಾಬಾಯಿ ಗೋಪಾಲರಾವ್‌ರವರ ನೆನಪಿನಲ್ಲಿ ಮುಂದಿನ ವಾರ್ಷಿಕ ಸಮಾವೇಶವನ್ನು ತಾವು, ತಮ್ಮ ಸಹೋದರರು ಮತ್ತು ಕುಟುಂಬವರ್ಗದವರು ಶಿಕಾರಿಪುರದಲ್ಲಿ ದಿನಾಂಕ ೨೬-೧೨-೨೦೧೦ರಂದು ನಡೆಸಿಕೊಡುವುದಾಗಿ ಘೋಷಿಸಿದ ಶ್ರೀ ಸೋಮಶೇಖರ್ ಮತ್ತು ಕಾಶೀಬಾಯಿರವರನ್ನು ಸಭೆ ಅಭಿನಂದಿಸಿತು. ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ತಾಯಿ ದಿ. ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ದಿ.ಶ್ರೀಮತಿ ವಿನೋದಾಬಾಯಿಯವರಿಬ್ಬರೂ ದಿ.ಕವಿ ಶ್ರೀಕಂಠಯ್ಯ-ಭಾಗೀರಥಮ್ಮನವರ ಹೆಣ್ಣುಮಕ್ಕಳು ಎಂಬುದು ಗಮನಿಸಬೇಕಾದ ಸಂಗತಿ.

     ಕುಮಾರಿ ಸಿಂಧು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದಳು. ಕೆಳದಿ ವೆಂಕಟೇಶ ಜೋಯಿಸ್ ಎಲ್ಲರಿಗೂ ಆಭಾರ ವ್ಯಕ್ತಪಡಿಸಿದರು. ಆಹ್ವಾನ ಪತ್ರಿಕೆ ಮುದ್ರಿಸಿ ಎಲ್ಲರಿಗೂ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ ಪೂರ್ವ ತಯಾರಿ ಬಗ್ಗೆ ಶ್ರಮ ವಹಿಸಿದ ಕವಿ ಶ್ರೀಕಂಠ, ಗುರುಮೂರ್ತಿ, ದತ್ತಾತ್ರಿ ಸಹೋದರರನ್ನು ಅಭಿನಂದಿಸಲಾಯಿತು. ಸ್ಮರಣೀಯವಾಗಿ ಸಮಾವೇಶವನ್ನು ಆಯೋಜಿಸಿದ ದೀಕ್ಷಿತ್ ಸಹೋದರರುಗಳು, ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಕಿರಣ ಪತ್ರಿಕೆಯ ಮುಂದಿನ ಸಂಚಿಕೆ ಪ್ರಾಯೋಜಕರಾದ ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬದವರನ್ನು ಸಭೆ ಅಭಿನಂದಿಸಿತು. ಸಾಂಸ್ಸೃತಿಕ ಕಾರ್ಯಕ್ರಮಕ್ಕೆ ಕಳೆಕೊಟ್ಟವರು, ಕವಿ ಮನೆತನದ ಮಂಗಳನಿಧಿಗೆ ದೇಣಿಗೆ ನೀಡಿದವರು, ಸಮಾವೇಶವನ್ನು ಅರ್ಥಪೂರ್ಣಗೊಳಿಸಲು ಸಹಕರಿಸಿದವರು ಎಲ್ಲರನ್ನೂ ಅಭಿನಂದಿಸುವುದರೊಂದಿಗೆ ಸಮಾವೇಶ ಸಫಲ ಅಂತ್ಯ ಕಂಡಿತು. ದೀಕ್ಷಿತ್ ಕುಟುಂಬವರ್ಗದ ಆತಿಥ್ಯ ಮತ್ತು ಸಮಾವೇಶದ ಮಧುರ ನೆನಪುಗಳೊಂದಿಗೆ ಸಾಯಂಕಾಲದ ವೇಳೆಗೆ ಎಲ್ಲರೂ ತೀರ್ಥಹಳ್ಳಿಯಿಂದ ತೆರಳಿದರು.
******************
('ಕವಿಕಿರಣ'ದ ಜೂನ್, 2010ರ ಸಂಚಿಕೆಯಿಂದ).

ಕಳೆದು ಹೋಗಿದ್ದೇವೆ, ಹುಡುಕಿಕೊಡುವಿರಾ?

ಹಿನ್ನೋಟ:

     ವಂಶಮೂಲವನರಸಿ ಜಾಡರಿತು ಸಾರೆ|
     ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ||
     ಮುನ್ನೂರು ವರುಷಗಳ ಹಾದಿಯಿದು ಜಾಣಾ|
     ಹತ್ತು ತಲೆಮಾರುಗಳ ಯಶಗೀತೆ ಕಾಣಾ||

     ಕೆಳದಿ ಕವಿಮನೆತನಕ್ಕೆ ಸೇರಿದವರೆಂದು ಗೊತ್ತಿರದ ಕುಟುಂಬವೊಂದು ತಮ್ಮ ವಂಶದ ಮೂಲವನ್ನು ಹುಡುಕಿ ಸಫಲರಾಗಿ ಸಂಭ್ರಮಿಸಿದ ಕುರಿತು ಸಂಕ್ಷಿಪ್ತವಾಗಿ ತಮ್ಮೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ತುಡಿತದ ಫಲವೇ ಈ ಬರಹ. ಆ ಕುಟುಂಬ ಬೇರಾವ ಕುಟುಂಬವಾಗಿರದೆ ನಮ್ಮದೇ ಕುಟುಂಬವಾಗಿದೆ. ಸುಮಾರು ಎಂಟು ವರ್ಷಗಳ ಸುದೀರ್ಘ ಪ್ರಯತ್ನ ಈ ಯಶಸ್ಸಿನ ಹಿನ್ನೆಲೆಯಲ್ಲಿದೆ.
    ನನ್ನ ಅಜ್ಜ ದಿ.  ಸುಬ್ರಹ್ಮಣ್ಯಯ್ಯನವರು (೧೯೦೪-೧೯೬೬)   ಬಾಲ್ಯಾವಸ್ಥೆಯಲ್ಲೇ ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು, ಕೊಪ್ಪದಲ್ಲಿದ್ದ ತಮ್ಮ ಅಜ್ಜ (ತಾಯಿಯ ತಂದೆ) ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆದಿದ್ದರಿಂದ ಸಹಜವಾಗಿ ತಂದೆಯ ಕಡೆಯ ಸಂಬಂಧಗಳು ಬಿಟ್ಟುಹೋಗಿದ್ದಲ್ಲದೆ ಅವರ ಪರಿಚಯ ಮಕ್ಕಳು, ಮೊಮ್ಮಕ್ಕಳಿಗೆ ಆಗಲಿಲ್ಲ. ನಾವುಗಳೂ ನಮ್ಮ ಹೆಸರಿನ ಇನಿಷಿಯಲ್‌ನಲ್ಲಿದ್ದ ಕೆ ಅಂದರೆ ಕೊಪ್ಪ ಎಂದೇ ಭಾವಿಸಿದ್ದೆವು. ಸುಬ್ರಹ್ಮಣ್ಯಯ್ಯನವರು ತರ್ಪಣಾದಿ ಕಾರ್ಯಗಳಲ್ಲಿ ಸ್ಮರಿಸಬೇಕಾದ ಹೆಸರುಗಳ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು ತಮ್ಮ ಮಗ ದಿ. ವೆಂಕಟಸುಬ್ಬರಾಯರಿಗೆ (೧೯೨೫-೨೦೦೯) ಕೊಟ್ಟಿದ್ದರು. ಈ ಚೀಟಿಯನ್ನು ಗಮನಿಸಿದ ನಾನು ಅದರಲ್ಲಿನ ವಿವರಗಳನ್ನು ಆಧರಿಸಿ ವಂಶವೃಕ್ಷ ಸಿದ್ಧಪಡಿಸಿ ೨೦೦೦ನೆಯ ಸಾಲಿನಲ್ಲಿ ಪ್ರತಿಗಳನ್ನು ಬಂಧುಗಳಿಗೆ ನೀಡಿದ್ದೆನು. ಅದರಲ್ಲಿ ಕೊಪ್ಪದ ವೆಂಕಣ್ಣನ ಅಮರ ವಂಶಾವಳಿ ಎಂದೇ ನಮೂದಿಸಿದ್ದೆನು. ವರ್ಷಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಈ ವಂಶವೃಕ್ಷದಲ್ಲಿ ಪರಿಷ್ಕರಣೆ ಮಾಡುತ್ತಿದ್ದೆನು. ಈರೀತಿ ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಹೆಸರುಗಳವರ ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಾಗಿತು. ಯಾವ ಯಾವುದೋ ಸಮಾರಂಭಗಳಲ್ಲಿ. ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸುತ್ತಿದ್ದೆ.  ಅವರು ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು. ಹೇಳಬೇಕೆಂದರೆ ನನ್ನ ಹೆಚ್ಚಿನ ಗಮನ ಕೊಪ್ಪ ಮತ್ತು ಶಿವಮೊಗ್ಗಗಳಿಗೆ ಸೀಮಿತವಾಗಿತ್ತು. ಕಂದಾಯ ಇಲಾಖಾಧಿಕಾರಿಯಾಗಿ ನನಗಿದ್ದ ಕಾರ್ಯಬಾಹುಳ್ಯ ಸಹ ಈ ಕುರಿತು ಹುಡುಕಾಟಕ್ಕೆ ಅಡ್ಡಿಯಾಗಿತ್ತು.
     ರಾಜ್ಯ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದ ನನ್ನ ತಮ್ಮ ಸುರೇಶ ಐದು ವರ್ಷಗಳ ಹಿಂದೆ ಸ್ವಇಚ್ಛಾ ನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ನೆಲೆ ನಿಂತಾಗ ಆತನಿಂದ ಈ ಅನ್ವೇಷಣೆ ಮುಂದುವರೆಯಿತು. ನಾವಿಕ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರವೇಶದ್ವಾರಕ್ಕೆ ಕವಿ ಸುಬ್ರಹ್ಮಣ್ಯಯ್ಯನವರ ಹೆಸರಿಡಬೇಕೆಂದು ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿಯವರು ಬರೆದ ಪತ್ರ ಗಮನಿಸಿ ಕವಿ ಸುಬ್ರಹ್ಮಣ್ಯಯ್ಯರೆಂದರೆ ನಮ್ಮ ಅಜ್ಜನೇ ಇರಬೇಕೆಂದು ಭಾವಿಸಿ ಅವರನ್ನು ನನ್ನ ತಮ್ಮ ವಿಚಾರಿಸಿದ. ಆದರೆ ಅವರು ಉಲ್ಲೇಖಿಸಿದ ಕವಿ ಸುಬ್ರಹ್ಮಣ್ಯಯ್ಯ ನಮ್ಮ ಅಜ್ಜ ಆಗಿರಲಿಲ್ಲ. ಆದರೆ ಕೆಳದಿಯ ಗುಂಡಾಜೋಯಿಸರನ್ನು ಸಂಪರ್ಕಿಸಲು ನೀಡಿದ ಅವರ ಸಲಹೆ ಮಾತ್ರ ಅತ್ಯಂತ ಅಮೂಲ್ಯವಾದುದಾಗಿತ್ತು. ಅವರ ಸಲಹೆಯಂತೆ ಕೆಳದಿ ಗುಂಡಾಜೋಯಿಸರನ್ನು ನನ್ನ ತಮ್ಮ ಸಂಪರ್ಕಿಸಿ ವಿಚಾರಿಸಿದಾಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಶ್ರೀ ಗುಂಡಾಜೋಯಿಸರ ಬಳಿ ಇದ್ದ ಕವಿಮನೆತನದ ವಂಶವೃಕ್ಷದ ವಿವರಗಳು ನಮ್ಮ ವಂಶವೃಕ್ಷದ ವಿವರಗಳಿಗೆ ತಾಳೆಯಾಯಿತು.. ಎರಡು ವಂಶವೃಕ್ಷದಲ್ಲಿನ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಶ್ರೀ ಗುಂಡಾಜೋಯಿಸರ ಹತ್ತಿರವಿದ್ದ ವಂಶವೃಕ್ಷದಲ್ಲಿ ಹೆಸರಿಸಿದ್ದ ಬಂಧುಗಳನ್ನು ವಿಚಾರಿಸಲಾಗಿ ಅವರು ನಮ್ಮ ಗೋತ್ರದವರೇ ಆಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಜ್ಜ ಸುಬ್ರಹ್ಮಣ್ಯಯ್ಯನವರನ್ನು ಕಂಡಿದ್ದವರು, ಕೇಳಿದ್ದವರೇ ಆಗಿದ್ದಲ್ಲದೆ ನಮ್ಮ ಅಜ್ಜ ಅವರುಗಳ ಮನೆಗೆ ಹೋಗಿಬರುತ್ತಿದ್ದುನ್ನು ಧೃಢಪಡಿಸಿದ್ದು ಸಂಬಂಧ ಸರಪಳಿ ಒಂದಾಗಿದ್ದುದನ್ನು ಖಚಿತಪಡಿಸಿತು. ಹಲವಾರು ರೀತಿಯಲ್ಲಿ ಪರಿಶೀಲಿಸಿದಾಗ ವಿಷಯ ಮತ್ತಷ್ಟು ದೃಢಪಟ್ಟಿತು. ನಾವು ಕವಿಮನೆತನದವರೆಂದು ತಿಳಿದು ನಮಗೆ ಅತೀವ ಸಂತೋಷವಾಯಿತು. ಸಫಲ ಅನ್ವೇಶಣೆ ಮಾಡಿದ ಸುರೇಶ ಮತ್ತು ಅವನ ಸಹಕಾರಿಗಳಿಗೆ ಅಭಿನಂದನೆ ಸಲ್ಲಬೇಕು.
     ಹುಡುಕುವ ಕಾರ್ಯದಲ್ಲಿ ಸ್ವಜನರೂ ಸೇರಿದಂತೆ ಇತರರಿಂದಲೂ ಕೆಲವರ ಅಪಹಾಸ್ಯ, ನಿಂದೆ, ಸಂಶಯ, ತಿರಸ್ಕಾರ, ಅಲಕ್ಷ್ಯ, ಅಸಹಕಾರಗಳ ಜೊತೆಗೆ ಮೆಚ್ಚುಗೆ ಸಹಕಾರಗಳೂ ಬೆರೆತು ಒಳ್ಳೆಯ ಅನುಭವ ದೊರಕಿತು. ನಂತರದಲ್ಲಿ ಕ್ಷಿಪ್ರ ಬೆಳವಣಿಗೆಗಳಾದವು. ಪರಸ್ಪರ ಪರಿಚಯವೇ ಇಲ್ಲದಿದ್ದ, ಸಂಪರ್ಕ ಇಲ್ಲದಿದ್ದ ಬಂಧುಗಳನ್ನು ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ತಮ್ಮ ಸುರೇಶನ ಮನೆಯಲ್ಲಿ ಕವಿಕುಟುಂಬಗಳ ಮತ್ತು ಬಂಧುಬಳಗದವರ ಪ್ರಥಮ ಸಮಾವೇಶ ಜರುಗಿತು. ಅನೇಕ ವರ್ಷಗಳ ನಂತರ ಪ್ರಥಮವಾಗಿ ಬಂಧುಗಳ ಮಿಲನದ ಕಾರಣ ಅರುಣ ಪಾರಾಯಣ ಪಠಣ, ಮುಂತಾದ ವಿಧಿ ವಿಧಾನಗಳನ್ನು ನಡೆಸಲಾಯಿತು. ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆಗಳ ಕುರಿತು ಒಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲಾ ಹಿರಿಯರನ್ನು, ಸಹಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಸ್ಥೂಲ ಪರಿಚಯ, ವಂಶಾವಳಿ ವಿವರಗಳನ್ನು ಒಳಗೊಂಡ ಸುರೇಶನ ಕೃತಿ ಹಳೇ ಬೇರು-ಹೊಸ ಚಿಗುರು ಪುಸ್ತಕ ಬಿಡುಗಡೆಯಾಯಿತು.
     ೨೫-೧೨-೦೭ರಲ್ಲಿ ಶ್ರೀ ಕೆಳದಿ ರಾಮಮೂರ್ತಿ ಮತ್ತು ಶ್ರೀ ನಾಗರಾಜಭಟ್ಟರ ಕುಟುಂಬಗಳ ಪ್ರಾಯೋಜಕತ್ವದಲ್ಲಿ ನಡೆದ ಎರಡನೆಯ ಸಮಾವೇಶದಲ್ಲಿ ಸುರೇಶ ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕ ಕರ್ಮಯೋಗಿ ಕಲಾವಲ್ಲಭ ಎಸ್.ಕೆ.ಲಿಂಗಣ್ಣಯ್ಯ -ಜೀವನಚರಿತ್ರೆ ಬಿಡುಗಡೆಯಾಯಿತು. ಬೆಂಗಳೂರಿನ ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬವರ್ಗದವರ ಪ್ರಾಯೋಜಕತ್ವದಲ್ಲಿ ೨೮-೧೨-೦೮ರಂದು  ನಡೆದ ಮೂರನೆಯ ಸಮಾವೇಶದಲ್ಲಿ  ನಾನು ನನ್ನ ಅಜ್ಜನ ಕುರಿತು ಬರೆದ ಕವಿ ಸುಬ್ರಹ್ಮಣ್ಯಯ್ಯ- ಒಂದು ಜೀವಗೀತೆ ಎಂಬ ಪುಸ್ತಿಕೆ ಬಿಡುಗಡೆ, ಕವಿ ಸುರೇಶ ಸಿದ್ಧಪಡಿಸಿದ ಎಲ್ಲಾ ಕುಟುಂಬಗಳವರ ಮತ್ತು ಬಂಧು ಬಳಗದವರ ವಿಳಾಸ, ದೂರವಾಣಿ ವಿವರಗಳುಳ್ಳ  ಕೈಪಿಡಿ ಬಿಡುಗಡೆಯೊಂದಿಗೆ ಕವಿಮನೆತನದ ಪತ್ರಿಕೆ ಕವಿಕಿರಣದ ಉದಯವಾಯಿತು. ೨೭-೧೨-೦೯ ರಂದು ತೀರ್ಥಹಳ್ಳಿಯಲ್ಲಿ ಶ್ರೀ ಶೇಷಾದ್ರಿ ದೀಕ್ಷಿತ್ ಮತ್ತು ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ಸಹೋದರರು ಮತ್ತು ಕುಟುಂಬವರ್ಗದ ಆಶ್ರಯದಲ್ಲಿ ನಾಲ್ಕನೆಯ ಸಮಾವೇಶ ನಡೆಯಿತು. ವರ್ಷದಿಂದ ವರ್ಷಕ್ಕೆ, ಸಮಾವೇಶದಿಂದ ಸಮಾವೇಶಕ್ಕೆ ಬಾಂಧವ್ಯಗಳು   ಗಟ್ಟಿಗೊಳ್ಳುತ್ತಾ, ಸಜ್ಜನಶಕ್ತಿಯ ಜಾಗೃತಿಯಾಗುತ್ತಾ ಹೋಗುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆಯಾಗಿದೆ.
ಮುನ್ನೋಟ:
     ಹಿರಿಯರುಗಳು, ಬಂಧುಗಳು ಚರ್ಚಿಸಿ ಕ್ರೋಢೀಕೃತ ವಂಶವೃಕ್ಷ ಸಿದ್ಧಪಡಿಸಿ ಪ್ರಥಮ ಸಮಾವೇಶದಲ್ಲಿ ಎಲ್ಲರಿಗೂ ನೀಡಲಾಯಿತು. ಕಾಲಕಾಲಕ್ಕೆ ಸೂಕ್ತ ಸೇರ್ಪಡೆ, ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
     ನಿಜ, ನಾವೇನೋ ನಮ್ಮ ಮೂಲವನ್ನು ಗುರುತಿಸಿಕೊಂಡೆವು. ಆದರೆ ಈ ಕೆಲಸ ಇಲ್ಲಿಗೇ ನಿಲ್ಲಬೇಕೇ ಎಂಬುದು ಮಹತ್ವದ ಪ್ರಶ್ನೆ. ೧೦-೧೧ ತಲೆಮಾರುಗಳ ವಿವರವಿರುವ ವಂಶವೃಕ್ಷ ಗಮನಿಸಿದಾಗ ನಮ್ಮಂತೆಯೇ ಹಲವಾರು ಕಳಚಿರುವ ಕೊಂಡಿಗಳು ಕಣ್ಣಿಗೆ ಬಿದ್ದು, ಆ ಕೊಂಡಿಗಳನ್ನೂ ಹುಡುಕಿ ಕೂಡಿಸುವ ಕೆಲಸ ಉಳಿದಿರುವುದು ನಮ್ಮ ಕೆಲಸ ಇನ್ನೂ ಬಾಕಿಯಿದೆ ಎಂಬುದನ್ನು ಸೂಚಿಸುವುದಿಲ್ಲವೇ? ನಮ್ಮಂತೆಯೇ ಕೆಳದಿ ಕವಿಕುಟುಂಬಕ್ಕೆ ಸೇರಿದ್ದು, ಕವಿಕುಟುಂಬದವರೆಂದು ಗೊತ್ತಿರದ ಹಲವಾರು ಕುಟುಂಬಗಳು ಇರಬಹುದಲ್ಲವೇ? ವಂಶವೃಕ್ಷದಲ್ಲಿ ಹೆಸರಿದ್ದು ತಮ್ಮ ಮಕ್ಕಳು, ಮೊಮ್ಮಕ್ಕಳ ಹೆಸರುಗಳಿಲ್ಲದವರ ಆತ್ಮಗಳು ತಮ್ಮ ಮಕ್ಕಳನ್ನೂ ಗುರುತಿಸಿ ಎಂದು ಕೇಳುತ್ತಿರಬಹುದಲ್ಲವೇ?
     ಸಂಬಂಧ ಸರಪಳಿಯ ಕೊಂಡಿಗಳು ಕಳಚಲು   ೧. ಮಕ್ಕಳಿಲ್ಲದಿರುವುದು, ೨. ವಿವಾಹವಾಗಿಲ್ಲದಿರುವುದು, ೩. ಅಕಾಲ ಮರಣ. ೪. ದಾಯಾದಿ ಮತ್ಸರ, ಕೌಟುಂಬಿಕ ಕಲಹ, ಇತ್ಯಾದಿ ಕಾರಣಗಳಿಂದ ದೂರವಾಗಿ ಕಡಿದ ಸಂಬಂಧಗಳು, ೫. ಸಂಬಂಧಗಳಿಗೆ ಬೆಲೆ, ಮಹತ್ವ ನೀಡದ ಮನೋಭಾವ, ೬. ಇತರ ಕಾರಣಗಳು, ಇತ್ಯಾದಿ ಹಲವಾರು ಕಾರಣಗಳಿರಬಹುದು. ಕಾರಣಗಳೇನೇ ಇರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಳಚಿದ ಕೊಂಡಿಗಳನ್ನು ಕೂಡಿಸುವ, ಸಂಬಂಧಗಳನ್ನು ಬೆಸೆಯುವ ಕಾರ್ಯಕ್ಕೆ ಮಾತ್ರ ಗಮನ ನೀಡುವುದು ನಮ್ಮ ಆದ್ಯತೆಯಾಗಲಿ. ಆಸಕ್ತರಿಗೆ, ಬಾಂಧವ್ಯಗಳನ್ನು ಗೌರವಿಸುವವರಿಗೆ ಮತ್ತು ಮುಂದಿನ ಪೀಳಿಗೆಗಳಿಗೆ ಇದು ನಿಸ್ಸಂದೇಹವಾಗಿ ಅಮೂಲ್ಯ ಕೊಡುಗೆ ಎಂಬುದರಲ್ಲಿ ಅನುಮಾನವಿಲ್ಲ.
ಕಳಚಿದ ಕೊಂಡಿಗಳು:
     ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ, ಕೆಳದಿ ನೃಪ ವಿಜಯ ಎಂಬ ಚಾರಿತ್ರಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಕೃತಿ ರಚಿಸಿದ್ದಲ್ಲದೆ ಕೆಳದಿ ಕವಿಮನೆತನ ಎಂದು ಹೆಸರು ಬರಲು ಕಾರಣನಾದ ಲಿಂಗಣ್ಣಕವಿ (ಕವಿ ಲಿಂಗಣ್ಣ/ಲಿಂಗಭಟ್ಟ)ನನ್ನು ನಮ್ಮ ಕುಟುಂಬದ ಮೂಲ/ ಪ್ರಧಾನ ವ್ಯಕ್ತಿಯಾಗಿ ಪರಿಗಣಿಸಿ ಇವನ ಪೀಳಿಗೆಯನ್ನು ಒಂದನೆಯ ಪೀಳಿಗೆ ಎಂದು ತೆಗೆದುಕೊಂಡು ನಮ್ಮ ಅನ್ವೇಶಣೆ ಪ್ರಾರಂಭವಾಗಬೇಕಿದೆ. ಈತನ ಕಾಲವನ್ನು ಇತಿಹಾಸಕಾರರು ಸುಮಾರು ಕ್ರಿ.ಶ. ೧೭೫೦ ಎಂದು ತಿಳಿಸಿದ್ದು ಇದರ ಆಧಾರದಲ್ಲೇ ನಂತರದ ಪೀಳಿಗೆಗಳವರ ಕಾಲಮಾನವನ್ನು ಲೆಕ್ಕ ಹಾಕೋಣ.
ಒಂದನೆಯ ಪೀಳಿಗೆ:
ವೆಂಕಪ್ಪನ ಮಗ ಎಂಬುದನ್ನು ಬಿಟ್ಟರೆ ಕವಿ ಲಿಂಗಣ್ಣನ ತಾಯಿಯ, ಪತ್ನಿಯ ಮತ್ತು ಇತರ ಅಣ್ಣ-ತಮ್ಮಂದಿರ (ಇದ್ದಲ್ಲಿ) ವಿವರ ತಿಳಿದುಬರುತ್ತಿಲ್ಲ.
ಎರಡನೆಯ ಪೀಳಿಗೆ:
ಕವಿಲಿಂಗಣ್ಣನ ಇಬ್ಬರು ಮಕ್ಕಳು ಶ್ಯಾಮಭಟ್ಟ ಮತ್ತು ವೆಂಕಣ್ಣ (ವೆಂಕಭಟ್ಟ)ರ ಪೈಕಿ ಶ್ಯಾಮಭಟ್ಟರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ಶ್ಯಾಮಭಟ್ಟರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ. ಲಿಂಗಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ಮೂರನೆಯ ಪೀಳಿಗೆ:
ಕವಿವೆಂಕಣ್ಣನ ಇಬ್ಬರು ಮಕ್ಕಳು ಚೆನ್ನಯ್ಯ ಮತ್ತು ಸುಬ್ಬಾಭಟ್ಟರ ಪೈಕಿ ಚೆನ್ನಯ್ಯರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ವೆಂಕಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ನಾಲ್ಕನೆಯ ಪೀಳಿಗೆ:
ಕವಿ ಸುಬ್ಬನ ಆರು ಮಕ್ಕಳು ವೆಂಕಭಟ್ಟ, ಲಿಂಗಾಭಟ್ಟ, ರಾಮಭಟ್ಟ, ಸುಬ್ಬಾಭಟ್ಟ(ಸುಬ್ರಹ್ಮಣ್ಯ?), ನಾರಣಭಟ್ಟ ಮತ್ತು ಕೃಷ್ಣಭಟ್ಟರ ಪೈಕಿ ವೆಂಕಣ್ಣನ ಹೊರತಾಗಿ ಉಳಿದ ಮಕ್ಕಳ ವಿವರ ಗೊತ್ತಾಗಬೇಕಿದೆ. ವೆಂಕಭಟ್ಟರ ಹೊರತಾಗಿ ಉಳಿದವರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ.
ಐದನೆಯ ಪೀಳಿಗೆ:
ಅಪ್ಪಣ್ಣಭಟ್ಟ ಮತ್ತು ಶಿವಭಟ್ಟ(ಶಿವರಾಮಭಟ್ಟ)ರ ಪತ್ನಿಯರ ಹೆಸರು ತಿಳಿಯಬೇಕಿದೆ.
ಆರನೆಯ ಪೀಳಿಗೆ:
ವೆಂಕಭಟ್ಟ, ಕೊಲ್ಲೂರಪ್ಪ ಮತ್ತು ಶ್ಯಾಮಭಟ್ಟರ ಪತ್ನಿಯರ ಹೆಸರು ತಿಳಿಯಬೇಕಿದೆ
ಏಳನೆಯ ಪೀಳಿಗೆ:
ವೆಂಕಭಟ್ಟರ ಮೂವರು ಮಕ್ಕಳು ಸುಬ್ಬಾಭಟ್ಟ, ಕೃಷ್ಣಭಟ್ಟ ಮತ್ತು ಶ್ಯಾಮಭಟ್ಟರ ಕುರಿತು ವಿವರ ತಿಳಿಯಬೇಕಿದೆ. ಕವಿ ರಾಮಣ್ಣರ ಮಗ ಹುಚ್ಚೂರಾಯರ ಬಗ್ಗೆ ಮಾಹಿತಿ ಸಿಗಬೇಕು.
     ಏಳನೆಯ ಪೀಳಿಗೆಗೆ ಸೇರಿದ ಕೆಲವು ಕವಿ ಕುಟುಂಬಗಳವರು ಮತ್ತು ನಂತರದ ಎಂಟು, ಒಂಬತ್ತು ಮತ್ತು ಹತ್ತನೆಯ ಪೀಳಿಗೆಗಳವರು ಪ್ರಸ್ತುತ ನಮ್ಮೊಡನಿದ್ದು ಅಮೂಲ್ಯ ಮಾಹಿತಿಗಳನ್ನು ಒದಗಿಸಬಹುದಾಗಿರುತ್ತದೆ. ಕವಿಕುಟುಂಬಕ್ಕೆ ಸೇರಿದ ಕೆಳದಿಯಲ್ಲಿದ್ದ ದಿ.ತಮ್ಮಣ್ಣಭಟ್ಟರ ಕುರಿತು ಸ್ವಲ್ಪ ಮಾಹಿತಿ ಲಭ್ಯವಾಗಿದ್ದು ಪೂರ್ಣ ಮಾಹಿತಿ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ.
     ಕಳಚಿದ ಕೊಂಡಿಗಳನ್ನು ಕೂಡಿಸುವ ಕೆಲಸಕ್ಕೆ ಎಲ್ಲರೂ ಮನಸ್ಸು ಮಾಡಿದಲ್ಲಿ, ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಜೋಯಿಸ್, ದೀಕ್ಷಿತ್ ಮತ್ತು ಇತರ ಕುಟುಂಬಗಳವರು ಮತ್ತು ಆಸಕ್ತರು  ಕೈಜೋಡಿಸಿದಲ್ಲಿ ಈ ಕಾರ್ಯ ಸಾಧಿಸುವುದು ಕಷ್ಟವಾಗಲಾರದು.
     ಕಳಚಿದ ಕೊಂಡಿಗಳನ್ನು ಹುಡುಕುವ ಕಾರ್ಯದಲ್ಲಿ ನಿಮ್ಮೊಂದಿಗೆ ಇರುವ,
                               -ಕ.ವೆಂ.ನಾಗರಾಜ್. 
***
('ಕವಿಕಿರಣ'ದ 01-06-2010ರ ಸಂಚಿಕೆಯ ಸಂಪಾದಕೀಯ).

Monday, July 18, 2011

ಕವಿ ನಾಗರಾಜ ಭಟ್ಟ - ಸಾವಿತ್ರಮ್ಮ

ಕೆಳದಿ ಕವಿ ಮನೆತನದ ಸಮಕಾಲೀನರು
ಕವಿ ನಾಗರಾಜ ಭಟ್ಟ - ಸಾವಿತ್ರಮ್ಮ

     ನಿರುಪದ್ರವಿ ಎಂಬ ಪದಕ್ಕೆ ಅನ್ವರ್ಥಕವಾದವರು ಕವಿ ಮನೆತನದ ಎಂಟನೇ ತಲೆಮಾರಿನ ಕಷ್ಟ ಸಹಿಷ್ಣು ಕವಿ ನಾಗರಾಜ ಭಟ್ ಕುಟುಂಬ. ಬಡತನವನ್ನೇ ಹಾಸಿ- ಹೊದ್ದು- ಉಂಡುಟ್ಟು ಅದರಲ್ಲೇ ಸುಖವನ್ನು ಕಂಡು ಆರಕ್ಕೆ ಕೈ ಚಾಚದೇ ಮೂರಕ್ಕೆ ಇಳಿಯದೆ ಸಮಚಿತ್ತದಿಂದ, ಸಮಭಾವದಿಂದ ಸದಾ ಸ್ಥಿತಪ್ರಜ್ಞರಾಗಿ ಬದುಕನ್ನು ಸವೆಸುತ್ತಿರುವ ನಾಗರಾಜ ಭಟ್ ಕುಟುಂಬ ವಿಶಿಷ್ಟವಾದುದು.
     ಕವಿ ನಾಗರಾಜ ಭಟ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ಗ್ರಾಮದಲ್ಲಿ ೧೯೪೧ರ ಏಪ್ರಿಲ್ ೧೦ರಂದು ಶಿವಭಟ್ - ಕೋಮಲಾಬಾಯಿ ದಂಪತಿಗೆ ಏಕೈಕ ಪುತ್ರನಾಗಿ ಜನಿಸಿದರು. ಇವರು ಸುಮಾರು ೧೦ ವರ್ಷದವರಿದ್ದಾಗ ತಂದೆ ಶಿವಭಟ್ ಪರಂಧಾಮವನ್ನೈದಿದರು. ಪುಟ್ಟ ಬಾಲಕನನ್ನು ಸಾಕುತ್ತಾ ಕೋಮಲಾಬಾಯಿ ಕೆಳದಿಯಲ್ಲೇ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಸಾಗರ ಸಮೀಪದ ಶ್ರೀ ವರದಹಳ್ಳಿಯ ಅಂದಿನ ಶ್ರೀಗಳಾದ ಮತ್ತು ಅಪಾರ ಭಕ್ತವೃಂದ ಹೊಂದಿರುವ ಶ್ರೀ ಶ್ರೀ ಶ್ರೀಧರಸ್ವಾಮಿಗಳು ನಾಗರಾಜನಿಗೆ ಬ್ರಹ್ಮೋಪದೇಶ ಮಾಡಿದರು.
     ಬಡತನದಲ್ಲಿದ್ದ ಕುಟುಂಬಕ್ಕೆ ಸ್ಥಿತಿವಂತರಿಂದ ಊಟಕ್ಕೆ ಸಹಾಯವಾಗುತ್ತಿತ್ತು. ಕೋಮಲಾಬಾಯಿಯವರು ಅವರಿವರ ಮನೆಯಲ್ಲಿ ಚಟ್ನಿಪುಡಿ, ಮೆಣಸಿನಪುಡಿ, ಚಕ್ಕುಲಿ, ಕೋಡುಬಳೆ, ಅಡುಗೆ ಕೆಲಸ ಇತ್ಯಾದಿಗಳನ್ನು ಮಾಡುತ್ತಾ ಅಷ್ಟಿಷ್ಟು ಸಂಪಾದನೆ ಮಾಡಿ ಹೊಟ್ಟೆ ಹೊರೆಯುತ್ತಿದ್ದರು.
     ಶಾಲಾ ವಿದ್ಯಾಭ್ಯಾಸಕ್ಕೆ ಪರೀಕ್ಷೆ ಶುಲ್ಕ ಕಟ್ಟಲಾಗದೆ ಎಸ್ಸೆಸ್ಸೆಲ್ಸಿಯನ್ನು ಅರ್ಧಕ್ಕೇ ಮೊಟಕುಗೊಳಿಸಿದ ನಾಗರಾಜ ಪರಿಚಯವಿದ್ದ ಸಾಗರ ತಾಲ್ಲೂಕು ಗೌತಮಪುರದ ಗಾಡಿ ಸುಬ್ರಾಯಭಟ್ಟರ ಮನೆಯಲ್ಲಿ ವೇದಾಭ್ಯಾಸಕ್ಕೆ ನಿಂತರು. ಎಂಟು ಹೆಣ್ಣು ಮಕ್ಕಳು ಇದ್ದ ತುಂಬಿದ ಕುಟುಂಬದ ಸುಬ್ರಾಯಭಟ್ಟರು ಗಂಡು ಮಕ್ಕಳಿಲ್ಲದ ಕಾರಣ ನಾಗರಾಜನನ್ನು ಸ್ವಂತ ಮಗನಂತೆ ಕಂಡು ಅವನಿಗೆ ವೇದಾಭ್ಯಾಸ ಕಲಿಸಿ ಪೌರೋಹಿತ್ಯಕ್ಕೆ ಅಣಿಗೊಳಿಸಿದರು. ಹೀಗೇ ಸಾಗುತ್ತಿದ್ದ ಜೀವನದಲ್ಲಿ ನಾಗರಾಜನಿಗೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಸೇವೆ ಮಾಡುವ ಯೋಗ ಬಂದಿತು. ಗೌತಮಪುರಕ್ಕೆ ಬ್ರಾಂಚ್ ಪೋಸ್ಟಾಫೀಸು ಬಂದಾಗ ಅದನ್ನು ನೋಡಿಕೊಳ್ಳುವ ಕೆಲಸ ೧೯೫೯ನೇ ಸೆಪ್ಟೆಂಬರ್ ೧೧ ರಂದು ನಾಗರಾಜನ ಪಾಲಿಗೆ ಬಂತು. ಸುಮಾರು ನಾಲ್ಕಾರು ವರ್ಷ ಕೆಲಸ ಮಾಡಿದ ನಂತರ ನಾಗರಾಜನಿಗೆ ಪೋಸ್ಟ್ ಮ್ಯಾನ್ ಆಗಿ ಕೆಲಸಕ್ಕೆ ತೆಗೆದುಕೊಂಡು ಜೋಗ್ ಫಾಲ್ಸ್ ಗೆ ವರ್ಗಾವಣೆ ಮಾಡಲಾಯಿತು. ಅಲ್ಲಿಯೇ ಕೆಲಸ ನಿರ್ವಹಿಸಿಕೊಂಡು ಜೊತೆಗೆ ಅಲ್ಲಿನ ಈಶ್ವರ ದೇವಾಲಯದ ಅರ್ಚಕರಾದ ವೇದಬ್ರಹ್ಮ ಶ್ರೀ ಜಾವಗಲ್ ಸತ್ಯನಾರಾಯಣ ಜೋಯಿಸರ ಬಳಿಯೂ ವೇದ ಕಲಿತು ಈಶ್ವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
----------------------------------------------------------------
     ಈ ಪರಿಚಯ ಲೇಖನವನ್ನು ಬರೆದ ಶ್ರೀ ಕೆಳದಿ ರಾಮಮೂರ್ತಿಯವರು ಶ್ರೀ ನಾಗರಾಜಭಟ್ಟರ ಚಿಕ್ಕಪ್ಪ ಶ್ರೀ ಕೃಷ್ಣಭಟ್ಟರ ಮಗ. ನಾಗರಾಜಭಟ್ಟರ ನಿಕಟ ಪರಿಚಯವಿರುವವರು. ಶ್ರೀ ರಾಮಮೂರ್ತಿಯವರ ಕುಟುಂಬ ಸಹ ಆದರಾತಿಥ್ಯ ಮಾಡುವಲ್ಲಿ ಎತ್ತಿದ ಕೈ ಆಗಿದ್ದಾರೆ. ಈ ಎರಡು ಕುಟುಂಬಗಳವರು ಕೆಳದಿಯಲ್ಲಿ ದಿನಾಂಕ ೨೫-೧೨-೨೦೦೭ ರಂದು ಸ್ಮರಣೀಯವಾಗಿ ನಡೆದ ಕೆಳದಿ ಕವಿ ಮನೆತನದವರ ಹಾಗೂ ಬಂಧು ಬಳಗದವರ ಎರಡನೆಯ ವಾರ್ಷಿಕ ಸಮಾವೇಶ ಪ್ರಾಯೋಜಿಸಿದ್ದರು. ವೃತ್ತಿಯಲ್ಲಿ ಅರ್ಚಕರಾಗಿರುವ ಶ್ರೀ ರಾಮಮೂರ್ತಿಯವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.                         -ಸಂ.
ಲೇಖಕರ ವಿಳಾಸ:      ಕೆಳದಿ ರಾಮಮೂರ್ತಿ, ಅರ್ಚಕರು, ಕೆಳದಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ..  ದೂರವಾಣಿ:೯೪೪೮೯೩೨೭೫೯.
ಶ್ರೀ ನಾಗರಾಜಭಟ್ಟರ ವಿಳಾಸ::     ನಿವೃತ್ತ ಪೋಸ್ಟ್ ಮಾಸ್ಟರ್  ರವಿವರ್ಮ ಬೀದಿ, ಶಿವಮೊಗ್ಗ.. ದೂರವಾಣಿ:   ೯೫೮೧೮೨-೨೭೭೨೬೬.

------------------------------------------------------
     ಜಾವಗಲ್ ಸತ್ಯನಾರಾಯಣ ಭಟ್ಟರ ತಂದೆ ನರಸಿಂಹ ಭಟ್ಟರಿಗೆ ನಾಲ್ವರು ಪತ್ನಿಯರು. ಸತ್ಯನಾರಾಯಣಭಟ್ಟರು ಹಿರಿಯ ಪತ್ನಿಯ ಮಗ. ಎರಡನೆ ಮತ್ತು ಮೂರನೆಯ ಪತ್ನಿಯರಿಗೆ ಮಕ್ಕಳಿರಲಿಲ್ಲ. ನಾಲ್ಕನೆಯ ಪತ್ನಿ ನಾಗಮ್ಮರಿಗೆ ಓರ್ವ ಪುತ್ರ ಮತ್ತು ಮೂವರು ಪುತ್ರಿಯರಿದ್ದು ಸಾವಿತ್ರಿ ಜೇಷ್ಠ ಪುತ್ರಿ. ವಟಸಾವಿತ್ರಿ ಹುಣ್ಣಿಮೆ ದಿನ ೧೯೪೯ರ ಜೂನ್ ೧ರಂದು ಹುಟ್ಟಿದ್ದರಿಂದ ಆಕೆಗೆ ಸಾವಿತ್ರಿ ಎಂದು ನಾಮಕರಣ ಮಾಡಿದ್ದರು. ನರಸಿಂಹಭಟ್ಟರು ವಿಧಿವಶರಾದ ನಂತರ ಸಾವಿತ್ರಿ ಅಣ್ಣ ಸತ್ಯನಾರಾಯಣ ಭಟ್ಟರ ಆಶ್ರಯಕ್ಕೆ ಬಂದಿದ್ದರು. ಹೋಗಿ ಬಂದು ಮಾಡುವಾಗ ಸಾವಿತ್ರಿಯನ್ನು ನೋಡಿದ ನಾಗರಾಜ ವಿವಾಹಾಪೇಕ್ಷೆ ವ್ಯಕ್ತಪಡಿಸಿದರು. ಉಭಯತ್ರರೂ ಸಮ್ಮತಿಸಿ ೧೯೬೭ ಜೂನ್ ೧ ರಂದು ಜೋಗದ ಈಶ್ವರ ದೇವಾಲಯದಲ್ಲಿ ವಿವಾಹ ಮಾಡಿಕೊಡಲಾಯಿತು. ವಿವಾಹಾನಂತರ ನಾಗರಾಜ ಭಟ್ಟರಿಗೆ ಕೊಪ್ಪಕ್ಕೆ ವರ್ಗವಾಯಿತು. ಕೊಪ್ಪದಲ್ಲಿ ಎರಡು ವರ್ಷ, ತೀರ್ಥಹಳ್ಳಿಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ವರ್ಗಾವಣೆ ಮೇಲೆ ಸಾಗರಕ್ಕೆ ಬಂದರು. ಸಾಗರದಲ್ಲಿದ್ದಾಗ ತಾಯಿ ಇಹಲೋಕ ತ್ಯಜಿಸಿದಾಗ ಅಂತ್ಯ ಸಂಸ್ಕಾರವನ್ನೂ ಸಹ ಸಾಲ ಮಾಡಿ ಮಾಡಿದ್ದರು. ಸಾಗರದಿಂದ ಗುಮಾಸ್ತರಾಗಿ ಬಡ್ತಿ ನೀಡಿ ಅವರನ್ನು ಬೀದರ್ ಜಿಲ್ಲೆ ಹುಮನಾಬಾದ್‌ಗೆ ವರ್ಗ ಮಾಡಿದರು. ಅಲ್ಲಿ ನಾಲ್ಕು ವರ್ಷದ ಸೇವೆ ನಂತರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಗರದಲ್ಲಿ ಎಂಟು ತಿಂಗಳು, ಕುದುರೆಮುಖದಲ್ಲಿ ಎರಡು ವರ್ಷ, ಬಾಳೆಹೊನ್ನೂರಿನ ಬಳಿಯ ಕಾಫಿ ರಿಸರ್ಚ್ ಸ್ಟೇಶನ್ ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ೧೯೮೫ರಲ್ಲಿ ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಛೇರಿಗೆ ಬಂದವರು ಅಲ್ಲಿ ದೀರ್ಘ ಮತ್ತು ಪೂರ್ಣ ಸೇವೆ ಸಲ್ಲಿಸಿ ೨೦೦೧ರ ಏಪ್ರಿಲ್ ೩೦ ರಂದು ೩೬ ವರ್ಷಗಳ ಸೇವೆಗೆ ಮಂಗಳ ಹಾಡಿದರು.

     ನಾಗರಾಜಭಟ್ಟರ ಪತ್ನಿ ಬುದ್ಧಿವಂತರು. ಕಾಸಿಗೆ ಕಾಸು ಕೂಡಿಸುವ, ಪ್ರಾಮಾಣಿಕ ಮನೋಭಾವ ಹೊಂದಿದವರಾಗಿದ್ದರು. ಸದಾ ಮೂಗಿನ ಮೇಲೆ ಸಿಟ್ಟು. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ, ಶತ್ರುಗಳನ್ನೂ ಆದರಿಸುವವರು ಹಾಗೂ ಅತಿಥಿ ಸತ್ಕಾರದಲ್ಲಿ ಸೈ ಎನಿಸಿಕೊಂಡವರು. ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದಲ್ಲದೆ ಅವರನ್ನು ಹಾದಿ ತಪ್ಪದಂತೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಗಂಡನ ಗಳಿಕೆಯಲ್ಲೇ ಅಷ್ಟಿಷ್ಟು ಉಳಿಸಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ದುಂದು ವೆಚ್ಚದಿಂದ ಸದಾ ದೂರ. ಹಾಗೆಯೇ ಇಂಥದ್ದು ಬೇಕು ಎಂದು ಕೇಳಿದವರಲ್ಲ. ನಾಗರಾಜಭಟ್ಟರು ಶಾಂತ ಸ್ವಭಾವದವರು. ವ್ಯಕ್ತಿಗತ ಸ್ವಭಾವದಲ್ಲಿ ಭಿನ್ನತೆ ಇದ್ದರೂ ಇಬ್ಬರದು ಅನುಪಮ ಸಾಂಗತ್ಯ, ಅನುರೂಪ ದಾಂಪತ್ಯ.
     ನಾಗರಾಜ ಭಟ್ - ಸಾವಿತ್ರಮ್ಮರವರಿಗೆ ಒಬ್ಬ ಮಗ ಶಿವಪ್ರಸಾದ ಹಾಗೂ ಮೂವರು ಹೆಣ್ಣು ಮಕ್ಕಳು - ಪ್ರತಿಭಾ, ಪದ್ಮ ಮತ್ತು ಪೂರ್ಣಿಮಾ. ಹಿರಿಯ ಮಗ ಶಿವಪ್ರಸಾದ ಪ್ರಸ್ತುತ ಕಾರವಾರದಲ್ಲಿ ಕಡಲವಾಣಿ  ಎಂಬ ಪತ್ರಿಕೆಯ ಸಂಪಾದಕನಾಗಿದ್ದಾನೆ. ಅನುರೂಪಳಾದ ಮತ್ತು ಹೊಂದಿಕೊಂಡು ಹೋಗುವ ಪತ್ನಿ ಸೌಮ್ಯ. ಇವರಿಗೆ ಒಬ್ಬಳು ಮಗಳು ಶ್ರೀಮಾತಾ ಮತ್ತು ಒಬ್ಬ ಮಗ ಶ್ರೀನಿಧಿ ಇದ್ದಾರೆ. ಪ್ರತಿಭಾ ಮತ್ತು ಪೂರ್ಣಿಮಾರಿಗೆ ವಿವಾಹವಾಗಿದೆ. ಪ್ರತಿಭಾಳ ಪತಿ ಸುಬ್ರಾಯ ಹೆಗಡೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಪುತ್ರಿ ಸಿಂಧು. ಎರಡನೆಯ ಮಗಳು ಪದ್ಮಳಿಗೆ ನೆಫ್ರಾಟಿಕ್ ಸಿಂಡ್ರೋಮ್ ಎಂಬ ಕಾಯಿಲೆ ಬಂದು ಸುಮಾರು ೧೫ ವರ್ಷಗಳ ಕಾಲ ಚಿಕಿತ್ಸೆ ಕೊಡಿಸಬೇಕಾಯಿತು. ಈ ಸಂದರ್ಭದಲ್ಲಿ ಅವರು ಅನುಭವಿಸಿದ ಪಾಡು ಅಷಿಷ್ಟಲ್ಲ. ಪದ್ಮ ಈಗ ಮನೆಯಲ್ಲೇ ಇದ್ದು ತಾಯಿಗೆ ಮನೆಕೆಲಸದಲ್ಲಿ ನೆರವಾಗುತ್ತಿದ್ದಾಳೆ. ಪೂರ್ಣಿಮಾಳನ್ನು ಹೊಸನಗರ ತಾಲ್ಲೂಕು ಗರ್ತಿಕೆರೆ ಸಮೀಪದ ಕಡೇಗದ್ದೆಯ ಸತ್ಯನಾರಾಯಣರಾವ್‌ರ ಪುತ್ರ ಗಣೇಶಮೂರ್ತಿಗೆ ಕೊಟ್ಟು ವಿವಾಹವಾಗಿದ್ದು ಅವರಿಗೆ ಸುಹಾಸ್ ಎಂಬ ಮಗನಿದ್ದಾನೆ.
     ತಮ್ಮ ಸೇವಾವಧಿಯಲ್ಲಿ ಯಾವುದೇ ರೀತಿಯ ಕಳಂಕ ಹೊತ್ತುಕೊಳ್ಳದೆ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ನಾಗರಾಜಭಟ್ಟರ ಹಿರಿಮೆ. ಈಗ ಪೌರೋಹಿತ್ಯ ಕಾರ್ಯ ಮುಂದುವರೆಸಿಕೊಂಡು ಬಂದಿದ್ದಾರೆ. ಆರ್ಥಿಕವಾಗಿ ಭಗವಂತ ಅಷ್ಟಿಷ್ಟು ಕೊಟ್ಟಿದ್ದಾನೆ. ಮತ್ತಷ್ಟಕ್ಕೆ ಕೈಚಾಚದೆ ಇದ್ದಷ್ಟರಲ್ಲೇ ನಾಗರಾಜ ಭಟ್ಟರ ಕುಟುಂಬ ಸರಳ ಜೀವನ ನಡೆಸುತ್ತಿದೆ.
- ಕೆಳದಿ ರಾಮಮೂರ್ತಿ.

******************
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)

Sunday, July 17, 2011

Saturday, June 25, 2011

ಶ್ರೀ ಶಂಕರಾಚಾರ್ಯರು ಕೊಲ್ಲೂರಿನಲ್ಲಿ ಮಾಡಿದ ಪವಾಡ

  

ಶ್ರೀ ಶಂಕರಾಚಾರ್ಯರು ಕೊಲ್ಲೂರಿನಲ್ಲಿ ಮಾಡಿದ ಪವಾಡ
-ದಿ. ರತ್ನಮ್ಮ ಸುಂದರರಾವ್.

      ಶ್ರೀಶೈಲದಿಂದ ಹೊರಟ ಆಚಾರ್ಯರು ಗೋಕರ್ಣ ಕ್ಷೇತ್ರಕ್ಕೆ ಬಂದರು. ಅಲ್ಲಿ ಈಶ್ವರನ ಆತ್ಮಲಿಂಗವನ್ನೂ, ತಾಮ್ರಗೌರೀ ಸಹಿತನಾದ ಮಹಾಬಲೇಶ್ವರನನ್ನೂ ಕಂಡು ಪುನೀತರಾದರು. ಆ ಕ್ಷೇತ್ರದಲ್ಲಿಯೂ ಅದ್ವೈತ ತತ್ವಗಳ ಪ್ರಚಾರ ಯಥಾವತ್ತಾಗಿ ನಡೆಯಿತು. ಆ ಕ್ಷೇತ್ರದಿಂದ ಹೊರಟ ಆಚಾರ್ಯರು ಪಶ್ಚಿಮ ಘಟ್ಟಗಳ ಅಂಚಿನಲ್ಲೇ ಹೊರಟು ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಕೊಲ್ಲೂರು ಕ್ಷೇತ್ರಕ್ಕೆ ಬಂದರು.     ಮೂಕಾಸುರನೆಂಬ ರಾಕ್ಷಸನನ್ನು ಕೊಂದು ಮೂಕಾಂಬಿಕಾ ಎಂಬ ಹೆಸರಿನಿಂದ ಪ್ರಖ್ಯಾತಳಾದ ಅದಿಶಕ್ತಿಯು ನೆಲೆಸಿರುವ ಕ್ಷೇತ್ರವೇ ಕೊಲ್ಲೂರು. ಭವ್ಯವಾದ ದೇವಾಲಯದಲ್ಲಿ ಮೂಕಾಂಬಿಕೆ ನೆಲೆಸಿದ್ದಾಳೆ. ಆಚಾರ್ಯರು ಮೂಕಾಂಬಿಕಾ ದೇವಿಯನ್ನು ಸಂದರ್ಶಿಸಿದುದೇ ಅಲ್ಲದೆ ಅಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿ, ಕ್ಷೇತ್ರದ ಮಹಿಮೆಯನು ಮತ್ತಷ್ಟು ಹೆಚ್ಚಿಸಿದರು. ಅನೇಕ
ಸ್ತೋತ್ರಗಳನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ದೇವಿಯನ್ನು ಕಂಡು ಕೃತಾರ್ಥರಾದ ಆಚಾರ್ಯರು ಅನಂತರ ದೇವಾಲಯದಿಂದ ಹೊರಗೆ ಹೊರಟರು. ದ್ವಾರಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣ ದಂಪತಿಗಳು ತಮ್ಮ ಮಗುವನ್ನು ಮುಂದಿಟ್ಟುಕೊಂಡು ರೋದಿಸುತ್ತಿದ್ದರು. ಆ ಮಗು ಸತ್ತುಹೋಗಿತ್ತು.
     ದೇವಾಲಯದಿಂದ ಹೊರಬಂದ ಆಚಾರ್ಯರನ್ನು ಆ ದಂಪತಿಗಳು ನೋಡಿದರು. ತೇಜಸ್ಸಿನಿಂದ ಕೂಡಿದ ಅವರ ಮುಖವನ್ನು ಕಂಡೊಡನೆ ಆ ದಂಪತಿಗಳು ಈತನಾರೋ ಮಹಾತ್ಮನೇ ಇರಬೇಕು ಎಂದು ಆಲೋಚಿಸಿ ಅವರ
ಬಳಿಗೆ ಬಂದರು. ಸತ್ತುಹೋಗಿದ್ದ ತಮ್ಮ ಮಗುವನ್ನು ಆಚಾರ್ಯರ ಪಾದಗಳ ಬಳಿ ಇಟ್ಟು "ಮಹಾತ್ಮರೇ, ನಿಮ್ಮನ್ನು ನೋಡಿದರೆ ದೈವಾಂಶ ಪುರುಷನ್ನು ಕಂಡಂತೆಯೇ ಭಾಸವಾಗುತ್ತದೆ. ನೀವಾದರೂ ಈ ಮಗುವನ್ನು ಬದುಕಿಸಿಕೊಡಿ. ಇದುವರೆಗೆ ಹದಿಮೂರು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ಬೆಂದು ಹೋಗಿದ್ದೇವೆ" ಎಂದು ಅಂಗಲಾಚಿದರು. ಆ ದಂಪತಿಗಳ ದುಃಖದಲ್ಲಿ ಆಚಾರ್ಯರೂ ಒಂದು ಕ್ಷಣ ಭಾಗಿಯಾದರು. ಬಳಿಕ ಅವರನ್ನು ಈರೀತಿ ಪ್ರಶ್ನಿಸಿದರು: "ಸಾವು ಎಂದರೇನು? ಮಗು ಇಲ್ಲೇ ಇದೆಯಲ್ಲಾ?!"     "ಇದು ಮಗುವಿನ ಕಳೇಬರ. ಅದರ ಪ್ರಾಣ ಹೋಗಿ ಎಷ್ಟೋ ಹೊತ್ತಾಗಿದೆ" ಎಂದು ಆ ದಂಪತಿಗಳು ಹೇಳಿದರು.  ಆಚಾರ್ಯರು ಪುನಃ ಕೇಳಿದರು: "ಹಾಗಾದರೆ ನೀವು ಇದುವರೆಗೆ ವಿಶ್ವಾಸದಿಂದ ಮುದ್ದಿಸುತ್ತಿದ್ದುದು ಇಲ್ಲಿರುವ ಈ ದೇಹವನ್ನೋ, ಹೊರಟುಹೋದ ಆ ಪ್ರಾಣವನ್ನೋ?" ಆಚಾರ್ಯರ ಪ್ರಶ್ನೆಗೆ ಏನುತ್ತರ ಕೊಡಬೇಕೆಂದು ಆ ದಂಪತಿಗಳಿಗೆ ತೋಚಲಿಲ್ಲ. ಆಚಾರ್ಯರು ಪುನಃ ಕೇಳಿದರು: "ದೇಹವನ್ನೇ ನೀವು ಮುದ್ದಿಸುತ್ತಿದ್ದಾದರೆ ಈಗಲೂ ಮುದ್ದಿಸಬಹುದು. ಪ್ರಾಣವನ್ನು ನೀವು ಮುದ್ದಿಸುತ್ತಿದ್ದಾದರೆ ಅದು ಆಗಲೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ಇದಕ್ಕೇಕೆ ನೀವು ದುಃಖಿಸಬೇಕು?"     ಆಚಾರ್ಯರ ತತ್ವೋಪದೇಶ ಆ ದಂಪತಿಗಳ ಮನಸ್ಸನ್ನು ಮುಟ್ಟಲಿಲ್ಲ. ಕ್ಷಣಕ್ಷಣಕ್ಕೂ ಪುತ್ರಶೋಕ ಹೆಚ್ಚುತ್ತ ಅವರನ್ನು ದಹಿಸುತ್ತಿತ್ತು.
------------------------------------------------------------
     ದಿ. ಶ್ರೀಮತಿ ರತ್ನಮ್ಮ ಸುಂದರರಾಯರು ಕೆಳದಿ ಕವಿಮನೆತನದ ಧೀಮಂತ ವ್ಯಕ್ತಿತ್ವದ ದಿ. ಎಸ್.ಕೆ. ಲಿಂಗಣ್ಣಯ್ಯನವರ ಮಕ್ಕಳಲ್ಲಿ ಒಬ್ಬರು. ಇವರ ಪತಿ ಶ್ರೀ ಬ.ನ. ಸುಂದರರಾಯರೂ ಸಹ ಕರ್ನಾಟಕ ಕಂಡ ಖ್ಯಾತ ಸಾಹಿತಿಗಳಲ್ಲಿ ಒಬ್ಬರು. ಇವರು ೧೯೬೯ರಲ್ಲಿ ರಚಿಸಿದ ಶ್ರೀ ಶಂಕರ ಕಥಾಮೃತ ೧೯೮೯ರ ವೇಳೆಗೆ ಆರು ಮುದ್ರಣಗಳನ್ನು ಕಂಡ ಅನುಪಮ ಕೃತಿ. ಶ್ರೀ ಶಂಕರಾಚಾರ್ಯರ ಜೀವನದ ಘಟನೆಗಳನ್ನು ಆಧರಿಸಿ ಕಥಾರೂಪದಲ್ಲಿ ಹೊರತಂದಿರುವುದು ವಿಶೇಷ.
ಅಂತಹ ಒಂದು ಕಥೆಯನ್ನು ನಿಮ್ಮ ಮುಂದಿಟ್ಟಿದೆ.            -ಸಂ.
-----------------------------------------------------------
     ಆಗ ಆಚಾರ್ಯರು ಆ ಕ್ಷೇತ್ರದೇವತೆಯಾದ ಮೂಕಾಂಬಿಕೆಯನ್ನೇ ಸ್ತುತಿಸಿ ಆ ಮಗುವನ್ನು ಬದುಕಿಸಿದರು. ಮಗು ಕಣ್ಣು ಬಿಟ್ಟು ಕೈಕಾಲುಗಳನ್ನಾಡಿಸಿತು. ಅದು ಕಣ್ಣು ಬಿಡುವ ಹೊತ್ತಿಗೆ ಆಚಾರ್ಯರ ತತ್ವೋಪದೇಶ ಆ ತಾಯಿ ತಂದೆಗಳ ಒಳಗಣ್ಣನ್ನು ತೆರೆಯುವಂತೆ ಮಾಡಿತ್ತು. ಈ ಸಂಸಾರವೇ ನಶ್ವರವೆಂಬ ಭಾವನೆ ಅವರಲ್ಲಿ ಮೂಡಿ ಅವರ ಮನಸ್ಸು ವೈರಾಗ್ಯದತ್ತ ಸಾಗತೊಡಗಿತ್ತು. ಆ ದಂಪತಿಗಳು ಅಡಿಗಡಿಗೆ ಆಚಾರ್ಯರಿಗೆ ವಂದಿಸುತ್ತ - "ಮಹಾತ್ಮರೇ, ನಿಮ್ಮ ಉಪದೇಶ ಕೇಳಿ ನಮ್ಮ ಮನಸ್ಸು ಪರಿವರ್ತನೆಯಾಗಿದೆ. ಈ ಸಂಸಾರದ ಸುಖವು ಸಾಕು. ನಮ್ಮನ್ನೂ ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಬೇಕು" ಎಂದು ಪ್ರಾರ್ಥಿಸಿಕೊಂಡರು. ಅದಕ್ಕೆ ಆಚಾರ್ಯರು ಒಪ್ಪಲಿಲ್ಲ. "ಗೃಹಸ್ಥರಾಗಿರುವ ನೀವು ಗೃಹಸ್ಥಾಶ್ರಮದ
ಧರ್ಮಕ್ಕನುಗುಣವಾಗಿ ನಡೆಯಬೇಕು. ಸಂಸಾರದಲ್ಲಿ ಒದಗುವ ಕಷ್ಟ ಸುಖಗಳಿಗೆ ಎದೆಗುಂದದೆ ಧೈರ್ಯವಾಗಿ ಅವುಗಳನ್ನು ಎದುರಿಸಿ ಗೃಹಸ್ಥಾಶ್ರಮದ ಧರ್ಮಗಳನ್ನು ಅನುಸರಿಸಿ ನಡೆಯುವದರಿಂದಲೇ ನಿಮಗೆ ಸದ್ಗತಿಯುಂಟಾಗುವುದು" ಎಂದು ಆ ದಂಪತಿಗಳಿಗೆ ಬುದ್ಧಿವಾದ ಹೇಳಿ ಆಶೀರ್ವದಿಸಿದರು.   ಅನಂತರ ಆಚಾರ್ಯರ ಪ್ರಯಾಣ ಮುಂದುವರೆಯಿತು.
***
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಕಥೆ).
***************

Monday, June 20, 2011

ಹರಿತ್ಸ-ಗೋತ್ರ

     ಸಂಸ್ಕೃತ ಭಾಷೆಯಲ್ಲಿ ಗೋತ್ರ ಎನ್ನುವ ಪದದ ಅರ್ಥ ಮನೆತನ ಅಥವಾ ವಂಶ ಪರಂಪರೆ ಎಂದು. ಬ್ರಾಹ್ಮಣ ಜಾತಿಯಲ್ಲಿ ಗೋತ್ರ ಎನ್ನುವುದು ವಂಶದ ಮೂಲ ಪುರುಷ ಅಥವಾ ಕುಟುಂಬದ ಯಜಮಾನನಿಂದ ಬಂದದ್ದು. ಪ್ರತಿಯೊಂದು ಗೋತ್ರವೂ ಒಬ್ಬ ಪ್ರಖ್ಯಾತ ಋಷಿಯ ಹೆಸರನ್ನು ಹೊಂದಿ ಆ ಋಷಿಯನ್ನು ವಂಶದ ಮೂಲ ಪುರುಷನೆಂದು ಒಪ್ಪಿಕೊಂಡಿದೆ. ಪ್ರತಿಯೊಂದು ಗೋತ್ರವೂ ಸ ಅಥವ ಅಸ ಎನ್ನುವ ಅಂತ್ಯ ಪ್ರತ್ಯಯದಲ್ಲಿ ಸಂಬೋಧಿಸಲ್ಪಡುತ್ತದೆ.
     ಬ್ರಾಹ್ಮಣ ಜಾತಿಯಲ್ಲಿದ್ದ ಬೇರೆ ಬೇರೆ ಗುಂಪು ಅಥವ ಪಂಗಡಗಳನ್ನು ಕ್ರಮವಾಗಿ ವಿಂಗಡಿಸುವುದರ ಮೂಲಕ ಮೊಟ್ಟ ಮೊದಲ ಪ್ರಯತ್ನವಾಗಿ ಗೋತ್ರದ ಕಲ್ಪನೆ ಹುಟ್ಟಿಕೊಂಡಿತು. ಪ್ರಾರಂಭದಲ್ಲಿ ಕುಲೀನ ವಂಶದವರು ಪ್ರಖ್ಯಾತ ಋಷಿಗಳ ಹೆಸರಿನೊಂದಿಗೆ ತಮ್ಮನ್ನು ಆ ಋಷಿಗಳ ವಂಶಜರೆಂದು ಗುರುತಿಸಿಕೊಳ್ಳುವುದರ ಮೂಲಕ ಗೋತ್ರಗಳು  ಹುಟ್ಟಿಕೊಂಡವು. (ಉದಾ: ಆಂಗೀರಸ, ಅತ್ರಿ, ಗೌತಮ, ಕಶ್ಯಪ, ಭೃಗು, ವಶಿಷ್ಠ, ಕುತ್ಸ, ಭಾರಧ್ವಾಜ). ಇವರಲ್ಲಿ ಮೊದಲ ಏಳು ಋಷಿಗಳನ್ನು ಪ್ರಧಾನವಾಗಿ ಗಣನೆಗೆ ತೆಗೆದುಕೊಂಡು ಅವರನ್ನು ಸಪ್ತ ಋಷಿಗಳೆಂದು ಗುರುತಿಸಿದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ವಿಶ್ವಾಮಿತ್ರನು ಮೂಲದಲ್ಲಿ ಕ್ಷತ್ರಿಯನಾಗಿದ್ದು, ನಂತರ ತಪಸ್ಸು, ಸಾಧನೆಗಳಿಂದ ಋಷಿಯಾಗಿ, ನಂತರ ಬ್ರಹ್ಮರ್ಷಿಯಾದ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಬ್ರಾಹ್ಣಣ ಜಾತಿಯಲ್ಲಿದ್ದ ಬೇರೆ ಬೇರೆ ಪಂಗಡ ಅಥವ ಗುಂಪುಗಳನ್ನು ವಿಂಗಡಿಸಿ, ವಂಶದ ಪರಂಪರೆಗೆ ಅನುಗುಣವಾಗಿ ಆಯಾ ಋಷಿಯ ಮೂಲದವರೆಂದು ಗುರುತಿಸಿಕೊಳ್ಳುವ ಪರಿಪಾಠ ಬೆಳೆಯಿತು.
     ಪ್ರಧಾನ ಋಷಿಗಳ ಪರಂಪರೆಯ ಮೂಲದಿಂದ ಬಂದವರನ್ನು ನಂತರ ಪ್ರತ್ಯೇಕ ಪಂಗಡವಾಗಿ ವರ್ಗೀಕರಿಸಲಾಯಿತು. ಅದಕ್ಕೆ ಅನುಗುಣವಾಗಿ ಪ್ರಮುಖ ಗೋತ್ರಗಳನ್ನು ಗಣಗಳಾಗಿ ವರ್ಗೀಕರಿಸಿ, ನಂತರ ಪ್ರತಿಯೊಂದು ಗಣವನ್ನೂ ಮತ್ತೆ ವರ್ಗೀಕರಿಸಿ ಕುಟುಂಬಗಳಾಗಿ ವಿಂಗಡಿಸಲಾಯಿತು.
     ನಿರ್ದಿಷ್ಠ ಗಣ ಅಥವ ಉಪಗಣವನ್ನು ಸ್ಥಾಪಿಸಿದ ಮೂಲಪುರುಷ ಅಥವ ಋಷಿಯ ವಂಶದವನೆಂದು ಪ್ರತಿಯೊಬ್ಬ ಬ್ರಾಹ್ಮಣನೂ ಅಧಿಕಾರಯುತವಾಗಿ ಘೋಷಿಸಿಕೊಳ್ಳುತ್ತಾನೆ. ಇದರ ಪ್ರಕಾರ ಒಬ್ಬ ಋಷಿಯಿಂದ ಸ್ಥಾಪಿಸಲ್ಪಟ್ಟ ಗಣ ಅಥವ ಉಪಗಣವನ್ನೇ ಈಗ ಸಾಮಾನ್ಯವಾಗಿ ಗೋತ್ರ ಎಂದು ಕರೆಯುವುದು.     
____________________________________________
     ಈ ಲೇಖನವನ್ನು ಬರೆದಿರುವ ಶ್ರೀ ಬೆಳವಾಡಿ ಅಶ್ವತ್ಥನಾರಾಯಣರವರು ಧಾರ್ಮಿಕ  ಆಚಾರ-ವಿಚಾರಗಳ ಬಗ್ಗೆ ಹೆಚ್ಚು ತಿಳಿದವರಾಗಿದ್ದಾರೆ. ವೇದ ಪುರಾಣಗಳ ಕುರಿತು ಅಭ್ಯಸಿಸಿದ್ದಾರೆ. ಹಾಸನದಿಂದ ಪ್ರಕಟವಾಗುತ್ತಿರುವ ವಿಪ್ರವಾಹಿನಿ ಪತ್ರಿಕೆಯಲ್ಲಿ ಋಷಿ ಮುನಿಗಳ ಪರಿಚಯಾತ್ಮಕ ಲೇಖನಗಳನ್ನು ಧಾರಾವಾಹಿಯಾಗಿ ಬರೆದಿರುವ ಇವರನ್ನು ಹರಿತ್ಸರ ಕುರಿತು ಲೇಖನ ಬರೆದುಕೊಡಲು ಕೋರಲಾಗಿ ಅವರು ಮಾಹಿತಿ ಸಂಗ್ರಹಕ್ಕಾಗಿ ಬಹಳ ಶ್ರಮಪಟ್ಟು ಈ ಲೇಖನ ಸಿದ್ಧಪಡಿಸಿಕೊಟ್ಟಿದ್ದಾರೆ. ವಿವಿಧ ಮೂಲಗಳಿಂದ ಪಡೆದ ಮಾಹಿತಿ ಆಧರಿಸಿ ಈ ಲೇಖನ ಬರೆಯಲಾಗಿದ್ದು ಡಾ. ಹೆಚ್.ಎಸ್. ಗೋಪಾಲಕೃಷ್ಣಮೂರ್ತಿ, ಎಂ.ಎಸ್ಸಿ. ಪಿ.ಹೆಚ್.ಡಿ., ಬೆಂಗಳೂರು, ಶ್ರೀಮತಿ ಹೆಚ್.ಎನ್. ಇಂದಿರಾ ಸೂರ್ಯಪ್ರಕಾಶ, ಬಿ.ಎಸ್ಸಿ., ಎಂ.ಎ.(ಆಂಗ್ಲ), ಬೆಂಗಳೂರು ಇವರನ್ನು ವಿಶೇಷ ಮಾಹಿತಿ ಸಹಕಾರ ನೀಡಿದ್ದಕ್ಕಾಗಿ ಹಾಗೂ ಇಂಗ್ಲಿಷಿನ ಮಾಹಿತಿ ಕನ್ನಡೀಕರಿಸಿಕೊಟ್ಟದ್ದಕ್ಕಾಗಿ ಶ್ರೀ ಬಿ.ಎಲ್. ಲಕ್ಷ್ಮೀನಾರಾಯಣ, ಹಾಸನ ಇವರನ್ನು ಲೇಖಕರು ಸ್ಮರಿಸಿದ್ದಾರೆ.                   -ಸಂ.                                                  
ಲೇಖಕರ ವಿಳಾಸ:                 ಬೆಳವಾಡಿ ಅಶ್ವತ್ಥನಾರಾಯಣ, ನಿವೃತ್ತ ಆರಕ್ಷಕ ನಿರೀಕ್ಷಕರು (ನಿಸ್ತಂತು), ನಂ. ಇ.ಡಬ್ಲ್ಯು.ಎಸ್. ೭೯೫ (ಮಹಡಿ), ಇಪ್ಪತ್ತನೇ ಅಡ್ಡರಸ್ತೆ, ಕುವೆಂಪುನಗರ,       ಹಾಸನ - ೫೭೩೨೦೧.   ಸ್ಥಿರ ದೂರವಾಣಿ: ೦೮೧೭೨-೨೩೩೪೩೦

___________________________________

     ಹರಿತ್ಸನು ಸೂರ್ಯವಂಶದಲ್ಲಿ ಜನಿಸಿದ ಒಬ್ಬ ಪ್ರಖ್ಯಾತ ರಾಜ. ಹರಿತ್ಸ ಗೋತ್ರದಲ್ಲಿ ಜನಿಸಿದ ಬ್ರಾಹ್ಮಣರೆಲ್ಲಾ ಹರಿತ್ಸ ವಂಶಜರು. ಆಂಗೀರಸ, ಅಂಬರೀಶ, ಯುವನಾಶ್ವರು(ಯೌವನಾಶ್ವ) ಹರಿತ್ಸ ಗೋತ್ರದ ಪ್ರವರ್ತಕ ಋಷಿತ್ರಯರು. ಅಂಬರೀಶ ಮತ್ತು ಯುವನಾಶ್ವ (ಯೌವನಾಶ್ವ)ರೂ ಸಹ ಸೂರ್ಯವಂಶದಲ್ಲಿ ಜನಿಸಿದ ಪ್ರಖ್ಯಾತ ರಾಜರುಗಳು ಹಾಗೂ ಶ್ರೀರಾಮನ ಪೂರ್ವಜರೆಂದು ಶ್ರೀರಾಮನ ವಂಶಾವಳಿಯಿಂದ ತಿಳಿದು ಬರುವ ಸಂಗತಿ.

     ಅಂಬರೀಶನ ಮಗ ಮಂಧಾತ್ರಿ ಮತ್ತು ಅವನ ಮಗ ಯುವಾನಶ್ವ (ಯೌವನಾಶ್ವ). ಯುವನಾಶ್ವನ ಮಗನೇ ಹರಿತ್ಸ. ಇವರುಗಳ ಸಂತತಿಯೇ ಆಂಗೀರಸ - ಹರಿತ್ಸರು ಎಂದು ವಿಷ್ಣು ಪುರಾಣದಲ್ಲಿ ಉಲ್ಲೇಖಿತವಾಗಿದೆ.     ವಿಷ್ಣು ಪುರಾಣದ ಪ್ರಕಾರ ಹರಿಶ್ಚಂದ್ರನು ತ್ರಿಶಂಕುವಿನ ಮಗ. ಅವನ ಮಗ ರೋಹಿತಾಶ್ವ. ರೋಹಿತಾಶ್ವನ ಮಗನೇ ಹರಿತ್ಸ. ಅವನ ಮಗ ಚುಂಚು. ಅವನಿಗೆ ವಿಜಯ ಮತ್ತು ಸುದೇವ ಎಂಬ ಹೆಸರಿನ ಇಬ್ಬರು ಮಕ್ಕಳು. ಇದರಲ್ಲಿ ತಿಳಿಸಿರುವ ಹರಿತ್ಸರು ಪರಂಪರೆಯಲ್ಲಿ ದ್ವಿತೀಯ ತಲೆಮಾರಿನವರು.
     ಸೂರ್ಯವಂಶದ ರಾಜನಾದ ಯುವಾನಶ್ವ (ಯೌವನಾಶ್ವ)ನ ಮಗ ಹರಿತ್ಸ ಇಕ್ವಾಕುವಿನ ಸಂತಾನ. ಅವನ ಸಂತತಿಯವರೇ ಹರಿತ್ಸ - ಆಂಗೀರಸರು. ಲಿಂಗಪುರಾಣದಲ್ಲಿ ಹೇಳಿರುವಂತೆ ಯುವಾನಶ್ವನ (ಯೌವನಾಶ್ವ) ಮಗನೇ ಹರಿತ್ಸ. ಅವನ ಮಕ್ಕಳೇ ಹರಿತ್ಸರು. ಅವರು ಕ್ಷತ್ರಿಯ ವಂಶದಲ್ಲಿ ಜನಿಸಿ ನಂತರ ದ್ವಿಜರಾದ ಆಂಗೀರಸ ಋಷಿಗಳ ಅನುಯಾಯಿಗಳಾಗಿದ್ದರು. ಅಥವ ವಾಯುವಿನ ಪ್ರಕಾರ ಕ್ಷತ್ರಿಯ ಪರಂಪರೆಯಲ್ಲಿ ಜನಿಸಿ ದ್ವಿಜತ್ವಕ್ಕೆ ಏರಿ ಬ್ರಹ್ಮಜ್ಞಾನಿಗಳಾದ ಆಂಗೀರಸರ ಮಕ್ಕಳಾಗಿದ್ದರು. ಬಹುಶಃ ಇದರ ಅರ್ಥ ಕ್ಷತ್ರಿಯನಾಗಿ ಜನಿಸಿದ ಹರಿತ್ಸನನ್ನು ಆಂಗೀರಸರು ದ್ವಿಜತ್ವಕ್ಕೆ ಏರಿಸಿರಬೇಕು.

     ಇತರೇ ಕೃತಿಗಳಲ್ಲಿ ಹೇಳಿರುವಂತೆ, ಹರಿತ್ಸ ಎನ್ನುವ ಹೆಸರು ಒಬ್ಬ ಋಷಿಗೆ ಸಂಬಂಧಿಸಿದ್ದು ಅವನು ಚ್ಯವನನ ಮಗನೆಂದೂ ನೀತಿಸಂಹಿತೆಯ ಗ್ರಂಥವು ಅವನಿಂದ ರಚಿಸಲ್ಪಟ್ಟಿದೆ ಎಂಬ ಅಂಶ ತಿಳಿದು ಬರುತ್ತದೆ.
     ಹರಿತ್ಸನು ತನ್ನ ನೀತಿ ಸಂಹಿತೆಯ ಮೂಲ ಪ್ರತಿಯನ್ನು ಗದ್ಯ ರೂಪದಲ್ಲಿ ರಚಿಸಿದ್ದಾನೆ. ಆದರೆ ಆ ಮೂಲ ಪ್ರತಿಯು ಲಭ್ಯವಿಲ್ಲದ ಕಾರಣ ಈಗ ಪ್ರಚಲಿತವಿರುವ ಸಂಹಿತೆಯು ಮೂಲ ಪ್ರತಿಯ ಸಾರಾಂಶ ರೂಪದಲ್ಲಿದೆ. ನೀತಿ ಸಂಹಿತೆ ಛಂದೋಬದ್ಧತೆಯನು ಹಿಂದೂ ಧರ್ಮೀಯರು ಸಾಮಾನ್ಯವಾಗಿ ಆಚಾರ ಅಥವ ಧರ್ಮದ ಪ್ರಮಾಣವೆಂದು ಪರಿಗಣಿಸಿದ್ದಾರೆ. ಆನಾದರಣೀಯವೆನಿಸುವ ಯಾವ ನೈಸರ್ಗಿಕ ನಿಯಮಗಳೂ ಈ ನೀತಿ ಸಂಹಿತೆಯಲ್ಲಿ ಕಂಡು ಬರುವುದಿಲ್ಲ. ಈ ನೀತಿ ಸಂಹಿತೆಯು ಏಳು ಅಧ್ಯಾಯಗಳನ್ನು ಹಿಂದಿದ್ದು ನೂರಾ ತೊಂಬತ್ತನಾಲ್ಕು ದ್ವಿಪದಿಯ ಶ್ಲೋಕಗಳನ್ನು ಒಳಗೊಂಡಿದೆ.
     ರಾಜ ಅಂಬರೀಶ ಮತ್ತು ಋಷಿ ಮಾರ್ಕಂಡೇಯ ಇವರಿಬ್ಬರ ನಡುವೆ ನಡೆದ ಸಂವಾದ ಪ್ರಶ್ನೋತ್ತರ ರೂಪದಲ್ಲಿದ್ದು ವಿವಿಧ ಜಾತಿಯವರು ಅನುಸರಿಸಬೇಕಾದ ನೀತಿ ಅಥವ ಜಾತಿ ಧರ್ಮದ ಬಗ್ಗೆ ಅಂಬರೀಶನು ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಮಾರ್ಕಂಡೇಯ ಋಷಿಯು ಪೂರ್ವಾಚರಣೆಯಲ್ಲಿದ್ದ ನೀತಿ- ಜಾತಿ ಧರ್ಮಗಳ ಬಗ್ಗೆ ಹರಿತ್ಸ ಮತ್ತು ಋಷಿಗಳ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಾನೆ.
     ಹರಿತ್ಸನಿಂದ ರಚಿಸಲ್ಪಟ್ಟ ನೀತಿಸಂಹಿತೆ ಗ್ರಂಥದ ಪ್ರಾರಂಭದ ಉಕ್ತಿಯ ಪ್ರಕಾರ ಹರಿತ್ಸ ಮತ್ತು ಮಾರ್ಕಂಡೇಯ ಋಷಿಯ ನಡುವೆ ಪ್ರಶ್ನೋತ್ತರ ರೂಪದಲ್ಲಿ ನಡೆದ ಸಂವಾದ ಸ್ಪಷ್ಟವಾಗುತ್ತದೆ. ಹರಿತ್ಸನು ತನ್ನ ನೀತಿ ಸಂಹಿತೆಯನ್ನು ಗದ್ಯ ರೂಪದಲ್ಲಿ ರಚಿಸಿರುವುದು ವೇದ್ಯವಾಗುತ್ತದೆ. ಹರಿತ ಸಂಹಿತೆಯೆಂದು ಕರೆಉಲ್ಪಡುವ ಈ ಗ್ರಂಥವು ಸಹಜವಾಗಿ ಪದ್ಯರೂಪದ ಗ್ರಂಥವಾಗಿ ಮಾರ್ಕಂಡೇಉ ಋಷಿಯಿಂದ ರಚಿಸಲ್ಪಟ್ಟಿದೆ. ಹರಿತ್ಸನಿಂದ ರಚಿಸಲ್ಪಟ್ಟ ಗದ್ಯರೂಪದ ಮೂಲ ಪ್ರತಿಯ ವಿವರಗಳ ಸಾರಾಂಶವನ್ನೆಲ್ಲಾ ಸಂಗ್ರಹಿಸಿ ಮಾರ್ಕಂಡೇಯ ಋಷಿಯು ಶ್ಲೋಕಗಳಲ್ಲಿ ರಚಿಸಿದ್ದಾನೆ.
     ತತ್ವಜ್ಞಾನಿ, ವೇದಾಂತಿ, ವಿಶಿಷ್ಠಾದ್ವೈತದ ಪ್ರವರ್ತಕರಾದ ಶ್ರೀ ರಾಮಾನುಜರು ಹರಿತ್ಸ ಗೋvದವರು. ಶ್ರೀ ವೈಷ್ಣವರು ಶ್ರೀ ರಾಮಾನುಜರನ್ನು ಅವರ ಪರಂಪರೆಯ ಮೂರನೇ ಹಾಗೂ ಪ್ರಮುಖ ಆಚಾರ್ಯರೆಂದು ಪರಿಭಾವಿಸುತ್ತಾರೆ.
        ಆಂಗೀರಸ - ಅಂಬರೀಶ - ಯುವಾನಶ್ವ(ಯೌವನಾಶ್ವ)  ಪ್ರವರದ ಹರಿತ್ಸ ಗೋತ್ರದ ವಂಶ ಪರಂಪರೆಯು ಸಹಸ್ರಾರು ವರ್ಷಗಳ ಇತಿಹಾಸವನ್ನು ಸ್ಪಷ್ಟವಾಗಿ ವಿವರಿಸುತ್ತದೆ.
-ಬೆಳವಾಡಿ ಅಶ್ವತ್ಥನಾರಾಯಣ
*****
HARITHA
From Wikipedia, the free encyclopedia

     Harit (Harita) Rishi was a sage of the Lakulish cult and was a devotee of Lord Shiva (Shri Eklingji). Harita was also the guru who taught Bappa Rawal of Guhilot (later to called Sisodia) the four cardinal duties for the service of the state:

1.     To follow the principles of Manav Dharma and preserve Vedic culture.
2.     To serve all God’s creations as a service to God, the creator of all life.
3.     To endeavour constantly to keep the human soul awakened and alive, in order that human beings would value the Dignity of Man.
4.     To help recognize Man’s special status in the hierarchy of God’s creations- the eternal principles underlying cosmic creation.
.
*****


ಕೆಳದಿ ಕವಿಮನೆತನದವರ ಪ್ರವರ
     ಕೆಳದಿ ಕವಿ ಮನೆತನದವರು ಹರಿತಸ ಗೋತ್ರಕ್ಕೆ ಸೇರಿದವರಾಗಿದ್ದು ಅವರು ಹೇಳುವ ಪ್ರವರ ಈ ರೀತಿ ಇರುತ್ತದೆ:
    
 ಆಂಗೀರಸ ಅಂಬರೀಶ, ಯೌವನಾಶ್ವ ತ್ರಯಾಋಷಯ ಪ್ರವರಾನ್ವಿತ ಹರಿತಸ ಗೋತ್ರ ಬೋಧಾಯನ ಸೂತ್ರ ಯಜುಃ:ಶಾಖಾ ಅಧ್ಯಾಯಿ . . . . . . . . . . . . . . ಶರ್ಮ ಅಹಂಭೋ ಅಭಿವಾದಯೇ

ಅರ್ಥ:  ಹರಿತಸ ಗೋತ್ರಕ್ಕೆ ಸೇರಿದ, ಮೂವರು ಋಷಿಗಳಾದ ಆಂಗೀರಸ, ಅಂಬರೀಶ, ಯೌವನಾಶ್ವರ ವಂಶದವನಾದ, ಯಜುರ್ವೇದದ ಬೋಧಾಯನ ಸೂತ್ರವನ್ನು ಪಾಲಿಸುವವನಾದ ನಾನು . . . . . . . . . . . . . ಶರ್ಮ ನಮಸ್ಕರಿಸುತ್ತೇನೆ.
*****
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)

Sunday, May 29, 2011

ನವರಸಕವಿ ಕೆಳದಿ ಸುಬ್ಬಾಭಟ್ಟ

ಕೆಳದಿ ಕವಿಮನೆತನದ ಪೂರ್ವಜರು
ನವರಸಕವಿ ಕೆಳದಿ ಸುಬ್ಬಾಭಟ್ಟ
-ಡಾ: ಕೆಳದಿ ವೆಂಕಟೇಶ್ ಜೋಯಿಸ್

     ಕೆಳದಿ ಕವಿ ಮನೆತನದಲ್ಲಿ ಹೆಸರಾದ ಪ್ರಮುಖರಲ್ಲಿ ಲಿಂಗಣ್ಣ, ವೆಂಕಣ್ಣ ಇವರುಗಳ ಜೊತೆಗೆ ಕವಿ ಸುಬ್ಬಾಭಟ್ಟನೂ ಒಬ್ಬನು. ಕೆಳದಿ ಕಾಲದಲ್ಲಿ ಇಬ್ಬರು ಸುಬ್ಬ ಕವಿಗಳು ಬರುತ್ತಾರೆಂದೂ ಸುಬ್ಬ ಕವಿಯ ಕುರಿತು ಸಾಕಷ್ಟು ಚರ್ಚೆಯಿದೆ. ಯಕ್ಷಗಾನ ಪ್ರಸಂಗಗಳು ಹಾಗೂ ಅವುಗಳ ಕರ್ತೃಗಳ ಕುರಿತು ವಾದವಿವಾದವಿದೆ. ಡಾ:ಕೋಟ ಶಿವರಾಮ ಕಾರಂತರೂ, ಶ್ರೀ ಕುಕ್ಕಿಲ ಕೃಷ್ಣಭಟ್ಟರೂ ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ. ಅದರಲ್ಲಿ ಯಕ್ಷಗಾನ ನಾಟಕಗಳ ಕರ್ತೃಗಳ ಬಗ್ಗೆ ಮುಖ್ಯವಾಗಿ ಸುಬ್ಬ ಎಂಬುವನ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಸಿರುವುದಿದೆ. ಕೆಳದಿ ಪೀಳಿಗೆಯ ಸುಬ್ಬ ಮತ್ತು ಪಾರ್ತಿ ಸುಬ್ಬ ಎಂಬುವವರು ಒಬ್ಬರೇ ಅಥವಾ ಬೇರೆ ಬೇರೆಯವರೆ ಎಂಬುದು ಇಲ್ಲಿ ನಡೆದ ವಾದ. ಇವರಿಬ್ಬರ ತಂದೆ ತಾಯಿಯವರು ಬೇರೆ ಬೇರೆ. ಇವರು ರಚಿಸಿರುವ ಕೃತಿಗಳು, ಇವರ ಆಶ್ರಯದಾತರು ಬೇರೆ ಎಂಬುದು ಸಾಬೀತಾಗಿದೆ.

     ಕೆಳದಿ ಕವಿಗಳಲ್ಲಿ ವೆಂಕ, ಸುಬ್ಬರು ಹೆಚ್ಚು ಚರ್ಚೆಗೆ ಒಳಗಾಗಿದ್ದಾರೆ. ಶ್ರೀ ಶಿವರಾಮ ಕಾರಂತರು ಮೈರಾವಣ ಕಾಳಗದ ಕತೃವಾದ ಅಜಪುರದ ಸುಬ್ಬನಲ್ಲಿ, ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತಗಳನ್ನು ಬರೆದ ಕೆಳದಿಯ ಸುಬ್ಬನನ್ನೂ, ಐರಾವತ, ಶ್ರೀ ಕೃಷ್ಣಲೀಲೆ, ಕುಶಲವರ ಕಾಳಗಗಳನ್ನು ಬರೆದ ಅನಾಮಧೇಯ ಎನಿಸಿದ್ದ ಕುಕ್ಕಿಲರ ಪಾರ್ತಿಸುಬ್ಬನನ್ನೂ ಸೇರಿಸಿ ಒಬ್ಬ ಸುಬ್ಬನನ್ನು ಎತ್ತಿಹಿಡಿದಿರುವುದಿದೆ.  ಆದರೆ ಮೇಲಿನ ಪ್ರಸಂಗಗಳ ಕತೃಗಳು ಮೂವರು ಆಗಿಹೋಗಿದ್ದಾರೆ. ಅವರಲ್ಲಿ ಆಡುವಳ್ಳಿಯ ಸುಬ್ರಹ್ಮಣ್ಯ, ಕೆಳದಿಯ ಸುಬ್ಬ ಮತ್ತು ಪಾರ್ತಿ ಸುಬ್ಬ.
     ಪಾರ್ತಿ ಸುಬ್ಬ ಅಥವಾ ಹಂಪೆಯಾತ್ಮನ ಕುರಿತು ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ವೆಂಕಾರ್ಯನ ಕುರಿತು ಹೆಚ್ಚಿನ ಮಾಹಿತಿ ದೊರೆಯುತ್ತದೆ. ಈತ ಬಾಲ ವಾಲ್ಮೀಕಿ ಎಂದು ಖ್ಯಾತನಾಗಿದ್ದ ಪ್ರಧಾನಿ  ಅಥವಾ ಮಹಾಮಂತ್ರಿ ಆಗಿದ್ದನೆಂದು ಕಂಡು ಬರುತ್ತದೆ. ಈತನು ಕೆಳದಿಯ ಹಿರಿಯ ಬಸವಪ್ಪನಾಯಕನ ಆಸ್ಥಾನದಲ್ಲಿದ್ದನೆಂದು ಡಾ: ಶಿವರಾಮ ಕಾರಂತರ ಅಭಿಪ್ರಾಯ. ಆದರೆ ಕವಿ ಚರಿತ್ರೆಗಾರರ ಅಭಿಪ್ರಾಯ ಆಧರಿಸಿ ಕುಕ್ಕಿಲರು ಕ್ರಿ. ಶ. ೧೭೬೩ರ ಅನಂತರದಲ್ಲಿ ಕೆಳದಿಯನ್ನು ಆಳಿದ ಹೈದರಾಲಿಯ ಮಂತ್ರಿ ಆಗಿರಬಹುದೆಂದು ಹೇಳುತ್ತಾರೆ.  ರುಕ್ಮಿಣೀ ಸ್ವಯಂವರ ಪ್ರಸಂಗದ ಕೊನೆಯಲ್ಲಿ ಹೇಳಿರುವ ಮಾತುಗಳಿಂದ ಈತನು ಕೆಳದಿಯ ಭೂರಮಣನಾದ ಬಸವೇಂದ್ರನ ಆಶ್ರಯದಲ್ಲಿದ್ದ ಕವಿ ವೆಂಕಣಾರ್ಯ ಮತ್ತು  ಅವನ ಪತ್ನಿ ದೇವಮ್ಮ ಅವರ ಹಿರಿಯ ಮಗ ಚೆನ್ನಯ್ಯನ ತಮ್ಮ ಸುಬ್ಬ ಎಂಬುದು ಸ್ಪಷ್ತವಾಗುತ್ತದೆ. ಇವನು ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತ ಎಂಬ ಎರಡು ಪಸಂಗಗಳ ಕರ್ತೃ.
     ಪಾರಿಜಾತ ಮತ್ತು ರುಕ್ಮಿಣೀ ಸ್ವಯಂವರಗಳನ್ನು ಬರೆದ ಕೆಳದಿ ಸುಬ್ಬ ಮತ್ತು ಹನುಮದ್ರಾಮಾಯಣವನ್ನು ಬರೆದ ಆಡುವಳ್ಳಿ ಸುಬ್ಬ ಬೇರೆಬೇರೆಯವರು. ಇವನ ತಂದೆ ವೆಂಕಾರ್ಯ. ಈ ವೆಂಕಾರ್ಯನು ತನ್ನ ಕೃತಿಗಳಲ್ಲಿ ತನ್ನ ತಂದೆ ಲಿಂಗಪ್ಪನನ್ನು ಸ್ಮರಿಸಿದ್ದಾನೆಯೇ ಹೊರತು ಆಶ್ರಯದಾತನ ಹೆಸರು ಹೇಳಿಲ್ಲ. ಸಿಕ್ಕಿರುವ ಕೃತಿಗಳಲ್ಲಿ ಕೆಲವು ಗರಿಗಳು ಕಳೆದು ಹೋಗಿರುವುದರಿಂದ ಹೇಳಿದ್ದರೂ ಹೇಳಿರಬಹುದೆನಿಸುತ್ತದೆ. ಇವನ ಮಗ ಕೆಳದಿ ಸುಬ್ಬನು ತನ್ನ ರುಕ್ಮಿಣೀ ಸ್ವಯಂವರದ ಅಂತ್ಯದಲ್ಲಿ 'ಧಾರಿಣಗೆ ಪಶ್ಚಿಮದಿ ಶೋಭಿಪ| ವಾರಿನಿಧಿಯನಾಳ್ವ ಕೆಳದಿಯ| ಭೂರಮಣ ಬಸವೇಂದ್ರನಂಘ್ರೀಯ ಸೇರಿ ಬಾಳ್ವ ವೆಂಕಣಾರ್ಯನ ಮಗ ತಾನು' ಎಂದು ಹೇಳಿಕೊಂಡಿರುವುದರಿಂದ ಈ ವೆಂಕನಿಗೆ ಕೆಳದಿಯ ಕಿರಿಯ ಬಸವಪ್ಪ ನಾಯಕನ ಆಶ್ರಯವಿದ್ದುದು ಸ್ಪಷ್ಟವಾಗಿ ತಿಳಿಯುತ್ತದೆ.

     ರುಕ್ಮಿಣೀ ಸ್ವಯಂವರ, ಪಾರಿಜಾತ ಬರೆದ ಕೆಳದಿ ಸುಬ್ಬನು ಕೆಳದಿಯ ಕವಿ ಮನೆತನಕ್ಕೆ ಸೇರಿದವನು. ಕವಿ ಸುಬ್ಬ ಅಥವಾ ಸುಬ್ಬಾಭಟ್ಟ ಎಂದು ಕರೆಯಲ್ಪಡುತ್ತಿದ್ದ ಈತನು ಕೆಳದಿ ಸಾಮ್ರಾಜ್ಯದ ಕಡೆಯ ದಿನಗಳಲ್ಲಿದ್ದವನು. ಆಗಲೇ ಸಾಮ್ರಾಜ್ಯ ಕೊನೆಗೊಂಡ ನಂತರ ರಾಜಾಶ್ರಯ ಇಲ್ಲದೆ ಜನರ ನಡುವೆ ಆಶ್ರಯ ಪಡೆದುಕೊಂಡವನಿವನು. ಈತನು ಯಕ್ಷಗಾನ ಪಸಂಗವನ್ನು ರಚಿಸುವುದರ ಜೊತೆಗೆ ನಟನೆಯನ್ನೂ, ಭಾಗವತಿಗೆಯನ್ನೂ ರೂಢಿಸಿಕೊಂಡು ತನ್ನ ಬದುಕನ್ನು ಸಾಗಿಸಿದಂತೆ ಕಂಡು ಬರುತ್ತದೆ. ಈತನ ಎರಡು ಕೃತಿಗಳಲ್ಲಿ ರುಕ್ಮಿಣಿ ಸ್ವಯಂವರವನ್ನು ಕೆಳದಿಯ ಅರಸು ಮನೆತನ ಅಸ್ತಿತ್ವದಲ್ಲಿದ್ದಾಗ ರಚಿಸಿರುವಂತೆ ಕಂಡು ಬರುತ್ತದೆ. ಪಾರಿಜಾತವನ್ನು ಕೆಳದಿ ರಾಜ್ಯ ಪತನಾ ನಂತರ ರಚಿಸಿರಬೇಕು.  ರುಕ್ಮಿಣೀ ಸ್ವಯಂವರ ಪ್ರಸಂಗ ಕೃತಿಯಲ್ಲಿ ತನ್ನ ವಿಷಯವನ್ನು ಹೇಳುವ ಸಂಬಂಧದಲ್ಲಿ ತನ್ನ ಆಶ್ರಯದಾತ ಬಸವೇಂದ್ರ ಅಂದರೆ ಕಿರಿಯ ಬಸವಪ್ಪ ನಾಯಕನನ್ನು ಸ್ಮರಿಸಿದ್ದಾನೆ. ಇದು ಪಾರಿಜಾತ ಪ್ರಸಂಗದಲ್ಲಿ ಕಂಡುಬರುವುದಿಲ್ಲ. ಇದರ ಆಧಾರದಿಂದ ಇವನ ಕಾಲವನ್ನು ಕ್ರಿ. ಶ. ೧೭೬೦ ಎಂದು ಹೇಳಬಹುದು.
     ರುಕ್ಮಿಣೀ ಸ್ವಯಂವರ, ಪಾರಿಜಾತ  ಈ ಎರಡು ಪ್ರಸಂಗಗಳಿಗೆ ಭಾಗವತದಿಂದಲೇ ವಸ್ತುವನ್ನು ಆರಿಸಿಕೊಂಡಿದ್ದಾನೆ. ಇವುಗಳಲ್ಲಿ ಶೃಂಗಾರದ ಜೊತೆಗೆ ವೀರರಸವನ್ನೂ ಅಳವಡಿಸಿದ್ದಾನೆ. ಇಲ್ಲಿ ರುಕ್ಕ್ಮ, ಜೈದ್ಯಪತಿ ಮೊದಲಾದವರ ಗರ್ವಭಂಗವಾಗಿದ್ದರೆ, ಅಲ್ಲಿ ದೇವೇಂದ್ರನ ಅಹಂಕಾರ ಅಳಿದುದನ್ನು ಹೇಳುತ್ತದೆ.  ನರಕಾಸುರನ ವಧೆಯಗಿದೆ. ರುಕ್ಮಿಣೀ ಸ್ವಯಂವರಕ್ಕಿಂತ ಪಾರಿಜಾತ ಉತ್ತಮ ಕಲಾಕೃತಿ.
ರುಕ್ಮಿಣೀ ಸ್ವಯಂವರ:  
    ಈ ಯಕ್ಷಗಾನ ಕೃತಿಯ ಆರಂಭದಲ್ಲಿ ಕವಿಯು  ಗಣಪ, ಶಿವ, ಮುಕಾಂಬಿಕೆ ವಿಷ್ಣು, ಲಕ್ಷ್ಮೀ, ಬ್ರಹ್ಮ, ಶಾರದೆ ಇವರುಗಳ ಜೊತೆಗೆ ದೇವ ಗುರು ಪ್ರಾರ್ಥನೆ ಮಾಡುವುದರೊಂದಿಗೆ ಪ್ರಸಂಗವನ್ನು ಪ್ರಾರಂಭಿಸುತ್ತಾನೆ.  ದ್ವಾರಕಿಯ  ಕೃಷ್ಣ ತನ್ನ ಅಣ್ಣ ಬಲರಾಮನ ನೆರವಿನಿಂದ ಕೂಡಿನಪುರಕ್ಕೆ ಬಂದು ಅಲ್ಲಿನ ಅರಸನ ಮಗಳು ರುಕ್ಮಿಣಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುತ್ತಾನೆ. ರುಕ್ಮಿಣಿಯ ತಂದೆ ಭೀಷ್ಮಕನು ತನ್ನ ಮಗಳ ಇಚ್ಛೆ ಪೂರ್ಣವಾಗಲು ನೆರವಾಗುತ್ತಾನೆ. ಕೃಷ್ಣನೊಡನೆ ಅವಳ ಲಗ್ನವನ್ನು ವಿರೋಧಿಸಿದ ಅವಳ ಅಣ್ಣ ರುಕ್ಮ ಚೈದ್ಯರಾಜನಿಗೆ ಕೊಡಲು ಯತ್ನಿಸಿ ವಿಫಲನಾಗುತ್ತಾನೆ. ಕೃಷ್ಣನಿಂದ ರುಕ್ಮನ ಗರ್ವಭಂಗವಾಗುತ್ತದೆ. ಇದರಲ್ಲಿ ಕುಂಡಿನಪುರದಿಂದ ಕನ್ಯೆ ರುಕ್ಮಿಣಿಯ ದೌತ್ಯವನ್ನು ಹೊತ್ತು ದ್ವಾರಕಿಗೆ ಬಂದ ವಿಪ್ರನೊಬ್ಬನ ಪಾತ್ರ ಸೃಷ್ಟಿ ಚೆನ್ನಾಗಿದೆ. ಅವನು ತಂದೊಪ್ಪಿಸಿದ ಪತ್ರಸಾರ ಗಮನಿಸುವಂತಿದೆ.
ಪಾರಿಜಾತ:   

  ರುಕ್ಮಿಣೀ ಸ್ವಯಂವರದಂತೆ ಇದರಲ್ಲಿಯೂ ಆರಂಭದಲ್ಲಿ ತನ್ನ ಇಷ್ಟದೇವತೆಯದ ದೇವಕಿಯಣುಗನ ಪ್ರಾರ್ಥನೆಯ ನಂತರ ಗಣಪ, ಶಿವ, ಮೂಕಾಂಬಿಕೆಯರನ್ನು ಸ್ಮರಿಸಿ ದ್ವಿಪದಿಯಲ್ಲಿ
     ಪಾರಿಜಾತವ ತಂದು ರಂಜಿಸಿದ ಕಥೆಯ|
    ಸಾರವನು ಕುಟಜಾದ್ರಿ ಸದನ ವಾಸಿನಿಯ||
     ಕೃಪೆಯಿಂದ ಪೇಳ್ವೆ ನಾ ಯಕ್ಷಗಾನದಲಿ|
     ವಿಪುಳಮತಿಯುತರಿದ ಕೇಳಿ ಲಾಲಿಸಲಿ||
ಎಂದು ತನ್ನ ವಿನಯವನ್ನು ಮೆರೆದಿದ್ದಾನೆ.

     ಕೃಷ್ಣ ದ್ವಾರಕಿಯಲ್ಲಿದ್ದಾಗ ಒಂದು ದಿನ ನಾರದನ ಆಗಮನವಾಗುತ್ತದೆ. ಅರ್ಘ್ಯ ಪಾದ್ಯಾದಿಗಳನ್ನಿತ್ತ  ಕೃಷ್ಣ, ಅವರನ್ನು ಉಪಚರಿಸುತ್ತಾನೆ. ದೇವಮುನಿಯಿಂದ ಪಡೆದ ಪಾರಿಜಾತವನ್ನು ಕೃಷ್ಣ ರುಕ್ಮಿಣಿಗೆ ಮುಡಿಸುತ್ತಾನೆ. ದೂತಿಯೊಬ್ಬಳು ಸತ್ಯಭಾಮೆಯಲ್ಲಿ ವಿಷಯ ತಿಳಿಸಿದಾಗ ಅವಳಲ್ಲಿ ಸವತಿ ಮಾತ್ಸರ್ಯ ಬುಸುಗುಟ್ಟುತ್ತದೆ. ಕೃಷ್ಣ ಬರುವ ವೇಳೆಗೆ ಸಕಲಾಸ್ತ್ರಗಳನ್ನೂ ಸಿದ್ಧ ಪಡಿಸಿಕೊಳ್ಳುತ್ತಾಳೆ ಭಾಮೆ. ಆ ಸಂದರ್ಭದ  ಸಂಭಾಷಣೆ ಸ್ವಾರಸ್ಯವಾಗಿದೆ.
ಕೃಷ್ಣ-ಸತ್ಯಭಾಮೆಯರ ಸಂಭಾಷಣೆ:

ರಾಗ: ಸೌರಾಷ್ಟ್ರ,                          ಏಕತಾಳ
ಕೃಷ್ಣ: ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲು ತೆರೆಯೆ||
ಭಾಮೆ: ದ್ವಾರದಿ ದನಿಯನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು||
ಕೃಷ್ಣ: ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ||
ಭಾಮೆ: ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ||
ಕೃಷ್ಣ: ಕ್ರೂರ ಕಾಳಿಂಗನ ಪೆಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ||
ಭಾಮೆ: ಧೀರ ನೀನಾದರೆ ಪಾವನಾಡಿಸಿಕೊಂಡು                ಗಾರುಡಿಗಾರ ಹೋಗಯ್ಯ||
ಕೃಷ್ಣ: ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ||
ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ||
ಕೃಷ್ಣ: ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ||
ಭಾಮೆ: ಆದರೊಳ್ಳಿತು ಘೋರಾರಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ||
ಕೃಷ್ಣ: ಕಾಂತೆ ಕೇಳಾದರೇಳು ವೃಷಭವ ಕಟ್ಟಿ ನೀಲಕಾಂತೆಯ ತಂದವ ಕಾಣೆ||
ಭಾಮೆ: ಅಂತಾದರೊಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ||
ಕೃಷ್ಣ: ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ||
     ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ||

 ಉಡದೆ, ಉಣ್ಣದೆ, ಬರಿದೆ ಮಂಚದಲ್ಲಿ ಮಲಗಿದ್ದ ಪತ್ನಿಯನ್ನು ಸಂತೈಸಿ, ಅವಳ ಮುನಿಸಿನ ಕಾರಣವನ್ನು ತಿಳಿದ  ಕೃಷ್ಣ ನಿನಗೆ ಸುಮವೊಂದನೀವುದಾವಚಂದ ಎನುತವಳಿಗಿತ್ತೆ; ನಿನಗೆ ವೃಕ್ಷವನೆ ತಂದೀವೆ- ಎನ್ನುತ್ತಾನೆ.
     ಅಷ್ಟರಲ್ಲಿ ನರಕಾಸುರನ ಹಾವಳಿ ಹೆಚ್ಚಿ, ಅವನ ಉಪಟಳವನ್ನು ಕೊನೆಗಾಣಿಸಬೇಕೆಂದು ದೇವೇಂದ್ರ ಶ್ರೀ ವಿಷ್ಣುವಿನಲ್ಲಿ ಬಿನ್ನಹ ಮಾಡಿಕೊಂಡಿರುತ್ತಾನೆ. ಕಾಕತಾಳೀಯವೆನಿಸುವಂತೆ ಎರಡು ಕಾರ್ಯಗಳು ಒಮ್ಮೆಲೇ ಕೂಡಿದಂತಾಗಿ ಕೃಷ್ಣ ಗರುಡನ ಬೆನ್ನೇರಿ ಭಾಮೆಯೊಡನೆ ಇಂದ್ರ ಲೋಕದತ್ತ ಧಾವಿಸುತ್ತಾನೆ. ಹಾದಿಯಲ್ಲಿ ಪ್ರಾಗ್ಜೋತಿಷಪುರ ಗೋಚರಿಸುತ್ತದೆ. ಅಲ್ಲಿ  ಕೃಷ್ಣ ಒಳಹೊಕ್ಕು ಮುರ, ನರಕಾಸುರ ಮೊದಲಾದ ರಕ್ಕಸರನ್ನು ಸಂಹರಿಸಿ ಕಂಟಕ ನಿವಾರಣೆ ಮಾಡುತ್ತಾನೆ. ದೇವಲೋಕದಲ್ಲಿ ದೇವ ದಂಪತಿಗಳಿಗೆ ಅಭೂತ ಪೂರ್ವ ಸ್ವಾಗತ ಲಭಿಸುತ್ತದೆ. ಆದರೆ ಸತ್ಯಭಾಮೆ ಕೃಷ್ಣನ ಮಾತನ್ನೂ ಲೆಕ್ಕಿಸದೆ ಅಲ್ಲಿದ್ದ ಪಾರಿಜಾತದ ವೃಕ್ಷವನ್ನು ಬೇರು ಸಹಿತ ಕಿತ್ತು ಗರುಡನ ಹೆಗಲಿಗೇರಿಸುತ್ತಾಳೆ. ಅದರಸಲುವಾಗಿ ಇಂದ್ರನೊಡನೆ ಯುದ್ಧ ನಡೆದು ಇಂದ್ರನ ಗರ್ವಭಂಗವಾಗುತ್ತದೆ; ಲೋಕ ಕಲ್ಯಾಣವಾಗುತ್ತದೆ. ಈ ಕಥೆಯ ವಸ್ತುವನ್ನು ಎತ್ತಿಕೊಂಡು ರಸ ಪೂರ್ಣವಾದೊಂದು ಯಕ್ಷಗಾನವನ್ನು ಕವಿ ರಚಿಸಿದ್ದಾನೆ. ಕೆಳದಿ ಸುಬ್ಬನ ಪಾಂಡಿತ್ಯ ಪದರ್ಶನಕ್ಕೆ  ಇದೊಂದು ಉತ್ತಮ ನಿದರ್ಶನ ಚೂರ್ಣಿಕೆಯಗಿದೆ.
     ಡಾ ಸಾ.ಶಿ. ಮರುಳಯ್ಯನವರು ಹೇಳುವಂತೆ ಕೆಳದಿ ಸುಬ್ಬನ ಎರಡೂ  ಪ್ರಸಂಗಗಳಲ್ಲಿ ಭಕ್ತಿಯ ಭಾಗೀರಥಿ ನಿರರ್ಗಳವಾಗಿ ಹರಿದಿದ್ದಾಳೆ. ಅಲ್ಲಿನ ಪ್ರಮುಖ ರಸಗಳಾದ ಶೃಂಗಾರ, ಹಾಸ್ಯ, ಕರುಣ, ವೀರಗಳ ಜೊತೆ ಜೊತೆಯಲ್ಲಿ ಭಕ್ತಿರಸವೂ ಪ್ರವಹಿಸಿದೆ. ತನ್ನ ಕುಲದೇವತೆ ಕೊಲ್ಲೂರು ಮೂಕಾಂಬಿಕೆಯನ್ನು ಕುರಿತ ಅವನ ಭಕ್ತಿಗೀತೆಯೊಂದಿಗೆ ಮಂಗಳ ಹಾಡಬಹುದು.  ಒಟ್ಟಿನಲ್ಲಿ ಕವಿ ಸುಬ್ಬ ಅಥವಾ ಸುಬ್ಬಾಭಟ್ಟ  ಕೆಳದಿ ಕವಿ ಮನೆತನದ ಮತ್ತೊಂದು ಕುಸುಮ. ಈತನೂ ಲಿಂಗಣ್ಣ ಕವಿಯಂತೆ ಸಂಪನ್ನ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ.
*****
('ಕವಿಕಿರಣ'ದ 1,ಡಿಸೆಂಬರ್, 2009 ಸಂಚಿಕೆಯಲ್ಲಿ ಪ್ರಕಟಿತ ಲೇಖನ)

ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ

     ದಿ. ಕವಿ ವೆಂಕಟಸುಬ್ಬರಾಯರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹತ್ತು ವರ್ಷಗಳ ಹಿಂದಿನ ಪ್ರಸಂಗ: ನಾನು ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ನನ್ನ ಕಾಲು ಮುಟ್ಟಿ ನಮಸ್ಕರಿಸಿದ ಪ್ರಸಂಗ ನೆನಪಿನಲ್ಲಿ ಉಳಿದಿದೆ. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ನನ್ನ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ನಾನು ನನ್ನ ಸ್ವಭಾವಕ್ಕೆ ವಿರುದ್ಧವಾಗಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದುದರಿಂದ ಸಂಬಂಧಗಳು ಉಳಿದುಕೊಂಡಿರುವುದು ನನ್ನ ವೈಯಕ್ತಿಕ ಅನುಭವ.
     ಅಡಿಗಡಿಗೆ ಕಾಡಿ ಶಿರನರವ ತೀಡಿ|
     ಮಿಡಿದಿಹುದು ಉಡಿಯೊಳಗಿನ ಕಿಡಿಯು||
     ಗಡಿಬಿಡಿಯಲಡಿಯಿಡದೆ ತಡೆತಡೆದು|
     ಸಿಡಿನುಡಿಯ ನೀಡು ಸಿಹಿಯ ಮೂಢ||

     ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣೀಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ.      ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
     

     “ Doing good to others is virtue (Dharma); injuring others is sin. Strength and manliness are virtue; weakness and cowardice are sin. Independence is virtue; dependence is sin. Loving others is virtue; hating others is sin. Faith in God and one’s own Self is virtue; doubt is sin. Know that talking ill of others in private is a sin. You must wholly avoid it. Many things may occur to the mind, but it gradually makes a mountain of a molehill if you try to express them. Everything is ended if you forgive and forget.”
     ಆದ್ದರಿಂದ ಮರೆಯೋಣ; ಮರೆತು ಚೆನ್ನಾಗಿರೋಣ.
                                       ನಿಮ್ಮವನು,
                              -ಕ.ವೆಂ. ನಾಗರಾಜ್.

*****
('ಕವಿಕಿರಣ' ಪತ್ರಿಕೆಯ 01-12-2009ರ ಸಂಚಿಕೆಯ ಸಂಪಾದಕೀಯ).

Sunday, May 1, 2011

ಕೆಳದಿ ಕವಿಮನೆತನದ ಸಮಕಾಲೀನರು : ಸಾಗರದ ಕವಿ ಕೃಷ್ಣಮೂರ್ತಿ - ಅನಸೂಯಮ್ಮ





----------------------------------------------------------
     ಶ್ರೀ ಸಾ.ಕ. ಕೃಷ್ಣಮೂರ್ತಿಯವರು ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ ಹಿರಿಯರು. ಸಾತ್ವಿಕ ಜೀವನ ನಡೆಸುತ್ತಿರುವ ಈ ಹಿರಿಯರು ಕವಿ ಕುಟುಂಬಗಳ ಒಳ್ಳೆಯ ಕಾರ್ಯಗಳಿಗೆ ಪ್ರೇರಕ ಮತ್ತು ಮಾರ್ಗದರ್ಶಕರಾಗಿದ್ದಾರೆ.  ೧೧-೦೩-೦೯ರಂದು ೮೨ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ  ಇವರ ಪರಿಚಯ ಲೇಖನ ಬರೆದಿರುವರು ವಿದ್ವಾನ್ ಡಾ. ಕೆ. ಕೃಷ್ಣಜೋಯಿಸ್, ಎಂ.ಎ., ಬಿ.ಎಡ್.ರವರು ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಇವರು ಉತ್ತಮ ಬರಹಗಾರರು, ವಾಗ್ಮಿಗಳು. ಇವರ ತಾಯಿಯ ತಮ್ಮನವರೇ ಶ್ರೀ ಕೃಷ್ಣಮೂರ್ತಿಯವರು. 
ಶ್ರೀ ಕೃಷ್ಣಮೂರ್ತಿಯವರ ವಿಳಾಸ: ಶಶಿಕಿರಣ, ನಂ. ೧೦೦೧, ೧೫ನೆಯ ಅಡ್ಡರಸ್ತೆ, ಬನಶಂಕರಿ- ೨ನೆಯ ಹಂತ, ಬೆಂಗಳೂರು -೫೬೦೦೭೧. ದೂ. ೦೮೦- ೨೬೭೧೦೨೦೫
ಲೇಖಕರ ವಿಳಾಸ: ಡಾ. ಕೆ.ಕೃಷ್ಣಾಜೋಯಿಸ್,   ನಂ. ೧೨೨೦, ಶ್ರೀವತ್ಸ, ೧೨ನೆಯ ಅಡ್ಡರಸ್ತೆ, ಗಿರಿನಗರ- ೨ನೆಯ ಹಂತ, ಬೆಂಗಳೂರು- ೫೬೦೦೮೫. (ದೂ. ೦೮೦-೨೬೪೨೧೦೭೪). -ಸಂ.

------------------------------------------------------------
     ಕೆಳದಿ ಸಂಸ್ಥಾನದಲ್ಲಿ ಪ್ರಸಿದ್ಧವಾದವುಗಳು ಜೋಯಿಸರ ಮತ್ತು ಕವಿ ಮನೆತನಗಳು. ಜೋಯಿಸರ ಮನೆತನ ಕೆಳದಿನಾಯಕರ ರಾಜ್ಯ ಕಟ್ಟಲು ಸಹಾಯಕವಾಗಿದ್ದರೆ ಕವಿ ಮನೆತನ ಕಲೆ, ಸಾಹಿತ್ಯ, ಸಂಗೀತ, ಕವಿತ್ವರಚನೆ ಮೊದಲಾದ ಕೆಳದಿ ಸಂಸ್ಥಾನದ ಸಂಸ್ಕೃತಿಯನ್ನು ಬೆಳಸುವುದಾಗಿದೆ. ಇದಕ ಕೆಳದಿ ನೃಪವಿಜಯ ವೆಂಬ ಗ್ರಂಥವನ್ನು ರಚಿಸಿದ ಲಿಂಗಣ್ಣ ಕವಿಯೇ ಮೂಲ. ಈ ಮನೆತನದಲ್ಲಿ ಕವಿ ರಾಮಣ್ಣ, ವೆಂಕಣ್ಣ ಹಾಗೂ ಲಿಂಗಣ್ಣ ಇವರುಗಳು ಪ್ರಸಿದ್ಧರಾದವರು. ಯದ್ಯಪಿ ಇವರುಗಳು ಸಂಸ್ಥಾನದ ಪ್ರಸಿದ್ಧ ಸ್ಥಳವಾದ ಸಾಗರದವರಾಗಿದ್ದರೂ (ಕೆಳದಿ ನೃಪವಿಜಯದಲ್ಲಿ ಸಾಗರವು ಸದಾಶಿವಸಾಗರವೆಂದು ಉಲ್ಲೇಖಿಸಲಾಗಿದೆ) ಕಾಲಕ್ರಮೇಣ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಯಿಂದಾಗಿ ಒಬ್ಬೊಬ್ಬರು ಒಂದೊಂದು ಕಡೆ ನೆಲೆಸಿದರು. ಶ್ರೀ ರಾಮಣ್ಣನವರು ಹಾಗೂ ಮಕ್ಕಳು ಕೆಳದಿಯಲ್ಲಿಯೂ, ಶ್ರೀ ವೆಂಕಣ್ಣಯ್ಯನವರ ಮಕ್ಕಳು ಶಿವಮೊಗ್ಗ, ಕೊಪ್ಪಗಳಲ್ಲಿಯೂ, ಶ್ರೀ ಲಿಂಗಣ್ಣನವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದ್ದರಿಂದಲೂ, ಕಾಲಕ್ರಮೇಣ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅವರ ಮಕ್ಕಳೂ ಸಹ ಬೆಂಗಳೂರಿನಲ್ಲಿಯೇ ನೆಲೆಸಿದರು. ಶ್ರೀ ಲಿಂಗಣ್ಣಯ್ಯವರು ಚಿತ್ರರಾಮಾಯಣ, ಚಿತ್ರಭಾಗವತ, ಭಗವದ್ಗೀತೆ ಲಲಿತಾತ್ರಿಶತಿ, ಮಾರುತೀಸ್ತುತಿ ಇವುಗಳನ್ನು ಚಿತ್ರಪಟದಲ್ಲಿ ದೇವನಾಗರೀ ಲಿಪಿಯಲ್ಲಿ ಕಲಾತ್ಮಕವಾಗಿ ರಚಿಸಿದ್ದಾರೆ. ಈಗಲೂ ಇವುಗಳನ್ನು ನೋಡಬಹುದು. ಅಲ್ಲದೆ ಇನ್ನೂ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರು ವೀಣೆ ಹಾಗೂ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
     ಶ್ರೀ ಲಿಂಗಣ್ಣಯ್ಯನವರ ಸಂಸಾರ ದೊಡ್ಡದು. ಅವರಿಗೆ ಶ್ರೀಯತರಾದ ಎಸ್.ಕೆ. ನಾರಾಯಣರಾವ್, ಎಸ್.ಕೆ. ಕೃಷ್ಣಮೂರ್ತಿ, ಎಸ್.ಕೆ. ರಾಮರಾವ್ ಎಂಬ ಮೂವರು ಗಂಡು ಮಕ್ಕಳು ಹಾಗೂ ಶ್ರೀಮತಿಯರಾದ ಮುತ್ತಮ್ಮ, ಮೂಕಮ್ಮ, ಜಾನಕಮ್ಮ, ಸರಸ್ವತಮ್ಮ, ಸುಬ್ಬಲಕ್ಷ್ಮಮ್ಮ, ನಾಗರತ್ನಮ್ಮ, ಪದ್ಮಾವತಮ್ಮ ಮತ್ತು ಗಿರಿಜಮ್ಮ ಎಂಬ ಎಂಟು ಜನ ಹೆಣ್ಣುಮಕ್ಕಳೂ ಇದ್ದರು. ಲಿಂಗಣ್ಣಯ್ಯನವರ ಅಕ್ಕ ಮತ್ತು ಮಗಳು ಕೆಳದಿ ಜೋಯಿಸರ ಸಂಬಂಧ ಮಾಡಿದ್ದು, ಕವಿ ಹಾಗೂ ಜೋಯಿಸರ ಸಂಬಂಧ ಹಿಂದಿನಿಂದಲೂ ಮುಂದುವರೆಯುತ್ತಿದೆ. ಗಂಡುಮಕ್ಕಳಲ್ಲಿ ಮೊದಲಿನ ಇಬ್ಬರೂ ತಂದೆಯಂತೆ ವೀಣಾಭ್ಯಾಸಮಾಡಿ ಸಂಗೀತದಲ್ಲಿ ಪ್ರೌಢಿಮೆ ಪಡೆದಿದ್ದಾರೆ. ಮೂರನೆಯವರು ವೇದಾಂತಿಗಳು.
     ಇವರ ಎರಡನೇಮಗನೇ ಸಾಗರದ ಕವಿ ಕೃಷ್ಣಮೂರ್ತಿ. ಇವರು  ದಿನಾಂಕಃ ೧೧-೩-೧೯೨೮ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯಿಂದ ರಚಿಸಲ್ಪಟ್ಟ ಭೂಪಟಗಳು ಹಿಂದಿನ ಮೈಸೂರು ರಾಜ್ಯದ ಎಲ ಶಾಲೆಗೂ ಸರ್ಕಾರದ ವತಿಯಿಂದ ವಿತರಿಸಲ್ಪಡುತ್ತಿದ್ದು ಆ ವೃತ್ತಿಯಲ್ಲಿಯೇ ಮಗನು ಮುಂದುವರೆಯಬೇಕೆಂಬ ಆಸೆ ಅವರ ತಂದೆಯದಾಗಿತ್ತು. ಅಲ್ಲದೆ ತಂದೆಗೆ ಅಚ್ಚುಮೆಚ್ಚಿನ ಮಗನಾಗಿದ್ದರು. ಮನೆಯ ದೊಡ್ಡ ಸಂಸಾರ, ತಂದೆಯ ಆಸೆ ಇವುಗಳಿಂದಾಗಿ ಕೃಷ್ಣಮೂರ್ತಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ತಂದೆ ಸುಮಾರು ೬೩ ರ ವಯಸ್ಸಿನಲ್ಲಿ ಕಾಲವಾದರು.  ಮನೆಯ ಜವಾಬರಿಯನ್ನು ಸ್ವಲ್ಪ ಮಟ್ಟಿಗಾದರೂ ನಿರ್ವಹಿಸಬೇಕೆಂದು ಬಿನ್ನಿಮಿಲ್ಲಿನಲ್ಲಿ ಕೆಲಸಕ್ಕೆ ಸೇರಿ, ಬೆರಳಚ್ಚುಗಾರರು, ಶೀಘ್ರಲಿಪಿಕಾರರು, ಸೆಕ್ರೆಟರಿ, ಮ್ಯಾನೇಜ್‌ಮೆಂಟ್ ಸ್ಟ್ಯಾಫ್, ಸ್ಟೋರ್ಸ್ ಆಫೀಸರ್, ಹೀಗೆ ನಾನಾ ಹುದ್ದೆಗಳಲ್ಲಿ ಕೆಲಸನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ನಿವೃತ್ತರಾಗಿದ್ದರೂ ಯುವಕರಂತೆ ಬನಶಂಕರಿಯ ದೇವಗಿರಿ ಶ್ರೀವೆಂಕಟೇಶ್ವರ ದೇವಾಲಯದ ಲೈಫ್‌ಟ್ರಸ್ಟಿಯಾಗಿದ್ದಾರೆ. ಅಲ್ಲದೆ ಇದೇ ದೇವಸ್ಥಾನದಲ್ಲಿ ಖಜಾಂಚಿಯಾಗಿಯೂ ಕೆಲಸನಿರ್ವಹಿಸಿದ್ದಾರೆ. ಚಿನ್ಮಯ ಮಿಷನ್ನಿನ ಬೋಡ್ ಸದಸ್ಯರಾಗಿಯೂ, ಸಂಗೀತದಲ್ಲಿ ಆಸಕ್ತಿ ಇರುವುದರಿಂದಲೂ, ವೀಣೆಯ ಅಭಸವಾಗಿರುವುದರಿಂದಲೂ ದೇವಗಿರಿ ಶ್ರೀವೆಂಕಟೇಶ್ವರ ದೇವಸ್ಥಾನದ ಸಂಗೀತ ಕಮಿಟಿಯಲ್ಲಿದ್ದು ಸುತ್ತಮುತ್ತಲ ಜನರಿಗೆ ಇಂಪಾದ ಸಂಗೀತವನ್ನು ದೇವಸ್ಥಾನದ ಮೂಲಕ ಒದಗಿಸುತ್ತಿರುತ್ತಾರೆ.
     ಅಲ್ಲದೆ ಇವರಿಗೆ ಆಧ್ಯಾತ್ಮಿಕದಲ್ಲಿಯೂ  ವಿಶೇಷವಾದ ಆಸಕ್ತಿ ಇರುವುದರಿಂದ ಸಂಗೀತದ ಜೊತೆಗೆ ದೇವಸ್ಥಾನದ ಮೂಲಕ ವೇದಾಂತದ ಉಪನ್ಯಾಸಗಳನ್ನೂ ಏರ್ಪಾಟು ಮಾಡುವ ಜವಾಬ್ದಾರಿ ಹೆತ್ತಿದ್ದಾರೆ. ಇವರ ಎರಡು ಕಣ್ಣುಗಳೋ ಎಂಬಂತೆ ಇಬ್ಬರು ಗಂಡುಮಕ್ಕಳೂ (ಚಿ|| ಪ್ರಕಾಶ್ ಮತ್ತು ಚಿ|| ಗೋಪಿನಾಥ್) ಹಾಗೂ ಮನೆಯವರೆಲ್ಲರೂ ಅವರ ಕಾರ್ಯದಲ್ಲಿ ಉತ್ಸಾಹ ತುಂಬುತ್ತಿರುತ್ತಾರೆ.
     ಇವರ ಧರ್ಮಪತ್ನಿ ಶ್ರೀಮತಿ ಅನಸೂಯಾರವರು ಹೆಸರಿಗೆ ಅನ್ವರ್ಥರಾಗಿದ್ದು ೧೯೩೩ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶ್ರೀ ವೆಂಕಟಾಚಲಯ್ಯ ಹಾಗೂ ಶ್ರೀಮತಿ ಮೀನಾಕ್ಷಮ್ಮನವರ ಚತುರ್ಥಪುತ್ರಿಯಾಗಿ ಜನ್ಮ ತಾಳಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬನಶಂಕರಿ ಎರಡನೇಹಂತದ ಮಹಿಳಾಮಂಡಳಿಯ ಸಂಸ್ಥಾಪಕರಲ್ಲೊಬ್ಬರಾಗಿ ಮಹಿಳೆಯರ ಉನ್ನತಿಗಾಗಿ ದುಡಿದರು. ಮಂಡಳಿಗೆ ಸಾರ್ವಜನಿಕರ ಸಹಕಾರದಿಂದ ಒಂದು ನಿವೇಶನ ದೊರಕಲು ಸಾಹಸ ಮಾಡಿ ಯಶಸ್ವಿಯಾದರು. ಬಹಳಕಾಲ ಮಂಡಳಿಯ ಖಜಾಂಚಿಯಾಗಿ ಕಟ್ಟಡ ಕಟ್ಟಿಸಿ ಹೆಲಿಗೆ, ಸಂಗೀತ ಮೊದಲಾದವುಗಳನ್ನು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಮಂಡಳಿಯ ಮೂಲಕ ಸಹಾಯ ಮಾಡಿದರು, ಹೀಗೆ ಸಮಾಜ ಸೇವಾಕರ್ತೆಯಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಜೀವನ ಪರ್ಯಂತ ದುಡಿದು  ೨೮-೨-೨೦೦೬ ರಂದು ಕೀರ್ತಿಶೇಷರಾದರು.
     ಈ ದಂಪತಿಗಳು ತಮ್ಮ ಹಿರಿಯರ ಆಧ್ಯಾತ್ಮಿಕ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದರು. ಶ್ರೀ ಕೃಷ್ಣಮೂರ್ತಿಯವರು ತಂದೆಯಂತೆಯೇ ಇಳಿವಯಸ್ಸಿನಲ್ಲಿ ಅವರು ಮಾಡುತ್ತಿದ್ದ ಪ್ರಾರ್ಥನೆಯನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಆ ಪ್ರಾರ್ಥನೆಯ ಸಾರಾಂಶವನ್ನು ಹೀಗೆ ಸಂಗ್ರಹಿಸಲಾಗಿದೆ:
     "ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆಮಾಡು, ಪ್ರತಿ ವಿಷಯದಲ್ಲೂ ತಲೆಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳುವುದೂ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಯೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು, ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳುತ್ತೇನೆ. ಅನೇಕವೇಳೆ ನನ್ನ ಅಭಿಪ್ರಾಯಗಳೂ ತಪ್ಪಾಗಬಹುದೆಂಬ ಅರಿವೂ ನನಗಾಗಲಿ, ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ, ಆದರೆ ಇತರರನ್ನು ವತ್ತಾಯ ಮಾಡುವುದಿಲ್ಲ, ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ಇತರರಿಗಿಂತ  ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟುದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ".   
      ಈ ಮೇಲಿನಂತೆ ನಡೆಯುತ್ತಿದ್ದ ತಂದೆಯಂತೆಯೇ ಇವರೂ ನಡೆದುಕೊಳ್ಳುತ್ತಿದ್ದು, ಈ ಮಾತುಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ. ಇದರಿಂದ ಎಲ್ಲರಿಗೂ ಸಂತೋಷವಾದರೆ ಅದೇ ಒಂದು ಪೂಜೆ.    ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಂ ಎಂದು ಈಗಲೂ ಹೇಳುತ್ತಿರುತ್ತಾರೆ. ಇವರ ಸ್ಪೂರ್ತಿದಾತರೆಂದರೆ ತೀರ್ಥರೂಪುರವರು ಮತ್ತು ಸ್ವಾಮಿ ಚಿನ್ಮಯಾನಂದರು. ಇವರಿಗೆ ಒಬ್ಬ ಮೊಮ್ಮಗ ಮತ್ತು ಒಬ್ಬ ಮೊಮ್ಮಗಳು ಇದ್ದು ಅವರೊಡನೆ ಯಾವಾಗಲೂ ಸಂತೋಷವಾಗಿ ಕಾಲಕಳೆಯುತ್ತಾ ಪದ್ಮಪತ್ರ  ಮಿವಾಂಭಸಾ ಎಂಬಂತೆ ನಿರ್ಲಿಪ್ತತೆಯ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮಕ್ಕಳೂ ಹಾಗೂ ಸೊಸೆಯರೂ ಕೂಡ ಇವರ ಮನಸ್ಸಿಗೆ ಯಾವ ವಿಧವಾದ ನೋವೂ ಉಂಟಾಗದಂತೆ ನಡೆದುಕೊಳ್ಳುತ್ತಿರುವುದು ಈಗಿನ ಕಾಲಕ್ಕೆ ವಿಶೇಷವೇ ಸರಿ.
     ಇವರ ದಾಂಪತ್ಯ ಜೀವನವು ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ನಮ್ಮನ್ನು ಆಶೀರ್ವದಿಸಲು ಪ್ರಾರ್ಥಿಸುತ್ತಾ ಅವರ ಚರಣಕಮಲಗಳಿಗೆ ಈ ಚಿಕ್ಕ ಲೇಖನವನ್ನು ಅರ್ಪಿಸುತ್ತೇನೆ. 
             
         -  ಡಾ|| ಕೆಳದಿ ಕೃಷ್ಣಜೋಯ್ಸ್
 * * * * *
('ಕವಿಕಿರಣ'ದ ಜೂನ್, 2009ರ ಸಂಚಿಕೆಯಿಂದ)

Sunday, April 24, 2011

28-12-2008ರಂದು ನಡೆದ ಕವಿಕುಟುಂಬಗಳ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದ ವರದಿ

'ಸೇರಿದೆವು ನಾವು'
ಕವಿಕುಟುಂಬಗಳ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದ ವರದಿ
     ದಿನಾಂಕ ೨೮-೧೨-೨೦೦೮ರ ಭಾನುವಾರದ ಮುಂಜಾನೆ ಬೆಳಿಗ್ಯೆ ೮.೩೦ರಿಂದಲೇ ಕವಿ ಕುಟುಂಬಗಳ ಸದಸ್ಯರು ಮತ್ತು ಬಂಧು ಬಳಗದವರು ಬೆಂಗಳೂರಿನ ಜೆ.ಪಿ. ನಗರದ ೨ನೆಯ ಹಂತದ ರಾಗಿಗುಡ್ಡದ ಆಂಜನೇಯ ದೇವಸ್ಥಾನದ ಸಮೀಪವಿರುವ ಮಾ ಆನಂದಮಯಿ ಆಶ್ರಮದ ಸಭಾಭವನದಲ್ಲಿ ಸೇರಲಾರಂಭಿಸಿ ಬೆ. ೯.೩೦ರ ವೇಳೆಗೆ ಸಕಾಲದಲ್ಲಿ ಒಟ್ಟುಗೂಡಿದರು. ಉಪಾಹಾರದ ಬಳಿಕ ೧೦.೦೦ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ವೇದಿಕೆಗೆ ಆಗಮಿಸಿದ ಹಿರಿಯರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿ, ಶ್ರೀ ಕವಿ ವೆಂಕಟಸುಬ್ಬರಾವ್, ಶ್ರೀ ಡಾ. ಕೆಳದಿ ಕೃಷ್ಣಾಜೋಯಿಸ್, ಶ್ರೀ ಸಾ.ಕ. ಕೃಷ್ಣಮೂರ್ತಿ, ಶ್ರೀ ಎಂ. ಎಸ್. ನಾಗೇಂದ್ರ ಮತ್ತು ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್‌ರವರು ವೇದಘೋಷಸಹಿತ  ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮ ಆರಂಭಿಸಿದರು. ಪ್ರಾರಂಭದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯರವರ ತಂಗಿ ದಿ. ಶ್ರೀಮತಿ ಸುಂದರಮ್ಮರವರ ಮಗ ಶ್ರೀ ಸತ್ಯನಾರಾಯಣರಾವ್ ಮತ್ತು ದಿ. ಕವಿ ಸುಬ್ರಹ್ಮಣ್ಯಯ್ಯರವರ ಅಳಿಯ ಶ್ರೀ ನಾರಾಯಣರಾವ್‌ರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಕು. ನಿರಂಜನನ ಸುಶ್ರಾವ್ಯ ಪ್ರಾರ್ಥನೆ ಗಮನ ಸೆಳೆಯಿತು. ಹಿರಿಯರಾದ ಶ್ರೀ ಕೃಷ್ಣಮೂರ್ತಿಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.
                                                              ಕು. ನಿರಂಜನನಿಂದ ಪ್ರಾರ್ಥನೆ
                                                   ಎಲ್ಲರನ್ನೂ ಸ್ವಾಗತಿಸಿದ ಶ್ರೀ ಸಾ.ಕ. ಕೃಷ್ಣಮೂರ್ತಿ
'ಕವಿಕಿರಣ' ಪತ್ರಿಕೆ ಬಿಡುಗಡೆ    
      ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ.ವೆಂ.ನಾಗರಾಜ್ ರವರು ಕಾರ್ಯಕ್ರಮದ ರೂಪು ರೇಷೆ, ಅವರ ಸಂಪಾದಕತ್ವದಲ್ಲಿ ಕವಿ ಕುಟುಂಬದ ಪತ್ರಿಕೆ ಕವಿಕಿರಣ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಸಂವಹನದ ಅಗತ್ಯ, ಸಜ್ಜನ ಶಕ್ತಿ ಜಾಗೃತಗೊಳಿಸಲು, ಸದಸ್ಯರ ಸುಪ್ತ ಶಕ್ತಿ ಅನಾವರಣ ಮಾಡಲು ಪತ್ರಿಕೆ ವಹಿಸಬಹುದಾದ ಪಾತ್ರ ಕುರಿತು ತಿಳಿಸಿದರು. ಸಮಾರಂಭದಲ್ಲಿ ಬಿಡುಗಡೆಯಾಗಲಿದ್ದ ಅವರೇ ರಚಿಸಿದ ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ 'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕದ ಕುರಿತು ಮಾಹಿತಿ ನೀಡಿದರು. ಶ್ರೀ ಕವಿ ಸುರೇಶ್ ಸಂಪಾದಿಸಿದ ಹಾಗೂ ಸಮಾರಂಭದಲ್ಲಿ ಅರ್ಪಿತಗೊಳ್ಳಲಿದ್ದ 'ಕವಿ ಕುಟುಂಬಗಳ ಮತ್ತು ಬಂಧುಗಳ ದೂರವಾಣಿ ಮತ್ತು ವಿಳಾಸಗಳ ಕೈಪಿಡಿ' ಸಿದ್ಧಪಡಿಸಲು ಅವರು ಪಟ್ಟ ಶ್ರಮಕ್ಕಾಗಿ ಅಭಿನಂದಿಸಿದರು. ವಾರ್ಷಿಕ ಸಮಾವೇಶಗಳನ್ನು ರಚನಾತ್ಮಕವಾಗಿ ನಡೆಸಲು ಸಲಹೆಗಳನ್ನು ನೀಡಿದರು.
                                                  ಶ್ರೀ ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ನುಡಿ

     'ಕವಿಕಿರಣ' ಪತ್ರಿಕೆಯನ್ನು ಬಿಡುಗಡೆಗೊಳಿಸಿದ ೯೪ ವರ್ಷಗಳ ವಯೋವೃದ್ಧ, ಜ್ಞಾನವೃದ್ಧರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರು ಸಮಾರಂಭದಲ್ಲಿ ಭಾಗವಹಿಸಿ ಪತ್ರಿಕೆ ಬಿಡುಗಡೆಗೊಳಿಸುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷಪಟ್ಟು ಇಂತಹ ಒಳ್ಳೆಯ ಕಾರ್ಯಗಳು ನಿರಂತರವಾಗಿ ಮತ್ತು ಚೆನ್ನಾಗಿ ನಡೆಯಲೆಂದು ಹರಸಿದರು.

'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕ ಬಿಡುಗಡೆ
     'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಕವಿ ವೆಂಕಟಸುಬ್ಬರಾಯರು ತಮ್ಮ ತಂದೆಯ ಬಗ್ಗೆ ತಮ್ಮ ಮಗ ನಾಗರಾಜ ಬರೆದು, ತಮ್ಮ ಮೊಮ್ಮಕ್ಕಳು ಬಿಂದು ಮತ್ತು ವಿನಯ ಪ್ರಾಯೋಜಿಸಿದ ಪುಸ್ತಕವನ್ನು ತಮ್ಮಿಂದ ಬಿಡುಗಡೆಗೊಳಿಸಿದ್ದಕ್ಕೆ ಸಂತೋಷಿಸಿ, ತಮ್ಮ ಮಕ್ಕಳಿಂದ ಇಂತಹ ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳಾಗಲಿ ಎಂದು ಆಶೀರ್ವದಿಸಿದರು. ಕುಟುಂಬದ ಕೊಡುಗೆಯಾಗಿ ಪುಸ್ತಕವನ್ನು ಉಚಿತವಾಗಿ ಎಲ್ಲರಿಗೂ ನೀಡಲಾಯಿತು.
 


                                                        ಹರಸಿದ ಶ್ರೀ ಕವಿ ವೆಂಕಟಸುಬ್ಬರಾಯರು  
ಕವಿ ಕುಟುಂಬಗಳ ದೂರವಾಣಿ ಕೈಪಿಡಿ ಬಿದುಗಡೆ    

     ಕವಿ ಕುಟುಂಬಗಳ ಮತ್ತು ಬಂಧು ಬಳಗದವರ ವಿಳಾಸ ಮತ್ತು ದೂರವಾಣಿ ವಿವರಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಕೆ. ಕೃಷ್ಣಾಜೋಯಿಸರು ಸ್ವಂತ ಖರ್ಚಿನಲ್ಲಿ ಕೈಪಿಡಿ ಸಿದ್ಧಪಡಿಸಿ ಎಲ್ಲರಿಗೂ ಉಚಿತವಾಗಿ ನೀಡಿದ ಶ್ರೀ ಕವಿ ಸುರೇಶ್‌ರವರ ಕಾರ್ಯವನ್ನು ಮನತುಂಬಿ ಶ್ಲಾಘಿಸಿದರು. 




                                   ಬಂಧುಗಳಿಗೆ ಪ್ರಕಟಣೆಗಳ ಉಚಿತ ವಿತರಣೆ ಶ್ರೀ ಗುಂಡಾಜೋಯಿಸರಿಂದ
     ನಂತರದಲ್ಲಿ ಹಿಂದಿನ ಸಮಾವೇಶಗಳಿಗೆ ಬರದೆ ಇದೇ ಪ್ರಥಮವಾಗಿ ಬಂದ ಬಂಧುಗಳ ಪರಿಚಯವನ್ನು ಸಭೆಗೆ ಮಾಡಿಕೊಡಲಾಯಿತು. ಹಲವರಿಗೆ ಇದು ಅವಿಸ್ಮರಣೀಯ ಅನುಭವ ನೀಡಿತು. ನಿರಂಜನ, ಕಾಶೀಬಾಯಿ, ದೀಪಕ್, ಮತ್ತು ಹಲವರು ತಮ್ಮ ಗಾನಸುಧೆ ಹರಿಸಿದರು. ರಚಿಸಿದ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.





                                                                            ಹರಿದ ಗಾನಸುಧೆ




                                                  ಸಮಾರಂಭಕ್ಕೆ ಸಾಕ್ಷಿಯಾದ ಬಂಧು-ಬಳಗ
     ಬೆಂಗಳೂರಿನ ಶ್ರೀ ಶ್ರೀಕಂಠ ಕುಟುಂಬದವರು ಬಂದಿದ್ದ ಎಲ್ಲಾ ಮಹಿಳಾ ಸದಸ್ಯರಿಗೆ ಅರಿಶಿನ-ಕುಂಕುಮ,ಬಳೆ, ರವಿಕೆಕಣಗಳನ್ನು ನೀಡಿ ಶುಭ ಕೋರಿದರು.


     ಮಧ್ಯಾಹ್ನದ ಅಚ್ಚುಕಟ್ಟಾದ ರುಚಿಯಾದ ಭೋಜನದ ನಂತರದಲ್ಲಿ ಸದಸ್ಯರು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಕವಿಕಿರಣದ ಮುಂದಿನ ಸಂಚಿಕೆಯನ್ನು ಪ್ರಾಯೋಜಿಸಲು ಶ್ರೀ ಪುಟ್ಟರಾಜು, ಜಾವಗಲ್ ರವರು ಮುಂದೆ ಬಂದರು. ಮುಂದಿನ ವಾರ್ಷಿಕ ಸಮಾವೇಶವನ್ನು ತೀರ್ಥಹಳ್ಳಿಯಲ್ಲಿ ದಿನಾಂಕ ೨೭-೧೨-೨೦೦೯ ರಂದು ಆಯೋಜಿಸುವುದಾಗಿ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ಪರವಾಗಿ ಅವರ ಸಹೋದರರಾದ ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ರವರು ಘೋಷಿಸಿದರು. ಸಭೆ ಇವರುಗಳನ್ನು ಅಭಿನಂದಿಸಿತು.
  


ಆಯೋಜಕರು: ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್, ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ, ಬೆಂಗಳೂರು 
      ಸಮ್ಮೇಳನದ ಆಯೋಜಕರಾದ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್, ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬದವರು  ಸಮ್ಮೇಳನಕ್ಕಾಗಿ ಮಾಡಿದ್ದ ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಭಿನಂದನೆ ಮತ್ತು ವಂದನೆಗಳೊಂದಿಗೆ ಸಭೆ ಸಂಪನ್ನವಾಯಿತು.
(ಆಧಾರ: ಕವಿಕಿರಣದ ಜೂನ್, 2009ರ ಸಂಚಿಕೆ).
***************

Tuesday, February 22, 2011

ಉತ್ತಮ ಬಾಂಧವ್ಯದೆಡೆಗೆ

      "ವಾವ್!, ನಿಜಕ್ಕೂ ಹೊಸ ಅನುಭವ. ಇಂತಹ ಕಾರ್ಯಕ್ರಮ ನಾನು ಮೊದಲು ನೋಡಿರಲಿಲ್ಲ. ಬಹಳ ಉತ್ತಮವಾದ ಕಾರ್ಯಕ್ರಮ, ಅಭಿನಂದನೆಗಳು! "
     ಇದು ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದವರೊಬ್ಬರ ಪ್ತತಿಕ್ರಿಯೆ. ಉಳಿದವರಿಂದಲೂ ಇದೇ ರೀತಿಯ ಉದ್ಗಾರಗಳು, ಪ್ರತಿಕ್ರಿಯೆಗಳು! ನಿಜ, ಈ ಕಾರ್ಯಕ್ರಮ ಅನುಕರಣೀಯವಾಗಿತ್ತು ಮತ್ತು ಭಿನ್ನವಾಗಿತ್ತು. ಈ ಸಮಾರಂಭದಲ್ಲಿ ಕುಟುಂಬಗಳ ಸಂವಹನಾ ಮಾಧ್ಯಮವಾಗಿ, ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಸಜ್ಜನಶಕ್ತಿಯ ಜಾಗರಣೆಗಾಗಿ, ಕವಿ ಪ್ರತಿಭೆಗಳ ಅನಾವರಣಕ್ಕಾಗಿ ರೂಪಿಸಿದ ಈ ಪತ್ರಿಕೆ ಕವಿಕಿರಣ ಬಿಡುಗಡೆಯಾಯಿತು. ಗೊತ್ತ್ತಿಲ್ಲದೇ ಇದ್ದ ಅನೇಕ ಬಂಧುಗಳು ಪ್ರಥಮ ಬಾರಿಗೆ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು. ಹಿರಿಯರನ್ನು ಸ್ಮರಿಸಿಕೊಂಡರು. ನಾವೂ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಪಡೆದರು. ಪರಸ್ಪರ ಉತ್ತಮ ಬಾಂಧವ್ಯ ಮುಂದುವರೆಸುವ ಪ್ರಯತ್ನಕ್ಕೆ ಮನಸಾರೆ ಬೆಂಬಲಿಸಿದರು.
     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.
     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ.
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
     ಕವಿ ಕುಟುಂಬಗಳ ವಾರ್ಷಿಕ ಸಮಾವೇಶಗಳ ಪ್ರಮುಖ ಉದ್ದೇಶ ಸಹ ಬಾಂಧವ್ಯಗಳನ್ನು ಉತ್ತಮಗೊಳಿಸುವುದೇ ಆಗಿದೆ. ನಮ್ಮ ಪೂರ್ವಜರ, ಹಿರಿಯರ ಒಳ್ಳೆಯ ಸಾಧನೆಗಳನ್ನು ನೆನೆಸಿಕೊಂಡು ನಾವೂ ಸಹ ಏನನ್ನಾದರೂ ಸಾಧಿಸಲು ಪ್ರೇರಿಸಬೇಕೆಂಬುದು ಇದರ ಹಿನ್ನೆಲೆಯಾಗಿದೆ. ಒಂದೇ ಕುಟುಂಬದ ಒಟ್ಟಿಗೆ ಸೇರದ ಸದಸ್ಯರುಗಳೂ ಸಹ ಸಮಾವೇಶದಲ್ಲಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ.  ಒಳ್ಳೆಯ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿದಷ್ಟೂ ಕೆಟ್ಟ ಸಂಗತಿಗಳಿಗೆ ಹಿನ್ನಡೆಯಾಗುತ್ತದೆ. ವಾರ್ಷಿಕ ಸಮಾವೇಶಗಳಲ್ಲಿ ನಮ್ಮ ಪೂರ್ವಜರ ಕೃತಿಗಳನ್ನು ಆಧರಿಸಿದ ರೂಪಕ, ನಾಟಕ, ಸಂಗೀತ, ಇತ್ಯಾದಿಗಳನ್ನು ಏರ್ಪಡಿಸಬಹುದು. ಇದಕ್ಕೆ ಪೂರ್ವ ತಯಾರಿ ಮಾಡಬಹುದು. ಪ್ರತಿ ಕುಟುಂಬದ ಕಡೆಯಿಂದ ವರ್ಷದ ಸಾಧನೆಯಾಗಿ ಏನನ್ನಾದರೂ ಮಾಡಲು ಕುಟುಂಬದ ಒಬ್ಬರು ಸದಸ್ಯರಾದರೂ ಮನಸ್ಸು ಮಾಡಬೇಕು. ಆ ಸಾಧನೆ ಬರವಣಿಗೆಯಿರಬಹುದು,  ನಟನೆ, ಆಟೋಟ, ಸಂಗೀತ,ನಾಟ್ಯವಿರಬಹುದು, ಚಿತ್ರಕಲೆಯಾಗಿರಬಹುದು, ನಾವು ತೊಡಗಿಕೊಂಡಿರುವ ವೃತ್ತಿ ಅಥವಾ ಪ್ರವೃತ್ತಿಯಲ್ಲಿರಬಹುದು,  ಗಮನಿಸಬಹುದಾದ ಯಾವುದೇ ಸಂಗತಿಯಿರಬಹುದು. ಸಮಾವೇಶಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟಬಹುದು, ಗೌರವಿಸಬಹುದು. ಇತರರು ಮಾಡಲಿ, ನಾವು ಪ್ರೋತ್ಸಾಹಿಸೋಣ ಎಂಬುದರ ಬದಲಿಗೆ ನಾವೂ ಏನನ್ನಾದರೂ ಜೀವಿತಕಾಲದಲ್ಲಿ ಸಾಧಿಸೋಣ ಎಂಬ ಭಾವನೆ ಬಂದಲ್ಲಿ ಉತ್ತಮ ಬೆಳವಣಿಗೆಯೇ ಸರಿ. ಕವಿ ಕುಟುಂಬಗಳವರು ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ, ವಾರ್ಷಿಕ ಸಮಾವೇಶಗಳು ಇಂತಹ ಆರೋಗ್ಯಕರ ಸ್ಪರ್ಧೆಗೆ ಉತ್ತಮ ವೇದಿಕೆಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ,
ಉತ್ತಮ ಬಾಂಧವ್ಯಕ್ಕಾಗಿ ತಮ್ಮವನು,
-ಕ.ವೆಂ. ನಾಗರಾಜ್.
********************
('ಕವಿಕಿರಣ' ಪತ್ರಿಕೆಯ ಜೂನ್, 2009 ಸಂಚಿಕೆಯ ಸಂಪಾದಕೀಯ).