ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Showing posts with label ಕವಿನಾಗರಾಜ್.. Show all posts
Showing posts with label ಕವಿನಾಗರಾಜ್.. Show all posts

Monday, February 13, 2012

ಕವಿಮನೆತನದ ಪತ್ರಿಕೆ 'ಕವಿಕಿರಣ'



     ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ರಾಜಮನೆತನವಾಗಿದ್ದು ಮೈಸೂರು ಅರಸರ ರಾಜ್ಯಕ್ಕಿಂತಲೂ ಹೆಚ್ಚಿನ ವಿಸ್ತಾರ ಹೊಂದಿತ್ತು.  ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿಯ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ವಿಶೇಷವಾಗಿ ಕೆಳದಿನೃಪ ವಿಜಯ ಪ್ರಮುಖ ಐತಿಹಾಸಿಕ ಕೃತಿಯಾಗಿದ್ದು ಇದರ ರಚನಕಾರ ಕವಿಲಿಂಗಣ್ಣ ಕೆಳದಿ ಕವಿಮನೆತನದ ಮೂಲಪುರುಷ. ಇವನ ನಂತರದ ಪೀಳಿಗೆಯವರೂ ಸಹ ಪ್ರತಿಭಾಶಾಲಿಗಳಾಗಿದ್ದು ಅವರುಗಳ ಸಾಧನೆ ಈಗಿನವರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಅವರ ಕೃತಿಗಳನ್ನು ಬೆಳಕಿಗೆ ತರುವ, ಸಾಧನೆಗಳನ್ನು ಪರಿಚಯಿಸುವ ಕಾರ್ಯ ಮಾಡುವ ಸಲುವಾಗಿ ಹಾಗೂ ಕವಿಕುಟುಂಬಗಳ ಸಮಕಾಲೀನರೂ ಸಾಧಕರಾಗಲು ಪ್ರೇರಿಸುವ ಉದ್ದೇಶದಿಂದ ಒಂದು ಪತ್ರಿಕೆ ಹೊರತರುವ ವಿಚಾರ ನಮ್ಮಲ್ಲಿ ಮೊಳಕೆಯೊಡೆದಿತ್ತು. 
     ಕೆಳದಿಯಲ್ಲಿ ೨೦೦೭ರ ಡಿಸೆಂಬರಿನಲ್ಲಿ ನಡೆದ ಎರಡನೆಯ ವಾರ್ಷಿಕ ಸಮಾವೇಶದಲ್ಲಿ ಸಂವಹನಾ ಮಾಧ್ಯಮವಾಗಿ ಒಂದು ಪತ್ರಿಕೆಯನ್ನು ಹೊರತರಲು ನಿಶ್ಚಯಿಸಿ ಈ ಕೆಲಸಕ್ಕಾಗಿ ನನ್ನನ್ನು ಸಂಪಾದಕನನ್ನಾಗಿ ಮತ್ತು ಸೋದರ ಸುರೇಶನನ್ನು ಸಹಸಂಪಾದಕನನ್ನಾಗಿ ಆರಿಸಿದರು. ನನಗೂ ಈ ಕೆಲಸ ಮಾಡುವುದು ಪ್ರಿಯವಾಗಿತ್ತು. ನನ್ನೊಳಗಿದ್ದ ಬರಹಗಾರನಿಗೆ ಎಚ್ಚರವಾಗಿದ್ದು ಆಗಲೇ. ತಹಸೀಲ್ದಾರನಾಗಿ ನನಗಿದ್ದ ಕಾರ್ಯಬಾಹುಳ್ಯದಿಂದಾಗಿ ಹಾಗೂ ಮುಕ್ತವಾಗಿ ಅನಿಸಿಕೆಗಳನ್ನು ಸರ್ಕಾರಿ ನೌಕರನಾಗಿ ವ್ಯಕ್ತಪಡಿಸುವುದು ಸೂಕ್ತವಲ್ಲವಾಗಿದ್ದರಿಂದ ಬರವಣಿಗೆಗೆ ಆ ಮೊದಲು ಕೈ ಹಾಕಿರಲಿಲ್ಲ. ಕೆಲವೇ ದಿನಗಳಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಹೊಂದುವುದಿದ್ದರೂ ಸಹ ೨೦೦೯ರಲ್ಲಿ ಅನೇಕ ಕಾರಣಗಳಿಂದ ನಾನು ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಪಡೆದಿದ್ದು, ಅವುಗಳಲ್ಲಿ ಒಂದು ಕಾರಣ ಈ ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಳ್ಳುವುದೂ ಆಗಿತ್ತು.
     ಸರ್ಕಾರಿ ಅಧಿಕಾರಿಯಾಗಿದ್ದರಿಂದ ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸಲು ನಡತೆ ನಿಯಮಾವಳಿಗಳ ಪ್ರಕಾರ ಅನುಮತಿ ಕೋರಿ ಶಿವಮೊಗ್ಗ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದೆ. (ಆ ಅವಧಿಯಲ್ಲಿ ನಾನು ಶಿವಮೊಗ್ಗದಲ್ಲಿ ಪುರಸಭಾ ತಹಸೀಲ್ದಾರ್ ಮತ್ತು ನಂತರ ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದೆ). ನೂತನ ಪತ್ರಿಕೆಗೆ ಹಲವಾರು ಹೆಸರುಗಳು ಸೂಚಿಸಲ್ಪಟ್ಟಿದ್ದು ಅಂತಿಮವಾಗಿ ಕವಿಕಿರಣ ಎಂಬ ಹೆಸರನ್ನು ಇಡಬೇಕೆಂದು ಹಾಗೂ ಅರ್ಧವಾರ್ಷಿಕವಾಗಿ ಹೊರತರಬೇಕೆಂದು ತೀರ್ಮಾನಿಸಿದೆವು. ಜಿಲ್ಲಾ ದಂಡಾಧಿಕಾರಿಯವರ ಮೂಲಕ ಪತ್ರಿಕೆಯ ಶೀರ್ಷಿಕೆಯ ಪರಿಶೀಲನೆಗೆ ನವದೆಹಲಿಯ ವೃತ್ತಪತ್ರಿಕೆಗಳ  ರಿಜಿಸ್ಟ್ರಾರರಿಗೆ ಕಳಿಸಿಕೊಡಲಾಯಿತು. ಇದಕ್ಕೆ ಮುನ್ನ ನಿಯಮದಂತೆ ಪೋಲಿಸ್ ಇಲಾಖೆಯಿಂದ ನನ್ನ ಪೂರ್ವಾಪರ ವಿಚಾರಣೆ ನಡೆದು ಎಸ್.ಪಿ.ಯವರು ಪತ್ರಿಕೆ ಪ್ರಾರಂಭಕ್ಕೆ ಅನುಮತಿ ಸೂಚಿಸಿ ಪತ್ರ ಕೊಟ್ಟಿದ್ದರು. ಕವಿಕಿರಣ ಪತ್ರಿಕೆಯ ಶೀರ್ಷಿಕೆ ಲಭ್ಯವಿದ್ದ ಬಗ್ಗೆ ನವದೆಹಲಿಯ ರಿಜಿಸ್ಟ್ರಾರರ ಕಛೇರಿಯಿಂದ ಸೂಚನೆ ಬಂದ ನಂತರ ಅಗತ್ಯದ ಮುಚ್ಚಳಿಕೆಗಳನ್ನು ನಾನು ಮತ್ತು ನನ್ನ ತಮ್ಮ ಜಿಲ್ಲಾ ಅಪರ ದಂಡಾಧಿಕಾರಿಯವರಿಗೆ ಬರೆದುಕೊಟ್ಟೆವು. ಪತ್ರಿಕೆಗಳ ರಿಜಿಸ್ಟ್ರಾರರು ನಮ್ಮ ಪತ್ರಿಕೆಯನ್ನು ನೋಂದಾಯಿಸಿಕೊಂಡು ಪತ್ರಿಕೆಯ ನೋಂದಣಿ ಕ್ರಮಾಂಕ ಹಾಗೂ ಪ್ರಮಾಣ ಪತ್ರ ನೀಡಿದರು. ಪತ್ರಿಕೆ ಪ್ರಾರಂಭಕ್ಕೆ ಹಾದಿ ನಿಚ್ಚಳವಾಯಿತು. 
      ಹಿರಿಯರೊಡನೆ ಹಲವಾರು ಸಲ ಚರ್ಚಿಸಿ ಪತ್ರಿಕೆಯ ರೂಪುರೇಷೆ ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪತ್ರಿಕೆಯ ಮೊದಲ ಸಂಚಿಕೆ ಹೊರಬಂದಿತು. ಒಂದು ಸಾರ್ಥಕ ಕೆಲಸ ಪ್ರಾರಂಭಿಸಿದ ಸಂತೋಷ ನಮ್ಮದಾಗಿತ್ತು. ಕವಿಕಿರಣಕ್ಕೆ ಶೃಂಗೇರಿಯ ಜಗದ್ಗುರುಗಳು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ರಾಮಚಂದ್ರಾಪುರ ಮಠದ ಶ್ರೀಗಳು ಸೇರಿದಂತೆ ಹಲವರು ಗುರುಹಿರಿಯರು ಆಶೀರ್ವದಿಸಿದ್ದಾರೆ; ಕ.ಸಾ.ಪ.ದ ರಾಜ್ಯಾಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಸೇರಿದಂತೆ ಹಲವರು ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ.
     ಕವಿಕಿರಣದಲ್ಲಿ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆಯಿದೆ, ಹಿಂದಿನ ಸಾಧಕರನ್ನು ನೆನೆಯುವ ಕೃತಜ್ಞತೆಯಿದೆ, ಐತಿಹಾಸಿಕ ಸಂಗತಿಗಳನ್ನು ನೆನಪಿಸುವ ಕರ್ತವ್ಯವಿದೆ, ಈಗಿನವರಿಗೆ ಪ್ರೇರಣೆ ನೀಡುವ ಕಸುವಿದೆ, ಸಜ್ಜನ ಶಕ್ತಿಯನ್ನು ಜಾಗೃತಗೊಳಿಸುವ ಸಂಕಲ್ಪವಿದೆ. ಅಷ್ಟೇ ಅಲ್ಲ, ಇದು ಕವಿಮನೆತನದವರಿಗೆ ಹಾಗೂ ಬಂಧುಗಳಿಗೆ ಕುಟುಂಬದ ದಾಖಲೆಯಾಗಿದ್ದರೆ, ಕೆಳದಿಯ ಇತಿಹಾಸಾಸಕ್ತರಿಗೆ ಮಾಹಿತಿ ಕೊಡುವ ಸ್ರೋತವಾಗಿದೆ.  ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ, ಸಹೃದಯರು ಬೆನ್ನಿಗಿರಲಿ ಎಂಬುದು ನಮ್ಮ ಸದಾಶಯ. ಒಂದು ವಿಶೇಷ ಪೂರಕ ಸಂಚಿಕೆ ಸೇರಿ ಈಗಾಗಲೇ ಎಂಟು ಅರ್ಧ ವಾರ್ಷಿಕ ಸಂಚಿಕೆಗಳು ಹೊರಬಂದಿವೆ. ಅಂತರ್ಜಾಲ ತಾಣದಲ್ಲೂ ಈ ಸಂಚಿಕೆಗಳನ್ನು ಓದಬಹುದು. ತಮ್ಮ ಮಾಹಿತಿಗಾಗಿ ಈ ಕೆಳಗೆ ಲಿಂಕ್ ಕೊಟ್ಟಿದೆ. ಆಸಕ್ತರು ಓದಿ ತಮ್ಮ ಅಮೂಲ್ಯ ಸಲಹೆಗಳನ್ನು ಕೊಡಬಹುದಾಗಿದೆ. ಕವಿಕಿರಣ ಪತ್ರಿಕೆಯಲ್ಲದೆ ಕವಿಪ್ರಕಾಶನದ ಎಲ್ಲಾ ಪ್ರಕಟಣೆಗಳನ್ನೂ ಕಾಲಕ್ರಮೇಣ ಈ ತಾಣದಲ್ಲಿ ಪ್ರಕಟಿಸುವ ಉದ್ದೇಶವಿದೆ. ಜಾಹಿರಾತು ಪಡೆಯದ, ಕವಿಕುಟುಂಬಗಳವರೇ ಖರ್ಚು-ವೆಚ್ಚ ಭರಿಸುತ್ತಿರುವ ಈ ಪತ್ರಿಕೆ ಕನ್ನಡ ಸಾರಸ್ವತ ಲೋಕಕ್ಕೆ ಕವಿಮನೆತನದವರ ಅಳಿಲು ಸೇವೆಯಾಗಿದೆ.  

'ಕವಿಕಿರಣ'ದ ಸಂಚಿಕೆಗಳನ್ನು ಇಲ್ಲಿಯೂ ಓದಬಹುದು:
   http://kavikirana.blogspot.in/  - ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್.  ಈ ತಾಣದಲ್ಲಿ ಇದುವರೆಗೆ ಪ್ರಕಟಿಸಿದ ಪ್ರಕಟಣೆಗಳು:
1. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ, 
     http://kavikirana.blogspot.in/2011/01/blog-post_26.html
2. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ
     http://kavikirana.blogspot.in/2011/02/2008.html
3. 'ಕವಿಕಿರಣ' ಪತ್ರಿಕೆಯ ಜೂನ್, 2009ರ ಸಂಚಿಕೆ
     http://kavikirana.blogspot.in/2011/04/2009.html
4. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2009ರ ಸಂಚಿಕೆ
     http://kavikirana.blogspot.in/2011/05/01-12-2009.html
5. 'ಕವಿಕಿರಣ' ಪತ್ರಿಕೆಯ ಜೂನ್, 2010ರ ಸಂಚಿಕೆ
    http://kavikirana.blogspot.in/2011/07/01-06-2010.html
6. 'ಕವಿಕಿರಣ' ಪತ್ರಿಕೆಯ ಜೂನ್, 2010ರ ವಿಶೇಷ ಸಂಚಿಕೆ
    http://kavikirana.blogspot.in/2011/07/01-06-2010.html
7.  ಕ.ವೆಂ. ನಾಗರಾಜರ ಕೃತಿ: ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿಚಿತ್ರಣ)  http://kavikirana.blogspot.in/2011/06/blog-post_23.html
8. ಕವಿ ವೆಂ. ಸುರೇಶರ  'Karmayogi – Kalavallabha S.K. LINGANNAIYA – a concise biography of Sri S.K. Lingannaiya'
     http://kavikirana.blogspot.in/2011/07/this-book-is-biography-of-one-of.html
      ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನನ್ನನ್ನಾಗಲೀ, ಕವಿ ಸುರೇಶರನ್ನಾಗಲೀ ಸಂಪರ್ಕಿಸಬಹುದು. ತಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ.ನಾಗರಾಜ್.

Sunday, December 4, 2011

ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ


ನೀವು ಆಹ್ವಾನಿತರು, ಅಪೇಕ್ಷಿತರು - ಬನ್ನಿ, ಕ್ರಿಯಾತ್ಮಕವಾಗಿ ಪಾಲುಗೊಳ್ಳಿ

ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ
ದಿನಾಂಕ 25-12-2011ರ ಭಾನುವಾರ
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯದ ಆವರಣ, ರವೀಂದ್ರನಗರ, ಹಾಸನ

                    ಕಾರ್ಯಕ್ರಮ:
ಸಂವಾದ:            ವಿಷಯ: 'ನಮ್ಮ ಕುಟುಂಬ-ನಾವು-ನಮ್ಮವರು'
ನಡೆಸಿಕೊಡುವವರು:               ಮಾನ್ಯ ಶ್ರೀ ಸು.ರಾಮಣ್ಣ,
                                    ಸಂಯೋಜಕರು, ಕುಟುಂಬ ಪ್ರಭೋದನ್, ರಾ.ಸ್ವ.ಸಂಘದ ಹಿರಿಯ ಪ್ರಚಾರಕರು, ಹುಬ್ಬಳ್ಳಿ

ಸನ್ಮಾನ:                     ಕವಿಮನೆತನದವರಿಂದ
                              ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು
                              ಶ್ರೀ ಕೆಳದಿ ಗುಂಡಾಜೋಯಿಸರು ಇವರುಗಳಿಗೆ

ಅರ್ಪಣೆ:                    ಕವಿ ಸುರೇಶ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದಿಸಿದ ಕೃತಿ: 'ಕೆಳದಿ ನೃಪವಿಜಯ'
                                                  ಕವಿಕಿರಣದ ಡಿಸೆಂಬರ್ ಸಂಚಿಕೆ

ಸಾಂಸ್ಕೃತಿಕ ಕಾರ್ಯಕ್ರಮಗಳು:         
ಭರತನಾಟ್ಯ: 
                    ಸುಮಾರಾಜೇಶ್, ಸ್ಫೂರ್ತಿಆತ್ರೇಯ, ಲಕ್ಷ್ಮಿಶ್ರೀಭಾರದ್ವಾಜ್
 ಹಾಡುಗಾರಿಕೆ:                                 ಪಲ್ಲವಿ ಎಸ್.ಪ್ರಸಾದ್
ಏಕಪಾತ್ರಾಭಿನಯ, ಮಿಮಿಕ್ರಿ ಸೇರಿದಂತೆ ವಿವಿಧ ಮನರಂಜಿಸುವ ಕಾರ್ಯಕ್ರಮಗಳು
ಕವಿಕುಟುಂಬಗಳ ಹಾಗೂ ಬಂಧು-ಬಳಗದವರ ಎಲ್ಲಾ ಸದಸ್ಯರುಗಳು ಭಾಗವಹಿಸುವುದು ಅಪೇಕ್ಷಣೀಯ; ಸಾಧ್ಯವಾಗದಿದ್ದಲ್ಲಿ ಪ್ರತಿ ಕುಟುಂಬದ ಒಬ್ಬರಾದರೂ ಪ್ರತಿನಿಧಿಸಲು ವಿನಂತಿಯಿದೆ.
ದಿ. ಜಯಲಕ್ಷ್ಮಮ್ಮ ಕಾಶಿ ಗಣೇಶ ದೀಕ್ಷಿತರ ನೆನಪಿನಲ್ಲಿ
ಆತ್ಮೀಯ ಸ್ವಾಗತ ಕೋರುವ,
ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಬಿ.ಎನ್.ಕುಮಾರಸ್ವಾಮಿ ಕುಟುಂಬ ವರ್ಗದವರು
ಸಮಾವೇಶದ ಆಯೋಜಕರು
-೦-೦-೦-೦-೦-೦-೦-೦-೦-೦-೦-೦-೦-೦-೦-

ಗಮನಕ್ಕೆ:
1.ಕಾರ್ಯಕ್ರಮ ಬೆ. 10-00ಕ್ಕೆ ಸರಿಯಾಗಿ ಪ್ರಾರಂಭಿಸುವ ಉದ್ದೇಶವಿದ್ದು ಎಲ್ಲರೂ ಸಭಾಂಗಣದಲ್ಲಿ ಹತ್ತು ನಿಮಿಷ ಮುಂಚೆ ಆಸೀನರಾಗಲು ವಿನಂತಿ. ಬೆಳಿಗ್ಗೆ 10-00ರವರೆಗೆ ಉಪಾಹಾರದ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನದ ಭೋಜನಾನಂತರವೂ ಕಾರ್ಯಕ್ರಮ ಮುಂದುವರೆಯಲಿದೆ.
2.ವಸ್ತುಪ್ರದರ್ಶನದ ವ್ಯವಸ್ಥೆ ಇರುತ್ತದೆ. ಪ್ರದರ್ಶಿಸಬಹುದಾದ ಅಮೂಲ್ಯ ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು, ವಸ್ತುಗಳು, ಇತ್ಯಾದಿ ಇದ್ದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಬರುವಾಗ ತರಬಹುದು.
3.ಸಮಾವೇಶಕ್ಕೆ ಬರುವವರ ಸಂಖ್ಯೆ ಕುರಿತು ಮುಂಚಿತವಾಗಿ ತಿಳಿಸಿದರೆ ಸಹಕಾರಿಯಾಗುವುದು. 
ಸಂಪರ್ಕಿಸಬಹುದಾದ ಸಂ: 
9448501804 (ಕ.ವೆಂ.ನಾಗರಾಜ್),
9448932866 (ಕವಿ ಸುರೇಶ್),
9844226477 (ಬಿ.ಎನ್.ಕುಮಾರಸ್ವಾಮಿ).

ಮನವಿ: ಇ-ಮೇಲ್ ವಿಳಾಸವಿಲ್ಲದಿರುವ ನಿಮ್ಮ ಕುಟುಂಬದ ಹಾಗೂ ಬಂಧುಗಳಿಗೂ ವಿವರ ತಿಳಿಸಿ, ಆಹ್ವಾನಿಸಿ.

Tuesday, November 15, 2011

ಶಿಕಾರಿಪುರದಲ್ಲಿ ಸಿರಿಗಟ್ಟಿದ ಸಂಭ್ರಮ


ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ
     ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು ಶಿಕಾರಿಪುರದಲ್ಲಿ ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ೫ನೆಯ ವಾರ್ಷಿಕ ಸಮಾವೇಶದ ಆಯೋಜಕರಾಗಿ ಕವಿ ಸುರೇಶರ ಸಲಹೆ, ಸೂಚನೆಗಳನ್ನು ಪಡೆದು ಉತ್ತಮ ವ್ಯವಸ್ಥೆ ಮಾಡಿದ್ದರು. ಕವಿ ಕುಟುಂಬಗಳು, ಬಂಧುಗಳು ಪುನರ್ಮಿಲನಗೊಂಡ ಹಾದಿ, ಕವಿಕಿರಣ ಪತ್ರಿಕೆಯ ವಿಶೇಷತೆ, ಯುವಪೀಳಿಗೆ ಇಡಬೇಕಾದ ಹೆಜ್ಜೆಗಳನ್ನೊಳಗೊಂಡಂತೆ ವಿಚಾರ ಮಂಡಿಸಿದವರು ಕವಿನಾಗರಾಜ್. ಇಂತಹ ಕಾರ್ಯಕ್ರಮ ಅನುಕರಣೀಯವೆಂದವರು ಮುಖ್ಯ ಅತಿಥಿ ಶ್ರೀ ಹರಿಹರಪುರ ಶ್ರೀಧರ್. ವಯೋವೃದ್ಧರೂ, ಮಾರ್ಗದರ್ಶಿಗಳಾದ ಶ್ರೀ ಎಸ್.ಕೆ. ಕೃಷ್ಣಮೂರ್ತಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಅದೇ ದಿನ ಇದ್ದರೂ ಸಹ ಬಿಡುವು ಮಾಡಿಕೊಂಡು ಸಮಾರಂಭದಲ್ಲಿ ಹಾಜರಾಗಿ ಕುಟುಂಬ ಮಿಲನದ ಮಹತ್ವ  ತಿಳಿಸಿದವರು ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಶ್ರೀ ಪದ್ಮನಾಭ ಭಟ್ಟರು. ಆಶುಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಆಯೋಜಕರಿಗೆ ಅಭಿನಂದನೆ, ವಂದನಾರ್ಪಣೆಗಳೊಂದಿಗೆ ಸಮಾವೇಶ ಸಂಪನ್ನಗೊಂಡಿತು. ಕೆಲವು ಚಿತ್ರಗಳು ತಮ್ಮ ಮಾಹಿತಿಗೆ:












     ೬ನೆಯ ವಾರ್ಷಿಕ ಸಮಾವೇಶ ದಿನಾಂಕ ೨೫-೧೨-೨೦೧೧ರಂದು ಹಾಸನದಲ್ಲಿ ನಡೆಯಲಿದೆ. ಕವಿಮನೆತನದ ಎಲ್ಲಾ ಕುಟುಂಬಗಳ ಎಲ್ಲಾ ಸದಸ್ಯರುಗಳು, ಬಂಧುಗಳು, ಹಿತೈಷಿಗಳು ತಪ್ಪದೆ ಕ್ರಿಯಾತ್ಮಕವಾಗಿ ಪಾಲುಗೊಂಡು ಸಮರಸತೆಯ ಕೊಂಡಿಗಳನ್ನು ಭದ್ರಪಡಿಸಲು ಕೋರಲಾಗಿದೆ.
*******************
ಹಿಂದಿನ ಲೇಖನಕ್ಕೆ ಲಿಂಕ್: ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ : http://kavimana.blogspot.com/2011/11/blog-post_05.html

Saturday, November 5, 2011

ದಿ.ಎಸ್.ಕೆ. ನಾರಾಯಣರಾಯರ ನೆನಪು

     ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು.  (ನಮ್ಮ ಮುತ್ತ ಜ್ಜ  ಕವಿವೆಂಕಣ್ಣಯ್ಯನವರ ತಮ್ಮ ಸಾ.ಕ.ಲಿಂಗಣ್ಣಯ್ಯನವರ ಹಿರಿಯ ಮಗ). ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಅವರ ಮೊಮ್ಮಗ ಬೆಂಗಳೂರಿನ ಶ್ರೀ ಸತೀಶಕುಮಾರ್ ಕಳಿಸಿಕೊಟ್ಟಿರುವ ಅಪರೂಪದ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದೆ. ಶ್ರೀ ನಾರಾಯಣರಾಯರ ಕುರಿತು ಲೇಖನ ಮುಂದಿನ 'ಕವಿಕಿರಣ' ಸಂಚಿಕೆಯಲ್ಲಿ ಪ್ರಕಟವಾಗಲಿದೆ. 
ಪತ್ನಿ ದಿ. ಶ್ರೀಮತಿ ವರಲಕ್ಷ್ಮಮ್ಮನವರೊಂದಿಗೆ



Monday, September 5, 2011

ಕವಿಮನೆತನದ ತೀರ್ಥಹಳ್ಳಿ ಸಮಾವೇಶದ ಮತ್ತಷ್ಟು ಫೋಟೋಗಳು:

27-12-2009ರಂದು ತೀರ್ಥಹಳ್ಳಿಯಲ್ಲಿ ನಡೆದ ಕವಿಮನೆತನದ ಮತ್ತು ಬಂಧುಬಳಗದವರ ಸಮಾವೇಶದ ಮತ್ತಷ್ಟು ಫೋಟೋಗಳು:















Saturday, September 3, 2011

ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್


     ಕೆಳದಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಉಳಿಸುವ ಕಾರ್ಯದಲ್ಲಿ ಕೆಳದಿ ಕವಿಮನೆತನ ಮತ್ತು ಕೆಳದಿ ಜೋಯಿಸ್ ಕುಟುಂಬಗಳು ಮಹತ್ವದ ಪಾತ್ರ ವಹಿಸಿವೆ. ಕೆಳದಿ ಕವಿಮನೆತನದವರಿಗೆ ಈ ಹೆಸರು ಬರಲು ಕಾರಣೀಭೂತನಾದ ೧೭ನೆಯ ಶತಮಾನದ ಕವಿ ಲಿಂಗಣ್ಣ ರಚಿಸಿದ ಕೆಳದಿನೃಪ ವಿಜಯ ಒಂದು ಅದ್ಭುತ ರಚನೆಯಾಗಿದ್ದು ಸುಮಾರು ೨೫೦ ವರ್ಷಗಳ ಕಾಲ ಕರ್ನಾಟಕದ ಮುಖಕಮಲದಂತೆ ರಾರಾಜಿಸಿದ, ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಕರಾದ ಕೆಳದಿ ಅರಸರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ ಐತಿಹಾಸಿಕ ಸಂಗತಿಗಳಿಗೆ ಲೋಪವಾಗದಂತೆ ಬಿಂಬಿಸಿದೆ. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಕಾವ್ಯದ ಶೈಲಿಯಲ್ಲಿರುವ ಈ ಕೃತಿಯನ್ನು ಕೆಳದಿಯ ಗುಂಡಾಜೋಯಿಸರು ಎಲ್ಲರಿಗೂ ಅರ್ಥವಾಗುವಂತೆ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡು ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ಕೆಲವು ವರ್ಷಗಳ ಹಿಂದೆ ಡಾ. ಉಮಾಹೆಗ್ಗಡೆಯವರು ಇದರ ಹಿಂದಿ ಗದ್ಯಾನುವಾದ ಮಾಡಿದ್ದು ಕೆಳದಿ ಇತಿಹಾಸದ ವಿವರ ಕನ್ನಡೇತರರಿಗೂ ತಲುಪಿದಂತಾಗಿದೆ. ಇದೀಗ ಇದರ ಇಂಗ್ಲಿಷ್ ಗದ್ಯಾನುವಾದವನ್ನು ಕವಿ ಸುರೇಶರು ಮಾಡಿದ್ದು, ಹೆಚ್ಚು ಹೆಚ್ಚು  ಓದುಗರಿಗೆ ಮತ್ತು ಇತಿಹಾಸಾಸಕ್ತರಿಗೆ ಉಪಯೋಗವಾಗಿದೆ. 
     ಕೆಳದಿ ಕವಿಮನೆತನದ ೫ನೆಯ ತಲೆಮಾರಿನ ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಮಗಳು ಗಂಗಮ್ಮನನ್ನು ಜೋಯಿಸ್ ಕುಟುಂಬದ ಕೃಷ್ಣಜೋಯಿಸರಿಗೆ ಕೊಟ್ಟು ವಿವಾಹವಾದಾಗ ಕವಿ ಮನೆತನ ಮತ್ತು ಜೋಯಿಸ್ ಕುಟುಂಬಗಳ ನೆಂಟಸ್ತಿಕೆ ಆರಂಭವಾಯಿತೆನ್ನಬಹುದು. ಕವಿಕೃಷ್ಣಪ್ಪನವರ ಕಿರಿಯ ಮಗ ಎಸ್,ಕೆ. ಲಿಂಗಣ್ಣಯ್ಯನವರು ಒಂದು ಅದ್ಭುತ ಪ್ರತಿಭೆಯಾಗಿದ್ದು ಕವಿಮನೆತನದ ಹೆಸರನ್ನು ಎತ್ತಿ ಹಿಡಿದವರು. ಇವರ ಪರಿಚಯವನ್ನು ಮುಂದೊಮ್ಮೆ ಮಾಡಿಕೊಡುವೆ. ಕೃಷ್ಣಜೋಯಿಸರ ಮಗ ನಂಜುಂಡಜೋಯಿಸರಿಗೆ ಕವಿ ಎಸ್.ಕೆ. ಲಿಂಗಣ್ಣಯ್ಯನವರ ಮಗಳು ಮೂಕಾಂಬಿಕಮ್ಮ (ಮೂಕಮ್ಮನೆಂದೇ ಕರೆಯಲ್ಪಡುತ್ತಿದ್ದವರು)ನನ್ನು ಕೊಟ್ಟು ವಿವಾಹವಾದಾಗ ಎರಡು ಕುಟುಂಬಗಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಿತು. ನಂಜುಂಡ ಜೋಯಿಸ್-ಮೂಕಮ್ಮನವರ ಸುಪುತ್ರರೇ ಪ್ರಸ್ತುತ ಈಗ ಪರಿಚಯಿಸುತ್ತಿರುವ ಕೆಳದಿ ಗುಂಡಾಜೋಯಿಸರು. 
ಇತರರು ಓದಲು ಕಷ್ಟಪಡುವ ಲಿಪಿಗಳನ್ನು ಓದಬಲ್ಲ ಮೋಡಿಗಾರ
     ೨೭-೦೯-೧೯೩೧ರಲ್ಲಿ ಕೆಳದಿಯಲ್ಲಿ ಜನಿಸಿದ ಗುಂಡಾಜೋಯಿಸರು ಈಗ ೮೦ ವರ್ಷದ ತರುಣರು. ಅವರು ಉತ್ಸಾಹದ ಚಿಲುಮೆಯಾಗಿದ್ದು ಈಗಲೂ ತಮ್ಮ ಸಂಶೋಧನಾ ಕಾರ್ಯ ಮುಂದುವರೆಸಿದ್ದಾರೆ. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿ ಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದ ಎಮ್.ಎ. ಪದವೀಧರರು. ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ ಇವರು ಹಳೆಯ ಕೈಬರಹ, ಮೋಡಿಲಿಪಿ ಮತ್ತು ತಿಗಳಾರಿ ಲಿಪಿಗಳನ್ನು ಓದುವಲ್ಲಿ ಶ್ರೇಷ್ಠ ಪರಿಣಿತರು. ವಿರಳವಾದ ಮತ್ತು ಮಹತ್ವದ ಅನೇಕ ಸಂಗತಿಗಳನ್ನು ಈ ಮೂಲಕ ಬೆಳಕಿಗೆ ತಂದ ಕೀರ್ತಿ ಇವರದು. ಸರ್ಕಾರದ ಹಿರಿಯ ಅಧಿಕಾರಿಗಳಿಗೆ, ಅನೇಕ ವಿದ್ವಾಂಸರು, ಆಸಕ್ತರಿಗೆ ಮೋಡಿ ಮತ್ತು ತಿಗಳಾರಿ ಲಿಪಿಗಳನ್ನು ಓದುವ ಕುರಿತು ತರಬೇತಿ ನೀಡಿದ್ದಾರೆ. 
ಕೆಳದಿಯ ಹೆಮ್ಮೆಯಾದ ಅಪೂರ್ವ ಸಂಗ್ರಹಾಲಯದ ಜನಕ
     ಸುಮಾರು ನಾಲ್ಕು ಶತಮಾನಗಳ ಹಳೆಯ ಶಿಲಾಶಾಸನಗಳು, ಸಾಹಿತ್ಯಗಳು, ಪಳೆಯುಳಿಕೆಗಳು, ಕಾಗದಪತ್ರಗಳು, ಓಲೆಗರಿಗಳು, ಇತ್ಯಾದಿಗಳು ಇತಿಹಾಸ ಸಂಶೋಧನೆಗೆ ಅಮೂಲ್ಯ ಕಾಣಿಕೆ ಕೊಡುತ್ತವೆ. ತಾಯಿ ಮೂಕಮ್ಮನವರ ಪ್ರೇರಣೆಯಿಂದ ಇದರಲ್ಲಿ ಆಸಕ್ತಿ ಹೊಂದಿದ ಗುಂಡಾಜೋಯಿಸರು ಅಮೂಲ್ಯ ಸಂಗ್ರಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುಮಾರು ೫೦-೫೫ ವರ್ಷಗಳ ಹಿಂದೆ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಡಾ. ಶೇಷಾದ್ರಿಯವರು ಸರ್ವೇಕ್ಷಣೆಗಾಗಿ ಕೆಳದಿಗೆ ಬಂದವರು ಗುಂಡಾಜೋಯಿಸರ ಮನೆಯಲ್ಲಿದ್ದ ಪ್ರಾಚೀನವಾದ ಮತ್ತು ಅಮೂಲ್ಯವಾದ ವಸ್ತುಗಳ ಸಂಗ್ರಹ ಕಂಡು ಬೆರಗಾಗಿದ್ದರು. ಸರ್ಕಾರ ಅವುಗಳ ರಕ್ಷಣೆ ಮಾಡುವುದು ಅಗತ್ಯವೆಂದು ಮನಗಂಡು ಸರಕಾರದೊಂದಿಗೆ ವ್ಯವಹರಿಸಿ ರೂ.೬೦೦೦೦/- ಪರಿಹಾರ ಕೊಟ್ಟು ಆ ವಸ್ತುಗಳನ್ನು ಮೈಸೂರು ಮತ್ತು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರಿಸಲು ಗುಂಡಾಜೋಯಿಸ್ ಕುಟುಂಬದವರ ಒಪ್ಪಿಗೆ ಪಡೆದರು. ಅಂದುಕೊಂಡಂತೆಯೇ ಆಗಿದ್ದರೆ ಈಗ ನಾವು ಕಾಣುತ್ತಿರುವ ವಸ್ತುಸಂಗ್ರಹಾಲಯ ಕೆಳದಿಯಲ್ಲಿ ಇರುತ್ತಿರಲಿಲ್ಲ. ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡುವ ವಿಚಾರದಲ್ಲಿ ಪರಿಶೀಲನೆಗೆ ಬಂದ ಆಗಿನ ಜಿಲ್ಲಾಧಿಕಾರಿ ಶ್ರೀ ಸತೀಶ್ ಚಂದ್ರನ್ ರವರು ಗುಂಡಾಜೋಯಿಸರ ಬಳಿಯಿದ್ದ ತಾಳೆಗರಿಗಳು, ಹಳೆಯ ಜಾನಪದ ವಸ್ತುಗಳು, ಕಡತಗಳು, ತಾಳೆಗರಿಗಳು, ಮುಂತಾದುವನ್ನು ಕಂಡು ಬೆರಗಾದ ಅವರು ಅವುಗಳನ್ನು ಕೆಳದಿಯಲ್ಲಿಯೇ ಸುರಕ್ಷಣೆಯಲ್ಲಿ ಇಡುವುದು ಒಳ್ಳೆಯದೆಂದು ಭಾವಿಸಿ ಸರ್ಕಾರದ ಒಪ್ಪಿಗೆ ಮತ್ತು ಅನುದಾನ ಪಡೆದು ಗುಂಡಾಜೋಯಿಸರ ಮನೆಯ ಪಕ್ಕದ ಆವರಣದಲ್ಲಿ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ ಎಂಬ ಹೆಸರಿನಲ್ಲಿ ಕಾರ್ಯಾರಂಭಕ್ಕೆ ಕಾರಣಕರ್ತರಾದರು. ಕೆಲವರ ಚಿತಾವಣೆಯಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಈ ವಸ್ತುಸಂಗ್ರಹಾಲಯವನ್ನು ಸೂಪರ್ ಸೀಡ್ ಮಾಡಲು ಸರ್ಕಾರ ಮುಂದಾಗಿದ್ದು ಆಗ ನೆರವಿಗೆ ಬಂದವರು ಆಗ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಇದೇ ಶ್ರೀ ಸತೀಶ್ ಚಂದ್ರನ್ ರವರು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಅಪೂರ್ವವೆನಿಸಿರುವ ವಸ್ತು ಸಂಗ್ರಹಾಲಯ ಕೆಳದಿಯಲ್ಲೇ ಉಳಿಯಿತು.
     ಗುಂಡಾಜೋಯಿಸರ ಶ್ರಮದಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ಸಂಸ್ಥೆ ಕ್ರಮೇಣ ಹಲವರ ಸಹಕಾರದಿಂದ ಇಂದು ದೊಡ್ಡದಾಗಿ ಬೆಳೆದಿದೆ. ೧೯೮೭-೮೯ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇದಕ್ಕೆ ಜೋಯಿಸರು ಭೂಮಿದಾನ ನೀಡಿದ್ದಾರೆ. ಈಗ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಗೊಂಡಿರುವ ವಸ್ತು ಸಂಗ್ರಹಾಲಯದ ಉಪಯೋಗಕ್ಕಾಗಿ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡವನ್ನೂ ಸಹ ನಿರ್ಮಿಸಲಾಗಿದೆ. ಗುಂಡಾಜೋಯಿಸರು ತಮ್ಮ ಶ್ರಮದಿಂದ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನೀಡಿರುವುದು ವಿಶೇಷವೇ ಸರಿ. ಹಳೆಯ ಕಾಲದ ವಿಗ್ರಹಗಳು, ಕಾಷ್ಠಶಿಲ್ಪಗಳು, ವರ್ಣಚಿತ್ರಗಳು, ತುಕ್ಕು ಹಿಡಿದಿದ್ದರೂ ಅಂದಿನ ಕಥೆ ಹೇಳುವ ಆಯುಧಗಳು, ನಾಣ್ಯಗಳು, ಬೀಗಗಳು, ರಾಜ-ರಾಣಿಯರ ಉಡುಪುಗಳು, ಶಾಸನಗಳು, ವೀರಗಲ್ಲುಗಳು, ತಾಡೆಯೋಲೆಗಳು, ಹಸ್ತಪ್ರತಿಗಳು, ಮುಂತಾದುವನ್ನು ಕಣ್ಣಾರೆ ಕಂಡೇ ಅವುಗಳ ಮಹತ್ವ ಅರಿಯಬೇಕು. ಕವಿ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರ ರಚನೆಯ ಅದ್ಭುತವೆನಿಸುವ ಕಲಾಕೃತಿಗಳು ಎಲ್ಲರ ಮನಸೆಳೆಯುತ್ತವೆ. ಅವರ ಗಾರ್ಡಿಯನ್ ಏಂಜಲ್ ಆಫ್ ಬ್ರಿಟಿಷ್ ಎಂಪೈರ್ ಚಿತ್ರದಲ್ಲಿ ಆಂಗ್ಲರ ಆಡಳಿತಕಾಲದಲ್ಲಿದ್ದ ದೇಶಗಳನ್ನು ವಿಕ್ಟೋರಿಯಾ ರಾಣಿಯ ಚಿತ್ರದಲ್ಲಿ ರೂಪಿಸಿದ್ದು ಅದರಲ್ಲಿ ಭಾರತ ಹೃದಯಭಾಗದಲ್ಲಿರುವಂತೆ ಚಿತ್ರಿಸಿರುವುದು ವಿಶೇಷ. ಕಲಾತಜ್ಞರ ಪ್ರಕಾರ ಈ ಚಿತ್ರ ಲಕ್ಷಾಂತರ ರೂ. ಮೌಲ್ಯವುಳ್ಳದ್ದಾಗಿದೆ. ಸುಮಾರು ೧೮೦೦ ಚಿತ್ರಗಳಿರುವ ಚಿತ್ರರಾಮಾಯಣ, ಚಿತ್ರಭಾಗವತಗಳೂ ಇಲ್ಲಿ ಕಾಣಸಿಗುತ್ತವೆ. ಕವಿಮನೆತನದ ವಂಶವೃಕ್ಷವನ್ನು ಸಹ ಇಲ್ಲಿ ನೋಡಬಹುದು. ಅಸಂಖ್ಯ ಕನ್ನಡ, ತೆಲುಗು, ತಮಿಳು, ತಿಗಳಾರಿ, ದೇವನಾಗರಿ ಲಿಪಿಗಳಲ್ಲಿರುವ ಓಲೆಗರಿ ಕಟ್ಟುಗಳಿದ್ದು ಅಧ್ಯಯನಯೋಗ್ಯವಾಗಿವೆ. ಧರ್ಮಶಾಸ್ತ್ರ, ಸಂಗೀತ, ಆಯುರ್ವೇದ, ಇತಿಹಾಸ, ಇತ್ಯಾದಗಳಿಗೆ ಸಂಬಂಧಿಸಿದ ಓಲೆಗರಿಗಳಿವೆಯೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ದಿನಚರಿ, ನವಾಬ್ ಹೈದರಾಲಿಯ ಸಹಿಯುಳ್ಳ ದಾಖಲೆ, ಸರ್ವಜ್ಞನ ಪೂರ್ವಾಪರ ತಿಳಿಸುವ ತಾಡಪತ್ರ, ಶ್ರೀ ಶಂಕರಾಚಾರ್ಯರ ಅಪ್ರಕಟಿತ ಸ್ತೋತ್ರಗಳು, ಗದಗದ ತೋಂಟದಾರ್ಯ ಮಠದ ಚಿನ್ನದ ಪಾದುಕೆಗಳಲ್ಲಿರುವ ಕೆಳದಿಯ ಶಾಸನ ಹಾಗೂ ರೇಖಾಚಿತ್ರವಿದ್ದ ಸಂಶೋಧನಾತ್ಮಕ ಕೃತಿಗಳು, ವಿಜಯನಗರದ ದೇವರಾಯನ ಅಂಕಿತದ ತಾಮ್ರಶಾಸನ, ಹೀಗೆ ನೂರಾರು ಅಮೂಲ್ಯ ಪ್ರಾಚೀನ ಸಂಪತ್ತು ಇಲ್ಲಿ ರಕ್ಷಿಸಲ್ಪಟ್ಟಿದ್ದು ಇವುಗಳ ಮಹತ್ವವನ್ನು ಬಿತ್ತರಿಸುವ ನೈಜ ಇತಿಹಾಸ ಹೊರತರುವ ಕೆಲಸ ಆಗಬೇಕಿದೆ. ಕುವೆಂಪು ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ವಿಪುಲ ಆಕರಗಳು, ಅವಕಾಶಗಳು ಇವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಳ್ಳಲಾಗಿದೆ. ಗುಂಡಾಜೋಯಿಸರ ಈ ಎಲ್ಲಾ ಅದ್ಭುತ ಕೆಲಸದಿಂದ ಇಂದು ಈ ವಸ್ತುಸಂಗ್ರಹಾಲಯ ಈಗಿನ ಸ್ಥಿತಿಗೆ ತಲುಪಿದ್ದು ಮುಂದೊಮ್ಮೆ ಕರ್ನಾಟಕದ ಹೆಮ್ಮೆಯೆನಿಸುವುದರಲ್ಲಿ ಸಂಶಯವಿಲ್ಲ. ಅವರಿಗೆ ನಮೋ ನಮೋ! 
ಕೆಳದಿ ಇತಿಹಾಸ ತಿರುಚಿದ್ದಕ್ಕೆ  ಕೆರಳಿದರು!
     ಇತಿಹಾಸಕ್ಕೆ ಜಾತಿ, ದೇಶ, ದರ್ಮ, ಇತ್ಯಾದಿ ಹಲವು ಕಾರಣಗಳಿಂದ ಅಪಚಾರವಾಗಿದೆ, ಆಗುತ್ತಿದೆ. ಭಾರತದ ನೈಜ ಇತಿಹಾಸವನ್ನೂ ಸಹ ಜಾತ್ಯಾತೀತತೆ ನೆಪದಲ್ಲಿ ಮುಚ್ಚಿಹಾಕಲಾಗುತ್ತಿದೆ. ಇತಿಹಾಸವೆಂದರೆ (ಅರ್ಥ: ಅದು ಹಾಗೆ ಇತ್ತು) ಅದು ಹೇಗೆ ಇತ್ತೋ ಹಾಗೆ ಹೇಳಬೇಕು. ಆದರೆ ತಮಗೆ ಬೇಕಾದಂತೆ ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳು ಅಭ್ಯಸಿಸುತ್ತಿರುವುದು ದುರ್ದೈವ. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಚೆನ್ನಬಸವನಾಯಕ ಕಾದಂಬರಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿಯ ಚಾರಿತ್ರ್ಯ ವಧೆ ಮಾಡುವಂತಹ ವರ್ಣನೆಗಳನ್ನು ಮಾಡಿದ್ದುದನ್ನು ಪ್ರಬಲವಾಗಿ ಖಂಡಿಸಿದ್ದ ಗುಂಡಾಜೋಯಿಸರು ಹಲವಾರು ಲೇಖನಗಳನ್ನು ಪ್ರಕಟಿಸಿದರು. ಅಷ್ಟೇ ಸಲ್ಲ, ಸಂಶೋಧನಾತ್ಮಕವಾದ, ಸತ್ಯಶೋಧನೆ ಆಧರಿಸಿ ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ ಎಂಬ ಗ್ರಂಥವನ್ನೇ ಪ್ರಕಟಿಸಿದರು. ಮಾಸ್ತಿಯಂತಹವರೂ ತಮ್ಮದೇ ಆದ ಕಾರಣಕ್ಕಾಗಿ ನೈಜ ಇತಿಹಾಸಕ್ಕೆ ಕಳಂಕ ತಂದದ್ದು ನೋವು ತರುವಂತಹುದು. ಮಾಸ್ತಿಯವರಿಗೆ ಈ ಕೃತಿಗಾಗಿ ಕೊಡಬೇಕೆಂದಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಪ್ರತಿಭಟನೆಯ ಕಾರಣಕ್ಕಾಗಿ ಸಮಗ್ರ ಸಾಹಿತ್ಯಕ್ಕಾಗಿ ಎಂದು ಬದಲಾಯಿಸಿ ಕೊಡಲಾಯಿತು. 
ಮೌಲಿಕ ಬರಹಗಾರರು
     ಸುಂದರ ಕೈಬರಹಗಾರರಾದ ಗುಂಡಾಜೋಯಿಸರು ೩೦ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲಾ ಕೃತಿಗಳು ದಾಖಲೆಗಳನ್ನು ಆಧರಿಸಿದ್ದು ಸತ್ಯಶೋಧನೆಯ ಫಲಗಳಾಗಿವೆ. ಹೆಚ್ಚಿನ ಕೃತಿಗಳು ಕೆಳದಿ ಅರಸರು, ಅವರ ಕಾಲದ ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಿಸಿವೆ. ಸಂಶೋಧನಾತ್ಮಕ ಕಾರ್ಯಗಳಿಗೆ ಭಾರತ ಮತ್ತು ರಾಜ್ಯ ಸರ್ಕಾರದ ನೆರವೂ ಸಿಕ್ಕಿದ್ದು ಅವರ ಸಂಶೋಧನೆಗೆ ಸಹಕಾರಿಯಾಗಿದೆ. ಅನೇಕ ರಾಷ್ಟ್ರೀಯ ಮತ್ತು ಆರು ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ ಹೆಗ್ಗಳಿಕೆ ಇವರದು. ಇವರ ಸಾಹಿತ್ಯ ಕೃಷಿಯ ಕುರಿತು ಬರೆಯಹೊರಟರೆ ಅದೇ ಪ್ರತ್ಯೇಕ ದೀರ್ಘ ಲೇಖನವಾಗುತ್ತದೆ. 
ಅರಸಿ ಬಂದ ಪ್ರಶಸ್ತಿಗಳು
     ಹಲವಾರು ಪ್ರಶಸ್ತಿ, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ೧೯೯೪ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿರುವ ಇವರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಕೆಳದಿ ರಾಜಗುರು ಹಿರೇಮಠ ಗುರುತಿಸಿ ಕೆಳದಿ ಇತಿಹಾಸ ಸಂಶೋಧನಾ ರತ್ನ ಎಂಬ ಪ್ರಶಸ್ತಿ ನೀಡಿದ್ದು, ಈ ಬಿರುದು ನಿಜಕ್ಕೂ ಅರ್ಥಪೂರ್ಣವಾಗಿದೆ. ವಿಶ್ವ ಹಿರಿಯರ ನಾಗರಿಕರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸರ್ಕಾರದಿಂದ ಸನ್ಮಾನಿತರಾದ ಐವರ ಪೈಕಿ ಇವರೂ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಜೂನ್ ತಿಂಗಳಿನಲ್ಲಿ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 
ಬತ್ತದ ಚಿಲುಮೆ
     ೮೦ರ ಹರಯದಲ್ಲಿ ಈಗಲೂ ಬತ್ತದ ಚಿಲುಮೆಯಂತಿರುವ ಗುಂಡಾಜೋಯಿಸರ ತಲೆಯಲ್ಲಿ ಸುಮಾರು ೬೦-೭೦ ಲಕ್ಷ ರೂ.ಗಳ ವೆಚ್ಚದ ಅಂದಾಜಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ಮುಂದಿನ ೬ ವರ್ಷಗಳಲ್ಲಿ ಮಾಡಲು ಉದ್ದೇಶಿಸಿರುವ ಹಲವಾರು ಯೋಜನೆಗಳಿವೆ. ತಿಗಳಾರಿ ಹಸ್ತಪ್ರತಿಗಳು, ಮೋಡಿ ಲಿಪಿಗಳ ಕುರಿತು ಸಂಶೋಧನಾ ಲೇಖನಗಳು, ಅಪ್ರಕಟಿತ ತಾಳೆಗರಿ ಸಾಹಿತ್ಯಗಳನ್ನು ಹೊರತರುವುದು, ಕೆಳದಿಯ ಸಮಗ್ರ ಇತಿಹಾಸ (ಇಂಗ್ಲಿಷ್ ಮತ್ತು ಕನ್ನಡದಲ್ಲಿ), ಇತ್ಯಾದಿ ಅವರ ಯೋಜನೆ/ಯೋಚನೆಗಳು ಕಾರ್ಯಗತಗೊಳ್ಳಲಿ ಎಂದು ಹಾರೈಸೋಣ. ಸಾಗರದಿಂದ ೮ ಕಿ,ಮೀ, ದೂರದ ಕೆಳದಿಗೆ ಭೇಟಿ ನೀಡಿ ರಾಮೇಶ್ವರ ದೇವಾಲಯ ಮತ್ತು ಕೆಳದಿಯ ವಸ್ತು ಸಂಗ್ರಹಾಲಯ ಹಾಗೂ ೩ ಕಿ,ಮೀ. ದೂರದ ಇಕ್ಕೇರಿಯ ಅಘೋರೇಶ್ವರ ದೇವಾಲಯ ಸಂದರ್ಶಿಸಿರದಿದ್ದಲ್ಲಿ ಸಂದರ್ಶಿಸಿರಿ. ಆ ಸಂದರ್ಭದಲ್ಲಿ ಹಿರಿಯ ಸಾಧಕ ಗುಂಡಾಜೋಯಿಸರನ್ನು ಕಂಡು ಮಾತನಾಡಿಸಿ ಬರಬಹುದು. ಏನಂತೀರಿ?   
                                     ಕೆಳದಿ ವಸ್ತು ಸಂಗ್ರಹಾಲಯ 
                                       ಓಲೆಗರಿಗಳಲ್ಲಿನ ಸಾಹಿತ್ಯ ಭಂಡಾರ
                                       ಪ್ರಾಚೀನ ವಸ್ತುಗಳ ಒಂದು ನೋಟ
                                       ರಾಜರ ಆಯುಧಗಳ ಒಂದು ನೋಟ

                                          ರಾಜರ ಪೋಷಾಕು, ಕವಿಮನೆತನದ ವಂಶವೃಕ್ಷ

                                                ಬೀಗಗಳು




                                    ಅಮೂಲ್ಯ ವಸ್ತುಗಳು

             
                                       ದೊಡ್ಡ ಗಾತ್ರದ ತಾಡಪತ್ರದಲ್ಲಿ ಮಹಾಭಾರತ


Monday, January 24, 2011

'ವೇದಸುಧೆ' ಅಂತರ್ಜಾಲತಾಣದ ಪ್ರಥಮ ವಾರ್ಷಿಕೋತ್ಸವ

ಆತ್ಮೀಯರೇ,
                  ದಿನಾಂಕ 30-01-2011ರಂದು ಹಾಸನದ ಶ್ರೀ ಶಂಕರಮಠದಲ್ಲಿ ಬೆ. 9-30ರಿಂದ 'ವೇದಸುಧೆ' ಅಂತರ್ಜಾಲತಾಣದ ಪ್ರಥಮ ವಾರ್ಷಿಕೋತ್ಸವ ನಡೆಯಲಿದ್ದು ಎಲ್ಲಾ ಬಂಧುಗಳು ಭಾಗವಹಿಸಲು ಕೋರಿದೆ. ಹರಿಹರಪುರ ಶ್ರೀಧರ್ ಸಂಪಾದಕರು ಮತ್ತು ಕವಿನಾಗರಾಜರು ಗೌ.ಸಂಪಾದಕರಾಗಿರುವ ಈ ತಾಣದಲ್ಲಿ ಕವಿ ಸುರೇಶರು  ವೇದಸುಧೆ ಬಳಗದ ಸಕ್ರಿಯ ಸದಸ್ಯರು ಮತ್ತು ಲೇಖಕರಾಗಿದ್ದಾರೆ. ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಸಿ.ಡಿ. ಬಿಡುಗಡೆ, 'ಆರೋಗ್ಯಕರ ಬದುಕು ಮತ್ತು ವೇದ' ಎಂಬ ವಿಚಾರಸಂಕಿರಣ, ಕು. ಬಿ.ಎಸ್.ಆರ್. ಅಂಬಿಕಾಳ ವಯಲಿನ್ ವಾದನ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
                  ಅದೇ ದಿನ ಅದೇ ಸ್ಥಳದಲ್ಲಿ ಮ.3-00ರಿಂದ 'ಮನೆಮನೆಕವಿಗೋಷ್ಠಿ'ಯ 14ನೇ ವಾರ್ಷಿಕೋತ್ಸವ ಜರುಗಲಿದೆ. ಕವಿನಾಗರಾಜರ ಚಿಂತನಶೀಲ ಮುಕ್ತಕಗಳು 'ಮೂಢ ಉವಾಚ' ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. 
                  ತಮ್ಮೆಲ್ಲರಿಗೂ ಆದರದ, ಆತ್ಮೀಯ ಆಹ್ವಾನವಿದೆ.
 ಆಹ್ವಾನ ಪತ್ರಿಕೆ ತಮ್ಮ ಗಮನಕ್ಕಾಗಿ:


Wednesday, December 15, 2010

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದ 5ನೆಯ ವಾರ್ಷಿಕ ಸಮಾವೇಶ

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದ 5ನೆಯ ವಾರ್ಷಿಕ ಸಮಾವೇಶ

         ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ 5 ನೆಯ ವರ್ಷದ ಸಮಾವೇಶವನ್ನು ಈ ವರ್ಷ ದಿ. ವಿನೋದಮ್ಮ ಗೋಪಾಲರಾಯರ ಮಕ್ಕಳು ಪ್ರಾಯೋಜಿಸಿದ್ದು ದಿನಾಂಕ 26-12-2010ರ ಭಾನುವಾರ ಶಿವಮೊಗ್ಗ ಜೆಲ್ಲೆಯ ಶಿಕಾರಿಪುರದಲ್ಲಿ ರಥಬೀದಿಯಲ್ಲಿರುವ ಕೇವಲಾನಂದಾಶ್ರಮದಲ್ಲಿ ಬೆ. 10-00 ರಿಂದ ಮ. 04-30ರವರೆಗೆ ನಡೆಯಲಿರುತ್ತದೆ. ಊಟ, ಉಪಹಾರಗಳ  ವ್ಯವಸ್ಥೆ ಮಾಡಿದ್ದು ಎಲ್ಲಾ ಕುಟುಂಬಗಳು ಮತ್ತು ಬಂಧುಬಳಗದವರನ್ನು ಭಾಗವಹಿಸಲು ಆತ್ಮೀಯ ಆಹ್ವಾನ ನೀಡಿದ್ದಾರೆ. ವಿನೂತನ ಸಾಂಸ್ಕೃತಿಕ ಕಾರ್ಉಕ್ರಮಗಳೊಂದೊಗೆ ವಿವಿಧ ಸ್ಪರ್ಧೆಗಳನ್ನೂ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ. 'ವರುಷದ ಹರುಷ'ದಲ್ಲಿ ಪಾಲುಗೊಳ್ಳಲು ಎಲ್ಲಾ ಕವಿಕುಟುಂಬಗಳವರು ಮತ್ತು ಬಂಧು ಬಳಗದವರನ್ನು ಕೋರಿದೆ.  ಅವರು ನೀಡಿದ ಆಹ್ವಾನ ಪತ್ರವನ್ನು ಯಥಾವತ್ ಕೆಳಗೆ ಪ್ರಕಟಿಸಿದೆ:

              ಕೆಳದಿ ಕವಿ ಮನೆತನದ ಮತ್ತು ಬಂಧುಗಳ ಸಮ್ಮಿಲನ
     ಪ್ರತಿ ವರ್ಷದಂತೆ ಈ ವರ್ಷದ ಕವಿ ಕುಲ ಬಾಂಧವರ ಸಮ್ಮಿಲನ ಕಾರ್ಯಕ್ರಮವನ್ನು ಶಿಕಾರಿಪುರದಲ್ಲಿ ಆಯೋಜಿಸಲಾಗಿದೆ.ಪರಸ್ಪರ ಸಂಬಂಧಗಳನ್ನು ಉಳಿಸಿ, ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಬಂದು ಪಾಲ್ಗೊಳ್ಳುವುದು ಅತೀ ಅವಶ್ಯ.ಇಲ್ಲಿ ನಾವೇ ಅಭ್ಯಾಗತರು; ನಾವೇ ಅತಿಥಿಗಳು.
     ದಯವಿಟ್ಟು ಈ ಸುಂದರ ಕಾರ್ಯಕ್ರಮಕ್ಕೆ ತಾವುಗಳೆಲ್ಲರೂ ಆಗಮಿಸಿ ಯಶಸ್ವಿಗೊಳಿಸಲು ಕೋರಿದೆ.
ತಮ್ಮ ಆಗಮನಾಭಿಲಾಷಿಗಳು,
ದಿ.ವಿನೋದಮ್ಮ ಗೋಪಾಲರಾವ್ ಮಕ್ಕಳಾದ-
೧.ಶ್ರೀಮತಿ ಡಿ.ರಾಮಮೂರ್ತಿ
೨.ಶ್ರೀರಂಗನಾಥ
೩. ಶ್ರೀ ಶ್ರೀಧರಮೂರ್ತಿ
೪. ಶ್ರೀ ಡಿ.ಸೋಮಶೇಖರ್
೫. ಶ್ರೀಮತಿ ಡಿ.ಸುವರ್ಣ
೬. ಶ್ರೀಮತಿ ಡಿ.ಕಾಶೀಬಾಯಿ
ದಿನಾಂಕ : ೨೬-೧೨-೨೦೧೦ ಭಾನುವಾರ
ಸ್ಥಳ : ಕೇವಲಾನಂದಾಶ್ರಮ
ರಥಬೀದಿ ಮಾರ್ಗ
ಶಿಕಾರಿಪುರ.
ಸಮಯ : ಬೆಳಿಗ್ಗೆ ೧೦ ರಿಂದ ೪.೩೦ ರವರೆಗೆ
ಸಂಪರ್ಕ ದೂರವಾಣಿಗಳು : ಕಾಶೀಬಾಯಿ-೯೪೮೦೧೪೨೦೮೬
ಸೋಮಶೇಖರ್-೯೯೪೫೧೩೬೩೯೪
|| ಸರ್ವರಿಗೂ ಹಾರ್ದಿಕ ಸುಸ್ವಾಗತ ||
ವಿ.ಸೂ. : ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಸ್ವರ್ಧೆಗಳನ್ನು ಹಮ್ಮಿಕೊಂಡಿದೆ.

Monday, November 1, 2010

ಯಾವ ವೈದ್ಯರೂ ಮಾಡದ ಚಿಕಿತ್ಸೆಯನ್ನು ಆಪ್ತ ಸಮಾವೇಶ ಮಾಡಬಲ್ಲುದು

ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ' ಮತ್ತು ಕುಟುಂಬ ಸಮಾವೇಶದ ಬಗ್ಗೆ ಹಾಸನದ ಚಿಂತನಶೀಲ ಲೇಖಕ ಹರಿಹರಪುರ ಶ್ರೀಧರ ಕಳುಹಿಸಿದ ಮಿಂಚಂಚೆಯನ್ನು ಯಥಾವತ್ ನಕಲು ಮಾಡಿ ಕೆಳಗೆ ಪ್ರಕಟಿಸಿದೆ:

    ನಮ್ಮ ಸುತ್ತ-ಮುತ್ತ ಜನರ ನಿತ್ಯದ ಮಾತು-ಕತೆಯ ಒಂದಿಷ್ಟು ಸ್ಯಾಂಪಲ್ ನೋಡಿ-            "ಕಾರು-ಬಂಗ್ಲೆ, ಚಿನ್ನದಸರ-ಬಳೆ, ಟಿ.ವಿ-ಫ್ರಿಜ್ಜು.......ಜೊತೆಗೆ ಬಿ.ಪಿ-ಶುಗರ್-ಕ್ಯಾನ್ಸರ್...........ಡಯಾಲಿಸಿಸ್, ಹಾರ್ಟ್ ಸರ್ಜರಿ"  " ನನ್ನ ಮಗ ಸಾಫ್ಟ್ ವೇರ್ ಇಂಜಿನಿಯರ್ , ನನ್ನ ಮಗಳು  ಡಾಕ್ಟರ್"  " ಯಾರೋ ಲವ್ ಮಾಡಿದ್ರಂತೆ, ಇಂಟರ್ ಕ್ಯಾಸ್ಟ್ ಮದ್ವೆ ಆಯ್ತಂತೆ, ಡೈವರ್ಸ್ ಆಯ್ತಂತೆ, ಅವರ ಅಪ್ಪ-ಅಮ್ಮ  ವೃದ್ಧಾಶ್ರಮ ಸೇರಿದ್ರಂತೆ"
                  ಸಾಮಾನ್ಯವಾಗಿ ಇದಕ್ಕೆ ಹೊರತಾದ ಮಾತು-ಕತೆ  ಅಪರೂಪ ಅಲ್ವಾ? ನಮ್ಮ ಆರೋಗ್ಯ ಹದಗೆಟ್ಟು  ಹಾಳಾಗಿ ಹೋಗಿದ್ರೂಟಿ.ವಿ-ಇಂಟರ್ ನೆಟ್ ನೋಡಿಕೊಂಡು ಮಕ್ಕಳು  ರಾಕ್ಷಸರಂತೆ ಬೆಳೀತಿದ್ರೂ   ತೆಪ್ಪಗೆ ಮೌನವಾಗಿ ಕುಳ್ತಿರೋ  ನಮ್ಮ ಸಮಾಜದ ದು:ಸ್ಥಿತಿ ಕಂಡು ದು:ಖವಾಗುತ್ತೆ. ಒಂದು ರೀತಿಯ ನಿರಾಶಾಭಾವ ಮೂಡುತ್ತದೆ. ನಮ್ಮ ಸಮಾಜದ ಕತೆ ಇಷ್ಟೇನಾ ಅನ್ನಿಸುತ್ತದೆ.

                  ಆದರೆ ಕವಿಕಿರಣ ದಂತಾ  ಪ್ರಯತ್ನಗಳನ್ನು ನೋಡಿದಾಗ ಎಲ್ಲೋ ಒಂದು ಕಡೆ ಆಶಾಕಿರಣ ಮೂಡುತ್ತದೆ. ನಮಗೆಲ್ಲಾ ಜನ್ಮ ಕೊಟ್ಟ ತಾಯಿ ಭಾರತಿ ಬಂಜೆಯಲ್ಲ. ಸಹಸ್ರಾರು ಮಂದಿ ಸಾದು ಸಂತರು, ಋಷಿ-ಮುನಿಗಳ ತಪಸ್ಸಿನಿಂದ ಪುನೀತವಾಗಿರುವ ನೆಲದಲ್ಲಿ ಧರ್ಮಕ್ಕೆ ಚ್ಯುತಿ ಬರಲು ಸಾಧ್ಯವಿಲ್ಲ. ಎಲ್ಲವೂ ನಿರ್ನಾಮ ವಾಯಿತೆನ್ನುವ ಹೊತ್ತಿಗೆ ಒಬ್ಬ ಮಹಾಪುರುಷನು ಎದ್ದು ಬಂದಿರುವುದನ್ನು ನಮ್ಮ  ಇತಿಹಾಸದಲ್ಲಿ ನೋಡಬಹುದಾಗಿದೆ.
                       ಮನೆತನದ ಸೊಗಡನ್ನು ಉಳಿಸಿ-ಬೆಳೆಸುವ  ನಿಮ್ಮಗಳೆಲ್ಲರ ಶ್ರಮವು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ. ಎಷ್ಟೇ ಸಿರಿವಂತಿಕೆ ಇದ್ದರೂ  ಅದನ್ನು ಸಂತಸದಿಂದ ಅನುಭವಿಸಲು " ನಮ್ಮವರೆನ್ನುವವರು ನಮ್ಮೊಡನೆ ಇರಬೇಕು" ವರ್ಷದಲ್ಲಿ ಒಮ್ಮೆ ಯಾದರೂ ಒಂದೆರಡುದಿನಗಳು  ನಮ್ಮ ನಮ್ಮ ಸ್ವಂತ ವ್ಯವಹಾರವನ್ನು ಬದಿಗಿರಿಸಿ, ಎಲ್ಲವನ್ನೂ ಮರೆತು ನಮ್ಮವರೆನಿಸಿದ ಎಲ್ಲರೊಡನೆ  ಕುಣಿದು ಕುಪ್ಪಳಿಸಬೇಕುಇಂದು ಎಲ್ಲೆಡೆ ಕಾಡುತ್ತಿರುವ ಟೆನ್ಷನ್ ಗಳಿಗೆ ಇದೊಂದೇ ಪರಿಹಾರ. ಯಾವ ವೈದ್ಯರೂ ಮಾಡಲಾಗದ ಚಿಕಿತ್ಸೆಯನ್ನು ಒಂದು ಆಪ್ತ ಸಮಾವೇಶ ಮಾಡಬಲ್ಲದು. ಮುಂದಿನ ಕವಿ ಮನೆತನದ ಸಮಾವೇಶದಲ್ಲಿ ನಾನು ಡಾಕ್ಟರ್, ನಾನು ಉಧ್ಯಮಿ, ನಾನು ಆಗರ್ಭ ಶ್ರೀಮಂತ, ಛೇ! ನಾನು ಬಡವ, ನಾನು  ಡಾಕ್ಟರೇಟ್ ಮಾಡಿದವನು, ಛೇ! ನಾನು ಸಾಮಾನ್ಯ ಗುಮಾಸ್ತ! ಎಲ್ಲಾ  ನಾನುಗಳನ್ನು ಅಂದಿನ ಮಟ್ಟಿಗಾದರೂ ಬದಿಗಿರಿಸಿ ಎಲ್ಲರೊಂದಿಗೆ ಬೆರೆತು ನನ್ನ ನಾ ಮರೆತಾಗ ನಿಜವಾಗಲೂ "ಸಮಾವೇಶವು ಸಾರ್ಥಕವಾಗುತ್ತದೆ" ಎಲ್ಲರೂ ಮುಂದಿನ ಸಮಾವೇಶವನ್ನು ಎದಿರು ನೋಡುವಂತಾಗುತ್ತದೆ.

Friday, October 1, 2010

ಕೆಳದಿ ಕವಿಮನೆತನ

ಬಂಧುಗಳೇ,
                 ಕೆಳದಿ ಕವಿಮನೆತನಕ್ಕೆ ಸೇರಿದ ನಾವು ಹೆಮ್ಮೆಪಡಲು ಹಲವಾರು ಕಾರಣಗಳಿವೆ. ಸುಮಾರು 12 ತಲೆಮಾರುಗಳ ವಿವರವಿರುವ ವಂಶವೃಕ್ಷ ಹೊಂದಿರುವುದಲ್ಲದೆ ನಮ್ಮ ಹಿರಿಯರು, ಪೂರ್ವಜರು ಜೀವನದ ಹಲವಾರು ರಂಗಗಳಲ್ಲಿ ಹಿರಿಮೆ, ಗರಿಮೆ ಮೆರೆದವರು. ಅವರ ಸಾಲಿನಲ್ಲೇ ಪ್ರಚಲಿತ ಕುಟುಂಬಗಳ ಸದಸ್ಯರುಗಳೂ, ಬಂಧುಗಳೂ ಸಹ ಮುಂದುವರೆಯುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ. ಸಂಬಂಧಿಸಿದ ಕುಟುಂಬಗಳವರು, ಬಂಧುಗಳು ಈ ತಾಣದಲ್ಲಿ ಪಾಲ್ಗೊಂಡು ತಮ್ಮ ಲೇಖನಗಳು, ಅನುಭವಗಳು, ಪ್ರತಿಕ್ರಿಯೆಗಳು, ಭಾವಚಿತ್ರಗಳು, ಇತ್ಯಾದಿಗಳನ್ನು ಹಂಚಿಕೊಳ್ಳಲು ವಿನಂತಿಸುವೆ.
                                              ತಮ್ಮವ - ಕ.ವೆಂ.ನಾಗರಾಜ್.