ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, October 19, 2010

60ನೇ ವರ್ಷದ ದಾಂಪತ್ಯ ವರ್ಷಾಚರಣೆ



















ಕವಿ ವೆಂಕಟಸುಬ್ಬರಾವ್ ರವರು ಕಾಲವಾಗುವುದಕ್ಕೆ ಸ್ವಲ್ಪ ತಿಂಗಳುಗಳ ಮುಂಚೆ ತಮ್ಮ ಮಕ್ಕಳ ಮತ್ತು ಬಂಧುಗಳ ಸಮಕ್ಷಮ ಶಿವಮೊಗ್ಗೆಯಲ್ಲಿ ತಮ್ಮ 60ನೇ ದಾಂಪತ್ಯ ಜೀವನದ ವಾರ್ಷಿಕ ಆಚರಿಸಿದ ಸಂದರ್ಭದಲ್ಲಿ ತೆಗೆದ ಚಿತ್ರ.

[ಚಿತ್ರದಲ್ಲಿ ಶ್ರೀಮತಿ ರೇಣುಕಾ ಸುರೇಶ್, ಶ್ರೀಮತಿ, ಶ್ರೀಮತಿ ಅನುಸುಯಾ, ಶ್ರೀಮತಿ ಪ್ರಭಾವತಿ ಗೋಪಾಲ್, ಚಿ.ದೀಪಕ್, ಕು.ಅಂಬಿಕಾ, ಶ್ರೀಮತಿ ಮತ್ತು ಶ್ರೀ ನಟರಾಜ್, ಶ್ರೀಮತಿ ಪದ್ಮ, ಶ್ರೀಮತಿ ಶ್ರೀಲತಾ, ಕವಿ ಸುರೇಶ್ ಮತ್ತು ಕವಿ ನಾಗರಾಜ್ ರವರನ್ನು ನೋಡಬಹುದು]

ಲಿಂಗಣ್ಣ ಕವಿ ವಿರಚಿತ ದಕ್ಷಾಧ್ವರ ವಿಜಯ ಕಾವ್ಯದಿಂದ ಆರಿಸಿದ ಒಂದು ಕೃತಿ











ರಾಗ
: ಭೈರವಿ


ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ | ಮುನಿಭಾವಿತೆ |
ಧರಣೀಧರ ವರಜಾತೆ |
ಬಾಲೆ ಸಕಲ ಜಗನ್ಮೋಹಿನಿ | ಸಿಂಹವಾಹಿನಿ |
ಲಾಲಿತ ಗಣಪ ಸೇನಾನಿ ||

ಸ್ಮೇರಾನನ ವಿಹಸಿತ ಶಶಿಬಿಂಬೆ |
ಚಾರು ನಯನ ಜಿತ ಮದನ ಕಳಂಬೆ || ೧ ||

ನಿಗಮಾಗಮ ನುತ ಮಹಿಮ ಸಮಾಜೆ
ಜಗದಭಿವಂದಿತ ಪಾದಪಯೋಜೆ || ೨ ||

ಚಂದ್ರಶೇಖರ ಸಹಚಾರಿಣಿ | ಸೌಖ್ಯಕಾರಿಣಿ |
ಇಂದ್ರಾದಿವಂದೈ ಶರ್ವಾಣಿ ||

ವಂಶ ಋಣ

ಪರಿವರ್ತಿನಿ ಸಂಸಾರೇ ಮೃತ: ಕೋವಾನ ಜಾಯತೇ
ಸಜಾತೋ ಯೇನ ಜಾತೇನ ಯಾತಿ ವಂಶ: ಸಮುನ್ನತಿಮ್ ||

ಚಕ್ರದಂತೆ ಸುತ್ತುತ್ತಿರುವ ಜನನ-ಮರಣ ಪ್ರವಾಹರೂಪ ಸಂಸಾರದಲ್ಲಿ ಸತ್ತವನು ಯಾವನು ತಾನೇ ಮತ್ತೆ ಹುಟ್ಟುವುದಿಲ್ಲ? (ಎಲ್ಲರೂ ಪುನರ್ಜನ್ಮ ತಾಳುವರು). ಆದರೆ ಯಾವಾತ ಹುಟ್ಟಿದುದರಿಂದ ಅವನ ವಂಶ ಉನ್ನತಿ ಪಡೆಯುವುದೋ ಅವನು ಮಾತ್ರ ಹುಟ್ಟಿ ಸಾರ್ಥಕನಾಗುವನು.

ಸಮಾಜಕ್ಕೆ ಮತ್ತು ದೇಶಕ್ಕೆ ನಾವೇನು ಮಾಡಿದೆವು ಎಂಬುದು ಎರಡನೇ ಮಾತು. ಮೇಲೆ ಹೇಳಿದಂತೆ ನಮ್ಮ ವಂಶಕ್ಕೇ ನಮ್ಮ ಕೊಡುಗೆ ಏನು ಎಂಬುದು ಕೂಡ ಬಹುಮುಖ್ಯವಾದ ವಿಚಾರ. ವಂಶಕ್ಕೆ ನೀಡಿದ ಕೊಡುಗೆ ಒಂದು ರೀತಿ ಸಮಾಜಕ್ಕೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆಯೇ ತಾನೆ. ಈ ನಿಟ್ಟಿನಲ್ಲಿ ಕೆಳದಿ ಕವಿ ಮನೆತನದ ಕೊಡುಗೆ ಅಪಾರ. ಆ ಪರಂಪರೆಯನ್ನು ಮುಂದುವರೆಸಿ ನಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು. ಬನ್ನಿ ಈ ಕಾರ್ಯದಲ್ಲಿ ನಾವೆಲ್ಲ ಕೈಗೂಡಿಸೋಣ.

Monday, October 18, 2010

ಕೆಳದಿ ಕವಿಮನೆತನದ 5 ಮತ್ತು 6ನೆಯ ತಲೆಮಾರಿನವರು ವಾಸವಿದ್ದ ಮನೆ

     ಶಿವಮೊಗ್ಗ ಜಿಲ್ಲೆ ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿದ್ದ ಒಂದು ಮನೆಯಲ್ಲಿ ಕೆಳದಿ ಕವಿಮನೆತನದ 5ನೆಯ ಪೀಳಿಗೆಯ ಕವಿ ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳು ವಾಸವಿದ್ದರು. ಆ ಮನೆ ಈಗ ಹೀಗಿದೆ. ಈ ಮನೆಯನ್ನು ಕವಿಕುಟುಂಬದವರು ಶ್ರೀ ವೆಂಕೋಬರಾವ್ ಬಾಪಟ್ ಎಂಬುವವರಿಗೆ ಹಿಂದೆ ಮಾರಿದ್ದು, ಈಗ ಈ ಮನೆಯಲ್ಲಿ ಅವರ ಮಗ ಶ್ರೀ ಕೇಶವರಾವ್ ಬಾಪಟ್ ವಾಸವಾಗಿದ್ದಾರೆ. ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಬಗ್ಗೆ ಮಾಹಿತಿಯನ್ನು ಡಿಸೆಂಬರ್, 2010ರ 'ಕವಿಕಿರಣ' ಸಂಚಿಕೆಯಲ್ಲಿ ನಿರೀಕ್ಷಿಸಿರಿ.




ಈಗ ಈ ಮನೆಯಲ್ಲಿ ವಾಸವಿರುವ ಶ್ರೀ ಕೇಶವರಾವ್ ಬಾಪಟ್ ರವರು.
-ಕವಿನಾಗರಾಜ್.

Tuesday, October 12, 2010

ಅಪರೂಪದ ಚಿತ್ರ

ದಿನಾಂಕ 06-10-1959ರಲ್ಲಿ ಚಿಕ್ಕಮಗಳೂರಿನ ಶ್ರೀ ಅರುಣೋದಯ ಫೋಟೊ ಸ್ಟುಡಿಯೋದಲ್ಲಿ ತೆಗೆಸಲಾಗಿದ್ದ ಅಪರೂಪದ ಭಾವಚಿತ್ರ (ಕವಿ ವೆಂಕಟಸುಬ್ಬರಾಯರ 34ನೆಯ ವಯಸ್ಸಿನಲ್ಲಿ ತೆಗೆಸಿದ ಈ ಚಿತ್ರದಲ್ಲಿ ಅವರೊಂದಿಗೆ ಪತ್ನಿ ಶ್ರೀಮತಿ ಸೀತಮ್ಮ, ಮಕ್ಕಳು ನಾಗರಾಜ, ಲಲಿತಾಂಬಾ ಮತ್ತು ಸುರೇಶರನ್ನು ಕಾಣಬಹುದು). ಕವಿ ಕುಟುಂಬಗಳವರು ತಮ್ಮಲ್ಲಿರುವ ಇಂತಹ ಅಪರೂಪದ ಮತ್ತು ನೆನಪಿಸಿಕೊಳ್ಳಬಹುದಾದ ಚಿತ್ರಗಳನ್ನು ಈ ಶೀರ್ಷಿಕೆಯಲ್ಲಿ ಪ್ರಕಟಿಸಬಹುದು.
-ಕವಿನಾಗರಾಜ್.




Friday, October 1, 2010

ಕೆಳದಿ ಕವಿಮನೆತನ

ಬಂಧುಗಳೇ,
                 ಕೆಳದಿ ಕವಿಮನೆತನಕ್ಕೆ ಸೇರಿದ ನಾವು ಹೆಮ್ಮೆಪಡಲು ಹಲವಾರು ಕಾರಣಗಳಿವೆ. ಸುಮಾರು 12 ತಲೆಮಾರುಗಳ ವಿವರವಿರುವ ವಂಶವೃಕ್ಷ ಹೊಂದಿರುವುದಲ್ಲದೆ ನಮ್ಮ ಹಿರಿಯರು, ಪೂರ್ವಜರು ಜೀವನದ ಹಲವಾರು ರಂಗಗಳಲ್ಲಿ ಹಿರಿಮೆ, ಗರಿಮೆ ಮೆರೆದವರು. ಅವರ ಸಾಲಿನಲ್ಲೇ ಪ್ರಚಲಿತ ಕುಟುಂಬಗಳ ಸದಸ್ಯರುಗಳೂ, ಬಂಧುಗಳೂ ಸಹ ಮುಂದುವರೆಯುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ. ಸಂಬಂಧಿಸಿದ ಕುಟುಂಬಗಳವರು, ಬಂಧುಗಳು ಈ ತಾಣದಲ್ಲಿ ಪಾಲ್ಗೊಂಡು ತಮ್ಮ ಲೇಖನಗಳು, ಅನುಭವಗಳು, ಪ್ರತಿಕ್ರಿಯೆಗಳು, ಭಾವಚಿತ್ರಗಳು, ಇತ್ಯಾದಿಗಳನ್ನು ಹಂಚಿಕೊಳ್ಳಲು ವಿನಂತಿಸುವೆ.
                                              ತಮ್ಮವ - ಕ.ವೆಂ.ನಾಗರಾಜ್.

Thursday, September 16, 2010

ವೆಂಕ ಕವಿ (ವೆಂಕಭಟ್ಟ - ವೆಂಕಣ್ಣ ) ಪತ್ನಿ-ದೇವಮ್ಮ


ಕ್ರಿ.ಶ.1770ರಲ್ಲಿದ್ದ ವೆಂಕ ಕವಿ, ಕವಿ ಲಿಂಗಣ್ಣನ ಮಗ. ನರಹರಿ ವಿಜಯ - ಈ ಕವಿ ಬರೆದ ಕಾವ್ಯ (ಭಾಮಿನಿ ಷಟ್ಪದಿಯಲ್ಲಿ). ಇದರಲ್ಲಿ 85 ಪದ್ಯಗಳು ಮತ್ತು 7 ಗರಿಗಳಿದ್ದು ಇದು ನೃಸಿಂಹಾವತಾರಕ್ಕೆ ಸಂಬಂಧಿಸಿದ ಕಾವ್ಯ. ಇದಲ್ಲದೇ ಗಣ ಸಹಸ್ರನಾಮ (ವಾರ್ಧಕ, ಭಾಮಿನಿ, ಪರಿವರ್ಧಿನಿ ಈ ಷಟ್ಪದಿಗಳೂ 100 ಮತ್ತು 1 ವಚನ - ಒಟ್ಟು 101 ಪದ್ಯ ಸಂಖ್ಯೆಯುಳ್ಳ ಕಿರುಕೃತಿ) ಮತ್ತು ಪಾರ್ವತಿ ವಲ್ಲಭ ಶತಕ (ಇದೊಂದು ನೀತಿ ಶತಕ - ದೈವಭಕ್ತಿ, ಗುರುಭಕ್ತಿ, ಗುರು-ಹಿರಿಯರಲ್ಲಿ ಶ್ರಧ್ದೆ, ಧರ್ಮದಲ್ಲಿ ಒಲವು ಹಾಗೂ ನಿಷ್ಠೆಯ ನಿಲುವನ್ನು ನಿರೂಪಿಸುವ ಒಂದು ತಾತ್ವಿಕ ಗ್ರಂಥ - 101 ಪದ್ಯಗಳಿವೆ) ಎಂಬ ಕೃತಿಯನ್ನೂ ರಚಿಸಿದ್ದಾರೆ. ಇತ್ತೀಚೆಗೆ ಇದನ್ನು ಕೆಳದಿಯ ಡಾ:ವೆಂಕಟೇಶ್ ಜೊಯಿಸರವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಕೆಳದಿ ಶ್ರೀ ರಾಮೇಶ್ವರ ದೇವರನ್ನು ಮತ್ತು ಕುಲದೇವರಾದ ಕೊಲ್ಲೂರು ಮೂಕಾಂಬಿಕೆಯನ್ನು ಅಂಕಿತನಾಮವನ್ನಾಗಿಟ್ಟುಕೊಂಡು ಈ ವೆಂಕಣ್ಣ ಕವಿ ಭಕ್ತಿಯಿಂದ ರಚಿಸಿದ ಹಲವಾರು ಕೀರ್ತನೆಗಳು ತಾಡವೋಲೆಯಲ್ಲಿ ದೊರೆತಿದ್ದು, ಕೆಳದಿ ಗುಂಡಾಜೊಯಿಸರು "ಕೆಳದಿ ವೆಂಕಣ್ಣಕವಿಯ ಕೀರ್ತನೆಗಳು" ಎಂಬ ಪುಸ್ತಕದಲ್ಲಿ ಸಂಪಾದಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದಾರೆ (1977). ಈ ಕವಿಯು ಮೂಕಾಂಬಿಕೆಯ ಮೇಲೆ ರಚಿಸಿದ ಒಂದು ಕೀರ್ತನೆಯ ತಾಡವೋಲೆಯು ಲಭಿಸಿದ್ದು ಅದನ್ನು ಕೊನೆಯಲ್ಲಿ ಪ್ರಸ್ತುತಿ ಪಡಿಸಲಾಗಿದೆ. ಅನೇಕ ಹಾಡುಗಳಿಗೆ ಸಂಗೀತ ಶಾಸ್ತ್ರದಲ್ಲಿ ಹೇಳಿದ ರಾಗಗಳನ್ನು ತಾಳೆಗರಿಯಲ್ಲಿ ಕವಿಯು ಸೂಚಿಸಿದ್ದು, ಇದರಿಂದ ಕವಿಗೆ ಸಂಗೀತ ಶಾಸ್ತ್ರದಲ್ಲಿ ಸಾಕಷ್ಟು ಜ್ಞಾನವಿತ್ತೆಂದು ತಿಳಿಯಬಹುದಾಗಿದೆ. ಈ ಕೃತಿಗಳಲ್ಲಿ ಮೂಡಿರುವ ಕೆಲವು ಅತ್ಯಂತ ಮಾರ್ಮಿಕವಾದ, ದಾರ್ಶನಿಕವಾದ ಹಾಗೂ ಭಕ್ತಿ ಭಾವದ ಕೆಲವು ಸಾಲುಗಳನ್ನೂ ಕೂಡ ಕೊನೆಯಲ್ಲಿ ನೀಡಲಾಗಿದೆ. ಮಾನವನ ಜೀವನದ ಸಾರ್ಥ್ಯಕ್ಕೆ ಬೇಕಾದ ಎಲ್ಲಾ ಒಳಗುಟ್ಟುಗಳೂ ಈ ಕೃತಿಗಳಲ್ಲಿ ಅಡಗಿದೆಯೆಂದರೆ ಅತಿಶಯೋಕ್ತಿಯಾಗಲಾರದು.

ತಾಡೆಯೋಲೆ ಕೃತಿ: ರಾಗ: ಮಧ್ಯಮಾವತಿ - ತಾಳ: ಆದಿತಾಳ

ಮಂಗಲಂ ಜಯಮಂಗಲಂ
ತ್ರಿಜಗಂಗಳ ಪೊರೆವ ಶ್ರೀ ಮೂಕಾಂಬೆಗೆ (ಪಲ್ಲವಿ)

ಗೌರಿಗೆ ಗುಜನನಿಗೆ ಗಿರಿಜಾತೆಗೆ
ಧೀರಮಹಿಷ ದೈತ್ಯಮರ್ಧಿನಿಗೆ
ಕಾರುಣ್ಯ ನಿಧಿಗೆ ಕಾಮಿತ ಫಲದಾತೆಗೆ
ನಾರದನುತೆಗೆ ನಾರಾಯಣಿಗೆ | 1 |

ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆ
ದುರಿತ ದಾರಿದ್ರೈ ಹರ್ತ್ರೆಗೆ ದುರ್ಗಿಗೆ
ಪರಮೇಶ್ವರಿಗೆ ಪಾವನಚರಿತೆಗೆ ಶುಭ
ಕರಿಗೆ ಸಮಸ್ತಮಂತ್ರೇಶ್ವರಿಗೆ | 2 |

ರಾಜಶೇಖರಿಗೆ ರಾಜೀವ ನೇತ್ರೆಗೆ ರಕ್ತ
ಬೀಜ ಶಾಸಿನಿಗೆ ಭುವನಮಾತೆಗೆ
ತೇಜೋಮಯಿಗೆ ತರಣಿಕೋಟಿ ಭಾಷೆಗೆ
ಶ್ರೀ ಜನಾರ್ಧನನ ಸಹೋದರಿಗೆ | 3 |

ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆ
ಕಾಳರಾತ್ರಿಗೆ ಕಾತ್ಯಾಯಿನಿಗೆ
ವ್ಯಾಳ ಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆ
ಭಾಲನೇತ್ರೆಗೆ ಭಯ ಹಾರಿಣಿಗೆ | 4 |

ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆ
ಮುಂಡಿಗೆ ಧೂಮ್ರಲೋಚನಹರ್ತ್ರೆಗೆ
ಚಂಡಮುಂಡಾಸುರರಸುರಣರಂಗದಿ
ದಿಂಡುದರಿಂದ ಸರ್ವಮಂಗಲೆಗೆ | 5 |

ಚಾರುಮ್ಮಗೆ ಭೈರವಿಗೆ ಭವಾನಿಗೆ
ಶಿವೆಗೆ ಶಾಶ್ವತಗೆ ಸೌಖ್ಯಪ್ರದೆಗೆ
ಪ್ರವಿರಳಾನಂತಲೀಲಾತ್ಮಿಕೆಗಭಿನವ
ಕುವಲಯನೀಲ ಕೋಮಲಗಾತ್ರಿಗೆ | 6 |


ಕಡುಗಲಿ ಶುಂಭನಿಶುಂಭರ ಗೆಲೆದಳ್ಗೆ
ಮೃಡನರಸಿಗೆ ಮೂಕಮರ್ದಿನಿಗೆ
ತಡೆಯದೆ ಸಕಲಜನರ ಮನೋಭೀಷ್ಟವ
ಕೊಡುವ ಕೊಲ್ಲೂರ ಶ್ರೀ ಮೂಕಾಂಬೆಗೆ | 7 |
-------------------------------------------------------------------------------------

ಕವಿ ವೆಂಕಣ್ಣನವರ ಕೀರ್ತನೆಗಳಿಂದ ಆಯ್ದ ಕೆಲವು ಸಾಲುಗಳು

ವರದಾನದಿಯ ತೀರವಾಸ ಶ್ರೀ ಕೆಳದಿಯ
ಪುರವರಾಧೀಶ ರಾಮೇಶ್ವರನ
ಪರಮಮೋಹದ ಪುತ್ರ ಪಾವನತರಗಾತ್ರ
ವರದ ಶ್ರೀ ಗಣಪತಿ ಜಯಜಯ ಜಯವೆಂದೂ
***
ಪಲ್ಲಕ್ಕಿಯ ಸಾನಂದದೊಳೇರು
ಹಲ್ಲಣಿಸಿದ ಕರಿತುರಗವನೇರು
ಎಲ್ಲಾಭರಣವನಿಟ್ಟು ಸುಖದಿಪ್ರಾಣ
ದೊಲ್ಲಭಸಹಿತ ಸಂತೋಷದೊಳಿರು ಶ್ರೀ
ಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ

*** ***

ಪರಿಮಳಿಸುವ ಪುಷ್ಪಸರಗಳ ಮುಡಿದು
ಗುರುಹಿರಿಯರ ಆಶೀರ್ವಾದವ ಪಡೆದು
ಹರುಷದಿ ಪುತ್ರಪೌತ್ರರ ಸಲಹುತ ಪತಿ
ಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯ
ವರ ಸುಬ್ರಹ್ಮಣ್ಯನ ಕೃಪೆಯಿಂದಾ
***
ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-
ಪೇಂದ್ರನಾಗು ಬುದ್ಧಿಕೌಶಲ್ಯದೊಳು ತಿಳಿಯಲು ನಾ-
ಗೇಂದ್ರ ನೀನಾಗು
***

ತನ್ನ ತಾನೇ ತಿಳಿಯಬೇಕು | ತೋರುವ ಲೋಕ
ವನ್ನು ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ನನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು
***
ತುಲಸಿಯ ಮೂಲದೆ ನದಿಗಳು
ತುಲಸಿಯ ದಳದೊಳೆ ಶ್ರೀ ಹರಿಯು
ತುಲಸಿಯ ಶಾಖೆಯೊಳೆ ಸುರರೆಲ್ಲಾ
ನೆಲೆಸಿಹರು ಶ್ರೀ ತುಲಸಿಯ ಮಹಿಮೆಗೆಣೆಯುಂಟೇ
@@@@@@@