ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Saturday, October 30, 2010

ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳು

ಸಂಪಾದಕರು: ಕೆಳದಿ ಗುಂಡಾ ಜೊಯಿಸ್
ಪ್ರಕಟಣಾ ವರ್ಷ: 2007 - ಪ್ರಕಾಶಕರು : ಬೆಂಗಳೂರು ವಿಶ್ವ ವಿದ್ಯಾನಿಲಯ, ಬೆಂಗಳೂರು

ಕೆಳದಿ ಕವಿ ಮನೆತನಕ್ಕೆ ಸೇರಿದ ಕವಿ ವೆಂಕಣ್ಣನವರು ವಿಶೇಷವಾಗಿ ಕೆಳದಿ ರಾಮೇಶ್ವರರನ್ನು ಅಂಕಿತನಾಮವನ್ನಾಗಿರಿಸಿಕೊಂಡು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಇದರಿಂದ ಕವಿಗೆ ಸಂಗೀತ ಶಾಸ್ತ್ರದ ಮತ್ತು ಕೃತಿ ರಚನೆ ಬಗ್ಗೆ ಇದ್ದ ಪರಿಣತಿಯು ಸ್ಪಷ್ಟವಾಗಿ ಗೋಚರಿಸುತ್ತದೆ. ತಾಡೆಯೋಲೆಯಲ್ಲಿ ಲಭ್ಯವಾದ ಕೆಲವು ಕೃತಿಗಳನ್ನು ಮಾನ್ಯ ಶ್ರೀ ಕೆಳದಿ ಗುಂಡಾ ಜೊಯಿಸ್ ರವರು ಸಂಪಾದಿಸಿ, ಪ್ರಕಟಿಸಿ, ಕೆಳದಿ ಕವಿ ಮನೆತನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಕೆಲಸ ನಿಜಕ್ಕೂ ಸ್ತುತ್ಯಾರ್ಹ. ಇದರಲ್ಲಿನ ಕೆಲವು ಆಯ್ದ ಕೃತಿಗಳನ್ನು ಈ ಬ್ಲಾಗ್ ನಲ್ಲಿ ವೆಂಕಣ್ಣ ವಿರಚಿತ ಕೃತಿಗಳು ಎಂಬ ಲೇಬಲ್ ಅಡಿಯಲ್ಲಿ ಹಂತ ಹಂತವಾಗಿ ಮಂಡಿಸಲಾಗುತ್ತಿದೆ.

Friday, October 29, 2010

ಪಾರ್ವತಿ ಸ್ತುತಿ

ರಾಗ: ಸುರುಟಿ : ಆದಿತಾಳ

ಗಿರಿರಾಜಕುಮಾರಿ | ದೇವಿ |
ಪರಮ ಮಂಗಲ ಗೌರಿ
ಪರಮ ಪಾವನೆ ಶ್ರೀ ಹರಿ ಸೋದರಿ
ಸುರರಿಪು ಮಧು ಕೈಟಭ ಸಂಹಾರಿ
ಶ್ರೀ ಕರಿ ಗೌರಿ | ಹಸೆಗೇಳು ಹಸೆಗೇಳು || 1 ||

ಕುಂಭಸಂಭವವಿನುತೆ | ದೇವಿ |
ಶಾಂಭವಿ ಶುಭಚರಿತೆ
ಜಂಭಭೇದಿ ಮುಖ ಸುರವರಪೂಜಿತೆ
ಕಂಬುಕಂಠಿ ಶುಭಗುಣಗಣ ಶೋಭಿತೆ
ಲೋಕೈಕಮಾತೆ | ಹಸೆಗೇಳು ಹಸೆಗೇಳು || 2 ||

ಸರಸಿಜದಳನಯನೆ | ದೇವಿ
ಸರಸಕುಂದರದನೆ
ಸರ್ವ ಮಂಗಳೆ ಸರ್ವಾಭರಣೆ
ಸುರಮುನಿ ಪುರಭಾವಿತ ಶುಭಚರಣೆ
ಕರಿರಾಜಗಮನೆ | ಹಸೆಗೇಳು ಹಸೆಗೇಳು || 3 ||

ಶರನಿಥಿಗಂಭೀರೆ | ದೇವಿ
ಸರಸಮೋಹನಾಕಾರೆ
ಕರುಣಸಾಗರೆ ಕನಕಾಂಬರಧರೆ
ಪರಿಪಾಲಿತ ನಿರ್ಜರ ಪರಿವಾರೆ
ಮಣಿಮಯಹಾರೆ | ಹಸೆಗೇಳು ಹಸೆಗೇಳು || 4 ||

ಪನ್ನಗನಿಭವೇಣಿ | ದೇವಿ
ಸನ್ನುತೆ ರುದ್ರಾಣಿ
ಕನ್ನಡಗದಪಿನ ಶಿವೆ ಶರ್ವಾಣಿ
ಲೋಕೈಕ ಜನನಿ | ಹಸೆಗೇಳು ಹಸೆಗೇಳು || 5 ||

ನಗಧರಪರಿಪಾಲಿ | ದೇವಿ
ಸುಗುಣೆಗಾನಲೋಲೆ
ಅಗಣಿತಮಹಿಮಾಸ್ಪದೆ ಶುಭ ಶೀಲೆ
ಮೃಗಮದ ತಿಲಕ ವಿರಾಜಿತ ಪಾಲೆ
ಕುಂಕುಮನಿಟಿಲೆ | ಹಸೆಗೇಳು ಹಸೆಗೇಳು || 6 ||

ಪಂಕಜ ಸಮಪಾಣಿ | ಶ್ರೀ ಹರಿ -
ಣಾಂಕ ವದನೆ ವಾಣಿ
ಅಂಕಿತ ಮಣಿಗಣ ಭೂಷಣ ಭೂಷಣಿ
ಶಂಕರೀ ಕೆಳದಿ ಪುರವಾಸಿನಿ
ಪಾರ್ವತಿ ಕಲ್ಯಾಣಿ | ಹಸೆಗೇಳು ಹಸೆಗೇಳು || 7 ||

ಮಹಾಲಕ್ಷ್ಮಿ


ಕವಿ ನಾಗರಾಜ್, ಹಾಸನ, ಇವರು ಗಾಜಿನ ಮೇಲೆ ಪೇಯಿಂಟಿಂಗ್ ನಲ್ಲಿ ರಚಿಸಿದ ಮಹಾಲಕ್ಷ್ಮಿಯ ಚಿತ್ರ

ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ


ಪ್ರಕಟಣಾ ವರ್ಷ: 2008 : ಲೇಖಕರು : ಕವಿ ನಾಗರಾಜ್, ಹಾಸನ
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ: ಪುಟಗಳು - 56+4

[ವಿವರಗಳನ್ನು ಕವಿ ನಾಗರಾಜ್ ರವರು ನೀಡುವವರಿದ್ದಾರೆ]

Thursday, October 28, 2010

ವೆಂಕಣ್ಣಕವಿ ವಿರಚಿತ ಕೃತಿಗಳು


ರಾಗ: ಮಧ್ಯಮಾವತಿ : ಆದಿತಾಳ
ಶಿವಮಂತ್ರವ ಜಪಿಸೋ | ಮೂಢ |
ಶಿವಮಂತ್ರವ ಜಪಿಸೋ

ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||


ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ

ಮೌನ ಬೇಡ ಮಣಿ ಮಾಲಿಕೆ ಬೇಡ

ಧ್ಯಾನ ಬೇಡ ಪಶುವಧೆಗಳು ಬೇಡ || 1 ||


ದೇಶ ಕಾಲ ಪಾತ್ರವ ನೋಡಲು ಬೇಡ

ಕಾಷಾಯಾಂಬರ ಧಾರಣೆ ಬೇಡ

ಭಾಸುರ ಜಡೆಯನು ಬೆಳೆಸಲು ಬೇಡ

ಈ ಶರೀರವನೆ ದಂಡಿಸಬೇಡ || 2 ||


ಕಾಲನ ದೂತರು ಎಳೆಯುವ ಮುನ್ನ

ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯಾದ ವಿ-

ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು || 3 ||

Wednesday, October 27, 2010

ಕೆಳುವೆಯಲ್ಲಿ ಒಂದು ದಿನ

ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಿಂದ ಸುಮಾರು 8-10 ಕಿ.ಮೀ. ದೂರದಲ್ಲಿದೆ ಕೆಳುವೆ ಗ್ರಾಮ. ಅಲ್ಲಿನ ಈಶ್ವರ ದೇವಸ್ಥಾನದ ಅರ್ಚಕರಾಗಿರುವ ಗೋಪಾಲರವರನ್ನು (ಕವಿ ವೆಂಕಟಸುಬ್ಬರಾಯರ ತಂಗಿ ಸೀತಮ್ಮನವರ ಮಗ)  ಮಾತನಾಡಿಸಲು ಹಾಗೂ ದೇವಾಲಯ ನೋಡಲು ಕೆಲವು ತಿಂಗಳ ಹಿಂದೆ ಹೋಗಿದ್ದಾಗ ತೆಗೆದ ಚಿತ್ರಗಳು:
ಈಶ್ವರ ದೇವಾಲಯದ ಮುಂಭಾಗ ಹಾಗೂ ಅರ್ಚಕ ಶ್ರೀ ಗೋಪಾಲ

ದೇವಾಲಯದಲ್ಲಿರುವ ಆಕರ್ಷಕ ಬೃಹತ್ ಈಶ್ವರ ಲಿಂಗ

ಅರ್ಚಕರ ನಿವಾಸ

ಅರ್ಚಕರ ನಿವಾಸದಲ್ಲಿ ಕುಶಲೋಪರಿ
ಗೋಪಾಲ ದಂಪತಿಗಳು, ರೇಣುಕಾ ಸುರೇಶ್, ಸಾವಿತ್ರಮ್ಮ ರಾಮಮೂರ್ತಿ, ಭಾರತಿನಾಗರಾಜ್,
ಕೆಳದಿ ರಾಮಮೂರ್ತಿ, ಕವಿನಾಗರಾಜ್, ಕೆಳದಿ ವೆಂಕಟೇಶ ಜೋಯಿಸ್, ಕವಿ ಸುರೇಶ್.
     ಕೆಳದಿ ರಾಮಮೂರ್ತಿಯವರ ಸಹಕಾರದಿಂದ ಗೋಪಾಲ ದಂಪತಿಗಳು ಇಲ್ಲಿ ನೆಲೆಸಿದ್ದು ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ಅಭಿವೃದ್ಧಿ ಕಾಣುತ್ತಿದೆ, ಕಾಣಬೇಕಿದೆ.
-ಕವಿನಾಗರಾಜ್.

Tuesday, October 26, 2010

ನಿವೃತ್ತಿಯಿಂದ ಪ್ರವೃತ್ತಿಯೆಡೆಗೆ

ದಿನಾಂಕ 31.12.09 ರಂದು ಕವಿ ನಾಗರಾಜ್ ('ಕವಿ ಕಿರಣ' ಪತ್ರಿಕೆಯ ಸಂಪಾದಕರು) ರವರು ತಮ್ಮ ಅಂಚೆ ಇಲಾಖೆ ಮತ್ತು ಕಂದಾಯ ಇಲಾಖೆಯ ಸುದೀರ್ಘ ಸೇವೆಯ ನಂತರ ಶಿವಮೊಗ್ಗೆಯಲ್ಲಿ ತಹಸೀಲ್ದಾರ್ ಆಗಿ ಸ್ವಯಂ ನಿವೃತ್ತಿ ಹೊಂದಿದರು. ಅಂದು ಅವರನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಂಡು ಕುಟುಂಬಸ್ಥರು ಆತ್ಮೀಯವಾಗಿ ಅಭಿನಂದಿಸಿದ ಸಂದರ್ಭ.
[ಚಿತ್ರದಲ್ಲಿರುವವರು : ಶ್ರೀಮತಿ ಭಾರತಿ ನಾಗರಾಜ್, ಶ್ರೀ ಕವಿ ನಾಗರಾಜ್, ಶ್ರೀಮತಿ ರೇಣುಕಾಸುರೇಶ್, ಕು.ಅಂಬಿಕಾ, ಕವಿ ಸುರೇಶ್, ಚಿ.ದೀಪಕ್ ಮತ್ತು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್]