ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, November 29, 2010

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07.

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07
ಸಮಾವೇಶದ ಕೆಲವು ದೃಶ್ಯಗಳು
ಕು. ಬಿ.ಎಸ್.ಆರ್. ಅಂಬಿಕಾಳಿಂದ ಪ್ರಾರ್ಥನೆ



ಚಿ. ಬಿ.ಎಸ್.ಆರ್. ದೀಪಕನಿಂದ ನಿರೂಪಣೆ


ಭಾಗವಹಿಸಿದವರು

ವಸ್ತುಪ್ರದರ್ಶನ ವೀಕ್ಷಣೆ
ಹಿರಿಯರಾದ ಕೆಳದಿ ಗುಂಡಾಜೋಯಿಸರ ಮಾರ್ಗದರ್ಶನ
ತಮ್ಮ ಕೃತಿ 'ಹಳೇಬೇರು-ಹೊಸಚಿಗುರು' ಕುರಿತು ಕವಿ ಸುರೇಶರ ನುಡಿ
ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿ ದಂಪತಿಗಳಿಗೆ ಸನ್ಮಾನ

ಸಂಬಂಧಗಳ ಅನ್ವೇಶಣೆಗೆ ನೆರವಾದ ಶ್ರೀ ಶೇಷಗಿರಿರಾಯರಿಗೆ ಸನ್ಮಾನ
ಕೆಳದಿ ಗುಂಡಾಜೊಯಿಸ್ ದಂಪತಿಗಳಿಗೆ ಗೌರವ
ಡಾ. ಕೆ.ವೆಂಕಟೇಶಜೋಯಿಸ್ ದಂಪತಿಗಳಿಗೆ ನೆನಪು
ಡಾ. ಕೆಳದಿ ಕೃಷ್ಣಾಜೋಯಿಸರಿಗೆ ನೆನಪಿನ ಉಡುಗೊರೆ
ಸಾ.ಕ.ಕೃಷ್ಣಮೂರ್ತಿಗಳಿಗೆ ಗೌರವ

ನಾಗರಾಜಭಟ್ ದಂಪತಿಗಳಿಗೆ ನೆನಪಿನ ಕಾಣಿಕೆ
ಕೆ.ರಾಮರಾಯರಿಗೆ ಗೌರವ
ಕೆಳದಿ ರಾಮಮೂರ್ತಿ ದಂಪತಿ
ಕೆ.ಶ್ರೀಕಂಠ
ವಿನೋದಾಬಾಯಿಯವರಿಗೆ ಸನ್ಮಾನ
ರಾಮರಾವ್ ದಂಪತಿಗಳು
ಕೆ.ವಿ.ಲಲಿತಾಂಬಾ

ಮಕ್ಕಳಿಂದ ಕವಿ ವೆಂಕಟಸುಬ್ಬರಾವ್ ದಂಪತಿಗಳಿಗೆ ಹೃದಯಸ್ಪರ್ಶಿ ಗೌರವ
ಜಾನಕಮ್ಮ
ಸಾ.ಕ.ಕೃಷ್ಣಮೂರ್ತಿಯವರ ಬಳಗ
ನಾಗರಾಜಭಟ್ಟರ ಬಳಗ
ವಿನೋದಾಬಾಯಿಯವರ ಬಳಗ
ಕವಿ ವೆಂಕಟಸುಬ್ಬರಾಯರ ಬಳಗ
ಭೋಜನ
ಭೋಜನದೊಂದಿಗೆ ಸಲ್ಲಾಪ

Sunday, November 28, 2010

ಹೂವ ಬೇಡಿದ ಹಾಡು

ರಾಗ|| ಕಮಾಚ್                     ತಾಳ: ಮಿಶ್ರಛಾಪು

ಹೂವ ಕೊಡೆ ದೇವಿ | ಹೂವ ಕೊಡೆ
ಯಾವಾಗಲೂ ನಿಮ್ಮ ಸಿರಿ ಮುಡಿಯುಳಗಿರ್ಪ                             || ಪ ||

ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿ
ಪರಿಪರಿ ಧೂಪಧೂಮಗಳನಿಕ್ಕಿ
ಪರಿಮಳಿಸುವ ಸಂಪಿಗೆಯ ಪೂಸರವ ಸಿಂ-
ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ                                || 1 ||

ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆ
ಸರಸಿಜ ಮೊದಲಾದ ಕುಸುಮದಿಂದ
ಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪ
ಅರಳಿದ ಮಲ್ಲಿಗೆ ಹೂವ ಕೊಡೆ ಹೂವ                                        || 2 ||

ವ್ಯೋಮಗಂಗೆಯಯೊಳಿಂದ ಹೇಮದಾಮರಸವ
ಕಾಮಿನಿಯರು ಕೊಯ್ ತಂದದನು
ಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-
ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ                   || 3 ||

ಮುತ್ತಿನ ಲಹರಿಯ ರತ್ನದ ರಾಗಟೆಯ
ಸುತ್ತುಮುತ್ತಲೂ ರಾರಾಜಿಸುವ
ಪುತ್ಥಳಿಯ ಚಿನ್ನದಂತೆ ಘಮಘಮಿಸುವ
ಉತ್ತಮವಾದ ಸುವರ್ಣದ ಕೇದಗೆ ಹೂವ                                  || 4 ||

Tuesday, November 23, 2010

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನಗಳ ವರದಿ

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನದ ವರದಿ
     ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು ಈಗ ಇದ್ದು ಹನ್ನೊಂದನೆಯ ಪೀಳಿಗೆ ಆಗಮನ ಸನ್ನಿಹಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಈ ಮನೆತನದ ಕುಟುಂಬಗಳ ಸದಸ್ಯರುಗಳು ಹಲವೆಡೆ ಚದುರಿ ಹೋಗಿದ್ದು, ಅವರುಗಳನ್ನು ಗುರುತಿಸಿ ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯ ೨೦೦೭ ರಲ್ಲಿ ಚಾಲನೆ ಪಡೆಯಿತು. ಪರಸ್ಪರ ಪರಿಚಯವೇ ಇಲ್ಲದ, ಸಂಪರ್ಕ ಸಹ ಇಲ್ಲದಿದ್ದ ಬಂಧುಗಳನ್ನು  ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ಕವಿ ಸುರೇಶರ ಮನೆಯಲ್ಲಿ ನಡೆದ ಪ್ರಥಮ ಸಮ್ಮೇಳನ ಅವಿಸ್ಮರಣೀಯ, ಅನುಪಮವಾಗಿದ್ದು, ಇದಕ್ಕಾಗಿ ಕವಿ ಸುರೇಶರವರು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ೨೫-೧೨-೨೦೦೭ರಲ್ಲಿ ಕೆಳದಿಯಲ್ಲಿ ದ್ವಿತೀಯ ವಾರ್ಷಿಕ ಸಮ್ಮೇಳನ ಕೆಳದಿ ರಾಮಮೂರ್ತಿ ಸಹೋದರರ ಪ್ರಾಯೋಜಕತ್ವದಲ್ಲಿ ನಡೆಯಿತು.

ಪ್ರಥಮ ವಾರ್ಷಿಕ ಸಮಾವೇಶ - ೨೮-೦೧-೨೦೦೭
     'ನಾವು - ನಮ್ಮವರು' ಶೀರ್ಷಿಕೆಯಲ್ಲಿ ಕವಿ ಸುರೇಶರ ಶಿವಮೊಗ್ಗದ ಸ್ವಗೃಹದಲ್ಲಿ ಕವಿ ಲಿಂಗಣ್ಣ ವೇದಿಕೆಯಲ್ಲಿ ಬೆಳಿಗ್ಗೆ  ೮-೦೦ ಗಂಟೆಗೆ ಆರಂಭವಾದ ಕಾರ್ಯಕ್ರಮಗಳು ಸಾಯಂಕಾಲ ೬-೦೦ ಗಂಟೆಯವರೆಗೆ ನಡೆದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿತೆಂದರೆ ಉತ್ಪ್ರೇಕ್ಷೆಯಲ್ಲ. ಸುಮಾರು ೧೫೦ ಸದಸ್ಯರುಗಳು ಪೂರ್ಣಕಾಲ ಸಕ್ರಿಯವಾಗಿ ಪಾಲ್ಗೊಂಡ ಈ ಸಮಾವೇಶ ಕೆಳಕಂಡ ಭಾವನಾತ್ಮಕ ಕ್ಷಣಗಳಿಗೆ. ಕಾರ್ಯಗಳಿಗೆ ಸಾಕ್ಷಿಯಾಯಿತು.
                                                          ಸಮಾವೇಶ ನಡೆದ ಕವಿ ಸುರೇಶರ ಸ್ವಗೃಹ
೧. ಅರುಣ ಪಾರಾಯಣ: ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಬಂಧುಗಳ ಮಿಲನವಾಗುತ್ತಿರುವ ನಿಮಿತ್ತ ಶ್ರೀ ಸಾ.ಕ. ಕೃಷ್ಣಮೂರ್ತಿ, ಡಾ. ಕೃಷ್ಣಜೋಯಿಸ್ ಮತ್ತು ಶ್ರೀ ರಾಮಾಜೋಯಿಸ್ ರವರು ಅರುಣಪಾರಾಯಣ ಮಾಡಿದರು.
೨. ಪ್ರಾಸ್ತಾವಿಕ: ಸಮಾವೇಶದ ಪ್ರಸ್ತುತತೆ, ಕಾರ್ಯಕ್ರಮಗಳ ವಿವರ ಕುರಿತು ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಪರಿಚಯ
                                     * * * * *  * * * * *

೩. ಗಣ್ಯರು ಹಾಗೂ ಕುಟುಂಬದ ಹಿರಿಯರಿಂದ ಜ್ಯೋತಿ ಬೆಳಗುವುದು - ವೇದಘೋಷದೊಂದಿಗೆ

೪. ಬಂಧುಗಳ ಪರಸ್ಪರ ಪರಿಚಯ 
೫. ಪುಸ್ತಕ ಬಿಡುಗಡೆ: ಕವಿ ಸುರೇಶ ಸಂಪಾದಿಸಿದ 'ಹಳೆ ಬೇರು - ಹೊಸ ಚಿಗುರು' ಪುಸ್ತಕ ಬಿಡುಗಡೆ ಮಾಡಿದ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಗಳಿಂದ ಸ್ತುತ್ಯಾರ್ಹ ಕಾರ್ಯದ ಪ್ರಶಂಸೆ


೬. ವಸ್ತು ಪ್ರದರ್ಶನ: ಕೆಳದಿ ಗುಂಡಾ ಜೋಯಿಸರು ಉದ್ಘಾಟಿಸಿದ ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆ ಪರಿಚಯಿಸುವ ಪುಟ್ಟ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪರಸ್ಪರ ಅಂತಃಕರಣ ಮತ್ತು ನಿರಂತರ ಸಂಪರ್ಕದ ಬಗ್ಗೆ ಗುಂಡಾಜೋಯಿಸರ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

೭. ಸನ್ಮಾನ: 'ಹಳೇ ಬೇರು ಹೊಸಚಿಗುರು' ಪುಸ್ತಕ ರಚನೆಗೆ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಹಿರಿಯರಾದ ಶ್ರೀಯುತರಾದ ಸಾ.ಕ.ಕೃಷ್ಣಮೂರ್ತಿ, ರಾಮರಾವ್, ನಾಗರಾಜಭಟ್ಟ, ರಾಮಾಜೋಯಿಸ್, ವಿನೋದಮ್ಮ, ಸೀತಾಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಪದ್ಮಾವತಮ್ಮ, ಗಿರಿಜಮ್ಮ, ರಾಮಮೂರ್ತಿ, ಹರಿಹರದ ರಾಮರಾವ್ ಮೊದಲಾದವರನ್ನು ಯಥೋಚಿತವಾಗಿ ಸನ್ಮಾನಿಸಲಾಯಿತು.
     ಕವಿ ಮನೆತನದ ಸದಸ್ಯರ ಪೈಕಿ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳನ್ನು ಅವರ ಮಕ್ಕಳು ಸನ್ಮಾನಿಸಿ ಗೌರವ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಸಲ್ಲಿಸಿದ್ದು ತುಂಬಾ ಭಾವನಾತ್ಮಕ ವಾಗಿತ್ತು. ಸನ್ಮಾನಿತರುಗಳು ಹಾಗೂ ಗಣ್ಯರು ಹೃದಯ ಮುಟ್ಟುವ ಮಾತುಗಳನ್ನಾಡಿದರು.




     ೮. ವಿಚಾರ ವಿನಿಮಯ: ಮುಂದಿನ ಸಮಾವೇಶ, ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.     ಕಾರ್ಯಕ್ರಮದಲ್ಲಿ ಶ್ರೀಮತಿ ಕಾಶಿಬಾಯಿ, ಅಂಬಿಕಾ, ದೀಪಕ್, ಮುಂತಾದವರು ತಮ್ಮ ಸುಮಧುರ ಗಾಯನದಿಂದ ರಂಜನೆ ನೀಡಿದರು. ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ ರಂದು ಇದೇ ರೀತಿ ಒಟ್ಟಿಗೆ ಸೇರಬೇಕೆಂದು ನಿರ್ಧರಿಸಲಾಯಿತು. ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.
-ಕವಿನಾಗರಾಜ್.(ಡಿಸೆಂಬರ್, 2008ರ 'ಕವಿಕಿರಣ' ಪತ್ರಿಕೆಯಲ್ಲಿ ಪ್ರಕಟಿತ ವರದಿ ಆಧರಿಸಿ).

Monday, November 22, 2010

ಕೆಳದಿ ಕವಿ ಲಿಂಗಭಟ್ಟ (ಕವಿ ಲಿಂಗಣ್ಣ)

ಕೆಳದಿ ಕವಿ ಲಿಂಗಭಟ್ಟ       (ಕವಿ ಲಿಂಗಣ್ಣ)               
        ಕ್ರಿ,ಶ. ೧೭೫೦ ರ ಸುಮಾರಿನಲ್ಲಿದ್ದ ಕವಿ ಲಿಂಗಣ್ಣ ಕೆಳದಿ ಸಂಸ್ಥಾನದ ಆಸ್ಥಾನ ಕವಿ, ಇವರ ನಂತರ ಇವರ ವಂಶಸ್ಥರಿಗೆ ಕವಿ ಎಂಬ ಉಪನಾಮ ಬಂದಿದೆ. ಆದುದರಿಂದ ಕವಿ ವಂಶಕ್ಕೆ ಮೂಲಪುರುಷರು ಈ ಕವಿ ಲಿಂಗಣ್ಣ. ಇವರ ತಂದೆ ವೆಂಕಟಪ್ಪ (ತಾಯಿಯ ವಿವರ ತಿಳಿದಿಲ್ಲ). ಇವರ ವಾಸ ಸಾಗರ - ಕೆಳದಿ ಆಗಿತ್ತೆಂದೂ, ಇವರಿಗೆ ಇದೇ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಜಮೀನು ಇತ್ತೆಂದೂ ಉಲ್ಲೇಖಗಳು ತಿಳಿಸುತ್ತವೆ. ಕೆಳದಿ ಮ್ಯೂಜಿಯಂಬಲ್ಲಿರುವ ನವಾಬ್ ಹೈದರಾಲಿಯ ಸಹಿ ಇರುವ ಈ ಅಪೂರ್ವ ಚಾರಿತ್ರಿಕ ದಾಖಲೆಯಲ್ಲಿ ಕೆಳದಿ ಕವಿ ಸುಬ್ಬಾಭಟ್ಟ - ಶ್ಯಾಂಭಟ್ಟರಿಗೆ ಕೆಳದಿ ಅರಸರು ನೀಡಿದ್ದ ಇನಾಂ ಭೂಮಿಯು ಹೈದರನ ಪರಿವಾರದಲ್ಲಿ ಜಫ್ತಿಯಾಗಿದ್ದುದನ್ನು ಕೆಳದಿ ರಾಜಧಾನಿ ನಗರ (ಬಿದನೂರು) ದಿವಾನ್ ಅವಲ್ ನರಸಪ್ಪಯ್ಯನವರು ತಪ್ಪಿಸಿ ಸದರಿ ಕವಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಬಗ್ಗೆ ವಿವರಗಳಿವೆ. ಕೆಳದಿ ಕವಿ ಲಿಂಗಣ್ಣನವರ ಗ್ರಂಥಗಳಿಂದ ಇವರು ಎರಡನೇ ಬಸಪ್ಪನಾಯಕನ ಕಾಲದಲ್ಲಿ (೧೭೩೯-೧೭೫೫)ಜೀವಿಸಿರಬಹುದೆಂದು ತೋರುತ್ತದೆ.
       ಒಮ್ಮೆ ಲಿಂಗಣ್ಣನವರು ಕೊಲ್ಲೂರಿನ ಶ್ರೀ ಮೂಕಾಂಬಿಕೆಯ ಸನಿಹದಲ್ಲಿ ಭಕ್ತಿಯಿಂದ ದೇವಿಯನ್ನು ಕುರಿತು ಪ್ರಾರ್ಥಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಗ ತಾನೇ ಕೊಲ್ಲೂರಿಗೆ ಆಗಮಿಸಿದ್ದ ಕೆಳದಿ ನಾಯಕ ನಿಗೆ ಈತನ ಗಾನಮಾಧುರ್ಯ ಬಹು ಮೆಚ್ಚಿಗೆ ಯಾಯಿತು. (ಕೆಳದಿ ಅರಸರಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕೆಯೂ ಕುಲದೇವರಲ್ಲಿ ಒಂದಾಗಿತ್ತು). ತುಸು ಸಮಯದಲ್ಲಿಯೇ ದೇವಿಯ ಸನಿಹದಿಂದ ಪುಷ್ಪ ವೊಂದು ಲಿಂಗಣ್ಣನ ಮಡಿಲಿಗೆ ಬಿತ್ತು. ಇದನ್ನು ಕಂಡು ಕೆಳದಿ ನಾಯಕನು ಈತನ ಪೂರ್ವೇತಿಹಾಸವನ್ನು ತಿಳಿದು ತನ್ನ ಆಸ್ಥಾನದಲ್ಲಿ ಆಸ್ಥಾನ ಕವಿಯನ್ನಾಗಿ ಸೇರಿಸಿಕೊಂಡನು.* (ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ದಿ. ಜಿ.ವಿ.ಕೆ. ರಾವ್‌ರವರ ಮಾವನವರಾದ ಶ್ರೀ ಮಾಧವರಾಯರು ತೆಗೆದುಕೊಂಡು ಹೋಗಿದ್ದ ಸಾಗರದ ಕವಿ ಲಿಂಗಣ್ಣಯ್ಯ ನವರು ರಚಿಸಿದ್ದ ವೈದೀಕ ಧರ್ಮದ ಶಾಸ್ತ್ರೀಯ ವಿಚಾರ ಎಂಬ ಹಸ್ತ ಪ್ರತಿಯಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ ಎಂದು ಕೆಳದಿಯ ಶ್ರೀ ಗುಂಡಾಜೋಯಿಸ್ ರವರಿಂದ ತಿಳಿದು ಬರುತ್ತದೆ.) *ಮಾನವಿಕ ಕರ್ನಾಟಕ, ಸಂ.೨, ೧೯೭೩, ಪು.೬೧ - ಮೈಸೂರು ವಿಶ್ವವಿದ್ಯಾಲಯ.  
  ಕವಿ ಲಿಂಗಣ್ಣ ರಚಿಸಿದ ಕೆಲವು ಕೃತಿಗಳ ಸೂಕ್ಷ್ಮ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
೧. ಕೆಳದಿ ನೃಪವಿಜಯ: (ಪುನರುಕ್ತಿಯಾಗುವುದರಿಂದ ಈ ಭಾಗ ಕೈಬಿಟ್ಟಿದೆ).
೨. ದಕ್ಷಾಧ್ವರ ವಿಜಯ: ಇದೊಂದು ಖಂಡ ಕಾವ್ಯ. ಸ್ಕಂದ ಪುರಾಣದಲ್ಲಿ ವ್ಯಾಸ ಮಹರ್ಷಿಯ ಶಿಷ್ಯನಾದ ಸೂತನು ಶೌನಕಾದಿ ಮುನಿಗಳನ್ನು ನೈಮಿಷಾರಣ್ಯದಲ್ಲಿ ಸಂಧಿಸಿದಾಗ ಮಹಾದೇವನ ಮಹಾತ್ಮೆಯನ್ನು ಕೇಳು ತ್ತಾರೆ. ಆಗ ಅಲ್ಲಿ ದಕ್ಷನ ವಿಷಯ ಬರುತ್ತದೆ. ಬ್ರಹ್ಮ ಪುತ್ರನಾದ ದಕ್ಷನಿಗೆ ತಾನೇ ಶ್ರೇಷ್ಠನೆಂಬ ಗರ್ವ. ದಕ್ಷನು ಬ್ರಹ್ಮನ ಮಾತಿನಂತೆ ತನ್ನ ಮಗಳಾದ ಸತೀದೇವಿಯನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಿದನಂತೆ. ಮುಂದೊಮ್ಮೆ ಇಂದ್ರಾದಿ ಗಳೂ, ಮಹರ್ಷಿಗಳೂ ನೈಮಿಷಾರಣ್ಯಕ್ಕೆ ಬಂದಾಗ ಇವರನ್ನು ಸ್ತುತಿಸಿದರಂತೆ. ಆದರೆ ಶಿವನು ಅವರನ್ನು ಎದ್ದು ಗೌರವಿಸಲಿಲ್ಲ. ಇದರಿಂದ ಸಿಟ್ಟುಗೊಂಡ ದಕ್ಷನು ಶಿವನನ್ನು ಯಜ್ಞ ಬಾಹ್ಯನನ್ನಾಗಿ ಮಾಡಿರುವುದಾಗಿ ತಿಳಿಸುತ್ತಾನೆ. ತಿಳಿ ಹೇಳಲು ಮುಂದಾದ ನಂದಿಗೂ ಶಾಪವಿತ್ತು ಕನಖಲ ಎಂಬ ಕ್ಷೇತ್ರದಲ್ಲಿ ಯಜ್ಞಕ್ಕೆ ಮುಂದಾಗುತ್ತಾನೆ. ಇದು ಶಿವ ದ್ರೋಹವಾಗಿ ಪರಿಣಮಿಸಿ ನಡೆಸಿದ ಯಾಗವೇ ದಕ್ಷಾಧ್ವರವೆಂದು ಪುರಾಣ ಪ್ರಸಿದ್ಧವಾಗಿದೆ.
     ದಕ್ಷಾಧ್ವರ ವಿಜಯ ಕಾವ್ಯದ ಕೆಲವು ಸಾಲು ಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದ್ದು, ಇವುಗಳು ಸಂಗೀತಾಸಕ್ತರಿಗೆ ಹೆಚ್ಚು ಪ್ರಿಯವಾಗಬಹುದು; ಸಂಗೀತ ಶಾಸ್ತ್ರದಲ್ಲೂ ಕವಿಗೆ ಇದ್ದ ಪ್ರೌಢಿಮೆಯನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ.
ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ| ಮುನಿಭಾವಿತೆ|
ಧರಣೀಧರ ವರಜಾತೆ|
ಬಾಲೆ ಸಕಲ ಜಗನ್ಮೋಹಿನಿ| ಸಿಂಹವಾಹಿನಿ|
ಲಾಲಿತ ಗಣಪ ಸೇನಾನಿ|| . .(ಭೈರವಿ ರಾಗ)
ಕಲ್ಯಾಣಿ ಕುರುವಾಣಿ| ಕಲ್ಯಾಣಂ ಕುರುವಾಣಿ ಸುವೇಣಿ|
ಕಲ್ಯಾಣಿ ವರದೇ ಬ್ರಹ್ಮಾಣಿ|| . .(ಬಿಲಾವರಿ ರಾಗ)
ಸಂತತಮೀಡೇ ಶಂಕರಂ| ಶಂಕರಂ| ಬ್ರಹ್ಮಾದಿದೇವ ಕಿಂಕರಂ|  ವಾರಿಜಭವ ಕಂಕರಂ| ಕುಂಡಲಿತ ದರ್ವೀಕರಂ| ಬಾಲಶೀತಾಂಶೂ ಶೇಖರಂ| ಸಂತತ ಮೀಡೇ ಶಂಕರಂ || (ಮೋಹನಕಲ್ಯಾಣಿ ರಾಗ)
ಲಿಂಗಂ ಭಜೇ ದಿವ್ಯ ಲಿಂಗಂ ಭಜೇ|ಮಹಾಲಿಂಗಂ ಭಜೇ ಶಿವಲಿಂಗಂ ಭಜೇ|| (ಪೂರ್ವಿ ಕಲ್ಯಾಣಿ ರಾಗ)
ಪಾಲಯಮಾಂ ಶಂಕರ| ಪೋಷಿತ ಸುರ|       ಜಾಲ ವ್ಯೋಮ ಗಂಗಾಧರಾ|| ನೀಲಲೋಹಿತ ಭೂರಲೋಲ ಗಾನ ವಿಲೋಲ|| ಕಾಲ ಕಾಲ ಕರುಣಾಲವಾಲ ಧೃತ| ಶೂಲ ನೀಲ ಫಾಲ ವಿಲೋಚನ|| (ತೋಡಿ ರಾಗ)
೩. ಶಿವಪೂಜಾ ದರ್ಪಣ:  ಇದೊಂದು ಖಂಡ ಕಾವ್ಯ. ೫೮೫ ಸಂಖ್ಯೆಯ ಕಂದ, ವೃತ್ತ, ವಚನ, ಗದ್ಯಗಳಿಂದ ಕೂಡಿದ ಕೃತಿ. ಶಿವಪೂಜೆ ಈ ಕಾವ್ಯದ ವಸ್ತು. ಭಕ್ತಿಮಾರ್ಗದ ವೈಶಿಷ್ಟ್ಯ ಇದರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ೧೭ನೇ ಶತಮಾನದಲ್ಲಿ ಪೂಜಾವಿಧಿಯನ್ನು ಕನ್ನಡದಲ್ಲಿ ನಿರೂಪಿಸಿದ ಪ್ರಥಮ ಪ್ರಯತ್ನ ಇದೆನ್ನಬಹುದು, (ಇತ್ತೀಚೆಗೆ ಹಿರೇಮಗಳೂರು ಕಣ್ಣನ್ ರವರೂ ಕೂಡಾ ಪೂಜಾ ಮಂತ್ರಗಳನ್ನು ಕನ್ನಡದಲ್ಲಿ ಅಳವಡಿಸಿರುವುದೂ ಉಲ್ಲೇಖಾರ್ಹ). ಶಿವಪೂಜಾ ದರ್ಪಣ ಆಸ್ತಿಕರ ಕೈಪಿಡಿ; ಶಿವಭಕ್ತರ ಆರಾಧನಾ ಗ್ತಂಥವೆಂದೂ ಬಣ್ಣಿಸಲಾಗಿದೆ.
     ಕವಿಯು ಪ್ರಥಮಾಶ್ವಾಸದಲ್ಲಿ ಶಿವ - ಪಾರ್ವತಿ ಯನ್ನು, ವಿಘ್ನೇಶ್ವರನನ್ನು, ಶಾರದೆಯನ್ನು, ವಾಲ್ಮೀಕಿ, ಕಾಳಿದಾಸ, ಪಂಪ, ರಾಘವಾಂಕರಂಥ ಮಹಾನ್ ಕವಿಗಳನ್ನು ಸ್ಮರಿಸುವ ಪರಿ ಅವರ ಉತ್ತಮ ಸಂಸ್ಕಾರ ವನ್ನು ಹಾಗೂ ದೇವರ ಮತ್ತು ವಿದ್ವಾಂಸರ ಮೇಲಿರುವ ಅಚಲ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಪೂಜೆಯ ವಿವಿಧ ಹಂತಗಳನ್ನು ಬಲು ಸುಂದರವಾಗಿ ನಿರೂಪಿಸ ಲಾಗಿದ್ದು, ಶಿವನಿಗೆ ನೈವೇದ್ಯವನರ್ಪಿಸುವಾಗ ಕೃತಿಯಲ್ಲಿ ಬರುವ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಕೊಟ್ಟೆಯ ಕಡುಬಂ ಗೋಧಿಯ|
ರೊಟ್ಟಿಯನಾ ಕಡಲೆಗಡುಬ ಪೊಯ್ಗಡುಬಮಂ ನುಂ
ಪಿಟ್ಟ ವೃತ್ತಾಸು ಮುಳುಕಗ|
ಳೊಟ್ಪೊಜೆಗಳನಳಕನೇತ್ರ ಭಕ್ಷಿಪುದೊಲವಿಂ||
ಹೆರೆದುಪ್ಪಂ ತಿಳಿದುಪ್ಪಂ|
ನೊರೆದುಪ್ಪಂ ಕಡಿದುಪ್ಪ ನೀರ್ಮಳಲ್ದುಪ್ಪಂ||
ನೆರೆಯುದಿರ್ದುಪ್ಪಮೆನಿಪ್ಪೀ|
ಪರಿಪರಿದುಪ್ಪಗಳ ಸವಿಯ ನೋಳ್ಪುದುಮೇಶಾ||

     ಶಿವಪೂಜಾ ದರ್ಪಣದ ಪ್ರತಿ ಅಧ್ಯಾಯದ ಅಂತ್ಯದಲ್ಲಿ ಕವಿ ತನ್ನ ಹೆಸರು ಹಾಗೂ ಗೋತ್ರ (ಹರಿತಸ)ಗಳನ್ನು ಹೇಳಿಕೊಂಡಿರುವುದನ್ನು ಗಮನಿಸ ಬಹುದಾಗಿದೆ. ಈ ಕಾವ್ಯದ ಅಂತ್ಯದಲ್ಲಿ ಕವಿ ಬರೆದ ಮುಕ್ತಾಯ ಇಂತಿದೆ. (ಬಹುಶಃ ಶಿವಪೂಜಾದರ್ಪಣ ದಲ್ಲಿ ವಿವರವಾಗಿ ನಿರೂಪಿಸಿರುವ ಶಿವ ಪೂಜೆಯ ಪ್ರತಿ ಹೆಜ್ಜೆಗಳ ಸಾರಾಂಶವೇ ಇದರಲ್ಲಿದೆಯೆನ್ನಲಡ್ಡಿಯಿಲ್ಲ).
ಇದಖಿಲ ಸುರನರೋರಗ ನಿಕರ ಮಕುಟ ತಟ ಘಟಿತ ಮಾಣಿಕ್ಯ
ಮಯೂಖಮಂಜರೀಪುಂಜ ಶಬಲೀಕೃತ ಕನತ್ಕನಕ ಪಾದುಕಾ
ವಿರಾಜಮಾನ ಶ್ರೀಮತ್ಸಾಂಬ ಸದಾಶಿವ ಚರಣಾರವಿಂದ ದ್ವಂದ್ವ ಭಕ್ತಿರಸ ಮಕರಂದಮತ್ತ ಮಧುಕರಾಯಣಮಾನಸ ಭೂಸುರ ಕುಲಪ್ರದೀಪ ಹರಿತಸ ಗೋತ್ರೋದ್ಭವ ವೆಂಕಪಾತ್ಮಜ ಲಿಂಗಣಸೂರಿ ವಿರಚಿತ
ಶಿವಪೂಜಾದರ್ಪಣ ಪ್ರಬಂಧದೊಳ್ ರಂಗಪೂಜಾ ದೀಪಾರಾಧನ
ವಿವಿಧ ನೀರಾಜ(ನ) ವಸ್ತ್ರ (ಸಮ)ರ್ಪಣ ಮಂತ್ರಪುಷ್ಪ ಪ್ರದಕ್ಷಿಣ
ನಮಸ್ಕಾರ ಪ್ರಾರ್ಥನ ನಾನಾ ವಿಧ ವಿನಿಯೋಗ ಸೇವಾ ಸಮರ್ಪಣ
ಋಗ್ವೇದಾದಿ ವೇದ ವೇದಾಂಗ ಶಾಸ್ತ್ರಪುರಾಣಾಗಮ ತಂತ್ರೀ ಪಟಹಾದಿ ವಾದ್ಯ ಸುಷಿರ ವಾದ್ಯಾದಿ ವಾದುವಾದನ ಶ್ರವಣ ನೃತ್ಯ ವೃಷಭ ತುರಂಗಾರೋಹಣಾದಿ ನಾನಾ ವಿಧಯಾನೋತ್ಸವ ದೋಲಾರೋಹಣ ಖೇಲನ ಮಣಿಮಂಟಪ ಪ್ರ(ಧಾನ) ಮಂಗಲಾರತಿಕ ಸಮರ್ಪಣ ಕ್ಷೀರ ಪಾನಾತ್ಮಾರೋಪಣಾದಿ ಪೂಜೋಪಚಾರ ಸಮರ್ಪಣ ಕೃತಿ ಪ್ರಶಂಸಾತಚ್ಛ್ರವಣ ಫಲ ವಿವರಣಂ ಪಂಚಮಾಶ್ವಾಸಂ ಸಂಪೂರ್ಣಂ

     ಕವಿ ಲಿಂಗಣ್ಣ ಪಾರ್ವತಿ ಪರಿಣಯ ಮತ್ತು ಶಿವಕಲ್ಯಾಣ (ಯಕ್ಷಗಾನ) ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ.[ದಕ್ಷಾಧ್ವರ ವಿಜಯ (ಮೇಲೆ ಉಲ್ಲೇಖಿಸಿದ ಕೆಲವು ರಚನೆಗಳ ಸಂಪೂರ್ಣ ಸಾಹಿತ್ಯ ಇದರಲ್ಲಿದೆ) ಮತ್ತು ಶಿವಪೂಜಾ ದರ್ಪಣ ಕೃತಿಗಳನ್ನು ಕೆಳದಿಯ ಡಾ: ವೆಂಕಟೇಶ ಜೋಯಿಸರು ಸಂಪಾದಿಸಿ ೨೦೦೨ ರಲ್ಲಿ ಪ್ರಕಟಿಸಿದ್ದಾರೆ.]
     ಒಟ್ಟಿನಲ್ಲಿ ಹೇಳಬೇಕೆಂದರೆ ಕವಿ ಲಿಂಗಣ್ಣ ಓರ್ವ ಉತ್ತಮ ಇತಿಹಾಸಕಾರ, ಶ್ರೇಷ್ಠ ಕವಿ, ಸಂಗೀತಜ್ಞ ಮತ್ತು ಆಸ್ತಿಕ ಪುರುಷ. ಈತ ರಚಿಸಿರುವ ಅನೇಕ ಕೃತಿಗಳು ಸಂಶೋಧನೆಗೆ ಅರ್ಹವಾಗಿದ್ದು, ಚರಿತ್ರೆಯಲ್ಲಿ ಮತ್ತು ಕಾವ್ಯದಲ್ಲಿ ಆಸಕ್ತಿ ಹೊಂದಿದವರೆಲ್ಲರೂ ಈ ದಿಶೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಇನ್ನೂ ಉತ್ತಮವಾದ ಸಂಗತಿ ಗಳನ್ನು ಬೆಳಕಿಗೆ ತರಬಹುದಾಗಿದೆ. ಈತನ ನಂತರದ ಪೀಳಿಗೆಯವರಾದ ಸಾಗರದ ಕವಿ ಲಿಂಗಣ್ಣಯ್ಯ (ಶ್ರೇಷ್ಠ ಚಿತ್ರಕಾರ - ರಾಮಾಯಣ ಮತ್ತು ಭಾಗವತವನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ. ಚಿತ್ರ ರಚನೆ, ಮುದ್ರಣಕಲೆ, ಛಾಯಾಗ್ರಹಣ ಕಲೆ, ಮುಂತಾದ ವಿಷಯಗಳ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ). ಇವರ ಮೊಮ್ಮಗ ಕೆಳದಿ ಗುಂಡಾಜೋಯಿಸ್ (ಕೆಳದಿ ಮ್ಯೂಜಿಯಂ ಸಂಸ್ಥಾಪಕರು, ಸಂಶೋಧಕರು, ಅನೇಕ ಇತಿಹಾಸ ಕೃತಿಗಳ ರಚನೆಕಾರರು, ರಾಜ್ಯ ಪ್ರಶಸ್ತಿ ವಿಜೇತರು) ಮತ್ತು ಕವಿ ವಂಶದ ಇತರ ಅನೇಕರು ವಿವಿಧ ಕ್ಷೇತ್ರಗಳಲ್ಲಿ (ಸಂಗೀತ, ಸಾಹಿತ್ಯ, ಕಲೆ, ಇಂಜನಿಯರಿಂಗ್, ವೈದ್ಯಕೀಯ, ಆಧ್ಯಾತ್ಮಿಕ. ಇತ್ಯಾದಿ) ತಮ್ಮದೇ ಆದ ಅನುಪಮ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ಗಳನ್ನು ನೀಡುತ್ತಿದ್ದು, ಕವಿ ಲಿಂಗಣ್ಣನ ಹಾದಿಯಲ್ಲಿಯೇ ಸಾಗುತ್ತಿರುವುದು ಬಹುಶಃ ಕವಿ ಲಿಂಗಣ್ಣನ ಮತ್ತು ಕುಲಾರಾಧ್ಯ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕೃಪೆಯೆಂದೇ ಹೇಳಬಹುದು. 

  - ಕವಿ ವೆಂ. ಸುರೇಶ್
   (ಲೇಖಕರ 'ಉತ್ಕೃಷ್ಟದೆಡೆಗೆ' ಪುಸ್ತಕದಿಂದ ಆಯ್ದ ಲೇಖನ) 
(ಡಿಸೆಂಬರ್, 2008ರ 'ಕವಿಕಿರಣ' ಪತ್ರಿಕೆಯಲ್ಲಿ ಪ್ರಕಟಿತ ಲೇಖನ).    

Monday, November 15, 2010

ಕೆಳದಿ ಲಿಂಗಣ್ಣ ಕವಿ

ಕೆಳದಿ ಲಿಂಗಣ್ಣ ಕವಿ
     ಕರ್ನಾಟಕದ ಚರಿತ್ರೆಯಲ್ಲಿ 'ಕೆಳದಿ ನೃಪವಿಜಯ' ಕೃತಿಕಾರ ಕವಿ ಲಿಂಗಣ್ಣನ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಚಿರ ಪರಿಚಿತವಾದುದು. ಸುಮಾರು ೧೭೫೦ ರಲ್ಲಿ ಬಾಳಿದ ಈತನು ಕೆಳದಿ ಸಂಸ್ಥಾನದ ಆಸ್ಥಾನ ಕವಿಯಾಗಿದ್ದನು. ಕವಿ ಸುರೇಶರವರು ತಮ್ಮ 'ಹಳೆ ಬೇರು ಹೊಸ ಚಿಗುರು' ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಲಿಂಗಣ್ಣನನ್ನು ಪರಿಚಯಿಸಿರುವುದರಿಂದ ಚರ್ವಿತ ಚರ್ವಣ ಅನಗತ್ಯ.
      ತಾಳೆಯೋಲೆ ಹಸ್ತಪ್ರತಿಯಲ್ಲಿ    "ತಿಳಿಯಲ್ಕೀ ಕೃತಿನಾಮಂ  ಕೆಳದೀನೃಪವಿಜಯ ಮೆಂದಿದಕ್ಕಧಿನಾಥಂ   ಕೆಳದಿಪ ರಾಮೇಶ್ವರನಿದನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ" ಎಂಬ ಉಲ್ಲೇಖನವು ಲಿಂಗಣ್ಣನು ವೆಂಕಪ್ಪನ ಮಗನೆಂದು ಉದ್ಗರಿಸಿದೆ. ಈತನ ಕಾಲವು ೧೭೫೦ರ ಸುಮಾರಿನಲ್ಲಿರುತ್ತದೆ. ಸುಸಂಸ್ಕೃತ ಕವಿಯಾಗಿ, ಚಾರಿತ್ರಿಕ ಸಂಶೋಧಕನಾಗಿ ಕೆಳದಿ ಅರಸರ ಆಸ್ಥಾನದಲ್ಲಿ ಶೋಭಿಸಿ ಲಿಂಗಣ್ಣ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ. ಕಿರಿಯ ಬಸವಪ್ಪನ ಕಾಲದ ಕೆಳದಿಯ ಸುವರ್ಣ ಯುಗ ವನ್ನು ಕಂಡಿದ್ದಾನೆ. ಅದು ನಾಶಗೊಂಡ ದುರಂತ ಚಿತ್ರ ವನ್ನು ಅವಲೋಕಿಸಿದ್ದಾನೆ. ಕಡೆಯಲ್ಲಿ ದಾರುಣ ಬದುಕು ಸವೆಸಿದ್ದಾನೆ. ರಾಜಾಶ್ರಯ ತಪ್ಪಿ ಮಕ್ಕಳೂ ಬೇರೆ ಬೇರೆ ಯಾಗಿ ಲಿಂಗಣ್ಣ ತುಂಬಾ ಕಷ್ಟ ಅನುಭವಿಸಿದುದು ವೇದ್ಯ ವಾಗುತ್ತದೆ. ಏನೇ ಇರಲಿ, ಈತನ ಕೃತಿಗಳು ಚಿರಂತನ ವಾದುವುಗಳು.
ಕೃತಿಗಳುಃ-
೧) ಕೆಳದಿನೃಪವಿಜಯ- ಶ್ರೀ ಗುಂಡಾಜೋಯ್ಸರ ಗದ್ಯಾನುವಾದದೊಂದಿಗೆ ೫ಬಾರಿ ಮರು ಮುದ್ರಣ ವಾಗಿದೆ.
೨)   ಶಿವಪೂಜಾದರ್ಪಣ
೩) ಪಾರ್ವತಿ ಪರಿಣಯ-  ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೪) ದಕ್ಷಾಧ್ವರ ವಿಜಯ- ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೫)   ಶಿವಕಲ್ಯಾಣ (ಅಪ್ರಕಟಿತ ಓಲೆಗರಿ)
     ಬೆಂಗಳೂರಿನಲ್ಲಿ ನಾನು ಓದುತ್ತಿದ್ದಾಗ ಲಿಂಗಣ್ಣ ಕವಿಯ ತಾಳೆಯೋಲೆ ಹಸ್ತಪ್ರತಿಗಳನ್ನು ಪ್ರೀತಿಯಿಂದ ನನಗಿತ್ತ (ಲಿಂಗಣ್ಣ ಕವಿ ಪೀಳಿಗೆಯ) ಸೋದರ ಮಾವಂದಿರುಗಳಿಗೆ ಕವಿ ಭಾಂಧವರ ಪರವಾಗಿ ವಿನಮ್ರ ಕೃತಜ್ಞತೆಗಳು. ಈ ತಾಳೆಯೋಲೆ ಆಧಾರದಿಂದ ಕೆಳದಿ ಸಂಶೋಧನಾಲಯ ಮುಖಾಂತರ ಪ್ರಕಟಣೆ ಕಂಡಿರುವುದು ಈಗ ತಮ್ಮ ಮುಂದಿರುವುದನ್ನು ಕಾಣಬಹುದಲ್ಲವೇ?.

        ಕೆಳದಿ ನೃಪವಿಜಯವು ಲಿಂಗಣ್ಣನನ್ನು ಸುಪ್ರಸಿದ್ದ ಇತಿಹಾಸ ಸಂಶೋಧಕನನ್ನಾಗಿಸಿದೆ. ಪೂನಾ ವಿಶ್ವ ವಿದ್ಯಾಲಯದ ಪಾಧ್ಯ್ಯಾಪಕ ಡಾಃ ಚಿಟ್ನೀಸ್ ರವರು-
“The literary sources are generally less authentic than either the inscriptions or the accounts of foreign travellers as far as the present work is concerned. The most important literary works are the Keladi Nrpa Vijayam written by Linganna Kavi or poet Linganna. This work seems to have been written between 1763-1804 AD. This literary work, unlike many others, contains more of historical information than of literary praises about the Keladi monarchs. In the work, the poet mainly gives a narration of the rulers one by one. Incidentally he refers to other contemporary dynasties ruling in India, particularly in Karnataka. Much of the information contained in this work is in agreement with the inscriptions and foreign sources. Hence it seems to be more authentic than other literary works. I have  freely drawn upon this work in my thesis corroborating it, wherever possible, by the inscriptions and other sources. It is interesting to note that Linganna Kavi has, in his work, supplemented the main narration by captions, footnotes given usually at the end of every chapter. They contain the names of various officers serving under their respective rulers. This information is useful in writing about the ministers, military generals and other office bearers.” ಎಂಬುದಾಗಿ ಕೃತಿಯ ಶ್ರೇಷ್ಠತೆಯನ್ನು ಕೊಂಡಾಡಿ ಪಿ.ಎಚ್.ಡಿ. ವಿದ್ವಾಂಸರಿಗೆ ಆಕರಗಳ ಮಹತ್ವವನ್ನು ಪ್ರತಿಬಿಂಬಿಸಿದ್ದಾರೆ. ಕೆಳದಿ ನೃಪ ವಿಜಯದ ಹಸ್ತಪ್ರತಿ ಯೊಂದು ಲಂಡನ್‌ನಲ್ಲಿ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಇದರ ಚಾರಿತ್ರಿಕ ಮಹತ್ವವನ್ನು ಮನಗಂಡ ಕರ್ನಲ್ ಮೆಕೆಂಝಿಯು ೧೭-೧೮ ನೇ ಶತಮಾನದಲ್ಲಿಯೇ ಇದನ್ನು ಇಂಗ್ಲೀಷ್‌ನಲ್ಲಿ ಭಾಷಾಂತರಿಸಿದ ಪ್ರಾಚೀನ ಹಸ್ತಪ್ರತಿಯೂ ಲಂಡನ್ ನಲ್ಲಿದೆ. ಯಾವ ವಿಶ್ವವಿದ್ಯಾಲಯ ಹಾಗೂ ಪಿ.ಹೆಚ್.ಡಿ. ವಿದ್ವಾಂಸನೂ ದಕ್ಷಿಣ ಭಾರತ ಇತಿಹಾಸ ರಚನೆಯಲ್ಲಿ ಲಿಂಗಣ್ಣನ ಈ ಆಕರ ಕೃತಿಯನ್ನು ಆಧರಿಸದಿದ್ದಲ್ಲಿ ಸಂಶೋಧನಾ ಕೃತಿಗೆ ಬೆಲೆ ಬರುವುದಿಲ್ಲವೆಂಬುದು ಕೃತಿ ಹಾಗೂ ವಿದ್ವಾಂಸರ ಹೆಗ್ಗಳಿಕೆ. ಕೆಳದಿ ಸಂಶೋಧನಾಲಯದಲ್ಲಿ ಇದರ ಒಂದೇ ಒಂದು ಓಲೆಗರಿಯಿರುವುದನ್ನು ಮನಗಂಡ ಸರ್ಕಾರ ಗೆಜೆಟೀರ್ ನಲ್ಲಿ ಇದರ ಛಾಯಾ ಚಿತ್ರವನ್ನು ಪ್ರಕಟಿಸಿದೆ. ಪ್ರಸಿದ್ಧ ಏ.ಆರ್. ಕೃಷ್ಣಶಾಸ್ತ್ರಿ ಆದಿಯಾಗಿ ಖ್ಯಾತ ವಿದ್ವಾಂಸರು ಕೆಳದಿ ಕವಿ ಲಿಂಗಣ್ಣನ ಕವಿತಾ ಸಾಮರ್ಥ್ಯ ವನ್ನು ಮನಸಾರೆ ಕೊಂಡಾಡಿದ್ದಾರೆ.
ಸ ಕವಿಃ ಕಥ್ಯತೇ ಸೃಷ್ಟಾ
  ರಮತೇ ಯತ್ರ ಭಾರತೀ!
   ರಸಭಾವ ಗುಣೀ ಭೂತೈಃ
       ಅಲಂಕಾರೈಃ ಗುಣೋದಯೈಃ!!
ಎಂಬಂತೆ ಕೆಳದಿ ಕವಿ ಲಿಂಗಣ್ಣನು ಆದರ್ಶ ಪ್ರಾಯ ಇತಿಹಾಸ ಸಂಶೋಧಕ ಹಾಗೂ ಕವಿಯಾಗಿರುವುದು ಕನ್ನಡಿಗರ ಹೆಮ್ಮೆ. ಇವನ ಸ್ಮರಣೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದ್ದು, ಶಿವಮೊಗ್ಗ, ಬೆಂಗಳೂರು ಹಾಗೂ ಸಾಗರದ ವೃತ್ತ ಅಥವಾ ಪ್ರಮುಖ ಮಾರ್ಗಗಳಲ್ಲಿ ಈತನ ನಾಮಾಂಕಿತವನ್ನಿಡಲು ಕವಿ ಬಾಂಧವರು ಹೋರಾಡಲು ಮನಸ್ಸು ಮಾಡುವರೇ?
                      -ಸಂಶೋಧನಾ ರತ್ನ ಕೆಳದಿ ಗುಂಡಾ ಜೋಯಿಸ್.
(ಕವಿಕಿರಣದ ಡಿಸೆಂಬರ್, ೨೦೦೮ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ) 

Sunday, November 14, 2010

ಸುಬ್ಬ ಕವಿ ವಿರಚಿತ 'ಪಾರಿಜಾತ' ಯಕ್ಷಗಾನ ಕೃತಿಯಲ್ಲಿನ ಕೃಷ್ಣ-ಭಾಮೆಯರ ಸಂಭಾಷಣೆ

ರಾಗ: ಸೌರಾಷ್ಟ್ರ            :      ಏಕತಾಳ

ಕೃಷ್ಣ : ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲ ತೆಗೆಯೆ ||

ಭಾಮೆ: ದ್ವಾರದಿ ದನಿಯನ್ನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು ||

ಕೃಷ್ಣ : ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ ||

ಭಾಮೆ : ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ ||

ಕೃಷ್ಣ : ಕ್ರೂರ ಕಾಳಿಂಗನ ಪಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ ||

ಭಾಮೆ : ಧೀರ ನೀನಾದರೆ ಪಾವನಾಡಿಸಿಕೊಂಡು ಗಾರುಡಿಗಾರ ಹೋಗಯ್ಯ ||

ಕೃಷ್ಣ : ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ ||

ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ ||

ಕೃಷ್ಣ : ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ ||

ಭಾಮೆ: ಆದರೊಳ್ಳಿತು ಘೋರಾಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ ||

ಕೃಷ್ಣ : ಕಾಂತೆ ಕೇಳಾದರೇಳು ವೃಷಭವ ಕಟ್ಟೆ ನೀಲಕಾಂತೆಯ ತಂದವ ಕಾಣೆ ||

ಭಾಮೆ: ಅಂತಾದರಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ ||

ಕೃಷ್ಣ : ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ ||

ಭಾಮೆ: ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ ||

ಚೌಡಮ್ಮ ದೇವಿ - ಕವಿ ವಂಶದ ಕಾವಲು ದೇವತೆ


ಕೆಳದಿ ಕವಿ ಮನೆತನವನ್ನು ಅನಾದಿ ಕಾಲದಿಂದಲೂ ಚೌಡಮ್ಮ ದೇವಿ ರಕ್ಷಿಸುತ್ತಿರುವಳು ಎಂದು ತಿಳಿದುಬಂದಿದೆ. ಚೌಡಮ್ಮ ದೇವಿ ಸ್ವರೂಪವಾದ ಮೇಲಿನ ಕಲ್ಲು ಕೆಳದಿ ಕವಿ ಮನೆತನಕ್ಕೆ ಸೇರಿದ ಶ್ರೀ ಕವಿ ನಾಗರಾಜಭಟ್ಟರ ನಿವೇಶನದಲ್ಲಿರುತ್ತದೆ. ಈಗಲೂ ಕವಿ ಮನೆತನದವರ ಕೆಲವು ಮನೆಗಳಲ್ಲಿ ಶುಭ ಕಾರ್ಯ ನಡೆಯುವಾಗ ದೇವಿಗೆ ಬಾಗಿನ-ನೈವೇದ್ಯ ಸಲ್ಲಿಸುವ ಪ್ರತೀತಿ ಇದೆ. ಕವಿ ಮನೆತನದ ಎರಡನೇ ಸಮಾವೇಶ ಕೆಳದಿಯ ಶ್ರೀ ಕವಿ ರಾಮಮೂರ್ತಿಯವರ ಮನೆಯಲ್ಲಿ ನಡೆದ ಸಂದರ್ಭದಲ್ಲಿಯೂ ಕೂಡ ಪೂರ್ವಭಾವಿಯಾಗಿ ಚೌಡಮ್ಮ ದೇವಿಗೆ ವಿದ್ಯುಕ್ತ ಪೂಜೆ ಸಲ್ಲಿಸಲಾಯಿತು. ಇದನ್ನು ಸಂರಕ್ಷಿಸಲು ಮತ್ತು ಸೂಕ್ತ ಕಟ್ಟಡ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

[ಫೋಟೋ: ಕವಿ ಬಿ.ಎಸ್.ಆರ್.ದೀಪಕ್]