ಶ್ರೀ ಶಂಕರಾಚಾರ್ಯರು ಕೊಲ್ಲೂರಿನಲ್ಲಿ ಮಾಡಿದ ಪವಾಡ
-ದಿ. ರತ್ನಮ್ಮ ಸುಂದರರಾವ್.
ಶ್ರೀಶೈಲದಿಂದ ಹೊರಟ ಆಚಾರ್ಯರು ಗೋಕರ್ಣ ಕ್ಷೇತ್ರಕ್ಕೆ ಬಂದರು. ಅಲ್ಲಿ ಈಶ್ವರನ ಆತ್ಮಲಿಂಗವನ್ನೂ, ತಾಮ್ರಗೌರೀ ಸಹಿತನಾದ ಮಹಾಬಲೇಶ್ವರನನ್ನೂ ಕಂಡು ಪುನೀತರಾದರು. ಆ ಕ್ಷೇತ್ರದಲ್ಲಿಯೂ ಅದ್ವೈತ ತತ್ವಗಳ ಪ್ರಚಾರ ಯಥಾವತ್ತಾಗಿ ನಡೆಯಿತು. ಆ ಕ್ಷೇತ್ರದಿಂದ ಹೊರಟ ಆಚಾರ್ಯರು ಪಶ್ಚಿಮ ಘಟ್ಟಗಳ ಅಂಚಿನಲ್ಲೇ ಹೊರಟು ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಕೊಲ್ಲೂರು ಕ್ಷೇತ್ರಕ್ಕೆ ಬಂದರು. ಮೂಕಾಸುರನೆಂಬ ರಾಕ್ಷಸನನ್ನು ಕೊಂದು ಮೂಕಾಂಬಿಕಾ ಎಂಬ ಹೆಸರಿನಿಂದ ಪ್ರಖ್ಯಾತಳಾದ ಅದಿಶಕ್ತಿಯು ನೆಲೆಸಿರುವ ಕ್ಷೇತ್ರವೇ ಕೊಲ್ಲೂರು. ಭವ್ಯವಾದ ದೇವಾಲಯದಲ್ಲಿ ಮೂಕಾಂಬಿಕೆ ನೆಲೆಸಿದ್ದಾಳೆ. ಆಚಾರ್ಯರು ಮೂಕಾಂಬಿಕಾ ದೇವಿಯನ್ನು ಸಂದರ್ಶಿಸಿದುದೇ ಅಲ್ಲದೆ ಅಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿ, ಕ್ಷೇತ್ರದ ಮಹಿಮೆಯನು ಮತ್ತಷ್ಟು ಹೆಚ್ಚಿಸಿದರು. ಅನೇಕ
ಸ್ತೋತ್ರಗಳನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ದೇವಿಯನ್ನು ಕಂಡು ಕೃತಾರ್ಥರಾದ ಆಚಾರ್ಯರು ಅನಂತರ ದೇವಾಲಯದಿಂದ ಹೊರಗೆ ಹೊರಟರು. ದ್ವಾರಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣ ದಂಪತಿಗಳು ತಮ್ಮ ಮಗುವನ್ನು ಮುಂದಿಟ್ಟುಕೊಂಡು ರೋದಿಸುತ್ತಿದ್ದರು. ಆ ಮಗು ಸತ್ತುಹೋಗಿತ್ತು.
ದೇವಾಲಯದಿಂದ ಹೊರಬಂದ ಆಚಾರ್ಯರನ್ನು ಆ ದಂಪತಿಗಳು ನೋಡಿದರು. ತೇಜಸ್ಸಿನಿಂದ ಕೂಡಿದ ಅವರ ಮುಖವನ್ನು ಕಂಡೊಡನೆ ಆ ದಂಪತಿಗಳು ಈತನಾರೋ ಮಹಾತ್ಮನೇ ಇರಬೇಕು ಎಂದು ಆಲೋಚಿಸಿ ಅವರ
ಬಳಿಗೆ ಬಂದರು. ಸತ್ತುಹೋಗಿದ್ದ ತಮ್ಮ ಮಗುವನ್ನು ಆಚಾರ್ಯರ ಪಾದಗಳ ಬಳಿ ಇಟ್ಟು "ಮಹಾತ್ಮರೇ, ನಿಮ್ಮನ್ನು ನೋಡಿದರೆ ದೈವಾಂಶ ಪುರುಷನ್ನು ಕಂಡಂತೆಯೇ ಭಾಸವಾಗುತ್ತದೆ. ನೀವಾದರೂ ಈ ಮಗುವನ್ನು ಬದುಕಿಸಿಕೊಡಿ. ಇದುವರೆಗೆ ಹದಿಮೂರು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ಬೆಂದು ಹೋಗಿದ್ದೇವೆ" ಎಂದು ಅಂಗಲಾಚಿದರು. ಆ ದಂಪತಿಗಳ ದುಃಖದಲ್ಲಿ ಆಚಾರ್ಯರೂ ಒಂದು ಕ್ಷಣ ಭಾಗಿಯಾದರು. ಬಳಿಕ ಅವರನ್ನು ಈರೀತಿ ಪ್ರಶ್ನಿಸಿದರು: "ಸಾವು ಎಂದರೇನು? ಮಗು ಇಲ್ಲೇ ಇದೆಯಲ್ಲಾ?!" "ಇದು ಮಗುವಿನ ಕಳೇಬರ. ಅದರ ಪ್ರಾಣ ಹೋಗಿ ಎಷ್ಟೋ ಹೊತ್ತಾಗಿದೆ" ಎಂದು ಆ ದಂಪತಿಗಳು ಹೇಳಿದರು. ಆಚಾರ್ಯರು ಪುನಃ ಕೇಳಿದರು: "ಹಾಗಾದರೆ ನೀವು ಇದುವರೆಗೆ ವಿಶ್ವಾಸದಿಂದ ಮುದ್ದಿಸುತ್ತಿದ್ದುದು ಇಲ್ಲಿರುವ ಈ ದೇಹವನ್ನೋ, ಹೊರಟುಹೋದ ಆ ಪ್ರಾಣವನ್ನೋ?" ಆಚಾರ್ಯರ ಪ್ರಶ್ನೆಗೆ ಏನುತ್ತರ ಕೊಡಬೇಕೆಂದು ಆ ದಂಪತಿಗಳಿಗೆ ತೋಚಲಿಲ್ಲ. ಆಚಾರ್ಯರು ಪುನಃ ಕೇಳಿದರು: "ದೇಹವನ್ನೇ ನೀವು ಮುದ್ದಿಸುತ್ತಿದ್ದಾದರೆ ಈಗಲೂ ಮುದ್ದಿಸಬಹುದು. ಪ್ರಾಣವನ್ನು ನೀವು ಮುದ್ದಿಸುತ್ತಿದ್ದಾದರೆ ಅದು ಆಗಲೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ಇದಕ್ಕೇಕೆ ನೀವು ದುಃಖಿಸಬೇಕು?" ಆಚಾರ್ಯರ ತತ್ವೋಪದೇಶ ಆ ದಂಪತಿಗಳ ಮನಸ್ಸನ್ನು ಮುಟ್ಟಲಿಲ್ಲ. ಕ್ಷಣಕ್ಷಣಕ್ಕೂ ಪುತ್ರಶೋಕ ಹೆಚ್ಚುತ್ತ ಅವರನ್ನು ದಹಿಸುತ್ತಿತ್ತು.
------------------------------------------------------------
ದಿ. ಶ್ರೀಮತಿ ರತ್ನಮ್ಮ ಸುಂದರರಾಯರು ಕೆಳದಿ ಕವಿಮನೆತನದ ಧೀಮಂತ ವ್ಯಕ್ತಿತ್ವದ ದಿ. ಎಸ್.ಕೆ. ಲಿಂಗಣ್ಣಯ್ಯನವರ ಮಕ್ಕಳಲ್ಲಿ ಒಬ್ಬರು. ಇವರ ಪತಿ ಶ್ರೀ ಬ.ನ. ಸುಂದರರಾಯರೂ ಸಹ ಕರ್ನಾಟಕ ಕಂಡ ಖ್ಯಾತ ಸಾಹಿತಿಗಳಲ್ಲಿ ಒಬ್ಬರು. ಇವರು ೧೯೬೯ರಲ್ಲಿ ರಚಿಸಿದ ಶ್ರೀ ಶಂಕರ ಕಥಾಮೃತ ೧೯೮೯ರ ವೇಳೆಗೆ ಆರು ಮುದ್ರಣಗಳನ್ನು ಕಂಡ ಅನುಪಮ ಕೃತಿ. ಶ್ರೀ ಶಂಕರಾಚಾರ್ಯರ ಜೀವನದ ಘಟನೆಗಳನ್ನು ಆಧರಿಸಿ ಕಥಾರೂಪದಲ್ಲಿ ಹೊರತಂದಿರುವುದು ವಿಶೇಷ.
ಅಂತಹ ಒಂದು ಕಥೆಯನ್ನು ನಿಮ್ಮ ಮುಂದಿಟ್ಟಿದೆ. -ಸಂ.
-----------------------------------------------------------
ಆಗ ಆಚಾರ್ಯರು ಆ ಕ್ಷೇತ್ರದೇವತೆಯಾದ ಮೂಕಾಂಬಿಕೆಯನ್ನೇ ಸ್ತುತಿಸಿ ಆ ಮಗುವನ್ನು ಬದುಕಿಸಿದರು. ಮಗು ಕಣ್ಣು ಬಿಟ್ಟು ಕೈಕಾಲುಗಳನ್ನಾಡಿಸಿತು. ಅದು ಕಣ್ಣು ಬಿಡುವ ಹೊತ್ತಿಗೆ ಆಚಾರ್ಯರ ತತ್ವೋಪದೇಶ ಆ ತಾಯಿ ತಂದೆಗಳ ಒಳಗಣ್ಣನ್ನು ತೆರೆಯುವಂತೆ ಮಾಡಿತ್ತು. ಈ ಸಂಸಾರವೇ ನಶ್ವರವೆಂಬ ಭಾವನೆ ಅವರಲ್ಲಿ ಮೂಡಿ ಅವರ ಮನಸ್ಸು ವೈರಾಗ್ಯದತ್ತ ಸಾಗತೊಡಗಿತ್ತು. ಆ ದಂಪತಿಗಳು ಅಡಿಗಡಿಗೆ ಆಚಾರ್ಯರಿಗೆ ವಂದಿಸುತ್ತ - "ಮಹಾತ್ಮರೇ, ನಿಮ್ಮ ಉಪದೇಶ ಕೇಳಿ ನಮ್ಮ ಮನಸ್ಸು ಪರಿವರ್ತನೆಯಾಗಿದೆ. ಈ ಸಂಸಾರದ ಸುಖವು ಸಾಕು. ನಮ್ಮನ್ನೂ ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಬೇಕು" ಎಂದು ಪ್ರಾರ್ಥಿಸಿಕೊಂಡರು. ಅದಕ್ಕೆ ಆಚಾರ್ಯರು ಒಪ್ಪಲಿಲ್ಲ. "ಗೃಹಸ್ಥರಾಗಿರುವ ನೀವು ಗೃಹಸ್ಥಾಶ್ರಮದ
ಧರ್ಮಕ್ಕನುಗುಣವಾಗಿ ನಡೆಯಬೇಕು. ಸಂಸಾರದಲ್ಲಿ ಒದಗುವ ಕಷ್ಟ ಸುಖಗಳಿಗೆ ಎದೆಗುಂದದೆ ಧೈರ್ಯವಾಗಿ ಅವುಗಳನ್ನು ಎದುರಿಸಿ ಗೃಹಸ್ಥಾಶ್ರಮದ ಧರ್ಮಗಳನ್ನು ಅನುಸರಿಸಿ ನಡೆಯುವದರಿಂದಲೇ ನಿಮಗೆ ಸದ್ಗತಿಯುಂಟಾಗುವುದು" ಎಂದು ಆ ದಂಪತಿಗಳಿಗೆ ಬುದ್ಧಿವಾದ ಹೇಳಿ ಆಶೀರ್ವದಿಸಿದರು. ಅನಂತರ ಆಚಾರ್ಯರ ಪ್ರಯಾಣ ಮುಂದುವರೆಯಿತು.
***
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಕಥೆ).
***************
No comments:
Post a Comment