ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, February 13, 2012

ಕವಿಮನೆತನದ ಪತ್ರಿಕೆ 'ಕವಿಕಿರಣ'



     ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ರಾಜಮನೆತನವಾಗಿದ್ದು ಮೈಸೂರು ಅರಸರ ರಾಜ್ಯಕ್ಕಿಂತಲೂ ಹೆಚ್ಚಿನ ವಿಸ್ತಾರ ಹೊಂದಿತ್ತು.  ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿಯ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ವಿಶೇಷವಾಗಿ ಕೆಳದಿನೃಪ ವಿಜಯ ಪ್ರಮುಖ ಐತಿಹಾಸಿಕ ಕೃತಿಯಾಗಿದ್ದು ಇದರ ರಚನಕಾರ ಕವಿಲಿಂಗಣ್ಣ ಕೆಳದಿ ಕವಿಮನೆತನದ ಮೂಲಪುರುಷ. ಇವನ ನಂತರದ ಪೀಳಿಗೆಯವರೂ ಸಹ ಪ್ರತಿಭಾಶಾಲಿಗಳಾಗಿದ್ದು ಅವರುಗಳ ಸಾಧನೆ ಈಗಿನವರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಅವರ ಕೃತಿಗಳನ್ನು ಬೆಳಕಿಗೆ ತರುವ, ಸಾಧನೆಗಳನ್ನು ಪರಿಚಯಿಸುವ ಕಾರ್ಯ ಮಾಡುವ ಸಲುವಾಗಿ ಹಾಗೂ ಕವಿಕುಟುಂಬಗಳ ಸಮಕಾಲೀನರೂ ಸಾಧಕರಾಗಲು ಪ್ರೇರಿಸುವ ಉದ್ದೇಶದಿಂದ ಒಂದು ಪತ್ರಿಕೆ ಹೊರತರುವ ವಿಚಾರ ನಮ್ಮಲ್ಲಿ ಮೊಳಕೆಯೊಡೆದಿತ್ತು. 
     ಕೆಳದಿಯಲ್ಲಿ ೨೦೦೭ರ ಡಿಸೆಂಬರಿನಲ್ಲಿ ನಡೆದ ಎರಡನೆಯ ವಾರ್ಷಿಕ ಸಮಾವೇಶದಲ್ಲಿ ಸಂವಹನಾ ಮಾಧ್ಯಮವಾಗಿ ಒಂದು ಪತ್ರಿಕೆಯನ್ನು ಹೊರತರಲು ನಿಶ್ಚಯಿಸಿ ಈ ಕೆಲಸಕ್ಕಾಗಿ ನನ್ನನ್ನು ಸಂಪಾದಕನನ್ನಾಗಿ ಮತ್ತು ಸೋದರ ಸುರೇಶನನ್ನು ಸಹಸಂಪಾದಕನನ್ನಾಗಿ ಆರಿಸಿದರು. ನನಗೂ ಈ ಕೆಲಸ ಮಾಡುವುದು ಪ್ರಿಯವಾಗಿತ್ತು. ನನ್ನೊಳಗಿದ್ದ ಬರಹಗಾರನಿಗೆ ಎಚ್ಚರವಾಗಿದ್ದು ಆಗಲೇ. ತಹಸೀಲ್ದಾರನಾಗಿ ನನಗಿದ್ದ ಕಾರ್ಯಬಾಹುಳ್ಯದಿಂದಾಗಿ ಹಾಗೂ ಮುಕ್ತವಾಗಿ ಅನಿಸಿಕೆಗಳನ್ನು ಸರ್ಕಾರಿ ನೌಕರನಾಗಿ ವ್ಯಕ್ತಪಡಿಸುವುದು ಸೂಕ್ತವಲ್ಲವಾಗಿದ್ದರಿಂದ ಬರವಣಿಗೆಗೆ ಆ ಮೊದಲು ಕೈ ಹಾಕಿರಲಿಲ್ಲ. ಕೆಲವೇ ದಿನಗಳಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಹೊಂದುವುದಿದ್ದರೂ ಸಹ ೨೦೦೯ರಲ್ಲಿ ಅನೇಕ ಕಾರಣಗಳಿಂದ ನಾನು ಸರ್ಕಾರಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಪಡೆದಿದ್ದು, ಅವುಗಳಲ್ಲಿ ಒಂದು ಕಾರಣ ಈ ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಳ್ಳುವುದೂ ಆಗಿತ್ತು.
     ಸರ್ಕಾರಿ ಅಧಿಕಾರಿಯಾಗಿದ್ದರಿಂದ ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸಲು ನಡತೆ ನಿಯಮಾವಳಿಗಳ ಪ್ರಕಾರ ಅನುಮತಿ ಕೋರಿ ಶಿವಮೊಗ್ಗ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದೆ. (ಆ ಅವಧಿಯಲ್ಲಿ ನಾನು ಶಿವಮೊಗ್ಗದಲ್ಲಿ ಪುರಸಭಾ ತಹಸೀಲ್ದಾರ್ ಮತ್ತು ನಂತರ ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದೆ). ನೂತನ ಪತ್ರಿಕೆಗೆ ಹಲವಾರು ಹೆಸರುಗಳು ಸೂಚಿಸಲ್ಪಟ್ಟಿದ್ದು ಅಂತಿಮವಾಗಿ ಕವಿಕಿರಣ ಎಂಬ ಹೆಸರನ್ನು ಇಡಬೇಕೆಂದು ಹಾಗೂ ಅರ್ಧವಾರ್ಷಿಕವಾಗಿ ಹೊರತರಬೇಕೆಂದು ತೀರ್ಮಾನಿಸಿದೆವು. ಜಿಲ್ಲಾ ದಂಡಾಧಿಕಾರಿಯವರ ಮೂಲಕ ಪತ್ರಿಕೆಯ ಶೀರ್ಷಿಕೆಯ ಪರಿಶೀಲನೆಗೆ ನವದೆಹಲಿಯ ವೃತ್ತಪತ್ರಿಕೆಗಳ  ರಿಜಿಸ್ಟ್ರಾರರಿಗೆ ಕಳಿಸಿಕೊಡಲಾಯಿತು. ಇದಕ್ಕೆ ಮುನ್ನ ನಿಯಮದಂತೆ ಪೋಲಿಸ್ ಇಲಾಖೆಯಿಂದ ನನ್ನ ಪೂರ್ವಾಪರ ವಿಚಾರಣೆ ನಡೆದು ಎಸ್.ಪಿ.ಯವರು ಪತ್ರಿಕೆ ಪ್ರಾರಂಭಕ್ಕೆ ಅನುಮತಿ ಸೂಚಿಸಿ ಪತ್ರ ಕೊಟ್ಟಿದ್ದರು. ಕವಿಕಿರಣ ಪತ್ರಿಕೆಯ ಶೀರ್ಷಿಕೆ ಲಭ್ಯವಿದ್ದ ಬಗ್ಗೆ ನವದೆಹಲಿಯ ರಿಜಿಸ್ಟ್ರಾರರ ಕಛೇರಿಯಿಂದ ಸೂಚನೆ ಬಂದ ನಂತರ ಅಗತ್ಯದ ಮುಚ್ಚಳಿಕೆಗಳನ್ನು ನಾನು ಮತ್ತು ನನ್ನ ತಮ್ಮ ಜಿಲ್ಲಾ ಅಪರ ದಂಡಾಧಿಕಾರಿಯವರಿಗೆ ಬರೆದುಕೊಟ್ಟೆವು. ಪತ್ರಿಕೆಗಳ ರಿಜಿಸ್ಟ್ರಾರರು ನಮ್ಮ ಪತ್ರಿಕೆಯನ್ನು ನೋಂದಾಯಿಸಿಕೊಂಡು ಪತ್ರಿಕೆಯ ನೋಂದಣಿ ಕ್ರಮಾಂಕ ಹಾಗೂ ಪ್ರಮಾಣ ಪತ್ರ ನೀಡಿದರು. ಪತ್ರಿಕೆ ಪ್ರಾರಂಭಕ್ಕೆ ಹಾದಿ ನಿಚ್ಚಳವಾಯಿತು. 
      ಹಿರಿಯರೊಡನೆ ಹಲವಾರು ಸಲ ಚರ್ಚಿಸಿ ಪತ್ರಿಕೆಯ ರೂಪುರೇಷೆ ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪತ್ರಿಕೆಯ ಮೊದಲ ಸಂಚಿಕೆ ಹೊರಬಂದಿತು. ಒಂದು ಸಾರ್ಥಕ ಕೆಲಸ ಪ್ರಾರಂಭಿಸಿದ ಸಂತೋಷ ನಮ್ಮದಾಗಿತ್ತು. ಕವಿಕಿರಣಕ್ಕೆ ಶೃಂಗೇರಿಯ ಜಗದ್ಗುರುಗಳು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು, ರಾಮಚಂದ್ರಾಪುರ ಮಠದ ಶ್ರೀಗಳು ಸೇರಿದಂತೆ ಹಲವರು ಗುರುಹಿರಿಯರು ಆಶೀರ್ವದಿಸಿದ್ದಾರೆ; ಕ.ಸಾ.ಪ.ದ ರಾಜ್ಯಾಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಸೇರಿದಂತೆ ಹಲವರು ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ.
     ಕವಿಕಿರಣದಲ್ಲಿ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆಯಿದೆ, ಹಿಂದಿನ ಸಾಧಕರನ್ನು ನೆನೆಯುವ ಕೃತಜ್ಞತೆಯಿದೆ, ಐತಿಹಾಸಿಕ ಸಂಗತಿಗಳನ್ನು ನೆನಪಿಸುವ ಕರ್ತವ್ಯವಿದೆ, ಈಗಿನವರಿಗೆ ಪ್ರೇರಣೆ ನೀಡುವ ಕಸುವಿದೆ, ಸಜ್ಜನ ಶಕ್ತಿಯನ್ನು ಜಾಗೃತಗೊಳಿಸುವ ಸಂಕಲ್ಪವಿದೆ. ಅಷ್ಟೇ ಅಲ್ಲ, ಇದು ಕವಿಮನೆತನದವರಿಗೆ ಹಾಗೂ ಬಂಧುಗಳಿಗೆ ಕುಟುಂಬದ ದಾಖಲೆಯಾಗಿದ್ದರೆ, ಕೆಳದಿಯ ಇತಿಹಾಸಾಸಕ್ತರಿಗೆ ಮಾಹಿತಿ ಕೊಡುವ ಸ್ರೋತವಾಗಿದೆ.  ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ, ಸಹೃದಯರು ಬೆನ್ನಿಗಿರಲಿ ಎಂಬುದು ನಮ್ಮ ಸದಾಶಯ. ಒಂದು ವಿಶೇಷ ಪೂರಕ ಸಂಚಿಕೆ ಸೇರಿ ಈಗಾಗಲೇ ಎಂಟು ಅರ್ಧ ವಾರ್ಷಿಕ ಸಂಚಿಕೆಗಳು ಹೊರಬಂದಿವೆ. ಅಂತರ್ಜಾಲ ತಾಣದಲ್ಲೂ ಈ ಸಂಚಿಕೆಗಳನ್ನು ಓದಬಹುದು. ತಮ್ಮ ಮಾಹಿತಿಗಾಗಿ ಈ ಕೆಳಗೆ ಲಿಂಕ್ ಕೊಟ್ಟಿದೆ. ಆಸಕ್ತರು ಓದಿ ತಮ್ಮ ಅಮೂಲ್ಯ ಸಲಹೆಗಳನ್ನು ಕೊಡಬಹುದಾಗಿದೆ. ಕವಿಕಿರಣ ಪತ್ರಿಕೆಯಲ್ಲದೆ ಕವಿಪ್ರಕಾಶನದ ಎಲ್ಲಾ ಪ್ರಕಟಣೆಗಳನ್ನೂ ಕಾಲಕ್ರಮೇಣ ಈ ತಾಣದಲ್ಲಿ ಪ್ರಕಟಿಸುವ ಉದ್ದೇಶವಿದೆ. ಜಾಹಿರಾತು ಪಡೆಯದ, ಕವಿಕುಟುಂಬಗಳವರೇ ಖರ್ಚು-ವೆಚ್ಚ ಭರಿಸುತ್ತಿರುವ ಈ ಪತ್ರಿಕೆ ಕನ್ನಡ ಸಾರಸ್ವತ ಲೋಕಕ್ಕೆ ಕವಿಮನೆತನದವರ ಅಳಿಲು ಸೇವೆಯಾಗಿದೆ.  

'ಕವಿಕಿರಣ'ದ ಸಂಚಿಕೆಗಳನ್ನು ಇಲ್ಲಿಯೂ ಓದಬಹುದು:
   http://kavikirana.blogspot.in/  - ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್.  ಈ ತಾಣದಲ್ಲಿ ಇದುವರೆಗೆ ಪ್ರಕಟಿಸಿದ ಪ್ರಕಟಣೆಗಳು:
1. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ, 
     http://kavikirana.blogspot.in/2011/01/blog-post_26.html
2. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ
     http://kavikirana.blogspot.in/2011/02/2008.html
3. 'ಕವಿಕಿರಣ' ಪತ್ರಿಕೆಯ ಜೂನ್, 2009ರ ಸಂಚಿಕೆ
     http://kavikirana.blogspot.in/2011/04/2009.html
4. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2009ರ ಸಂಚಿಕೆ
     http://kavikirana.blogspot.in/2011/05/01-12-2009.html
5. 'ಕವಿಕಿರಣ' ಪತ್ರಿಕೆಯ ಜೂನ್, 2010ರ ಸಂಚಿಕೆ
    http://kavikirana.blogspot.in/2011/07/01-06-2010.html
6. 'ಕವಿಕಿರಣ' ಪತ್ರಿಕೆಯ ಜೂನ್, 2010ರ ವಿಶೇಷ ಸಂಚಿಕೆ
    http://kavikirana.blogspot.in/2011/07/01-06-2010.html
7.  ಕ.ವೆಂ. ನಾಗರಾಜರ ಕೃತಿ: ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿಚಿತ್ರಣ)  http://kavikirana.blogspot.in/2011/06/blog-post_23.html
8. ಕವಿ ವೆಂ. ಸುರೇಶರ  'Karmayogi – Kalavallabha S.K. LINGANNAIYA – a concise biography of Sri S.K. Lingannaiya'
     http://kavikirana.blogspot.in/2011/07/this-book-is-biography-of-one-of.html
      ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನನ್ನನ್ನಾಗಲೀ, ಕವಿ ಸುರೇಶರನ್ನಾಗಲೀ ಸಂಪರ್ಕಿಸಬಹುದು. ತಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ.ನಾಗರಾಜ್.

No comments:

Post a Comment