ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, August 15, 2010

ಹಿನ್ನೆಲೆ - BACKGROUND



ವಿದ್ಯಾರಣ್ಯರು




ಕೆಳದಿ ಸಂಸ್ಥಾನದ ಇತಿಹಾಸ ಶಿವಮೊಗ್ಗ ಜಿಲ್ಲೆಯ, ಕರ್ನಾಟಕ ರಾಜ್ಯದ ಮತ್ತು ಇಡೀ ರಾಷ್ಟ್ರದ ಇತಿಹಾಸದಲ್ಲಿ ಪ್ರಮುಖವಾದುದು. ಕವಿ ವಂಶದ ಮೂಲ ಆಶ್ರಯದಾತರು ಕೆಳದಿ ಅರಸರು. ರಾಜಾಶ್ರಯ ನೀಡಿ, ತಮ್ಮಲ್ಲಿರುವ ಪ್ರತಿಭೆಯನ್ನು ಹೊರಸೂಸಲು ಅನುವು ಮಾಡಿಕೊಟ್ಟ ಕೆಳದಿ ಸಂಸ್ಥಾನಕ್ಕೆ ಇಡೀ ಕವಿ ವಂಶವೇ ಋಣಿಯಾಗಿರಬೇಕು.

ಕೆಳದಿ ಅರಸರು ಸ್ವತ: ರಾಜ್ಯವನ್ನು ಸ್ಥಾಪಿಸಿ ಸ್ವತಂತ್ರವಾಗಿಯೇ ಆಡಳಿತ ನಡೆಸಿದವರು. ಇವರು ಯಾರೊಬ್ಬರ ಸಾಮಂತರಾಗಿಯಾ ಆಳಿದವರಲ್ಲ. ವಿದ್ಯಾರಣ್ಯರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಈ ಸಂಸ್ಥಾನವು ಪ್ರಬುದ್ಧಮಾನಕ್ಕೆ ಬಂದಿತು. ಕ್ರಿ.ಶ. 1499 ರಿಂದ 1763 ರ ಅವಧಿಯಲ್ಲಿ ಸುಮಾರು 265 ವರ್ಷ ಆಡಳಿತ ನಡೆಸಿದ ಇವರು ತಮ್ಮ ರಾಜಕೀಯ ಸಾಧನೆಗಳ ಜೊತೆಗೆ ಧಾರ್ಮಿಕ ಶ್ರಧ್ದೆಯನ್ನೂ ತೋರಿದವರು. ಸಾಂಸ್ಕ್ರತಿಕ ಪರಂಪರೆಗೆ ಆಶ್ರಯ ನೀಡಿದವರು. ಆಡಳಿತ, ಸಾಹಿತ್ಯ, ಕಲೆ ಶಿಲ್ಪಕಲೆ, ವಿದೇಶೀ ವ್ಯಾಪಾರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಂಡ ಕಾಲ ಇದು. ಈ ಕಾಲದಲ್ಲಿಯೇ ಕೆಳದಿಯ ರಾಮೇಶ್ವರ ದೇವಾಲಯ ನಿರ್ಮಾಣವಾಯಿತು. ಚೌಡಪ್ಪ (ನಾಯಕ), ಸದಾಶಿವನಾಯಕ, ದೊಡ್ಡ ಸಂಕಣ್ಣ ನಾಯಕ, ವೆಂಕಟಪ್ಪನಾಯಕ, ವೀರಭದ್ರನಾಯಕ, ಶಿವಪ್ಪನಾಯಕ, ರಾಣಿ ಚೆನ್ನಮ್ಮಾಜಿ, ಇಮ್ಮಡಿ ಸೋಮೇಶ್ವರ ನಾಯಕ, ವೀರಮ್ಮಾಜಿ ಮೊದಲಾದವರು ಕೆಳದಿಯ ಪ್ರಮುಖ ಅರಸರು.

ಕೆಳದಿ ಅರಸರು ತಮ್ಮ ಆಡಳಿತ, ಧಾರ್ಮಿಕ, ಸ್ವದೇಶೀ ಮತ್ತು ಸ್ವ-ಸಂಸ್ಕೃತಿಯ ರಕ್ಷಣೆ ಮೊದಲಾದ ವಿಷಯಗಳಲ್ಲಿ ವಿಜಯನಗರದವರು ಹಾಕಿಕೊಟ್ಟ ಪರಂಪರೆಯನ್ನೇ ಮುಂದುವರೆಸಿಕೊಂಡು ಬಂದವರು. ಕರ್ನಾಟಕದ 13 ಜಿಲ್ಲೆಗಳು (ಶಿವಮೊಗ್ಗ, ಚಿಕ್ಕಮಗಳೂರು, ಹಾಸನ (ಸ್ವಲ್ಪ ಭಾಗ), ದಕ್ಷಿಣ ಕನ್ನಡ, ಉತ್ತರ ಕನ್ನಡ (ಹಲವು ಭಾಗ), ಕೊಡಗು, ಚಿತ್ರದುರ್ಗ (ಕೆಲ ಭಾಗ), ಗದಗ (ಕೆಲ ಭಾಗ), ತುಮಕೂರು (ಕೆಲ ಭಾಗ) ಮತ್ತು ಕೇರಳದ ಕಾಸರಗೂಡಿಗೂ ಮುಂದೆ ಪರಿಯಾಪಟ್ಟಣ - ತಲಚ್ಛೇರಿಯವರೆಗೆ ವ್ಯಾಪಿಸಿತ್ತು. ಅನೇಕ ವಿದೇಶೀ ಪ್ರವಾಸಿಗರು ಕೆಳದಿ ಸಂಸ್ಥಾನವನ್ನು ಸಂದರ್ಶಿಸಿ, ಇಲ್ಲಿಯ ನಿಸರ್ಗ ಸಂಪತ್ತು, ಮಲೆನಾಡಿನ ಸೌಂದರ್ಯ, ಉತ್ತುಂಗ ಪರ್ವತ ಶ್ರೇಣಿ ಮೊದಲಾದುವುಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಈ ಕಾಲದಲ್ಲಿ ಆದ ಮುಖ್ಯ ಘಟನೆಗಳೆಂದರೆ:
1. ಕೆಳದಿಯ ಶ್ರೀ ರಾಮೇಶ್ವರ ದೇವಾಲಯದ ನಿರ್ಮಾಣ
2. ಇಕ್ಕೇರಿ ಆಘೋರೇಶ್ವರ ದೇವಾಲಯದ ನಿರ್ಮಾಣ
3. ಉಡುಪಿಯ ಶ್ರೀ ಕೃಷ್ಣ ದೇವಾಲಯದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ಕಾಗಿ ವೇದ ವಿದ್ಯಾತೀರ್ಥರು, ವಾದಿರಾಜ ತೀರ್ಥರು ಇವರಿಗಾಗಿ ಹೂವಿನ ಕೆರೆಯನ್ನು ದಾನವಾಗಿ ನೀಡಿದ್ದು
4. ಸಾಗರದ ಶ್ರೀ ಮಹಾಗಣಪತಿ ದೇವಾಲಯದ ರಚನೆ
5. ಶೃಂಗೇರಿ ಮಠಕ್ಕೆ ಧನ ಸಹಾಯ; ಮಠದ ಎಲ್ಲಾ ಸಾಲವನ್ನೂ ತೀರಿಸಿದುದು ಇತ್ಯಾದಿ..

ಶ್ರೀ ಕೆಳದಿ ರಾಮೇಶ್ವರ ದೇವಾಲಯ
















ಸಾಗರದ ಶ್ರೀ ಮಹಾ ಗಣಪತಿ ದೇವಸ್ಥಾನ








ಕವಿ ಲಿಂಗಣ್ಣ (ಕವಿ ಲಿಂಗಭಟ್ಟ) - [ಕ್ರಿ.ಶ.1750] ಕೆಳದಿ ಅರಸರ ಆಸ್ಥಾನ ಕವಿಯಾಗಿದ್ದವರು. ಅವರ ನಂತರದ ಪೀಳಿಗೆಯವರಿಗೆ ಕವಿ ವಂಶದವರು ಎಂದು ಕರೆಯುತ್ತಾರೆ. ಸುಮಾರು 10 ತಲೆಮಾರಿನ ಅದ್ಭುತವಾದ ಇತಿಹಾಸವುಳ್ಳ ಈ ಮನೆತನದವರ ಸಾಧನೆ ಬಲು ಮಹತ್ತರವಾದುದು; ಅನುಪಮವಾದುದು ಮತ್ತು ಅನುಕರಣೀಯವಾದುದು. ಸಾಹಿತ್ಯ, ಸಂಗೀತ, ಕಲೆ, ಚಿತ್ರಕಲೆ, ಆಡಳಿತ, ವಾಸ್ತು ಶಾಸ್ತ್ರ, ಇಂಜಿನಿಯರಿಂಗ್, ವೈದ್ಯಕೀಯ, ಸಂಶೋಧನೆ, ಬಾಹ್ಯಾಕಾಶ ವಿಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಈ ವಂಶದವರು ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಕವಿ ವಂಶದವರು ಸುಮಾರು 100 ವರ್ಷಗಳ ನಂತರ ತಮ್ಮ ಬಂಧುಗಳನ್ನೆಲ್ಲರನ್ನೂ 2006ರಲ್ಲಿ ಪುನರ್ ಗುರುತಿಸಿ ಒಂದಾಗಿ ಈಗ ಪ್ರತಿ ವರ್ಷ ವಿವಿಧ ಸ್ಥಳಗಳಲ್ಲಿ ವಂಶದ ಸಮಾವೇಶವನ್ನು ನಡೆಸುತ್ತಿರುವುದು ಮತ್ತು ಪ್ರತಿ ಅರ್ಧ ವರ್ಷಕ್ಕೊಮ್ಮೆಯಂತೆ "ಕವಿ ಕಿರಣ" ಎಂಬ ಅರ್ಧವಾರ್ಷಿಕ ಕುಟುಂಬ ಪತ್ರಿಕೆಯನ್ನು ನಿರಂತರವಾಗಿ ತರುತ್ತಿರುವುದು ವಿಶೇಷವಾದ ಸಂಗತಿ.[ಕವಿ ಕಿರಣ ಪತ್ರಿಕೆಯ ಬಗ್ಗೆ ವಿವರವಾದ ವಿಷಯಗಳಿಗೆ ಸಂಪರ್ಕಿಸಿ: www.kavikirana.blogspot.com.

ಕೆಳದಿ ಕವಿ ವಂಶದವರ ಸಾಧನೆಗಳನ್ನು ಮತ್ತು ವಂಶಕ್ಕೆ ಸಂಬಂಧಪಟ್ಟ ಇತರೆ ಆಸಕ್ತ ವಿಷಯಗಳನ್ನು ಆಸಕ್ತರಿಗಾಗಿ ಇನ್ನು ಮುಂದೆ ಹಂತ ಹಂತವಾಗಿ ಮಂಡಿಸಲಾಗುವುದು.

2 comments:

  1. ಒಳ್ಳೆಯ ಮತ್ತು ಉತ್ತಮ ಕೆಲಸ. ಮುಂದುವರೆಸು.

    ReplyDelete