ಕರ್ನಾಟಕದ ಚರಿತ್ರೆಯಲ್ಲಿ 'ಕೆಳದಿ ನೃಪವಿಜಯ' ಕೃತಿಕಾರ ಕವಿ ಲಿಂಗಣ್ಣನ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಚಿರ ಪರಿಚಿತವಾದುದು. ಸುಮಾರು ೧೭೫೦ ರಲ್ಲಿ ಬಾಳಿದ ಈತನು ಕೆಳದಿ ಸಂಸ್ಥಾನದ ಆಸ್ಥಾನ ಕವಿಯಾಗಿದ್ದನು. ಕವಿ ಸುರೇಶರವರು ತಮ್ಮ 'ಹಳೆ ಬೇರು ಹೊಸ ಚಿಗುರು' ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಲಿಂಗಣ್ಣನನ್ನು ಪರಿಚಯಿಸಿರುವುದರಿಂದ ಚರ್ವಿತ ಚರ್ವಣ ಅನಗತ್ಯ.
ತಾಳೆಯೋಲೆ ಹಸ್ತಪ್ರತಿಯಲ್ಲಿ "ತಿಳಿಯಲ್ಕೀ ಕೃತಿನಾಮಂ ಕೆಳದೀನೃಪವಿಜಯ ಮೆಂದಿದಕ್ಕಧಿನಾಥಂ ಕೆಳದಿಪ ರಾಮೇಶ್ವರನಿದನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ" ಎಂಬ ಉಲ್ಲೇಖನವು ಲಿಂಗಣ್ಣನು ವೆಂಕಪ್ಪನ ಮಗನೆಂದು ಉದ್ಗರಿಸಿದೆ. ಈತನ ಕಾಲವು ೧೭೫೦ರ ಸುಮಾರಿನಲ್ಲಿರುತ್ತದೆ. ಸುಸಂಸ್ಕೃತ ಕವಿಯಾಗಿ, ಚಾರಿತ್ರಿಕ ಸಂಶೋಧಕನಾಗಿ ಕೆಳದಿ ಅರಸರ ಆಸ್ಥಾನದಲ್ಲಿ ಶೋಭಿಸಿ ಲಿಂಗಣ್ಣ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ. ಕಿರಿಯ ಬಸವಪ್ಪನ ಕಾಲದ ಕೆಳದಿಯ ಸುವರ್ಣ ಯುಗ ವನ್ನು ಕಂಡಿದ್ದಾನೆ. ಅದು ನಾಶಗೊಂಡ ದುರಂತ ಚಿತ್ರ ವನ್ನು ಅವಲೋಕಿಸಿದ್ದಾನೆ. ಕಡೆಯಲ್ಲಿ ದಾರುಣ ಬದುಕು ಸವೆಸಿದ್ದಾನೆ. ರಾಜಾಶ್ರಯ ತಪ್ಪಿ ಮಕ್ಕಳೂ ಬೇರೆ ಬೇರೆ ಯಾಗಿ ಲಿಂಗಣ್ಣ ತುಂಬಾ ಕಷ್ಟ ಅನುಭವಿಸಿದುದು ವೇದ್ಯ ವಾಗುತ್ತದೆ. ಏನೇ ಇರಲಿ, ಈತನ ಕೃತಿಗಳು ಚಿರಂತನ ವಾದುವುಗಳು.
ಕೃತಿಗಳುಃ-
೧) ಕೆಳದಿನೃಪವಿಜಯ- ಶ್ರೀ ಗುಂಡಾಜೋಯ್ಸರ ಗದ್ಯಾನುವಾದದೊಂದಿಗೆ ೫ಬಾರಿ ಮರು ಮುದ್ರಣ ವಾಗಿದೆ.
೨) ಶಿವಪೂಜಾದರ್ಪಣ
೩) ಪಾರ್ವತಿ ಪರಿಣಯ- ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ
೪) ದಕ್ಷಾಧ್ವರ ವಿಜಯ- ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ
೫) ಶಿವಕಲ್ಯಾಣ (ಅಪ್ರಕಟಿತ ಓಲೆಗರಿ)
ಬೆಂಗಳೂರಿನಲ್ಲಿ ನಾನು ಓದುತ್ತಿದ್ದಾಗ ಲಿಂಗಣ್ಣ ಕವಿಯ ತಾಳೆಯೋಲೆ ಹಸ್ತಪ್ರತಿಗಳನ್ನು ಪ್ರೀತಿಯಿಂದ ನನಗಿತ್ತ (ಲಿಂಗಣ್ಣ ಕವಿ ಪೀಳಿಗೆಯ) ಸೋದರ ಮಾವಂದಿರುಗಳಿಗೆ ಕವಿ ಭಾಂಧವರ ಪರವಾಗಿ ವಿನಮ್ರ ಕೃತಜ್ಞತೆಗಳು. ಈ ತಾಳೆಯೋಲೆ ಆಧಾರದಿಂದ ಕೆಳದಿ ಸಂಶೋಧನಾಲಯ ಮುಖಾಂತರ ಪ್ರಕಟಣೆ ಕಂಡಿರುವುದು ಈಗ ತಮ್ಮ ಮುಂದಿರುವುದನ್ನು ಕಾಣಬಹುದಲ್ಲವೇ?.
ಕೆಳದಿ ನೃಪವಿಜಯವು ಲಿಂಗಣ್ಣನನ್ನು ಸುಪ್ರಸಿದ್ದ ಇತಿಹಾಸ ಸಂಶೋಧಕನನ್ನಾಗಿಸಿದೆ. ಪೂನಾ ವಿಶ್ವ ವಿದ್ಯಾಲಯದ ಪಾಧ್ಯ್ಯಾಪಕ ಡಾಃ ಚಿಟ್ನೀಸ್ ರವರು-
“The literary sources are generally less authentic than either the inscriptions or the accounts of foreign travellers as far as the present work is concerned. The most important literary works are the Keladi Nrpa Vijayam written by Linganna Kavi or poet Linganna. This work seems to have been written between 1763-1804 AD. This literary work, unlike many others, contains more of historical information than of literary praises about the Keladi monarchs. In the work, the poet mainly gives a narration of the rulers one by one. Incidentally he refers to other contemporary dynasties ruling in India , particularly in Karnataka. Much of the information contained in this work is in agreement with the inscriptions and foreign sources. Hence it seems to be more authentic than other literary works. I have freely drawn upon this work in my thesis corroborating it, wherever possible, by the inscriptions and other sources. It is interesting to note that Linganna Kavi has, in his work, supplemented the main narration by captions, footnotes given usually at the end of every chapter. They contain the names of various officers serving under their respective rulers. This information is useful in writing about the ministers, military generals and other office bearers.” ಎಂಬುದಾಗಿ ಕೃತಿಯ ಶ್ರೇಷ್ಠತೆಯನ್ನು ಕೊಂಡಾಡಿ ಪಿ.ಎಚ್.ಡಿ. ವಿದ್ವಾಂಸರಿಗೆ ಆಕರಗಳ ಮಹತ್ವವನ್ನು ಪ್ರತಿಬಿಂಬಿಸಿದ್ದಾರೆ. ಕೆಳದಿ ನೃಪ ವಿಜಯದ ಹಸ್ತಪ್ರತಿ ಯೊಂದು ಲಂಡನ್‌ನಲ್ಲಿ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಇದರ ಚಾರಿತ್ರಿಕ ಮಹತ್ವವನ್ನು ಮನಗಂಡ ಕರ್ನಲ್ ಮೆಕೆಂಝಿಯು ೧೭-೧೮ ನೇ ಶತಮಾನದಲ್ಲಿಯೇ ಇದನ್ನು ಇಂಗ್ಲೀಷ್‌ನಲ್ಲಿ ಭಾಷಾಂತರಿಸಿದ ಪ್ರಾಚೀನ ಹಸ್ತಪ್ರತಿಯೂ ಲಂಡನ್ ನಲ್ಲಿದೆ. ಯಾವ ವಿಶ್ವವಿದ್ಯಾಲಯ ಹಾಗೂ ಪಿ.ಹೆಚ್.ಡಿ. ವಿದ್ವಾಂಸನೂ ದಕ್ಷಿಣ ಭಾರತ ಇತಿಹಾಸ ರಚನೆಯಲ್ಲಿ ಲಿಂಗಣ್ಣನ ಈ ಆಕರ ಕೃತಿಯನ್ನು ಆಧರಿಸದಿದ್ದಲ್ಲಿ ಸಂಶೋಧನಾ ಕೃತಿಗೆ ಬೆಲೆ ಬರುವುದಿಲ್ಲವೆಂಬುದು ಕೃತಿ ಹಾಗೂ ವಿದ್ವಾಂಸರ ಹೆಗ್ಗಳಿಕೆ. ಕೆಳದಿ ಸಂಶೋಧನಾಲಯದಲ್ಲಿ ಇದರ ಒಂದೇ ಒಂದು ಓಲೆಗರಿಯಿರುವುದನ್ನು ಮನಗಂಡ ಸರ್ಕಾರ ಗೆಜೆಟೀರ್ ನಲ್ಲಿ ಇದರ ಛಾಯಾ ಚಿತ್ರವನ್ನು ಪ್ರಕಟಿಸಿದೆ. ಪ್ರಸಿದ್ಧ ಏ.ಆರ್. ಕೃಷ್ಣಶಾಸ್ತ್ರಿ ಆದಿಯಾಗಿ ಖ್ಯಾತ ವಿದ್ವಾಂಸರು ಕೆಳದಿ ಕವಿ ಲಿಂಗಣ್ಣನ ಕವಿತಾ ಸಾಮರ್ಥ್ಯ ವನ್ನು ಮನಸಾರೆ ಕೊಂಡಾಡಿದ್ದಾರೆ.
ಸ ಕವಿಃ ಕಥ್ಯತೇ ಸೃಷ್ಟಾ
ರಮತೇ ಯತ್ರ ಭಾರತೀ!
ರಸಭಾವ ಗುಣೀ ಭೂತೈಃ
ಅಲಂಕಾರೈಃ ಗುಣೋದಯೈಃ!!ಎಂಬಂತೆ ಕೆಳದಿ ಕವಿ ಲಿಂಗಣ್ಣನು ಆದರ್ಶ ಪ್ರಾಯ ಇತಿಹಾಸ ಸಂಶೋಧಕ ಹಾಗೂ ಕವಿಯಾಗಿರುವುದು ಕನ್ನಡಿಗರ ಹೆಮ್ಮೆ. ಇವನ ಸ್ಮರಣೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದ್ದು, ಶಿವಮೊಗ್ಗ, ಬೆಂಗಳೂರು ಹಾಗೂ ಸಾಗರದ ವೃತ್ತ ಅಥವಾ ಪ್ರಮುಖ ಮಾರ್ಗಗಳಲ್ಲಿ ಈತನ ನಾಮಾಂಕಿತವನ್ನಿಡಲು ಕವಿ ಬಾಂಧವರು ಹೋರಾಡಲು ಮನಸ್ಸು ಮಾಡುವರೇ?
-ಸಂಶೋಧನಾ ರತ್ನ ಕೆಳದಿ ಗುಂಡಾ ಜೋಯಿಸ್.(ಕವಿಕಿರಣದ ಡಿಸೆಂಬರ್, ೨೦೦೮ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
ರಮತೇ ಯತ್ರ ಭಾರತೀ!
ರಸಭಾವ ಗುಣೀ ಭೂತೈಃ
ಅಲಂಕಾರೈಃ ಗುಣೋದಯೈಃ!!ಎಂಬಂತೆ ಕೆಳದಿ ಕವಿ ಲಿಂಗಣ್ಣನು ಆದರ್ಶ ಪ್ರಾಯ ಇತಿಹಾಸ ಸಂಶೋಧಕ ಹಾಗೂ ಕವಿಯಾಗಿರುವುದು ಕನ್ನಡಿಗರ ಹೆಮ್ಮೆ. ಇವನ ಸ್ಮರಣೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದ್ದು, ಶಿವಮೊಗ್ಗ, ಬೆಂಗಳೂರು ಹಾಗೂ ಸಾಗರದ ವೃತ್ತ ಅಥವಾ ಪ್ರಮುಖ ಮಾರ್ಗಗಳಲ್ಲಿ ಈತನ ನಾಮಾಂಕಿತವನ್ನಿಡಲು ಕವಿ ಬಾಂಧವರು ಹೋರಾಡಲು ಮನಸ್ಸು ಮಾಡುವರೇ?
-ಸಂಶೋಧನಾ ರತ್ನ ಕೆಳದಿ ಗುಂಡಾ ಜೋಯಿಸ್.(ಕವಿಕಿರಣದ ಡಿಸೆಂಬರ್, ೨೦೦೮ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
No comments:
Post a Comment