ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, April 24, 2011

28-12-2008ರಂದು ನಡೆದ ಕವಿಕುಟುಂಬಗಳ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದ ವರದಿ

'ಸೇರಿದೆವು ನಾವು'
ಕವಿಕುಟುಂಬಗಳ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದ ವರದಿ
     ದಿನಾಂಕ ೨೮-೧೨-೨೦೦೮ರ ಭಾನುವಾರದ ಮುಂಜಾನೆ ಬೆಳಿಗ್ಯೆ ೮.೩೦ರಿಂದಲೇ ಕವಿ ಕುಟುಂಬಗಳ ಸದಸ್ಯರು ಮತ್ತು ಬಂಧು ಬಳಗದವರು ಬೆಂಗಳೂರಿನ ಜೆ.ಪಿ. ನಗರದ ೨ನೆಯ ಹಂತದ ರಾಗಿಗುಡ್ಡದ ಆಂಜನೇಯ ದೇವಸ್ಥಾನದ ಸಮೀಪವಿರುವ ಮಾ ಆನಂದಮಯಿ ಆಶ್ರಮದ ಸಭಾಭವನದಲ್ಲಿ ಸೇರಲಾರಂಭಿಸಿ ಬೆ. ೯.೩೦ರ ವೇಳೆಗೆ ಸಕಾಲದಲ್ಲಿ ಒಟ್ಟುಗೂಡಿದರು. ಉಪಾಹಾರದ ಬಳಿಕ ೧೦.೦೦ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ವೇದಿಕೆಗೆ ಆಗಮಿಸಿದ ಹಿರಿಯರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿ, ಶ್ರೀ ಕವಿ ವೆಂಕಟಸುಬ್ಬರಾವ್, ಶ್ರೀ ಡಾ. ಕೆಳದಿ ಕೃಷ್ಣಾಜೋಯಿಸ್, ಶ್ರೀ ಸಾ.ಕ. ಕೃಷ್ಣಮೂರ್ತಿ, ಶ್ರೀ ಎಂ. ಎಸ್. ನಾಗೇಂದ್ರ ಮತ್ತು ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್‌ರವರು ವೇದಘೋಷಸಹಿತ  ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮ ಆರಂಭಿಸಿದರು. ಪ್ರಾರಂಭದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯರವರ ತಂಗಿ ದಿ. ಶ್ರೀಮತಿ ಸುಂದರಮ್ಮರವರ ಮಗ ಶ್ರೀ ಸತ್ಯನಾರಾಯಣರಾವ್ ಮತ್ತು ದಿ. ಕವಿ ಸುಬ್ರಹ್ಮಣ್ಯಯ್ಯರವರ ಅಳಿಯ ಶ್ರೀ ನಾರಾಯಣರಾವ್‌ರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಕು. ನಿರಂಜನನ ಸುಶ್ರಾವ್ಯ ಪ್ರಾರ್ಥನೆ ಗಮನ ಸೆಳೆಯಿತು. ಹಿರಿಯರಾದ ಶ್ರೀ ಕೃಷ್ಣಮೂರ್ತಿಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.
                                                              ಕು. ನಿರಂಜನನಿಂದ ಪ್ರಾರ್ಥನೆ
                                                   ಎಲ್ಲರನ್ನೂ ಸ್ವಾಗತಿಸಿದ ಶ್ರೀ ಸಾ.ಕ. ಕೃಷ್ಣಮೂರ್ತಿ
'ಕವಿಕಿರಣ' ಪತ್ರಿಕೆ ಬಿಡುಗಡೆ    
      ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ.ವೆಂ.ನಾಗರಾಜ್ ರವರು ಕಾರ್ಯಕ್ರಮದ ರೂಪು ರೇಷೆ, ಅವರ ಸಂಪಾದಕತ್ವದಲ್ಲಿ ಕವಿ ಕುಟುಂಬದ ಪತ್ರಿಕೆ ಕವಿಕಿರಣ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಸಂವಹನದ ಅಗತ್ಯ, ಸಜ್ಜನ ಶಕ್ತಿ ಜಾಗೃತಗೊಳಿಸಲು, ಸದಸ್ಯರ ಸುಪ್ತ ಶಕ್ತಿ ಅನಾವರಣ ಮಾಡಲು ಪತ್ರಿಕೆ ವಹಿಸಬಹುದಾದ ಪಾತ್ರ ಕುರಿತು ತಿಳಿಸಿದರು. ಸಮಾರಂಭದಲ್ಲಿ ಬಿಡುಗಡೆಯಾಗಲಿದ್ದ ಅವರೇ ರಚಿಸಿದ ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ 'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕದ ಕುರಿತು ಮಾಹಿತಿ ನೀಡಿದರು. ಶ್ರೀ ಕವಿ ಸುರೇಶ್ ಸಂಪಾದಿಸಿದ ಹಾಗೂ ಸಮಾರಂಭದಲ್ಲಿ ಅರ್ಪಿತಗೊಳ್ಳಲಿದ್ದ 'ಕವಿ ಕುಟುಂಬಗಳ ಮತ್ತು ಬಂಧುಗಳ ದೂರವಾಣಿ ಮತ್ತು ವಿಳಾಸಗಳ ಕೈಪಿಡಿ' ಸಿದ್ಧಪಡಿಸಲು ಅವರು ಪಟ್ಟ ಶ್ರಮಕ್ಕಾಗಿ ಅಭಿನಂದಿಸಿದರು. ವಾರ್ಷಿಕ ಸಮಾವೇಶಗಳನ್ನು ರಚನಾತ್ಮಕವಾಗಿ ನಡೆಸಲು ಸಲಹೆಗಳನ್ನು ನೀಡಿದರು.
                                                  ಶ್ರೀ ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ನುಡಿ

     'ಕವಿಕಿರಣ' ಪತ್ರಿಕೆಯನ್ನು ಬಿಡುಗಡೆಗೊಳಿಸಿದ ೯೪ ವರ್ಷಗಳ ವಯೋವೃದ್ಧ, ಜ್ಞಾನವೃದ್ಧರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರು ಸಮಾರಂಭದಲ್ಲಿ ಭಾಗವಹಿಸಿ ಪತ್ರಿಕೆ ಬಿಡುಗಡೆಗೊಳಿಸುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷಪಟ್ಟು ಇಂತಹ ಒಳ್ಳೆಯ ಕಾರ್ಯಗಳು ನಿರಂತರವಾಗಿ ಮತ್ತು ಚೆನ್ನಾಗಿ ನಡೆಯಲೆಂದು ಹರಸಿದರು.

'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕ ಬಿಡುಗಡೆ
     'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಕವಿ ವೆಂಕಟಸುಬ್ಬರಾಯರು ತಮ್ಮ ತಂದೆಯ ಬಗ್ಗೆ ತಮ್ಮ ಮಗ ನಾಗರಾಜ ಬರೆದು, ತಮ್ಮ ಮೊಮ್ಮಕ್ಕಳು ಬಿಂದು ಮತ್ತು ವಿನಯ ಪ್ರಾಯೋಜಿಸಿದ ಪುಸ್ತಕವನ್ನು ತಮ್ಮಿಂದ ಬಿಡುಗಡೆಗೊಳಿಸಿದ್ದಕ್ಕೆ ಸಂತೋಷಿಸಿ, ತಮ್ಮ ಮಕ್ಕಳಿಂದ ಇಂತಹ ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳಾಗಲಿ ಎಂದು ಆಶೀರ್ವದಿಸಿದರು. ಕುಟುಂಬದ ಕೊಡುಗೆಯಾಗಿ ಪುಸ್ತಕವನ್ನು ಉಚಿತವಾಗಿ ಎಲ್ಲರಿಗೂ ನೀಡಲಾಯಿತು.
 


                                                        ಹರಸಿದ ಶ್ರೀ ಕವಿ ವೆಂಕಟಸುಬ್ಬರಾಯರು  
ಕವಿ ಕುಟುಂಬಗಳ ದೂರವಾಣಿ ಕೈಪಿಡಿ ಬಿದುಗಡೆ    

     ಕವಿ ಕುಟುಂಬಗಳ ಮತ್ತು ಬಂಧು ಬಳಗದವರ ವಿಳಾಸ ಮತ್ತು ದೂರವಾಣಿ ವಿವರಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಕೆ. ಕೃಷ್ಣಾಜೋಯಿಸರು ಸ್ವಂತ ಖರ್ಚಿನಲ್ಲಿ ಕೈಪಿಡಿ ಸಿದ್ಧಪಡಿಸಿ ಎಲ್ಲರಿಗೂ ಉಚಿತವಾಗಿ ನೀಡಿದ ಶ್ರೀ ಕವಿ ಸುರೇಶ್‌ರವರ ಕಾರ್ಯವನ್ನು ಮನತುಂಬಿ ಶ್ಲಾಘಿಸಿದರು. 




                                   ಬಂಧುಗಳಿಗೆ ಪ್ರಕಟಣೆಗಳ ಉಚಿತ ವಿತರಣೆ ಶ್ರೀ ಗುಂಡಾಜೋಯಿಸರಿಂದ
     ನಂತರದಲ್ಲಿ ಹಿಂದಿನ ಸಮಾವೇಶಗಳಿಗೆ ಬರದೆ ಇದೇ ಪ್ರಥಮವಾಗಿ ಬಂದ ಬಂಧುಗಳ ಪರಿಚಯವನ್ನು ಸಭೆಗೆ ಮಾಡಿಕೊಡಲಾಯಿತು. ಹಲವರಿಗೆ ಇದು ಅವಿಸ್ಮರಣೀಯ ಅನುಭವ ನೀಡಿತು. ನಿರಂಜನ, ಕಾಶೀಬಾಯಿ, ದೀಪಕ್, ಮತ್ತು ಹಲವರು ತಮ್ಮ ಗಾನಸುಧೆ ಹರಿಸಿದರು. ರಚಿಸಿದ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.





                                                                            ಹರಿದ ಗಾನಸುಧೆ




                                                  ಸಮಾರಂಭಕ್ಕೆ ಸಾಕ್ಷಿಯಾದ ಬಂಧು-ಬಳಗ
     ಬೆಂಗಳೂರಿನ ಶ್ರೀ ಶ್ರೀಕಂಠ ಕುಟುಂಬದವರು ಬಂದಿದ್ದ ಎಲ್ಲಾ ಮಹಿಳಾ ಸದಸ್ಯರಿಗೆ ಅರಿಶಿನ-ಕುಂಕುಮ,ಬಳೆ, ರವಿಕೆಕಣಗಳನ್ನು ನೀಡಿ ಶುಭ ಕೋರಿದರು.


     ಮಧ್ಯಾಹ್ನದ ಅಚ್ಚುಕಟ್ಟಾದ ರುಚಿಯಾದ ಭೋಜನದ ನಂತರದಲ್ಲಿ ಸದಸ್ಯರು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಕವಿಕಿರಣದ ಮುಂದಿನ ಸಂಚಿಕೆಯನ್ನು ಪ್ರಾಯೋಜಿಸಲು ಶ್ರೀ ಪುಟ್ಟರಾಜು, ಜಾವಗಲ್ ರವರು ಮುಂದೆ ಬಂದರು. ಮುಂದಿನ ವಾರ್ಷಿಕ ಸಮಾವೇಶವನ್ನು ತೀರ್ಥಹಳ್ಳಿಯಲ್ಲಿ ದಿನಾಂಕ ೨೭-೧೨-೨೦೦೯ ರಂದು ಆಯೋಜಿಸುವುದಾಗಿ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ಪರವಾಗಿ ಅವರ ಸಹೋದರರಾದ ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ರವರು ಘೋಷಿಸಿದರು. ಸಭೆ ಇವರುಗಳನ್ನು ಅಭಿನಂದಿಸಿತು.
  


ಆಯೋಜಕರು: ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್, ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ, ಬೆಂಗಳೂರು 
      ಸಮ್ಮೇಳನದ ಆಯೋಜಕರಾದ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್, ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬದವರು  ಸಮ್ಮೇಳನಕ್ಕಾಗಿ ಮಾಡಿದ್ದ ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಭಿನಂದನೆ ಮತ್ತು ವಂದನೆಗಳೊಂದಿಗೆ ಸಭೆ ಸಂಪನ್ನವಾಯಿತು.
(ಆಧಾರ: ಕವಿಕಿರಣದ ಜೂನ್, 2009ರ ಸಂಚಿಕೆ).
***************

Monday, April 4, 2011

ದಿ. ಕವಿ ಸುಬ್ರಹ್ಮಣ್ಯಯ್ಯರವರ ಪಂಚಾಂಗ ಶ್ರವಣ ಪ್ರಸಂಗ


                                                                      (1904-1966)
         ಜ್ಯೋತಿಷ್ಯದ ಗಂಧವಿಲ್ಲದಿದ್ದರೂ ಅಲ್ಪ ಕಾಲದಲ್ಲಿ ಅಧ್ಯಯನ ಮಾಡಿ ಯುಗಾದಿ ಫಲವನ್ನು ದಿ. ಕವಿ ಸುಬ್ರಹ್ಮಣ್ಯಯ್ಯ ಸಿದ್ಧಪಡಿಸಿ ಪಂಚಾಂಗ ಶ್ರವಣ ಮಾಡಿದ ಪ್ರಸಂಗವನ್ನು ಈ ಯುಗಾದಿಯ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಅವರ ಅಧ್ಯಯನಶೀಲತೆ, ಪ್ರಸಂಗಾವಧಾನ, ಸಮಯ ಪ್ರಜ್ಞೆಗಳಿಗೆ ಈ ಸಂಗತಿ ಸಾಕ್ಷಿಯಾಗಿದೆ.

     ದಿನಾಂಕ ೨೯-೩-೧೯೪೮ರಂದು ಕೆಳದಿಯ ಶ್ರೀ ಗುಂಡಾಜೋಯಿಸರ ತಂದೆಯವರು ೫೨ನೆಯ ವಯಸ್ಸಿಗೇ ವಿಧಿವಶರಾದಾಗ ಗುಂಡಾಜೋಯಿಸರಿಗೆ ಕೇವಲ ೧೭ ವರ್ಷ ವಯಸ್ಸು. ಅವರಿಗೆ ದಿಕ್ಕೇ ತೋಚದಂತಾಗಿತ್ತು. ಅವರ ಸಹೋದರಿಯರಿಗೆ ವಿವಾಹವೂ ಆಗಿರಲಿಲ್ಲ. ಸಹೋದರನಿಗೆ ಉಪನಯನವೂ ಆಗಬೇಕಾಗಿದ್ದು ನಿಂತು ಹೋಗಿತ್ತು.  ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಮುಂದಿನ ವಿದ್ಯಾಭ್ಯಾಸದ ಸಮಸ್ಯೆಗಳೂ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಕವಿ ಸುಬ್ರಮಣ್ಯರವರು ಕೆಳದಿಯಲ್ಲೇ ಇದ್ದು, ಅವರಿಗೆಲ್ಲಾ ಮಾರ್ಗದರ್ಶಕರಾಗಿ ರಕ್ಷಿಸಿದುದನ್ನು ಅವರು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅವರ ತಂದೆಯವರು ಫಾಲ್ಗುಣ ಬಹುಳ ಪಂಚಮಿಯಂದು ಮೃತರಾಗಿದ್ದು ಯುಗಾದಿ ಹಬ್ಬದ ಹಿಂದಿನ ದಿನಕ್ಕೆ  ಕರ್ಮಗಳೆಲ್ಲವೂ ಮುಗಿಯಿತು. ಕೆಳದಿ ದೇವಸ್ಥಾನದಲ್ಲಿ ಯುಗಾದಿಯಂದು ಪಂಚಾಂಗ ಶ್ರವಣ ನಡೆಯಬೇಕಾಗಿತ್ತು. ಈ ಪದ್ಧತಿ ನಿಲ್ಲಬಾರದೆಂದು ಸುಬ್ರಮಣ್ಯಯ್ಯನವರು ಹಳೆಯ ಕಾಗದ ಪತ್ರಗಳನ್ನೆಲ್ಲಾ ಜಾಲಾಡಿಸಿ ಯುಗಾದಿ ಫಲದ ಕಡತವನ್ನು ಆಮೂಲಾಗ್ರವಾಗಿ ಅಭ್ಯಸಿಸಿ, ಪಂಚಾಂಗ ಶ್ರವಣವನ್ನು ತಮ್ಮ ಸ್ವಹಸ್ತಾಕ್ಷರದಿಂದಲೇ ಸಿದ್ಧಪಡಿಸಿ ನಡೆಸಿಕೊಟ್ಟುದು ಈಗ ಇತಿಹಾಸ. ಸುಬ್ರಮಣ್ಯಯ್ಯ ಬರೆದ ಯುಗಾದಿಫಲ ಹಸ್ತಪ್ರತಿಯ ಕೆಲವು ಸಾಲುಗಳು:
     ಶುಭಮಸ್ತು|| ನಿರ್ವಿಘ್ನಮಸ್ತು|| ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾ.ಶ. ವರುಷ ೧೮೭೧ನೇ ಸರ್ವಧಾರಿನಾಮ ಸಂವತ್ಸರದ ಮಧ್ಯ ಮೇಷ ಸಂಕ್ರಾಂತಿಗೆ ಸಂದ ಶಾಲಿವಾಹನ ಶಕ ವರ್ಷ ೧೮೭೦ ಕಲಿವರ್ಷ ೫೦೫೦ ಕಲಿದಿನ ೧೮೪೪೧೮೬ ಧನಾಯನಾಂಶಃ
     ಅಥ ಸಂವತ್ಸರಸ್ಯ ರಾಜಾನಾಂ ಫಲಾನ್ಯುಚ್ಯಂತೇ ರಾಜಾ ಮಂದೋ ಕುಜೋರ್ ಮಂತ್ರೀ ಸೇನಾನಾಮಂ ಶಶಿಃ ಸಸ್ಯಾನಾಂ ಶುಕ್ರೋ ಧಾನ್ಯಾನಾಮ ಬುಧಃ ಅರ್ಘಾಣಾಮಂ ಚಂದ್ರೋ ಮೇಘಾಣಾಮಂ ಶಶಿಃ ರಸಾನಾಮಂ| ಅರ್ಕೊ ನಿರಸಾಧಿಪತಿ ಗುರು ಅಶ್ವಾನಾಮಂ ಮದಿತೋ ಮಂದೋ ಗಜಾನಾಮಂ| ಮಂ| ಕುಜಃ ಪಶುನಾಮಂ ಬಲರಾಮ ಭಾಗಾನಾಮಂ ಶನಿ ಮಹಿಷ್ಯಾಧಿಪತಿ ರವಿಃ ಉಷ್ಟ್ರಾನಾಮಂ ಶುಕ್ರೋ ದ್ರವ್ಯಾಣಾಂ ಮ| ಸೂರ್ಯೋ ಮೃಗಾಣಾಂ ಮಂ ಬುಧಃ ಸರ್ಪಾಣಾಂ ಮಂ ಚಂದ್ರೋ ವಸ್ತ್ರಾಣಾಂ ಮ ಮಂದೋ . . . ನಾಮಂ ಚಂದ್ರೋ ನಿರಸಾಧಿಪತಿರ್ರವಿಃ ಸ್ತ್ರೀಣಾಂಚಾಧಿಪತಿಶ್ಚಂದ್ರೋ ಯುದ್ದಾನಾಂ ಮ| ಶಶಿ| ಆಜ್ಞಾನಾಂ ಮಂ ಜೀಪೋವ್ಯವಹಾರಾದಿಪ ಶನಿಃ ವ್ಯಾಪಾರಾಧಿಪತಿರ್ಭಾನೋ ಕೋಶಾನಾಮಧಿಪತಿಶ್ಶನಿಃ ಮಾಂಗಲ್ಯಾಧಿಪತಿಃ ಸೂರ್ಯೋ ನರಾನಾಂ ಮ ಗುರುಃ| ವ್ಯಾಘ್ರಾಣಾಂ ಮ | ಸೌಮ್ಯೋ ವೃಕ್ಷಾಣಾಮ ಶಶಿ ಖಗಾನಾಮಶ್ಚಂದ್ರೋ . . . . . ಪತಯಕ್ರಮಾತ್|| ವಿಂಧ್ಯೋತ್ತರೇ ಗುರೋರ‍್ಮಾನೇ ವಿಕಾರಿ ನಾಮ ಸಂವತ್ಸರೇ ವರ್ತಮಾನೇ . . . . ಸರ್ವತ್ರ ಬಹು ಸಸ್ಯಾರ್ಘ ವೃದ್ಧಾಯಃ||
     ಈ ಸಂವತ್ಸರದಲ್ಲಿ ರಾಜರು ಪ್ರಜೆಗಳನ್ನು ಪಾಲನೆ ಮಾಡುವುದರಲ್ಲಿ ನಿರತರಾಗಿಯೂ ವಿರೋಧವಿಲ್ಲದವರಾಗಿಯೂ ಇರುವರು. ಬೆಳಸು ಚೆನ್ನಾಗಿದ್ದರೂ ಕ್ರಯವು ಹೆಚ್ಚು. ಶನೇ ರಾಜತ್ವ ಫಲಂ|| ಮಧ್ಯಾನಿ ಸಸ್ಯಾನಿ ವಿಚಿತ್ರ ವೃಷ್ಟಿಶ್ಚೋರಾಮಯಮೋದ್ಧಕರಾಜಕೋಪಃ| . . . . ಶನಿಯು ರಾಜನಾಗಿರುವುದರಿಂದ ಸಸ್ಯಗಳು ಮಧ್ಯಮವಾಗುತ್ತವೆ. ಮಳೆಯು ವಿಚಿತ್ರವಾಗಿರುತ್ತದೆ. ಕಳ್ಳರ ಭೀತಿ, ರೋಗಭಾಧೆ ಮತ್ತು ರಾಜರಲ್ಲಿ ಕೋಪಗಳು ಹೆಚ್ಚಾಗಿರುತ್ತವೆ. ಹೈನು, ಬೆಳಸು ಮತ್ತು ಚಿಲ್ಲರೆ ಧಾನ್ಯಗಳು ಚೆನ್ನಾಗಿ ಫಲಿಸುತ್ತವೆ. ಕುಜಸ್ಯ ಮಂತ್ರಿತ್ವ ಫಲಂ| ದಹನ ಪ್ರಹರಣ ಶಂಭರ ಮರುದಾಮಯ ಭೀತಿರ ಕುಳಸ್ಯಾತ್| ಕ್ಷಿತಿತನಯ ಸತಿಮಂತ್ರಿಣಿ ಪೂಷಂ ಸಮುಪೈತಿ ಸರ್ವಸಸ್ಯಚಯ| ಕುಜನು ಮಂತಿಯಾಗಿರುವುದರಿಂದ ಜನರಿಗೆ ಅಗ್ನಿ ಆಯುಧ ನೀರು ಗಾಳಿ ರೋಗ ಇವುಗಳಿಂದ ಹೆಚ್ಚಾದ ಭೀತಿಯುಂಟಾಗುತ್ತದೆ. ಎಲ್ಲಾ ಪೈರುಗಳು ವಣಗುತ್ತವೆ. ಚಂದ್ರಸ್ಯ ಸೇನಾಧಿಪತಿತ್ವ ಫಲಂ|| . . . . .ಚಂದ್ರನು ಸೇನಾಧಿಪತಿಯಾಗಿರುವುದರಿಂದ ಮೇಘಗಳು ಭೂಮಿಯಲ್ಲಿ ಮಳೆಯನ್ನು ಸುರಿಸುತ್ತವೆ. ಧಾನ್ಯಗಳಿಗೆ ಬೆಲೆಯು ಹೆಚ್ಚಾಗುತ್ತದೆ. ಪ್ರಜೆಗಳು ಸುಖಿಗಳಾಗಿರುತ್ತಾರೆ. ಗೋವುಗಳು ಹೆಚ್ಚಾಗಿ ಹಾಲನ್ನು ಕೊಡುತ್ತವೆ. . . . ಗುರೋಃ ನೀರಸಾಧಿಫಲಂ|| ಹರಿದ್ರಾ ಪೀತ ವರ್ಣಾನಾಂ ವಸ್ತ್ರಾದೀನಾಂ ತಥೈವಚ|| . . . ಗುರುವು ನೀರಸಾಧಿಪತಿಯಾಗಿರುವುದರಿಂದ ಅರಿಸಿನ ಹಳದೀ ಬಣ್ಣದ ವಸ್ತ್ರಗಳು ಬಟ್ಟೆಗಳು ಸಮೃದ್ಧಿಯಾಗುತ್ತದೆ. ಈ ವರ್ಷ ಬಟ್ಟೆ ಕಂಟ್ರೋಲ್ ಹೋಗುತ್ತದೆ. . . .  ಅಥ ಗುರುಚಾರ ಫಲಂ|| . . . . ಗುರು ಮೂರು ರಾಶಿ ಎಂದರೆ ವೃಶ್ಚಿಕ ಧನುಸ್ಸು ಮಕರ ರಾಶಿಗಳಲ್ಲಿ ಸಂಚರಿಸುವುದರಿಂದ ಭೂಮಿಯು ಏಳು ಕೋಟಿ ಹೆಣಗಳಿಂದ ಕೂಡಿದ್ದಾಗಿರುತ್ತದೆ. ಅಂದರೆ ಪ್ರಪಂಚದಲ್ಲಿ ಏಳು ಕೋಟಿ ಪ್ರಜಾನಾಶವಾಗುವುದು. . . . (ಸುಮಾರು ಮೂರು ದೊಡ್ಡ ಪುಟಗಳಾಗುವಷ್ಟು ಉಗಾದಿ ಫಲ ಬರೆದಿದ್ದು ಸ್ವಲ್ಪ ಮಾತ್ರ ಇಲ್ಲಿ ಮಾಹಿತಿಗಾಗಿ ದಾಖಲಿಸಿದೆ).

*********************
ಶ್ರೀ ಸುಬ್ರಹ್ಮಣ್ಯಯ್ಯನವರ ಸ್ವಹಸ್ತಾಕ್ಷರದ ಯುಗಾದಿಫಲದ  ಪ್ರತಿ:

************************************