ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Friday, January 6, 2012

ನಮ್ಮ ಮನೆ

ದಿನಾಂಕ 25-12-2012ರಂದು ಹಾಸನದಲ್ಲಿ ನಡೆದ ಕವಿಮನೆತನದವರ ಮತ್ತು ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಬೋಧನ್ ಸಂಸ್ಥೆಯ ಸಂಯೋಜಕರಾದ ಸನ್ಮಾನ್ಯ ಶ್ರೀ ಸು.ರಾಮಣ್ಣನವರು ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಆ ಸಂದರ್ಭದಲ್ಲಿ ಅವರು 'ನಮ್ಮ ಮನೆ' ಎಂಬ ಹಾಡನ್ನು ಹೇಳಿಕೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರಿಗೂ ಹೇಳಿಸಿ ಕಾರ್ಯಕ್ರಮ ಪ್ರಾರಂಭಿಸಿದ್ದು ವಿಶೇಷವೆನಿಸಿತು. ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲುಗೊಂಡಿದ್ದರು. ಮಿತ್ರ ಹರಿಹರಪುರ ಶ್ರೀಧರರು ಹಾಡಿನ ಭಾಗದ ದೃಷ್ಯ-ಧ್ವನಿಗ್ರಹಣ ಮಾಡಿದ್ದು ಅದನ್ನು ನಿಮ್ಮ ಕೇಳುವಿಕೆಗಾಗಿ ಇಲ್ಲಿ ಪ್ರಸ್ತುತ ಪಡಿಸಿದೆ. ಹಾಡಿನ ಸಾಹಿತ್ಯವನ್ನೂ ಕೆಳಗೆ ಕೊಟ್ಟಿದೆ.
-ಕ.ವೆಂ.ನಾಗರಾಜ್.

ನಮ್ಮ ಮನೆ
ನಮ್ಮ ಮನೆ ಇದು ನಮ್ಮ ಮನೆ
ನಲಿವಿನ ಅರಿವಿನ ನಮ್ಮ ಮನೆ |
ರೀತಿಯ ನೀತಿಯ ಭದ್ರ ಬುನಾದಿಯ
ಮೇಲೆ ನಿಂತಿದೆ ನಮ್ಮ ಮನೆ || ಪ ||

ತಾಯಿಯ ಮಮತೆಯ ತಂದೆಯ ಪ್ರೀತಿಯ
ಸೆಲೆಯಲಿ ತೆರೆದಿದೆ ನಮ್ಮ ಮನೆ
ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ
ನಿಲುವಲಿ ನಿಂತಿದೆ ನಮ್ಮ ಮನೆ || 1 ||

ಹಕ್ಕಿಗಳುಲಿವಿಗೆ ನೇಸರನುದಯಕೆ
ಏಳುವರೆಲ್ಲರು ಮುದದಿಂದ
ಮೀಯುತ ಮಡಿಯಲಿ ನೆನೆಯುತ ದೇವಗೆ
ಭಕುತಿಯ ನಮನ ಕರದಿಂದ || 2 ||

ಅಕ್ಕತಂಗಿಯರ ಅಣ್ಣತಮ್ಮದಿರ
ಕದನಕುತೂಹಲ ಮುದವಿರಲು
ಬೆಳೆಯುತ ನಾವು ಮುಂದಿನ ಪ್ರಜೆಗಳು
ದೇಶದ ಆಸ್ತಿಯು ನಾವೆನಲು || 3 ||

ಹಬ್ಬಹರಿದಿನದಿ ಮಾವುಬಾಳೆಯು
ಸಿಂಗರಿಸಿರಲು ಹಸಿರಿಂದ
ರಂಗವಲ್ಲಿಯ ಹೊಸ್ತಿಲದೀಪವು
ರುಚಿ ರುಚಿ ಅಡಿಗೆಯು ಘಮ್ಮೆಂದು || 4 ||

ಏಳುಬೀಳಿಗೆ ಕದಲದ ಮನವು
ಛಲದಲಿ ದುಡಿಯುವ ಕೈಗಳಿವು
ಬೀಳಿಗೆ ಆಸರೆ ಏಳ್ಗೆಗೆ ಹರಕೆ
ತುಂಬಿದ ಮನೆ ಮೇಲ್ ತಾಣವು || 5 ||

ಶಾಲೆಯು ಇದುವೆ ಬದುಕಿನ ಪಾಠಕೆ
ನಾಳೆಯ ಕನಸಿಗೆ ಕೇತನವು
ದೇಶವ ಕಟ್ಟುವ ಸಂಸ್ಕೃತಿ ಸಾರಕೆ
ಕೇಶವ ಕುಲದ ನಿಕೇತನವು || 6 ||



ನಮ್ಮ ಮನೆ: ಭಾಗ-1


ನಮ್ಮ ಮನೆ ಸಂವಾದ: ಭಾಗ-2

Thursday, January 5, 2012

ಸಾಧನಾ ಪಥದಲ್ಲಿ ಕೆಳದಿಕವಿಮನೆತನ

"ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ
  ಭಿನ್ನ ಭಾವ ಮರೆಯುವಾ ದೇಶಕಾಗಿ ದುಡಿಯುವಾ"
     ದಿನಾಂಕ 25-12-2011ರಂದು ಹಾಸನದಲ್ಲಿ ಕೆಳದಿ ಕವಿಮನೆತನದವರ ಹಾಗೂ ಅವರ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಉದ್ದೇಶ ಸಾಧನೆಯಲ್ಲಿ ಯಶಸ್ಸು ಕಂಡಿತೆಂದರೆ ಉತ್ಪ್ರೇಕ್ಷೆಯಲ್ಲ. ಇಂದಿನ ವ್ಯವಸ್ಥೆಯಲ್ಲಿ 'ನಾವಾಯಿತು, ನಮ್ಮ ಸ್ವಂತ ಕುಟುಂಬದ ವಿಷಯವಾಯಿತು, ಇತರ ವಿಷಯಗಳಿಗೆ ಪುರುಸೊತ್ತಿಲ್ಲ' ಎನ್ನುವ ಮನಸ್ಥಿತಿಯವರೇ ಬಹಳವಿದ್ದಾಗ ಎಲ್ಲರನ್ನೂ ಜೊತೆಗೂಡಿಸಿ ಸಜ್ಜನಶಕ್ತಿಯ ಜಾಗರಣೆ ಮಾಡುವ ಮತ್ತು ಅದರಲ್ಲಿ ಪ್ರಗತಿ ಕಾಣುವ ಕೆಲಸ ಸುಲಭವೇನಲ್ಲ. ದೂರ ದೂರದ ಊರುಗಳಿಂದ ಬಂದಿದ್ದ 150 ಬಂಧುಗಳು ಅಂದು ಒಟ್ಟಿಗೆ ಸೇರಿ ಸಂಭ್ರಮಿಸಿದ ದಿನ. ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಆಶೀರ್ವಾದದೊಂದಿಗೆ ಸಂಚಾಲಕರುಗಳಾಗಿ ಹಾಸನದ ಶ್ರೀ ಕ.ವೆಂ. ನಾಗರಾಜ್ ಮತ್ತು ಶಿವಮೊಗ್ಗದ ಶ್ರೀ ಕವಿಸುರೇಶರ ಪ್ರಯತ್ನ, ಆಯೋಜಕರಾಗಿ ಶ್ರೀಮತಿ ಮತ್ತು ಶ್ರೀ ಕುಮಾರಸ್ವಾಮಿಯವರು ಕೈಜೋಡಿಸಿದುದು, ಮಿತ್ರ ಹರಿಹರಪುರ ಶ್ರೀಧರರ ನೆರವು, ಸ್ಪಂದಿಸಿದ ಬಂಧುವರ್ಗದಿಂದಾಗಿ ಭಾಗವಹಿಸಿದವರೆಲ್ಲರಿಗೆ ಸ್ಮರಣೀಯ ಸಮಾವೇಶವೆನಿದ್ದು ಸುಳ್ಳಲ್ಲ. ಸಮಾವೇಶದ ಸಂಕ್ಷಿಪ್ತ ನೋಟ ನಿಮಗಾಗಿ, ಇದೋ ಇಲ್ಲಿ!
     ಸಮಯಪಾಲನೆಗೆ ಮಹತ್ವ ನೀಡಿ ಸರಿಯಾಗಿ 10-00 ಘಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. ಅದಕ್ಕೆ ಮುಂಚೆ ಬಂದಿದ್ದವರೆಲ್ಲರಿಗೆ ರುಚಿರುಚಿಯಾದ ಉಪಹಾರದ ವ್ಯವಸ್ಥೆಯಾಗಿತ್ತು. ವೇದಿಕೆಯಲ್ಲಿ ಮನೆತನದ ಅತ್ಯಂತ ಹಿರಿಯ ಸದಸ್ಯರಾದ ಬೆಂಗಳೂರಿನ ಶ್ರೀ ಸಾ.ಕ. ಕೃಷ್ಣಮೂರ್ತಿಯವರನ್ನು ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆಗಳ ಸ್ಥಾಪಕ ಮುಖ್ಯಸ್ಥರು, ವಿಶೇಷ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ಕುಟುಂಬ ಪ್ರಭೋದನ್ ಸಂಸ್ಥೆಯ ಸಂಯೋಜಕರಾದ ಶ್ರೀ ಸು. ರಾಮಣ್ಣನವರು ಮತ್ತು ಸಮಾವೇಶದ ಆಯೋಜಕ ದಂಪತಿಗಳಾದ ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಕುಮಾರಸ್ವಾಮಿಯವರುಗಳನ್ನು ಆಸೀನಗೊಳಿಸಲಾಯಿತು. ಕುಮಾರಿ ಸ್ಫೂರ್ತಿಆತ್ರೇಯಳ ಗಣೇಶ ಸ್ತುತಿ ನೃತ್ಯದೊಂದಿಗೆ ಶುಭಾರಂಭವಾದರೆ, ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶದ ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ: ಶ್ರೀ/ಶ್ರೀಮತಿ:  ಸಾ.ಕ.ಕೃಷ್ಣಮೂರ್ತಿ, ಸು.ರಾಮಣ್ಣ, ಸಿ.ಎಸ್.ಕೃಷ್ಣಸ್ವಾಮಿ, ಗಿರಿಜಾಂಬಾ, ಕುಮಾರಸ್ವಾಮಿ
ನಿರೂಪಕಿ: ಬಿಂದು ರಾಘವೇಂದ್ರ
ಸ್ಫೂರ್ತಿಆತ್ರೇಯಳಿಂದ ಗಣೇಶ ಸ್ತುತಿ ನೃತ್ಯ 
  ಕಳೆದ ವರ್ಷ ವಿಧಿವಶರಾದ ಬೆಂಗಳೂರಿನ ಅಡ್ವೋಕೇಟ್ ಶ್ರೀ ಬಿ.ಎನ್. ಲಕ್ಷ್ಮಣರಾವ್, ಹಾಸನ ತಾ. ನಿಟ್ಟೂರಿನ ನಿವೃತ್ತ ಉಪಾಧ್ಯಾಯ ಶ್ರೀ ರಾಮರಾವ್ ಮತ್ತು ಬೀರೂರಿನ ಶ್ರೀಮತಿ ವಿಮಲಮ್ಮಶೇಷಗಿರಿರಾವ್ ಇವರುಗಳ ಆತ್ಮಗಳಿಗೆ ಸದ್ಗತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಸನದ ಶ್ರೀ ಬಿ.ಎನ್. ಸತ್ಯಪ್ರಸಾದರವರು ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ಮಾಡಿಕೊಡುವುದರೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಶ್ರೀ ಬಿ.ಎನ್.ಸತ್ಯಪ್ರಸಾದರಿಂದ ಸ್ವಾಗತ, ಪರಿಚಯ
        'ಕವಿಕಿರಣ' ಪತ್ರಿಕೆಯ ಸಂಪಾದಕ ಶ್ರೀ ಕ.ವೆಂ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮಾವೇಶಗಳ ಹಿನ್ನೆಲೆ, ಕಾರ್ಯಕ್ರಮಗಳ ಮಹತ್ವ, ಕವಿಕಿರಣ ಪತ್ರಿಕೆಯ ಧ್ಯೇಯೋದ್ದೇಶ, ಕವಿಪ್ರಕಾಶನದ ಪ್ರಕಟಣೆಗಳು, ಇತ್ಯಾದಿ ಸಂಗತಿಗಳ ಕುರಿತು ವಿವರಿಸಿ ಸಾಧನಾಪಥದಲ್ಲಿ ಮುನ್ನಡೆದು ಮನೆತನದ ಪರಂಪರೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಶ್ರೀ ಕ.ವೆಂ.ನಾಗರಾಜರಿಂದ ಪ್ರಾಸ್ತಾವಿಕ ನುಡಿ

     "ನಮ್ಮ ಕುಟುಂಬ-ನಾವು-ನಮ್ಮವರು-ನಮ್ಮ ಮನೆ" ಎಂಬ ವಿಷಯದಲ್ಲಿ ಶ್ರೀ ಸು.ರಾಮಣ್ಣನವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ಸಮಾವೇಶದ ಪ್ರಮುಖ ಅಂಗವಾಗಿತ್ತು ಮತ್ತು ಪ್ರಭಾವಿಯಾಗಿತ್ತು. ಒಂದು ಮಾದರಿ ಕುಟುಂಬ ಹೇಗಿರಬೇಕು ಎಂಬ ಬಗ್ಗೆ ಒಂದು ಹಾಡನ್ನು ಹೇಳಿಕೊಟ್ಟು ಎಲ್ಲರಿಂದಲೂ ಹೇಳಿಸುವುದರಿಂದ ಪ್ರಾರಂಭವಾದ ಸಂವಾದದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು, ಪ್ರೇರಣೆ ಪಡೆದರು. ಹೆಚ್ಚಿನವರಿಗೆ ಇದು ಒಂದು ವಿಭಿನ್ನ ಕಾರ್ಯಕ್ರಮವೆನಿಸಿದ್ದು, ಈ ಸಂವಾದ ನೀಡಿದ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಸಂವಾದ ನಡೆಸುತ್ತಿರುವ ಶ್ರೀ ಸು.ರಾಮಣ್ಣನವರು
ಇವರುಗಳೂ ಸಂವಾದದಲ್ಲಿ ಭಾಗಿಗಳು
ಶ್ರೀ ಸು.ರಾಮಣ್ಣನವರಿಗೆ ಸನ್ಮಾನ
     ಕವಿಮನೆತನದ ಮೂಲಪುರುಷ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ Keladi Nrupa Vijaya’  ಅನ್ನು ಮುಖ್ಯ ಅತಿಥಿ ಶ್ರೀ ಕೃಷ್ಣಸ್ವಾಮಿಯವರು ಬಿಡುಗಡೆಗೊಳಿಸಿ ಈ ಕೃತಿ ಸಾರಸ್ವತ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು. ಕೃತಿ ಪರಿಚಯವನ್ನು ಸಾಗರದ ಶ್ರೀಮತಿ ಸುಮನಾವೆಂಕಟೇಶ ಜೋಯಿಸ್ ಮಾಡಿಕೊಟ್ಟರು. ಲೇಖಕ ಸುರೇಶರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಸುರೇಶ್ ಮಾತನಾಡಿ ತಮಗೆ ಇದು ಸ್ಮರಣೀಯವಾಗಿದೆಯೆಂದು ತಿಳಿಸಿ, ಈ ಕೃತಿ ತಮ್ಮ ಜೀವಮಾನದಲ್ಲಿ ಮಾಡಿದ ನೆನಪಿಟ್ಟುಕೊಳ್ಳುವ ಕೆಲಸವಾಗಿದೆಯೆಂದರು. ಕವಿಕಿರಣದ ಡಿಸೆಂಬರ್, ೨೦೧೧ ರ ಸಂಚಿಕೆಯನ್ನೂ ಬಿಡುಗಡೆಗೊಳಿಸಿ ಬಂದವರೆಲ್ಲರಿಗೆ ವಿತರಿಸಲಾಯಿತು. ಕ.ವೆಂ.ನಾಗರಾಜರ ಚಿಂತನಶೀಲ ಮುಕ್ತಕಗಳಿರುವ ಪುಸ್ತಕ ಮೂಢ ಉವಾಚದ ಪ್ರತಿಗಳನ್ನೂ ಸಹ ಬಂಧುಗಳಿಗೆ ಉಚಿತವಾಗಿ ನೀಡಲಾಯಿತು.
ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಶ್ರೀಮತಿ ಸುಮನಾ ವೆಂಕಟೇಶಜೋಯಿಸರಿಂದ ಕೃತಿ ಪರಿಚಯ
ಲೇಖಕ ಕವಿಸುರೇಶರ ಮಾತು
ಲೇಖಕರಿಗೆ ಸನ್ಮಾನ
'ಕವಿಕಿರಣ'ದ ಡಿಸೆಂಬರ್ ಸಂಚಿಕೆ ಬಿಡುಗಡೆ
ಮುಖ್ಯ ಅತಿಥಿಗಳ ಮೆಚ್ಚುಗೆಯ ನುಡಿಗಳು
     ಹಿರಿಯರಾದ ಬೆಂಗಳೂರಿನ ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾವ್, ಶಿವಮೊಗ್ಗದ ಶ್ರೀಮತಿ ಸೀತಾಲಕ್ಷ್ಮಮ್ಮಕೃಷ್ಣಮೂರ್ತಿ ಮತ್ತು ಕೆಳದಿಯ ಶ್ರೀ ಗುಂಡಾಜೋಯಿಸರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀ ಗುಂಡಾಜೋಯಿಸರು ಹೊರಗಿನವರ ಸನ್ಮಾನಕ್ಕಿಂತ ಬಂಧುಗಳು ಮಾಡಿದ ಸನ್ಮಾನ ತಮಗೆ ತುಂಬಾ ಸಂತೋಷ ನೀಡಿದೆಯೆಂದು ಕೃತಜ್ಞತೆ ಅರ್ಪಿಸಿದರು. ಶ್ರೀ ಕುಮಾರಸ್ವಾಮಿಯವರು ಮಾತನಾಡುತ್ತಾ ಭಾವುಕರಾಗಿದ್ದು ಸಮಾವೇಶದ ಯಶಸ್ಸು ಬಿಂಬಿಸಿತ್ತು. ಆಯೋಜಕರು, ಸಮಾವೇಶಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಶ್ರೀಮತಿ ಸುಬ್ಬಲಕ್ಷ್ಮಮ್ಮಸುಬ್ಬರಾಯರನ್ನು ಸನ್ಮಾನಿಸಿದಾಗ ಸಂಭ್ರಮಿಸಿದ ಬಂಧುಗಳು
ಶ್ರೀಮತಿ ಸೀತಾಲಕ್ಷ್ಮಮ್ಮ ಕೃಷ್ಣಮೂರ್ತಿಯವರನ್ನು ಸನ್ಮಾನಿಸಿದಾಗ
ಶ್ರೀ ಕೆಳದಿ ಗುಂಡಾಜೋಯಿಸರನ್ನು ಸನ್ಮಾನಿಸಿದಾಗ ಹಿಗ್ಗಿದ ಕುಟುಂಬವರ್ಗ
ಸಮಾವೇಶದ ಅಯೋಜಕರ ಬಂಧುವರ್ಗದ ಸಂಭ್ರಮ
ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳಿಗೆ ಅಭಿನಂದನೆ
ಸಹಕಾರಿ ಶ್ರೀ ಪಾಂಡುರಂಗ, ಹಾಸನ ಇವರಿಗೆ ಅಭಿನಂದನೆ
     ಇದೇ ಸಂದರ್ಭದಲ್ಲಿ ಒಂದು ಪ್ರದರ್ಶಿನಿ ಏರ್ಪಡಿಸಿದ್ದು ಇದರಲ್ಲಿ ಕವಿಮನೆತನದವರು ರಚಿಸಿದ ಕಲಾಕೃತಿಗಳು, ವರ್ಣಚಿತ್ರಗಳು, ಪುಸ್ತಕಗಳು, ಭಾವಚಿತ್ರಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗಿದ್ದು ಇದು ಇತರರಿಗೂ ಸಹ ಏನನ್ನಾದರೂ ಮಾಡಲು ಪ್ರೇರೇಪಿಸಲು ಸಹಕಾರಿಯಾಯಿತು ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಶ್ರೀ ಸಾ.ಕ.ಕೃಷ್ಣಮೂರ್ತಿಯವರು ಚಿತ್ರಗಳನ್ನು ಪ್ಲೈವುಡ್ ಮೇಲೆ ಅಂಟಿಸಿ ಕಲಾರಚನೆಗೆ ಅನುಗುಣವಾಗಿ ಕತ್ತರಿಸಿ ಸಿದ್ಧಪಡಿಸಿದ ಕೃತಿಗಳು ಗಮನ ಸೆಳೆದವು.
 ಪ್ರದರ್ಶಿನಿಯ ಕೆಲವು ದೃಷ್ಯಗಳು


     ಬೆಂಗಳೂರಿನ ಶ್ರೀಮತಿ ಸುಮಾರಾಜೇಶ್, ಕುಮಾರಿಯರಾದ ಸ್ಫೂರ್ತಿಆತ್ರೇಯ ಮತ್ತು ಲಕ್ಷ್ಮಿಶ್ರೀಭಾರದ್ವಾಜರವರುಗಳಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಕಲಾರಸಿಕರಿಗೆ ಮನದಣಿಸುವಲ್ಲಿ ಯಶಸ್ವಿಯಾಯಿತು. ಶ್ರೀಮತಿ ಸುಮಾರಾಜೇಶರು ಬೆಂಗಳೂರಿನಲ್ಲಿ ಸ್ಫೂರ್ತಿ ನಾಟ್ಯಶಾಲೆ ನಡೆಸುತ್ತಿದ್ದು ಹೆಸರಾಂತ ಕಲಾವಿದೆಯಾಗಿದ್ದಾರೆ. ಕುಮಾರಿ ಪಲ್ಲವಿ ಸತ್ಯಪ್ರಸಾದರ ಹಾಡುಗಾರಿಕೆ ಕೇಳುಗರಿಗೆ ಹಿತವಾದ ಅನುಭವ ನೀಡಿತು. ಪುಟಾಣಿ ಅಕ್ಷಯಳ ಏಕಪಾತ್ರಾಭಿನಯ. ಅನಘನ ಭಗವದ್ಗೀತಾ ಪಠಣ, ಕು. ಕವನ ಸಂಗಡಿಗರಿಂದ ಡ್ಯಾನ್ಸ್, ಶ್ರೀ ಲಕ್ಷ್ಮೀಶರ ಹಾಡು, ಡಾ. ಬಿ.ಎಸ್.ಆರ್. ದೀಪಕ್‌ರ ಸಂಗೀತ, ಅನೇಕ ಬಂಧುಗಳು, ವಿಶೇಷವಾಗಿ ಪುಟಾಣಿಗಳು ನಡೆಸಿಕೊಟ್ಟ ವಿವಿಧ ಮನರಂಜನಾ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿದವು. ಶ್ರೀಮತಿ ಬಿಂದುರಾಘವೇಂದ್ರರವರ ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಧ್ಯಾಹ್ನದ ಭೋಜನಾನಂತರ ಸಹ ಮನರಂಜನೆ ಕಾರ್ಯಕ್ರಮಗಳು ಮುಂದುವರೆದವು. ವಂದನೆ, ಅಭಿನಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಾಗ ಎಲ್ಲರೂ ಸ್ಮರಣೀಯ ನೆನಪುಗಳೊಂದಿಗೆ ತಮ್ಮ ತಮ್ಮ ಊರುಗಳಿಗೆ ತೆರಳಿದರೆ ಸಮಾವೇಶಕ್ಕಾಗಿ ಶ್ರಮಿಸಿದವರಲ್ಲಿ ಸಮಾವೇಶ ಸಫಲಗೊಂಡ ಬಗ್ಗೆ ಸಾರ್ಥಕಭಾವ ಮೂಡಿತ್ತು.
ಸ್ಫೂರ್ತಿ ಆತ್ರೇಯ
 ಸುಮಾ ರಾಜೇಶ್


ಲಕ್ಷ್ಮಿಶ್ರೀ ಭಾರದ್ವಾಜ್
ಪಲ್ಲವಿ ಸತ್ಯಪ್ರಸಾದರಿಂದ ಸುಮಧುರ ಹಾಡುಗಳು
ಅಕ್ಷಯ, ಓರ್ವ  ಪುಟಾಣಿ, ಅನಘ, ಡಾ. ದೀಪಕ್.
ಅಂಬಿಕಾ, ಗೋಪಾಲಕೃಷ್ಣ, ಅಕ್ಷಯ, ಲಕ್ಷ್ಮೀಶ



ಇವರುಗಳೇ ಸಕ್ರಿಯರಾಗಿ ಪಾಲುಗೊಂಡು ಸಮಾವೇಶವನ್ನು ಸಾರ್ಥಕಗೊಳಿಸಿದವರು
************
ಸಮಾವೇಶಕ್ಕೆ ಸಂಬಂಧಿಸಿದ ಇನ್ನಷ್ಟು ಚಿತ್ರಗಳು




ಕವಿಸುರೇಶರ ಆಂಗ್ಲಭಾಷೆಯ ಕೃತಿ 'ಕೆಳದಿನೃಪ ವಿಜಯ'ದ ಬಿಡುಗಡೆ
ಲೇಖಕ ಕವಿಸುರೇಶರಿಗೆ ಸನ್ಮಾನ
ಸನ್ಮಾನಿತರ ಪರವಾಗಿ ಶ್ರೀ ಕೆಳದಿ ಗುಂಡಾಜೋಯಿಸರ ಅನಿಸಿಕೆ
ಸಹಕಾರಿ ಶ್ರೀ ಪಾಂಡುರಂಗರವರಿಗೆ ಅಭಿನಂದನೆ


ಸಹಕಾರಿಗಳು ಶ್ರೀ ಹರಿಹರಪುರ ಶ್ರೀಧರ ದಂಪತಿಗಳನ್ನು ಅಭಿನಂದಿಸಿದಾಗ



    

Monday, January 2, 2012

ಕೆಳದಿ ಕವಿ ಮನೆತನದ ವಾರ್ಷಿಕ ಸಮಾವೇಶ-6 : ಹಾಸನ

ದಿನಾಂಕ 25.12.11 ರಂದು ಹಾಸನದಲ್ಲಿ ನಡೆದ ಕವಿ ಮನೆತನದವರ ಮತ್ತು ಬಂಧುಗಳ ವಾರ್ಷಿಕ ಸಮಾವೇಶದ ವಿಚಾರವಾಗಿ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ  ತುಣುಕು ಮಾಹಿತಿಗಾಗಿ: