ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, December 14, 2010

ಕವಿ ವೆಂಕಟಸುಬ್ಬರಾವ್ - ಸೀತಮ್ಮ

ಕೆಳದಿ ಕವಿಮನೆತನದ ಸಮಕಾಲೀನರು -೧
ಕವಿ ವೆಂಕಟಸುಬ್ಬರಾವ್ - ಸೀತಮ್ಮ
     ಕವಿ ವೆಂಕಟಸುಬ್ಬರಾವ್ ರವರು ಸಮಕಾಲೀನ ಕವಿ ಕುಟುಂಬಗಳ ಸದಸ್ಯರುಗಳ ಪೈಕಿ ಅತ್ಯಂತ ಹಿರಿಯ ಸದಸ್ಯರು. ೧೨-೦೧-೧೯೨೫ರಲ್ಲಿ ಜನಿಸಿ ಧರ್ಮಪತ್ನಿ ಸೀತಮ್ಮರವರನ್ನು ೨೩-೦೫-೧೯೪೯ರಲ್ಲಿ ವಿವಾಹವಾಗಿ ಸಾರ್ಥಕ ಬದುಕು ನಡೆಸಿರುವ ಇವರು ಸದ್ಯದಲ್ಲಿಯೇ ೬೦ ವರ್ಷಗಳ ದಾಂಪತ್ಯ ಜೀವನ ಪೂರ್ಣ ಗೊಳಿಸಲಿದ್ದಾರೆ. ಕವಿಕಿರಣ ಬಳಗ ಇರುಗಳಿಗೆ ಸುದೀರ್ಘ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತದೆ; ಹಾಗೂ ಇವರ ಮಾರ್ಗದರ್ಶನ ಬಯಸುತ್ತದೆ.      ಇವರ ಪರಿಚಯ ಲೇಖನ ಬರೆದಿರುವ ಶ್ರೀ ಹೆಚ್. ಎಸ್. ಗೋಪಾಲಕೃಷ್ಣರವರು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್ ರವರ ತಮ್ಮ. ನ್ಯಾಯಾಂಗ ಇಲಾಖೆ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಶಿರಸ್ತೆದಾರರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ. 

ಹೀಗಿದ್ದಾರೆ ನಮ್ಮ ಅಕ್ಕ - ಭಾವ   
     ನನ್ನ ಅಕ್ಕ ಸೀತಮ್ಮನನ್ನು ಕವಿ ಸುಬ್ರಹ್ಮಣ್ಯಯ್ಯ ರವರ ಏಕೈಕ ಪುತ್ರ ಕೆ. ವೆಂಕಟಸುಬ್ಬರಾವ್‌ರವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ನ್ಯಾಯಾಂಗ ಇಲಾಖೆಯಲ್ಲಿ ಕಾಪಿಯಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯಯ್ಯನವರಿಗೆ ಇಬ್ಬರು     ಹೆಣ್ಣು ಮಕ್ಕಳೂ  - ಸೀತಾಲಕ್ಷ್ಮಮ್ಮ ಮತ್ತು ನಾಗರತ್ನಮ್ಮ - ಇದ್ದಾರೆ.
     ಸುಬ್ರಹ್ಮಣ್ಯಯ್ಯನವರು ತಮ್ಮ ಮಗ ಹುಟ್ಟಿದ ಮೂರು ತಿಂಗಳಿಗೇ ಕೊಪ್ಪವನ್ನು ಬಿಟ್ಟು ದಾವಣಗೆರೆಗೆ ಬಂದು ನೆಲೆಸಿದರು. ವೆಂಕಟಸುಬ್ಬರಾಯರು ದಾವಣಗೆರೆ ಯಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೇ ಹೋಗಬೇಕಾಗಿದ್ದರಿಂದ ಅನಾನುಕೂಲತೆಯಿಂದ ಮುಂದೆ ಓದಲಾಗಲಿಲ್ಲ. ನೌಕರಿಗೆ ಸೇರಿ ಆಸರೆ ಯಾಗಿರಬೇಕೆಂದು ತಂದೆ ಬಯಸಿದ್ದರು. ಅದರಂತೆ ಆಗ ಹರಿಹರದಲ್ಲಿ ಬೀಡು ಬಿಟ್ಟಿದ್ದ ಬ್ರಿಟಿಶ್ ಮಿಲಿಟರಿ ಕ್ಯಾಂಪ್‌ನಲ್ಲಿ ಸಿವಿಲ್ ವಿಭಾಗದಲ್ಲಿ ಕ್ಲರ್ಕ್ ಆಗಿ ಸ್ವಲ್ಪ ಸಮಯ ಕೆಲಸ ಮಾಡಿದರು.  ತಂದೆಗೆ ಮಿಲಿಟರಿ    ಸೇವೆ ಮಾಡುವುದು  ಇಷ್ಟವಿಲ್ಲದ್ದರಿಂದ   ನ್ಯಾಯಾಂಗ ಇಲಾಖೆಯಲ್ಲಿ     ೨೨-೬-೧೯೪೫ರಲ್ಲಿ ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಗುಮಾಸ್ತರಾಗಿ ನೇಮಕಗೊಂಡು ನಂತರದಲ್ಲಿ ನ್ಯಾಯಾಂಗ ಇಲಾಖೆಯ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಶಿರಸ್ತೇದಾರ್ ಹುದ್ದೆಯವರೆಗೆ ಬಡ್ತಿ ಹೊಂದಿ ಹಲವು ಊರುಗಳಲ್ಲಿ -ಅಂದರೆ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಭದ್ರಾವತಿ, ನರಸಿಂಹರಾಜಪುರ, ಮೈಸೂರು, ಹಾಸನ, ಇತ್ಯಾದಿ - ಕೆಲಸ ಮಾಡಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ ಸಿವಿಲ್, ಕ್ರಿಮಿನಲ್ ವಿಭಾಗದ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಣಿತಿ ಹೊಂದಿದ್ದು, ಸಿಬ್ಬಂದಿಗಳಿಗೆ ನ್ಯಾಯಾಂಗ ಇಲಾಖೆಯ ಎಲ್ಲಾ ಕೆಲಸಗಳನ್ನು ಹೇಳಿಕೊಡುತ್ತಿದ್ದರಲ್ಲದೆ  ನ್ಯಾಯಾಧೀಶರುಗಳೂ ಕೆಲವು ಸಂದರ್ಭಗಳಲ್ಲಿ ಇವರ ಸಲಹೆ ಪಡೆಯುತ್ತಿದ್ದರು.
     ಅವರ ೨೫ನೆಯ ವಯಸ್ಸಿನಲ್ಲಿ ನನ್ನಕ್ಕ ಅಂದರೆ ಹಳೇಬೀಡು ಶ್ಯಾನುಭೋಗರಾಗಿದ್ದ ಶ್ರೀಯುತ ಹೆಚ್. ಪಿ. ಸುಬ್ಬರಾಯರ ಜೇಷ್ಠ ಪುತ್ರಿ ಸೀತಮ್ಮನನ್ನು ವಿವಾಹ ವಾದರು. ಸೀತಮ್ಮ ಸರಳ ಸುಂದರವಾಗಿದ್ದು ವೆಂಕಟ ಸುಬ್ಬರಾಯರಿಗೆ ಅನುರೂಪಳಾಗಿದ್ದು, ಒಳ್ಳೆಯ ಗೃಹಿಣಿ. ಮಮತಾಮಯಿ. ವೆಂಕಟಸುಬ್ಬರಾಯರಿಗೆ ಆಗ ತಮ್ಮ ಕಡೆಯ ಬಂಧು ಬಳಗ ಜಾಸ್ತಿ ಇರಲಿಲ್ಲ. ಹೆಂಡತಿಯ ತವರುಮನೆ ಅಂದರೆ ನಮ್ಮ ಕಡೆಯ ಬಳಗದವರನ್ನು ಬಹಳ ಹಚ್ಚಿಕೊಂಡಿದ್ದರು. ನಮ್ಮ ತಂದೆ ತಾಯಿಗೆ ಎಂಟು ಜನ ಗಂಡು ಮಕ್ಕಳು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು ಇರುವ ದೊಡ್ಡ ಕುಟುಂಬವಿದ್ದರೂ, ಶ್ರೀಯುತರು ಮಾವನಿಗೆ ಹಿರಿಯ ಮಗನಂತೆ ಇದ್ದು, ಅವರ ಕುಟುಂಬದ ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದು ನಮಗೆ ಹೆಮ್ಮೆಯ ವಿಷಯ. ನಾನು ಮತ್ತು ನನ್ನ ತಮ್ಮ ಜಯಶಂಕರನೇ ಇದಕ್ಕೆ ನಿದರ್ಶನ. ನಮ್ಮಿಬ್ಬರ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಂಡು ಸರ್ಕಾರಿ ನೌಕರಿ ದೊರೆಯುವವರೆಗೆ ಜೀವನಕ್ಕೆ ದಾರಿಯಾಗುವಂತೆ ಉಪಕಾರ ಮಾಡಿದ್ದಾರಲ್ಲದೆ, ನನ್ನ ಮದುವೆಯ ಉಸ್ತುವಾರಿಯನ್ನೂ ಅವರೇ ಹೊತ್ತು ಕೊಂಡು ನಿರ್ವಹಿಸಿದರು. ಆ ವೇಳೆಗಾಗಲೇ ನಮ್ಮ ತಂದೆಯವರು ಕಾಲವಾಗಿದ್ದರು. ನಮ್ಮ ತಂದೆಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಅವರೇ ಆಶ್ರಯ ಕೊಟ್ಟು ಉಪಚರಿಸಿದ ಮಹಾನುಭಾವರು. ನನ್ನ ಮದುವೆ ಪ್ರಭಾವತಿಯೊಂದಿಗೆ ಆಗಿದ್ದು. ನಮ್ಮಿಬ್ಬರನ್ನೂ ಅವರ ಮನೆಯಲ್ಲೇ ಆಶ್ರಯ ಕೊಟ್ಟು ಒಂದು ವರ್ಷದವರೆಗೆ ಇಟ್ಟುಕೊಂಡಿದ್ದರು. ಅವರಿಗೆ ನರಸಿಂಹ ರಾಜಪುರಕ್ಕೆ ವರ್ಗವಾದ ಕಾರಣ ನಾನು ಬೇರೆ ಮನೆ ಮಾಡಬೇಕಾಯಿತು. ಆಗಲೂ ಅವರು ನಮ್ಮಿಬ್ಬರನ್ನು ಬಿಟ್ಟು ಹೋಗುವಾಗ ಅವರ ಮಕ್ಕಳನ್ನು ಬಿಟ್ಟು ದೂರ ಹೋಗುತ್ತಿರುವಷ್ಟೇ ದುಃಖಿಸಿದರು. ಅವರು ತಮ್ಮ ತಂಗಿಯ ಗಂಡ (ಭಾವ) ಕೃಷ್ಣಮೂರ್ತಿಯವರಿಗೂ ನ್ಯಾಯಾಂಗ ಇಲಾಖೆಯಲ್ಲಿ ನೌಕರಿ ಕೊಡಿಸಿ ಜೀವನಕ್ಕೆ ದಾರಿ ಮಾಡಿಕೊಟ್ಟರು. ನನ್ನ ತಂಗಿಯ ಗಂಡ ಸತ್ಯನಾರಾಯಣರವರಿಗೂ ಸಹ ನ್ಯಾಯಾಂಗ ಇಲಾಖೆ ಯಲ್ಲಿ ಕೆಲಸ ಕೊಡಿಸಿ ಉಪಕಾರ ಮಾಡಿದರು.
     ಅವರ ಔದಾರ್ಯ, ವಿವೇಚನೆ, ಸಹಕಾರ, ಕಾರ್ಯತತ್ಪರತೆ, ಕರುಣೆ ಇವುಗಳನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ಕರ್ತವ್ಯ ನಿರ್ವಹಿಸುವಾಗ ಹತ್ತಾರು ಜನರಿಗೆ ಕೆಲಸ ಕೊಡಿಸಿದ್ದನ್ನು ಪಡೆದವರು ಈಗಲೂ ಅವರನ್ನು ಸ್ಮರಿಸುತ್ತಿದ್ದಾರೆ. ಸ್ವಲ್ಪ ಮುಂಗೋಪದ ಸ್ವಭಾವದವರಾದರೂ ಮೃದು ಹೃದಯಿಗಳು.     ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಹೊಂದಿರುವ ಇವರು ಎಲ್ಲರಿಗೂ ವಿದ್ಯಾಭ್ಯಾಸ ಮಾಡಿಸಿ ವಿವಾಹಗಳನ್ನು ಮಾಡಿ ಎಲ್ಲರೂ ಒಳ್ಳೆಯ ಸ್ಥಿತಿಯಲ್ಲಿ ನೆಲೆಗೊಳ್ಳುವಂತೆ ಮಾಡಿದ್ದಾರೆ. ಹಿರಿಯ ಮಗ ನಾಗರಾಜ ತಹಸೀಲ್ದಾರ್ ಆಗಿದ್ದಾನೆ. ಮಗಳು ಲಲಿತಾಂಬಾ ವೆಂಕಟರಾಮಯ್ಯ ನ್ಯಾಯಾಂಗ ಇಲಾಖೆಯಲ್ಲಿ ಶೀಘ್ರಲಿಪಿಗಾರ್ತಿಯಾಗಿದ್ದು ಸ್ವಯಂ ನಿವೃತ್ತಿ ಪಡೆದವಳು ಎರಢನೆಯ ಮಗ ಸುರೇಶ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದು ಸ್ವಯಂ ನಿವೃತ್ತಿ ಪಡೆದು ಸಮಾಜ ಕಾರ್ಯಗಳಲ್ಲಿ ತೊಡಗಿದ್ದಾನೆ. ಮೂರನೆಯ ಮಗ ಶ್ರೀಧರ ಖಾಸಗಿ ವೃತ್ತಿಯಲ್ಲಿದ್ದಾನೆ. ಕೊನೆಯ ಮಗ ಅನಂತ ಅಮೆರಿಕಾದಲ್ಲಿ ಸಾಫ್ಟ್ ವೇರ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಹೊಂದಿ ಅವರ ಅಭಿವೃದ್ಧಿಯನ್ನು ಕಾಣುತ್ತಾ ಸಂತೋಷದಿಂದ ಪತ್ನಿ ಸೀತಮ್ಮರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ.
     ಶ್ರೀಯುತರ ಈ ಯಶಸ್ಸಿನ ಗುಟ್ಟಿಗೆ ಅವರ ಶ್ರೀಮತಿ ಸೀತಮ್ಮನವರ ಸಹಕಾರ, ಔದಾರ್ಯವೇ ಕಾರಣ. ತಾಳ್ಮೆ, ಸಹನೆ, ವಿವೇಕದ ಪ್ರತಿರೂಪವಾಗಿರುವ ಮಮತಾಮಯಿ ತಾಯಿ ಸೀತಮ್ಮ. ಇವರ ಗಂಡು ಮಕ್ಕಳೂ ಇವರನ್ನು ಕಣ್ಣು ರೆಪ್ಪೆಯಂತೆ ನೋಡಿ ಕೊಳ್ಳುತ್ತಿದ್ದಾರೆ. ನಮಗಂತೂ ಇವರಿಬ್ಬರು ನಮ್ಮ ತಂದೆ ತಾಯಿಯ ಸ್ಥಾನದಲ್ಲಿರುವ ಮಹಾನುಭಾವರು. ಅವರಿಗೆ ನನ್ನ ಮತ್ತು ನನ್ನ ಪತ್ನಿ ಪ್ರಭಾವತಿಯ ಸಾಷ್ಟಾಂಗ ನಮನಗಳನ್ನು ಎಷ್ಟು ಅರ್ಪಿಸಿದರೂ ಸಾಲದೆನಿಸುತ್ತದೆ. ಅವರು ಯಾವಾಗಲೂ ನಮ್ಮ ಹಳೇಬೀಡಿನ ಬಾಂಧವ ರೆಲ್ಲರ ಕಷ್ಟ ಸುಖಗಳನ್ನು ವಿಚಾರಿಸಿಕೊಳ್ಳದ ದಿನವಿಲ್ಲ. ಆಗಾಗ್ಗೆ ನಾವೆಲ್ಲಾ ಭೇಟಿ ಯಾಗುತ್ತಿದ್ದರೆ  ಅದೇ ಅವರಿಗೆ ಸಂತಸ. ಎಲ್ಲರ ಯಶಸ್ಸಿಗೆ ಹಾರೈಸುವುದೇ ಅವರ ದೊಡ್ಡ ಗುಣ. ಅವರು ಶಿವಮೊಗ್ಗದಲ್ಲಿದ್ದರೂ ಅವರ ಮನಸ್ಸು ಯಾವಾಗಲೂ ಎಲ್ಲಾ ಬಂಧುಗಳ ಕುಟುಂಬಗಳೊಂದಿಗೆ ಬೆರೆತಿರುತ್ತದೆ. ದೇವರು ಅವರಿಬ್ಬರನ್ನೂ ಸಂಪೂರ್ಣ ಆಯಸ್ಸು ಮತ್ತು ಆರೋಗ್ಯ ಕೊಟ್ಟು ಚೆನ್ನಾಗಿಟ್ಟಿರಲಿ ಎಂಬುದೇ ನಮ್ಮ ಪ್ರಾರ್ಥನೆ.

-ಹೆಚ್. ಎಸ್. ಗೋಪಾಲಕೃಷ್ಣ.
* * * * * * * *
(ಡಿಸೆಂಬರ್, 2008ರ ಕವಿಕಿರಣ ಪತ್ರಿಕೆಯಲ್ಲಿ ಪ್ರಕಟಿತ ಲೇಖನ).

No comments:

Post a Comment