ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Thursday, September 16, 2010

ವೆಂಕ ಕವಿ (ವೆಂಕಭಟ್ಟ - ವೆಂಕಣ್ಣ ) ಪತ್ನಿ-ದೇವಮ್ಮ


ಕ್ರಿ.ಶ.1770ರಲ್ಲಿದ್ದ ವೆಂಕ ಕವಿ, ಕವಿ ಲಿಂಗಣ್ಣನ ಮಗ. ನರಹರಿ ವಿಜಯ - ಈ ಕವಿ ಬರೆದ ಕಾವ್ಯ (ಭಾಮಿನಿ ಷಟ್ಪದಿಯಲ್ಲಿ). ಇದರಲ್ಲಿ 85 ಪದ್ಯಗಳು ಮತ್ತು 7 ಗರಿಗಳಿದ್ದು ಇದು ನೃಸಿಂಹಾವತಾರಕ್ಕೆ ಸಂಬಂಧಿಸಿದ ಕಾವ್ಯ. ಇದಲ್ಲದೇ ಗಣ ಸಹಸ್ರನಾಮ (ವಾರ್ಧಕ, ಭಾಮಿನಿ, ಪರಿವರ್ಧಿನಿ ಈ ಷಟ್ಪದಿಗಳೂ 100 ಮತ್ತು 1 ವಚನ - ಒಟ್ಟು 101 ಪದ್ಯ ಸಂಖ್ಯೆಯುಳ್ಳ ಕಿರುಕೃತಿ) ಮತ್ತು ಪಾರ್ವತಿ ವಲ್ಲಭ ಶತಕ (ಇದೊಂದು ನೀತಿ ಶತಕ - ದೈವಭಕ್ತಿ, ಗುರುಭಕ್ತಿ, ಗುರು-ಹಿರಿಯರಲ್ಲಿ ಶ್ರಧ್ದೆ, ಧರ್ಮದಲ್ಲಿ ಒಲವು ಹಾಗೂ ನಿಷ್ಠೆಯ ನಿಲುವನ್ನು ನಿರೂಪಿಸುವ ಒಂದು ತಾತ್ವಿಕ ಗ್ರಂಥ - 101 ಪದ್ಯಗಳಿವೆ) ಎಂಬ ಕೃತಿಯನ್ನೂ ರಚಿಸಿದ್ದಾರೆ. ಇತ್ತೀಚೆಗೆ ಇದನ್ನು ಕೆಳದಿಯ ಡಾ:ವೆಂಕಟೇಶ್ ಜೊಯಿಸರವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಕೆಳದಿ ಶ್ರೀ ರಾಮೇಶ್ವರ ದೇವರನ್ನು ಮತ್ತು ಕುಲದೇವರಾದ ಕೊಲ್ಲೂರು ಮೂಕಾಂಬಿಕೆಯನ್ನು ಅಂಕಿತನಾಮವನ್ನಾಗಿಟ್ಟುಕೊಂಡು ಈ ವೆಂಕಣ್ಣ ಕವಿ ಭಕ್ತಿಯಿಂದ ರಚಿಸಿದ ಹಲವಾರು ಕೀರ್ತನೆಗಳು ತಾಡವೋಲೆಯಲ್ಲಿ ದೊರೆತಿದ್ದು, ಕೆಳದಿ ಗುಂಡಾಜೊಯಿಸರು "ಕೆಳದಿ ವೆಂಕಣ್ಣಕವಿಯ ಕೀರ್ತನೆಗಳು" ಎಂಬ ಪುಸ್ತಕದಲ್ಲಿ ಸಂಪಾದಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದಾರೆ (1977). ಈ ಕವಿಯು ಮೂಕಾಂಬಿಕೆಯ ಮೇಲೆ ರಚಿಸಿದ ಒಂದು ಕೀರ್ತನೆಯ ತಾಡವೋಲೆಯು ಲಭಿಸಿದ್ದು ಅದನ್ನು ಕೊನೆಯಲ್ಲಿ ಪ್ರಸ್ತುತಿ ಪಡಿಸಲಾಗಿದೆ. ಅನೇಕ ಹಾಡುಗಳಿಗೆ ಸಂಗೀತ ಶಾಸ್ತ್ರದಲ್ಲಿ ಹೇಳಿದ ರಾಗಗಳನ್ನು ತಾಳೆಗರಿಯಲ್ಲಿ ಕವಿಯು ಸೂಚಿಸಿದ್ದು, ಇದರಿಂದ ಕವಿಗೆ ಸಂಗೀತ ಶಾಸ್ತ್ರದಲ್ಲಿ ಸಾಕಷ್ಟು ಜ್ಞಾನವಿತ್ತೆಂದು ತಿಳಿಯಬಹುದಾಗಿದೆ. ಈ ಕೃತಿಗಳಲ್ಲಿ ಮೂಡಿರುವ ಕೆಲವು ಅತ್ಯಂತ ಮಾರ್ಮಿಕವಾದ, ದಾರ್ಶನಿಕವಾದ ಹಾಗೂ ಭಕ್ತಿ ಭಾವದ ಕೆಲವು ಸಾಲುಗಳನ್ನೂ ಕೂಡ ಕೊನೆಯಲ್ಲಿ ನೀಡಲಾಗಿದೆ. ಮಾನವನ ಜೀವನದ ಸಾರ್ಥ್ಯಕ್ಕೆ ಬೇಕಾದ ಎಲ್ಲಾ ಒಳಗುಟ್ಟುಗಳೂ ಈ ಕೃತಿಗಳಲ್ಲಿ ಅಡಗಿದೆಯೆಂದರೆ ಅತಿಶಯೋಕ್ತಿಯಾಗಲಾರದು.

ತಾಡೆಯೋಲೆ ಕೃತಿ: ರಾಗ: ಮಧ್ಯಮಾವತಿ - ತಾಳ: ಆದಿತಾಳ

ಮಂಗಲಂ ಜಯಮಂಗಲಂ
ತ್ರಿಜಗಂಗಳ ಪೊರೆವ ಶ್ರೀ ಮೂಕಾಂಬೆಗೆ (ಪಲ್ಲವಿ)

ಗೌರಿಗೆ ಗುಜನನಿಗೆ ಗಿರಿಜಾತೆಗೆ
ಧೀರಮಹಿಷ ದೈತ್ಯಮರ್ಧಿನಿಗೆ
ಕಾರುಣ್ಯ ನಿಧಿಗೆ ಕಾಮಿತ ಫಲದಾತೆಗೆ
ನಾರದನುತೆಗೆ ನಾರಾಯಣಿಗೆ | 1 |

ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆ
ದುರಿತ ದಾರಿದ್ರೈ ಹರ್ತ್ರೆಗೆ ದುರ್ಗಿಗೆ
ಪರಮೇಶ್ವರಿಗೆ ಪಾವನಚರಿತೆಗೆ ಶುಭ
ಕರಿಗೆ ಸಮಸ್ತಮಂತ್ರೇಶ್ವರಿಗೆ | 2 |

ರಾಜಶೇಖರಿಗೆ ರಾಜೀವ ನೇತ್ರೆಗೆ ರಕ್ತ
ಬೀಜ ಶಾಸಿನಿಗೆ ಭುವನಮಾತೆಗೆ
ತೇಜೋಮಯಿಗೆ ತರಣಿಕೋಟಿ ಭಾಷೆಗೆ
ಶ್ರೀ ಜನಾರ್ಧನನ ಸಹೋದರಿಗೆ | 3 |

ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆ
ಕಾಳರಾತ್ರಿಗೆ ಕಾತ್ಯಾಯಿನಿಗೆ
ವ್ಯಾಳ ಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆ
ಭಾಲನೇತ್ರೆಗೆ ಭಯ ಹಾರಿಣಿಗೆ | 4 |

ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆ
ಮುಂಡಿಗೆ ಧೂಮ್ರಲೋಚನಹರ್ತ್ರೆಗೆ
ಚಂಡಮುಂಡಾಸುರರಸುರಣರಂಗದಿ
ದಿಂಡುದರಿಂದ ಸರ್ವಮಂಗಲೆಗೆ | 5 |

ಚಾರುಮ್ಮಗೆ ಭೈರವಿಗೆ ಭವಾನಿಗೆ
ಶಿವೆಗೆ ಶಾಶ್ವತಗೆ ಸೌಖ್ಯಪ್ರದೆಗೆ
ಪ್ರವಿರಳಾನಂತಲೀಲಾತ್ಮಿಕೆಗಭಿನವ
ಕುವಲಯನೀಲ ಕೋಮಲಗಾತ್ರಿಗೆ | 6 |


ಕಡುಗಲಿ ಶುಂಭನಿಶುಂಭರ ಗೆಲೆದಳ್ಗೆ
ಮೃಡನರಸಿಗೆ ಮೂಕಮರ್ದಿನಿಗೆ
ತಡೆಯದೆ ಸಕಲಜನರ ಮನೋಭೀಷ್ಟವ
ಕೊಡುವ ಕೊಲ್ಲೂರ ಶ್ರೀ ಮೂಕಾಂಬೆಗೆ | 7 |
-------------------------------------------------------------------------------------

ಕವಿ ವೆಂಕಣ್ಣನವರ ಕೀರ್ತನೆಗಳಿಂದ ಆಯ್ದ ಕೆಲವು ಸಾಲುಗಳು

ವರದಾನದಿಯ ತೀರವಾಸ ಶ್ರೀ ಕೆಳದಿಯ
ಪುರವರಾಧೀಶ ರಾಮೇಶ್ವರನ
ಪರಮಮೋಹದ ಪುತ್ರ ಪಾವನತರಗಾತ್ರ
ವರದ ಶ್ರೀ ಗಣಪತಿ ಜಯಜಯ ಜಯವೆಂದೂ
***
ಪಲ್ಲಕ್ಕಿಯ ಸಾನಂದದೊಳೇರು
ಹಲ್ಲಣಿಸಿದ ಕರಿತುರಗವನೇರು
ಎಲ್ಲಾಭರಣವನಿಟ್ಟು ಸುಖದಿಪ್ರಾಣ
ದೊಲ್ಲಭಸಹಿತ ಸಂತೋಷದೊಳಿರು ಶ್ರೀ
ಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ

*** ***

ಪರಿಮಳಿಸುವ ಪುಷ್ಪಸರಗಳ ಮುಡಿದು
ಗುರುಹಿರಿಯರ ಆಶೀರ್ವಾದವ ಪಡೆದು
ಹರುಷದಿ ಪುತ್ರಪೌತ್ರರ ಸಲಹುತ ಪತಿ
ಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯ
ವರ ಸುಬ್ರಹ್ಮಣ್ಯನ ಕೃಪೆಯಿಂದಾ
***
ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-
ಪೇಂದ್ರನಾಗು ಬುದ್ಧಿಕೌಶಲ್ಯದೊಳು ತಿಳಿಯಲು ನಾ-
ಗೇಂದ್ರ ನೀನಾಗು
***

ತನ್ನ ತಾನೇ ತಿಳಿಯಬೇಕು | ತೋರುವ ಲೋಕ
ವನ್ನು ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ನನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು
***
ತುಲಸಿಯ ಮೂಲದೆ ನದಿಗಳು
ತುಲಸಿಯ ದಳದೊಳೆ ಶ್ರೀ ಹರಿಯು
ತುಲಸಿಯ ಶಾಖೆಯೊಳೆ ಸುರರೆಲ್ಲಾ
ನೆಲೆಸಿಹರು ಶ್ರೀ ತುಲಸಿಯ ಮಹಿಮೆಗೆಣೆಯುಂಟೇ
@@@@@@@

2 comments:

  1. ಒಳ್ಳೆಯ ಪ್ರಯತ್ನ. ವೆಂಕಣ್ಣನ ಕೃತಿಗಳನ್ನು ಧಾರಾವಾಹಿಯಾಗಿ ಪ್ರಕಟಿಸುವ ಬಗ್ಗೆ ಚಿಂತಿಸಬಹುದು.

    ReplyDelete
  2. ಕವಿ ಕಿರಣ ಪತ್ರಿಕೆ ಸೂಕ್ತವೆನಿಸುತ್ತದೆ.

    ReplyDelete