ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, February 22, 2011

ಉತ್ತಮ ಬಾಂಧವ್ಯದೆಡೆಗೆ

      "ವಾವ್!, ನಿಜಕ್ಕೂ ಹೊಸ ಅನುಭವ. ಇಂತಹ ಕಾರ್ಯಕ್ರಮ ನಾನು ಮೊದಲು ನೋಡಿರಲಿಲ್ಲ. ಬಹಳ ಉತ್ತಮವಾದ ಕಾರ್ಯಕ್ರಮ, ಅಭಿನಂದನೆಗಳು! "
     ಇದು ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದವರೊಬ್ಬರ ಪ್ತತಿಕ್ರಿಯೆ. ಉಳಿದವರಿಂದಲೂ ಇದೇ ರೀತಿಯ ಉದ್ಗಾರಗಳು, ಪ್ರತಿಕ್ರಿಯೆಗಳು! ನಿಜ, ಈ ಕಾರ್ಯಕ್ರಮ ಅನುಕರಣೀಯವಾಗಿತ್ತು ಮತ್ತು ಭಿನ್ನವಾಗಿತ್ತು. ಈ ಸಮಾರಂಭದಲ್ಲಿ ಕುಟುಂಬಗಳ ಸಂವಹನಾ ಮಾಧ್ಯಮವಾಗಿ, ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಸಜ್ಜನಶಕ್ತಿಯ ಜಾಗರಣೆಗಾಗಿ, ಕವಿ ಪ್ರತಿಭೆಗಳ ಅನಾವರಣಕ್ಕಾಗಿ ರೂಪಿಸಿದ ಈ ಪತ್ರಿಕೆ ಕವಿಕಿರಣ ಬಿಡುಗಡೆಯಾಯಿತು. ಗೊತ್ತ್ತಿಲ್ಲದೇ ಇದ್ದ ಅನೇಕ ಬಂಧುಗಳು ಪ್ರಥಮ ಬಾರಿಗೆ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು. ಹಿರಿಯರನ್ನು ಸ್ಮರಿಸಿಕೊಂಡರು. ನಾವೂ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಪಡೆದರು. ಪರಸ್ಪರ ಉತ್ತಮ ಬಾಂಧವ್ಯ ಮುಂದುವರೆಸುವ ಪ್ರಯತ್ನಕ್ಕೆ ಮನಸಾರೆ ಬೆಂಬಲಿಸಿದರು.
     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.
     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ.
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
     ಕವಿ ಕುಟುಂಬಗಳ ವಾರ್ಷಿಕ ಸಮಾವೇಶಗಳ ಪ್ರಮುಖ ಉದ್ದೇಶ ಸಹ ಬಾಂಧವ್ಯಗಳನ್ನು ಉತ್ತಮಗೊಳಿಸುವುದೇ ಆಗಿದೆ. ನಮ್ಮ ಪೂರ್ವಜರ, ಹಿರಿಯರ ಒಳ್ಳೆಯ ಸಾಧನೆಗಳನ್ನು ನೆನೆಸಿಕೊಂಡು ನಾವೂ ಸಹ ಏನನ್ನಾದರೂ ಸಾಧಿಸಲು ಪ್ರೇರಿಸಬೇಕೆಂಬುದು ಇದರ ಹಿನ್ನೆಲೆಯಾಗಿದೆ. ಒಂದೇ ಕುಟುಂಬದ ಒಟ್ಟಿಗೆ ಸೇರದ ಸದಸ್ಯರುಗಳೂ ಸಹ ಸಮಾವೇಶದಲ್ಲಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ.  ಒಳ್ಳೆಯ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿದಷ್ಟೂ ಕೆಟ್ಟ ಸಂಗತಿಗಳಿಗೆ ಹಿನ್ನಡೆಯಾಗುತ್ತದೆ. ವಾರ್ಷಿಕ ಸಮಾವೇಶಗಳಲ್ಲಿ ನಮ್ಮ ಪೂರ್ವಜರ ಕೃತಿಗಳನ್ನು ಆಧರಿಸಿದ ರೂಪಕ, ನಾಟಕ, ಸಂಗೀತ, ಇತ್ಯಾದಿಗಳನ್ನು ಏರ್ಪಡಿಸಬಹುದು. ಇದಕ್ಕೆ ಪೂರ್ವ ತಯಾರಿ ಮಾಡಬಹುದು. ಪ್ರತಿ ಕುಟುಂಬದ ಕಡೆಯಿಂದ ವರ್ಷದ ಸಾಧನೆಯಾಗಿ ಏನನ್ನಾದರೂ ಮಾಡಲು ಕುಟುಂಬದ ಒಬ್ಬರು ಸದಸ್ಯರಾದರೂ ಮನಸ್ಸು ಮಾಡಬೇಕು. ಆ ಸಾಧನೆ ಬರವಣಿಗೆಯಿರಬಹುದು,  ನಟನೆ, ಆಟೋಟ, ಸಂಗೀತ,ನಾಟ್ಯವಿರಬಹುದು, ಚಿತ್ರಕಲೆಯಾಗಿರಬಹುದು, ನಾವು ತೊಡಗಿಕೊಂಡಿರುವ ವೃತ್ತಿ ಅಥವಾ ಪ್ರವೃತ್ತಿಯಲ್ಲಿರಬಹುದು,  ಗಮನಿಸಬಹುದಾದ ಯಾವುದೇ ಸಂಗತಿಯಿರಬಹುದು. ಸಮಾವೇಶಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟಬಹುದು, ಗೌರವಿಸಬಹುದು. ಇತರರು ಮಾಡಲಿ, ನಾವು ಪ್ರೋತ್ಸಾಹಿಸೋಣ ಎಂಬುದರ ಬದಲಿಗೆ ನಾವೂ ಏನನ್ನಾದರೂ ಜೀವಿತಕಾಲದಲ್ಲಿ ಸಾಧಿಸೋಣ ಎಂಬ ಭಾವನೆ ಬಂದಲ್ಲಿ ಉತ್ತಮ ಬೆಳವಣಿಗೆಯೇ ಸರಿ. ಕವಿ ಕುಟುಂಬಗಳವರು ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ, ವಾರ್ಷಿಕ ಸಮಾವೇಶಗಳು ಇಂತಹ ಆರೋಗ್ಯಕರ ಸ್ಪರ್ಧೆಗೆ ಉತ್ತಮ ವೇದಿಕೆಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ,
ಉತ್ತಮ ಬಾಂಧವ್ಯಕ್ಕಾಗಿ ತಮ್ಮವನು,
-ಕ.ವೆಂ. ನಾಗರಾಜ್.
********************
('ಕವಿಕಿರಣ' ಪತ್ರಿಕೆಯ ಜೂನ್, 2009 ಸಂಚಿಕೆಯ ಸಂಪಾದಕೀಯ).

Friday, February 11, 2011

ಸುಖವಾದರು ಬರಲಿ

ರಾಗ || ಸುರುಟಿ               -                     ತಾಳ || ಆದಿ


ಸುಖವಾದರು ಬರಲಿ
ಈಕ್ಷಣ ದು:ಖವಾದರು ಬರಲಿ
ಅಕಲಂಕ ಚರಿತನು ಸಕಲ
ರಕ್ಷಕನು ಮಕರಾಂಕರಿಪು ಶಿವ
ಸಖನಾಗಿರುತಿರೆ                                                     || ಪ ||

ಬಾಳಬಲ್ವನೆನಲಿ
ಮೂರ್ಖನು ಖೂಳನು ಇವನೆನಲಿ
ಕಾಲಕಾಲ ಕರುಣಾಲವಾಲನ
ನೀಲಕಂಠನ ನಾಮ ನಾಲಗೆಯಲ್ಲಿರೆ                            || 1 ||

ನಿಂದಿಸಿದವರುಗಳು
ಗುರುಗಳು ಬಂಧು ಬಾಂಧವರವರು
ಸಿಂಧುರ ಬಂಧುರ ಚರ್ಮಾಂಬರನ-
ರ್ಧೇ ಂದುಮೌಳಿ ತಾ ಬಂದು ರಕ್ಷಿಸುತಿರೆ                    || 2 ||

ದೊರೆ ಮುನಿದರೇನು 
ಮರ್ತ್ಯರು ಜರೆದು ನುಡಿದರೇನು 
ಸುರರು ದಾನವರು ಮುನಿದರಂಜುವೆನೆ
ವರ ಕೆಳದಿಯ ರಾಮೇಶ್ವರನು ರಕ್ಷಿಸುತಿಹರೆ                  || 3 ||

Monday, February 7, 2011

ಕೆಳದಿ ಶ್ರೀರಾಮೇಶ್ವರ ದೇವಾಲಯ


 

ಕೆಳದಿ ಶ್ರೀರಾಮೇಶ್ವರ ದೇವಾಲಯ                                                                                                   - ಡಾ. ಕೆಳದಿ ವೆಂಕಟೇಶ ಜೋಯಿಸ್.
     ಕೆಳದಿ ಶಿವಮೊಗ್ಗದಿಂದ ೭೮ ಕಿ.ಮೀ. ಮತ್ತು ಸಾಗರದಿಂದ ೫.೫ ಕಿ.ಮೀ. ದೂರದಲ್ಲಿದೆ. ಕೆಳದಿ ಎಂಬ ವೇಶ್ಯೆ ಕೆಳದಿ ಕೆರೆಗೆ ಬಲಿಯಾದ್ದರಿಂದ ಅವಳ ನೆನಪಿ ಗಾಗಿ ಕೆಳದಿ ಎಂಬ ಹೆಸರು ಬಂದಿರುವುದಾಗಿ ಐತಿಹ್ಯ ವಿದೆ. ಇದಕ್ಕೆ ಸಂಬಂಧಿಸಿದಂತೆ ಕೆಳದಿ ಕೆರೆಯ ಮೇಲ್ಭಾಗದಲ್ಲಿ ವಡ್ಡರ ತಿಮ್ಮಿ ಎಂಬ ನಗ್ನ ಶಿಲ್ಪವಿದ್ದು ಇವಳೇ ಕೆಳದಿ ಎಂದು ಹೆಸರು ಪಡೆದ ವೇಶ್ಯೆ ಎಂದು ಹೇಳಲಾಗುತ್ತದೆ. ಕೆಳದಿ ಕ್ರಿ.ಶ. ೧೫೦೦ ರಿಂದ ೧೫೧೪ರ ವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ರಣದುಲ್ಲಾ ಖಾನ್, ಬಿಜಾಪುರದ ಆದಿಲ್ ಷಾಹಿ ಮತ್ತು ಹೈದರಾಲಿ ಕಾಲದಲ್ಲಿ ಹಾಳಾಗುವಂತಾಯಿತು.
     ಕೆಳದಿಯಲ್ಲಿ ಶ್ರೀ ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯವಿದೆ. ಅಲ್ಲದೆ ಇತರ ಹಲವು ದೇವಾಲಯಗಳಿವೆ.
     ಶ್ರೀ ರಾಮೇಶ್ವರ ವಿಗ್ರಹ ಮೊದಲು ಊರ ಹೊರ ವಲಯದ ಸೀಗೆಹಟ್ಟಿಯ ಮಧ್ಯೆ ಇತ್ತಂತೆ. ಚೌಡಪ್ಪ ನಾಯಕನ ಮನೆಯ ಹಸು ಪ್ರತಿದಿನ ಅಲ್ಲಿಗೆ ಬಂದು ಅಲ್ಲಿದ್ದ ಹುತ್ತಕ್ಕೆ ಹಾಲು ಕರೆಯುತ್ತಿತ್ತಂತೆ. ಇದು ಚೌಡಪ್ಪ ನಾಯಕನಿಗೆ ಒಮ್ಮೆ ತಿಳಿದು ಅನಂತರ ಆ ಪೊದೆಗಳನ್ನು ತೆಗೆಸಿ ನೋಡಿದಾಗ ಅಲ್ಲಿ ಲಿಂಗ ವಿದ್ದುದನ್ನು ನೋಡಿ ತೃಣಕುಟಿ ನಿಮಿಸಿದನಂತೆ. ಅನಂತರದಲ್ಲಿ ಈ ಪ್ರದೇಶದ ಒಡೆಯನಾದ ಮೇಲೆ ದೇವಾಲಯ, ಗರ್ಭಗೃಹವನ್ನು ಶಿಲಾಮಯವಾಗಿ ಮಾಡಿದ್ದುದಾಗಿ ಕೆಳದಿ ನೃಪ ವಿಜಯದಲ್ಲಿ ತಿಳಿಸಲಾಗಿದೆ. ಇಲ್ಲಿ ಈ ಮೊದಲು ಶಿವ ದೇವಾಲಯ ಇದ್ದಿರಬಹುದು. ಅದು ಈ ಪ್ರಾಂತವನ್ನು ಮೊದಲು ಆಳಿದ ಹೊಯ್ಸಳ, ಸಾಂತ ಅಥವಾ ವಿಜಯ ನಗರದ ಕಾಲದಲ್ಲಿ ನಿರ್ಮಾಣ ಆಗಿದ್ದಿರಬಹುದು. ದೇವಾಲಯದ ಆವರಣದಲ್ಲಿರುವ ಬಾವಿಯ ಪಕ್ಕ ದಲ್ಲಿರುವ ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳು ಹಾಗೂ ವಠಾರದಲ್ಲಿರುವ ನಾಗರಗಳ ಮಧ್ಯದಲ್ಲಿ ಇಟ್ಟಿರುವ ಶ್ರೀ ಲಕ್ಷ್ಮೀನಾರಾಯಣ ಶಿಲ್ಪದ ಲಕ್ಷಣವನ್ನು ಗಮನಿಸಿದಾಗ ಈ ಪ್ರದೇಶವು ಕೆಳದಿಗೂ ಮೊದಲು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿದ್ದಿತೆಂದು ಊಹಿಸ ಬಹುದಾಗಿದೆ. ಈ ಪ್ರದೇಶದಲ್ಲಿ ಕಾಡಿನಲ್ಲಿ ಇನ್ನೊಂದು ಈಶ್ವರ ದೇವಾಲಯ ಇದ್ದ ಅವಶೇಷ ಗಳನ್ನು ನೋಡಿರುವುದಾಗಿ ಸ್ಥಳೀಕರು ಹೇಳುತ್ತಾರೆ.
ಇದು ಕೆಳದಿ ಜೋಯಿಸರಿಗೆ ಸದಾಶಿವನಾಯಕನು ಕೊಟ್ಟ, ಶಾಸನದಲ್ಲಿ ದಾಖಲಾಗಿರುವ ಶಂಭುಲಿಂಗ ದೇವಾಲಯವೇ ಆಗಿದ್ದರೂ ಆಗಿರಬಹುದು. ಆಡಳಿತ ದಲ್ಲಿ ತಾನು ಎದ್ದು ನಿಲ್ಲುವಂತಾದ ಮೇಲೆ ಲಿಂಗಕ್ಕೆ ಮರದಲ್ಲಿ ಗುಡಿ ಕಟ್ಟಿಸಿದನೆಂದೂ ಅನಂತರ ಈ ದೇವಾಲಯವನ್ನು ಮತ್ತು ನಂದಿ ಮಂಟಪವನ್ನು ಶಿಲ್ಪ ಶಾಸ್ತ್ರದನ್ವಯ ಶಿಲಾಮಯವಾಗಿಸಿ ಗರ್ಭಗೃಹವನ್ನು ಕಲ್ಲಿನಿಂದ ಕಟ್ಟಿಸಿದನೆಂದು ತಿಳಿದುಬರುತ್ತದೆ. ಹಾಗೆಯೇ ಈಶ್ವರ ದೇವಾಲಯದ ಎಡಭಾಗದಲ್ಲಿ ಪಾರ್ವತಿ ದೇವಾಲಯವನ್ನು ಕಟ್ಟಿಸಿದನು. ಇದಕ್ಕೆ ಪೂಜಾದಿ ಗಳಿಗಾಗಿ ದಾನದತ್ತಿಗಳು ಬಿಡಲ್ಪಟ್ಟಿತ್ತು. ಕ್ರಿ.ಶ. ೧೫೦೯ರ ಶಾಸನವೊಂದು ವಿಜಯನಗರದ ವೆಂಕಟಾದ್ರಿ ಯಜಮಾನರ ಪೌತ್ರರಾದ  ನಾರಸಿಂಹ ಯಜಮಾನರ ಪುತ್ರರಾದ ನರಸಪ್ಪ ದೈವಜ್ಞ ಯಜಮಾನರಿಗೆ ಶ್ರೀ ಸದಾ ಶಿವನಾಯಕರು ಇಲ್ಲಿಯ ಸ್ಥಳದ ದೇವತಾ ಪೂಜೆ, ಶಂಭುಲಿಂಗಪೂಜೆ, ಭೂಮಿತತ್ವ, ದೈವಜ್ಞ ಯಜಮಾನಿಕೆ ಕೊಟ್ಟುದನ್ನು ತಿಳಿಸುತ್ತದೆ. ಕ್ರಿ.ಶ. ೧೫೫೬ರ ವರೆಗೆ ಈ ಮನೆತನದವರು ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿರಬೇಕು. ಕ್ರಿ.ಶ. ೧೫೫೬ರಲ್ಲಿ ಬನವಾಸಿ ಆಚಾರ್ಯ ಭೀಮಭಟ್ಟರ ಮಗ ಆಚಾರ್ಯ ಮಧುಲಿಂಗಭಟ್ಟರಿಗೆ ಈ ಸ್ಥಳದ ಪೂಜೆ ಕೊಟ್ಟಿರುವುದನ್ನು ಶಾಸನವೊಂದು ತಿಳಿಸುತ್ತದೆ. ಇಂದೂ ಈ ಕುಟುಂಬದವರೇ ಪೂಜಾದಿ ಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ದೇವಾಲಯವೂ ಮುಜರಾಯಿ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆಯ ರಕ್ಷಣಾ ಸ್ಮಾರಕವಾಗಿದೆ. ಕ್ರಿ.ಶ. ೧೫೯೦-೧೬೨೯ರ ಮಧ್ಯದಲ್ಲಿ ಆಡಳಿತ ನಡೆಸಿದ ಹಿರಿಯ ವೆಂಕಟನಾಯಕನ ಕಾಲದಲ್ಲಿ ಈ ದೇವಾಲಯದ ಮುಂಭಾಗದ ರಂಗ ಮಂಟಪ ಮತ್ತು ವರಗು ದಿಣ್ಣೆಗಳನ್ನು ನಿರ್ಮಿಸಲಾಯಿತು. ಮುಂದೆ ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ಶಿಕಾರಿಪುರ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ಸಿಕ್ಕ ವೀರಭದ್ರ ಮೂರ್ತಿಯನ್ನು ಶ್ರೀ ರಾಮೇಶ್ವರ ದೇವಾಲಯದ ಬಲ ಬದಿಯಲ್ಲಿ ಪ್ರತಿಷ್ಠಾಪಿಸಿದನು. ಕೆಳದಿಯ ರಾಣಿ ಚೆನ್ನಮ್ಮಾಜಿಯು ಈ ದೇವಾಲಯಕ್ಕೆ ಗೋಪುರವನ್ನು ಮತ್ತು ರಂಗಮಂಟಪವನ್ನು ನಿರ್ಮಿಸಿದಳು. ಹಿರಿಯ ಬಸವಪ್ಪನಾಯಕನು (೧೬೯೭-೧೭೧೪) ವೀರಭದ್ರ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಲ್ಲಿ ನಿರ್ಮಿಸಿದನು. ದೇವಾಲಯದ ಎದುರಿನಲ್ಲಿರುವ ಧ್ವಜಸ್ಥಂಭವನ್ನು ಚೆನ್ನಮ್ಮಾಜಿ ಕಾಲದಲ್ಲಿದ್ದ ಬೊಕ್ಕಸದ ಸಿದ್ದಬಸವಯ್ಯನು ಕ್ರಿ.ಶ. ೧೬೮೧ರಲ್ಲಿ ನಿರ್ಮಿಸಿದನು. ದೇವಾಲಯದ ಮುಂಭಾಗದ ಪೌಳಿಯನ್ನು ಚಂದ್ರಸಾಲೆ ಎಂದು ಕರೆದಿದ್ದು ಮುಂಭಾಗದ ಬಾಗಿಲ ಮೇಲು ಭಾಗದಲ್ಲಿ ರಾಮೇಶ್ವರ ದೇವಸ್ಥಾನದ ಚಂದ್ರಸಾಲೆ ೧೮೯೬ನೇ ಇಸವಿ ಹೊನ್ನಾವರದ ನಾರಾಯಣಾಚಾರಿ ಮಗ ವಾಮನಾಚಾರಿ ಕಟ್ಟಿದ್ದು ಎಂದಿದೆ. ಲಾರ್ಡ್ ವೇsವೆಲ್ ಇಲ್ಲಿಗೆ ಬಂದಿದ್ದು ಆ ಸಂದರ್ಭದಲ್ಲಿ ಇದನ್ನು ಕಟ್ಟಲಾಯಿತೆಂದೂ ಹೇಳಲಾಗಿದೆ.
     ಕೆಳದಿ ದೇವಾಲಯವು ದ್ರಾವಿಡ, ಹೊಯ್ಸಳ ಶೈಲಿಯಲ್ಲಿ ಹಸಿರು ಬಣ್ಣದ ಕಲ್ಲಿನಿಂದ ನಿರ್ಮಾಣ ವಾಗಿದೆ. ಚಿಕ್ಕ ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ, ಮುಖಮಂಟಪಗಳಿಂದ ಕೂಡಿದೆ. ಜಗಲಿಯ ಹೊರ ಭಾಗದ ಒಂದು ದಿಂಡಿನಲ್ಲಿ ವಾದ್ಯಗಾರರು, ನರ್ತಕರ ಶಿಲ್ಪವಿದೆ. ಎರಡು ಅಡಿ ಎತ್ತರದ ಮೆರುಗಿರುವ ಶಿಲಾ ಲಿಂಗವಿರುವ ಗರ್ಭಗೃಹದ ಬಿತ್ತಿಯಲ್ಲಿ ಚಚ್ಚೌಕದ ಅರ್ಧ ಕಂಬಗಳ ಅಲಂಕಾರವಿದೆ. ನಡುವೆ ಕಣ್ಣಪ್ಪ, ಗರುಡ, ಹನುಮ, ಒಂಟೆ, ಆನೆ, ಮಿಥುನಶಿಲ್ಪಗಳು, ಆನೆಯ ಜೊತೆ ಹೋರಾಟ ಮಾಡಿದ ಯೋಧ, ಸೋಮಗ್ರಹಣ, ಮದ್ದಳೆಗಾರ, ಯೋಗನಿರತ ರಾಮೇಶ್ವರ ಮೊದಲಾದ ಶಿಲ್ಪಗಳಿವೆ. ಮುಂದೆ ಚಾಚಿಕೊಂಡಿರುವ ಛಾವಣಿಯ ಏಣುಗಳಲ್ಲಿ ವೀರಭದ್ರ, ತಾಂಡವೇಶ್ವರ, ಪಾರ್ವತಿ, ಮೋಹಿನಿ, ವೇಣುಗೋಪಾಲ ಕಾಳಿಂಗಮರ್ದನ, ಭೈರವ ಶಿಲ್ಪಗಳಿವೆ. ಗರ್ಭಗೃಹದ ಮೇಲಿನ ಗೋಪುರ ಚೌಕಾಕಾರವಾಗಿದೆ. ಮುಖ ಮಂಟಪವು ನಾಲ್ಕು ಅಂಕಣ ಉದ್ದ ಮತ್ತು ಮೂರು ಅಂಕಣ ಅಗಲವಿದೆ. ಹದಿನೆಂಟು ಕಂಬಗಳಿವೆ. ಇಲ್ಲಿ ಎಡ ಬಲಗಳಲ್ಲಿ ಗಣಪತಿ, ಮಹಿಷ ಮರ್ದಿನಿ ಮೂರ್ತಿಗಳಿವೆ. ದ್ವಾರ ಬಂಧದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರಿದ್ದಾರೆ. ನವ ರಂಗ ಚಿಕ್ಕದಾಗಿದೆ. ಇಲ್ಲಿ ಬಸವ ಮತ್ತು ಶಿವ ಪಾರ್ವತಿ ಉತ್ಸವಮೂರ್ತಿಗಳಿವೆ. ೨೧-೦೯-೧೯೯೭ರಲ್ಲಿ ಈ ಹಿಂದಿನ ಉತ್ಸವಮೂರ್ತಿಯು ಕಳುವಾಗಿದ್ದು ಅನಂತರದಲ್ಲಿ ಈಗ ಹೊಸ ಉತ್ಸವಮೂರ್ತಿಯನ್ನು ಮಾಡಿಸಲಾಗಿದೆ. ಪ್ರದಕ್ಷಿಣಾಪಥದ ಕಲ್ಲು ಒಂದು ಗುಂಟೆಯಷ್ಟು ದೊಡ್ಡ ದಾಗಿದೆ. ಇದರ ಮೇಲೆ ಆರು ಕಂಬಗಳು ನಿಂತಿವೆ. ಈ ದೇವಾಲಯ ಮೂರು ಪ್ರವೇಶದ್ವಾರಗಳನ್ನು ಹೊಂದಿದೆ. ಒಳಗೆ ಸುತ್ತಲೂ ಕುಳಿತುಕೊಳ್ಳಲು ಜಗಲಿ ಇದೆ. ಅಲ್ಲಿರುವ ತಾಳ ಪ್ರಸ್ತಾರ ಗಂಗಪ್ಪನ ನಮನ ಎಂಬ ಲಿಪಿ ಮತ್ತು ಪಕ್ಕದ ಅಂಕಗಳು ಸಂಗೀತದ ಮಟ್ಟನ್ನು, ಸಂಗೀತಗಾರನನ್ನೂ ಉಲ್ಲೇಖಿಸುತ್ತದೆ. ನಮಸ್ಕಾರ ಹಾಕಿ ರುವಂತೆ ಚಿತ್ರಿಸಿರುವ ಉಬ್ಬು ಚಿತ್ರಗಳು ಯಾವ ರಾಜರದ್ದೆಂದು ಸ್ಪಷ್ಟವಿಲ್ಲದಿದ್ದರೂ ಇಮ್ಮಡಿ ಸೋಮಶೇಖರ ನಾಯಕನದೆಂದು ಹೇಳುತ್ತಾರೆ. ಈ ದೇವಾಲಯದ ಹೊರಗಿನ ಮೈಯಲ್ಲಿರುವ ಗಜಹಂಸದ ಶಿಲ್ಪವನ್ನು ಲಕ್ಷ್ಮಿ ಮತ್ತು ಸರಸ್ವತಿ ಸಂಕೇತವೆಂದು ಕುವೆಂಪು ವಿಶ್ವವಿದ್ಯಾಲಯಕ್ಕೆ ಲಾಂಛನವಾಗಿ ಬಳಸಿಕೊಳ್ಳ ಲಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಕಲ್ಲನ್ನು ಹತ್ತಿರದ ನಾಡಕಲಸಿಯಿಂದ ತಂದಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಕಾರ್ತಿಕ ಅಮಾವಾಸ್ಯೆ ಮತ್ತು ಫಾಲ್ಗುಣ ಶುದ್ಧ ತೃತೀಯ ದೂತ ರಥವೂ, ಫಾಲ್ಗುಣ ಶುದ್ಧ ಪಾಡ್ಯದಂದು ಶ್ರೀ ದೇವರಿಗೆ ರಥೋತ್ಸವ ನಡೆಯತ್ತದೆ.

ಪಾರ್ವತಿ ದೇವಾಲಯ
     ಗರ್ಭಗೃಹವು ಶಿಲಾಮಯದಿಂದ ಕೂಡಿದೆ. ಮುಂಭಾಗ ಕೆಂಪು ಜಂಬಿಟ್ಟಿಗೆಕಲ್ಲಿನಲ್ಲಿ ಕಟ್ಟಿರುವುದಾಗಿದೆ. ಶಿಲಾಭಾಗದಲ್ಲಿ ಭೈರವ, ಷಣ್ಮುಖ, ಗಣೇಶ, ಅಂಧ ಕಾಸುರನ ವಧೆಯಲ್ಲಿ ನಟರಾಜ, ಪುರುಷಾಮೃಗ, ಕಣ್ಣಪ್ಪ, ಗಜಲಕ್ಷ್ಮಿಯ ಶಿಲ್ಪವಿದೆ. ಈ ದೇವಾಲಯದ ಹೊರಭಾಗದ ಗೋಡೆಯಲ್ಲಿ ಉಮಾಮಹೇಶ್ವರ ಶಿಲ್ಪ ಇದೆ, ಇದು ಕೆಳದಿಯ ಮೊದಲ ಚಿನ್ನದ ನಾಣ್ಯಗಳಲ್ಲಿ ಇರುವ ಚಿಹ್ನೆಯಾಗಿದೆ. ಪಕ್ಕದಲ್ಲಿ ಸಾಕ್ಷಿ ಆಂಜನೇಯ ಎಂದು ಕರೆಯುವ ಆಂಜನೇಯನ ಶಿಲ್ಪವಿದೆ. ಅದರ ಮುಂದೆ ಚಂಡಿಕೇಶ್ವರನಿದ್ದಾನೆ. ಮುಂಭಾಗವೂ ಸಹ ಕಲ್ಲಿನಲ್ಲೇ ನಿರ್ಮಾಣವಾಗಿದ್ದ ಬಗ್ಗೆ ಅಲ್ಲಿ ಸಿಕ್ಕಿರುವ ಅವಶೇಷಗಳು ತಿಳಿಸುತ್ತವೆ. ಇದು ಆದಿಲ್‌ಷಾಹಿಯ ಆಕ್ರಮಣದ ಕಾಲದಲ್ಲಿ ಹಾಳಾಗಿದೆ. ಈ ದೇವಾಲಯದ ಚಂದನ ಮರದಿಂದ ಮಾಡಿದ್ದೆನ್ನುವ ಶಿಲ್ಪವು ಸುಂದರ ವಾಗಿದೆ. ಕಂಬಗಳು, ಮೇಲ್ಛಾವಣಿಯ ರಂಗೋಲಿ, ನಾಲ್ಕೂ ಪಕ್ಕಗಳಲ್ಲಿರುವ ಮೂರ್ತಿ ಶಿಲ್ಪಗಳು ಕಲಾ ಪ್ರೌಢಿಮೆ ತೋರುತ್ತವೆ. ಇಲ್ಲಿಯ ಮೊದಲ ಅಂಕಣದ ಒಂದನೇ ಸಾಲಿನಲ್ಲಿ ನಂದಿ, ವೀರಭದ್ರ, ತುಂಬುರ, ನಾರದ, ಅಘೋರೇಶ್ವರ, ರಾಮೇಶ್ವರ, ಚಂದ್ರಮೌಳೇಶ್ವರ, ಕೊರವಂಜಿ ಇದೆ. ಎರಡನೇ ಸಾಲಿನಲ್ಲಿ ದತ್ತಾತ್ರೇಯ, ಅಗ್ನಿ, ನಟರಾಜ, ದಕ್ಷಾಧಿಪತಿ, ವೀರಭದ್ರ, ವೆಂಕಟ ರಮಣ, ಕಾಳಿಂಗ ಮರ್ದನ, ವೇಣುಗೋಪಾಲ, ನರ್ತಕಿ ಇದೆ. ಮೂರನೇ ಸಾಲಿನಲ್ಲಿ ಮಹಿಷಾಸುರ ಮರ್ದಿನಿ, ನಗಾರಿ, ಪುಂಗಿ, ಮೃದಂಗ, ವೀಣಾ, ನರ್ತನ, ತಾಳ, ಪಿಟೀಲು, ಗಜಾಸುರ ಸಂಹಾರ, ತಂಬೂರಿ ಇದೆ. ನಾಲ್ಕನೇ ಸಾಲಿನಲ್ಲಿ ಶಿವಪಾರ್ವತಿ, ಕಾಲಭೈರವ, ಲಕ್ಷ್ಮಣ, ರಾಮ, ಮಾರುತಿ, ಗಣೇಶ, ವೆಂಕಟರಮಣ, ಭೃಂಗಿ ಇದೆ.
     ಎರಡನೇ ಅಂಕಣದಲ್ಲಿ ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯುವ್ಯ, ಕುಬೇರ, ಈಶಾನ್ಯ ಇತ್ಯಾದಿ ಕಲಾ ಕೌಸ್ತುಭಗಳಿವೆ. ಕೆಳದಿಯ ಬ್ರಹ್ಮರಥ ಅಗ್ನಿಗಾಹುತಿಯಾಗಿದೆ. ೧೯೭೩ರಲ್ಲಿ ಹೊಸರಥ ನಿರ್ಮಾಣ ವಾಗಿದೆ. ದೇವಾಲಯದ ವಠಾರದಲ್ಲಿ ಚಂಡಿಕೇಶ್ವರ, ಆಂಜನೇಯ, ಗಣಪತಿ, ವೆಂಕಟರಮಣ ಮೊದಲಾದ ವಿಗ್ರಹಗಳಿವೆ. ದೇವಾಲಯದಲ್ಲಿ ನವರಾತ್ರಿ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುವ ಮರದ ಶಿಲ್ಪಗಳು ಹಲವಿವೆ.
ವೀರಭದ್ರ ದೇವಾಲಯ
     ರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡೇ ಈ ದೇವಾಲಯವಿದೆ. ಇದನ್ನು ಕ್ರಿ.ಶ.೧೫೪೬-೧೫೫೯ರ ಅವಧಿಯ ಮಧ್ಯಭಾಗದಲ್ಲಿ ದೊಡ್ಡ ಸಂಕಣ್ಣನಾಯಕನು ತೀರ್ಥಯಾತ್ರೆಗೆ ಹೋಗಿದ್ದಾಗ ಶಿಕಾರಿಪುರದ ಮಾಸೂರಿ ನಲ್ಲಿ ಕನಸ್ಸಿನಲ್ಲಿ ವೀರಭದ್ರನನ್ನು ಕಂಡು ಅದರಂತೆ ಇಲ್ಲಿ ಪ್ರತಿಷ್ಟಾಪಿಸಿದ್ದಾಗಿ ಕೆಳದಿನೃಪವಿಜಯ ತಿಳಿಸುತ್ತದೆ. ಮುಂಭಾಗದ ಕೆಲಸವು ಕೆಳದಿ ವೀರಭದ್ರ ನಾಯಕ ಮತ್ತು ಚೆನ್ನಮ್ಮಾಜಿಯ ಕಾಲದಲ್ಲಿ ನಿರ್ಮಾಣವಾಗಿದೆ. ಗರ್ಭಗೃಹದ ಮುಂಭಾಗದ ಬಾಗಿಲುವಾಡದ ಮೇಲಿರುವ ಆಳ್ವಾರರ ಮತ್ತು ಕೃಷ್ಣನ ಶಿಲ್ಪಗಳು ಗಮನಿಸಬೇಕಾಗುತ್ತದೆ.


      ಈ ದೇವಾಲಯದಲ್ಲಿ ಮೇಲ್ಭಾಗದಲ್ಲಿರುವ ಗಂಡ ಭೇರುಂಡ ಕೆಳದಿ ಲಾಂಛನ. ವಿಜಯನಗರದ ನಂತರ ಇದನ್ನು ಕೆಳದಿ ಅರಸರು ತಮ್ಮ ಲಾಂಛನವಾಗಿ ಬಳಸಿ ಕೊಂಡಿದ್ದಾರೆ. ಕೆಲವು ವಿದ್ವಾಂಸರುಗಳು ಗಂಡಭೇರುಂಡ ಶಿಲ್ಪ ಕೆಳದಿ ಅರಸರ ರಾಜಲಾಂಛನ ಆಗುವುದು ಅಸ್ವಾಭಾವಿಕ ಎಂದು ಅಭಿಪ್ರಾಯಿಸುತ್ತಾರೆ. ಅವರ ಪ್ರಕಾರ ನಾಣ್ಯಗಳಲ್ಲಿ ಶಿವ ಪಾರ್ವತಿಯರ ಚಿತ್ರ ವಿರುವುದು, ಶಾಸನಗಳ ಕೊನೆಯಲ್ಲಿ ಶ್ರೀ ಸದಾಶಿವ ಎಂಬ ಮುದ್ರಾಂಕಿತ ಬರುವುದು ಗಮನಿಸಿದಾಗ ಇವರ ಲಾಂಛನ ಶಿವ ಪಾರ್ವತಿ ಜೋಡಿಚಿತ್ರವಾಗಿದೆ ಎಂಬುದು. ಕೆಳದಿ ಕಾಲದ ಚಿನ್ನದ ನಾಣ್ಯಗಳಲ್ಲಿ ಗಂಡ ಭೇರುಂಡ ಶಿಲ್ಪ ಇರುವುದನ್ನು ಗಮನಿಸಲಾಗಿದೆ. ಅಲ್ಲದೆ ಇದನ್ನು ನಾಣ್ಯಶಾಸ್ತ್ರ ವಿದ್ವಾಂಸರೂ ಒಪ್ಪುತ್ತಾರೆ. ಹಾಗಾಗಿ ಇವರ ಲಾಂಛನ ಗಂಡಭೇರುಂಡವೇ ಆಗಿತ್ತೆನ್ನ ಬಹುದಾಗಿದೆ. ಇಂದು ಕರ್ನಾಟಕದ ಲಾಂಛನವಾಗಿ ಇದು ಬಳಕೆಯಾಗಿದೆ. ಕೆಳದಿ ಲಾಂಛನದಲ್ಲಿ ನಾಲ್ಕು ಆನೆ, ನಾಲ್ಕು ಸಿಂಹ ಹೊತ್ತು ಹಾರುತ್ತಿರುವ ಗರುಡನನ್ನು ನೋಡಬಹುದು. ಕೆಳಭಾಗದ ಕಾಲುಗಳಲ್ಲಿ ಎರಡು ಆನೆ ಗಳ ಒಳಗೆಯೇ ಎರಡು ಸಿಂಹಗಳನ್ನು ಅಳವಡಿಸಿ ರುವುದನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ತಿಳಿದುಬರುತ್ತದೆ. ಕೊಕ್ಕಿನಲ್ಲಿ ಎರಡು ಸಿಂಹ, ಅದರ ಕಾಲಿಗೆ ಸೇರಿದಂತೆ ಎರಡು ಆನೆ ಹೊತ್ತಿರುವ ಈ ಶಿಲ್ಪ ಸುಂದರವಾಗಿದೆ. ಈ ದೇವಾಲಯದ ಗರ್ಭಗೃಹ, ಮುಖಮಂಟಪಗಳು ರಾಮೇಶ್ವರ ದೇವಾಲಯವನ್ನೇ ಹೋಲುತ್ತದೆ. ಇಲ್ಲಿಯ ನವಗ್ರಹಗಳು, ನಾಗಬಂಧಗಳು, ಗರ್ಭಗೃಹದ ದ್ವಾರ ಮೋಹಕವಾಗಿದೆ. ದೇವಾಲಯದ ಕಂಬಗಳಲ್ಲಿ ವಿಜಯನಗರದ ವಿಜಯ ವಿಠಲ ದೇವಾಲಯದಂತೆ ಯಾಳಿಯನ್ನು ಅಳವಡಿಸಲಾಗಿದೆ. ಒಂದೆಡೆ ಮರಾಠ ಪ್ರಭಾವದ ಕುದುರೆ ಸವಾರ, ಆನೆ ಮುಖದ ಹಂಸ, ಯೋಗಿಯ ಶಿರದ ಅಗ್ರಭಾಗದಲ್ಲಿ ವೃಕ್ಷ ಬೆಳೆದ ಶಿಲ್ಪ, ರಾಜಚಿಹ್ನೆಯಿಂದ ಕೂಡಿದ ನಾಯಕ, ಮೇಲ್ಭಾಗದಲ್ಲಿ ಕಂಗೊಳಿಸುವ ಮನೋಹರ ಕಮಲಗಳು, ನಾಗಬಂಧ, ಗೃಹಗಳ ಮಧ್ಯ ಇರುವ ಸೂರ್ಯ, ಜಿಂಕ ಯೊಂದಿಗೆ ಚಂದ್ರ,, ಆನೆ, ಸಿಂಹ, ಹೂವು, ಪರ್ವತ, ಮಾವುತ, ಎತ್ತು ಮೊದಲಾದುವು ಸೌಂದರ್ಯ ಪ್ರಜ್ಞೆ ಪ್ರತೀಕವಾಗಿದೆ. ಕಮಲವೊಂದು ಸಿಡಿಲಿನಿಂದ ಭಗ್ನ ವಾಗಿದೆ. ದ್ವಾರಬಂಧದ ಕಂಬಗಳಲ್ಲಿ ದ್ವಾರಪಾಲಕರ ಶಿಲ್ಪವಿದೆ. ಗರ್ಭಗೃಹದಲ್ಲಿ ವೀರಭದ್ರ ಮೂರ್ತಿ ಇದೆ. ವೀರಭದ್ರ ದೇವಾಲಯದಲ್ಲಿ ಕೃಷ್ಣ, ನಾರಸಿಂಹ ಮೊದಲಾದ ಶಿಲ್ಪವನ್ನೂ ಅಳವಡಿಸಿ ಆ ಮೂಲಕ ಸರ್ವಧರ್ಮವನ್ನು ಪ್ರತಿಪಾದಿಸಿದಂತಿದೆ. ಇಲ್ಲಿ ಇರುವ ತಮ್ಮಡಿ ವೀರಪ್ಪ ಎಂಬ ರೇಖಾಚಿತ್ರ ಮತ್ತು ಬರಹ ಯಾರೆಂದು ಸ್ಪಷ್ಟವಾಗುವುದಿಲ್ಲ. ಈ ದೇವಾಲಯದ ಗೋಪುರದಲ್ಲಿರುವ ಕಳಸದಲ್ಲಿ ಮಹಿಸೂರ ಬಸವೇಶ್ವರ ದೆವರ ಪಾದಕೆ ನೆರಸಭೀಸಲಕೊಪ್ಪದ ಬಂಮೈಯ ಗೌಡರ ಮಗ ಬಸವೈಯ ಗೌಡರ ಭಕ್ತಿ ಎಂದಿದೆ.
ಧ್ವಜಸ್ಥಂಭ
     ಇದು ವೀರಭದ್ರ ದೇವಾಲಯದ ಎದುರಿನಲ್ಲಿದೆ. ಸುಮಾರು ೨೫ ಅಡಿ ಎತ್ತರದ ಈ ಸ್ಥಂಭದಲ್ಲಿ ಗಣೇಶ, ಶಿವ, ನಂದಿ, ಪಾರ್ವತಿ, ಭೈರವ ಶಿಲ್ಪಗಳಿವೆ. ಇದನ್ನು ಮಾನಸ್ಥಂಭ ಎನ್ನುವವರೂ ಇದ್ದಾರೆ. ದೀಪಸ್ಥಂಭ ಎನ್ನುವವರೂ ಇದ್ದಾರೆ. ಆದರೆ ಇಲ್ಲಿರುವ ಶಾಸನವು ಕ್ರಿ.ಶ. ೧೬೭೮ರಲ್ಲಿ ಬೊಕ್ಕಸದ ಸಿದ್ದಬಸವಯ್ಯನು ಪ್ರತಿಷ್ಠೆ ಮಾಡಿಸಿದ ಧ್ವಜಸ್ಥಂಭದ ಸೇವೆ ಎಂದಿರುವುದನ್ನು ನೋಡಿದಾಗ ಇದು ಧ್ವಜಸ್ಥಂಭವೆಂದು ಸ್ಪಷ್ಟವಾಗುತ್ತದೆ. ಕೆಳದಿ ಚೆನ್ನಮ್ಮಾಜಿಯ ಕಾಲದಲ್ಲಿ ನಂದಿ ಧ್ವಜಸ್ಥಂಭ ಸ್ಥಾಪಿಸಲಾಯಿತು. ಈ ಸ್ಥಂಭದ ಮೇಲ್ಭಾಗದಲ್ಲಿ ನಂದಿ  ವಿಗ್ರಹವಿದೆ. ಇದರಲ್ಲಿ ಗಣಪತಿಯ ಕೆಳಭಾಗದಲ್ಲಿರುವ ಶಿಲ್ಪಗಳು ಕೆಳದಿ ರಾಣಿ ಚೆನ್ನಮ್ಮಾಜಿ, ಶಿವಾಜಿಯ ಮಗ ರಾಜಾರಾಮ ಮತ್ತು ಅವರ ಸೇವಕ, ಸೇವಿಕೆಯರನ್ನು ಸೂಚಿಸುತ್ತದೆ. ವೀರಭದ್ರ ದೇವಾಲಯದ ಕೊನೆಯಲ್ಲಿನ ಕಂಬದಲ್ಲಿ ಹೊರಭಾಗದಲ್ಲಿ ಶಿವಾಜಿಯನ್ನು ಕುದುರೆಯ ಮೇಲೆ ಕುಳಿತಿರುವಂತೆ ಚಿತ್ರಿಸಿರುವುದನ್ನು ನೋಡಬಹುದು.
     ದೇವಾಲಯದ ಹೊರಗೋಡೆಯಲ್ಲಿರುವ ಸಾಸಿವೆ ಗಣಪತಿ, ಒಂದೇ ದೇಹ ಎರಡು ಮುಖ ತೋರುವ ಚಿತ್ರ (ಆನೆ ಮತ್ತು ಹಸು), ವಾಸ್ತುಪುರುಷನ ಶಿಲ್ಪ, ಕೈ ಎತ್ತಿ ಕುಳಿತಿರುವ ಬಾಲಕನ ಶಿಲ್ಪ, ದರ್ಪಣ ವೀಕ್ಷಿಸುತ್ತಿರುವ ಸುಂದರಿ, ಮೋಹಿನಿ, ಭಸ್ಮಾಸದುರ, ಇತ್ಯಾದಿಗಳು ಗಮನಿಸುವಂತಹವು. ಉಳಿದ ಕಡೆ ಪಂಚಶಿರ, ಕಾಮಧೇನು, ಜಂಗಮ ಶಿಲ್ಪಗಳಿವೆ. ಹಲವು ಕಣ್ಮರೆಯಾಗಿವೆ. ರಾಮೇಶ್ವರ, ವೀರಭದ್ರ ದೇವಾಲಯದ ಹೊರಗೋಡೆ ಗೋಪುರಗಳಿಂದ ತುಂಬಿದೆ. ರಾಮೇಶ್ವರ ದೇವಾಲಯದ ಎದುರುಮುಖದ ಮೇಲ್ಭಾಗದಲ್ಲಿ ಬೃಂಗಿ ಎಂಬ ಮೂರು ಕಾಲಿನ ವಿಚಿತ್ರ ಶಿಲ್ಪ ಇದೆ. ಇದು ಈಶ್ವರನ ಗಣಗಳಲ್ಲಿ ಒಂದಾಗಿದೆ. ಇಲ್ಲಿರುವ ಒಂದು ಕಂಬವನ್ನು ಕಲ್ಲುಜಾಗಟೆ ಎಂದು ಕರೆಯಲಾಗುತ್ತದೆ. ಕಲ್ಲು ಹೊಡೆತಕ್ಕೆ ಈಗಾಗಲೇ ಕಂಬ ತತ್ತರಿಸಿದೆ. ಈಶ್ವರ ಮತ್ತು ವೀರಭದ್ರ ದೇವಾಲಯದ ಮೇಲ್ಭಾಗದಲ್ಲಿ ಶಿಖರವಿದೆ. ವಠಾರದಲ್ಲಿ ನಾಲ್ಕು ಆಂಜನೇಯ, ನಾಲ್ಕು ವಿಷ್ಣು, ಕ್ಷೇತ್ರಪಾಲ, ಗಣಪತಿಯ ಶಿಲ್ಪವಿದೆ. ನಾಗಶಿಲ್ಪಗಳ ಮಧ್ಯದಲ್ಲಿರುವ ಹೊಯ್ಸಳಕಾಲದ ಲಕ್ಷ್ಮೀನರಸಿಂಹನ ಶಿಲ್ಪ ಸುಂದರವಾಗಿದೆ. ಹೊಯ್ಸಳಕಾಲದ ವೀರ ಮತ್ತು ಮಾಸ್ತಿಕಲ್ಲುಗಳು ಎರಡಿವೆ. ಕೋಣೆಯೊಂದರಲ್ಲಿ ಕೆಳದಿ ಸಂಸ್ಥಾನ ಉದಯಕ್ಕೆ ಮೂಲ ಕಾರಣರಾದ ಎಡವಮುರಾರಿ, ಬಲವಮುರಾರಿಯರ ಮತ್ತು ಅವರ ಹೆಂಡತಿಯರ ಸುಮಾರು ೪೯೦ ವರ್ಷದಷ್ಟು ಹಳೆಯದಾದ ಬೃಹದಾಕಾರದ ಮರದ ಶಿಲ್ಪಗಳಿವೆ. ಕೆಳದಿ-ಸಾಗರ ಮಾರ್ಗದಲ್ಲಿ ಹಳ್ಳಿಬೈಲು ಎಂಬಲ್ಲಿ ರಸ್ತೆಯ ಎರಡೂ ಕಡೆ ಇರುವ ಕಟ್ಟೆಗಳು ಇವರುಗಳು ರಾಜ್ಯ ಸ್ಥಾಪನೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಸ್ಥಳ ಎಂದು ಹೇಳಲಾಗುತ್ತದೆ.
**   **   **   **
('ಕವಿಕಿರಣ'ದ ಡಿಸೆಂಬರ್. 2008ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ).

Tuesday, February 1, 2011

ಕವನಗಳು

        ಹಳೆ ಬೇರು ಹೊಸ ಚಿಗುರು
ಇರಲು ಚೆಂದ ಹಳೆ ಬೇರು ಹೊಸ ಚಿಗುರು,
ಹಾಡಲು ಅಂದ ಹಳೆ ರಾಗ ಹೊಸ ಗಾನ,
ಕೇಳಲು ಆನಂದ ಹಳೆ ವಿಷಯ ಹೊಸ ವಿಸ್ಮಯ,
ಬರೆಯಲು ಸದಾ ಹಳೆ ಸಾಹಿತ್ಯ ಹೊಸ ವಿಚಾರ,
ನುಡಿಯಲು ಕಂದ ಹಳೆ ಭಾಷೆ ಹೊಸ ನುಡಿ,
ಹರಡಲು ಗಂಧ ಹಳೆಗಾಳಿ ಹೊಸ ಪರಿಮಳ,
ಇರುವುದು ಬಂಧ ಹಳೆ ಜನ ಹೊಸ ಮನ,
ಸವಿಯಲು ಮುದ ಹಳೆ ಅಡುಗೆ ಹೊಸ ರುಚಿ,
ಸೇರಲು ಬಂದ ಹಳೆ ಭಾವದ ಹೊಸ ಜನ,
ನೆಂಟರು ತಂದ ಹಳೆ ಸಂಬಂಧ ಹೊಸ ಸಂಭ್ರಮ!
             - ಹೇಮಾ ಮಾಲತೇಶ, ಶಿವಮೊಗ್ಗ.

                         ****
         ಹೀಗಿರಬೇಕು  ನಮ್ಮವ
 ಕವಿ, ಕರುಣಿ, ಕಣ್ಮಣಿ, ಕಷ್ಟ ಸಹಿಷ್ಣು
ವಿ ವಿನಯಿ, ವಿಶ್ವಾಸಿ, ವಿಜಯಿ, ವಿದ್ಯಾವಂತ
 ಮಮತಾಮಯಿ, ಮಂದಸ್ಮಿತ, ಮನೋಹರ
ನೆ ನೆಂಟ, ನೆರಳಾಗಿರುವ, ನೆಮ್ಮದಿವಂತ
 ತಪಸ್ವಿ, ತನ್ಮಯಿ, ತಪ್ಪು ಮಾಡದವ
 ನಮ್ರ., ನಮ್ಮವ, ನಂಬಿಕಸ್ಥ, ನಡೆನುಡಿವಂತ
 ದಯಾವಂತ, ದಾರ್ಶನಿಕ, ದಕ್ಷ, ಧರ್ಮಿಷ್ಟ
 ವಜ್ರಕಾಯ, ವಾಗ್ಮಿ, ವಾತ್ಸಲ್ಯಮಯಿ, ವರ್ಚಸ್ವಿ
            
            
  - ಹೇಮಾ ಮಾಲತೇಶ, ಶಿವಮೊಗ್ಗ.                       * * *
                        ಹಣೆಬರಹ

       ಹೆತ್ತವರು ಬರೆವುದಿಲ್ಲ ಹಣೆಯಲ್ಲಿ
       ಬರುವಾಗ ಬರೆದು ಕಳಿಸುವನು ಅಲ್ಲಿ
       ಬರೆದುದನು ಓದಲಾಗದು ನಮ್ಮಲ್ಲಿ
       ಅಂತೂ ಸಿಲುಕಿರುವೆವು ಗೊಂದಲದಲ್ಲಿ ! !
                            -ಕವಿಶ್ರೀ (ಕೆ. ಶ್ರೀಕಾಂತ್)
                                  * * *
(ಕವಿಕಿರಣದ ಡಿಸೆಂಬರ್, 2008ರ ಸಂಚಿಕೆಯಿಂದ)