ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Thursday, July 28, 2011


Release of the book: "Utkrustadedege" of Kavi Suresh - A collection of articles in Kannada - Release by Sri Manu Baligar

ಸದ್ವಿಚಾರ, ವ್ಯಕ್ತತ್ವ ವಿಕಸನ ಮತ್ತಿತರ ವಿಚಾರಗಳನ್ನೊಳಗೊಂಡ ಕವಿ ಸುರೇಶರ ಲೇಖನಗಳ ಸಂಗ್ರಹ


ಪುಟಗಳು: 90+8  :  ಪ್ರಥಮ ಮುದ್ರಣ: 2008  : ಬೆಲೆ: ರೂ.80/-

ಪ್ರಕಾಶಕರು: ಕವಿ ಪ್ರಕಾಶನ, "ಸೌಪರ್ಣಿಕಾ", 3ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ಬಸವೇಶ್ವರನಗರ, ಶಿವಮೊಗ್ಗ.

"ಮಾನಸೋದ್ಧಾರ ಮತ್ತು ದೈವ ಸಾಕ್ಷಾತ್ಕಾರ' ದಿಂದ ಪ್ರಾರಂಭಿಸಿ "ಕೆಲವು ಹಿಂದೂ ಸಂಪ್ರದಾಯಗಳು' ಎಂಬ ಒಟ್ಟು 24 ಶೀರ್ಷಿಕೆಗಳ ವಿವಿಧ ವೈಚಾರಿಕ ವಿಷಯಗಳನ್ನು 90 ಪುಟಗಳಲ್ಲಿ ಅಳವಡಿಸಿ ಕವಿ ವೆಂ|| ಸುರೇಶ್ ರವರು ತಮ್ಮ ಈ ಚೊಚ್ಚಲ ಕೃತಿಯನ್ನು ರಚಿಸಿದ್ದಾರೆ. ಪುಸ್ತಕವನ್ನು ಓದುತ್ತ ಹೋದಂತೆ ಶ್ರೀ ಸುರೇಶ್ ರವರ ಪ್ರೌಢವಿಚಾರ ಶೈಲಿ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಇದು ಅವರ ಚೊಚ್ಚಲ ಕೃತಿ ಎಂದು ಅನಿಸುವುದೇ ಇಲ್ಲ. ಇನ್ನು ಅವರು ಪ್ರಕಟಿಸುತ್ತಿರುವ ಗ್ರಂಥಗಳ ಮುದ್ರಣ ವಿನ್ಯಾಸ ಮುಂತಾದ ಗುಣಮಟ್ಟಗಳು ಆಕರ್ಷಣೀಯವಾಗಿರುವುದು ಅಭಿನಂದನೀಯ. ಶ್ರೀ ಸುರೇಶ್ ರವರ ೀ ಸಾಧನೆಗಳಿಗೆ ವ್ಯಾಪಕ ಬೆಂಬಲ ದೊರೆಯಲಿ. ಮುಂದೆಯೂ ಅವರಿಂದ ಉತ್ತಮ ಕೃತಿಗಳು ಪ್ರಕಟವಾಗುತ್ತ ಸಾರಸ್ವತ ಭಂಡಾರವನ್ನು ಸಂಪನ್ನಗೊಳಿಸಲಿ! ಎಂದು ಆಶಿಸುತ್ತೇವೆ"

                                                                              - ಶ್ರೀ ಹರಿಹರಪುರ ಬಿ.ಸುಬ್ರಹ್ಮಣ್ಯಂ, ಸಂಪಾದಕರು,
                                                                                 "ಸ್ವಯಂಪ್ರಕಾಶ" ಮಾಸಪತ್ರಿಕೆ [ಜುಲೈ 2008]


Kavi Suresh, Gopinath, Diwakar, Manu Baligar, NK Narayan
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾದ ಶ್ರೀ ಮನು ಬಳಿಗಾರ್ ರವರಿಂದ ಕೃತಿ ಬಿಡುಗಡೆ.
ಉಪಸ್ಥಿತಿ: ಪ್ರೊ.ದಿವಾಕರ್ ರಾವ್ ನಾಡಿಗೇರ್, ನಿರ್ದೇಶಕರು, ಎಡುರೈಟ್ ಕಾಲೇಜ್, ಶಿವಮೊಗ್ಗ, ಶ್ರೀ ಗೋಪಿನಾಥ್, ಮಾಲೀಕರು, ಮಥುರಾ ಪ್ಯಾರಾಡೈಸ್ ಹೊಟೆಲ್, ಶ್ರೀ ಎನ್.ಕೆ. ನಾರಾಯಣ, ನಿವೃತ್ತ ಹಿರಿಯ ಕೆ.ಎ.ಎಸ್. ಅಧಿಕಾರಿಗಳು.
ದಿ.ಬ.ನ.ಸುಂದರರಾವ್ ಮತ್ತು ಅವರ ಧರ್ಮಪತ್ನಿ ದಿ. ರತ್ನಮ್ಮ ಸುಂದರರಾವ್ ರವರು ರಚಿಸಿದ ಈ ಪುಸ್ತಕ ಒಂದು ಕೆಲವು ಪುಣ್ಯ ಕ್ಷೇತ್ರಗಳ ಪ್ರವಾಸ ಕಥನ. ದಿ. ರತ್ನಮ್ಮನವರು ದಿ. ಎಸ್. ಕೆ. ಲಿಂಗಣ್ಣಯ್ಯನವರ ಪುತ್ರಿ.

ಪ್ರಥಮ ಮುದ್ರಣ : 1983

ಬೆಲೆ: ರೂ: 18/-

ಪುಟಗಳು: 113 + 10

ಪ್ರಕಾಶಕರು: ವಸಂತ ಸಾಹಿತ್ಯ ಗ್ರಂಥಮಾಲಾ, 442, 38ನೇ ಅಡ್ಡರಸ್ತೆ, 5ನೇ ಬ್ಲಾಕ್, ಜಯನಗರ, ಬೆಂಗಳೂರು.

Tuesday, July 19, 2011


'ಶ್ರೀ ಕ್ಷೇತ್ರ ಕೂಡಲಿ ದರ್ಶನ' ಎಂಬ ಪುಸ್ತಕವನ್ನು ಕನ್ನಡದಲ್ಲಿ ಶಿವಮೊಗ್ಗದ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಬರೆದಿದ್ದಾರೆ. ಕೂಡಲಿ ಕ್ಷೇತ್ರದ ಮಹಿಮೆ, ಅಲ್ಲಿರುವ ಹಲವು ದೇವಸ್ಥಾನಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ದೇವಸ್ಥಾನಗಳ ಶಿಲ್ಪಕಲೆ, ಕೂಡಲಿ ಸುತ್ತಮುತ್ತ ಇರುವ ಸಂದರ್ಶನಯೋಗ್ಯ ಸ್ಥಳಗಳು ಇತ್ಯಾದಿಗಳ ಬಗ್ಗೆ ಬಹಳ ವಿವರವಾಗಿ ಮಾಹಿತಿ ನೀಡಿದ್ದಾರೆ. 

ಈ ಪುಸ್ತಕವನ್ನು ಶಿವಮೊಗ್ಗದ ಶ್ರೀ ಕವಿ ಸುರೇಶ್ ರವರು ಆಂಗ್ಲ ಭಾಷೆಗೆ ಅನುವಾದ ಮಾಡಿರುತ್ತಾರೆ. ಕೂಡಲಿ ಕ್ಷೇತ್ರದ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಅಮೃತ ಹಸ್ತದಿಂದ ಈ ಪುಸ್ತಕಗಳು 2009 ರಲ್ಲಿ ಶಿವಮೊಗ್ಗದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸಜ್ಜನರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಿವೆ.

ಪ್ರಕಟಣಾ ವರ್ಷ: 2009 :  ಪುಟಗಳು - 48  : ಬೆಲೆ: ರೂ:40/-
ಪ್ರಕಾಶಕರು: ಶ್ರೀ ಕೃಪಾ ಪ್ರಕಾಶನ, ಶಿವಮೊಗ್ಗ (08182-254217)

ಪ್ರಕಟಣಾ ವರ್ಷ: 2011   :   ಪುಟಗಳು - 48  :   ಪ್ರಕಾಶಕರು: ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ.

ಡಾ:ವೆಂಕಟೇಶ್ ಜೊಯಿಸ್ ರವರು ಈ ಪುಸ್ತಕದಲ್ಲಿ ಕೆಳದಿ ರಾಮೇಶ್ವರ ದೇವಸ್ಥಾನದ ಕ್ಷೇತ್ರ ಮಹಿಮೆ ಬಗ್ಗೆ ಮತ್ತು ಕೆಳದಿಯಲ್ಲಿನ ಇತರ ದೇವಾಲಯಗಳ ಬಗ್ಗೆಯೂ ಸಂಕ್ಷಿಪ್ತವಾಗಿ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಇತ್ತೀಚೆಗೆ ಕೆಳದಿಯಲ್ಲಿ ನಡೆದ ಅಷ್ಟಬಂಧ ಕಾರ್ಯಕ್ರಮದ ಸಂದರ್ಭದಲ್ಲಿ ಈ ಪುಸ್ತಕ ಹೊರಬಂದಿದೆ. ಉತ್ತಮ ಚಿತ್ರಗಳನ್ನೂ ಒಳಗೊಂಡಿದೆ.

'ಮರೆಯಲಾಗದ ಕೆಳದಿ ಸಾಮ್ರಾಜ್ಯ'  ಎಂಬ ಕಿರುಹೊತ್ತಿಗೆಯಲ್ಲಿ ಡಾ:ವೆಂಕಟೇಶ್ ಜೊಯಿಸ್ ರವರು ಕೆಳದಿ ಇತಿಹಾಸದ ಸಂಕ್ಷಿಪ್ತ ಚಿತ್ರಣವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಆಗಿನ ರಾಜಕೀಯ ವ್ಯವಸ್ಥೆ, ಸಾಹಿತ್ಯ, ಆಗಿನ ವಿವಿಧ ರಾಜಧಾನಿಗಳು, ಮುಂತಾದ ವಿಷಯಗಳ ಬಗ್ಗೆ ವಿವರ ನೀಡಲಾಗಿದೆ. ಇದೇ ಪುಸ್ತಕವನ್ನು ಶಿವಮೊಗ್ಗದ ಕವಿ ಸುರೇಶ್ ರವರು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದು, "The Unforgettable Keladi Empire" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ.

ಪ್ರಕಟಣಾ ವರ್ಷ: 2008
ಪುಟಗಳು : 56+8
ಪ್ರಕಾಶಕರು: ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ.
ಬೆಲೆ: ರೂ> 35/-

Monday, July 18, 2011

ಕವಿ ನಾಗರಾಜ ಭಟ್ಟ - ಸಾವಿತ್ರಮ್ಮ

ಕೆಳದಿ ಕವಿ ಮನೆತನದ ಸಮಕಾಲೀನರು
ಕವಿ ನಾಗರಾಜ ಭಟ್ಟ - ಸಾವಿತ್ರಮ್ಮ

     ನಿರುಪದ್ರವಿ ಎಂಬ ಪದಕ್ಕೆ ಅನ್ವರ್ಥಕವಾದವರು ಕವಿ ಮನೆತನದ ಎಂಟನೇ ತಲೆಮಾರಿನ ಕಷ್ಟ ಸಹಿಷ್ಣು ಕವಿ ನಾಗರಾಜ ಭಟ್ ಕುಟುಂಬ. ಬಡತನವನ್ನೇ ಹಾಸಿ- ಹೊದ್ದು- ಉಂಡುಟ್ಟು ಅದರಲ್ಲೇ ಸುಖವನ್ನು ಕಂಡು ಆರಕ್ಕೆ ಕೈ ಚಾಚದೇ ಮೂರಕ್ಕೆ ಇಳಿಯದೆ ಸಮಚಿತ್ತದಿಂದ, ಸಮಭಾವದಿಂದ ಸದಾ ಸ್ಥಿತಪ್ರಜ್ಞರಾಗಿ ಬದುಕನ್ನು ಸವೆಸುತ್ತಿರುವ ನಾಗರಾಜ ಭಟ್ ಕುಟುಂಬ ವಿಶಿಷ್ಟವಾದುದು.
     ಕವಿ ನಾಗರಾಜ ಭಟ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ಗ್ರಾಮದಲ್ಲಿ ೧೯೪೧ರ ಏಪ್ರಿಲ್ ೧೦ರಂದು ಶಿವಭಟ್ - ಕೋಮಲಾಬಾಯಿ ದಂಪತಿಗೆ ಏಕೈಕ ಪುತ್ರನಾಗಿ ಜನಿಸಿದರು. ಇವರು ಸುಮಾರು ೧೦ ವರ್ಷದವರಿದ್ದಾಗ ತಂದೆ ಶಿವಭಟ್ ಪರಂಧಾಮವನ್ನೈದಿದರು. ಪುಟ್ಟ ಬಾಲಕನನ್ನು ಸಾಕುತ್ತಾ ಕೋಮಲಾಬಾಯಿ ಕೆಳದಿಯಲ್ಲೇ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಸಾಗರ ಸಮೀಪದ ಶ್ರೀ ವರದಹಳ್ಳಿಯ ಅಂದಿನ ಶ್ರೀಗಳಾದ ಮತ್ತು ಅಪಾರ ಭಕ್ತವೃಂದ ಹೊಂದಿರುವ ಶ್ರೀ ಶ್ರೀ ಶ್ರೀಧರಸ್ವಾಮಿಗಳು ನಾಗರಾಜನಿಗೆ ಬ್ರಹ್ಮೋಪದೇಶ ಮಾಡಿದರು.
     ಬಡತನದಲ್ಲಿದ್ದ ಕುಟುಂಬಕ್ಕೆ ಸ್ಥಿತಿವಂತರಿಂದ ಊಟಕ್ಕೆ ಸಹಾಯವಾಗುತ್ತಿತ್ತು. ಕೋಮಲಾಬಾಯಿಯವರು ಅವರಿವರ ಮನೆಯಲ್ಲಿ ಚಟ್ನಿಪುಡಿ, ಮೆಣಸಿನಪುಡಿ, ಚಕ್ಕುಲಿ, ಕೋಡುಬಳೆ, ಅಡುಗೆ ಕೆಲಸ ಇತ್ಯಾದಿಗಳನ್ನು ಮಾಡುತ್ತಾ ಅಷ್ಟಿಷ್ಟು ಸಂಪಾದನೆ ಮಾಡಿ ಹೊಟ್ಟೆ ಹೊರೆಯುತ್ತಿದ್ದರು.
     ಶಾಲಾ ವಿದ್ಯಾಭ್ಯಾಸಕ್ಕೆ ಪರೀಕ್ಷೆ ಶುಲ್ಕ ಕಟ್ಟಲಾಗದೆ ಎಸ್ಸೆಸ್ಸೆಲ್ಸಿಯನ್ನು ಅರ್ಧಕ್ಕೇ ಮೊಟಕುಗೊಳಿಸಿದ ನಾಗರಾಜ ಪರಿಚಯವಿದ್ದ ಸಾಗರ ತಾಲ್ಲೂಕು ಗೌತಮಪುರದ ಗಾಡಿ ಸುಬ್ರಾಯಭಟ್ಟರ ಮನೆಯಲ್ಲಿ ವೇದಾಭ್ಯಾಸಕ್ಕೆ ನಿಂತರು. ಎಂಟು ಹೆಣ್ಣು ಮಕ್ಕಳು ಇದ್ದ ತುಂಬಿದ ಕುಟುಂಬದ ಸುಬ್ರಾಯಭಟ್ಟರು ಗಂಡು ಮಕ್ಕಳಿಲ್ಲದ ಕಾರಣ ನಾಗರಾಜನನ್ನು ಸ್ವಂತ ಮಗನಂತೆ ಕಂಡು ಅವನಿಗೆ ವೇದಾಭ್ಯಾಸ ಕಲಿಸಿ ಪೌರೋಹಿತ್ಯಕ್ಕೆ ಅಣಿಗೊಳಿಸಿದರು. ಹೀಗೇ ಸಾಗುತ್ತಿದ್ದ ಜೀವನದಲ್ಲಿ ನಾಗರಾಜನಿಗೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಸೇವೆ ಮಾಡುವ ಯೋಗ ಬಂದಿತು. ಗೌತಮಪುರಕ್ಕೆ ಬ್ರಾಂಚ್ ಪೋಸ್ಟಾಫೀಸು ಬಂದಾಗ ಅದನ್ನು ನೋಡಿಕೊಳ್ಳುವ ಕೆಲಸ ೧೯೫೯ನೇ ಸೆಪ್ಟೆಂಬರ್ ೧೧ ರಂದು ನಾಗರಾಜನ ಪಾಲಿಗೆ ಬಂತು. ಸುಮಾರು ನಾಲ್ಕಾರು ವರ್ಷ ಕೆಲಸ ಮಾಡಿದ ನಂತರ ನಾಗರಾಜನಿಗೆ ಪೋಸ್ಟ್ ಮ್ಯಾನ್ ಆಗಿ ಕೆಲಸಕ್ಕೆ ತೆಗೆದುಕೊಂಡು ಜೋಗ್ ಫಾಲ್ಸ್ ಗೆ ವರ್ಗಾವಣೆ ಮಾಡಲಾಯಿತು. ಅಲ್ಲಿಯೇ ಕೆಲಸ ನಿರ್ವಹಿಸಿಕೊಂಡು ಜೊತೆಗೆ ಅಲ್ಲಿನ ಈಶ್ವರ ದೇವಾಲಯದ ಅರ್ಚಕರಾದ ವೇದಬ್ರಹ್ಮ ಶ್ರೀ ಜಾವಗಲ್ ಸತ್ಯನಾರಾಯಣ ಜೋಯಿಸರ ಬಳಿಯೂ ವೇದ ಕಲಿತು ಈಶ್ವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
----------------------------------------------------------------
     ಈ ಪರಿಚಯ ಲೇಖನವನ್ನು ಬರೆದ ಶ್ರೀ ಕೆಳದಿ ರಾಮಮೂರ್ತಿಯವರು ಶ್ರೀ ನಾಗರಾಜಭಟ್ಟರ ಚಿಕ್ಕಪ್ಪ ಶ್ರೀ ಕೃಷ್ಣಭಟ್ಟರ ಮಗ. ನಾಗರಾಜಭಟ್ಟರ ನಿಕಟ ಪರಿಚಯವಿರುವವರು. ಶ್ರೀ ರಾಮಮೂರ್ತಿಯವರ ಕುಟುಂಬ ಸಹ ಆದರಾತಿಥ್ಯ ಮಾಡುವಲ್ಲಿ ಎತ್ತಿದ ಕೈ ಆಗಿದ್ದಾರೆ. ಈ ಎರಡು ಕುಟುಂಬಗಳವರು ಕೆಳದಿಯಲ್ಲಿ ದಿನಾಂಕ ೨೫-೧೨-೨೦೦೭ ರಂದು ಸ್ಮರಣೀಯವಾಗಿ ನಡೆದ ಕೆಳದಿ ಕವಿ ಮನೆತನದವರ ಹಾಗೂ ಬಂಧು ಬಳಗದವರ ಎರಡನೆಯ ವಾರ್ಷಿಕ ಸಮಾವೇಶ ಪ್ರಾಯೋಜಿಸಿದ್ದರು. ವೃತ್ತಿಯಲ್ಲಿ ಅರ್ಚಕರಾಗಿರುವ ಶ್ರೀ ರಾಮಮೂರ್ತಿಯವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.                         -ಸಂ.
ಲೇಖಕರ ವಿಳಾಸ:      ಕೆಳದಿ ರಾಮಮೂರ್ತಿ, ಅರ್ಚಕರು, ಕೆಳದಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ..  ದೂರವಾಣಿ:೯೪೪೮೯೩೨೭೫೯.
ಶ್ರೀ ನಾಗರಾಜಭಟ್ಟರ ವಿಳಾಸ::     ನಿವೃತ್ತ ಪೋಸ್ಟ್ ಮಾಸ್ಟರ್  ರವಿವರ್ಮ ಬೀದಿ, ಶಿವಮೊಗ್ಗ.. ದೂರವಾಣಿ:   ೯೫೮೧೮೨-೨೭೭೨೬೬.

------------------------------------------------------
     ಜಾವಗಲ್ ಸತ್ಯನಾರಾಯಣ ಭಟ್ಟರ ತಂದೆ ನರಸಿಂಹ ಭಟ್ಟರಿಗೆ ನಾಲ್ವರು ಪತ್ನಿಯರು. ಸತ್ಯನಾರಾಯಣಭಟ್ಟರು ಹಿರಿಯ ಪತ್ನಿಯ ಮಗ. ಎರಡನೆ ಮತ್ತು ಮೂರನೆಯ ಪತ್ನಿಯರಿಗೆ ಮಕ್ಕಳಿರಲಿಲ್ಲ. ನಾಲ್ಕನೆಯ ಪತ್ನಿ ನಾಗಮ್ಮರಿಗೆ ಓರ್ವ ಪುತ್ರ ಮತ್ತು ಮೂವರು ಪುತ್ರಿಯರಿದ್ದು ಸಾವಿತ್ರಿ ಜೇಷ್ಠ ಪುತ್ರಿ. ವಟಸಾವಿತ್ರಿ ಹುಣ್ಣಿಮೆ ದಿನ ೧೯೪೯ರ ಜೂನ್ ೧ರಂದು ಹುಟ್ಟಿದ್ದರಿಂದ ಆಕೆಗೆ ಸಾವಿತ್ರಿ ಎಂದು ನಾಮಕರಣ ಮಾಡಿದ್ದರು. ನರಸಿಂಹಭಟ್ಟರು ವಿಧಿವಶರಾದ ನಂತರ ಸಾವಿತ್ರಿ ಅಣ್ಣ ಸತ್ಯನಾರಾಯಣ ಭಟ್ಟರ ಆಶ್ರಯಕ್ಕೆ ಬಂದಿದ್ದರು. ಹೋಗಿ ಬಂದು ಮಾಡುವಾಗ ಸಾವಿತ್ರಿಯನ್ನು ನೋಡಿದ ನಾಗರಾಜ ವಿವಾಹಾಪೇಕ್ಷೆ ವ್ಯಕ್ತಪಡಿಸಿದರು. ಉಭಯತ್ರರೂ ಸಮ್ಮತಿಸಿ ೧೯೬೭ ಜೂನ್ ೧ ರಂದು ಜೋಗದ ಈಶ್ವರ ದೇವಾಲಯದಲ್ಲಿ ವಿವಾಹ ಮಾಡಿಕೊಡಲಾಯಿತು. ವಿವಾಹಾನಂತರ ನಾಗರಾಜ ಭಟ್ಟರಿಗೆ ಕೊಪ್ಪಕ್ಕೆ ವರ್ಗವಾಯಿತು. ಕೊಪ್ಪದಲ್ಲಿ ಎರಡು ವರ್ಷ, ತೀರ್ಥಹಳ್ಳಿಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ವರ್ಗಾವಣೆ ಮೇಲೆ ಸಾಗರಕ್ಕೆ ಬಂದರು. ಸಾಗರದಲ್ಲಿದ್ದಾಗ ತಾಯಿ ಇಹಲೋಕ ತ್ಯಜಿಸಿದಾಗ ಅಂತ್ಯ ಸಂಸ್ಕಾರವನ್ನೂ ಸಹ ಸಾಲ ಮಾಡಿ ಮಾಡಿದ್ದರು. ಸಾಗರದಿಂದ ಗುಮಾಸ್ತರಾಗಿ ಬಡ್ತಿ ನೀಡಿ ಅವರನ್ನು ಬೀದರ್ ಜಿಲ್ಲೆ ಹುಮನಾಬಾದ್‌ಗೆ ವರ್ಗ ಮಾಡಿದರು. ಅಲ್ಲಿ ನಾಲ್ಕು ವರ್ಷದ ಸೇವೆ ನಂತರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಗರದಲ್ಲಿ ಎಂಟು ತಿಂಗಳು, ಕುದುರೆಮುಖದಲ್ಲಿ ಎರಡು ವರ್ಷ, ಬಾಳೆಹೊನ್ನೂರಿನ ಬಳಿಯ ಕಾಫಿ ರಿಸರ್ಚ್ ಸ್ಟೇಶನ್ ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ೧೯೮೫ರಲ್ಲಿ ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಛೇರಿಗೆ ಬಂದವರು ಅಲ್ಲಿ ದೀರ್ಘ ಮತ್ತು ಪೂರ್ಣ ಸೇವೆ ಸಲ್ಲಿಸಿ ೨೦೦೧ರ ಏಪ್ರಿಲ್ ೩೦ ರಂದು ೩೬ ವರ್ಷಗಳ ಸೇವೆಗೆ ಮಂಗಳ ಹಾಡಿದರು.

     ನಾಗರಾಜಭಟ್ಟರ ಪತ್ನಿ ಬುದ್ಧಿವಂತರು. ಕಾಸಿಗೆ ಕಾಸು ಕೂಡಿಸುವ, ಪ್ರಾಮಾಣಿಕ ಮನೋಭಾವ ಹೊಂದಿದವರಾಗಿದ್ದರು. ಸದಾ ಮೂಗಿನ ಮೇಲೆ ಸಿಟ್ಟು. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ, ಶತ್ರುಗಳನ್ನೂ ಆದರಿಸುವವರು ಹಾಗೂ ಅತಿಥಿ ಸತ್ಕಾರದಲ್ಲಿ ಸೈ ಎನಿಸಿಕೊಂಡವರು. ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದಲ್ಲದೆ ಅವರನ್ನು ಹಾದಿ ತಪ್ಪದಂತೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಗಂಡನ ಗಳಿಕೆಯಲ್ಲೇ ಅಷ್ಟಿಷ್ಟು ಉಳಿಸಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ದುಂದು ವೆಚ್ಚದಿಂದ ಸದಾ ದೂರ. ಹಾಗೆಯೇ ಇಂಥದ್ದು ಬೇಕು ಎಂದು ಕೇಳಿದವರಲ್ಲ. ನಾಗರಾಜಭಟ್ಟರು ಶಾಂತ ಸ್ವಭಾವದವರು. ವ್ಯಕ್ತಿಗತ ಸ್ವಭಾವದಲ್ಲಿ ಭಿನ್ನತೆ ಇದ್ದರೂ ಇಬ್ಬರದು ಅನುಪಮ ಸಾಂಗತ್ಯ, ಅನುರೂಪ ದಾಂಪತ್ಯ.
     ನಾಗರಾಜ ಭಟ್ - ಸಾವಿತ್ರಮ್ಮರವರಿಗೆ ಒಬ್ಬ ಮಗ ಶಿವಪ್ರಸಾದ ಹಾಗೂ ಮೂವರು ಹೆಣ್ಣು ಮಕ್ಕಳು - ಪ್ರತಿಭಾ, ಪದ್ಮ ಮತ್ತು ಪೂರ್ಣಿಮಾ. ಹಿರಿಯ ಮಗ ಶಿವಪ್ರಸಾದ ಪ್ರಸ್ತುತ ಕಾರವಾರದಲ್ಲಿ ಕಡಲವಾಣಿ  ಎಂಬ ಪತ್ರಿಕೆಯ ಸಂಪಾದಕನಾಗಿದ್ದಾನೆ. ಅನುರೂಪಳಾದ ಮತ್ತು ಹೊಂದಿಕೊಂಡು ಹೋಗುವ ಪತ್ನಿ ಸೌಮ್ಯ. ಇವರಿಗೆ ಒಬ್ಬಳು ಮಗಳು ಶ್ರೀಮಾತಾ ಮತ್ತು ಒಬ್ಬ ಮಗ ಶ್ರೀನಿಧಿ ಇದ್ದಾರೆ. ಪ್ರತಿಭಾ ಮತ್ತು ಪೂರ್ಣಿಮಾರಿಗೆ ವಿವಾಹವಾಗಿದೆ. ಪ್ರತಿಭಾಳ ಪತಿ ಸುಬ್ರಾಯ ಹೆಗಡೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಪುತ್ರಿ ಸಿಂಧು. ಎರಡನೆಯ ಮಗಳು ಪದ್ಮಳಿಗೆ ನೆಫ್ರಾಟಿಕ್ ಸಿಂಡ್ರೋಮ್ ಎಂಬ ಕಾಯಿಲೆ ಬಂದು ಸುಮಾರು ೧೫ ವರ್ಷಗಳ ಕಾಲ ಚಿಕಿತ್ಸೆ ಕೊಡಿಸಬೇಕಾಯಿತು. ಈ ಸಂದರ್ಭದಲ್ಲಿ ಅವರು ಅನುಭವಿಸಿದ ಪಾಡು ಅಷಿಷ್ಟಲ್ಲ. ಪದ್ಮ ಈಗ ಮನೆಯಲ್ಲೇ ಇದ್ದು ತಾಯಿಗೆ ಮನೆಕೆಲಸದಲ್ಲಿ ನೆರವಾಗುತ್ತಿದ್ದಾಳೆ. ಪೂರ್ಣಿಮಾಳನ್ನು ಹೊಸನಗರ ತಾಲ್ಲೂಕು ಗರ್ತಿಕೆರೆ ಸಮೀಪದ ಕಡೇಗದ್ದೆಯ ಸತ್ಯನಾರಾಯಣರಾವ್‌ರ ಪುತ್ರ ಗಣೇಶಮೂರ್ತಿಗೆ ಕೊಟ್ಟು ವಿವಾಹವಾಗಿದ್ದು ಅವರಿಗೆ ಸುಹಾಸ್ ಎಂಬ ಮಗನಿದ್ದಾನೆ.
     ತಮ್ಮ ಸೇವಾವಧಿಯಲ್ಲಿ ಯಾವುದೇ ರೀತಿಯ ಕಳಂಕ ಹೊತ್ತುಕೊಳ್ಳದೆ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ನಾಗರಾಜಭಟ್ಟರ ಹಿರಿಮೆ. ಈಗ ಪೌರೋಹಿತ್ಯ ಕಾರ್ಯ ಮುಂದುವರೆಸಿಕೊಂಡು ಬಂದಿದ್ದಾರೆ. ಆರ್ಥಿಕವಾಗಿ ಭಗವಂತ ಅಷ್ಟಿಷ್ಟು ಕೊಟ್ಟಿದ್ದಾನೆ. ಮತ್ತಷ್ಟಕ್ಕೆ ಕೈಚಾಚದೆ ಇದ್ದಷ್ಟರಲ್ಲೇ ನಾಗರಾಜ ಭಟ್ಟರ ಕುಟುಂಬ ಸರಳ ಜೀವನ ನಡೆಸುತ್ತಿದೆ.
- ಕೆಳದಿ ರಾಮಮೂರ್ತಿ.

******************
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)

Sunday, July 17, 2011