ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, January 31, 2011

ಮೂಢ ಉವಾಚ


ಲೇಖಕರು: ಶ್ರೀ ಕವಿ ನಾಗರಾಜ್, ಹಾಸನ.
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ - ಶಾಖೆ: ಹಾಸನ
ಪುಟಗಳು: 76+4 : ಪ್ರಕಟಣಾ ವರ್ಷ: 2011   :  ಬೆಲೆ: ರೂ.20/-

ಜೀವನದ ಅನುಭವದ ಮೂಸೆಯಿಂದ ಮೂಡಿಬಂದ ಮಾತುಗಳಿಗೆ ಶ್ರೀ ಕವಿ ನಾಗರಾಜ್ ರವರು ಇಲ್ಲಿ ಅಕ್ಷರ ರೂಪವನ್ನು ಮುಕ್ತಕಗಳ ರೂಪದಲ್ಲಿ ಬಲು ಸುಂದರವಾಗಿ ನೀಡಿದ್ದಾರೆ. ಮನಸ್ಸಿಗೆ ಮುದ ನೀಡುವಂತಹ ಒಂದು ಉತ್ತಮ ಕೃತಿ. ಕೆಳದಿ ಕವಿ ಮನೆತನದ ಸಾಧನೆಗಳಿಗೆ ಮತ್ತೊಂದು ಗರಿಯೆಂದರೆ ಉತ್ಪ್ರೇಕ್ಷೆಯಲ್ಲ. ಕೆಲವು ಮುಕ್ತಕಗಳನ್ನು ನೋಡಿ:

'ಅತ್ತ ಮುಖ ಇತ್ತಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||'

'ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ |
ಶುಭ ಹರಸಿ ತಿಲಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ ||'

'ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು |
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನಬೇಕು ಮೂಢ ||'      ..............



Thursday, January 27, 2011

ಬಲ್ಲವರೇ ಬಲ್ಲರು....

ರಾಗ: ದೇಶಿ                :                   ತಾಳ: ಝಂಪೆ

ಕವಿತಾರಸದ ಸೊಬಗ ಕವಿಗಳೇ ಬಲ್ಲರಲ್ಲದೆ
ಯುವತಿಯರು ಕವಿಯ ಹೃದಯವ ಕಂಡರುಂಟೆ                                     || ಪ ||

ಕಾಗೆ ಬಲ್ಲುದೆ ದಿವ್ಯಚೂತಫಲರಸದಿನಿದ
ಗೂಗೆ ಬಲ್ಲುದೆ ಸೂರ್ಯನುದಯವನ್ನು
ರೋಗಿ ಬಲ್ಲನೆ ಸುಧಾರಸದ ಸುಸ್ವಾದವನು
ಭೋಗಿ ಬಲ್ಲನೆ ಯೋಗಮಾರ್ಗರೀತಿಯನು                                           || 1 ||

ಕಣ್ಣಿಲ್ಲದವಗೆ ಕನ್ನಡಿಯಿದ್ದು ಫಲವೇನು
ಹೊನ್ನಿದ್ದರೇನು ಲೋಭಿಯ ಕೈಯಲಿ
ಹೆಣ್ಣಿದ್ದರೇನು ಪೌರುಷವಿಲ್ಲದ ನರಗೆ
ಪುಣ್ಯಹೀನಗೆ ಕನಕಶಿಲೆಯಿದ್ದರೇನು                                                      || 2 ||

ಗಾನರಸಮಾಧುರ್ಯವನು ಬಧಿರಬಲ್ಲನೆ
ಆನೆ ಬಲ್ಲುದೆ ಚಂದನದ ರಸವನು
ಮಾಣಿಕದ ಮಾಲಿಕೆಯ ಮರ್ಕಟನು ಬಲ್ಲುದೆ
ನೀನೊಬ್ಬ ಬಲ್ಲೆ ಕೆಳದಿ ರಾಮೇಶಲಿಂಗ                                                  || 3 ||

Monday, January 24, 2011

'ವೇದಸುಧೆ' ಅಂತರ್ಜಾಲತಾಣದ ಪ್ರಥಮ ವಾರ್ಷಿಕೋತ್ಸವ

ಆತ್ಮೀಯರೇ,
                  ದಿನಾಂಕ 30-01-2011ರಂದು ಹಾಸನದ ಶ್ರೀ ಶಂಕರಮಠದಲ್ಲಿ ಬೆ. 9-30ರಿಂದ 'ವೇದಸುಧೆ' ಅಂತರ್ಜಾಲತಾಣದ ಪ್ರಥಮ ವಾರ್ಷಿಕೋತ್ಸವ ನಡೆಯಲಿದ್ದು ಎಲ್ಲಾ ಬಂಧುಗಳು ಭಾಗವಹಿಸಲು ಕೋರಿದೆ. ಹರಿಹರಪುರ ಶ್ರೀಧರ್ ಸಂಪಾದಕರು ಮತ್ತು ಕವಿನಾಗರಾಜರು ಗೌ.ಸಂಪಾದಕರಾಗಿರುವ ಈ ತಾಣದಲ್ಲಿ ಕವಿ ಸುರೇಶರು  ವೇದಸುಧೆ ಬಳಗದ ಸಕ್ರಿಯ ಸದಸ್ಯರು ಮತ್ತು ಲೇಖಕರಾಗಿದ್ದಾರೆ. ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಸಿ.ಡಿ. ಬಿಡುಗಡೆ, 'ಆರೋಗ್ಯಕರ ಬದುಕು ಮತ್ತು ವೇದ' ಎಂಬ ವಿಚಾರಸಂಕಿರಣ, ಕು. ಬಿ.ಎಸ್.ಆರ್. ಅಂಬಿಕಾಳ ವಯಲಿನ್ ವಾದನ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
                  ಅದೇ ದಿನ ಅದೇ ಸ್ಥಳದಲ್ಲಿ ಮ.3-00ರಿಂದ 'ಮನೆಮನೆಕವಿಗೋಷ್ಠಿ'ಯ 14ನೇ ವಾರ್ಷಿಕೋತ್ಸವ ಜರುಗಲಿದೆ. ಕವಿನಾಗರಾಜರ ಚಿಂತನಶೀಲ ಮುಕ್ತಕಗಳು 'ಮೂಢ ಉವಾಚ' ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. 
                  ತಮ್ಮೆಲ್ಲರಿಗೂ ಆದರದ, ಆತ್ಮೀಯ ಆಹ್ವಾನವಿದೆ.
 ಆಹ್ವಾನ ಪತ್ರಿಕೆ ತಮ್ಮ ಗಮನಕ್ಕಾಗಿ: