ರಾಗ: ದೇಶಿ : ತಾಳ: ಝಂಪೆ
ಕವಿತಾರಸದ ಸೊಬಗ ಕವಿಗಳೇ ಬಲ್ಲರಲ್ಲದೆ
ಯುವತಿಯರು ಕವಿಯ ಹೃದಯವ ಕಂಡರುಂಟೆ || ಪ ||
ಕಾಗೆ ಬಲ್ಲುದೆ ದಿವ್ಯಚೂತಫಲರಸದಿನಿದ
ಗೂಗೆ ಬಲ್ಲುದೆ ಸೂರ್ಯನುದಯವನ್ನು
ರೋಗಿ ಬಲ್ಲನೆ ಸುಧಾರಸದ ಸುಸ್ವಾದವನು
ಭೋಗಿ ಬಲ್ಲನೆ ಯೋಗಮಾರ್ಗರೀತಿಯನು || 1 ||
ಕಣ್ಣಿಲ್ಲದವಗೆ ಕನ್ನಡಿಯಿದ್ದು ಫಲವೇನು
ಹೊನ್ನಿದ್ದರೇನು ಲೋಭಿಯ ಕೈಯಲಿ
ಹೆಣ್ಣಿದ್ದರೇನು ಪೌರುಷವಿಲ್ಲದ ನರಗೆ
ಪುಣ್ಯಹೀನಗೆ ಕನಕಶಿಲೆಯಿದ್ದರೇನು || 2 ||
ಗಾನರಸಮಾಧುರ್ಯವನು ಬಧಿರಬಲ್ಲನೆ
ಆನೆ ಬಲ್ಲುದೆ ಚಂದನದ ರಸವನು
ಮಾಣಿಕದ ಮಾಲಿಕೆಯ ಮರ್ಕಟನು ಬಲ್ಲುದೆ
ನೀನೊಬ್ಬ ಬಲ್ಲೆ ಕೆಳದಿ ರಾಮೇಶಲಿಂಗ || 3 ||
No comments:
Post a Comment