ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, May 29, 2011

ನವರಸಕವಿ ಕೆಳದಿ ಸುಬ್ಬಾಭಟ್ಟ

ಕೆಳದಿ ಕವಿಮನೆತನದ ಪೂರ್ವಜರು
ನವರಸಕವಿ ಕೆಳದಿ ಸುಬ್ಬಾಭಟ್ಟ
-ಡಾ: ಕೆಳದಿ ವೆಂಕಟೇಶ್ ಜೋಯಿಸ್

     ಕೆಳದಿ ಕವಿ ಮನೆತನದಲ್ಲಿ ಹೆಸರಾದ ಪ್ರಮುಖರಲ್ಲಿ ಲಿಂಗಣ್ಣ, ವೆಂಕಣ್ಣ ಇವರುಗಳ ಜೊತೆಗೆ ಕವಿ ಸುಬ್ಬಾಭಟ್ಟನೂ ಒಬ್ಬನು. ಕೆಳದಿ ಕಾಲದಲ್ಲಿ ಇಬ್ಬರು ಸುಬ್ಬ ಕವಿಗಳು ಬರುತ್ತಾರೆಂದೂ ಸುಬ್ಬ ಕವಿಯ ಕುರಿತು ಸಾಕಷ್ಟು ಚರ್ಚೆಯಿದೆ. ಯಕ್ಷಗಾನ ಪ್ರಸಂಗಗಳು ಹಾಗೂ ಅವುಗಳ ಕರ್ತೃಗಳ ಕುರಿತು ವಾದವಿವಾದವಿದೆ. ಡಾ:ಕೋಟ ಶಿವರಾಮ ಕಾರಂತರೂ, ಶ್ರೀ ಕುಕ್ಕಿಲ ಕೃಷ್ಣಭಟ್ಟರೂ ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ. ಅದರಲ್ಲಿ ಯಕ್ಷಗಾನ ನಾಟಕಗಳ ಕರ್ತೃಗಳ ಬಗ್ಗೆ ಮುಖ್ಯವಾಗಿ ಸುಬ್ಬ ಎಂಬುವನ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಸಿರುವುದಿದೆ. ಕೆಳದಿ ಪೀಳಿಗೆಯ ಸುಬ್ಬ ಮತ್ತು ಪಾರ್ತಿ ಸುಬ್ಬ ಎಂಬುವವರು ಒಬ್ಬರೇ ಅಥವಾ ಬೇರೆ ಬೇರೆಯವರೆ ಎಂಬುದು ಇಲ್ಲಿ ನಡೆದ ವಾದ. ಇವರಿಬ್ಬರ ತಂದೆ ತಾಯಿಯವರು ಬೇರೆ ಬೇರೆ. ಇವರು ರಚಿಸಿರುವ ಕೃತಿಗಳು, ಇವರ ಆಶ್ರಯದಾತರು ಬೇರೆ ಎಂಬುದು ಸಾಬೀತಾಗಿದೆ.

     ಕೆಳದಿ ಕವಿಗಳಲ್ಲಿ ವೆಂಕ, ಸುಬ್ಬರು ಹೆಚ್ಚು ಚರ್ಚೆಗೆ ಒಳಗಾಗಿದ್ದಾರೆ. ಶ್ರೀ ಶಿವರಾಮ ಕಾರಂತರು ಮೈರಾವಣ ಕಾಳಗದ ಕತೃವಾದ ಅಜಪುರದ ಸುಬ್ಬನಲ್ಲಿ, ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತಗಳನ್ನು ಬರೆದ ಕೆಳದಿಯ ಸುಬ್ಬನನ್ನೂ, ಐರಾವತ, ಶ್ರೀ ಕೃಷ್ಣಲೀಲೆ, ಕುಶಲವರ ಕಾಳಗಗಳನ್ನು ಬರೆದ ಅನಾಮಧೇಯ ಎನಿಸಿದ್ದ ಕುಕ್ಕಿಲರ ಪಾರ್ತಿಸುಬ್ಬನನ್ನೂ ಸೇರಿಸಿ ಒಬ್ಬ ಸುಬ್ಬನನ್ನು ಎತ್ತಿಹಿಡಿದಿರುವುದಿದೆ.  ಆದರೆ ಮೇಲಿನ ಪ್ರಸಂಗಗಳ ಕತೃಗಳು ಮೂವರು ಆಗಿಹೋಗಿದ್ದಾರೆ. ಅವರಲ್ಲಿ ಆಡುವಳ್ಳಿಯ ಸುಬ್ರಹ್ಮಣ್ಯ, ಕೆಳದಿಯ ಸುಬ್ಬ ಮತ್ತು ಪಾರ್ತಿ ಸುಬ್ಬ.
     ಪಾರ್ತಿ ಸುಬ್ಬ ಅಥವಾ ಹಂಪೆಯಾತ್ಮನ ಕುರಿತು ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ವೆಂಕಾರ್ಯನ ಕುರಿತು ಹೆಚ್ಚಿನ ಮಾಹಿತಿ ದೊರೆಯುತ್ತದೆ. ಈತ ಬಾಲ ವಾಲ್ಮೀಕಿ ಎಂದು ಖ್ಯಾತನಾಗಿದ್ದ ಪ್ರಧಾನಿ  ಅಥವಾ ಮಹಾಮಂತ್ರಿ ಆಗಿದ್ದನೆಂದು ಕಂಡು ಬರುತ್ತದೆ. ಈತನು ಕೆಳದಿಯ ಹಿರಿಯ ಬಸವಪ್ಪನಾಯಕನ ಆಸ್ಥಾನದಲ್ಲಿದ್ದನೆಂದು ಡಾ: ಶಿವರಾಮ ಕಾರಂತರ ಅಭಿಪ್ರಾಯ. ಆದರೆ ಕವಿ ಚರಿತ್ರೆಗಾರರ ಅಭಿಪ್ರಾಯ ಆಧರಿಸಿ ಕುಕ್ಕಿಲರು ಕ್ರಿ. ಶ. ೧೭೬೩ರ ಅನಂತರದಲ್ಲಿ ಕೆಳದಿಯನ್ನು ಆಳಿದ ಹೈದರಾಲಿಯ ಮಂತ್ರಿ ಆಗಿರಬಹುದೆಂದು ಹೇಳುತ್ತಾರೆ.  ರುಕ್ಮಿಣೀ ಸ್ವಯಂವರ ಪ್ರಸಂಗದ ಕೊನೆಯಲ್ಲಿ ಹೇಳಿರುವ ಮಾತುಗಳಿಂದ ಈತನು ಕೆಳದಿಯ ಭೂರಮಣನಾದ ಬಸವೇಂದ್ರನ ಆಶ್ರಯದಲ್ಲಿದ್ದ ಕವಿ ವೆಂಕಣಾರ್ಯ ಮತ್ತು  ಅವನ ಪತ್ನಿ ದೇವಮ್ಮ ಅವರ ಹಿರಿಯ ಮಗ ಚೆನ್ನಯ್ಯನ ತಮ್ಮ ಸುಬ್ಬ ಎಂಬುದು ಸ್ಪಷ್ತವಾಗುತ್ತದೆ. ಇವನು ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತ ಎಂಬ ಎರಡು ಪಸಂಗಗಳ ಕರ್ತೃ.
     ಪಾರಿಜಾತ ಮತ್ತು ರುಕ್ಮಿಣೀ ಸ್ವಯಂವರಗಳನ್ನು ಬರೆದ ಕೆಳದಿ ಸುಬ್ಬ ಮತ್ತು ಹನುಮದ್ರಾಮಾಯಣವನ್ನು ಬರೆದ ಆಡುವಳ್ಳಿ ಸುಬ್ಬ ಬೇರೆಬೇರೆಯವರು. ಇವನ ತಂದೆ ವೆಂಕಾರ್ಯ. ಈ ವೆಂಕಾರ್ಯನು ತನ್ನ ಕೃತಿಗಳಲ್ಲಿ ತನ್ನ ತಂದೆ ಲಿಂಗಪ್ಪನನ್ನು ಸ್ಮರಿಸಿದ್ದಾನೆಯೇ ಹೊರತು ಆಶ್ರಯದಾತನ ಹೆಸರು ಹೇಳಿಲ್ಲ. ಸಿಕ್ಕಿರುವ ಕೃತಿಗಳಲ್ಲಿ ಕೆಲವು ಗರಿಗಳು ಕಳೆದು ಹೋಗಿರುವುದರಿಂದ ಹೇಳಿದ್ದರೂ ಹೇಳಿರಬಹುದೆನಿಸುತ್ತದೆ. ಇವನ ಮಗ ಕೆಳದಿ ಸುಬ್ಬನು ತನ್ನ ರುಕ್ಮಿಣೀ ಸ್ವಯಂವರದ ಅಂತ್ಯದಲ್ಲಿ 'ಧಾರಿಣಗೆ ಪಶ್ಚಿಮದಿ ಶೋಭಿಪ| ವಾರಿನಿಧಿಯನಾಳ್ವ ಕೆಳದಿಯ| ಭೂರಮಣ ಬಸವೇಂದ್ರನಂಘ್ರೀಯ ಸೇರಿ ಬಾಳ್ವ ವೆಂಕಣಾರ್ಯನ ಮಗ ತಾನು' ಎಂದು ಹೇಳಿಕೊಂಡಿರುವುದರಿಂದ ಈ ವೆಂಕನಿಗೆ ಕೆಳದಿಯ ಕಿರಿಯ ಬಸವಪ್ಪ ನಾಯಕನ ಆಶ್ರಯವಿದ್ದುದು ಸ್ಪಷ್ಟವಾಗಿ ತಿಳಿಯುತ್ತದೆ.

     ರುಕ್ಮಿಣೀ ಸ್ವಯಂವರ, ಪಾರಿಜಾತ ಬರೆದ ಕೆಳದಿ ಸುಬ್ಬನು ಕೆಳದಿಯ ಕವಿ ಮನೆತನಕ್ಕೆ ಸೇರಿದವನು. ಕವಿ ಸುಬ್ಬ ಅಥವಾ ಸುಬ್ಬಾಭಟ್ಟ ಎಂದು ಕರೆಯಲ್ಪಡುತ್ತಿದ್ದ ಈತನು ಕೆಳದಿ ಸಾಮ್ರಾಜ್ಯದ ಕಡೆಯ ದಿನಗಳಲ್ಲಿದ್ದವನು. ಆಗಲೇ ಸಾಮ್ರಾಜ್ಯ ಕೊನೆಗೊಂಡ ನಂತರ ರಾಜಾಶ್ರಯ ಇಲ್ಲದೆ ಜನರ ನಡುವೆ ಆಶ್ರಯ ಪಡೆದುಕೊಂಡವನಿವನು. ಈತನು ಯಕ್ಷಗಾನ ಪಸಂಗವನ್ನು ರಚಿಸುವುದರ ಜೊತೆಗೆ ನಟನೆಯನ್ನೂ, ಭಾಗವತಿಗೆಯನ್ನೂ ರೂಢಿಸಿಕೊಂಡು ತನ್ನ ಬದುಕನ್ನು ಸಾಗಿಸಿದಂತೆ ಕಂಡು ಬರುತ್ತದೆ. ಈತನ ಎರಡು ಕೃತಿಗಳಲ್ಲಿ ರುಕ್ಮಿಣಿ ಸ್ವಯಂವರವನ್ನು ಕೆಳದಿಯ ಅರಸು ಮನೆತನ ಅಸ್ತಿತ್ವದಲ್ಲಿದ್ದಾಗ ರಚಿಸಿರುವಂತೆ ಕಂಡು ಬರುತ್ತದೆ. ಪಾರಿಜಾತವನ್ನು ಕೆಳದಿ ರಾಜ್ಯ ಪತನಾ ನಂತರ ರಚಿಸಿರಬೇಕು.  ರುಕ್ಮಿಣೀ ಸ್ವಯಂವರ ಪ್ರಸಂಗ ಕೃತಿಯಲ್ಲಿ ತನ್ನ ವಿಷಯವನ್ನು ಹೇಳುವ ಸಂಬಂಧದಲ್ಲಿ ತನ್ನ ಆಶ್ರಯದಾತ ಬಸವೇಂದ್ರ ಅಂದರೆ ಕಿರಿಯ ಬಸವಪ್ಪ ನಾಯಕನನ್ನು ಸ್ಮರಿಸಿದ್ದಾನೆ. ಇದು ಪಾರಿಜಾತ ಪ್ರಸಂಗದಲ್ಲಿ ಕಂಡುಬರುವುದಿಲ್ಲ. ಇದರ ಆಧಾರದಿಂದ ಇವನ ಕಾಲವನ್ನು ಕ್ರಿ. ಶ. ೧೭೬೦ ಎಂದು ಹೇಳಬಹುದು.
     ರುಕ್ಮಿಣೀ ಸ್ವಯಂವರ, ಪಾರಿಜಾತ  ಈ ಎರಡು ಪ್ರಸಂಗಗಳಿಗೆ ಭಾಗವತದಿಂದಲೇ ವಸ್ತುವನ್ನು ಆರಿಸಿಕೊಂಡಿದ್ದಾನೆ. ಇವುಗಳಲ್ಲಿ ಶೃಂಗಾರದ ಜೊತೆಗೆ ವೀರರಸವನ್ನೂ ಅಳವಡಿಸಿದ್ದಾನೆ. ಇಲ್ಲಿ ರುಕ್ಕ್ಮ, ಜೈದ್ಯಪತಿ ಮೊದಲಾದವರ ಗರ್ವಭಂಗವಾಗಿದ್ದರೆ, ಅಲ್ಲಿ ದೇವೇಂದ್ರನ ಅಹಂಕಾರ ಅಳಿದುದನ್ನು ಹೇಳುತ್ತದೆ.  ನರಕಾಸುರನ ವಧೆಯಗಿದೆ. ರುಕ್ಮಿಣೀ ಸ್ವಯಂವರಕ್ಕಿಂತ ಪಾರಿಜಾತ ಉತ್ತಮ ಕಲಾಕೃತಿ.
ರುಕ್ಮಿಣೀ ಸ್ವಯಂವರ:  
    ಈ ಯಕ್ಷಗಾನ ಕೃತಿಯ ಆರಂಭದಲ್ಲಿ ಕವಿಯು  ಗಣಪ, ಶಿವ, ಮುಕಾಂಬಿಕೆ ವಿಷ್ಣು, ಲಕ್ಷ್ಮೀ, ಬ್ರಹ್ಮ, ಶಾರದೆ ಇವರುಗಳ ಜೊತೆಗೆ ದೇವ ಗುರು ಪ್ರಾರ್ಥನೆ ಮಾಡುವುದರೊಂದಿಗೆ ಪ್ರಸಂಗವನ್ನು ಪ್ರಾರಂಭಿಸುತ್ತಾನೆ.  ದ್ವಾರಕಿಯ  ಕೃಷ್ಣ ತನ್ನ ಅಣ್ಣ ಬಲರಾಮನ ನೆರವಿನಿಂದ ಕೂಡಿನಪುರಕ್ಕೆ ಬಂದು ಅಲ್ಲಿನ ಅರಸನ ಮಗಳು ರುಕ್ಮಿಣಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುತ್ತಾನೆ. ರುಕ್ಮಿಣಿಯ ತಂದೆ ಭೀಷ್ಮಕನು ತನ್ನ ಮಗಳ ಇಚ್ಛೆ ಪೂರ್ಣವಾಗಲು ನೆರವಾಗುತ್ತಾನೆ. ಕೃಷ್ಣನೊಡನೆ ಅವಳ ಲಗ್ನವನ್ನು ವಿರೋಧಿಸಿದ ಅವಳ ಅಣ್ಣ ರುಕ್ಮ ಚೈದ್ಯರಾಜನಿಗೆ ಕೊಡಲು ಯತ್ನಿಸಿ ವಿಫಲನಾಗುತ್ತಾನೆ. ಕೃಷ್ಣನಿಂದ ರುಕ್ಮನ ಗರ್ವಭಂಗವಾಗುತ್ತದೆ. ಇದರಲ್ಲಿ ಕುಂಡಿನಪುರದಿಂದ ಕನ್ಯೆ ರುಕ್ಮಿಣಿಯ ದೌತ್ಯವನ್ನು ಹೊತ್ತು ದ್ವಾರಕಿಗೆ ಬಂದ ವಿಪ್ರನೊಬ್ಬನ ಪಾತ್ರ ಸೃಷ್ಟಿ ಚೆನ್ನಾಗಿದೆ. ಅವನು ತಂದೊಪ್ಪಿಸಿದ ಪತ್ರಸಾರ ಗಮನಿಸುವಂತಿದೆ.
ಪಾರಿಜಾತ:   

  ರುಕ್ಮಿಣೀ ಸ್ವಯಂವರದಂತೆ ಇದರಲ್ಲಿಯೂ ಆರಂಭದಲ್ಲಿ ತನ್ನ ಇಷ್ಟದೇವತೆಯದ ದೇವಕಿಯಣುಗನ ಪ್ರಾರ್ಥನೆಯ ನಂತರ ಗಣಪ, ಶಿವ, ಮೂಕಾಂಬಿಕೆಯರನ್ನು ಸ್ಮರಿಸಿ ದ್ವಿಪದಿಯಲ್ಲಿ
     ಪಾರಿಜಾತವ ತಂದು ರಂಜಿಸಿದ ಕಥೆಯ|
    ಸಾರವನು ಕುಟಜಾದ್ರಿ ಸದನ ವಾಸಿನಿಯ||
     ಕೃಪೆಯಿಂದ ಪೇಳ್ವೆ ನಾ ಯಕ್ಷಗಾನದಲಿ|
     ವಿಪುಳಮತಿಯುತರಿದ ಕೇಳಿ ಲಾಲಿಸಲಿ||
ಎಂದು ತನ್ನ ವಿನಯವನ್ನು ಮೆರೆದಿದ್ದಾನೆ.

     ಕೃಷ್ಣ ದ್ವಾರಕಿಯಲ್ಲಿದ್ದಾಗ ಒಂದು ದಿನ ನಾರದನ ಆಗಮನವಾಗುತ್ತದೆ. ಅರ್ಘ್ಯ ಪಾದ್ಯಾದಿಗಳನ್ನಿತ್ತ  ಕೃಷ್ಣ, ಅವರನ್ನು ಉಪಚರಿಸುತ್ತಾನೆ. ದೇವಮುನಿಯಿಂದ ಪಡೆದ ಪಾರಿಜಾತವನ್ನು ಕೃಷ್ಣ ರುಕ್ಮಿಣಿಗೆ ಮುಡಿಸುತ್ತಾನೆ. ದೂತಿಯೊಬ್ಬಳು ಸತ್ಯಭಾಮೆಯಲ್ಲಿ ವಿಷಯ ತಿಳಿಸಿದಾಗ ಅವಳಲ್ಲಿ ಸವತಿ ಮಾತ್ಸರ್ಯ ಬುಸುಗುಟ್ಟುತ್ತದೆ. ಕೃಷ್ಣ ಬರುವ ವೇಳೆಗೆ ಸಕಲಾಸ್ತ್ರಗಳನ್ನೂ ಸಿದ್ಧ ಪಡಿಸಿಕೊಳ್ಳುತ್ತಾಳೆ ಭಾಮೆ. ಆ ಸಂದರ್ಭದ  ಸಂಭಾಷಣೆ ಸ್ವಾರಸ್ಯವಾಗಿದೆ.
ಕೃಷ್ಣ-ಸತ್ಯಭಾಮೆಯರ ಸಂಭಾಷಣೆ:

ರಾಗ: ಸೌರಾಷ್ಟ್ರ,                          ಏಕತಾಳ
ಕೃಷ್ಣ: ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲು ತೆರೆಯೆ||
ಭಾಮೆ: ದ್ವಾರದಿ ದನಿಯನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು||
ಕೃಷ್ಣ: ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ||
ಭಾಮೆ: ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ||
ಕೃಷ್ಣ: ಕ್ರೂರ ಕಾಳಿಂಗನ ಪೆಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ||
ಭಾಮೆ: ಧೀರ ನೀನಾದರೆ ಪಾವನಾಡಿಸಿಕೊಂಡು                ಗಾರುಡಿಗಾರ ಹೋಗಯ್ಯ||
ಕೃಷ್ಣ: ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ||
ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ||
ಕೃಷ್ಣ: ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ||
ಭಾಮೆ: ಆದರೊಳ್ಳಿತು ಘೋರಾರಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ||
ಕೃಷ್ಣ: ಕಾಂತೆ ಕೇಳಾದರೇಳು ವೃಷಭವ ಕಟ್ಟಿ ನೀಲಕಾಂತೆಯ ತಂದವ ಕಾಣೆ||
ಭಾಮೆ: ಅಂತಾದರೊಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ||
ಕೃಷ್ಣ: ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ||
     ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ||

 ಉಡದೆ, ಉಣ್ಣದೆ, ಬರಿದೆ ಮಂಚದಲ್ಲಿ ಮಲಗಿದ್ದ ಪತ್ನಿಯನ್ನು ಸಂತೈಸಿ, ಅವಳ ಮುನಿಸಿನ ಕಾರಣವನ್ನು ತಿಳಿದ  ಕೃಷ್ಣ ನಿನಗೆ ಸುಮವೊಂದನೀವುದಾವಚಂದ ಎನುತವಳಿಗಿತ್ತೆ; ನಿನಗೆ ವೃಕ್ಷವನೆ ತಂದೀವೆ- ಎನ್ನುತ್ತಾನೆ.
     ಅಷ್ಟರಲ್ಲಿ ನರಕಾಸುರನ ಹಾವಳಿ ಹೆಚ್ಚಿ, ಅವನ ಉಪಟಳವನ್ನು ಕೊನೆಗಾಣಿಸಬೇಕೆಂದು ದೇವೇಂದ್ರ ಶ್ರೀ ವಿಷ್ಣುವಿನಲ್ಲಿ ಬಿನ್ನಹ ಮಾಡಿಕೊಂಡಿರುತ್ತಾನೆ. ಕಾಕತಾಳೀಯವೆನಿಸುವಂತೆ ಎರಡು ಕಾರ್ಯಗಳು ಒಮ್ಮೆಲೇ ಕೂಡಿದಂತಾಗಿ ಕೃಷ್ಣ ಗರುಡನ ಬೆನ್ನೇರಿ ಭಾಮೆಯೊಡನೆ ಇಂದ್ರ ಲೋಕದತ್ತ ಧಾವಿಸುತ್ತಾನೆ. ಹಾದಿಯಲ್ಲಿ ಪ್ರಾಗ್ಜೋತಿಷಪುರ ಗೋಚರಿಸುತ್ತದೆ. ಅಲ್ಲಿ  ಕೃಷ್ಣ ಒಳಹೊಕ್ಕು ಮುರ, ನರಕಾಸುರ ಮೊದಲಾದ ರಕ್ಕಸರನ್ನು ಸಂಹರಿಸಿ ಕಂಟಕ ನಿವಾರಣೆ ಮಾಡುತ್ತಾನೆ. ದೇವಲೋಕದಲ್ಲಿ ದೇವ ದಂಪತಿಗಳಿಗೆ ಅಭೂತ ಪೂರ್ವ ಸ್ವಾಗತ ಲಭಿಸುತ್ತದೆ. ಆದರೆ ಸತ್ಯಭಾಮೆ ಕೃಷ್ಣನ ಮಾತನ್ನೂ ಲೆಕ್ಕಿಸದೆ ಅಲ್ಲಿದ್ದ ಪಾರಿಜಾತದ ವೃಕ್ಷವನ್ನು ಬೇರು ಸಹಿತ ಕಿತ್ತು ಗರುಡನ ಹೆಗಲಿಗೇರಿಸುತ್ತಾಳೆ. ಅದರಸಲುವಾಗಿ ಇಂದ್ರನೊಡನೆ ಯುದ್ಧ ನಡೆದು ಇಂದ್ರನ ಗರ್ವಭಂಗವಾಗುತ್ತದೆ; ಲೋಕ ಕಲ್ಯಾಣವಾಗುತ್ತದೆ. ಈ ಕಥೆಯ ವಸ್ತುವನ್ನು ಎತ್ತಿಕೊಂಡು ರಸ ಪೂರ್ಣವಾದೊಂದು ಯಕ್ಷಗಾನವನ್ನು ಕವಿ ರಚಿಸಿದ್ದಾನೆ. ಕೆಳದಿ ಸುಬ್ಬನ ಪಾಂಡಿತ್ಯ ಪದರ್ಶನಕ್ಕೆ  ಇದೊಂದು ಉತ್ತಮ ನಿದರ್ಶನ ಚೂರ್ಣಿಕೆಯಗಿದೆ.
     ಡಾ ಸಾ.ಶಿ. ಮರುಳಯ್ಯನವರು ಹೇಳುವಂತೆ ಕೆಳದಿ ಸುಬ್ಬನ ಎರಡೂ  ಪ್ರಸಂಗಗಳಲ್ಲಿ ಭಕ್ತಿಯ ಭಾಗೀರಥಿ ನಿರರ್ಗಳವಾಗಿ ಹರಿದಿದ್ದಾಳೆ. ಅಲ್ಲಿನ ಪ್ರಮುಖ ರಸಗಳಾದ ಶೃಂಗಾರ, ಹಾಸ್ಯ, ಕರುಣ, ವೀರಗಳ ಜೊತೆ ಜೊತೆಯಲ್ಲಿ ಭಕ್ತಿರಸವೂ ಪ್ರವಹಿಸಿದೆ. ತನ್ನ ಕುಲದೇವತೆ ಕೊಲ್ಲೂರು ಮೂಕಾಂಬಿಕೆಯನ್ನು ಕುರಿತ ಅವನ ಭಕ್ತಿಗೀತೆಯೊಂದಿಗೆ ಮಂಗಳ ಹಾಡಬಹುದು.  ಒಟ್ಟಿನಲ್ಲಿ ಕವಿ ಸುಬ್ಬ ಅಥವಾ ಸುಬ್ಬಾಭಟ್ಟ  ಕೆಳದಿ ಕವಿ ಮನೆತನದ ಮತ್ತೊಂದು ಕುಸುಮ. ಈತನೂ ಲಿಂಗಣ್ಣ ಕವಿಯಂತೆ ಸಂಪನ್ನ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ.
*****
('ಕವಿಕಿರಣ'ದ 1,ಡಿಸೆಂಬರ್, 2009 ಸಂಚಿಕೆಯಲ್ಲಿ ಪ್ರಕಟಿತ ಲೇಖನ)

ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ

     ದಿ. ಕವಿ ವೆಂಕಟಸುಬ್ಬರಾಯರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹತ್ತು ವರ್ಷಗಳ ಹಿಂದಿನ ಪ್ರಸಂಗ: ನಾನು ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ನನ್ನ ಕಾಲು ಮುಟ್ಟಿ ನಮಸ್ಕರಿಸಿದ ಪ್ರಸಂಗ ನೆನಪಿನಲ್ಲಿ ಉಳಿದಿದೆ. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ನನ್ನ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ನಾನು ನನ್ನ ಸ್ವಭಾವಕ್ಕೆ ವಿರುದ್ಧವಾಗಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದುದರಿಂದ ಸಂಬಂಧಗಳು ಉಳಿದುಕೊಂಡಿರುವುದು ನನ್ನ ವೈಯಕ್ತಿಕ ಅನುಭವ.
     ಅಡಿಗಡಿಗೆ ಕಾಡಿ ಶಿರನರವ ತೀಡಿ|
     ಮಿಡಿದಿಹುದು ಉಡಿಯೊಳಗಿನ ಕಿಡಿಯು||
     ಗಡಿಬಿಡಿಯಲಡಿಯಿಡದೆ ತಡೆತಡೆದು|
     ಸಿಡಿನುಡಿಯ ನೀಡು ಸಿಹಿಯ ಮೂಢ||

     ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣೀಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ.      ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
     

     Doing good to others is virtue (Dharma); injuring others is sin. Strength and manliness are virtue; weakness and cowardice are sin. Independence is virtue; dependence is sin. Loving others is virtue; hating others is sin. Faith in God and one’s own Self is virtue; doubt is sin. Know that talking ill of others in private is a sin. You must wholly avoid it. Many things may occur to the mind, but it gradually makes a mountain of a molehill if you try to express them. Everything is ended if you forgive and forget.”
     ಆದ್ದರಿಂದ ಮರೆಯೋಣ; ಮರೆತು ಚೆನ್ನಾಗಿರೋಣ.
                                       ನಿಮ್ಮವನು,
                              -ಕ.ವೆಂ. ನಾಗರಾಜ್.

*****
('ಕವಿಕಿರಣ' ಪತ್ರಿಕೆಯ 01-12-2009ರ ಸಂಚಿಕೆಯ ಸಂಪಾದಕೀಯ).

Tuesday, May 24, 2011

ರಾಮಾ ರಾಮಾ

ರಾಗ || ಘಂಟಾರವ                              ತಾಳ || ಝಂಪೆ

ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವ
ನೇಮವನೆ ಸ್ಥಿರನಿಜವ ಮಾಡೋ ರಾಮ
ರಾಮ ದಶರಥರಾಮ ಪಟ್ಟಾಭಿರಾಮ ರಘು
ರಾಮ ಸೀತಾಭಿರಾಮ ರಾಮ (ರಾಮ)                                                                                                 || ಪ ||

ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮ
ಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮ
ಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮ
ಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ                                                       || 1 ||

ಹೆತ್ತ ತಾಯ ಮೊಲೆವಾಲನುಂಡುದಕೆ ಪಡಿಗಟ್ಟೆ ಸಪ್ತಶರನಿಧಿ ಸಾಲದೋ ರಾಮ
ಸತ್ತು ಹುಟ್ಟಿದ ದೇಹದಸ್ಥಿ ಗುಪಮಿಸೆ ಮೇರುಮಸ್ತ ಕಕ್ಕತ್ಯಧಿಕವೋ ರಾಮ
ಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮ
ಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನ್ನು ಕೊಟ್ಟು ಸಲಹೋ ರಾಮ                                || 2 ||

ತಂದೆತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮ
ಮುಂದುಗಾಣದೆ ಬಹು ಮದಾಂಧತನದಲಿ ನಡೆದು ಮಂದಮತಿಯಾಗಿದ್ದೆನೋ ರಾಮ
ಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮ
ಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ                                          || 3 ||

Sunday, May 1, 2011

ಕೆಳದಿ ಕವಿಮನೆತನದ ಸಮಕಾಲೀನರು : ಸಾಗರದ ಕವಿ ಕೃಷ್ಣಮೂರ್ತಿ - ಅನಸೂಯಮ್ಮ





----------------------------------------------------------
     ಶ್ರೀ ಸಾ.ಕ. ಕೃಷ್ಣಮೂರ್ತಿಯವರು ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ ಹಿರಿಯರು. ಸಾತ್ವಿಕ ಜೀವನ ನಡೆಸುತ್ತಿರುವ ಈ ಹಿರಿಯರು ಕವಿ ಕುಟುಂಬಗಳ ಒಳ್ಳೆಯ ಕಾರ್ಯಗಳಿಗೆ ಪ್ರೇರಕ ಮತ್ತು ಮಾರ್ಗದರ್ಶಕರಾಗಿದ್ದಾರೆ.  ೧೧-೦೩-೦೯ರಂದು ೮೨ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ  ಇವರ ಪರಿಚಯ ಲೇಖನ ಬರೆದಿರುವರು ವಿದ್ವಾನ್ ಡಾ. ಕೆ. ಕೃಷ್ಣಜೋಯಿಸ್, ಎಂ.ಎ., ಬಿ.ಎಡ್.ರವರು ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಇವರು ಉತ್ತಮ ಬರಹಗಾರರು, ವಾಗ್ಮಿಗಳು. ಇವರ ತಾಯಿಯ ತಮ್ಮನವರೇ ಶ್ರೀ ಕೃಷ್ಣಮೂರ್ತಿಯವರು. 
ಶ್ರೀ ಕೃಷ್ಣಮೂರ್ತಿಯವರ ವಿಳಾಸ: ಶಶಿಕಿರಣ, ನಂ. ೧೦೦೧, ೧೫ನೆಯ ಅಡ್ಡರಸ್ತೆ, ಬನಶಂಕರಿ- ೨ನೆಯ ಹಂತ, ಬೆಂಗಳೂರು -೫೬೦೦೭೧. ದೂ. ೦೮೦- ೨೬೭೧೦೨೦೫
ಲೇಖಕರ ವಿಳಾಸ: ಡಾ. ಕೆ.ಕೃಷ್ಣಾಜೋಯಿಸ್,   ನಂ. ೧೨೨೦, ಶ್ರೀವತ್ಸ, ೧೨ನೆಯ ಅಡ್ಡರಸ್ತೆ, ಗಿರಿನಗರ- ೨ನೆಯ ಹಂತ, ಬೆಂಗಳೂರು- ೫೬೦೦೮೫. (ದೂ. ೦೮೦-೨೬೪೨೧೦೭೪). -ಸಂ.

------------------------------------------------------------
     ಕೆಳದಿ ಸಂಸ್ಥಾನದಲ್ಲಿ ಪ್ರಸಿದ್ಧವಾದವುಗಳು ಜೋಯಿಸರ ಮತ್ತು ಕವಿ ಮನೆತನಗಳು. ಜೋಯಿಸರ ಮನೆತನ ಕೆಳದಿನಾಯಕರ ರಾಜ್ಯ ಕಟ್ಟಲು ಸಹಾಯಕವಾಗಿದ್ದರೆ ಕವಿ ಮನೆತನ ಕಲೆ, ಸಾಹಿತ್ಯ, ಸಂಗೀತ, ಕವಿತ್ವರಚನೆ ಮೊದಲಾದ ಕೆಳದಿ ಸಂಸ್ಥಾನದ ಸಂಸ್ಕೃತಿಯನ್ನು ಬೆಳಸುವುದಾಗಿದೆ. ಇದಕ ಕೆಳದಿ ನೃಪವಿಜಯ ವೆಂಬ ಗ್ರಂಥವನ್ನು ರಚಿಸಿದ ಲಿಂಗಣ್ಣ ಕವಿಯೇ ಮೂಲ. ಈ ಮನೆತನದಲ್ಲಿ ಕವಿ ರಾಮಣ್ಣ, ವೆಂಕಣ್ಣ ಹಾಗೂ ಲಿಂಗಣ್ಣ ಇವರುಗಳು ಪ್ರಸಿದ್ಧರಾದವರು. ಯದ್ಯಪಿ ಇವರುಗಳು ಸಂಸ್ಥಾನದ ಪ್ರಸಿದ್ಧ ಸ್ಥಳವಾದ ಸಾಗರದವರಾಗಿದ್ದರೂ (ಕೆಳದಿ ನೃಪವಿಜಯದಲ್ಲಿ ಸಾಗರವು ಸದಾಶಿವಸಾಗರವೆಂದು ಉಲ್ಲೇಖಿಸಲಾಗಿದೆ) ಕಾಲಕ್ರಮೇಣ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಯಿಂದಾಗಿ ಒಬ್ಬೊಬ್ಬರು ಒಂದೊಂದು ಕಡೆ ನೆಲೆಸಿದರು. ಶ್ರೀ ರಾಮಣ್ಣನವರು ಹಾಗೂ ಮಕ್ಕಳು ಕೆಳದಿಯಲ್ಲಿಯೂ, ಶ್ರೀ ವೆಂಕಣ್ಣಯ್ಯನವರ ಮಕ್ಕಳು ಶಿವಮೊಗ್ಗ, ಕೊಪ್ಪಗಳಲ್ಲಿಯೂ, ಶ್ರೀ ಲಿಂಗಣ್ಣನವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದ್ದರಿಂದಲೂ, ಕಾಲಕ್ರಮೇಣ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅವರ ಮಕ್ಕಳೂ ಸಹ ಬೆಂಗಳೂರಿನಲ್ಲಿಯೇ ನೆಲೆಸಿದರು. ಶ್ರೀ ಲಿಂಗಣ್ಣಯ್ಯವರು ಚಿತ್ರರಾಮಾಯಣ, ಚಿತ್ರಭಾಗವತ, ಭಗವದ್ಗೀತೆ ಲಲಿತಾತ್ರಿಶತಿ, ಮಾರುತೀಸ್ತುತಿ ಇವುಗಳನ್ನು ಚಿತ್ರಪಟದಲ್ಲಿ ದೇವನಾಗರೀ ಲಿಪಿಯಲ್ಲಿ ಕಲಾತ್ಮಕವಾಗಿ ರಚಿಸಿದ್ದಾರೆ. ಈಗಲೂ ಇವುಗಳನ್ನು ನೋಡಬಹುದು. ಅಲ್ಲದೆ ಇನ್ನೂ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರು ವೀಣೆ ಹಾಗೂ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
     ಶ್ರೀ ಲಿಂಗಣ್ಣಯ್ಯನವರ ಸಂಸಾರ ದೊಡ್ಡದು. ಅವರಿಗೆ ಶ್ರೀಯತರಾದ ಎಸ್.ಕೆ. ನಾರಾಯಣರಾವ್, ಎಸ್.ಕೆ. ಕೃಷ್ಣಮೂರ್ತಿ, ಎಸ್.ಕೆ. ರಾಮರಾವ್ ಎಂಬ ಮೂವರು ಗಂಡು ಮಕ್ಕಳು ಹಾಗೂ ಶ್ರೀಮತಿಯರಾದ ಮುತ್ತಮ್ಮ, ಮೂಕಮ್ಮ, ಜಾನಕಮ್ಮ, ಸರಸ್ವತಮ್ಮ, ಸುಬ್ಬಲಕ್ಷ್ಮಮ್ಮ, ನಾಗರತ್ನಮ್ಮ, ಪದ್ಮಾವತಮ್ಮ ಮತ್ತು ಗಿರಿಜಮ್ಮ ಎಂಬ ಎಂಟು ಜನ ಹೆಣ್ಣುಮಕ್ಕಳೂ ಇದ್ದರು. ಲಿಂಗಣ್ಣಯ್ಯನವರ ಅಕ್ಕ ಮತ್ತು ಮಗಳು ಕೆಳದಿ ಜೋಯಿಸರ ಸಂಬಂಧ ಮಾಡಿದ್ದು, ಕವಿ ಹಾಗೂ ಜೋಯಿಸರ ಸಂಬಂಧ ಹಿಂದಿನಿಂದಲೂ ಮುಂದುವರೆಯುತ್ತಿದೆ. ಗಂಡುಮಕ್ಕಳಲ್ಲಿ ಮೊದಲಿನ ಇಬ್ಬರೂ ತಂದೆಯಂತೆ ವೀಣಾಭ್ಯಾಸಮಾಡಿ ಸಂಗೀತದಲ್ಲಿ ಪ್ರೌಢಿಮೆ ಪಡೆದಿದ್ದಾರೆ. ಮೂರನೆಯವರು ವೇದಾಂತಿಗಳು.
     ಇವರ ಎರಡನೇಮಗನೇ ಸಾಗರದ ಕವಿ ಕೃಷ್ಣಮೂರ್ತಿ. ಇವರು  ದಿನಾಂಕಃ ೧೧-೩-೧೯೨೮ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯಿಂದ ರಚಿಸಲ್ಪಟ್ಟ ಭೂಪಟಗಳು ಹಿಂದಿನ ಮೈಸೂರು ರಾಜ್ಯದ ಎಲ ಶಾಲೆಗೂ ಸರ್ಕಾರದ ವತಿಯಿಂದ ವಿತರಿಸಲ್ಪಡುತ್ತಿದ್ದು ಆ ವೃತ್ತಿಯಲ್ಲಿಯೇ ಮಗನು ಮುಂದುವರೆಯಬೇಕೆಂಬ ಆಸೆ ಅವರ ತಂದೆಯದಾಗಿತ್ತು. ಅಲ್ಲದೆ ತಂದೆಗೆ ಅಚ್ಚುಮೆಚ್ಚಿನ ಮಗನಾಗಿದ್ದರು. ಮನೆಯ ದೊಡ್ಡ ಸಂಸಾರ, ತಂದೆಯ ಆಸೆ ಇವುಗಳಿಂದಾಗಿ ಕೃಷ್ಣಮೂರ್ತಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ತಂದೆ ಸುಮಾರು ೬೩ ರ ವಯಸ್ಸಿನಲ್ಲಿ ಕಾಲವಾದರು.  ಮನೆಯ ಜವಾಬರಿಯನ್ನು ಸ್ವಲ್ಪ ಮಟ್ಟಿಗಾದರೂ ನಿರ್ವಹಿಸಬೇಕೆಂದು ಬಿನ್ನಿಮಿಲ್ಲಿನಲ್ಲಿ ಕೆಲಸಕ್ಕೆ ಸೇರಿ, ಬೆರಳಚ್ಚುಗಾರರು, ಶೀಘ್ರಲಿಪಿಕಾರರು, ಸೆಕ್ರೆಟರಿ, ಮ್ಯಾನೇಜ್‌ಮೆಂಟ್ ಸ್ಟ್ಯಾಫ್, ಸ್ಟೋರ್ಸ್ ಆಫೀಸರ್, ಹೀಗೆ ನಾನಾ ಹುದ್ದೆಗಳಲ್ಲಿ ಕೆಲಸನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ನಿವೃತ್ತರಾಗಿದ್ದರೂ ಯುವಕರಂತೆ ಬನಶಂಕರಿಯ ದೇವಗಿರಿ ಶ್ರೀವೆಂಕಟೇಶ್ವರ ದೇವಾಲಯದ ಲೈಫ್‌ಟ್ರಸ್ಟಿಯಾಗಿದ್ದಾರೆ. ಅಲ್ಲದೆ ಇದೇ ದೇವಸ್ಥಾನದಲ್ಲಿ ಖಜಾಂಚಿಯಾಗಿಯೂ ಕೆಲಸನಿರ್ವಹಿಸಿದ್ದಾರೆ. ಚಿನ್ಮಯ ಮಿಷನ್ನಿನ ಬೋಡ್ ಸದಸ್ಯರಾಗಿಯೂ, ಸಂಗೀತದಲ್ಲಿ ಆಸಕ್ತಿ ಇರುವುದರಿಂದಲೂ, ವೀಣೆಯ ಅಭಸವಾಗಿರುವುದರಿಂದಲೂ ದೇವಗಿರಿ ಶ್ರೀವೆಂಕಟೇಶ್ವರ ದೇವಸ್ಥಾನದ ಸಂಗೀತ ಕಮಿಟಿಯಲ್ಲಿದ್ದು ಸುತ್ತಮುತ್ತಲ ಜನರಿಗೆ ಇಂಪಾದ ಸಂಗೀತವನ್ನು ದೇವಸ್ಥಾನದ ಮೂಲಕ ಒದಗಿಸುತ್ತಿರುತ್ತಾರೆ.
     ಅಲ್ಲದೆ ಇವರಿಗೆ ಆಧ್ಯಾತ್ಮಿಕದಲ್ಲಿಯೂ  ವಿಶೇಷವಾದ ಆಸಕ್ತಿ ಇರುವುದರಿಂದ ಸಂಗೀತದ ಜೊತೆಗೆ ದೇವಸ್ಥಾನದ ಮೂಲಕ ವೇದಾಂತದ ಉಪನ್ಯಾಸಗಳನ್ನೂ ಏರ್ಪಾಟು ಮಾಡುವ ಜವಾಬ್ದಾರಿ ಹೆತ್ತಿದ್ದಾರೆ. ಇವರ ಎರಡು ಕಣ್ಣುಗಳೋ ಎಂಬಂತೆ ಇಬ್ಬರು ಗಂಡುಮಕ್ಕಳೂ (ಚಿ|| ಪ್ರಕಾಶ್ ಮತ್ತು ಚಿ|| ಗೋಪಿನಾಥ್) ಹಾಗೂ ಮನೆಯವರೆಲ್ಲರೂ ಅವರ ಕಾರ್ಯದಲ್ಲಿ ಉತ್ಸಾಹ ತುಂಬುತ್ತಿರುತ್ತಾರೆ.
     ಇವರ ಧರ್ಮಪತ್ನಿ ಶ್ರೀಮತಿ ಅನಸೂಯಾರವರು ಹೆಸರಿಗೆ ಅನ್ವರ್ಥರಾಗಿದ್ದು ೧೯೩೩ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶ್ರೀ ವೆಂಕಟಾಚಲಯ್ಯ ಹಾಗೂ ಶ್ರೀಮತಿ ಮೀನಾಕ್ಷಮ್ಮನವರ ಚತುರ್ಥಪುತ್ರಿಯಾಗಿ ಜನ್ಮ ತಾಳಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬನಶಂಕರಿ ಎರಡನೇಹಂತದ ಮಹಿಳಾಮಂಡಳಿಯ ಸಂಸ್ಥಾಪಕರಲ್ಲೊಬ್ಬರಾಗಿ ಮಹಿಳೆಯರ ಉನ್ನತಿಗಾಗಿ ದುಡಿದರು. ಮಂಡಳಿಗೆ ಸಾರ್ವಜನಿಕರ ಸಹಕಾರದಿಂದ ಒಂದು ನಿವೇಶನ ದೊರಕಲು ಸಾಹಸ ಮಾಡಿ ಯಶಸ್ವಿಯಾದರು. ಬಹಳಕಾಲ ಮಂಡಳಿಯ ಖಜಾಂಚಿಯಾಗಿ ಕಟ್ಟಡ ಕಟ್ಟಿಸಿ ಹೆಲಿಗೆ, ಸಂಗೀತ ಮೊದಲಾದವುಗಳನ್ನು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಮಂಡಳಿಯ ಮೂಲಕ ಸಹಾಯ ಮಾಡಿದರು, ಹೀಗೆ ಸಮಾಜ ಸೇವಾಕರ್ತೆಯಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಜೀವನ ಪರ್ಯಂತ ದುಡಿದು  ೨೮-೨-೨೦೦೬ ರಂದು ಕೀರ್ತಿಶೇಷರಾದರು.
     ಈ ದಂಪತಿಗಳು ತಮ್ಮ ಹಿರಿಯರ ಆಧ್ಯಾತ್ಮಿಕ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದರು. ಶ್ರೀ ಕೃಷ್ಣಮೂರ್ತಿಯವರು ತಂದೆಯಂತೆಯೇ ಇಳಿವಯಸ್ಸಿನಲ್ಲಿ ಅವರು ಮಾಡುತ್ತಿದ್ದ ಪ್ರಾರ್ಥನೆಯನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಆ ಪ್ರಾರ್ಥನೆಯ ಸಾರಾಂಶವನ್ನು ಹೀಗೆ ಸಂಗ್ರಹಿಸಲಾಗಿದೆ:
     "ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆಮಾಡು, ಪ್ರತಿ ವಿಷಯದಲ್ಲೂ ತಲೆಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳುವುದೂ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಯೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು, ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳುತ್ತೇನೆ. ಅನೇಕವೇಳೆ ನನ್ನ ಅಭಿಪ್ರಾಯಗಳೂ ತಪ್ಪಾಗಬಹುದೆಂಬ ಅರಿವೂ ನನಗಾಗಲಿ, ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ, ಆದರೆ ಇತರರನ್ನು ವತ್ತಾಯ ಮಾಡುವುದಿಲ್ಲ, ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ಇತರರಿಗಿಂತ  ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟುದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ".   
      ಈ ಮೇಲಿನಂತೆ ನಡೆಯುತ್ತಿದ್ದ ತಂದೆಯಂತೆಯೇ ಇವರೂ ನಡೆದುಕೊಳ್ಳುತ್ತಿದ್ದು, ಈ ಮಾತುಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ. ಇದರಿಂದ ಎಲ್ಲರಿಗೂ ಸಂತೋಷವಾದರೆ ಅದೇ ಒಂದು ಪೂಜೆ.    ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಂ ಎಂದು ಈಗಲೂ ಹೇಳುತ್ತಿರುತ್ತಾರೆ. ಇವರ ಸ್ಪೂರ್ತಿದಾತರೆಂದರೆ ತೀರ್ಥರೂಪುರವರು ಮತ್ತು ಸ್ವಾಮಿ ಚಿನ್ಮಯಾನಂದರು. ಇವರಿಗೆ ಒಬ್ಬ ಮೊಮ್ಮಗ ಮತ್ತು ಒಬ್ಬ ಮೊಮ್ಮಗಳು ಇದ್ದು ಅವರೊಡನೆ ಯಾವಾಗಲೂ ಸಂತೋಷವಾಗಿ ಕಾಲಕಳೆಯುತ್ತಾ ಪದ್ಮಪತ್ರ  ಮಿವಾಂಭಸಾ ಎಂಬಂತೆ ನಿರ್ಲಿಪ್ತತೆಯ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮಕ್ಕಳೂ ಹಾಗೂ ಸೊಸೆಯರೂ ಕೂಡ ಇವರ ಮನಸ್ಸಿಗೆ ಯಾವ ವಿಧವಾದ ನೋವೂ ಉಂಟಾಗದಂತೆ ನಡೆದುಕೊಳ್ಳುತ್ತಿರುವುದು ಈಗಿನ ಕಾಲಕ್ಕೆ ವಿಶೇಷವೇ ಸರಿ.
     ಇವರ ದಾಂಪತ್ಯ ಜೀವನವು ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ನಮ್ಮನ್ನು ಆಶೀರ್ವದಿಸಲು ಪ್ರಾರ್ಥಿಸುತ್ತಾ ಅವರ ಚರಣಕಮಲಗಳಿಗೆ ಈ ಚಿಕ್ಕ ಲೇಖನವನ್ನು ಅರ್ಪಿಸುತ್ತೇನೆ. 
             
         -  ಡಾ|| ಕೆಳದಿ ಕೃಷ್ಣಜೋಯ್ಸ್
 * * * * *
('ಕವಿಕಿರಣ'ದ ಜೂನ್, 2009ರ ಸಂಚಿಕೆಯಿಂದ)