----------------------------------------------------------
ಶ್ರೀ ಸಾ.ಕ. ಕೃಷ್ಣಮೂರ್ತಿಯವರು ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ ಹಿರಿಯರು. ಸಾತ್ವಿಕ ಜೀವನ ನಡೆಸುತ್ತಿರುವ ಈ ಹಿರಿಯರು ಕವಿ ಕುಟುಂಬಗಳ ಒಳ್ಳೆಯ ಕಾರ್ಯಗಳಿಗೆ ಪ್ರೇರಕ ಮತ್ತು ಮಾರ್ಗದರ್ಶಕರಾಗಿದ್ದಾರೆ. ೧೧-೦೩-೦೯ರಂದು ೮೨ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಇವರ ಪರಿಚಯ ಲೇಖನ ಬರೆದಿರುವರು ವಿದ್ವಾನ್ ಡಾ. ಕೆ. ಕೃಷ್ಣಜೋಯಿಸ್, ಎಂ.ಎ., ಬಿ.ಎಡ್.ರವರು ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಇವರು ಉತ್ತಮ ಬರಹಗಾರರು, ವಾಗ್ಮಿಗಳು. ಇವರ ತಾಯಿಯ ತಮ್ಮನವರೇ ಶ್ರೀ ಕೃಷ್ಣಮೂರ್ತಿಯವರು.
ಶ್ರೀ ಕೃಷ್ಣಮೂರ್ತಿಯವರ ವಿಳಾಸ: ಶಶಿಕಿರಣ, ನಂ. ೧೦೦೧, ೧೫ನೆಯ ಅಡ್ಡರಸ್ತೆ, ಬನಶಂಕರಿ- ೨ನೆಯ ಹಂತ, ಬೆಂಗಳೂರು -೫೬೦೦೭೧. ದೂ. ೦೮೦- ೨೬೭೧೦೨೦೫
ಲೇಖಕರ ವಿಳಾಸ: ಡಾ. ಕೆ.ಕೃಷ್ಣಾಜೋಯಿಸ್, ನಂ. ೧೨೨೦, ಶ್ರೀವತ್ಸ, ೧೨ನೆಯ ಅಡ್ಡರಸ್ತೆ, ಗಿರಿನಗರ- ೨ನೆಯ ಹಂತ, ಬೆಂಗಳೂರು- ೫೬೦೦೮೫. (ದೂ. ೦೮೦-೨೬೪೨೧೦೭೪). -ಸಂ.
------------------------------------------------------------
ಕೆಳದಿ ಸಂಸ್ಥಾನದಲ್ಲಿ ಪ್ರಸಿದ್ಧವಾದವುಗಳು ಜೋಯಿಸರ ಮತ್ತು ಕವಿ ಮನೆತನಗಳು. ಜೋಯಿಸರ ಮನೆತನ ಕೆಳದಿನಾಯಕರ ರಾಜ್ಯ ಕಟ್ಟಲು ಸಹಾಯಕವಾಗಿದ್ದರೆ ಕವಿ ಮನೆತನ ಕಲೆ, ಸಾಹಿತ್ಯ, ಸಂಗೀತ, ಕವಿತ್ವರಚನೆ ಮೊದಲಾದ ಕೆಳದಿ ಸಂಸ್ಥಾನದ ಸಂಸ್ಕೃತಿಯನ್ನು ಬೆಳಸುವುದಾಗಿದೆ. ಇದಕ ಕೆಳದಿ ನೃಪವಿಜಯ ವೆಂಬ ಗ್ರಂಥವನ್ನು ರಚಿಸಿದ ಲಿಂಗಣ್ಣ ಕವಿಯೇ ಮೂಲ. ಈ ಮನೆತನದಲ್ಲಿ ಕವಿ ರಾಮಣ್ಣ, ವೆಂಕಣ್ಣ ಹಾಗೂ ಲಿಂಗಣ್ಣ ಇವರುಗಳು ಪ್ರಸಿದ್ಧರಾದವರು. ಯದ್ಯಪಿ ಇವರುಗಳು ಸಂಸ್ಥಾನದ ಪ್ರಸಿದ್ಧ ಸ್ಥಳವಾದ ಸಾಗರದವರಾಗಿದ್ದರೂ (ಕೆಳದಿ ನೃಪವಿಜಯದಲ್ಲಿ ಸಾಗರವು ಸದಾಶಿವಸಾಗರವೆಂದು ಉಲ್ಲೇಖಿಸಲಾಗಿದೆ) ಕಾಲಕ್ರಮೇಣ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಯಿಂದಾಗಿ ಒಬ್ಬೊಬ್ಬರು ಒಂದೊಂದು ಕಡೆ ನೆಲೆಸಿದರು. ಶ್ರೀ ರಾಮಣ್ಣನವರು ಹಾಗೂ ಮಕ್ಕಳು ಕೆಳದಿಯಲ್ಲಿಯೂ, ಶ್ರೀ ವೆಂಕಣ್ಣಯ್ಯನವರ ಮಕ್ಕಳು ಶಿವಮೊಗ್ಗ, ಕೊಪ್ಪಗಳಲ್ಲಿಯೂ, ಶ್ರೀ ಲಿಂಗಣ್ಣನವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದ್ದರಿಂದಲೂ, ಕಾಲಕ್ರಮೇಣ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅವರ ಮಕ್ಕಳೂ ಸಹ ಬೆಂಗಳೂರಿನಲ್ಲಿಯೇ ನೆಲೆಸಿದರು. ಶ್ರೀ ಲಿಂಗಣ್ಣಯ್ಯವರು ಚಿತ್ರರಾಮಾಯಣ, ಚಿತ್ರಭಾಗವತ, ಭಗವದ್ಗೀತೆ ಲಲಿತಾತ್ರಿಶತಿ, ಮಾರುತೀಸ್ತುತಿ ಇವುಗಳನ್ನು ಚಿತ್ರಪಟದಲ್ಲಿ ದೇವನಾಗರೀ ಲಿಪಿಯಲ್ಲಿ ಕಲಾತ್ಮಕವಾಗಿ ರಚಿಸಿದ್ದಾರೆ. ಈಗಲೂ ಇವುಗಳನ್ನು ನೋಡಬಹುದು. ಅಲ್ಲದೆ ಇನ್ನೂ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರು ವೀಣೆ ಹಾಗೂ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
ಶ್ರೀ ಲಿಂಗಣ್ಣಯ್ಯನವರ ಸಂಸಾರ ದೊಡ್ಡದು. ಅವರಿಗೆ ಶ್ರೀಯತರಾದ ಎಸ್.ಕೆ. ನಾರಾಯಣರಾವ್, ಎಸ್.ಕೆ. ಕೃಷ್ಣಮೂರ್ತಿ, ಎಸ್.ಕೆ. ರಾಮರಾವ್ ಎಂಬ ಮೂವರು ಗಂಡು ಮಕ್ಕಳು ಹಾಗೂ ಶ್ರೀಮತಿಯರಾದ ಮುತ್ತಮ್ಮ, ಮೂಕಮ್ಮ, ಜಾನಕಮ್ಮ, ಸರಸ್ವತಮ್ಮ, ಸುಬ್ಬಲಕ್ಷ್ಮಮ್ಮ, ನಾಗರತ್ನಮ್ಮ, ಪದ್ಮಾವತಮ್ಮ ಮತ್ತು ಗಿರಿಜಮ್ಮ ಎಂಬ ಎಂಟು ಜನ ಹೆಣ್ಣುಮಕ್ಕಳೂ ಇದ್ದರು. ಲಿಂಗಣ್ಣಯ್ಯನವರ ಅಕ್ಕ ಮತ್ತು ಮಗಳು ಕೆಳದಿ ಜೋಯಿಸರ ಸಂಬಂಧ ಮಾಡಿದ್ದು, ಕವಿ ಹಾಗೂ ಜೋಯಿಸರ ಸಂಬಂಧ ಹಿಂದಿನಿಂದಲೂ ಮುಂದುವರೆಯುತ್ತಿದೆ. ಗಂಡುಮಕ್ಕಳಲ್ಲಿ ಮೊದಲಿನ ಇಬ್ಬರೂ ತಂದೆಯಂತೆ ವೀಣಾಭ್ಯಾಸಮಾಡಿ ಸಂಗೀತದಲ್ಲಿ ಪ್ರೌಢಿಮೆ ಪಡೆದಿದ್ದಾರೆ. ಮೂರನೆಯವರು ವೇದಾಂತಿಗಳು.
ಇವರ ಎರಡನೇಮಗನೇ ಸಾಗರದ ಕವಿ ಕೃಷ್ಣಮೂರ್ತಿ. ಇವರು ದಿನಾಂಕಃ ೧೧-೩-೧೯೨೮ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯಿಂದ ರಚಿಸಲ್ಪಟ್ಟ ಭೂಪಟಗಳು ಹಿಂದಿನ ಮೈಸೂರು ರಾಜ್ಯದ ಎಲ ಶಾಲೆಗೂ ಸರ್ಕಾರದ ವತಿಯಿಂದ ವಿತರಿಸಲ್ಪಡುತ್ತಿದ್ದು ಆ ವೃತ್ತಿಯಲ್ಲಿಯೇ ಮಗನು ಮುಂದುವರೆಯಬೇಕೆಂಬ ಆಸೆ ಅವರ ತಂದೆಯದಾಗಿತ್ತು. ಅಲ್ಲದೆ ತಂದೆಗೆ ಅಚ್ಚುಮೆಚ್ಚಿನ ಮಗನಾಗಿದ್ದರು. ಮನೆಯ ದೊಡ್ಡ ಸಂಸಾರ, ತಂದೆಯ ಆಸೆ ಇವುಗಳಿಂದಾಗಿ ಕೃಷ್ಣಮೂರ್ತಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ತಂದೆ ಸುಮಾರು ೬೩ ರ ವಯಸ್ಸಿನಲ್ಲಿ ಕಾಲವಾದರು. ಮನೆಯ ಜವಾಬರಿಯನ್ನು ಸ್ವಲ್ಪ ಮಟ್ಟಿಗಾದರೂ ನಿರ್ವಹಿಸಬೇಕೆಂದು ಬಿನ್ನಿಮಿಲ್ಲಿನಲ್ಲಿ ಕೆಲಸಕ್ಕೆ ಸೇರಿ, ಬೆರಳಚ್ಚುಗಾರರು, ಶೀಘ್ರಲಿಪಿಕಾರರು, ಸೆಕ್ರೆಟರಿ, ಮ್ಯಾನೇಜ್‌ಮೆಂಟ್ ಸ್ಟ್ಯಾಫ್, ಸ್ಟೋರ್ಸ್ ಆಫೀಸರ್, ಹೀಗೆ ನಾನಾ ಹುದ್ದೆಗಳಲ್ಲಿ ಕೆಲಸನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ನಿವೃತ್ತರಾಗಿದ್ದರೂ ಯುವಕರಂತೆ ಬನಶಂಕರಿಯ ದೇವಗಿರಿ ಶ್ರೀವೆಂಕಟೇಶ್ವರ ದೇವಾಲಯದ ಲೈಫ್‌ಟ್ರಸ್ಟಿಯಾಗಿದ್ದಾರೆ. ಅಲ್ಲದೆ ಇದೇ ದೇವಸ್ಥಾನದಲ್ಲಿ ಖಜಾಂಚಿಯಾಗಿಯೂ ಕೆಲಸನಿರ್ವಹಿಸಿದ್ದಾರೆ. ಚಿನ್ಮಯ ಮಿಷನ್ನಿನ ಬೋಡ್ ಸದಸ್ಯರಾಗಿಯೂ, ಸಂಗೀತದಲ್ಲಿ ಆಸಕ್ತಿ ಇರುವುದರಿಂದಲೂ, ವೀಣೆಯ ಅಭಸವಾಗಿರುವುದರಿಂದಲೂ ದೇವಗಿರಿ ಶ್ರೀವೆಂಕಟೇಶ್ವರ ದೇವಸ್ಥಾನದ ಸಂಗೀತ ಕಮಿಟಿಯಲ್ಲಿದ್ದು ಸುತ್ತಮುತ್ತಲ ಜನರಿಗೆ ಇಂಪಾದ ಸಂಗೀತವನ್ನು ದೇವಸ್ಥಾನದ ಮೂಲಕ ಒದಗಿಸುತ್ತಿರುತ್ತಾರೆ.
ಅಲ್ಲದೆ ಇವರಿಗೆ ಆಧ್ಯಾತ್ಮಿಕದಲ್ಲಿಯೂ ವಿಶೇಷವಾದ ಆಸಕ್ತಿ ಇರುವುದರಿಂದ ಸಂಗೀತದ ಜೊತೆಗೆ ದೇವಸ್ಥಾನದ ಮೂಲಕ ವೇದಾಂತದ ಉಪನ್ಯಾಸಗಳನ್ನೂ ಏರ್ಪಾಟು ಮಾಡುವ ಜವಾಬ್ದಾರಿ ಹೆತ್ತಿದ್ದಾರೆ. ಇವರ ಎರಡು ಕಣ್ಣುಗಳೋ ಎಂಬಂತೆ ಇಬ್ಬರು ಗಂಡುಮಕ್ಕಳೂ (ಚಿ|| ಪ್ರಕಾಶ್ ಮತ್ತು ಚಿ|| ಗೋಪಿನಾಥ್) ಹಾಗೂ ಮನೆಯವರೆಲ್ಲರೂ ಅವರ ಕಾರ್ಯದಲ್ಲಿ ಉತ್ಸಾಹ ತುಂಬುತ್ತಿರುತ್ತಾರೆ.
ಇವರ ಧರ್ಮಪತ್ನಿ ಶ್ರೀಮತಿ ಅನಸೂಯಾರವರು ಹೆಸರಿಗೆ ಅನ್ವರ್ಥರಾಗಿದ್ದು ೧೯೩೩ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶ್ರೀ ವೆಂಕಟಾಚಲಯ್ಯ ಹಾಗೂ ಶ್ರೀಮತಿ ಮೀನಾಕ್ಷಮ್ಮನವರ ಚತುರ್ಥಪುತ್ರಿಯಾಗಿ ಜನ್ಮ ತಾಳಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬನಶಂಕರಿ ಎರಡನೇಹಂತದ ಮಹಿಳಾಮಂಡಳಿಯ ಸಂಸ್ಥಾಪಕರಲ್ಲೊಬ್ಬರಾಗಿ ಮಹಿಳೆಯರ ಉನ್ನತಿಗಾಗಿ ದುಡಿದರು. ಮಂಡಳಿಗೆ ಸಾರ್ವಜನಿಕರ ಸಹಕಾರದಿಂದ ಒಂದು ನಿವೇಶನ ದೊರಕಲು ಸಾಹಸ ಮಾಡಿ ಯಶಸ್ವಿಯಾದರು. ಬಹಳಕಾಲ ಮಂಡಳಿಯ ಖಜಾಂಚಿಯಾಗಿ ಕಟ್ಟಡ ಕಟ್ಟಿಸಿ ಹೆಲಿಗೆ, ಸಂಗೀತ ಮೊದಲಾದವುಗಳನ್ನು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಮಂಡಳಿಯ ಮೂಲಕ ಸಹಾಯ ಮಾಡಿದರು, ಹೀಗೆ ಸಮಾಜ ಸೇವಾಕರ್ತೆಯಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಜೀವನ ಪರ್ಯಂತ ದುಡಿದು ೨೮-೨-೨೦೦೬ ರಂದು ಕೀರ್ತಿಶೇಷರಾದರು.
ಈ ದಂಪತಿಗಳು ತಮ್ಮ ಹಿರಿಯರ ಆಧ್ಯಾತ್ಮಿಕ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದರು. ಶ್ರೀ ಕೃಷ್ಣಮೂರ್ತಿಯವರು ತಂದೆಯಂತೆಯೇ ಇಳಿವಯಸ್ಸಿನಲ್ಲಿ ಅವರು ಮಾಡುತ್ತಿದ್ದ ಪ್ರಾರ್ಥನೆಯನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಆ ಪ್ರಾರ್ಥನೆಯ ಸಾರಾಂಶವನ್ನು ಹೀಗೆ ಸಂಗ್ರಹಿಸಲಾಗಿದೆ:
"ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆಮಾಡು, ಪ್ರತಿ ವಿಷಯದಲ್ಲೂ ತಲೆಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳುವುದೂ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಯೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು, ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳುತ್ತೇನೆ. ಅನೇಕವೇಳೆ ನನ್ನ ಅಭಿಪ್ರಾಯಗಳೂ ತಪ್ಪಾಗಬಹುದೆಂಬ ಅರಿವೂ ನನಗಾಗಲಿ, ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ, ಆದರೆ ಇತರರನ್ನು ವತ್ತಾಯ ಮಾಡುವುದಿಲ್ಲ, ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ಇತರರಿಗಿಂತ ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟುದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ".
ಈ ಮೇಲಿನಂತೆ ನಡೆಯುತ್ತಿದ್ದ ತಂದೆಯಂತೆಯೇ ಇವರೂ ನಡೆದುಕೊಳ್ಳುತ್ತಿದ್ದು, ಈ ಮಾತುಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ. ಇದರಿಂದ ಎಲ್ಲರಿಗೂ ಸಂತೋಷವಾದರೆ ಅದೇ ಒಂದು ಪೂಜೆ. ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಂ ಎಂದು ಈಗಲೂ ಹೇಳುತ್ತಿರುತ್ತಾರೆ. ಇವರ ಸ್ಪೂರ್ತಿದಾತರೆಂದರೆ ತೀರ್ಥರೂಪುರವರು ಮತ್ತು ಸ್ವಾಮಿ ಚಿನ್ಮಯಾನಂದರು. ಇವರಿಗೆ ಒಬ್ಬ ಮೊಮ್ಮಗ ಮತ್ತು ಒಬ್ಬ ಮೊಮ್ಮಗಳು ಇದ್ದು ಅವರೊಡನೆ ಯಾವಾಗಲೂ ಸಂತೋಷವಾಗಿ ಕಾಲಕಳೆಯುತ್ತಾ ಪದ್ಮಪತ್ರ ಮಿವಾಂಭಸಾ ಎಂಬಂತೆ ನಿರ್ಲಿಪ್ತತೆಯ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮಕ್ಕಳೂ ಹಾಗೂ ಸೊಸೆಯರೂ ಕೂಡ ಇವರ ಮನಸ್ಸಿಗೆ ಯಾವ ವಿಧವಾದ ನೋವೂ ಉಂಟಾಗದಂತೆ ನಡೆದುಕೊಳ್ಳುತ್ತಿರುವುದು ಈಗಿನ ಕಾಲಕ್ಕೆ ವಿಶೇಷವೇ ಸರಿ.
ಇವರ ದಾಂಪತ್ಯ ಜೀವನವು ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ನಮ್ಮನ್ನು ಆಶೀರ್ವದಿಸಲು ಪ್ರಾರ್ಥಿಸುತ್ತಾ ಅವರ ಚರಣಕಮಲಗಳಿಗೆ ಈ ಚಿಕ್ಕ ಲೇಖನವನ್ನು ಅರ್ಪಿಸುತ್ತೇನೆ.
- ಡಾ|| ಕೆಳದಿ ಕೃಷ್ಣಜೋಯ್ಸ್
* * * * *
('ಕವಿಕಿರಣ'ದ ಜೂನ್, 2009ರ ಸಂಚಿಕೆಯಿಂದ)
No comments:
Post a Comment