ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Wednesday, August 17, 2011

'ಕೆಳದಿನೃಪ ವಿಜಯ' ಕೃತಿಯ ಇಂಗ್ಲಿಷ್ ಗದ್ಯಾನುವಾದ - ಒಂದು ಅಮೂಲ್ಯ ಕೊಡುಗೆ

     ೧೫ನೆಯ ಶತಮಾನದಲ್ಲಿ ಉದಯಿಸಿ ಸುಮಾರು ೨೫೦ ವರ್ಷಗಳ ಕಾಲ ಬಾಳಿದ ಬಲಿಷ್ಠ ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ಪ್ರಧಾನ ರಾಜಸತ್ತೆಯಾಗಿದ್ದು, ವೈಭವದ ಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ಭೌಗೋಲಿಕ ವಿಸ್ತಾರ ಹೊಂದಿದ್ದಾಗಿತ್ತು. ಹಿಂದೂ ಸಂಸ್ಕೃತಿ ಮತ್ತು ತತ್ವಗಳ ರಕ್ಷಣೆಯಲ್ಲಿ ಈ ಸಂಸ್ಥಾನ ಪ್ರಮುಖ ಪಾತ್ರ ವಹಿಸಿತ್ತು. ಈ ರಾಜಸತ್ತೆಯಲ್ಲಿ ಆಳಿದ ಅರಸರುಗಳ ಚರಿತ್ರೆಯನ್ನು ವಿವರಿಸುವ ಕೃತಿಯೇ 'ಕೆಳದಿನೃಪ ವಿಜಯ'. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಕವಿ ಲಿಂಗಣ್ಣನ ಈ ಕೃತಿ ಕೆಳದಿಯರಸರ ಜೀವನ ಚರಿತ್ರೆಯನ್ನು ಯಥಾವತ್ತಾಗಿ ತಿಳಿಸುವ ಚಂಪೂಗ್ರಂಥವಾಗಿದ್ದು ಐತಿಹಾಸಿಕ ಮಹತ್ವವುಳ್ಳದ್ದಾಗಿದೆ. ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಇತಿಹಾಸಾಸಕ್ತರಿಗೆ ಮಹತ್ವದ ಆಕರ ಗ್ರಂಥವಾಗಿರುವ ಇದನ್ನು ರಚಿಸಿದ ೧೭ನೆಯ ಶತಮಾನದ ಕವಿಲಿಂಗಣ್ಣನಿಂದಾಗಿಯೇ ಇವನ ನಂತರದವರು ಕವಿಮನೆತನದವರೆಂಬ ಹೆಸರು ಪಡೆದರು ಎಂಬುದು ಗಮನಾರ್ಹ.  ೧೨ ಆಶ್ವಾಸಗಳುಳ್ಳ ಈ ಕೃತಿ ಕೆಳದಿ ರಾಜರುಗಳ ಪೂರ್ಣ ಪರಿಚಯ ಮಾಡಿಕೊಡುವಲ್ಲಿ ಕವಿಯು ಯಶಸ್ವಿಯಾಗಿದ್ದು, ಜೊತೆಜೊತೆಗೆ ಚಿತ್ರದುರ್ಗದ ನಾಯಕರು, ಬೇಲೂರ ನಾಯಕರು, ವಿಜಯನಗರದ ಚಕ್ರವರ್ತಿಗಳು, ಷಾಹಿ ರಾಜರು, ಮೈಸೂರು ಒಡೆಯರು, ತರಿಕೆರೆಯ ನಾಯಕರು, ದೆಹಲಿಯ ಬಾದಷಹರು, ಅಹಮದ್ ನಗರದ ನಿಜಾಂಷಹನೇ ಮುಂತಾದವರು, ಬಿಜಾಪುರದವರು, ಸೋದೆ, ಗೇರುಸೊಪ್ಪ, ಬಿಳಗಿ ಇತ್ಯಾದಿ ಅರಸರ ಚರಿತ್ರೆಗಳು, ಶ್ರೀ ಶೃಂಗೇರಿ ಮಠದ ಪರಂಪರೆಯ ಗುರುಗಳು ಮುಂತಾದ ಚರಿತ್ರೆಗಳನ್ನು ಪ್ರಾಸಂಗಿಕವಾಗಿ ವಿವರಿಸಿದ್ದಾನೆ. ಕೃತಿಯ ೭ನೇ ಆಶ್ವಾಸದ ೧೫ನೆಯ ಪದ್ಯವನ್ನು ಸಾಂಕೇತಿಕವಾಗಿ  ಇಲ್ಲಿ ಉದಾಹರಿಸುವುದು ಉಚಿತವಾದೀತು: 
  ಚಂ||ಮಾ|| ಕಡುಗಿ ದುರಾಸೆಯಿಂ ಪ್ರಜೆಗಳಂ ನೆರೆನೋಯಿಸದಾ ನೃಪಾರ್ಥಮಂ
ಬಿಡದೆ ತದೀಯ ಸೌಮ್ಯಸುಪದಾರ್ಥಗಳಂ ಲವಮಾತ್ರಮಾದೊಡಂ
ಪೊಡವಿಯನೈದೆ ಪಾಳ್ಗೆಡಲೀಯದೆ ಬಲ್ವಿಡಿದಂಕೆಝಂಕೆಯಿಂ
ನಡೆಯಿಪನಿಂತು ನಾಡಿನಧಿಕಾರವನೇಳ್ಗೆಗೆ ತಂದನುರ್ವಿಯಂ
     ಈ ಪದ್ಯವು 'ದುರಾಸೆಯಿಂದ ಪ್ರಜೆಗಳನ್ನು ನೋಯಿಸದೆ, ಹಾಗೆಯೇ ಬರಬೇಕಾದ ರಾಜಸ್ವವನ್ನೂ ಬಿಟ್ಟುಕೊಡದೆ, ಭೂಮಿಯನ್ನು ಪಾಳುಗೆಡವಲು ಬಿಡದೆ, ಕಟ್ಟುಪಾಡುಗಳನ್ನು ವಿಧಿಸಿ, ಸೂಕ್ತ ಕಟ್ಟಾಜ್ಞೆಗಳನ್ನು ಮಾಡುತ್ತಾ ರಾಜ್ಯವನ್ನು ಅಭಿವೃದ್ಧಿಗೊಳಿಸಿದ' ಶಿಸ್ತಿನ ಶಿವಪ್ಪನಾಯಕನೆಂದೇ ಹೆಸರಾದ ಶಿವಪ್ಪನಾಯಕನ ಆಳ್ವಿಕೆಯ ಕಾಲದ ಸ್ಥಿತಿಯ ಪರಿಚಯ ಮಾಡಿಸುತ್ತದೆ.
ಕೆಳದಿ ಗುಂಡಾಜೋಯಿಸ್
ಕವಿಸುರೇಶ್
     ೧೭ನೆಯ ಶತಮಾನದಲ್ಲಿ ಪ್ರಚಲಿತವಿದ್ದ ಕಾವ್ಯನಮೂನೆಯಲ್ಲಿ ರಚಿತವಾಗಿರುವ ಈ ಕೃತಿ ಜನಸಾಮಾನ್ಯರಿಗೂ ತಲುಪಬೇಕು ಮತ್ತು ಇತಿಹಾಸಾಸಕ್ತರಿಗೂ ಉಪಯೋಗವಾಗಬೇಕು ಎಂಬ ದೃಷ್ಟಿಯಿಂದ ಕೆಳದಿಯ ಶ್ರೀ ಗುಂಡಾಜೋಯಿಸರು ಕನ್ನಡ ಸರಳ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಸಲ ೧೯೭೬ರಲ್ಲಿ ಮತ್ತು ನಂತರ ೧೯೯೯ರಲ್ಲಿ ಎರಡು ಸಲ ಮುದ್ರಿಸಿ ಪ್ರಕಟಿಸಿದೆ. ಶ್ರೀ ಗುಂಡಾಜೋಯಿಸರು ಕೆಳದಿಯ ರಾಜಪುರೋಹಿತರ ವಂಶಸ್ಥರಾಗಿದ್ದು, ಕೆಳದಿಯ ಇತಿಹಾಸ ಗುರುತಿಸುವ ಮತ್ತು ಪ್ರಾಮುಖ್ಯತೆಯನ್ನು ಅರಿವಿಗೆ ತರುವ ಮಹತ್ವದ ಕೆಳದಿ ಮ್ಯೂಸಿಯಮ್ ಸ್ಥಾಪಕರಾಗಿದ್ದು, ೧೯೬೦ರಲ್ಲಿ ಸ್ಥಾಪಿಸಿದ್ದ ಈ ಮ್ಯೂಸಿಯಮ್ ಅನ್ನು ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮುಕ್ತವಾಗಿ ಹಸ್ತಾಂತರಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ. ಇತ್ತೀಚೆಗೆ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಇವರು ಇಳಿವಯಸ್ಸಿನಲ್ಲೂ ಚೈತನ್ಯದ ಚಿಲುಮೆಯಾಗಿದ್ದಾರೆ. ಈ ಗದ್ಯಾನುವಾದದಿಂದ ಕವಿಲಿಂಗಣ್ಣನ ಕೃತಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಮಾಡಿದ ಕೀರ್ತಿ ಗುಂಡಾಜೋಯಿಸರಿಗೆ ತಲುಪುತ್ತದೆ. 


      ಈ ಕೃತಿ ಕನ್ನಡಿಗರಿಗೆ ಮಾತ್ರವಲ್ಲದೆ ಕನ್ನಡೇತರರಿಗೂ ಪರಿಚಯವಾಗಬೇಕೆಂಬ ಉದ್ದೇಶದಿಂದ ಸಹೋದರ ಕವಿಸುರೇಶ್ ಕೃತಿಯ ಇಂಗ್ಲಿಷ್ ಗದ್ಯಾನುವಾದವನ್ನು ಮಾಡಿ ಸಾರಸ್ವತಲೋಕಕ್ಕೆ ಒಂದು ಅಮೂಲ್ಯ ಕೊಡುಗೆ ನೀಡಿದ್ದಾರೆ. ಕರ್ನಾಟಕ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದು ಕೆಲವು ವರ್ಷಗಳ ಹಿಂದೆ ಸ್ವ ಇಚ್ಛಾ ನಿವೃತ್ತಿ ಹೊಂದಿ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ಬರವಣಿಗೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದು, ಕೆಳದಿ ಕವಿಮನೆತನದವರನ್ನು ಪರಿಚಯಿಸುವ 'ಹಳೇ ಬೇರು - ಹೊಸ ಚಿಗುರು', ಕವಿಮನೆತನದ ಅದ್ಭುತ ಪ್ರತಿಭೆ ಎಸ್.ಕೆ. ಲಿಂಗಣ್ಣಯ್ಯ (ಲಿಂಗಣ್ಣ ಕವಿಯ ವಂಶಸ್ಥರು)ನವರ ಜೀವನ ಚರಿತ್ರೆ (ಇಂಗ್ಲಿಷ್‌ನಲ್ಲಿ) Karmayogi – Kalavallabha S.K. LINGANNAIYA’, ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳ ಸಂಗ್ರಹ 'ಉತ್ಕೃಷ್ಟದೆಡೆಗೆ', ಡಾ. ವೆಂಕಟೇಶ ಜೋಯಿಸ್ ರಚಿಸಿದ 'ಮರೆಯಲಾಗದ ಕೆಳದಿ ಸಾಮ್ರಾಜ್ಯ' ಪುಸ್ತಕದ ಇಂಗ್ಲಿಷ್ ಅನುವಾದUnforgettable Keladi Empire’  ಮತ್ತು  ಕೂಡ್ಲಿ ಜಗನ್ನಾಥ ಶಾಸ್ತ್ರಿಯವರ ಕೃತಿ 'ಕೂಡ್ಲಿ ಕ್ಷೇತ್ರದ ಪರಿಚಯ'ವನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಕವಿಲಿಂಗಣ್ಣನ ನಂತರದ ಕೆಳದಿ ಕವಿಮನೆತನದ ೯ನೆಯ ಪೀಳಿಗೆಗೆ ಸೇರಿದ ಕವಿಸುರೇಶ್ ಮಾಡಿರುವ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ ಚೆನ್ನಾಗಿದೆ, ಓದಿಸಿಕೊಂಡು ಹೋಗುತ್ತದೆ. ಶ್ರೀ ಗುಂಡಾಜೋಯಿಸರು ಪ್ರತಿ ಪದ್ಯದ ಕನ್ನಡ ಗದ್ಯಾನುವಾದ ಮಾಡಿದ್ದರೆ ಈ ಇಂಗ್ಲಿಷ್ ಗದ್ಯಾನುವಾದದಲ್ಲಿ ಅಧ್ಯಾಯವಾರು ಮಾಡಲಾಗಿದೆ. ಪದ್ಯವಾರು ಅನುವಾದ ಮಾಡಿದರೆ ತುಂಡು ತುಂಡಾಗುವುದರಿಂದ ಕೃತಿಯನ್ನು ಅರಿಯುವಲ್ಲಿ ತೊಡಕಾಗಬಹುದೆಂದು ಹೀಗೆ ಮಾಡಲಾಗಿದೆ. ಆದರೆ ಮೂಲಾರ್ಥಕ್ಕೆ ವ್ಯತ್ಯಯವಾಗದಂತೆ ನೋಡಿಕೊಂಡು ಅನುವಾದಿಸಿರುವುದು ಲೇಖಕರ ಸಾಧನೆಯೇ ಸರಿ. ಕರಡು ರೂಪದಲ್ಲಿದ್ದಾಗ ಇದನ್ನು ನಾನು ಪೂರ್ಣವಾಗಿ ಓದಿ ಅಗತ್ಯದ ಕೆಲವು ಸೂಚನೆಗಳನ್ನು ನೀಡಿದ್ದ್ದು, ಅನುವಾದ ಸಮರ್ಪಕ ಮತ್ತು ಸಮಂಜಸವೆಂದು ಮನಗಂಡಿದ್ದೇನೆ. ಕರ್ನಾಟಕದ ಹೆಮ್ಮೆಯ ಕೆಳದಿ ಸಂಸ್ಥಾನದ ಕುರಿತ ವಿವರ ಕನ್ನಡೇತರರಿಗೂ ತಲುಪುವಂತಾಗಿದ್ದು ಸಂತಸದ ಸಂಗತಿಯಾಗಿದೆ. ಕೆಲವು ವರ್ಷಗಳ ಹಿಂದೆ ಈ ಕೃತಿಯ ಹಿಂದಿ ಗದ್ಯಾವತರಣಿಕೆಯನ್ನು  ಡಾ. ಉಮಾ ಹೆಗ್ಡೆಯವರು ಮಾಡಿದ್ದು, ಈಗ ಇಂಗ್ಲಿಷ್ ಗದ್ಯಾವತರಣಿಕೆ ಸಹ ಹೊರಬಂದಿರುವುದು ಕನ್ನಡ ಸಾರಸ್ವತಲೋಕದ ವ್ಯಾಪ್ತಿ ವಿಸ್ತಾರವಾದಂತಾಗಿದೆ. ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಪ ನಿರ್ದೇಶಕರಾಗಿರುವ ಡಾ. ರಾಜಾರಾಮ ಹೆಗ್ಡೆಯವರು ಮುನ್ನುಡಿ ಬರೆದಿದ್ದು ಅದರಲ್ಲಿ ಅಂತರರಾಷ್ಟ್ರೀಯ ವಿದ್ವಾಂಸರು, ಸಂಶೋಧಕರು ಮತ್ತು ವಿಶಾಲ ಓದುಗ ಸಮುದಾಯ ತಲುಪುವಲ್ಲಿ ಇದು ಉತ್ತಮ ಪ್ರಯತ್ನವೆಂದು ಶ್ಲಾಘಿಸಿದ್ದಾರೆ. ಮೂಲ ಕೃತಿಯಲ್ಲಿ ಇಲ್ಲದ ಹೊಸ ಚಿತ್ರಗಳು, ಕೆಳದಿ ಸಂಸ್ಥಾನದ ಭೂಪಟ, ಕವಿಲಿಂಗಣ್ಣನ ಕುರಿತು ಟಿಪ್ಪಣಿ, ಕೆಳದಿ ಕವಿಮನೆತನದ ಪೀಳಿಗೆಯ ವಿವರಗಳು, ಇತ್ಯಾದಿಗಳು ಕೃತಿಯ ಮೌಲ್ಯ ಹೆಚ್ಚಿಸಿವೆ. ಭಾರತ ಸರ್ಕಾರದ ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್, ಕೆಳದಿ ಹಸ್ತಪ್ರತಿಗಳ ಸಂಪನ್ಮೂಲ ಕೇಂದ್ರ, ಕೆಳದಿ ಇವರು ಪ್ರಕಾಶಕರಾಗಿ ಹೊರತಂದಿರುವ ೨೦೫ ಪುಟಗಳ ಈ ಪುಸ್ತಕದ ಬೆಲೆ ರೂ.೧೫೦/-. ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ ಕೆಳದಿ ಕವಿಮನೆತನದ ಸುರೇಶ್ ಅಭಿನಂದನಾರ್ಹರು. 
*******************

Tuesday, August 2, 2011

ಸಾರ್ಥಕ - ಪ್ರೇರಕ - ಅರ್ಥಪೂರ್ಣ

ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧುಬಳಗದವರ ಚತುರ್ಥ ಸಮಾವೇಶದ ವರದಿ
     ದಿನಾಂಕ ೨೭-೧೨-೨೦೦೯ರ ಮುಂಜಾನೆ ಬಿದ್ದ ಅಕಾಲಿಕ ತುಂತುರು ಮಳೆಯಿಂದ ನೆನೆದ ಭೂಮಿ ತಂಪಾಗಿತ್ತು. ಡಿಸೆಂಬರ್ ತಿಂಗಳಾದರೂ ಚಳಿಯ ಹೆಸರಿರಲಿಲ್ಲ. ತೀರ್ಥಹಳ್ಳಿಯ ದೀಕ್ಷಿತರ ಕಾಶಿ ಕಲಾಭವನ ಕೆಳದಿ ಕವಿಮನೆತನದವರು ಹಾಗೂ ಬಂಧು ಬಳಗದವರನ್ನು ಸ್ವಾಗತಿಸಲು ಸಜ್ಜಾಗಿತ್ತು. ಒಬ್ಬೊಬ್ಬರಾಗಿ ಹಾಗೂ ಗುಂಪಿನಲ್ಲಿ ಬಂದವರನ್ನು ದೀಕ್ಷಿತ ಸಹೋದರರು ಮತ್ತು ಕುಟುಂಬ ವರ್ಗದವರು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲರಿಗೂ ಉಪಾಹಾರವಾದ ನಂತರ ಬೆ.೧೦-೩೦ಕ್ಕೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಗೆ ಆಹ್ವಾನಿಸಿಲಾಗಿದ್ದ ಶ್ರೀ ಮತ್ತು ಶ್ರೀಮತಿ ಶೇಷಾದ್ರಿ ದೀಕ್ಷಿತ್, ಶ್ರೀ ಮತ್ತು ಶ್ರೀಮತಿ ಸುಬ್ರಹ್ಮಣ್ಯ ದೀಕ್ಷಿತ್, ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಶ್ರೀ ಕವಿ ನಾಗರಾಜಭಟ್ಟರು ವೇದಘೋಷಸಹಿತ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಗೊಳಿಸಿದರು.

     ಪ್ರಾರಂಭದಲ್ಲಿ ೧೪-೦೭-೦೯ರಂದು ನಿಧನರಾದ ಕವಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶಿವಮೊಗ್ಗದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು   ೧೪-೦೫-೦೯ರಂದು ನಿಧನರಾದ ಹಿರಿಯರಾದ ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ (ಕವಿ ಶ್ರೀಕಂಠಯ್ಯ ಮತ್ತು ಭಾಗೀರಥಮ್ಮನವರ ಪುತ್ರಿ)ರವರ ನಿಧನಕ್ಕೆ ಸಂತಾಪ ಮತ್ತು ಶ್ರದ್ಧಾಂಜಲಿ ಸೂಚಕವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
     ಕಾಶೀಬಾಯಿಯವರ ಸುಶ್ರಾವ್ಯ ಪ್ರಾರ್ಥನೆಯ ಬಳಿಕ ಕವಿ ಶ್ರೀಕಂಠರವರು ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಂಧವ್ಯಗಳ ಬೆಸುಗೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು ಎಲ್ಲಾ ಬಂಧು ಬಳಗದವರು ಪೂರ್ಣ ಸಹಕಾರ ನೀಡಬೇಕೆಂದು ಕೋರಿದರು. ಅನಾರೋಗ್ಯದ ಕಾರಣ ಸಮಾರಂಭಕ್ಕೆ ಬರಲಾಗದಿದ್ದ ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಸಂದೇಶವನ್ನು ಓದಿ ಹೇಳಲಾಯಿತು.


     ಶ್ರೀ ಕ.ವೆಂ. ನಾಗರಾಜ್‌ರವರು ಮಾತನಾಡುತ್ತಾ ಕೌಟುಂಬಿಕವಾಗಿ ಅಲ್ಲದೆ ಐತಿಹಾಸಿಕವಾಗಿ ಸಹ ಈ ಸಮಾವೇಶ ಮಹತ್ವದ್ದಾಗಿದೆ; ಎಷ್ಟೋ ಜನಕ್ಕೆ ಹೆಚ್ಚೆಂದರೆ ೩-೪ ತಲೆಮಾರುಗಳ ವಿವರ,  ಅದೂ ಅಪೂರ್ಣವಾಗಿ, ಗೊತ್ತಿರಬಹುದು. ಆದರೆ ೧೨ ತಲೆಮಾರುಗಳ ವಿವರ ಲಭ್ಯವಿರುವ ಕೆಳದಿ ಕವಿಮನೆತನ ವಿಶಿಷ್ಟವಾದುದು ಎಂದರು. ನಮ್ಮ ಪೂರ್ವಜರು ಸಾಮಾನ್ಯರಂತೆ ಜೀವಿಸಿದ್ದರೆ ಈ ವಿವರ ತಿಳಿಯುತ್ತಿರಲಿಲ್ಲ. ಕಲೆ, ಸಾಹಿತ್ಯ, ಆಡಳಿತ, ಧಾರ್ಮಿಕ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದರಿಂದಲೇ ಈ ವಿವರ ಲಭ್ಯವಾದುದನ್ನು ಮರೆಯದೆ, ನಾವುಗಳೂ ಸಹ ನಮ್ಮಗಳ ಗುರುತು ಮುಂದಿನ ಪೀಳಿಗೆಗೆ ಉಳಿಯುವಂತೆ ಸಾಧಕರಾಗಬೇಕೆಂದು ಕರೆಯಿತ್ತರು. ಈ ಸಮಾವೇಶಗಳಲ್ಲಿ ಕವಿ ಕುಟುಂಬಗಳಲ್ಲದೆ ಅವರ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳನ್ನು ಮತ್ತು ಬಂಧು ಬಳಗದವರನ್ನು ಆಹ್ವಾನಿಸುತ್ತಿರುವುದು ತುಂಬಾ ಉತ್ತಮ ಮತ್ತು ಔಚಿತ್ಯಪೂರ್ಣವೆಂದ ಅವರು, ಹೆಣ್ಣುಮಕ್ಕಳಿಗೆ ತಮ್ಮ ತವರಿನ ಬಗ್ಗೆ ಅಭಿಮಾನವಿದ್ದು, ತವರಿನವರ ಏಳಿಗೆಗೆ ಹರ್ಷ ಪಡುತ್ತಾರೆಂದರು. ಮೊದಲ ಎರಡು ವಾರ್ಷಿಕ ಸಮಾವೇಶಗಳನ್ನು ಕವಿ ಕುಟುಂಬಗಳವರು ಆಯೋಜಿಸಿದ್ದರೆ, ಹಿಂದಿನ ಮತ್ತು ಈಗಿನ ಸಮಾವೇಶಗಳನ್ನು ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಕುಟುಂಬಗಳವರು ಆಯೋಜಿಸಿರುವುದಕ್ಕೆ ಕವಿ ಮನೆತನದ ಹೆಣ್ಣು ಮಕ್ಕಳ ತವರಿನ ಅಭಿಮಾನ ಮತ್ತು ವಾಂಛಲ್ಯವೇ ಕಾರಣವಲ್ಲದೆ ಮತ್ತೇನೂ ಅಲ್ಲವೆಂದು ಶ್ಲಾಘಿಸಿದರು. ಕವಿಕಿರಣ ಪತ್ರಿಕೆಯ ಉದ್ದೇಶ ಉತ್ತಮ ಬಾಂಧವ್ಯ ಮತ್ತು ಸಜ್ಜನಶಕ್ತಿಯ ಜಾಗರಣಕ್ಕೆ ಪ್ರೇರಿಸುವುದೇ ಆಗಿದೆಯೆಂದರು.

    ಕವಿಕಿರಣ ಪತ್ರಿಕೆಯ ಡಿಸೆಂಬರ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ದೀಕ್ಷಿತರು ಸಮಾರಂಭಕ್ಕೆ ಹಾಜರಾದ ಎಲ್ಲರಿಗೂ ಆಭಾರ ವ್ಯಕ್ತಪಡಿಸುತ್ತಾ  ಇಂತಹ ಉತ್ತಮ ಕೆಲಸಕ್ಕೆ  ತಮ್ಮ ಮತ್ತು ತಮ್ಮ ಸಹೋದರರುಗಳ ಸಹಕಾರ ಸದಾ ಇರುವುದೆಂದು ತಿಳಿಸಿದರು.


     ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮಾತನಾಡುತ್ತಾ ಮಾನವ ಪ್ರಾಣಿಗಿಂತ ಭಿನ್ನವಾಗಿದ್ದು, ಕೇವಲ ತಿಂದು, ಉಂಡು ಸಾಯುವುದಾದಲ್ಲಿ ಪ್ರಾಣಿಗೂ ಅವನಿಗೂ ವ್ಯತ್ಯಾಸವಿರುವುದಿಲ್ಲ; ಸಾಯುವ ಮುನ್ನ ಏನನ್ನಾದರೂ ಸಾಧಿಸಬೇಕೆಂದೂ, ಜೀವನದಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದೂ ಕರೆಯಿತ್ತರು. ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡುದು ಅವಿಸ್ಮರಣೀಯವಾಗಿತ್ತು. ಸುಮಾರು ೫೫ಸಾವಿರ ಕಿಲೋಮೀಟರ್ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ ಸಂದರ್ಭದಲ್ಲಿ ಆದ ಕೆಲವು ಅನುಭವಗಳನ್ನು ತಿಳಿಸಿದಾಗ ಎಲ್ಲರೂ ವಿಸ್ಮಿತರಾದರು. ೩ವರ್ಷಗಳಿಗೂ ಹೆಚ್ಚಿನ ಸಮಯದ ಪ್ರವಾಸದ ಬಗ್ಗೆ ಒಂದು ಗಂಟೆಯಲ್ಲಿ ತಿಳಿಸುವುದು  ಕಷ್ಟವಾದರೂ ತಿಳಿಸಿದಷ್ಟು ಸಾಧನೆಯ ವಿವರ ಕೇಳಿದವರಿಗೆ ತಾವೂ ಏನನ್ನಾದರೂ ಸಾಧಿಸಬೇಕೆಂಬ ಪ್ರೇರಣೆ ಆಗಿರಲಿಕ್ಕೂ ಸಾಕು. ಈ ಅಪ್ರತಿಮ ಸಾಧನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇವರ ಸಾಧನೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದು, ಸುಮಾರು ೩೦ ವರ್ಷಗಳ ನಂತರವಾದರೂ ಸರ್ಕಾರ ಸಹ ಇತ್ತೀಚೆಗೆ ನವದೆಹಲಿಯಲ್ಲಿ ಇವರನ್ನು ಸನ್ಮಾನಿಸಿದ ಸಂಗತಿ ತಿಳಿದು ಎಲ್ಲರಿಗೂ ಸಂತೋಷವಾಯಿತು. ಇವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಸನ್ಮಾನ, ಪ್ರಶಸ್ತಿಗಳನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದು ಇವು ಎಲ್ಲರಿಗೂ ಪ್ರೇರಣೆ ನೀಡಿತು ಎಂಬುದರಲ್ಲಿ ಸಂಶಯವಿಲ್ಲ.


     ಕವಿ ನಾಗರಾಜಭಟ್ಟರು ಮಾತನಾಡಿ ಕವಿ ಮನೆತನದ ಪೂರ್ವಜರು ಸಾಧಕರಾಗಿದ್ದು ಅವರ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಬೇಕೆಂದು ಕರೆ ನೀಡಿದರು.
     ಸಂಶೋಧನಾ ರತ್ನ ಶ್ರೀ ಕೆಳದಿ ಗುಂಡಾಜೋಯಿಸರು ಕೆಳದಿ ಕವಿ ಮನೆತನ, ಕೆಳದಿ ಜೋಯಿಸ್ ಮನೆತನ ಹಾಗೂ ದೀಕ್ಷಿತ್ ಕುಟುಂಬಗಳ ನಡುವೆ ಇರುವ ಸಂಬಂಧ, ಪರಸ್ಪರರ ಅಭಿವೃದ್ಧಿಗೆ ಪೂರಕರಾಗಿರುವ ಕುರಿತು ದಾಖಲೆಗಳ ಸಹಿತ ಪ್ರಸ್ತುತ ಪಡಿಸಿದ್ದು ಸಭೆಗೆ ಮೆಚ್ಚುಗೆಯಾಯಿತು.
   
    ಶ್ರೀ ಕವಿ ಸುರೇಶ್‌ರವರು ಮರೆಯಲಾಗದ ಕೆಳದಿ ಸಾಮ್ರಾಜ್ಯ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಕ್ಕಾಗಿ ಬಂದ ಸಂಭಾವನೆಯ ಅರ್ಧಭಾಗವನ್ನು ಕವಿಮನೆತನದ ಮಂಗಳನಿಧಿಗೆ ನೀಡುವುದಾಗಿ ಘೋಷಿಸಿದ್ದು ಸಭೆ ಇವರನ್ನು ಅಭಿನಂದಿಸಿತು.
     ದೀಕ್ಷಿತ್ ಸಹೋದರರು ಸನ್ಮಾನದ ಸಲುವಾಗಿ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪುಣ್ಯಕ್ಷೇತ್ರಗಳಿಗೆ ಸಹ ಹೋಗಿ ಬಂದಿದ್ದರ ನಿಮಿತ್ತ ಕಾಶಿ ಸಮಾರಾಧನೆ ಸಹ ಇದೇ ದಿನ ಇಟ್ಟುಕೊಂಡಿದ್ದು, ಎಲ್ಲಾ ಅತಿಥಿಗಳಿಗೆ ಸುಗ್ರಾಸ ಭೋಜನ ಏರ್ಪಾಡಾಗಿತ್ತು.
     ಶ್ರೀಮತಿಯರಾಧ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್, ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶ ಜೋಯಿಸ್ ಇವರುಗಳು ಪ್ರಧಾನ ಸೂತ್ರಗಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಲ್ಲದೆ ಸೃಜನಾತ್ಮಕವಾಗಿದ್ದವು. ಆ ಸಂದರ್ಭದಲ್ಲಿ ಸ್ವತಃ ರಚಿಸಿ ಹಾಡಿದ ಶ್ರೀಮತಿ ಹೇಮಾ ಮಾಲತೇಶ ಮತ್ತು ಸಂಗಡಿಗರ ಹಾಡುಗಳಿಗೆ ನೃತ್ಯ ಬಾರದ ಸಭಿಕರುಗಳೂ ವಯಸ್ಸಿನ ತಾರತಮ್ಯವಿಲ್ಲದೆ ಹೆಜ್ಜೆ ಹಾಕಿ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವುದರ ಸಂಕೇತವಾಗಿತ್ತಲ್ಲದೆ, ಸಮಾವೇಶವನ್ನು ಅರ್ಥಪೂರ್ಣ ಎನ್ನಿಸಿತ್ತು. ಆಶುಭಾಷಣ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಹಲವರು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು.

     ಮುಂದಿನ ಸಮಾವೇಶ: ತಮ್ಮ ತಾಯಿ ದಿ. ವಿನೋದಾಬಾಯಿ ಗೋಪಾಲರಾವ್‌ರವರ ನೆನಪಿನಲ್ಲಿ ಮುಂದಿನ ವಾರ್ಷಿಕ ಸಮಾವೇಶವನ್ನು ತಾವು, ತಮ್ಮ ಸಹೋದರರು ಮತ್ತು ಕುಟುಂಬವರ್ಗದವರು ಶಿಕಾರಿಪುರದಲ್ಲಿ ದಿನಾಂಕ ೨೬-೧೨-೨೦೧೦ರಂದು ನಡೆಸಿಕೊಡುವುದಾಗಿ ಘೋಷಿಸಿದ ಶ್ರೀ ಸೋಮಶೇಖರ್ ಮತ್ತು ಕಾಶೀಬಾಯಿರವರನ್ನು ಸಭೆ ಅಭಿನಂದಿಸಿತು. ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ತಾಯಿ ದಿ. ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ದಿ.ಶ್ರೀಮತಿ ವಿನೋದಾಬಾಯಿಯವರಿಬ್ಬರೂ ದಿ.ಕವಿ ಶ್ರೀಕಂಠಯ್ಯ-ಭಾಗೀರಥಮ್ಮನವರ ಹೆಣ್ಣುಮಕ್ಕಳು ಎಂಬುದು ಗಮನಿಸಬೇಕಾದ ಸಂಗತಿ.

     ಕುಮಾರಿ ಸಿಂಧು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದಳು. ಕೆಳದಿ ವೆಂಕಟೇಶ ಜೋಯಿಸ್ ಎಲ್ಲರಿಗೂ ಆಭಾರ ವ್ಯಕ್ತಪಡಿಸಿದರು. ಆಹ್ವಾನ ಪತ್ರಿಕೆ ಮುದ್ರಿಸಿ ಎಲ್ಲರಿಗೂ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ ಪೂರ್ವ ತಯಾರಿ ಬಗ್ಗೆ ಶ್ರಮ ವಹಿಸಿದ ಕವಿ ಶ್ರೀಕಂಠ, ಗುರುಮೂರ್ತಿ, ದತ್ತಾತ್ರಿ ಸಹೋದರರನ್ನು ಅಭಿನಂದಿಸಲಾಯಿತು. ಸ್ಮರಣೀಯವಾಗಿ ಸಮಾವೇಶವನ್ನು ಆಯೋಜಿಸಿದ ದೀಕ್ಷಿತ್ ಸಹೋದರರುಗಳು, ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಕಿರಣ ಪತ್ರಿಕೆಯ ಮುಂದಿನ ಸಂಚಿಕೆ ಪ್ರಾಯೋಜಕರಾದ ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬದವರನ್ನು ಸಭೆ ಅಭಿನಂದಿಸಿತು. ಸಾಂಸ್ಸೃತಿಕ ಕಾರ್ಯಕ್ರಮಕ್ಕೆ ಕಳೆಕೊಟ್ಟವರು, ಕವಿ ಮನೆತನದ ಮಂಗಳನಿಧಿಗೆ ದೇಣಿಗೆ ನೀಡಿದವರು, ಸಮಾವೇಶವನ್ನು ಅರ್ಥಪೂರ್ಣಗೊಳಿಸಲು ಸಹಕರಿಸಿದವರು ಎಲ್ಲರನ್ನೂ ಅಭಿನಂದಿಸುವುದರೊಂದಿಗೆ ಸಮಾವೇಶ ಸಫಲ ಅಂತ್ಯ ಕಂಡಿತು. ದೀಕ್ಷಿತ್ ಕುಟುಂಬವರ್ಗದ ಆತಿಥ್ಯ ಮತ್ತು ಸಮಾವೇಶದ ಮಧುರ ನೆನಪುಗಳೊಂದಿಗೆ ಸಾಯಂಕಾಲದ ವೇಳೆಗೆ ಎಲ್ಲರೂ ತೀರ್ಥಹಳ್ಳಿಯಿಂದ ತೆರಳಿದರು.
******************
('ಕವಿಕಿರಣ'ದ ಜೂನ್, 2010ರ ಸಂಚಿಕೆಯಿಂದ).

ಕಳೆದು ಹೋಗಿದ್ದೇವೆ, ಹುಡುಕಿಕೊಡುವಿರಾ?

ಹಿನ್ನೋಟ:

     ವಂಶಮೂಲವನರಸಿ ಜಾಡರಿತು ಸಾರೆ|
     ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ||
     ಮುನ್ನೂರು ವರುಷಗಳ ಹಾದಿಯಿದು ಜಾಣಾ|
     ಹತ್ತು ತಲೆಮಾರುಗಳ ಯಶಗೀತೆ ಕಾಣಾ||

     ಕೆಳದಿ ಕವಿಮನೆತನಕ್ಕೆ ಸೇರಿದವರೆಂದು ಗೊತ್ತಿರದ ಕುಟುಂಬವೊಂದು ತಮ್ಮ ವಂಶದ ಮೂಲವನ್ನು ಹುಡುಕಿ ಸಫಲರಾಗಿ ಸಂಭ್ರಮಿಸಿದ ಕುರಿತು ಸಂಕ್ಷಿಪ್ತವಾಗಿ ತಮ್ಮೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ತುಡಿತದ ಫಲವೇ ಈ ಬರಹ. ಆ ಕುಟುಂಬ ಬೇರಾವ ಕುಟುಂಬವಾಗಿರದೆ ನಮ್ಮದೇ ಕುಟುಂಬವಾಗಿದೆ. ಸುಮಾರು ಎಂಟು ವರ್ಷಗಳ ಸುದೀರ್ಘ ಪ್ರಯತ್ನ ಈ ಯಶಸ್ಸಿನ ಹಿನ್ನೆಲೆಯಲ್ಲಿದೆ.
    ನನ್ನ ಅಜ್ಜ ದಿ.  ಸುಬ್ರಹ್ಮಣ್ಯಯ್ಯನವರು (೧೯೦೪-೧೯೬೬)   ಬಾಲ್ಯಾವಸ್ಥೆಯಲ್ಲೇ ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು, ಕೊಪ್ಪದಲ್ಲಿದ್ದ ತಮ್ಮ ಅಜ್ಜ (ತಾಯಿಯ ತಂದೆ) ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆದಿದ್ದರಿಂದ ಸಹಜವಾಗಿ ತಂದೆಯ ಕಡೆಯ ಸಂಬಂಧಗಳು ಬಿಟ್ಟುಹೋಗಿದ್ದಲ್ಲದೆ ಅವರ ಪರಿಚಯ ಮಕ್ಕಳು, ಮೊಮ್ಮಕ್ಕಳಿಗೆ ಆಗಲಿಲ್ಲ. ನಾವುಗಳೂ ನಮ್ಮ ಹೆಸರಿನ ಇನಿಷಿಯಲ್‌ನಲ್ಲಿದ್ದ ಕೆ ಅಂದರೆ ಕೊಪ್ಪ ಎಂದೇ ಭಾವಿಸಿದ್ದೆವು. ಸುಬ್ರಹ್ಮಣ್ಯಯ್ಯನವರು ತರ್ಪಣಾದಿ ಕಾರ್ಯಗಳಲ್ಲಿ ಸ್ಮರಿಸಬೇಕಾದ ಹೆಸರುಗಳ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು ತಮ್ಮ ಮಗ ದಿ. ವೆಂಕಟಸುಬ್ಬರಾಯರಿಗೆ (೧೯೨೫-೨೦೦೯) ಕೊಟ್ಟಿದ್ದರು. ಈ ಚೀಟಿಯನ್ನು ಗಮನಿಸಿದ ನಾನು ಅದರಲ್ಲಿನ ವಿವರಗಳನ್ನು ಆಧರಿಸಿ ವಂಶವೃಕ್ಷ ಸಿದ್ಧಪಡಿಸಿ ೨೦೦೦ನೆಯ ಸಾಲಿನಲ್ಲಿ ಪ್ರತಿಗಳನ್ನು ಬಂಧುಗಳಿಗೆ ನೀಡಿದ್ದೆನು. ಅದರಲ್ಲಿ ಕೊಪ್ಪದ ವೆಂಕಣ್ಣನ ಅಮರ ವಂಶಾವಳಿ ಎಂದೇ ನಮೂದಿಸಿದ್ದೆನು. ವರ್ಷಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಈ ವಂಶವೃಕ್ಷದಲ್ಲಿ ಪರಿಷ್ಕರಣೆ ಮಾಡುತ್ತಿದ್ದೆನು. ಈರೀತಿ ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಹೆಸರುಗಳವರ ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಾಗಿತು. ಯಾವ ಯಾವುದೋ ಸಮಾರಂಭಗಳಲ್ಲಿ. ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸುತ್ತಿದ್ದೆ.  ಅವರು ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು. ಹೇಳಬೇಕೆಂದರೆ ನನ್ನ ಹೆಚ್ಚಿನ ಗಮನ ಕೊಪ್ಪ ಮತ್ತು ಶಿವಮೊಗ್ಗಗಳಿಗೆ ಸೀಮಿತವಾಗಿತ್ತು. ಕಂದಾಯ ಇಲಾಖಾಧಿಕಾರಿಯಾಗಿ ನನಗಿದ್ದ ಕಾರ್ಯಬಾಹುಳ್ಯ ಸಹ ಈ ಕುರಿತು ಹುಡುಕಾಟಕ್ಕೆ ಅಡ್ಡಿಯಾಗಿತ್ತು.
     ರಾಜ್ಯ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದ ನನ್ನ ತಮ್ಮ ಸುರೇಶ ಐದು ವರ್ಷಗಳ ಹಿಂದೆ ಸ್ವಇಚ್ಛಾ ನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ನೆಲೆ ನಿಂತಾಗ ಆತನಿಂದ ಈ ಅನ್ವೇಷಣೆ ಮುಂದುವರೆಯಿತು. ನಾವಿಕ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರವೇಶದ್ವಾರಕ್ಕೆ ಕವಿ ಸುಬ್ರಹ್ಮಣ್ಯಯ್ಯನವರ ಹೆಸರಿಡಬೇಕೆಂದು ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿಯವರು ಬರೆದ ಪತ್ರ ಗಮನಿಸಿ ಕವಿ ಸುಬ್ರಹ್ಮಣ್ಯಯ್ಯರೆಂದರೆ ನಮ್ಮ ಅಜ್ಜನೇ ಇರಬೇಕೆಂದು ಭಾವಿಸಿ ಅವರನ್ನು ನನ್ನ ತಮ್ಮ ವಿಚಾರಿಸಿದ. ಆದರೆ ಅವರು ಉಲ್ಲೇಖಿಸಿದ ಕವಿ ಸುಬ್ರಹ್ಮಣ್ಯಯ್ಯ ನಮ್ಮ ಅಜ್ಜ ಆಗಿರಲಿಲ್ಲ. ಆದರೆ ಕೆಳದಿಯ ಗುಂಡಾಜೋಯಿಸರನ್ನು ಸಂಪರ್ಕಿಸಲು ನೀಡಿದ ಅವರ ಸಲಹೆ ಮಾತ್ರ ಅತ್ಯಂತ ಅಮೂಲ್ಯವಾದುದಾಗಿತ್ತು. ಅವರ ಸಲಹೆಯಂತೆ ಕೆಳದಿ ಗುಂಡಾಜೋಯಿಸರನ್ನು ನನ್ನ ತಮ್ಮ ಸಂಪರ್ಕಿಸಿ ವಿಚಾರಿಸಿದಾಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಶ್ರೀ ಗುಂಡಾಜೋಯಿಸರ ಬಳಿ ಇದ್ದ ಕವಿಮನೆತನದ ವಂಶವೃಕ್ಷದ ವಿವರಗಳು ನಮ್ಮ ವಂಶವೃಕ್ಷದ ವಿವರಗಳಿಗೆ ತಾಳೆಯಾಯಿತು.. ಎರಡು ವಂಶವೃಕ್ಷದಲ್ಲಿನ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಶ್ರೀ ಗುಂಡಾಜೋಯಿಸರ ಹತ್ತಿರವಿದ್ದ ವಂಶವೃಕ್ಷದಲ್ಲಿ ಹೆಸರಿಸಿದ್ದ ಬಂಧುಗಳನ್ನು ವಿಚಾರಿಸಲಾಗಿ ಅವರು ನಮ್ಮ ಗೋತ್ರದವರೇ ಆಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಜ್ಜ ಸುಬ್ರಹ್ಮಣ್ಯಯ್ಯನವರನ್ನು ಕಂಡಿದ್ದವರು, ಕೇಳಿದ್ದವರೇ ಆಗಿದ್ದಲ್ಲದೆ ನಮ್ಮ ಅಜ್ಜ ಅವರುಗಳ ಮನೆಗೆ ಹೋಗಿಬರುತ್ತಿದ್ದುನ್ನು ಧೃಢಪಡಿಸಿದ್ದು ಸಂಬಂಧ ಸರಪಳಿ ಒಂದಾಗಿದ್ದುದನ್ನು ಖಚಿತಪಡಿಸಿತು. ಹಲವಾರು ರೀತಿಯಲ್ಲಿ ಪರಿಶೀಲಿಸಿದಾಗ ವಿಷಯ ಮತ್ತಷ್ಟು ದೃಢಪಟ್ಟಿತು. ನಾವು ಕವಿಮನೆತನದವರೆಂದು ತಿಳಿದು ನಮಗೆ ಅತೀವ ಸಂತೋಷವಾಯಿತು. ಸಫಲ ಅನ್ವೇಶಣೆ ಮಾಡಿದ ಸುರೇಶ ಮತ್ತು ಅವನ ಸಹಕಾರಿಗಳಿಗೆ ಅಭಿನಂದನೆ ಸಲ್ಲಬೇಕು.
     ಹುಡುಕುವ ಕಾರ್ಯದಲ್ಲಿ ಸ್ವಜನರೂ ಸೇರಿದಂತೆ ಇತರರಿಂದಲೂ ಕೆಲವರ ಅಪಹಾಸ್ಯ, ನಿಂದೆ, ಸಂಶಯ, ತಿರಸ್ಕಾರ, ಅಲಕ್ಷ್ಯ, ಅಸಹಕಾರಗಳ ಜೊತೆಗೆ ಮೆಚ್ಚುಗೆ ಸಹಕಾರಗಳೂ ಬೆರೆತು ಒಳ್ಳೆಯ ಅನುಭವ ದೊರಕಿತು. ನಂತರದಲ್ಲಿ ಕ್ಷಿಪ್ರ ಬೆಳವಣಿಗೆಗಳಾದವು. ಪರಸ್ಪರ ಪರಿಚಯವೇ ಇಲ್ಲದಿದ್ದ, ಸಂಪರ್ಕ ಇಲ್ಲದಿದ್ದ ಬಂಧುಗಳನ್ನು ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ತಮ್ಮ ಸುರೇಶನ ಮನೆಯಲ್ಲಿ ಕವಿಕುಟುಂಬಗಳ ಮತ್ತು ಬಂಧುಬಳಗದವರ ಪ್ರಥಮ ಸಮಾವೇಶ ಜರುಗಿತು. ಅನೇಕ ವರ್ಷಗಳ ನಂತರ ಪ್ರಥಮವಾಗಿ ಬಂಧುಗಳ ಮಿಲನದ ಕಾರಣ ಅರುಣ ಪಾರಾಯಣ ಪಠಣ, ಮುಂತಾದ ವಿಧಿ ವಿಧಾನಗಳನ್ನು ನಡೆಸಲಾಯಿತು. ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆಗಳ ಕುರಿತು ಒಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲಾ ಹಿರಿಯರನ್ನು, ಸಹಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಸ್ಥೂಲ ಪರಿಚಯ, ವಂಶಾವಳಿ ವಿವರಗಳನ್ನು ಒಳಗೊಂಡ ಸುರೇಶನ ಕೃತಿ ಹಳೇ ಬೇರು-ಹೊಸ ಚಿಗುರು ಪುಸ್ತಕ ಬಿಡುಗಡೆಯಾಯಿತು.
     ೨೫-೧೨-೦೭ರಲ್ಲಿ ಶ್ರೀ ಕೆಳದಿ ರಾಮಮೂರ್ತಿ ಮತ್ತು ಶ್ರೀ ನಾಗರಾಜಭಟ್ಟರ ಕುಟುಂಬಗಳ ಪ್ರಾಯೋಜಕತ್ವದಲ್ಲಿ ನಡೆದ ಎರಡನೆಯ ಸಮಾವೇಶದಲ್ಲಿ ಸುರೇಶ ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕ ಕರ್ಮಯೋಗಿ ಕಲಾವಲ್ಲಭ ಎಸ್.ಕೆ.ಲಿಂಗಣ್ಣಯ್ಯ -ಜೀವನಚರಿತ್ರೆ ಬಿಡುಗಡೆಯಾಯಿತು. ಬೆಂಗಳೂರಿನ ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬವರ್ಗದವರ ಪ್ರಾಯೋಜಕತ್ವದಲ್ಲಿ ೨೮-೧೨-೦೮ರಂದು  ನಡೆದ ಮೂರನೆಯ ಸಮಾವೇಶದಲ್ಲಿ  ನಾನು ನನ್ನ ಅಜ್ಜನ ಕುರಿತು ಬರೆದ ಕವಿ ಸುಬ್ರಹ್ಮಣ್ಯಯ್ಯ- ಒಂದು ಜೀವಗೀತೆ ಎಂಬ ಪುಸ್ತಿಕೆ ಬಿಡುಗಡೆ, ಕವಿ ಸುರೇಶ ಸಿದ್ಧಪಡಿಸಿದ ಎಲ್ಲಾ ಕುಟುಂಬಗಳವರ ಮತ್ತು ಬಂಧು ಬಳಗದವರ ವಿಳಾಸ, ದೂರವಾಣಿ ವಿವರಗಳುಳ್ಳ  ಕೈಪಿಡಿ ಬಿಡುಗಡೆಯೊಂದಿಗೆ ಕವಿಮನೆತನದ ಪತ್ರಿಕೆ ಕವಿಕಿರಣದ ಉದಯವಾಯಿತು. ೨೭-೧೨-೦೯ ರಂದು ತೀರ್ಥಹಳ್ಳಿಯಲ್ಲಿ ಶ್ರೀ ಶೇಷಾದ್ರಿ ದೀಕ್ಷಿತ್ ಮತ್ತು ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ಸಹೋದರರು ಮತ್ತು ಕುಟುಂಬವರ್ಗದ ಆಶ್ರಯದಲ್ಲಿ ನಾಲ್ಕನೆಯ ಸಮಾವೇಶ ನಡೆಯಿತು. ವರ್ಷದಿಂದ ವರ್ಷಕ್ಕೆ, ಸಮಾವೇಶದಿಂದ ಸಮಾವೇಶಕ್ಕೆ ಬಾಂಧವ್ಯಗಳು   ಗಟ್ಟಿಗೊಳ್ಳುತ್ತಾ, ಸಜ್ಜನಶಕ್ತಿಯ ಜಾಗೃತಿಯಾಗುತ್ತಾ ಹೋಗುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆಯಾಗಿದೆ.
ಮುನ್ನೋಟ:
     ಹಿರಿಯರುಗಳು, ಬಂಧುಗಳು ಚರ್ಚಿಸಿ ಕ್ರೋಢೀಕೃತ ವಂಶವೃಕ್ಷ ಸಿದ್ಧಪಡಿಸಿ ಪ್ರಥಮ ಸಮಾವೇಶದಲ್ಲಿ ಎಲ್ಲರಿಗೂ ನೀಡಲಾಯಿತು. ಕಾಲಕಾಲಕ್ಕೆ ಸೂಕ್ತ ಸೇರ್ಪಡೆ, ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
     ನಿಜ, ನಾವೇನೋ ನಮ್ಮ ಮೂಲವನ್ನು ಗುರುತಿಸಿಕೊಂಡೆವು. ಆದರೆ ಈ ಕೆಲಸ ಇಲ್ಲಿಗೇ ನಿಲ್ಲಬೇಕೇ ಎಂಬುದು ಮಹತ್ವದ ಪ್ರಶ್ನೆ. ೧೦-೧೧ ತಲೆಮಾರುಗಳ ವಿವರವಿರುವ ವಂಶವೃಕ್ಷ ಗಮನಿಸಿದಾಗ ನಮ್ಮಂತೆಯೇ ಹಲವಾರು ಕಳಚಿರುವ ಕೊಂಡಿಗಳು ಕಣ್ಣಿಗೆ ಬಿದ್ದು, ಆ ಕೊಂಡಿಗಳನ್ನೂ ಹುಡುಕಿ ಕೂಡಿಸುವ ಕೆಲಸ ಉಳಿದಿರುವುದು ನಮ್ಮ ಕೆಲಸ ಇನ್ನೂ ಬಾಕಿಯಿದೆ ಎಂಬುದನ್ನು ಸೂಚಿಸುವುದಿಲ್ಲವೇ? ನಮ್ಮಂತೆಯೇ ಕೆಳದಿ ಕವಿಕುಟುಂಬಕ್ಕೆ ಸೇರಿದ್ದು, ಕವಿಕುಟುಂಬದವರೆಂದು ಗೊತ್ತಿರದ ಹಲವಾರು ಕುಟುಂಬಗಳು ಇರಬಹುದಲ್ಲವೇ? ವಂಶವೃಕ್ಷದಲ್ಲಿ ಹೆಸರಿದ್ದು ತಮ್ಮ ಮಕ್ಕಳು, ಮೊಮ್ಮಕ್ಕಳ ಹೆಸರುಗಳಿಲ್ಲದವರ ಆತ್ಮಗಳು ತಮ್ಮ ಮಕ್ಕಳನ್ನೂ ಗುರುತಿಸಿ ಎಂದು ಕೇಳುತ್ತಿರಬಹುದಲ್ಲವೇ?
     ಸಂಬಂಧ ಸರಪಳಿಯ ಕೊಂಡಿಗಳು ಕಳಚಲು   ೧. ಮಕ್ಕಳಿಲ್ಲದಿರುವುದು, ೨. ವಿವಾಹವಾಗಿಲ್ಲದಿರುವುದು, ೩. ಅಕಾಲ ಮರಣ. ೪. ದಾಯಾದಿ ಮತ್ಸರ, ಕೌಟುಂಬಿಕ ಕಲಹ, ಇತ್ಯಾದಿ ಕಾರಣಗಳಿಂದ ದೂರವಾಗಿ ಕಡಿದ ಸಂಬಂಧಗಳು, ೫. ಸಂಬಂಧಗಳಿಗೆ ಬೆಲೆ, ಮಹತ್ವ ನೀಡದ ಮನೋಭಾವ, ೬. ಇತರ ಕಾರಣಗಳು, ಇತ್ಯಾದಿ ಹಲವಾರು ಕಾರಣಗಳಿರಬಹುದು. ಕಾರಣಗಳೇನೇ ಇರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಳಚಿದ ಕೊಂಡಿಗಳನ್ನು ಕೂಡಿಸುವ, ಸಂಬಂಧಗಳನ್ನು ಬೆಸೆಯುವ ಕಾರ್ಯಕ್ಕೆ ಮಾತ್ರ ಗಮನ ನೀಡುವುದು ನಮ್ಮ ಆದ್ಯತೆಯಾಗಲಿ. ಆಸಕ್ತರಿಗೆ, ಬಾಂಧವ್ಯಗಳನ್ನು ಗೌರವಿಸುವವರಿಗೆ ಮತ್ತು ಮುಂದಿನ ಪೀಳಿಗೆಗಳಿಗೆ ಇದು ನಿಸ್ಸಂದೇಹವಾಗಿ ಅಮೂಲ್ಯ ಕೊಡುಗೆ ಎಂಬುದರಲ್ಲಿ ಅನುಮಾನವಿಲ್ಲ.
ಕಳಚಿದ ಕೊಂಡಿಗಳು:
     ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ, ಕೆಳದಿ ನೃಪ ವಿಜಯ ಎಂಬ ಚಾರಿತ್ರಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಕೃತಿ ರಚಿಸಿದ್ದಲ್ಲದೆ ಕೆಳದಿ ಕವಿಮನೆತನ ಎಂದು ಹೆಸರು ಬರಲು ಕಾರಣನಾದ ಲಿಂಗಣ್ಣಕವಿ (ಕವಿ ಲಿಂಗಣ್ಣ/ಲಿಂಗಭಟ್ಟ)ನನ್ನು ನಮ್ಮ ಕುಟುಂಬದ ಮೂಲ/ ಪ್ರಧಾನ ವ್ಯಕ್ತಿಯಾಗಿ ಪರಿಗಣಿಸಿ ಇವನ ಪೀಳಿಗೆಯನ್ನು ಒಂದನೆಯ ಪೀಳಿಗೆ ಎಂದು ತೆಗೆದುಕೊಂಡು ನಮ್ಮ ಅನ್ವೇಶಣೆ ಪ್ರಾರಂಭವಾಗಬೇಕಿದೆ. ಈತನ ಕಾಲವನ್ನು ಇತಿಹಾಸಕಾರರು ಸುಮಾರು ಕ್ರಿ.ಶ. ೧೭೫೦ ಎಂದು ತಿಳಿಸಿದ್ದು ಇದರ ಆಧಾರದಲ್ಲೇ ನಂತರದ ಪೀಳಿಗೆಗಳವರ ಕಾಲಮಾನವನ್ನು ಲೆಕ್ಕ ಹಾಕೋಣ.
ಒಂದನೆಯ ಪೀಳಿಗೆ:
ವೆಂಕಪ್ಪನ ಮಗ ಎಂಬುದನ್ನು ಬಿಟ್ಟರೆ ಕವಿ ಲಿಂಗಣ್ಣನ ತಾಯಿಯ, ಪತ್ನಿಯ ಮತ್ತು ಇತರ ಅಣ್ಣ-ತಮ್ಮಂದಿರ (ಇದ್ದಲ್ಲಿ) ವಿವರ ತಿಳಿದುಬರುತ್ತಿಲ್ಲ.
ಎರಡನೆಯ ಪೀಳಿಗೆ:
ಕವಿಲಿಂಗಣ್ಣನ ಇಬ್ಬರು ಮಕ್ಕಳು ಶ್ಯಾಮಭಟ್ಟ ಮತ್ತು ವೆಂಕಣ್ಣ (ವೆಂಕಭಟ್ಟ)ರ ಪೈಕಿ ಶ್ಯಾಮಭಟ್ಟರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ಶ್ಯಾಮಭಟ್ಟರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ. ಲಿಂಗಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ಮೂರನೆಯ ಪೀಳಿಗೆ:
ಕವಿವೆಂಕಣ್ಣನ ಇಬ್ಬರು ಮಕ್ಕಳು ಚೆನ್ನಯ್ಯ ಮತ್ತು ಸುಬ್ಬಾಭಟ್ಟರ ಪೈಕಿ ಚೆನ್ನಯ್ಯರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ವೆಂಕಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ನಾಲ್ಕನೆಯ ಪೀಳಿಗೆ:
ಕವಿ ಸುಬ್ಬನ ಆರು ಮಕ್ಕಳು ವೆಂಕಭಟ್ಟ, ಲಿಂಗಾಭಟ್ಟ, ರಾಮಭಟ್ಟ, ಸುಬ್ಬಾಭಟ್ಟ(ಸುಬ್ರಹ್ಮಣ್ಯ?), ನಾರಣಭಟ್ಟ ಮತ್ತು ಕೃಷ್ಣಭಟ್ಟರ ಪೈಕಿ ವೆಂಕಣ್ಣನ ಹೊರತಾಗಿ ಉಳಿದ ಮಕ್ಕಳ ವಿವರ ಗೊತ್ತಾಗಬೇಕಿದೆ. ವೆಂಕಭಟ್ಟರ ಹೊರತಾಗಿ ಉಳಿದವರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ.
ಐದನೆಯ ಪೀಳಿಗೆ:
ಅಪ್ಪಣ್ಣಭಟ್ಟ ಮತ್ತು ಶಿವಭಟ್ಟ(ಶಿವರಾಮಭಟ್ಟ)ರ ಪತ್ನಿಯರ ಹೆಸರು ತಿಳಿಯಬೇಕಿದೆ.
ಆರನೆಯ ಪೀಳಿಗೆ:
ವೆಂಕಭಟ್ಟ, ಕೊಲ್ಲೂರಪ್ಪ ಮತ್ತು ಶ್ಯಾಮಭಟ್ಟರ ಪತ್ನಿಯರ ಹೆಸರು ತಿಳಿಯಬೇಕಿದೆ
ಏಳನೆಯ ಪೀಳಿಗೆ:
ವೆಂಕಭಟ್ಟರ ಮೂವರು ಮಕ್ಕಳು ಸುಬ್ಬಾಭಟ್ಟ, ಕೃಷ್ಣಭಟ್ಟ ಮತ್ತು ಶ್ಯಾಮಭಟ್ಟರ ಕುರಿತು ವಿವರ ತಿಳಿಯಬೇಕಿದೆ. ಕವಿ ರಾಮಣ್ಣರ ಮಗ ಹುಚ್ಚೂರಾಯರ ಬಗ್ಗೆ ಮಾಹಿತಿ ಸಿಗಬೇಕು.
     ಏಳನೆಯ ಪೀಳಿಗೆಗೆ ಸೇರಿದ ಕೆಲವು ಕವಿ ಕುಟುಂಬಗಳವರು ಮತ್ತು ನಂತರದ ಎಂಟು, ಒಂಬತ್ತು ಮತ್ತು ಹತ್ತನೆಯ ಪೀಳಿಗೆಗಳವರು ಪ್ರಸ್ತುತ ನಮ್ಮೊಡನಿದ್ದು ಅಮೂಲ್ಯ ಮಾಹಿತಿಗಳನ್ನು ಒದಗಿಸಬಹುದಾಗಿರುತ್ತದೆ. ಕವಿಕುಟುಂಬಕ್ಕೆ ಸೇರಿದ ಕೆಳದಿಯಲ್ಲಿದ್ದ ದಿ.ತಮ್ಮಣ್ಣಭಟ್ಟರ ಕುರಿತು ಸ್ವಲ್ಪ ಮಾಹಿತಿ ಲಭ್ಯವಾಗಿದ್ದು ಪೂರ್ಣ ಮಾಹಿತಿ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ.
     ಕಳಚಿದ ಕೊಂಡಿಗಳನ್ನು ಕೂಡಿಸುವ ಕೆಲಸಕ್ಕೆ ಎಲ್ಲರೂ ಮನಸ್ಸು ಮಾಡಿದಲ್ಲಿ, ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಜೋಯಿಸ್, ದೀಕ್ಷಿತ್ ಮತ್ತು ಇತರ ಕುಟುಂಬಗಳವರು ಮತ್ತು ಆಸಕ್ತರು  ಕೈಜೋಡಿಸಿದಲ್ಲಿ ಈ ಕಾರ್ಯ ಸಾಧಿಸುವುದು ಕಷ್ಟವಾಗಲಾರದು.
     ಕಳಚಿದ ಕೊಂಡಿಗಳನ್ನು ಹುಡುಕುವ ಕಾರ್ಯದಲ್ಲಿ ನಿಮ್ಮೊಂದಿಗೆ ಇರುವ,
                               -ಕ.ವೆಂ.ನಾಗರಾಜ್. 
***
('ಕವಿಕಿರಣ'ದ 01-06-2010ರ ಸಂಚಿಕೆಯ ಸಂಪಾದಕೀಯ).