ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, August 2, 2011

ಕಳೆದು ಹೋಗಿದ್ದೇವೆ, ಹುಡುಕಿಕೊಡುವಿರಾ?

ಹಿನ್ನೋಟ:

     ವಂಶಮೂಲವನರಸಿ ಜಾಡರಿತು ಸಾರೆ|
     ಜಾಡು ಮುಗಿದೆಡೆಯಲ್ಲಿ ಜೀವಾಮೃತಧಾರೆ||
     ಮುನ್ನೂರು ವರುಷಗಳ ಹಾದಿಯಿದು ಜಾಣಾ|
     ಹತ್ತು ತಲೆಮಾರುಗಳ ಯಶಗೀತೆ ಕಾಣಾ||

     ಕೆಳದಿ ಕವಿಮನೆತನಕ್ಕೆ ಸೇರಿದವರೆಂದು ಗೊತ್ತಿರದ ಕುಟುಂಬವೊಂದು ತಮ್ಮ ವಂಶದ ಮೂಲವನ್ನು ಹುಡುಕಿ ಸಫಲರಾಗಿ ಸಂಭ್ರಮಿಸಿದ ಕುರಿತು ಸಂಕ್ಷಿಪ್ತವಾಗಿ ತಮ್ಮೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ತುಡಿತದ ಫಲವೇ ಈ ಬರಹ. ಆ ಕುಟುಂಬ ಬೇರಾವ ಕುಟುಂಬವಾಗಿರದೆ ನಮ್ಮದೇ ಕುಟುಂಬವಾಗಿದೆ. ಸುಮಾರು ಎಂಟು ವರ್ಷಗಳ ಸುದೀರ್ಘ ಪ್ರಯತ್ನ ಈ ಯಶಸ್ಸಿನ ಹಿನ್ನೆಲೆಯಲ್ಲಿದೆ.
    ನನ್ನ ಅಜ್ಜ ದಿ.  ಸುಬ್ರಹ್ಮಣ್ಯಯ್ಯನವರು (೧೯೦೪-೧೯೬೬)   ಬಾಲ್ಯಾವಸ್ಥೆಯಲ್ಲೇ ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು, ಕೊಪ್ಪದಲ್ಲಿದ್ದ ತಮ್ಮ ಅಜ್ಜ (ತಾಯಿಯ ತಂದೆ) ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆದಿದ್ದರಿಂದ ಸಹಜವಾಗಿ ತಂದೆಯ ಕಡೆಯ ಸಂಬಂಧಗಳು ಬಿಟ್ಟುಹೋಗಿದ್ದಲ್ಲದೆ ಅವರ ಪರಿಚಯ ಮಕ್ಕಳು, ಮೊಮ್ಮಕ್ಕಳಿಗೆ ಆಗಲಿಲ್ಲ. ನಾವುಗಳೂ ನಮ್ಮ ಹೆಸರಿನ ಇನಿಷಿಯಲ್‌ನಲ್ಲಿದ್ದ ಕೆ ಅಂದರೆ ಕೊಪ್ಪ ಎಂದೇ ಭಾವಿಸಿದ್ದೆವು. ಸುಬ್ರಹ್ಮಣ್ಯಯ್ಯನವರು ತರ್ಪಣಾದಿ ಕಾರ್ಯಗಳಲ್ಲಿ ಸ್ಮರಿಸಬೇಕಾದ ಹೆಸರುಗಳ ವಿವರಗಳನ್ನು ಒಂದು ಚೀಟಿಯಲ್ಲಿ ಬರೆದು ತಮ್ಮ ಮಗ ದಿ. ವೆಂಕಟಸುಬ್ಬರಾಯರಿಗೆ (೧೯೨೫-೨೦೦೯) ಕೊಟ್ಟಿದ್ದರು. ಈ ಚೀಟಿಯನ್ನು ಗಮನಿಸಿದ ನಾನು ಅದರಲ್ಲಿನ ವಿವರಗಳನ್ನು ಆಧರಿಸಿ ವಂಶವೃಕ್ಷ ಸಿದ್ಧಪಡಿಸಿ ೨೦೦೦ನೆಯ ಸಾಲಿನಲ್ಲಿ ಪ್ರತಿಗಳನ್ನು ಬಂಧುಗಳಿಗೆ ನೀಡಿದ್ದೆನು. ಅದರಲ್ಲಿ ಕೊಪ್ಪದ ವೆಂಕಣ್ಣನ ಅಮರ ವಂಶಾವಳಿ ಎಂದೇ ನಮೂದಿಸಿದ್ದೆನು. ವರ್ಷಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಈ ವಂಶವೃಕ್ಷದಲ್ಲಿ ಪರಿಷ್ಕರಣೆ ಮಾಡುತ್ತಿದ್ದೆನು. ಈರೀತಿ ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಹೆಸರುಗಳವರ ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಾಗಿತು. ಯಾವ ಯಾವುದೋ ಸಮಾರಂಭಗಳಲ್ಲಿ. ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸುತ್ತಿದ್ದೆ.  ಅವರು ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು. ಹೇಳಬೇಕೆಂದರೆ ನನ್ನ ಹೆಚ್ಚಿನ ಗಮನ ಕೊಪ್ಪ ಮತ್ತು ಶಿವಮೊಗ್ಗಗಳಿಗೆ ಸೀಮಿತವಾಗಿತ್ತು. ಕಂದಾಯ ಇಲಾಖಾಧಿಕಾರಿಯಾಗಿ ನನಗಿದ್ದ ಕಾರ್ಯಬಾಹುಳ್ಯ ಸಹ ಈ ಕುರಿತು ಹುಡುಕಾಟಕ್ಕೆ ಅಡ್ಡಿಯಾಗಿತ್ತು.
     ರಾಜ್ಯ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದ ನನ್ನ ತಮ್ಮ ಸುರೇಶ ಐದು ವರ್ಷಗಳ ಹಿಂದೆ ಸ್ವಇಚ್ಛಾ ನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ನೆಲೆ ನಿಂತಾಗ ಆತನಿಂದ ಈ ಅನ್ವೇಷಣೆ ಮುಂದುವರೆಯಿತು. ನಾವಿಕ ಪತ್ರಿಕೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರವೇಶದ್ವಾರಕ್ಕೆ ಕವಿ ಸುಬ್ರಹ್ಮಣ್ಯಯ್ಯನವರ ಹೆಸರಿಡಬೇಕೆಂದು ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿಯವರು ಬರೆದ ಪತ್ರ ಗಮನಿಸಿ ಕವಿ ಸುಬ್ರಹ್ಮಣ್ಯಯ್ಯರೆಂದರೆ ನಮ್ಮ ಅಜ್ಜನೇ ಇರಬೇಕೆಂದು ಭಾವಿಸಿ ಅವರನ್ನು ನನ್ನ ತಮ್ಮ ವಿಚಾರಿಸಿದ. ಆದರೆ ಅವರು ಉಲ್ಲೇಖಿಸಿದ ಕವಿ ಸುಬ್ರಹ್ಮಣ್ಯಯ್ಯ ನಮ್ಮ ಅಜ್ಜ ಆಗಿರಲಿಲ್ಲ. ಆದರೆ ಕೆಳದಿಯ ಗುಂಡಾಜೋಯಿಸರನ್ನು ಸಂಪರ್ಕಿಸಲು ನೀಡಿದ ಅವರ ಸಲಹೆ ಮಾತ್ರ ಅತ್ಯಂತ ಅಮೂಲ್ಯವಾದುದಾಗಿತ್ತು. ಅವರ ಸಲಹೆಯಂತೆ ಕೆಳದಿ ಗುಂಡಾಜೋಯಿಸರನ್ನು ನನ್ನ ತಮ್ಮ ಸಂಪರ್ಕಿಸಿ ವಿಚಾರಿಸಿದಾಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಶ್ರೀ ಗುಂಡಾಜೋಯಿಸರ ಬಳಿ ಇದ್ದ ಕವಿಮನೆತನದ ವಂಶವೃಕ್ಷದ ವಿವರಗಳು ನಮ್ಮ ವಂಶವೃಕ್ಷದ ವಿವರಗಳಿಗೆ ತಾಳೆಯಾಯಿತು.. ಎರಡು ವಂಶವೃಕ್ಷದಲ್ಲಿನ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಶ್ರೀ ಗುಂಡಾಜೋಯಿಸರ ಹತ್ತಿರವಿದ್ದ ವಂಶವೃಕ್ಷದಲ್ಲಿ ಹೆಸರಿಸಿದ್ದ ಬಂಧುಗಳನ್ನು ವಿಚಾರಿಸಲಾಗಿ ಅವರು ನಮ್ಮ ಗೋತ್ರದವರೇ ಆಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಜ್ಜ ಸುಬ್ರಹ್ಮಣ್ಯಯ್ಯನವರನ್ನು ಕಂಡಿದ್ದವರು, ಕೇಳಿದ್ದವರೇ ಆಗಿದ್ದಲ್ಲದೆ ನಮ್ಮ ಅಜ್ಜ ಅವರುಗಳ ಮನೆಗೆ ಹೋಗಿಬರುತ್ತಿದ್ದುನ್ನು ಧೃಢಪಡಿಸಿದ್ದು ಸಂಬಂಧ ಸರಪಳಿ ಒಂದಾಗಿದ್ದುದನ್ನು ಖಚಿತಪಡಿಸಿತು. ಹಲವಾರು ರೀತಿಯಲ್ಲಿ ಪರಿಶೀಲಿಸಿದಾಗ ವಿಷಯ ಮತ್ತಷ್ಟು ದೃಢಪಟ್ಟಿತು. ನಾವು ಕವಿಮನೆತನದವರೆಂದು ತಿಳಿದು ನಮಗೆ ಅತೀವ ಸಂತೋಷವಾಯಿತು. ಸಫಲ ಅನ್ವೇಶಣೆ ಮಾಡಿದ ಸುರೇಶ ಮತ್ತು ಅವನ ಸಹಕಾರಿಗಳಿಗೆ ಅಭಿನಂದನೆ ಸಲ್ಲಬೇಕು.
     ಹುಡುಕುವ ಕಾರ್ಯದಲ್ಲಿ ಸ್ವಜನರೂ ಸೇರಿದಂತೆ ಇತರರಿಂದಲೂ ಕೆಲವರ ಅಪಹಾಸ್ಯ, ನಿಂದೆ, ಸಂಶಯ, ತಿರಸ್ಕಾರ, ಅಲಕ್ಷ್ಯ, ಅಸಹಕಾರಗಳ ಜೊತೆಗೆ ಮೆಚ್ಚುಗೆ ಸಹಕಾರಗಳೂ ಬೆರೆತು ಒಳ್ಳೆಯ ಅನುಭವ ದೊರಕಿತು. ನಂತರದಲ್ಲಿ ಕ್ಷಿಪ್ರ ಬೆಳವಣಿಗೆಗಳಾದವು. ಪರಸ್ಪರ ಪರಿಚಯವೇ ಇಲ್ಲದಿದ್ದ, ಸಂಪರ್ಕ ಇಲ್ಲದಿದ್ದ ಬಂಧುಗಳನ್ನು ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ತಮ್ಮ ಸುರೇಶನ ಮನೆಯಲ್ಲಿ ಕವಿಕುಟುಂಬಗಳ ಮತ್ತು ಬಂಧುಬಳಗದವರ ಪ್ರಥಮ ಸಮಾವೇಶ ಜರುಗಿತು. ಅನೇಕ ವರ್ಷಗಳ ನಂತರ ಪ್ರಥಮವಾಗಿ ಬಂಧುಗಳ ಮಿಲನದ ಕಾರಣ ಅರುಣ ಪಾರಾಯಣ ಪಠಣ, ಮುಂತಾದ ವಿಧಿ ವಿಧಾನಗಳನ್ನು ನಡೆಸಲಾಯಿತು. ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆಗಳ ಕುರಿತು ಒಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲಾ ಹಿರಿಯರನ್ನು, ಸಹಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಸ್ಥೂಲ ಪರಿಚಯ, ವಂಶಾವಳಿ ವಿವರಗಳನ್ನು ಒಳಗೊಂಡ ಸುರೇಶನ ಕೃತಿ ಹಳೇ ಬೇರು-ಹೊಸ ಚಿಗುರು ಪುಸ್ತಕ ಬಿಡುಗಡೆಯಾಯಿತು.
     ೨೫-೧೨-೦೭ರಲ್ಲಿ ಶ್ರೀ ಕೆಳದಿ ರಾಮಮೂರ್ತಿ ಮತ್ತು ಶ್ರೀ ನಾಗರಾಜಭಟ್ಟರ ಕುಟುಂಬಗಳ ಪ್ರಾಯೋಜಕತ್ವದಲ್ಲಿ ನಡೆದ ಎರಡನೆಯ ಸಮಾವೇಶದಲ್ಲಿ ಸುರೇಶ ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕ ಕರ್ಮಯೋಗಿ ಕಲಾವಲ್ಲಭ ಎಸ್.ಕೆ.ಲಿಂಗಣ್ಣಯ್ಯ -ಜೀವನಚರಿತ್ರೆ ಬಿಡುಗಡೆಯಾಯಿತು. ಬೆಂಗಳೂರಿನ ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬವರ್ಗದವರ ಪ್ರಾಯೋಜಕತ್ವದಲ್ಲಿ ೨೮-೧೨-೦೮ರಂದು  ನಡೆದ ಮೂರನೆಯ ಸಮಾವೇಶದಲ್ಲಿ  ನಾನು ನನ್ನ ಅಜ್ಜನ ಕುರಿತು ಬರೆದ ಕವಿ ಸುಬ್ರಹ್ಮಣ್ಯಯ್ಯ- ಒಂದು ಜೀವಗೀತೆ ಎಂಬ ಪುಸ್ತಿಕೆ ಬಿಡುಗಡೆ, ಕವಿ ಸುರೇಶ ಸಿದ್ಧಪಡಿಸಿದ ಎಲ್ಲಾ ಕುಟುಂಬಗಳವರ ಮತ್ತು ಬಂಧು ಬಳಗದವರ ವಿಳಾಸ, ದೂರವಾಣಿ ವಿವರಗಳುಳ್ಳ  ಕೈಪಿಡಿ ಬಿಡುಗಡೆಯೊಂದಿಗೆ ಕವಿಮನೆತನದ ಪತ್ರಿಕೆ ಕವಿಕಿರಣದ ಉದಯವಾಯಿತು. ೨೭-೧೨-೦೯ ರಂದು ತೀರ್ಥಹಳ್ಳಿಯಲ್ಲಿ ಶ್ರೀ ಶೇಷಾದ್ರಿ ದೀಕ್ಷಿತ್ ಮತ್ತು ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ಸಹೋದರರು ಮತ್ತು ಕುಟುಂಬವರ್ಗದ ಆಶ್ರಯದಲ್ಲಿ ನಾಲ್ಕನೆಯ ಸಮಾವೇಶ ನಡೆಯಿತು. ವರ್ಷದಿಂದ ವರ್ಷಕ್ಕೆ, ಸಮಾವೇಶದಿಂದ ಸಮಾವೇಶಕ್ಕೆ ಬಾಂಧವ್ಯಗಳು   ಗಟ್ಟಿಗೊಳ್ಳುತ್ತಾ, ಸಜ್ಜನಶಕ್ತಿಯ ಜಾಗೃತಿಯಾಗುತ್ತಾ ಹೋಗುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆಯಾಗಿದೆ.
ಮುನ್ನೋಟ:
     ಹಿರಿಯರುಗಳು, ಬಂಧುಗಳು ಚರ್ಚಿಸಿ ಕ್ರೋಢೀಕೃತ ವಂಶವೃಕ್ಷ ಸಿದ್ಧಪಡಿಸಿ ಪ್ರಥಮ ಸಮಾವೇಶದಲ್ಲಿ ಎಲ್ಲರಿಗೂ ನೀಡಲಾಯಿತು. ಕಾಲಕಾಲಕ್ಕೆ ಸೂಕ್ತ ಸೇರ್ಪಡೆ, ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
     ನಿಜ, ನಾವೇನೋ ನಮ್ಮ ಮೂಲವನ್ನು ಗುರುತಿಸಿಕೊಂಡೆವು. ಆದರೆ ಈ ಕೆಲಸ ಇಲ್ಲಿಗೇ ನಿಲ್ಲಬೇಕೇ ಎಂಬುದು ಮಹತ್ವದ ಪ್ರಶ್ನೆ. ೧೦-೧೧ ತಲೆಮಾರುಗಳ ವಿವರವಿರುವ ವಂಶವೃಕ್ಷ ಗಮನಿಸಿದಾಗ ನಮ್ಮಂತೆಯೇ ಹಲವಾರು ಕಳಚಿರುವ ಕೊಂಡಿಗಳು ಕಣ್ಣಿಗೆ ಬಿದ್ದು, ಆ ಕೊಂಡಿಗಳನ್ನೂ ಹುಡುಕಿ ಕೂಡಿಸುವ ಕೆಲಸ ಉಳಿದಿರುವುದು ನಮ್ಮ ಕೆಲಸ ಇನ್ನೂ ಬಾಕಿಯಿದೆ ಎಂಬುದನ್ನು ಸೂಚಿಸುವುದಿಲ್ಲವೇ? ನಮ್ಮಂತೆಯೇ ಕೆಳದಿ ಕವಿಕುಟುಂಬಕ್ಕೆ ಸೇರಿದ್ದು, ಕವಿಕುಟುಂಬದವರೆಂದು ಗೊತ್ತಿರದ ಹಲವಾರು ಕುಟುಂಬಗಳು ಇರಬಹುದಲ್ಲವೇ? ವಂಶವೃಕ್ಷದಲ್ಲಿ ಹೆಸರಿದ್ದು ತಮ್ಮ ಮಕ್ಕಳು, ಮೊಮ್ಮಕ್ಕಳ ಹೆಸರುಗಳಿಲ್ಲದವರ ಆತ್ಮಗಳು ತಮ್ಮ ಮಕ್ಕಳನ್ನೂ ಗುರುತಿಸಿ ಎಂದು ಕೇಳುತ್ತಿರಬಹುದಲ್ಲವೇ?
     ಸಂಬಂಧ ಸರಪಳಿಯ ಕೊಂಡಿಗಳು ಕಳಚಲು   ೧. ಮಕ್ಕಳಿಲ್ಲದಿರುವುದು, ೨. ವಿವಾಹವಾಗಿಲ್ಲದಿರುವುದು, ೩. ಅಕಾಲ ಮರಣ. ೪. ದಾಯಾದಿ ಮತ್ಸರ, ಕೌಟುಂಬಿಕ ಕಲಹ, ಇತ್ಯಾದಿ ಕಾರಣಗಳಿಂದ ದೂರವಾಗಿ ಕಡಿದ ಸಂಬಂಧಗಳು, ೫. ಸಂಬಂಧಗಳಿಗೆ ಬೆಲೆ, ಮಹತ್ವ ನೀಡದ ಮನೋಭಾವ, ೬. ಇತರ ಕಾರಣಗಳು, ಇತ್ಯಾದಿ ಹಲವಾರು ಕಾರಣಗಳಿರಬಹುದು. ಕಾರಣಗಳೇನೇ ಇರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಳಚಿದ ಕೊಂಡಿಗಳನ್ನು ಕೂಡಿಸುವ, ಸಂಬಂಧಗಳನ್ನು ಬೆಸೆಯುವ ಕಾರ್ಯಕ್ಕೆ ಮಾತ್ರ ಗಮನ ನೀಡುವುದು ನಮ್ಮ ಆದ್ಯತೆಯಾಗಲಿ. ಆಸಕ್ತರಿಗೆ, ಬಾಂಧವ್ಯಗಳನ್ನು ಗೌರವಿಸುವವರಿಗೆ ಮತ್ತು ಮುಂದಿನ ಪೀಳಿಗೆಗಳಿಗೆ ಇದು ನಿಸ್ಸಂದೇಹವಾಗಿ ಅಮೂಲ್ಯ ಕೊಡುಗೆ ಎಂಬುದರಲ್ಲಿ ಅನುಮಾನವಿಲ್ಲ.
ಕಳಚಿದ ಕೊಂಡಿಗಳು:
     ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ, ಕೆಳದಿ ನೃಪ ವಿಜಯ ಎಂಬ ಚಾರಿತ್ರಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಕೃತಿ ರಚಿಸಿದ್ದಲ್ಲದೆ ಕೆಳದಿ ಕವಿಮನೆತನ ಎಂದು ಹೆಸರು ಬರಲು ಕಾರಣನಾದ ಲಿಂಗಣ್ಣಕವಿ (ಕವಿ ಲಿಂಗಣ್ಣ/ಲಿಂಗಭಟ್ಟ)ನನ್ನು ನಮ್ಮ ಕುಟುಂಬದ ಮೂಲ/ ಪ್ರಧಾನ ವ್ಯಕ್ತಿಯಾಗಿ ಪರಿಗಣಿಸಿ ಇವನ ಪೀಳಿಗೆಯನ್ನು ಒಂದನೆಯ ಪೀಳಿಗೆ ಎಂದು ತೆಗೆದುಕೊಂಡು ನಮ್ಮ ಅನ್ವೇಶಣೆ ಪ್ರಾರಂಭವಾಗಬೇಕಿದೆ. ಈತನ ಕಾಲವನ್ನು ಇತಿಹಾಸಕಾರರು ಸುಮಾರು ಕ್ರಿ.ಶ. ೧೭೫೦ ಎಂದು ತಿಳಿಸಿದ್ದು ಇದರ ಆಧಾರದಲ್ಲೇ ನಂತರದ ಪೀಳಿಗೆಗಳವರ ಕಾಲಮಾನವನ್ನು ಲೆಕ್ಕ ಹಾಕೋಣ.
ಒಂದನೆಯ ಪೀಳಿಗೆ:
ವೆಂಕಪ್ಪನ ಮಗ ಎಂಬುದನ್ನು ಬಿಟ್ಟರೆ ಕವಿ ಲಿಂಗಣ್ಣನ ತಾಯಿಯ, ಪತ್ನಿಯ ಮತ್ತು ಇತರ ಅಣ್ಣ-ತಮ್ಮಂದಿರ (ಇದ್ದಲ್ಲಿ) ವಿವರ ತಿಳಿದುಬರುತ್ತಿಲ್ಲ.
ಎರಡನೆಯ ಪೀಳಿಗೆ:
ಕವಿಲಿಂಗಣ್ಣನ ಇಬ್ಬರು ಮಕ್ಕಳು ಶ್ಯಾಮಭಟ್ಟ ಮತ್ತು ವೆಂಕಣ್ಣ (ವೆಂಕಭಟ್ಟ)ರ ಪೈಕಿ ಶ್ಯಾಮಭಟ್ಟರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ಶ್ಯಾಮಭಟ್ಟರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ. ಲಿಂಗಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ಮೂರನೆಯ ಪೀಳಿಗೆ:
ಕವಿವೆಂಕಣ್ಣನ ಇಬ್ಬರು ಮಕ್ಕಳು ಚೆನ್ನಯ್ಯ ಮತ್ತು ಸುಬ್ಬಾಭಟ್ಟರ ಪೈಕಿ ಚೆನ್ನಯ್ಯರ ಬಗ್ಗೆ ಯಾವುದೇ ವಿವರ ತಿಳಿದಿಲ್ಲ. ವೆಂಕಣ್ಣನಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೋ ಇಲ್ಲವೋ ಎಂಬ ಮಾಹಿತಿಯಿಲ್ಲ.
ನಾಲ್ಕನೆಯ ಪೀಳಿಗೆ:
ಕವಿ ಸುಬ್ಬನ ಆರು ಮಕ್ಕಳು ವೆಂಕಭಟ್ಟ, ಲಿಂಗಾಭಟ್ಟ, ರಾಮಭಟ್ಟ, ಸುಬ್ಬಾಭಟ್ಟ(ಸುಬ್ರಹ್ಮಣ್ಯ?), ನಾರಣಭಟ್ಟ ಮತ್ತು ಕೃಷ್ಣಭಟ್ಟರ ಪೈಕಿ ವೆಂಕಣ್ಣನ ಹೊರತಾಗಿ ಉಳಿದ ಮಕ್ಕಳ ವಿವರ ಗೊತ್ತಾಗಬೇಕಿದೆ. ವೆಂಕಭಟ್ಟರ ಹೊರತಾಗಿ ಉಳಿದವರಿಗೆ ಮಕ್ಕಳಿರಲಿಲ್ಲವೆಂದು ಹೇಳಲಾಗಿದೆ.
ಐದನೆಯ ಪೀಳಿಗೆ:
ಅಪ್ಪಣ್ಣಭಟ್ಟ ಮತ್ತು ಶಿವಭಟ್ಟ(ಶಿವರಾಮಭಟ್ಟ)ರ ಪತ್ನಿಯರ ಹೆಸರು ತಿಳಿಯಬೇಕಿದೆ.
ಆರನೆಯ ಪೀಳಿಗೆ:
ವೆಂಕಭಟ್ಟ, ಕೊಲ್ಲೂರಪ್ಪ ಮತ್ತು ಶ್ಯಾಮಭಟ್ಟರ ಪತ್ನಿಯರ ಹೆಸರು ತಿಳಿಯಬೇಕಿದೆ
ಏಳನೆಯ ಪೀಳಿಗೆ:
ವೆಂಕಭಟ್ಟರ ಮೂವರು ಮಕ್ಕಳು ಸುಬ್ಬಾಭಟ್ಟ, ಕೃಷ್ಣಭಟ್ಟ ಮತ್ತು ಶ್ಯಾಮಭಟ್ಟರ ಕುರಿತು ವಿವರ ತಿಳಿಯಬೇಕಿದೆ. ಕವಿ ರಾಮಣ್ಣರ ಮಗ ಹುಚ್ಚೂರಾಯರ ಬಗ್ಗೆ ಮಾಹಿತಿ ಸಿಗಬೇಕು.
     ಏಳನೆಯ ಪೀಳಿಗೆಗೆ ಸೇರಿದ ಕೆಲವು ಕವಿ ಕುಟುಂಬಗಳವರು ಮತ್ತು ನಂತರದ ಎಂಟು, ಒಂಬತ್ತು ಮತ್ತು ಹತ್ತನೆಯ ಪೀಳಿಗೆಗಳವರು ಪ್ರಸ್ತುತ ನಮ್ಮೊಡನಿದ್ದು ಅಮೂಲ್ಯ ಮಾಹಿತಿಗಳನ್ನು ಒದಗಿಸಬಹುದಾಗಿರುತ್ತದೆ. ಕವಿಕುಟುಂಬಕ್ಕೆ ಸೇರಿದ ಕೆಳದಿಯಲ್ಲಿದ್ದ ದಿ.ತಮ್ಮಣ್ಣಭಟ್ಟರ ಕುರಿತು ಸ್ವಲ್ಪ ಮಾಹಿತಿ ಲಭ್ಯವಾಗಿದ್ದು ಪೂರ್ಣ ಮಾಹಿತಿ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ.
     ಕಳಚಿದ ಕೊಂಡಿಗಳನ್ನು ಕೂಡಿಸುವ ಕೆಲಸಕ್ಕೆ ಎಲ್ಲರೂ ಮನಸ್ಸು ಮಾಡಿದಲ್ಲಿ, ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಜೋಯಿಸ್, ದೀಕ್ಷಿತ್ ಮತ್ತು ಇತರ ಕುಟುಂಬಗಳವರು ಮತ್ತು ಆಸಕ್ತರು  ಕೈಜೋಡಿಸಿದಲ್ಲಿ ಈ ಕಾರ್ಯ ಸಾಧಿಸುವುದು ಕಷ್ಟವಾಗಲಾರದು.
     ಕಳಚಿದ ಕೊಂಡಿಗಳನ್ನು ಹುಡುಕುವ ಕಾರ್ಯದಲ್ಲಿ ನಿಮ್ಮೊಂದಿಗೆ ಇರುವ,
                               -ಕ.ವೆಂ.ನಾಗರಾಜ್. 
***
('ಕವಿಕಿರಣ'ದ 01-06-2010ರ ಸಂಚಿಕೆಯ ಸಂಪಾದಕೀಯ).

No comments:

Post a Comment