ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Wednesday, March 2, 2011

ಬಾಲಕರ ಆಶೀರ್ವಾದದ ಪದ

ರಾಗ || ನೀಲಾಂಬರಿ

ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡು
ನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳು
ಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗು ಪ್ರ-
ಸನ್ನ ಮೂರುತಿಯಾಗು
ರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನು
ಭೂಸುರರಿಗಿತ್ತು ಮನ್ನಿಸು ಉದಾರನಾಗು
ಮನ್ನೆಯರೆಲ್ಲರು ಬಂದು
ನಿನ್ನನೋಲೈಸಲೆಂದು ಅಪರ್ಣೆ ಪರಸಿದಳು                                   || 1 ||

ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚ
ಕೋಟಿ ಗಜದಾನ ಶಟಕೋಟಿಯಶ್ವದಾನಗಳ
ಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-
ರೀಟಿ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-
ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿ
ಧಾಟಿಯಾಗಿರುವನಾಗು
ಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿ
ಜೂಟ ಭಕ್ತನಾಗು                                                                     || 2 ||

ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತ
ಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-
ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗು
ಪೆತ್ತವರು ನೋಡಿ ನಲಿವುತ್ತಿರಲು ಭೂಸುರರು
ಮುತ್ತಿನಕ್ಷತೆಯನಾಂತು
ಪೃಥ್ವಿಯ ವೊಳಗೆ ಲ್ಲ್ಲಾ ಸ-
ರ್ವೋತ್ತಮ ಪುರುಷನಾಗೆನುತ್ತ
ಮಸ್ತಕದಿ ತಳುವುತ್ತ ಪರಸಿದರು                                                  || 3 ||

ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-
ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-
ಗೇಂದ್ರ ನೀನಾಗು
ಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರ
ವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-
ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗ
ಇಂದಿರೆ ಪರಸಿದಳು                                                                 || 4 ||

ಧೀರನಾಗುದಾರನಾಗು ಸೂರಿಜನವಾರಕೆ ಮಂ-
ದಾರನಾಗು ಸಂಗರ ಶೂರನಾಗು ವೈರಿ ಜ-
ಝ್ಝೂರನಾಗು ಮಣಿಮಯ ಹಾರನಾಗು
ವೀರಾಧಿವೀರ ನೀನಾಗು
ಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗು
ಕಾರುಣ್ಯಸಾಗರನಾಗು ಕಾಮಿತಫಲಿದನಾಗು
ಶ್ರೀ ರಾಮೇಶನ ಪಾದಾಬ್ಜ ವಾರಿಜ ಭಕ್ತನಾಗೆಂದು
ಶಾರದೆ ಪರಸಿದಳು                                                                  || 5 ||

No comments:

Post a Comment