ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Saturday, March 5, 2011

ವಿಘ್ನೇಶ್ವರ ಪ್ರಾರ್ಥನೆ


ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮ
ತಾಯಿ ತಂದೆಯು ಕಲಿಸಿದ ವೋಜೆ                                             || ಪ ||

ಜಾತಕರ್ಮಕೆ ನಾಮಕರಣಕೆ ಚೌಲಕೆ
ಸಾತಿಶಯಾಕ್ಷರ ಪ್ರಾರಂಭಕೆ
ನೂತನ ವಿದ್ಯಾರಂಭಕೆ ಮುಂಜಿಗೆ
ಯಾತಕೂ ಶ್ರೀ ಗಣಪತಿ ಜಯ ಜಯವೆಂದೂ                                 || 1 ||

ಮದುವೆಗೆ ಋತುಶಾಂತಿಗೆ ಸೀಮಂತಕೆ
ಮುದದಿಂದ ಜನನವ ಬರೆವುದಕೆ
ಸದಮಲ ಯಜ್ಞಾರಂಭಕೆ ಸಮರಕೆ
ಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ                                || 2 ||

ದಾನಕೆ ಧರ್ಮಕೆ ಪರ ಉಪಕಾರಕೆ
ಜ್ಞಾನಮಾರ್ಗಕೆ ಗಾನಕೆ ಗೀತೆಗೆ
ನಾನಾವಿಧ ಸುವ್ರತ ತೀರ್ಥಯಾತ್ರೆಗೆ
ನೀನೆ ಗತಿ ಗಣಪತಿ ಜಯ ಜಯವೆಂದೂ                                        || 3 ||

ಕೆರೆ ಕಾಲುವೆ ಕೂಪಗಳ ವಿಸ್ತಾರಕೆ
ಸುರಗೃಹ ರಥ ಉತ್ಸವ ಪೂಜೆಗೆ
ಸರಸ ಸರೋವರಗಳ ನಿರ್ಮಾಣಕೆ
ಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ                                 || 4 ||

ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದ
ಗರುಡಗೆ ಅಮೃತವು ಸಿದ್ದಿಸಿತು
ವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶ
ಶಿರನ ಗೆಲಿದನೆನೆ ಗಣಪತಿ ಜಯವೆಂದೂ                                      || 5 ||

ದ್ವಾಪರಯುಗದಲಿ ಧರ್ಮರಾಯನು ನಿಮ್ಮ
ನೇ ಪೂಜಿಸಿ ಕೌರವರ ಗೆಲಿದಾ
ಭೂಪರ ಜೈಸಿ ತುರಗವ ತಂದ ಸಾಂಬನು
ಶ್ರೀಪತಿನುತ ಗಣಪತಿ ಜಯ ಜಯವೆಂದೂ                                    || 6 ||

ವರದಾನದಿಯ ತೀರವಾಸ ಶ್ರೀ ಕೆಳದಿಯ
ಪುರವರಾಧೀಶ ರಾಮೇಶ್ವರನ
ಪರಮಮೋಹದ ಪುತ್ರ ಪಾವನತರಗಾತ್ರ
ವರದ ಶ್ರೀ ಗಣಪತಿ ಜಯ ಜಯ ಜಯವೆಂದೂ                               || 7 ||


 [ನಾಟರಾಗದಲ್ಲಿ ನುಡಿಸಬಹುದಾಗಿದೆ: ಆದಿತಾಳ]

No comments:

Post a Comment