ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, March 6, 2011

ಬಾಲೆಯರ ಆಶೀರ್ವಾದದ ಹಾಡು

ತಾಳ: ಮಿಶ್ರಛಾಪು                                      ರಾಗ: ತೋಡಿ

ಶ್ರೀ ಗಣಪತಿಯ ಪಾದಾಬ್ಜಕೆ ನಮಿಸಿ
ರಾಗದಿಂದಲಿ ಶಾರದೆಯ ಸ್ಮರಿಸಿ
ನಾಗಭೂಷಣನ ಪದಾಬ್ಜಯುಗಳಕೆ ತಲೆ
ವಾಗಿ ಬಾಲೆಯರಾಶೀರ್ವಾದದ ಪದಗಳ
ರಾಗದಿ ಪಾಡಿ ಪೊಗಳುವೆ                                                           || 1 ||

ಸಾಲಿ ಸೀರೆಯನುಟ್ಟು ಸರಮುತ್ತಕಟ್ಟು
ಬಾಲಕಿಯರೊಳು ಕಟ್ಟಾಣಿ ನೀನಾಗು
ಮೇಲೆನಿಪಷ್ಟಪುತ್ರರನು ಪಡೆದು ಸುಖಿ
ಬಾಳು ಸ್ತ್ರೀಯರಿಗೆಲ್ಲಾ ದೊರೆಯಾಗು
ಶ್ರೀ ಮೈಲಾರಲಿಂಗನ ಕೃಪೆಯಿಂದಾ                                             || 2 ||

ಪಲ್ಲಕ್ಕಿಯ ಸಾನಂದದೊಳೇರು
ಹಲ್ಲಣಿಸಿದ ಕರಿತುರಗವನೇರು
ಎಲ್ಲಾಭರಣವನಿಟ್ಟು ಸುಖದಿಪ್ರಾಣ
ದೊಲ್ಲಭಸಹಿತ ಸಂತೋಷದೊಳಿರು ಶ್ರೀ
ಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ                                        || 3 ||

ಚಂದ್ರಕಸ್ತುರಿಯ ತಿಲಕಗಳನಿಟ್ಟು
ಚಂದದಿ ಕುಂಕುಮ ರೇಖೆಯನಿಟ್ಟು
ಇಂದೀವರನೇತ್ರಕೆ ಕಪ್ಪಿಟ್ಟು ಅ
ಚಂದ್ರಾರ್ಕವು ಸುಖಬಾಳು ಶೃಂಗೇರಿಯ
ಚಂದ್ರಮೌಳೀಶನ ಕೃಪೆಯಿಂದಾ                                                   || 4 ||

ಅರಿಶಿನ ಚೂರ್ಣವನನುಲೇಪಿಸುತ
ಪರಿಮಳಗಂಧವ ಪಸರಿಸಿಕೊಳುತ
ಕರಿಯಮಣಿಯ ಮುತ್ತಿನಸರಗಳನಿಟ್ಟು
ಪರಮಸಂತೋಷದೊಳಿರು ಶ್ರೀ ಹಂಪೆಯ
ವಿರೂಪಾಕ್ಷನ ಕೃಪೆಯಿಂದಾ                                                         || 5 ||

ಪರಿಮಳಿಸುವ ಪುಷ್ಪಸರಗಳ ಮುಡಿದು
ಗುರಿಹಿರಿಯರ ಆಶೀರ್ವಾದವ ಪಡೆದು
ಹರುಷದಿ ಪುತ್ರಪೌತ್ರರ ಸಲಹುತ ಪತಿ
ಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯ
ವರ ಸುಬ್ರಹ್ಮಣ್ಯನ ಕೃಪೆಯಿಂದಾ                                                 || 6 ||

ಸರಸ್ವತಿಯಂತೆ ವಿದ್ಯಾವಂತೆಯಾಗು
ಸಿರಿಯಂತೆ ಸೌಭಾಗ್ಯವಂತೆ ನೀನಾಗು
ಅರುಂಧತಿಯಂತೆ ಪತಿವ್ರತೆಯಾಗುತ
ಪರಮಾನಂದಗೊಳಿರು ಶ್ರೀ ಕೆಳದಿಯ
ಪುರದ ರಾಮೇಶನ ಕೃಪೆಯಿಂದಾ                                                  || 7 ||

No comments:

Post a Comment