ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, May 31, 2016

ಪುಸ್ತಕದ ಹುಳ


ಪುಸ್ತಕದ ಹುಳ

ಪುಟ್ಟಿ ಚಿಕ್ಕವಳಿದ್ದಾಗ ತುಂಬಾ ಓದುವ ಹುಚ್ಚು. ಮನೆಗೆ ಎಷ್ಟು ಪುಸ್ತಕಗಳನ್ನು ತಂದರೂ ಸಾಲದು, ಇನ್ನೂ ಬೇಕು, ಎಂದು ಹಠಮಾಡಿ ತರಿಸಿಕೊಳ್ಳುತ್ತಿದ್ದಳು. ಮಗಳು ಚೆನ್ನಾಗಿ ಓದಲಿ ಎಂದು ಅವಳ ಅಪ್ಪ ಇನ್ನಷ್ಟು, ಮತ್ತಷ್ಟು ಎಂದು ಮನೆಯ ತುಂಬಾ ಪುಸ್ತಕದ ರಾಶಿಯನ್ನೇ ಹಾಕಿಬಿಟ್ಟಿದ್ದರು. ಸಾಲದೆಂದು ಮನೆಯ ಹತ್ತಿರ ಇದ್ದಬದ್ದ ಎಲ್ಲಾ ಗ್ರಂಥಾಲಯಕ್ಕೂ ಅವಳನ್ನು ಮೆಂಬರ್ ಮಾಡಿಸಿ ಅದರಿಂದಲೂ ಅವಳಿಗೆ ಪುಸ್ತಕಗಳು ಸಿಗುತ್ತಿದ್ದವು. ಅವಳ ಈ ಪುಸ್ತಕದ ಹುಚ್ಚು ಯಾವ ಮಟ್ಟಕ್ಕೆ ಏರಿತೆಂದರೆ ಊಟಮಾಡುವಾಗಲೂ ಪುಸ್ತಕ, ಟಾಯ್ಲೆಟ್‍ಗೆ ಹೋದಾಗಲೂ ಪುಸ್ತಕ. ಇದನ್ನು ನೋಡಿ ಅವಳಿಗೆ ನೀನು ಹೀಗೇ ಓದುತ್ತಿದ್ದರೆ ಒಂದು ಪುಸ್ತಕದ ಹುಳುವಾಗಿಬಿಡುವೆ ಎಂದು ಎಲ್ಲರೂ ರೇಗಿಸುತ್ತಿದ್ದರು. ಅವರಮ್ಮನಿಗಂತೂ ಇವಳ ಈ ಪರಿ ಹುಚ್ಚನ್ನು ನೋಡಿ ಎಲ್ಲಿಲ್ಲದ ಸಿಟ್ಟು. ಉಳಿದವರು, ‘ಹೋಗಲಿ ಬಿಡು, ಓದು ಓದು ಎಂದರೂ ಪುಸ್ತಕವನ್ನು ಹಿಡಿಯದ ಮಕ್ಕಳಿರುವಾಗ ನೀನು ಓದಿದರೆ ಹೀಗೇಕೆ ಸಿಟ್ಟು ಮಾಡಿಕೊಳ್ಳುತ್ತೀಯಾ?’ ಎಂದು ಸಮಾಧಾನ ಹೇಳಿದರೂ ಅವಳ ಅಮ್ಮ ಬಿಡಲೊಲ್ಲಳು. ಅವಳು ಬೈದಷ್ಟೂ ಇವಳ ಹುಚ್ಚು ಹೆಚ್ಚಾಗುತ್ತಿತ್ತು.
ಕಡೆಗೆ ಯಾರಿಂದಲೂ ಅವಳ ಈ ಪುಸ್ತಕದ ಹುಚ್ಚನ್ನು ಬಿಡಿಸಲಾಗದೇ ಅವಳ ಅಜ್ಜಿ ‘ಹೋಗಲಿ ಪುಟ್ಟಿ, ನೀನು ಎಷ್ಟಾದರೂ ಪುಸ್ತಕ ಓದಿಕೊ, ಆದರೆ ಊಟಮಾಡುವಾಗ ಮಾತ್ರ ಓದುವುದನ್ನು ನಿಲ್ಲಿಸು, ಇಲ್ಲವಾದರೆ ತಿಂದ ಅನ್ನ ಮೈಗೆ ಹತ್ತುವುದಿಲ್ಲ ಎಂದು ಗೋಗರೆಯುತ್ತಿದ್ದರು. ಇದು ಕೆಲವೇ ದಿನ ನಡೆಯಿತು. ಆದರೆ ನಂತರ ಂiÀiಥಾಪ್ರಕಾರ ‘ನಾಯಿಬಾಲ ಡೊಂಕು ಅನ್ನುತ್ತಾರಲ್ಲ ಹಾಗೆ ಅವಳ ಹಳೆಯ ಚಾಳಿ ಮುಂದುವರೆಯಿತು. ಇದನ್ನು ತಡೆಯಲು ಅವಳು ಊಟ ಮಾಡುವಾಗ ಹತ್ತಿರ ಯಾವ ಪುಸ್ತಕವೂ ಕಾಣದಂತೆ ಬಚ್ಚಿಡುತ್ತಿದ್ದರು. ಆದರೂ ಅವಳಿಗೆ ಏನಾದರೂ ಓದುವ ಚಪಲ. ಏನೂ ಮುಚ್ಚಿಟ್ಟರೂ ಅಂದಿನ ದಿನಪತ್ರಿಕೆ ಅಲ್ಲೇ ಎಲ್ಲಾದರೂ ಬಿದ್ದಿರುತ್ತಿತ್ತು, ಅದನ್ನೇ ಹಿಡಿದು ಕೂತುಬಿಡುತ್ತಿದ್ದಳು. ಒಮ್ಮೆ ಹೀಗೇ ಹೊರಗಿನಿಂದ ತಂದ ತಿಂಡಿಯನ್ನು ತಿನ್ನಬೇಕಾಯಿತು. ಅವಳಿಗೆ ಯಥಾಪ್ರಕಾರ ಓದಲು ಏನೂ ಸಿಗಲಿಲ್ಲ, ಅಂದಿನ ಪತ್ರಿಕೆಯೂ ಅವಳ ತಾತನ ಬಳಿ ಇತ್ತು, ಕಡೆಗೆ ಅವಳು ಆ ತಿಂಡಿಯನ್ನು ಕಟ್ಟಿದ್ದ ಕಾಗದವನ್ನೇ ಹಿಡಿದು ಓದಿಕೊಂಡು ತಿನ್ನ ತೊಡಗಿದಳು. ಇದನ್ನು ನೋಡಿಯಂತೂ ಉಳಿದವರಿಗೆ ತಲೆಯನ್ನು ಚಚ್ಚಿಕೊಳ್ಳುವುದೊಂದು ಬಾಕಿ.
ಈ ಪುಟ್ಟಿಗೆ ಇನ್ನೊಂದು ಕೆಟ್ಟ ಅಭ್ಯಾಸವಿತ್ತು. ಅದೇನೆಂದರೆ ಈ ತರಕಾರಿ ಬೇಡ, ಆ ತರಕಾರಿ ಬೇಡ ಎಂದು ಕ್ಯಾತೆ ತೆಗೆಯುವುದು. ಕಡೆಗೆ ಅವಳ ಅಜ್ಜಿ ಇದಕ್ಕೆ ಒಂದು ಉಪಾಯ ಮಾಡಿದರು. ಅವಳಿಗೆ ಇಷ್ಟವಾದ ಪುಸ್ತಕಗಳನ್ನು ಕೈಗೆ ಸಿಗುವಂತೆಯೇ ಇಟ್ಟು ಅವಳು ಅದರಲ್ಲಿ ಮಗ್ನಳಾಗಿರುವಾಗ ಮೆಲ್ಲಗೆ ಅವಳಿಗಿಷ್ಟವಿಲ್ಲದ ಕೆಲವು ತರಕಾರಿಯ ಅಡುಗೆಗಳನ್ನು ಮಾಡಿ ಬಡಿಸಿಬಿಡುತ್ತಿದ್ದರು. ಆ ಪುಟ್ಟಿ ಎಂತಹ ಪುಸ್ತಕದ ಹುಳ ಎಂದರೆ ಅದನ್ನು ಗಮನಿಸದೇ ಎಲ್ಲವನ್ನೂ ತಿಂದು ಬಿಟ್ಟಿರುತ್ತಿದ್ದಳು. ಅಜ್ಜಿಗಂತೂ ಸಂತೋಷವೋ ಸಂತೋಷ. ಹೀಗೆ ಅವಳಿಗೆ ಪರೋಕ್ಷವಾಗಿ ಇಷ್ಟ ಪಡದ ಆದರೆ ಆರೋಗ್ಯವಾದ ಒಳ್ಳೆಯ ತರಕಾರಿಗಳೆಲ್ಲವೂ ಅವಳ ಹೊಟ್ಟೆ ಸೇರುತ್ತಿದ್ದವು. ಋಣಾತ್ಮಕವಾದುದನ್ನೇ ಧನಾತ್ಮಕವಾಗಿ ಪರಿವರ್ತಿಸಿದ ಅವಳ ಅಜ್ಜಿಯನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು.

ಈಗ ಪುಟ್ಟಿ ದೊಡ್ಡವಳಾಗಿದ್ದಾಳೆ. ಅವಳ ಅಜ್ಜಿ ಈಗ ಇಲ್ಲ. ಆದರೆ ಅಜ್ಜಿಯು ಮಾಡಿದ ಉಪಾಯ ಪುಟ್ಟಿಗೆ ಗೊತ್ತಾಗಿ ಹೋಗಿದೆ. ಅವಳು ಈಗಲೂ ಮೊದಲಿನಂತೆಯೇ ಪುಸ್ತಕದ ಹುಳವಾದರೂ ಊಟಮಾಡುವಾಗ ಉಳಿದವರೊಂದಿಗೆ ಹರಟುತ್ತಾಳೆ, ಎಲ್ಲಾ ತರಕಾರಿಗಳನ್ನೂ ತಕರಾರಿಲ್ಲದೇ ತಿನ್ನುತ್ತಾಳೆ. ಎಲ್ಲಾ ಅವಳ ಅಜ್ಜಿಯ ಕೃಪೆ ಎಂದೇ ಎಲ್ಲರ ಭಾವನೆ.

No comments:

Post a Comment