ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, May 31, 2016

ಅಣ್ಣ ಹಲ್ಲು ತಿಂದಿದ್ದು


ಅಣ್ಣ ಹಲ್ಲು ತಿಂದಿದ್ದು

ನನ್ನ ಅಣ್ಣನಿಗೆ ಚಿಕ್ಕ ಮಗಳಿದ್ದಳು. ಅವಳ ಹೆಸರು ದಿವ್ಯಾ ಎಂದಾದರೂ ನಾವು ಮುದ್ದಿನಿಂದ ಅವಳನ್ನು ಪುಟ್ಟಿ ಎಂದು ಕರೆಯುತ್ತಿದ್ದೆವು. ಅವಳು ಬಲು ಚೂಟಿ ಹುಡುಗಿ.
ಒಂದು ದಿನ ಮನೆಯಲ್ಲೆ ಮಾಡಿದ್ದ ಸಮಾರಂಭಕ್ಕೆ ನನ್ನ ಅಣ್ಣ ಅವನ ಮಿತ್ರರನ್ನು, ಸಹೋದ್ಯೋಗಿಗಳನ್ನು ಕರೆದಿದ್ದ. ಮನೆಯ ತುಂಬಾ ಅಂದು ಜನವೋ ಜನ. ಎಲ್ಲರೂ ಪುಟ್ಟಿಯನ್ನು ಮಾತನಾಡಿಸುವವರೇ. ಸರಿ, ಊಟದ ಸಮಯವಾಯಿತು. ಎಲ್ಲರೂ ಊಟಕ್ಕೆ ಕುಳಿತಿದ್ದರು. ನನ್ನ ಅಣ್ಣನನ್ನೂ ಬಲವಂತವಾಗಿ ಅವರೊಂದಿಗೇ ಕೂಡಿಸಿಕೊಂಡರು. ಆಗ ಪುಟ್ಟಿಯೂ ನಾನೂ ಅಣ್ಣನ ಪಕ್ಕ ಎಂದು ರಾಗ ತೆಗೆದು ಅಲ್ಲೇ ಒಂದು ಎಲೆಯನ್ನು ಹಾಕಿಸಿಕೊಂಡಳು. ಅಣ್ಣನೇ ಪುಟ್ಟಿಗೂ ಊಟ ತಿನ್ನಿಸುತ್ತಿದ್ದನು. ಹೀಗೆ ಊಟಮಾಡುವಾಗ ಇದ್ದಕಿದ್ದಹಾಗೆ ಅಣ್ಣನಿಗೆ ಕೆಮ್ಮು ಬಂದು ಸ್ವಲ್ಪ ಒದ್ದಾಡುವಂತೆ ಆಯಿತು. ಆಗ ಅವನು ಕಟ್ಟಿಸಿಕೊಂಡಿದ್ದ ಮುಂದಿನ ಎರಡು ಹಲ್ಲು ಅಲುಗಾಡಿ, ಅವನು ಮೆಲ್ಲಗೆ ಆಕಡೆ, ಈಕಡೆ ನೋಡಿ ಯಾರಿಗೂ ಕಾಣದಂತೆ ಹಲ್ಲನ್ನು ತೆಗೆದು ಮತ್ತೆ ಸರಿಯಾಗಿ ಬಾಯೊಳಗಿಟ್ಟುಕೊಂಡನು. ಆದರೆ ಇದು ಪುಟ್ಟಿಯ ಚುರುಕು ಕಣ್ಣಿಗೆ ಕಾಣಿಸಿ ಬಿಟ್ಟಿತು. ಅವನು ಇಟ್ಟುಕೊಂಡಿದ್ದೇ ತಡ, ಪುಟ್ಟಿ ಅವನನ್ನೇ ನೋಡತೊಡಗಿದಳು. ನಂತರ ಬಾಯಿ ತೆಗಿ ಎಂದು ತೆಗಿಸಿದಳು. ನಂತರ ‘ಆ ಮಾಡು ಎಂದು ನಾಲಿಗೆ ತೆಗೆಸಿದಳು. ನಂತರ ಜೋರಾಗಿ ಎಲ್ಲರಿಗೂ ಕೇಳುವಂತೆ ‘ ಅಯ್ಯೋ, ಅಣ್ಣ ಹಲ್ಲನ್ನು ತಿಂದು ಬಿಟ್ಟರು ಎಂದು ಕಿರುಚಿಬಿಟ್ಟಳು. ಎಲ್ಲರೂ ‘ಏನಾಯಿತೇ?, ಅಣ್ಣ ಏನು ತಿಂದರು?’ ಎಂದು ಗಾಬರಿಯಿಂದ ಮತ್ತೆ ಕೇಳಿದಾಗ, ‘ಅಣ್ಣ ಹಲ್ಲನ್ನು ಬಾಯಿಯಿಂದ ತೆಗೆದು ಆಮೇಲೆ ಮತ್ತೆ ಅದನ್ನು ಬಾಯಿಯೊಳಗೆ ಹಾಕಿಕೊಂಡು, ಅಗೆದು ತಿಂದು ಬಿಟ್ಟರು, ನಾನು ಅದನ್ನು ನೋಡಿದೆ ಎಂದು ಡಂಗೂರವನ್ನು ಸಾರಿಯೇ ಬಿಟ್ಟಳು.

ಈಗ ಅಣ್ಣನ ಗುಟ್ಟು ರಟ್ಟಾಗಿತ್ತು. ಅವನು ಇದನ್ನು ಯಾರಿಗೂ ಹೇಳಿರಲಿಲ್ಲ, ಮನೆಯವರಿಗೆ ಮಾತ್ರ ಗೊತ್ತಿತ್ತು. ಹಿಂದೆ ಅಪಘಾತವೊಂದರಲ್ಲಿ ಅವನ ಮುಂದಿನ ಎರಡು ಹಲ್ಲಿಗೆ ಏಟು ಬಿದ್ದು ನಂತರ ಅದನ್ನು ತೆಗೆಸಿ ಹಲ್ಲನ್ನು ಕಟ್ಟಿಸಿಕೊಂಡಿದ್ದನು. ನೋಡಿದವರಿಗೆ ಅದು ಗೊತ್ತಾಗುತ್ತಲೇ ಇರಲಿಲ್ಲ. ಆದರೆ ಇಂದು ಆದ ಅವಾಂತರದಲ್ಲಿ ಅವನ ನಕಲಿ ಹಲ್ಲಿನ ವಿಷಯ ಜಗಜ್ಜಾಹೀರಾಗಿತ್ತು. ಎಲ್ಲರೂ ಮುಸಿಮುಸಿ ನಕ್ಕು, ಅಂತೂ ನಿನ್ನ ಗುಟ್ಟನ್ನು ರಟ್ಟು ಮಾಡಲು ಮಗಳು ಹುಟ್ಟಿಬರಬೇಕಾಯಿತು ಎಂದು ಅಣ್ಣನನ್ನು ರೇಗಿಸಿದರು. ಅಣ್ಣನಿಗೋ ಆ ಪುಟ್ಟ ಮಗಳನ್ನು ಅನ್ನುವಹಾಗಿಲ್ಲ, ಬಿಡುವಹಾಗಿಲ್ಲ, ಒಂದು ರೀತಿಯ ನಾಚಿಕೆ, ಸಿಟ್ಟು ಎಲ್ಲವೂ ಆವರಿಸಿಬಿಟ್ಟಿತ್ತು. ಬಂದವರೆಲ್ಲರೂ ‘ನೀನು ಹಲ್ಲು ಕಟ್ಟಿಸಿಕೊಂಡದ್ದನ್ನು ಹಾಗೆಯೇ ಹೇಳ ಬಹುದಿತ್ತು, ಹೀಗೆ ಸಮಾರಂಭಮಾಡಿ ಹೇಳಬೇಕಿತ್ತೇ?’ ಎಂದು ರೇಗಿಸುತ್ತಿದ್ದರು. ಇನ್ನು ಕೆಲವರು ‘ಹೋಗಲಿ, ಹಾಗಾದರೂ ನಮಗೆ ಪುಷ್ಖಳವಾದ ಮೃಷ್ಠಾನ್ನ ಭೋಜನ ಸಿಕ್ಕಿತಲ್ಲಾ ಎಂದು ಅವನ ಸಿಟ್ಟಿಗೆ ಮತ್ತಷ್ಟು ತುಪ್ಪ ಹುಯ್ಯುತ್ತಿದ್ದರು. ಅಣ್ಣ ಮಾತ್ರ ಸಂಕೋಚದಿಂದ ಕುಗ್ಗಿಹೋಗಿದ್ದರೂ ತೋರಿಸಿಕೊಳ್ಳದೇ ತಾನೂ ತೋರ್ಪಡಿಕೆಯ ನಗುವನ್ನು ಮುಖದಮೇಲೆ ಧರಿಸಿದವನಂತಿದ್ದ. ಪುಟ್ಟಿ ಮಾತ್ರ ಏನೂ ತಿಳಿಯದವಳಂತೆ ತನ್ನ ಪಾಡಿಗೆ ತಾನು ಆಡಿಕೊಂಡಿದ್ದಳು. ಇಂದಿಗೂ ಅಣ್ಣನ ಹಲ್ಲಿನ ಕತೆ ಅವನ ಕಛೇರಿಯಲ್ಲಿ ಜನಜನಿತವಾಗಿದೆ.

2 comments:

  1. ಆತ್ಮೀಯ ಜಗದೀಶ್ ರವರೇ,

    ನಿಮ್ಮ ಲೇಖನಗಳನ್ನು ಕವಿಮನೆತನದ ಬ್ಲಾಗ್ ನಲ್ಲಿ ಹಾಕಿರುವುದು ನಿಜಕ್ಕೂ ತುಂಬಾ ಸೂಕ್ತವಾದ ಮತ್ತು ಸ್ವಾಗತಾರ್ಹವಾದ ವಿಚಾರ. ನಿಮ್ಮ ಲೇಖನಗಳು ತುಂಬ ಜನರನ್ನು ತಲುಪಲಿ ಮತ್ತು ನಿಮ್ಮ ಈ ಪ್ರಯತ್ನ ನಿರಂತರ ಮುಂದುವರಿಯಲಿ ಎಂದು ಮನಸಾರೆ ಹಾರೈಸುವೆನು. ಶುಭವಾಗಲಿ.

    ReplyDelete
  2. ಆತ್ಮೀಯ ಜಗದೀಶ್ ರವರೇ,

    ನಿಮ್ಮ ಲೇಖನಗಳನ್ನು ಕವಿಮನೆತನದ ಬ್ಲಾಗ್ ನಲ್ಲಿ ಹಾಕಿರುವುದು ನಿಜಕ್ಕೂ ತುಂಬಾ ಸೂಕ್ತವಾದ ಮತ್ತು ಸ್ವಾಗತಾರ್ಹವಾದ ವಿಚಾರ. ನಿಮ್ಮ ಲೇಖನಗಳು ತುಂಬ ಜನರನ್ನು ತಲುಪಲಿ ಮತ್ತು ನಿಮ್ಮ ಈ ಪ್ರಯತ್ನ ನಿರಂತರ ಮುಂದುವರಿಯಲಿ ಎಂದು ಮನಸಾರೆ ಹಾರೈಸುವೆನು. ಶುಭವಾಗಲಿ.

    ReplyDelete