ನೈಜ ಜೋಕು
ಅಂದು
ಮಕ್ಕಳ ಸಮಾರಂಭವೊಂದಿತ್ತು. ನಾನು ನನ್ನ ಮಗನನ್ನು ಕರೆದುಕೊಂಡು ಹೋಗಿದ್ದೆ. ಅದರಲ್ಲಿ ಹಾಡು ಹೇಳುವುದು,
ಜೋಕು ಹೇಳುವುದು ಇತ್ಯಾದಿ. ಎಲ್ಲಾ ಮಕ್ಕಳಿಗೂ ಸಂಭ್ರಮವೋ ಸಂಭ್ರಮ. ಕೆಲವು ಮಕ್ಕಳು ತುಂಬಾ ಖುಷಿಯಾಗಿ
ಭಾಗವಹಿಸುತ್ತಿದ್ದರೆ, ಇನ್ನು ಕೆಲವು ಬಲವಂತವಾಗಿ ಭಾಗವಹಿಸುತ್ತಿದ್ದವು. ಅಲ್ಲಿ ಆ ಮಕ್ಕಳಿಗಿಂತಲೂ
ಅವುಗಳ ಅಪ್ಪ ಅಮ್ಮನಿಗೆ ಸಂಭ್ರಮ, ಹೇಗಾದರೂ ಮಾಡಿ ತಮ್ಮ ಮಗಳ ಕೈಲಿ ಹಾಡು ಹೇಳಿಸಿ, ಜೋಕು ಹೇಳಿಸಿ
ಎಲ್ಲರ ಕೈಲೂ ಚಪ್ಪಾಳೆ ಗಿಟ್ಟಿಸಿಬಿಟ್ಟರೆ ತಮ್ಮ ಜನ್ಮ ಸಾರ್ಥಕವಾಯಿತೇನೋ ಎಂಬ ಉತ್ಸಾಹ. ಒಟ್ಟಿನಲ್ಲಿ
ಅಲ್ಲಿನ ವಾತಾವರಣವೇ ಒಂದು ರೀತಿಯಲ್ಲಿ ಮನರಂಜಿಸುತ್ತಿತ್ತು.
ಮೊದಲು
ಹಾಡು ಹೇಳುವ ಸ್ಪರ್ಧೆ. ಅದರಲ್ಲಿ ಒಂದು ಮಗುವನ್ನು ಅದರ ಅಮ್ಮ ಬಲವಂತವಾಗಿ ದಬ್ಬಿದರೂ ಅದು ಹೋಗಲೇ
ಇಲ್ಲ. ಕಡೆಗೆ ಅದರ ಅಪ್ಪನೇ ಅದನ್ನು ಎತ್ತಿಕೊಂಡು ಹೋಗಿ ನಿಲ್ಲಿಸಿದರು. ಅದು ಯಾವುದೋ ಹಾಡನ್ನು ಹೇಳಲು
ಆರಂಭಿಸಿತು. ಅದಕ್ಕೆ ಪಾಪ ಸ್ವರವೇ ಹೊರಡುತ್ತಿಲ್ಲ, ಸಂಗೀತ ಜ್ಞಾನವೂ ಅಷ್ಟಕ್ಕಷ್ಟೇ. ಅದನ್ನು ಏನಾದರೂ
ಮಾಡಿ ಸಂಗಿತಗಾರನನ್ನಾಗಿ ಮಾಡಬೇಕು ಎಂದು ಸಂಗೀತ ಕಲಿಸುತ್ತಿದ್ದರು ಎಂಬುದು ಅದರ ಗಾಯನದಿಂದಲೇ ಗೊತ್ತಾಗುತ್ತಿತ್ತು.
ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ, ಹಾಗೆ ಅದರ ಹಾಡು ಮುಗಿದಾಗ ಅಪ್ಪ ಅಮ್ಮನೇ ಜೋರಾಗಿ ಚಪ್ಪಾಳೆ ತಟ್ಟಿದ್ದರು.
ಆದರೆ ಅಲ್ಲಿ ಅಷ್ಟೇ ಸುಶ್ರಾವ್ಯವಾಗಿ ಹೇಳಿದ ಮಕ್ಕಳೂ ಇದ್ದರು.
ನಂತರ
ಜೋಕು ಹೇಳುವ ಸ್ಪರ್ಧೆ ಆರಂಭವಾಯಿತು. ಇಲ್ಲಿಯೂ ಅಷ್ಟೆ ಮಕ್ಕಳ ಜೋಕಿಗಿಂತಲೂ ಅವುಗಳ ಮುದ್ದು ಮಾತುಗಳು,
ಹಾವಭಾವಗಳು, ಮರೆತು ಇನ್ನೇನೋ ಹೇಳಿದ್ದು, ಮಾತಾಡಲು ತೊದಲಿದ್ದು ಮೊದಲಾದವುಗಳೇ ಜೋಕಾಗಿಬಿಟ್ಟಿದ್ದವು.
ಇದರಲ್ಲಿ ಮನಸೂರೆಗೊಂಡದ್ದು ಒಂದು ಚಿಕ್ಕ ಮಗು ಹೇಳಿದ ಜೋಕಿನಿಂದ. ಆ ಮಗು ಇನ್ನೂ ತೀರಾ ಚಿಕ್ಕದು.
ಅದಕ್ಕೆ ಅಪ್ಪ ಅಮ್ಮನನ್ನು ಬಿಟ್ಟು ಬರಲು ಹೆದರಿಕೆಯೋ ಹೆದರಿಕೆ. ಜೊತೆಗೆ ಅಷ್ಟೊಂದು ಜನ, ಇತರ ಮಕ್ಕಳನ್ನು
ಕಂಡು ಬೆದರಿಬಿಟ್ಟಿತ್ತು. ಆದರೂ ಅಪ್ಪ ಅಮ್ಮನಿಗೆ ಗೊತ್ತಲ್ಲ, ಏನಾದರೂ ಮಾಡಿ ತಮ್ಮ ಮಗುವಿನ ಕೈಲಿ
ಜೋಕು ಹೇಳಿಸಿ ಎಲ್ಲರೂ ಚಪ್ಪಾಳೆ ತಟ್ಟಬೇಕೆಂಬುದು ಅವರ ಗುರಿಯಾಗಿತ್ತು. ಆದರೆ ಆ ಮಗುವಿನ ಗುರಿ ಏನೂ
ಮಾಡದೆ ತೆಪ್ಪಗೆ ಅಮ್ಮನ ತೊಡೆಯಮೇಲೆ ಕುಳಿತು ಆಡಿಕೊಂಡಿರಬೇಕು ಎಂದಿತ್ತೇನೋ. ಅದು ಅಮ್ಮನ ತೊಡೆಯಿಂದ
ಕೆಳಗೆ ಇಳಿಯಲೇ ಒಲ್ಲದು. ಆ ಮಗುವಿನ ಸರದಿ ಬಂದಾಗ ಅದು ಇಳಿಯದೇ ಕೊಸರಾಡತೊಡಗಿತು. ಅದರ ಅಮ್ಮ ಅದನ್ನು
ಬಲವಂತವಾಗಿ ಇಳಿಸಿದಾಗ ಜೋರಾಗಿ ಅಳಲು ಆರಂಭಿಸಿತು. ಹೇಗೋ, ಏನೇನೋ ಆಸೆ ತೋರಿಸಿ, ಅದನ್ನು ಸಮಾಧಾನ
ಮಾಡಿ ವೇದಿಕೆಗೆ ಕಳುಹಿಸಿದರು. ಅಪ್ಪ ಅಮ್ಮನಂತೂ ಒಂದು ಪಕ್ಕದಲ್ಲಿ ನಿಂತು ಅದಕ್ಕೆ ಏನೇನೋ ಸನ್ನೆಗಳನ್ನು
ಮಾಡಿ ಜೋಕನ್ನು ನೆನಪಿಸುತ್ತಿದ್ದರು. ಅವರ ಸರ್ಕಸ್‍ಗಳೇ ಕೆಲವರಿಗೆ ಜೋಕಾಗಿದ್ದವು. ಇಷ್ಟೆಲ್ಲಾ ಆದಮೇಲೆ
ಆ ಮಗುವಿಗೆ ಅಷ್ಟೊಂದು ಜನರನ್ನು ನೋಡಿ ಮತ್ತೆ ಅಳು ಬಂದು ಬಿಟ್ಟಿತು. ಜೋಕನ್ನು ಪ್ರಾರಂಭಿಸುತ್ತದೆ,
ನಂತರ ಮತ್ತೆ ಅಳು, ನಂತರ ಮರೆವು, ಮತ್ತೆ ಜೋಕು, ಮತ್ತೆ ಅಳು, ಮತ್ತೆ ಬಿಕ್ಕಿ ಬಿಕ್ಕಿ ಬರುವ ಅಳುವನ್ನು
ನಿಲ್ಲಿಸಿ ತೊದಲುತ್ತಾ ಇನ್ನಷ್ಟು ಜೋಕನ್ನು ಮುಂದುವರೆಸುತ್ತಿತ್ತು. ಕಡೆಗೆ ಅದಕ್ಕೆ ಎಲ್ಲವೂ ಮರೆತು
ಹೋಗಿ ಜೋರಾಗಿ ಅಳುತ್ತಾ ನಿಂತು ಬಿಟ್ಟಿತು. ಅವರ ಅಪ್ಪ ಅಮ್ಮನ ಯಾವ ಸರ್ಕಸ್ಸೂ ಪ್ರಯೋಜನಕ್ಕೆ ಬರಲಿಲ್ಲವಾದರೂ
ಸಭಿಕರಿಗೆ ಅದೊಂದು ಜೋಕಾಗಿತ್ತು.
ಅಲ್ಲಿದ್ದ
ಸಭಿಕರಿಗೆ ಅದು ಯಾವ ಜೋಕು ಹೇಳಿತೋ ಗೊತ್ತಾಗಲಿಲ್ಲ. ಆದರೆ ಜೋಕು ಹೇಳುವಾಗ ನಡೆದ ಪ್ರಸಂಗವನ್ನು ಕಂಡು
ಯಾವ ಜೋಕಿಗೂ ಕಡಿಮೆ ಇಲ್ಲದಂತೆ ಬಿದ್ದು ಬಿದ್ದೂ ನಗುತ್ತಿದ್ದರು. ಅದು ಒಂದು ನೈಜತೆಯಿಂದ ಕೂಡಿದ ಜೋಕಾಗಿ
ಎಲ್ಲರನ್ನು ರಂಜಿಸಿತು. ಈ ನೈಜ ಜೋಕು ಒಂದು ಬಹುಮಾನ ಗಿಟ್ಟಿಸಲು ಅರ್ಹ ಎಂದು ನನಗನ್ನಿಸಿತು.
No comments:
Post a Comment