ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, May 31, 2016

ನಾನು ಅಜ್ಜಿಯಾಗುವೆ


ನಾನು ಅಜ್ಜಿಯಾಗುವೆ

ದಸರಾ ರಜೆಯ ದಿನಗಳಾದುದರಿಂದ ಮೊಮ್ಮಕ್ಕಳೆಲ್ಲಾ ನನ್ನ ಮನೆಯಲ್ಲಿ ಸೇರಿದ್ದರು. ರಜೆಯನ್ನು ಮಜವಾಗಿ ಕಳೆಯುತ್ತಾ ಸಂತೋಷವಾಗಿ ಆಡಿಕೊಂಡಿದ್ದರು. ಅಜ್ಜಿಯಮನೆ ಎಂದರೆ ಕೇಳಬೇಕೆ? ಎಲ್ಲ ಮಕ್ಕಳ ಬಾಲಗಳೂ ಹನುಮಂತನ ಬಾಲದಂತೆ ದೊಡ್ಡದಾಗಿ ಬಿಚ್ಚಿಕೊಂಡು ಬಿಟ್ಟಿದ್ದವು. ಇದಕ್ಕೆ ಅಜ್ಜಿಯ ಸಲುಗೆಯೇ ಕಾರಣ. ಆದರೆ ಅಜ್ಜಿಮಾತ್ರ ಇದನ್ನು ಒಪ್ಪುತಿರಲಿಲ್ಲ, ‘ನೀವೇ ಮನೆಯಲ್ಲಿ ಅವಕ್ಕೆ ಅದು ಮಾಡಬೇಡ, ಇದು ಮಾಡಬೇಡ ಎಂದು ತಲೆ ತಿನ್ನುತ್ತಿದ್ದರೆ ಅವು ಇನ್ನೇನನ್ನು ತಾನೇ ಮಾಡುತ್ತವೆ ಎಂದು ನಮ್ಮನ್ನೇ ಅನ್ನುತ್ತಿದ್ದರು. ‘ನಾವು ಚಿಕ್ಕವರಾಗಿದ್ದಾಗ ಎಲ್ಲಿ ಹೋಗಿತ್ತೋ ಈ ಬುದ್ದಿ ಎಂದು ಟೀಕಿಸಿದರೆ, ‘ಅಮ್ಮನಿಗೂ ಅಜ್ಜಿಗೂ ಅದೇ ವ್ಯತ್ಯಾಸ ಎಂದು ಅಮ್ಮ ನನ್ನ ಬಾಯಿ ಮುಚ್ಚಿಸಿದ್ದಳು. ಈ ಬಾರಿ ದಸರೆಗೆ ಅಜ್ಜಿ ಕರಾವಳಿ ಕರ್ನಾಟಕಕ್ಕೆ ಹೊರಟಿದ್ದರು. ಅದಕ್ಕಾಗಿ ನಾನೂ ಮನೆಯಲ್ಲಿ ಮಕ್ಕಳೊಂದಿಗಿರಲು ಒಂದಷ್ಟು ದಿನ ರಜೆ ಹಾಕಿದ್ದೆ. ಆದುದರಿಂದ ಈ ಮಕ್ಕಳ ಬಿಚ್ಚಿದ ಬಾಲವನ್ನು ಮುದುರಿಸುವುದೇ ಒಂದು ದೊಡ್ಡ ಕೆಲಸವಾಗಿತ್ತು. ಆ ಮಕ್ಕಳೆಲ್ಲರೂ, ಅಜ್ಜಿ ಯಾಕೆ ಅಲ್ಲಿಗೆ ಹೋಗುತ್ತಾರೆ?, ನಮ್ಮೊಂದಿಗೆ ಯಾಕೆ ಇರುವುದಿಲ್ಲ?, ನಮ್ಮನ್ನೂ ಏಕೆ ಕರೆದುಕೊಂಡು ಹೋಗುವುದಿಲ್ಲ? ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಸುರಿಸುತ್ತಿದ್ದರು. ನನಗೋ ಇವನ್ನು ಸಂಭಾಳಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ನನ್ನ ಅಮ್ಮನಿಗೆ ‘ನೀನು ಸುಮ್ಮನೆ ಈ ಪ್ರವಾಸವನ್ನು ರದ್ದುಮಾಡಿ ಈ ಮಕ್ಕಳನ್ನು ನೋಡಿಕೊ ಎಂದು ಹೇಳುತ್ತಿದ್ದೆ. ಅದಕ್ಕೆ ನಮ್ಮ ಅಮ್ಮ ‘ನಿಜವಾಗಿ ರದ್ದು ಮಾಡಿಬಿಡಲೇನೋ?, ಮಕ್ಕಳೇ ದೇವರೆನ್ನುತ್ತಾರಲ್ಲ, ಸುಮ್ಮನೇ ಅಲ್ಲಿ ಏಕೆ ಹೋಗಬೇಕು?, ನೀನೇ ನನಗೆ ಬದಲಾಗಿ ಹೋಗಿಬಿಡೋ ಎಂದು ಮನಸ್ಸನ್ನು ಬದಲಾಯಿಸಲು ನೋಡಿದ್ದಳು. ‘ಸುಮ್ಮನೆ ಅಂದೆ, ನಿನ್ನ ಸೊಸೆ ಅಡುಗೆ ನೋಡಿಕೊಳ್ಳುತ್ತಾಳೆ, ನಾನೇ ಮಕ್ಕಳನ್ನು ನೋಡಿಕೊಳ್ಳುವೆ ನೀನು ನಿಶ್ಚಿಂತೆಯಿಂದ ಹೋಗಿ ಬಾ ಎಂದು ಅಮ್ಮನನ್ನು ಕಳುಹಿಸಿದ್ದೆ. ಅಮ್ಮ ಹೊರಟಾಗ ಈ ಚಿಳ್ಳೆ, ಪಿಳ್ಳೆಗಳ್ಯಾವುವೂ ಎದ್ದಿರಲಿಲ್ಲ. ಹೀಗಾಗಿ ಯಾವ ರಾದ್ಧಾಂತವೂ ಆಗಲಿಲ್ಲ.
ಬೆಳಿಗ್ಗೆ ಎದ್ದ ಕೂಡಲೇ ‘ಅಜ್ಜಿ ಎಲ್ಲಿ?’ ಎಂದು ರಾಗ ಪ್ರಾರಂಭವಾಗಿತ್ತು. ಅದರಲ್ಲೂ ಎಲ್ಲರಿಗಿಂತಲೂ ಚಿಕ್ಕವನಾದ ಪುಟ್ಟನ ರಾಗವಂತೂ ತಾರಕಕ್ಕೇರಿತ್ತು. ನನ್ನ ತಂದೆ ಇಲ್ಲವಾದುದರಿಂದ ನಾವು ನನ್ನ ಅಮ್ಮನಿಗೆ ಬೇಸರ ಕಳೆಯಲಿ ಎಂದು ಎಲ್ಲಿ ಸಾಧ್ಯವಾದರೆ ಅಲ್ಲಿಗೆ ಪ್ರವಾಸ ಕಳುಹಿಸುತ್ತಿದ್ದೆವು. ಕೈಕಾಲು ಗಟ್ಟಿಯಾಗಿರುವವರೆಗೂ ನಾನೂ ಆದಷ್ಟು ಜಾಗಗಳನ್ನು ನೋಡಿ ಬಂದು ಬಿಡುತ್ತೇನೆ ಎಂದು ಅಮ್ಮನೂ ಹೋಗಿಬರುತ್ತಿದ್ದಳು. ಹೀಗಾಗಿ ಪುಟ್ಟ ‘ಅಜ್ಜಿಯನ್ನು ಎಲ್ಲೂ ಕಳುಹಿಸಬೇಡ ಎಂದೋ ಅಥವಾ ‘ನಾನೂ ಅಜ್ಜಿಯೊಂದಿಗೆ ಹೋಗುವೆ ಎಂದೋ ಹಟ ಮಾಡುತ್ತಿದ್ದ. ಕಡೆಗೆ ‘ಈ ಅಜ್ಜಿ ಯಾವಾಗಲೂ ಹೀಗೇ ಆರಾಮವಾಗಿ ಅಲ್ಲಿ ಇಲ್ಲಿ ತಿರುಗುತ್ತಾ ಇರೋದು ಎಂದು ಸಿಡುಕುತ್ತಾ ಸಮಾಧಾನ ಮಾಡಿಕೊಳ್ಳುತ್ತಿದ್ದ.

ಈ ಮಕ್ಕಳನ್ನು ಸಮಾಧಾನ ಪಡಿಸಲು ಅವಕ್ಕೆ ಏನೇನೋ ಆಟ ಆಡಿಸಿ, ಚಿತ್ರಗಳನ್ನು ಬರೆಸಿ, ಆಟದ ಸಾಮಾನುಗಳನ್ನು ಅವರ ಕೈಯಿಂದಲೇ ಮಾಡಿಸಿ ಕಾಲ ಕಳೆಸುತ್ತಿದ್ದೆ. ಒಮ್ಮೆ ನೀವು ದೊಡ್ಡವರಾದಮೇಲೆ ಏನಾಗುವಿರಿ? ಎಂದು ಎಲ್ಲರನ್ನೂ ಕೇಳಿದೆ. ಒಬ್ಬ ನಾನು ಪೈಲಟ್, ಇನ್ನೊಬ್ಬ ನಾನು ಡಾಕ್ಟರ್, ಇನ್ನೊಬ್ಬಳು ನಾನು ಇಂಜಿನಿಯರ್, ಮತ್ತೊಂದು, ಮಗದೊಂದು ಎಂದು ಏನೇನೋ ಹೇಳಿದರು. ಪುಟ್ಟ ಮಾತ್ರ ಸುಮ್ಮನೆ ಕುಳಿತಿದ್ದ. ‘ನೀನ್ಯಾಕೋ ಏನೂ ಹೇಳುತ್ತಿಲ್ಲಾ?’ ಎಂದೆ. ಆಗ ಅವನು ‘ನಾನು ದೊಡ್ಡವನಾದಮೇಲಲ್ಲ, ಈಗಲೇ ಅಜ್ಜಿಯಾಗಿಬಿಡುವೆ ಎಂದ. ಎಲ್ಲರೂ ಘೊಳ್ಳನೆ ನಕ್ಕರು. ನಾನು ‘ಯಾಕೋ?’ ಎಂದಾಗ ‘ಅಜ್ಜಿಯ ತರಹ ಆದರೆ ಮನೆಯಲ್ಲಿ ಹೋಂ ವರ್ಕು, ಶಾಲೆಯ ಪಾಠ ಯಾವುದೂ ಇರುವುದಿಲ್ಲ, ಆರಾಮವಾಗಿ ಊರೆಲ್ಲಾ ತಿರುಗಿಕೊಂಡಿರಬಹುದು ಎಂದು ಮುಗ್ಧವಾಗಿ ಹೇಳಿದಾಗ ನನಗೆ ನಗು ತಡೆಯದಾಯಿತು. ಈಗ ಪುಟ್ಟ ದೊಡ್ಡವನಾಗಿದ್ದಾನೆ, ಈ ಘಟನೆ ಮಾತ್ರ ಇನ್ನೂ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ಅಜ್ಜಿಯೂ ಅದನ್ನು ನೆನೆಸಿಕೊಂಡು ಬಂದವರೊಡನೆ ನಗುತ್ತಾ ಮೆಲುಕು ಹಾಕುತ್ತಿರುತ್ತಾರೆ.

No comments:

Post a Comment