ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, May 31, 2016

ನರ್ಸರಿ ಟೀಚರ್


ನರ್ಸರಿ ಟೀಚರ್

ನಾನು ಆಗ ಬಹುಷಃ 5ನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗ ನನ್ನ ಚಿಕ್ಕ ತಮ್ಮನನ್ನೂ ಶಾಲೆಗೆ ಸೇರಿಸಿದರು. ಅವನು ನರ್ಸರಿಗೆ ಸೇರಿದ್ದ. ಆಗ ಈಗಿನಂತೆ ಎಲ್‍ಕೇಜಿ, ಯೂಕೇಜಿ ಗಳು ಇರಲಿಲ್ಲ. ಜೊತೆಗೆ ಇಂದಿನಂತೆ ಸ್ಕೂಲಿಗೆ ವ್ಯಾನ್‍ಗಳೂ ಇರಲಿಲ್ಲ. ಮೊದಲನೆಯ ದಿನ ನನ್ನನ್ನೂ ಅವನನ್ನೂ ನನ್ನ ಅಪ್ಪ ಕರೆದುಕೊಂಡು ಬಂದರು. ಶಾಲೆಯಲ್ಲಿ ನಾನು ನನ್ನ ತರಗತಿಗೆ ಓಡಿಹೋದೆ, ನನ್ನ ತಮ್ಮನನ್ನು ನಮ್ಮ ಅಪ್ಪ ಸೇರಿಸಲು ಓಡಾಡುತ್ತಿದ್ದರು. ನಂತರ ಅವನ ಹೆಸರನ್ನು ನೊಂದಾಯಿಸಿ ಅವನಿಗೆ ಹುಷಾರಾಗಿರು ಎಂದೆಲ್ಲ ಹೇಳಿ ಬಿಟ್ಟುಬಂದರಂತೆ. ಮನೆಗೆ ಬಂದು, ನಾನು ಅವನನ್ನು ಹೊಸ ಸ್ಕೂಲಿಗೆ ಸೇರಿಸಿಬಂದೆ ಎಂದು ಮನೆಯಲ್ಲಿ ಹೇಳಿದರಂತೆ. ಆದರೆ ನನ್ನ ಅಮ್ಮ ನಗುತ್ತಾ ನೀವು ಅವನನ್ನು ಸರಿಯಾಗಿ ಸೇರಿಸಿ, ಬಿಟ್ಟು ಬಂದಿರಾ? ಎಂದು ಕೇಳಿದರಂತೆ. ನಮ್ಮ ತಂದೆ ‘ಯಾಕೆ? ಅನುಮಾನವಾ?’ ಎಂದು ರಸೀತಿ ಎಲ್ಲವನ್ನೂ ತೋರಿಸಿದರಂತೆ. ಆಗ ಅಮ್ಮ ಬಿದ್ದು ಬಿದ್ದೂ ನಗುತ್ತಾ ‘ನೋಡಿ ನಿಮ್ಮ ಮಗರಾಯ ನಿಮ್ಮ ಹಿಂದೆಯೇ ನಿಂತಿದ್ದಾನೆ ಎಂದಾಗ ಅಪ್ಪ ಹಿಂದೆ ನೋಡಿದರೆ ಮಗ ಅಲ್ಲೇ ಇದ್ದಾನೆ! ಅಯ್ಯೋ ನಿನ್ನನ್ನು ಬಿಟ್ಟು ಬಂದೆನಲ್ಲೋ! ಇಲ್ಲಿಗೆ ಹೇಗೆ ಬಂದೆ? ಎಂದರೆ ಅವನು ‘ನಾನು ಮೆಲ್ಲಗೆ ಯಾರಿಗೂ ಹೇಳದೆ ನಿನ್ನ ಹಿಂದೆಯೇ ಮನೆಗೆ ಓಡಿಬಂದುಬಿಟ್ಟೆ ಎಂದು ಮುದ್ದು ಮುದ್ದಾಗಿ ಹೇಳಿದಾಗ ಅವರು ತಲೆ ಚಚ್ಚಿಕೊಂಡು ಅವನನ್ನು ಮತ್ತೆ ಶಾಲೆಯಲ್ಲಿ ಬಿಟ್ಟು, ನನ್ನನ್ನು ಕರೆದು ‘ಅವನನ್ನು ತರಗತಿಯಲ್ಲಿ ಕೂಡಿಸಿದ್ದೇನೆ, ನೀನು ಬರುವಾಗ ಮರೆಯದೇ ಕರೆದುಕೊಂಡು ಬಾ ಎಂದು ನನಗೆ ಹೇಳಿದರು.
ಹೀಗಾಗಿ ‘ಇನ್ನು ಮುಂದೆ ಅವನನ್ನು ಕರೆದುಕೊಂಡು ಹೋಗುವುದು, ಬಿಡುವುದೂ ನಿನ್ನ ಕೆಲಸ ಎಂದು ನನಗೆ ಅಪ್ಪ ಅಮ್ಮ ಇಬ್ಬರೂ ಹೇಳಿಬಿಟ್ಟರು. ಮರುದಿನ ಅವನನ್ನು ಶಾಲೆಗೆ ಕರೆದುಕೊಂಡು ಹೋದೆ. ಅಂದು ಶಾಲೆಯಲ್ಲಿ ಯಾವುದೋ ಮಕ್ಕಳ ಚಲನಚಿತ್ರವನ್ನು ತೋರಿಸಿದರು. ಅವನು ಖುಷಿಯಾಗಿ ನೋಡಿದ. ಇದರ ಮಾರನೆಯ ದಿನ ಅವನಿಗೆ ಪಾಠಗಳನ್ನು ಮಾಡಲು ಪ್ರಾರಂಭಿಸಿದುದರಿಂದ ಅವನಿಗೆ ಬೇಸರವಾಗಲು ಶುರುವಾಯಿತು. ನಾನು ಅವನನ್ನು ಶಾಲೆಯಲ್ಲಿ ಬಿಟ್ಟಕೂಡಲೆ ನಾನು ಅವನಿಗೆ ‘ನೀನು ಇಲ್ಲಿಯೇ ಇರು, ನಾನು ಹೋಗುತ್ತೇನೆ ಎಂದು ಹೇಳಿ ಅಲ್ಲಿಯೇ ಇದ್ದ ಅವನ ಮ್ಯಾಡಂಗೂ ಹೇಳಿದೆ. ಆಗ ಅವನು ನನಗೆ ‘ನೀನು ಇಲ್ಲಿಯೇ ಇರು, ನಾನು ಮನೆಗೆ ಹೋಗುತ್ತೇನೆ ಎಂದು ಚೀಲವನ್ನು ನನ್ನ ಕೈಗಿತ್ತು ತಾನು ಹೊರಟೇ ಬಿಟ್ಟ. ಟೀಚರ್ ಅವನ ಕೈ ಹಿಡಿದು ನಗುತ್ತಾ ‘ನಿಮ್ಮಣ್ಣ ಎಲ್‍ಕೇಜಿ ಮತ್ತೆ ಓದಬೇಕೇನೋ?’ ಎಂದು ಕೇಳಿ ‘ನಡಿಯೋ ಒಳಗೆ, ಮನೆಗೆ ಹೋಗುತ್ತಾನಂತೆ ಎಂದು ಹುಸಿಕೋಪ ನಟಿಸುತ್ತಾ ಗದರಿದಾಗ ಅವನು ಜೋರಾಗಿ ಅಳಲು ಪ್ರಾರಂಭಿಸಿದ. ನನಗೆ ಏನೋ ಕಸಿವಿಸಿ. ಆಗ ಆ ಟೀಚರ್ ನನ್ನನ್ನು ‘ನೀನು ಹೋಗು, ನಾನು ಅವನನ್ನು ನೋಡಿಕೊಳ್ಳುತ್ತೇನೆ ಎಂದು ಕಳುಹಿಸಿದರು. ಸಂಜೆ ಅವನ ಟೀಚರ್ ಅವನಿಗೆ ಅತ್ಮೀಯರಾಗಿಬಿಟ್ಟಿದ್ದರು. ನಾನು ಮನೆಗೆ ಬರುವುದಿಲ್ಲ, ಅವರೊಂದಿಗೇ ಇರುತ್ತೇನೆ ಎಂದು ಹಠಮಾಡತೊಡಗಿದಾಗ, ನಮ್ಮ ಮನೆಯ ದಾರಿಯಲ್ಲಿಯೆ ಹೋಗುವ ಆ ಟೀಚರ್ ನನ್ನೊಂದಿಗೆ ಅವನನ್ನೂ ಕರೆದುಕೊಂಡು ಬಲವಂತವಾಗಿ ನಮ್ಮನ್ನು ಬಿಟ್ಟುಹೋದರು.

ಹೊರಗೆ ಹುಸಿಕೋಪ ತೋರಿಸಿದರೂ ಅವರು ಎಲ್ಲ ಮಕ್ಕಳನ್ನು ಚೆನ್ನಾಗಿ ಒಲಿಸಿಕೊಂಡುಬಿಟ್ಟಿದ್ದರು. ಅಂತಹ ನಡವಳಿಕೆ ಎಲ್ಲರಿಗೂ ಇರುವುದಿಲ್ಲ. ಅವೆಲ್ಲ ಹುಟ್ಟಿನಿಂದ ಬಂದಿರಬೇಕು ಇಲ್ಲವೇ ಅವರ ಕೆಲಸದ ತನ್ಮಯತೆಯಿಂದ ಬಂದಿರಬೇಕು. ಒಟ್ಟಿನಲ್ಲಿ ನನ್ನ ತಮ್ಮನಿಗೆ ಒಬ್ಬ ಒಳ್ಳೆಯ ಟೀಚರ್ ಸಿಕ್ಕಿದ್ದು ಅವನ ಪುಣ್ಯವೇ ಸರಿ.

No comments:

Post a Comment