ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, November 29, 2010

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07.

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07
ಸಮಾವೇಶದ ಕೆಲವು ದೃಶ್ಯಗಳು
ಕು. ಬಿ.ಎಸ್.ಆರ್. ಅಂಬಿಕಾಳಿಂದ ಪ್ರಾರ್ಥನೆ



ಚಿ. ಬಿ.ಎಸ್.ಆರ್. ದೀಪಕನಿಂದ ನಿರೂಪಣೆ


ಭಾಗವಹಿಸಿದವರು

ವಸ್ತುಪ್ರದರ್ಶನ ವೀಕ್ಷಣೆ
ಹಿರಿಯರಾದ ಕೆಳದಿ ಗುಂಡಾಜೋಯಿಸರ ಮಾರ್ಗದರ್ಶನ
ತಮ್ಮ ಕೃತಿ 'ಹಳೇಬೇರು-ಹೊಸಚಿಗುರು' ಕುರಿತು ಕವಿ ಸುರೇಶರ ನುಡಿ
ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿ ದಂಪತಿಗಳಿಗೆ ಸನ್ಮಾನ

ಸಂಬಂಧಗಳ ಅನ್ವೇಶಣೆಗೆ ನೆರವಾದ ಶ್ರೀ ಶೇಷಗಿರಿರಾಯರಿಗೆ ಸನ್ಮಾನ
ಕೆಳದಿ ಗುಂಡಾಜೊಯಿಸ್ ದಂಪತಿಗಳಿಗೆ ಗೌರವ
ಡಾ. ಕೆ.ವೆಂಕಟೇಶಜೋಯಿಸ್ ದಂಪತಿಗಳಿಗೆ ನೆನಪು
ಡಾ. ಕೆಳದಿ ಕೃಷ್ಣಾಜೋಯಿಸರಿಗೆ ನೆನಪಿನ ಉಡುಗೊರೆ
ಸಾ.ಕ.ಕೃಷ್ಣಮೂರ್ತಿಗಳಿಗೆ ಗೌರವ

ನಾಗರಾಜಭಟ್ ದಂಪತಿಗಳಿಗೆ ನೆನಪಿನ ಕಾಣಿಕೆ
ಕೆ.ರಾಮರಾಯರಿಗೆ ಗೌರವ
ಕೆಳದಿ ರಾಮಮೂರ್ತಿ ದಂಪತಿ
ಕೆ.ಶ್ರೀಕಂಠ
ವಿನೋದಾಬಾಯಿಯವರಿಗೆ ಸನ್ಮಾನ
ರಾಮರಾವ್ ದಂಪತಿಗಳು
ಕೆ.ವಿ.ಲಲಿತಾಂಬಾ

ಮಕ್ಕಳಿಂದ ಕವಿ ವೆಂಕಟಸುಬ್ಬರಾವ್ ದಂಪತಿಗಳಿಗೆ ಹೃದಯಸ್ಪರ್ಶಿ ಗೌರವ
ಜಾನಕಮ್ಮ
ಸಾ.ಕ.ಕೃಷ್ಣಮೂರ್ತಿಯವರ ಬಳಗ
ನಾಗರಾಜಭಟ್ಟರ ಬಳಗ
ವಿನೋದಾಬಾಯಿಯವರ ಬಳಗ
ಕವಿ ವೆಂಕಟಸುಬ್ಬರಾಯರ ಬಳಗ
ಭೋಜನ
ಭೋಜನದೊಂದಿಗೆ ಸಲ್ಲಾಪ

Sunday, November 28, 2010

ಹೂವ ಬೇಡಿದ ಹಾಡು

ರಾಗ|| ಕಮಾಚ್                     ತಾಳ: ಮಿಶ್ರಛಾಪು

ಹೂವ ಕೊಡೆ ದೇವಿ | ಹೂವ ಕೊಡೆ
ಯಾವಾಗಲೂ ನಿಮ್ಮ ಸಿರಿ ಮುಡಿಯುಳಗಿರ್ಪ                             || ಪ ||

ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿ
ಪರಿಪರಿ ಧೂಪಧೂಮಗಳನಿಕ್ಕಿ
ಪರಿಮಳಿಸುವ ಸಂಪಿಗೆಯ ಪೂಸರವ ಸಿಂ-
ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ                                || 1 ||

ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆ
ಸರಸಿಜ ಮೊದಲಾದ ಕುಸುಮದಿಂದ
ಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪ
ಅರಳಿದ ಮಲ್ಲಿಗೆ ಹೂವ ಕೊಡೆ ಹೂವ                                        || 2 ||

ವ್ಯೋಮಗಂಗೆಯಯೊಳಿಂದ ಹೇಮದಾಮರಸವ
ಕಾಮಿನಿಯರು ಕೊಯ್ ತಂದದನು
ಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-
ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ                   || 3 ||

ಮುತ್ತಿನ ಲಹರಿಯ ರತ್ನದ ರಾಗಟೆಯ
ಸುತ್ತುಮುತ್ತಲೂ ರಾರಾಜಿಸುವ
ಪುತ್ಥಳಿಯ ಚಿನ್ನದಂತೆ ಘಮಘಮಿಸುವ
ಉತ್ತಮವಾದ ಸುವರ್ಣದ ಕೇದಗೆ ಹೂವ                                  || 4 ||

Tuesday, November 23, 2010

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನಗಳ ವರದಿ

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನದ ವರದಿ
     ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು ಈಗ ಇದ್ದು ಹನ್ನೊಂದನೆಯ ಪೀಳಿಗೆ ಆಗಮನ ಸನ್ನಿಹಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಈ ಮನೆತನದ ಕುಟುಂಬಗಳ ಸದಸ್ಯರುಗಳು ಹಲವೆಡೆ ಚದುರಿ ಹೋಗಿದ್ದು, ಅವರುಗಳನ್ನು ಗುರುತಿಸಿ ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯ ೨೦೦೭ ರಲ್ಲಿ ಚಾಲನೆ ಪಡೆಯಿತು. ಪರಸ್ಪರ ಪರಿಚಯವೇ ಇಲ್ಲದ, ಸಂಪರ್ಕ ಸಹ ಇಲ್ಲದಿದ್ದ ಬಂಧುಗಳನ್ನು  ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ಕವಿ ಸುರೇಶರ ಮನೆಯಲ್ಲಿ ನಡೆದ ಪ್ರಥಮ ಸಮ್ಮೇಳನ ಅವಿಸ್ಮರಣೀಯ, ಅನುಪಮವಾಗಿದ್ದು, ಇದಕ್ಕಾಗಿ ಕವಿ ಸುರೇಶರವರು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ೨೫-೧೨-೨೦೦೭ರಲ್ಲಿ ಕೆಳದಿಯಲ್ಲಿ ದ್ವಿತೀಯ ವಾರ್ಷಿಕ ಸಮ್ಮೇಳನ ಕೆಳದಿ ರಾಮಮೂರ್ತಿ ಸಹೋದರರ ಪ್ರಾಯೋಜಕತ್ವದಲ್ಲಿ ನಡೆಯಿತು.

ಪ್ರಥಮ ವಾರ್ಷಿಕ ಸಮಾವೇಶ - ೨೮-೦೧-೨೦೦೭
     'ನಾವು - ನಮ್ಮವರು' ಶೀರ್ಷಿಕೆಯಲ್ಲಿ ಕವಿ ಸುರೇಶರ ಶಿವಮೊಗ್ಗದ ಸ್ವಗೃಹದಲ್ಲಿ ಕವಿ ಲಿಂಗಣ್ಣ ವೇದಿಕೆಯಲ್ಲಿ ಬೆಳಿಗ್ಗೆ  ೮-೦೦ ಗಂಟೆಗೆ ಆರಂಭವಾದ ಕಾರ್ಯಕ್ರಮಗಳು ಸಾಯಂಕಾಲ ೬-೦೦ ಗಂಟೆಯವರೆಗೆ ನಡೆದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿತೆಂದರೆ ಉತ್ಪ್ರೇಕ್ಷೆಯಲ್ಲ. ಸುಮಾರು ೧೫೦ ಸದಸ್ಯರುಗಳು ಪೂರ್ಣಕಾಲ ಸಕ್ರಿಯವಾಗಿ ಪಾಲ್ಗೊಂಡ ಈ ಸಮಾವೇಶ ಕೆಳಕಂಡ ಭಾವನಾತ್ಮಕ ಕ್ಷಣಗಳಿಗೆ. ಕಾರ್ಯಗಳಿಗೆ ಸಾಕ್ಷಿಯಾಯಿತು.
                                                          ಸಮಾವೇಶ ನಡೆದ ಕವಿ ಸುರೇಶರ ಸ್ವಗೃಹ
೧. ಅರುಣ ಪಾರಾಯಣ: ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಬಂಧುಗಳ ಮಿಲನವಾಗುತ್ತಿರುವ ನಿಮಿತ್ತ ಶ್ರೀ ಸಾ.ಕ. ಕೃಷ್ಣಮೂರ್ತಿ, ಡಾ. ಕೃಷ್ಣಜೋಯಿಸ್ ಮತ್ತು ಶ್ರೀ ರಾಮಾಜೋಯಿಸ್ ರವರು ಅರುಣಪಾರಾಯಣ ಮಾಡಿದರು.
೨. ಪ್ರಾಸ್ತಾವಿಕ: ಸಮಾವೇಶದ ಪ್ರಸ್ತುತತೆ, ಕಾರ್ಯಕ್ರಮಗಳ ವಿವರ ಕುರಿತು ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಪರಿಚಯ
                                     * * * * *  * * * * *

೩. ಗಣ್ಯರು ಹಾಗೂ ಕುಟುಂಬದ ಹಿರಿಯರಿಂದ ಜ್ಯೋತಿ ಬೆಳಗುವುದು - ವೇದಘೋಷದೊಂದಿಗೆ

೪. ಬಂಧುಗಳ ಪರಸ್ಪರ ಪರಿಚಯ 
೫. ಪುಸ್ತಕ ಬಿಡುಗಡೆ: ಕವಿ ಸುರೇಶ ಸಂಪಾದಿಸಿದ 'ಹಳೆ ಬೇರು - ಹೊಸ ಚಿಗುರು' ಪುಸ್ತಕ ಬಿಡುಗಡೆ ಮಾಡಿದ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಗಳಿಂದ ಸ್ತುತ್ಯಾರ್ಹ ಕಾರ್ಯದ ಪ್ರಶಂಸೆ


೬. ವಸ್ತು ಪ್ರದರ್ಶನ: ಕೆಳದಿ ಗುಂಡಾ ಜೋಯಿಸರು ಉದ್ಘಾಟಿಸಿದ ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆ ಪರಿಚಯಿಸುವ ಪುಟ್ಟ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪರಸ್ಪರ ಅಂತಃಕರಣ ಮತ್ತು ನಿರಂತರ ಸಂಪರ್ಕದ ಬಗ್ಗೆ ಗುಂಡಾಜೋಯಿಸರ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

೭. ಸನ್ಮಾನ: 'ಹಳೇ ಬೇರು ಹೊಸಚಿಗುರು' ಪುಸ್ತಕ ರಚನೆಗೆ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಹಿರಿಯರಾದ ಶ್ರೀಯುತರಾದ ಸಾ.ಕ.ಕೃಷ್ಣಮೂರ್ತಿ, ರಾಮರಾವ್, ನಾಗರಾಜಭಟ್ಟ, ರಾಮಾಜೋಯಿಸ್, ವಿನೋದಮ್ಮ, ಸೀತಾಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಪದ್ಮಾವತಮ್ಮ, ಗಿರಿಜಮ್ಮ, ರಾಮಮೂರ್ತಿ, ಹರಿಹರದ ರಾಮರಾವ್ ಮೊದಲಾದವರನ್ನು ಯಥೋಚಿತವಾಗಿ ಸನ್ಮಾನಿಸಲಾಯಿತು.
     ಕವಿ ಮನೆತನದ ಸದಸ್ಯರ ಪೈಕಿ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳನ್ನು ಅವರ ಮಕ್ಕಳು ಸನ್ಮಾನಿಸಿ ಗೌರವ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಸಲ್ಲಿಸಿದ್ದು ತುಂಬಾ ಭಾವನಾತ್ಮಕ ವಾಗಿತ್ತು. ಸನ್ಮಾನಿತರುಗಳು ಹಾಗೂ ಗಣ್ಯರು ಹೃದಯ ಮುಟ್ಟುವ ಮಾತುಗಳನ್ನಾಡಿದರು.




     ೮. ವಿಚಾರ ವಿನಿಮಯ: ಮುಂದಿನ ಸಮಾವೇಶ, ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.     ಕಾರ್ಯಕ್ರಮದಲ್ಲಿ ಶ್ರೀಮತಿ ಕಾಶಿಬಾಯಿ, ಅಂಬಿಕಾ, ದೀಪಕ್, ಮುಂತಾದವರು ತಮ್ಮ ಸುಮಧುರ ಗಾಯನದಿಂದ ರಂಜನೆ ನೀಡಿದರು. ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ ರಂದು ಇದೇ ರೀತಿ ಒಟ್ಟಿಗೆ ಸೇರಬೇಕೆಂದು ನಿರ್ಧರಿಸಲಾಯಿತು. ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.
-ಕವಿನಾಗರಾಜ್.(ಡಿಸೆಂಬರ್, 2008ರ 'ಕವಿಕಿರಣ' ಪತ್ರಿಕೆಯಲ್ಲಿ ಪ್ರಕಟಿತ ವರದಿ ಆಧರಿಸಿ).

Monday, November 22, 2010

ಕೆಳದಿ ಕವಿ ಲಿಂಗಭಟ್ಟ (ಕವಿ ಲಿಂಗಣ್ಣ)

ಕೆಳದಿ ಕವಿ ಲಿಂಗಭಟ್ಟ       (ಕವಿ ಲಿಂಗಣ್ಣ)               
        ಕ್ರಿ,ಶ. ೧೭೫೦ ರ ಸುಮಾರಿನಲ್ಲಿದ್ದ ಕವಿ ಲಿಂಗಣ್ಣ ಕೆಳದಿ ಸಂಸ್ಥಾನದ ಆಸ್ಥಾನ ಕವಿ, ಇವರ ನಂತರ ಇವರ ವಂಶಸ್ಥರಿಗೆ ಕವಿ ಎಂಬ ಉಪನಾಮ ಬಂದಿದೆ. ಆದುದರಿಂದ ಕವಿ ವಂಶಕ್ಕೆ ಮೂಲಪುರುಷರು ಈ ಕವಿ ಲಿಂಗಣ್ಣ. ಇವರ ತಂದೆ ವೆಂಕಟಪ್ಪ (ತಾಯಿಯ ವಿವರ ತಿಳಿದಿಲ್ಲ). ಇವರ ವಾಸ ಸಾಗರ - ಕೆಳದಿ ಆಗಿತ್ತೆಂದೂ, ಇವರಿಗೆ ಇದೇ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಜಮೀನು ಇತ್ತೆಂದೂ ಉಲ್ಲೇಖಗಳು ತಿಳಿಸುತ್ತವೆ. ಕೆಳದಿ ಮ್ಯೂಜಿಯಂಬಲ್ಲಿರುವ ನವಾಬ್ ಹೈದರಾಲಿಯ ಸಹಿ ಇರುವ ಈ ಅಪೂರ್ವ ಚಾರಿತ್ರಿಕ ದಾಖಲೆಯಲ್ಲಿ ಕೆಳದಿ ಕವಿ ಸುಬ್ಬಾಭಟ್ಟ - ಶ್ಯಾಂಭಟ್ಟರಿಗೆ ಕೆಳದಿ ಅರಸರು ನೀಡಿದ್ದ ಇನಾಂ ಭೂಮಿಯು ಹೈದರನ ಪರಿವಾರದಲ್ಲಿ ಜಫ್ತಿಯಾಗಿದ್ದುದನ್ನು ಕೆಳದಿ ರಾಜಧಾನಿ ನಗರ (ಬಿದನೂರು) ದಿವಾನ್ ಅವಲ್ ನರಸಪ್ಪಯ್ಯನವರು ತಪ್ಪಿಸಿ ಸದರಿ ಕವಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಬಗ್ಗೆ ವಿವರಗಳಿವೆ. ಕೆಳದಿ ಕವಿ ಲಿಂಗಣ್ಣನವರ ಗ್ರಂಥಗಳಿಂದ ಇವರು ಎರಡನೇ ಬಸಪ್ಪನಾಯಕನ ಕಾಲದಲ್ಲಿ (೧೭೩೯-೧೭೫೫)ಜೀವಿಸಿರಬಹುದೆಂದು ತೋರುತ್ತದೆ.
       ಒಮ್ಮೆ ಲಿಂಗಣ್ಣನವರು ಕೊಲ್ಲೂರಿನ ಶ್ರೀ ಮೂಕಾಂಬಿಕೆಯ ಸನಿಹದಲ್ಲಿ ಭಕ್ತಿಯಿಂದ ದೇವಿಯನ್ನು ಕುರಿತು ಪ್ರಾರ್ಥಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಗ ತಾನೇ ಕೊಲ್ಲೂರಿಗೆ ಆಗಮಿಸಿದ್ದ ಕೆಳದಿ ನಾಯಕ ನಿಗೆ ಈತನ ಗಾನಮಾಧುರ್ಯ ಬಹು ಮೆಚ್ಚಿಗೆ ಯಾಯಿತು. (ಕೆಳದಿ ಅರಸರಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕೆಯೂ ಕುಲದೇವರಲ್ಲಿ ಒಂದಾಗಿತ್ತು). ತುಸು ಸಮಯದಲ್ಲಿಯೇ ದೇವಿಯ ಸನಿಹದಿಂದ ಪುಷ್ಪ ವೊಂದು ಲಿಂಗಣ್ಣನ ಮಡಿಲಿಗೆ ಬಿತ್ತು. ಇದನ್ನು ಕಂಡು ಕೆಳದಿ ನಾಯಕನು ಈತನ ಪೂರ್ವೇತಿಹಾಸವನ್ನು ತಿಳಿದು ತನ್ನ ಆಸ್ಥಾನದಲ್ಲಿ ಆಸ್ಥಾನ ಕವಿಯನ್ನಾಗಿ ಸೇರಿಸಿಕೊಂಡನು.* (ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ದಿ. ಜಿ.ವಿ.ಕೆ. ರಾವ್‌ರವರ ಮಾವನವರಾದ ಶ್ರೀ ಮಾಧವರಾಯರು ತೆಗೆದುಕೊಂಡು ಹೋಗಿದ್ದ ಸಾಗರದ ಕವಿ ಲಿಂಗಣ್ಣಯ್ಯ ನವರು ರಚಿಸಿದ್ದ ವೈದೀಕ ಧರ್ಮದ ಶಾಸ್ತ್ರೀಯ ವಿಚಾರ ಎಂಬ ಹಸ್ತ ಪ್ರತಿಯಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ ಎಂದು ಕೆಳದಿಯ ಶ್ರೀ ಗುಂಡಾಜೋಯಿಸ್ ರವರಿಂದ ತಿಳಿದು ಬರುತ್ತದೆ.) *ಮಾನವಿಕ ಕರ್ನಾಟಕ, ಸಂ.೨, ೧೯೭೩, ಪು.೬೧ - ಮೈಸೂರು ವಿಶ್ವವಿದ್ಯಾಲಯ.  
  ಕವಿ ಲಿಂಗಣ್ಣ ರಚಿಸಿದ ಕೆಲವು ಕೃತಿಗಳ ಸೂಕ್ಷ್ಮ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
೧. ಕೆಳದಿ ನೃಪವಿಜಯ: (ಪುನರುಕ್ತಿಯಾಗುವುದರಿಂದ ಈ ಭಾಗ ಕೈಬಿಟ್ಟಿದೆ).
೨. ದಕ್ಷಾಧ್ವರ ವಿಜಯ: ಇದೊಂದು ಖಂಡ ಕಾವ್ಯ. ಸ್ಕಂದ ಪುರಾಣದಲ್ಲಿ ವ್ಯಾಸ ಮಹರ್ಷಿಯ ಶಿಷ್ಯನಾದ ಸೂತನು ಶೌನಕಾದಿ ಮುನಿಗಳನ್ನು ನೈಮಿಷಾರಣ್ಯದಲ್ಲಿ ಸಂಧಿಸಿದಾಗ ಮಹಾದೇವನ ಮಹಾತ್ಮೆಯನ್ನು ಕೇಳು ತ್ತಾರೆ. ಆಗ ಅಲ್ಲಿ ದಕ್ಷನ ವಿಷಯ ಬರುತ್ತದೆ. ಬ್ರಹ್ಮ ಪುತ್ರನಾದ ದಕ್ಷನಿಗೆ ತಾನೇ ಶ್ರೇಷ್ಠನೆಂಬ ಗರ್ವ. ದಕ್ಷನು ಬ್ರಹ್ಮನ ಮಾತಿನಂತೆ ತನ್ನ ಮಗಳಾದ ಸತೀದೇವಿಯನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಿದನಂತೆ. ಮುಂದೊಮ್ಮೆ ಇಂದ್ರಾದಿ ಗಳೂ, ಮಹರ್ಷಿಗಳೂ ನೈಮಿಷಾರಣ್ಯಕ್ಕೆ ಬಂದಾಗ ಇವರನ್ನು ಸ್ತುತಿಸಿದರಂತೆ. ಆದರೆ ಶಿವನು ಅವರನ್ನು ಎದ್ದು ಗೌರವಿಸಲಿಲ್ಲ. ಇದರಿಂದ ಸಿಟ್ಟುಗೊಂಡ ದಕ್ಷನು ಶಿವನನ್ನು ಯಜ್ಞ ಬಾಹ್ಯನನ್ನಾಗಿ ಮಾಡಿರುವುದಾಗಿ ತಿಳಿಸುತ್ತಾನೆ. ತಿಳಿ ಹೇಳಲು ಮುಂದಾದ ನಂದಿಗೂ ಶಾಪವಿತ್ತು ಕನಖಲ ಎಂಬ ಕ್ಷೇತ್ರದಲ್ಲಿ ಯಜ್ಞಕ್ಕೆ ಮುಂದಾಗುತ್ತಾನೆ. ಇದು ಶಿವ ದ್ರೋಹವಾಗಿ ಪರಿಣಮಿಸಿ ನಡೆಸಿದ ಯಾಗವೇ ದಕ್ಷಾಧ್ವರವೆಂದು ಪುರಾಣ ಪ್ರಸಿದ್ಧವಾಗಿದೆ.
     ದಕ್ಷಾಧ್ವರ ವಿಜಯ ಕಾವ್ಯದ ಕೆಲವು ಸಾಲು ಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದ್ದು, ಇವುಗಳು ಸಂಗೀತಾಸಕ್ತರಿಗೆ ಹೆಚ್ಚು ಪ್ರಿಯವಾಗಬಹುದು; ಸಂಗೀತ ಶಾಸ್ತ್ರದಲ್ಲೂ ಕವಿಗೆ ಇದ್ದ ಪ್ರೌಢಿಮೆಯನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ.
ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ| ಮುನಿಭಾವಿತೆ|
ಧರಣೀಧರ ವರಜಾತೆ|
ಬಾಲೆ ಸಕಲ ಜಗನ್ಮೋಹಿನಿ| ಸಿಂಹವಾಹಿನಿ|
ಲಾಲಿತ ಗಣಪ ಸೇನಾನಿ|| . .(ಭೈರವಿ ರಾಗ)
ಕಲ್ಯಾಣಿ ಕುರುವಾಣಿ| ಕಲ್ಯಾಣಂ ಕುರುವಾಣಿ ಸುವೇಣಿ|
ಕಲ್ಯಾಣಿ ವರದೇ ಬ್ರಹ್ಮಾಣಿ|| . .(ಬಿಲಾವರಿ ರಾಗ)
ಸಂತತಮೀಡೇ ಶಂಕರಂ| ಶಂಕರಂ| ಬ್ರಹ್ಮಾದಿದೇವ ಕಿಂಕರಂ|  ವಾರಿಜಭವ ಕಂಕರಂ| ಕುಂಡಲಿತ ದರ್ವೀಕರಂ| ಬಾಲಶೀತಾಂಶೂ ಶೇಖರಂ| ಸಂತತ ಮೀಡೇ ಶಂಕರಂ || (ಮೋಹನಕಲ್ಯಾಣಿ ರಾಗ)
ಲಿಂಗಂ ಭಜೇ ದಿವ್ಯ ಲಿಂಗಂ ಭಜೇ|ಮಹಾಲಿಂಗಂ ಭಜೇ ಶಿವಲಿಂಗಂ ಭಜೇ|| (ಪೂರ್ವಿ ಕಲ್ಯಾಣಿ ರಾಗ)
ಪಾಲಯಮಾಂ ಶಂಕರ| ಪೋಷಿತ ಸುರ|       ಜಾಲ ವ್ಯೋಮ ಗಂಗಾಧರಾ|| ನೀಲಲೋಹಿತ ಭೂರಲೋಲ ಗಾನ ವಿಲೋಲ|| ಕಾಲ ಕಾಲ ಕರುಣಾಲವಾಲ ಧೃತ| ಶೂಲ ನೀಲ ಫಾಲ ವಿಲೋಚನ|| (ತೋಡಿ ರಾಗ)
೩. ಶಿವಪೂಜಾ ದರ್ಪಣ:  ಇದೊಂದು ಖಂಡ ಕಾವ್ಯ. ೫೮೫ ಸಂಖ್ಯೆಯ ಕಂದ, ವೃತ್ತ, ವಚನ, ಗದ್ಯಗಳಿಂದ ಕೂಡಿದ ಕೃತಿ. ಶಿವಪೂಜೆ ಈ ಕಾವ್ಯದ ವಸ್ತು. ಭಕ್ತಿಮಾರ್ಗದ ವೈಶಿಷ್ಟ್ಯ ಇದರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ೧೭ನೇ ಶತಮಾನದಲ್ಲಿ ಪೂಜಾವಿಧಿಯನ್ನು ಕನ್ನಡದಲ್ಲಿ ನಿರೂಪಿಸಿದ ಪ್ರಥಮ ಪ್ರಯತ್ನ ಇದೆನ್ನಬಹುದು, (ಇತ್ತೀಚೆಗೆ ಹಿರೇಮಗಳೂರು ಕಣ್ಣನ್ ರವರೂ ಕೂಡಾ ಪೂಜಾ ಮಂತ್ರಗಳನ್ನು ಕನ್ನಡದಲ್ಲಿ ಅಳವಡಿಸಿರುವುದೂ ಉಲ್ಲೇಖಾರ್ಹ). ಶಿವಪೂಜಾ ದರ್ಪಣ ಆಸ್ತಿಕರ ಕೈಪಿಡಿ; ಶಿವಭಕ್ತರ ಆರಾಧನಾ ಗ್ತಂಥವೆಂದೂ ಬಣ್ಣಿಸಲಾಗಿದೆ.
     ಕವಿಯು ಪ್ರಥಮಾಶ್ವಾಸದಲ್ಲಿ ಶಿವ - ಪಾರ್ವತಿ ಯನ್ನು, ವಿಘ್ನೇಶ್ವರನನ್ನು, ಶಾರದೆಯನ್ನು, ವಾಲ್ಮೀಕಿ, ಕಾಳಿದಾಸ, ಪಂಪ, ರಾಘವಾಂಕರಂಥ ಮಹಾನ್ ಕವಿಗಳನ್ನು ಸ್ಮರಿಸುವ ಪರಿ ಅವರ ಉತ್ತಮ ಸಂಸ್ಕಾರ ವನ್ನು ಹಾಗೂ ದೇವರ ಮತ್ತು ವಿದ್ವಾಂಸರ ಮೇಲಿರುವ ಅಚಲ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಪೂಜೆಯ ವಿವಿಧ ಹಂತಗಳನ್ನು ಬಲು ಸುಂದರವಾಗಿ ನಿರೂಪಿಸ ಲಾಗಿದ್ದು, ಶಿವನಿಗೆ ನೈವೇದ್ಯವನರ್ಪಿಸುವಾಗ ಕೃತಿಯಲ್ಲಿ ಬರುವ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಕೊಟ್ಟೆಯ ಕಡುಬಂ ಗೋಧಿಯ|
ರೊಟ್ಟಿಯನಾ ಕಡಲೆಗಡುಬ ಪೊಯ್ಗಡುಬಮಂ ನುಂ
ಪಿಟ್ಟ ವೃತ್ತಾಸು ಮುಳುಕಗ|
ಳೊಟ್ಪೊಜೆಗಳನಳಕನೇತ್ರ ಭಕ್ಷಿಪುದೊಲವಿಂ||
ಹೆರೆದುಪ್ಪಂ ತಿಳಿದುಪ್ಪಂ|
ನೊರೆದುಪ್ಪಂ ಕಡಿದುಪ್ಪ ನೀರ್ಮಳಲ್ದುಪ್ಪಂ||
ನೆರೆಯುದಿರ್ದುಪ್ಪಮೆನಿಪ್ಪೀ|
ಪರಿಪರಿದುಪ್ಪಗಳ ಸವಿಯ ನೋಳ್ಪುದುಮೇಶಾ||

     ಶಿವಪೂಜಾ ದರ್ಪಣದ ಪ್ರತಿ ಅಧ್ಯಾಯದ ಅಂತ್ಯದಲ್ಲಿ ಕವಿ ತನ್ನ ಹೆಸರು ಹಾಗೂ ಗೋತ್ರ (ಹರಿತಸ)ಗಳನ್ನು ಹೇಳಿಕೊಂಡಿರುವುದನ್ನು ಗಮನಿಸ ಬಹುದಾಗಿದೆ. ಈ ಕಾವ್ಯದ ಅಂತ್ಯದಲ್ಲಿ ಕವಿ ಬರೆದ ಮುಕ್ತಾಯ ಇಂತಿದೆ. (ಬಹುಶಃ ಶಿವಪೂಜಾದರ್ಪಣ ದಲ್ಲಿ ವಿವರವಾಗಿ ನಿರೂಪಿಸಿರುವ ಶಿವ ಪೂಜೆಯ ಪ್ರತಿ ಹೆಜ್ಜೆಗಳ ಸಾರಾಂಶವೇ ಇದರಲ್ಲಿದೆಯೆನ್ನಲಡ್ಡಿಯಿಲ್ಲ).
ಇದಖಿಲ ಸುರನರೋರಗ ನಿಕರ ಮಕುಟ ತಟ ಘಟಿತ ಮಾಣಿಕ್ಯ
ಮಯೂಖಮಂಜರೀಪುಂಜ ಶಬಲೀಕೃತ ಕನತ್ಕನಕ ಪಾದುಕಾ
ವಿರಾಜಮಾನ ಶ್ರೀಮತ್ಸಾಂಬ ಸದಾಶಿವ ಚರಣಾರವಿಂದ ದ್ವಂದ್ವ ಭಕ್ತಿರಸ ಮಕರಂದಮತ್ತ ಮಧುಕರಾಯಣಮಾನಸ ಭೂಸುರ ಕುಲಪ್ರದೀಪ ಹರಿತಸ ಗೋತ್ರೋದ್ಭವ ವೆಂಕಪಾತ್ಮಜ ಲಿಂಗಣಸೂರಿ ವಿರಚಿತ
ಶಿವಪೂಜಾದರ್ಪಣ ಪ್ರಬಂಧದೊಳ್ ರಂಗಪೂಜಾ ದೀಪಾರಾಧನ
ವಿವಿಧ ನೀರಾಜ(ನ) ವಸ್ತ್ರ (ಸಮ)ರ್ಪಣ ಮಂತ್ರಪುಷ್ಪ ಪ್ರದಕ್ಷಿಣ
ನಮಸ್ಕಾರ ಪ್ರಾರ್ಥನ ನಾನಾ ವಿಧ ವಿನಿಯೋಗ ಸೇವಾ ಸಮರ್ಪಣ
ಋಗ್ವೇದಾದಿ ವೇದ ವೇದಾಂಗ ಶಾಸ್ತ್ರಪುರಾಣಾಗಮ ತಂತ್ರೀ ಪಟಹಾದಿ ವಾದ್ಯ ಸುಷಿರ ವಾದ್ಯಾದಿ ವಾದುವಾದನ ಶ್ರವಣ ನೃತ್ಯ ವೃಷಭ ತುರಂಗಾರೋಹಣಾದಿ ನಾನಾ ವಿಧಯಾನೋತ್ಸವ ದೋಲಾರೋಹಣ ಖೇಲನ ಮಣಿಮಂಟಪ ಪ್ರ(ಧಾನ) ಮಂಗಲಾರತಿಕ ಸಮರ್ಪಣ ಕ್ಷೀರ ಪಾನಾತ್ಮಾರೋಪಣಾದಿ ಪೂಜೋಪಚಾರ ಸಮರ್ಪಣ ಕೃತಿ ಪ್ರಶಂಸಾತಚ್ಛ್ರವಣ ಫಲ ವಿವರಣಂ ಪಂಚಮಾಶ್ವಾಸಂ ಸಂಪೂರ್ಣಂ

     ಕವಿ ಲಿಂಗಣ್ಣ ಪಾರ್ವತಿ ಪರಿಣಯ ಮತ್ತು ಶಿವಕಲ್ಯಾಣ (ಯಕ್ಷಗಾನ) ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ.[ದಕ್ಷಾಧ್ವರ ವಿಜಯ (ಮೇಲೆ ಉಲ್ಲೇಖಿಸಿದ ಕೆಲವು ರಚನೆಗಳ ಸಂಪೂರ್ಣ ಸಾಹಿತ್ಯ ಇದರಲ್ಲಿದೆ) ಮತ್ತು ಶಿವಪೂಜಾ ದರ್ಪಣ ಕೃತಿಗಳನ್ನು ಕೆಳದಿಯ ಡಾ: ವೆಂಕಟೇಶ ಜೋಯಿಸರು ಸಂಪಾದಿಸಿ ೨೦೦೨ ರಲ್ಲಿ ಪ್ರಕಟಿಸಿದ್ದಾರೆ.]
     ಒಟ್ಟಿನಲ್ಲಿ ಹೇಳಬೇಕೆಂದರೆ ಕವಿ ಲಿಂಗಣ್ಣ ಓರ್ವ ಉತ್ತಮ ಇತಿಹಾಸಕಾರ, ಶ್ರೇಷ್ಠ ಕವಿ, ಸಂಗೀತಜ್ಞ ಮತ್ತು ಆಸ್ತಿಕ ಪುರುಷ. ಈತ ರಚಿಸಿರುವ ಅನೇಕ ಕೃತಿಗಳು ಸಂಶೋಧನೆಗೆ ಅರ್ಹವಾಗಿದ್ದು, ಚರಿತ್ರೆಯಲ್ಲಿ ಮತ್ತು ಕಾವ್ಯದಲ್ಲಿ ಆಸಕ್ತಿ ಹೊಂದಿದವರೆಲ್ಲರೂ ಈ ದಿಶೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಇನ್ನೂ ಉತ್ತಮವಾದ ಸಂಗತಿ ಗಳನ್ನು ಬೆಳಕಿಗೆ ತರಬಹುದಾಗಿದೆ. ಈತನ ನಂತರದ ಪೀಳಿಗೆಯವರಾದ ಸಾಗರದ ಕವಿ ಲಿಂಗಣ್ಣಯ್ಯ (ಶ್ರೇಷ್ಠ ಚಿತ್ರಕಾರ - ರಾಮಾಯಣ ಮತ್ತು ಭಾಗವತವನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ. ಚಿತ್ರ ರಚನೆ, ಮುದ್ರಣಕಲೆ, ಛಾಯಾಗ್ರಹಣ ಕಲೆ, ಮುಂತಾದ ವಿಷಯಗಳ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ). ಇವರ ಮೊಮ್ಮಗ ಕೆಳದಿ ಗುಂಡಾಜೋಯಿಸ್ (ಕೆಳದಿ ಮ್ಯೂಜಿಯಂ ಸಂಸ್ಥಾಪಕರು, ಸಂಶೋಧಕರು, ಅನೇಕ ಇತಿಹಾಸ ಕೃತಿಗಳ ರಚನೆಕಾರರು, ರಾಜ್ಯ ಪ್ರಶಸ್ತಿ ವಿಜೇತರು) ಮತ್ತು ಕವಿ ವಂಶದ ಇತರ ಅನೇಕರು ವಿವಿಧ ಕ್ಷೇತ್ರಗಳಲ್ಲಿ (ಸಂಗೀತ, ಸಾಹಿತ್ಯ, ಕಲೆ, ಇಂಜನಿಯರಿಂಗ್, ವೈದ್ಯಕೀಯ, ಆಧ್ಯಾತ್ಮಿಕ. ಇತ್ಯಾದಿ) ತಮ್ಮದೇ ಆದ ಅನುಪಮ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ಗಳನ್ನು ನೀಡುತ್ತಿದ್ದು, ಕವಿ ಲಿಂಗಣ್ಣನ ಹಾದಿಯಲ್ಲಿಯೇ ಸಾಗುತ್ತಿರುವುದು ಬಹುಶಃ ಕವಿ ಲಿಂಗಣ್ಣನ ಮತ್ತು ಕುಲಾರಾಧ್ಯ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕೃಪೆಯೆಂದೇ ಹೇಳಬಹುದು. 

  - ಕವಿ ವೆಂ. ಸುರೇಶ್
   (ಲೇಖಕರ 'ಉತ್ಕೃಷ್ಟದೆಡೆಗೆ' ಪುಸ್ತಕದಿಂದ ಆಯ್ದ ಲೇಖನ) 
(ಡಿಸೆಂಬರ್, 2008ರ 'ಕವಿಕಿರಣ' ಪತ್ರಿಕೆಯಲ್ಲಿ ಪ್ರಕಟಿತ ಲೇಖನ).    

Monday, November 15, 2010

ಕೆಳದಿ ಲಿಂಗಣ್ಣ ಕವಿ

ಕೆಳದಿ ಲಿಂಗಣ್ಣ ಕವಿ
     ಕರ್ನಾಟಕದ ಚರಿತ್ರೆಯಲ್ಲಿ 'ಕೆಳದಿ ನೃಪವಿಜಯ' ಕೃತಿಕಾರ ಕವಿ ಲಿಂಗಣ್ಣನ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಚಿರ ಪರಿಚಿತವಾದುದು. ಸುಮಾರು ೧೭೫೦ ರಲ್ಲಿ ಬಾಳಿದ ಈತನು ಕೆಳದಿ ಸಂಸ್ಥಾನದ ಆಸ್ಥಾನ ಕವಿಯಾಗಿದ್ದನು. ಕವಿ ಸುರೇಶರವರು ತಮ್ಮ 'ಹಳೆ ಬೇರು ಹೊಸ ಚಿಗುರು' ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಲಿಂಗಣ್ಣನನ್ನು ಪರಿಚಯಿಸಿರುವುದರಿಂದ ಚರ್ವಿತ ಚರ್ವಣ ಅನಗತ್ಯ.
      ತಾಳೆಯೋಲೆ ಹಸ್ತಪ್ರತಿಯಲ್ಲಿ    "ತಿಳಿಯಲ್ಕೀ ಕೃತಿನಾಮಂ  ಕೆಳದೀನೃಪವಿಜಯ ಮೆಂದಿದಕ್ಕಧಿನಾಥಂ   ಕೆಳದಿಪ ರಾಮೇಶ್ವರನಿದನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ" ಎಂಬ ಉಲ್ಲೇಖನವು ಲಿಂಗಣ್ಣನು ವೆಂಕಪ್ಪನ ಮಗನೆಂದು ಉದ್ಗರಿಸಿದೆ. ಈತನ ಕಾಲವು ೧೭೫೦ರ ಸುಮಾರಿನಲ್ಲಿರುತ್ತದೆ. ಸುಸಂಸ್ಕೃತ ಕವಿಯಾಗಿ, ಚಾರಿತ್ರಿಕ ಸಂಶೋಧಕನಾಗಿ ಕೆಳದಿ ಅರಸರ ಆಸ್ಥಾನದಲ್ಲಿ ಶೋಭಿಸಿ ಲಿಂಗಣ್ಣ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ. ಕಿರಿಯ ಬಸವಪ್ಪನ ಕಾಲದ ಕೆಳದಿಯ ಸುವರ್ಣ ಯುಗ ವನ್ನು ಕಂಡಿದ್ದಾನೆ. ಅದು ನಾಶಗೊಂಡ ದುರಂತ ಚಿತ್ರ ವನ್ನು ಅವಲೋಕಿಸಿದ್ದಾನೆ. ಕಡೆಯಲ್ಲಿ ದಾರುಣ ಬದುಕು ಸವೆಸಿದ್ದಾನೆ. ರಾಜಾಶ್ರಯ ತಪ್ಪಿ ಮಕ್ಕಳೂ ಬೇರೆ ಬೇರೆ ಯಾಗಿ ಲಿಂಗಣ್ಣ ತುಂಬಾ ಕಷ್ಟ ಅನುಭವಿಸಿದುದು ವೇದ್ಯ ವಾಗುತ್ತದೆ. ಏನೇ ಇರಲಿ, ಈತನ ಕೃತಿಗಳು ಚಿರಂತನ ವಾದುವುಗಳು.
ಕೃತಿಗಳುಃ-
೧) ಕೆಳದಿನೃಪವಿಜಯ- ಶ್ರೀ ಗುಂಡಾಜೋಯ್ಸರ ಗದ್ಯಾನುವಾದದೊಂದಿಗೆ ೫ಬಾರಿ ಮರು ಮುದ್ರಣ ವಾಗಿದೆ.
೨)   ಶಿವಪೂಜಾದರ್ಪಣ
೩) ಪಾರ್ವತಿ ಪರಿಣಯ-  ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೪) ದಕ್ಷಾಧ್ವರ ವಿಜಯ- ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೫)   ಶಿವಕಲ್ಯಾಣ (ಅಪ್ರಕಟಿತ ಓಲೆಗರಿ)
     ಬೆಂಗಳೂರಿನಲ್ಲಿ ನಾನು ಓದುತ್ತಿದ್ದಾಗ ಲಿಂಗಣ್ಣ ಕವಿಯ ತಾಳೆಯೋಲೆ ಹಸ್ತಪ್ರತಿಗಳನ್ನು ಪ್ರೀತಿಯಿಂದ ನನಗಿತ್ತ (ಲಿಂಗಣ್ಣ ಕವಿ ಪೀಳಿಗೆಯ) ಸೋದರ ಮಾವಂದಿರುಗಳಿಗೆ ಕವಿ ಭಾಂಧವರ ಪರವಾಗಿ ವಿನಮ್ರ ಕೃತಜ್ಞತೆಗಳು. ಈ ತಾಳೆಯೋಲೆ ಆಧಾರದಿಂದ ಕೆಳದಿ ಸಂಶೋಧನಾಲಯ ಮುಖಾಂತರ ಪ್ರಕಟಣೆ ಕಂಡಿರುವುದು ಈಗ ತಮ್ಮ ಮುಂದಿರುವುದನ್ನು ಕಾಣಬಹುದಲ್ಲವೇ?.

        ಕೆಳದಿ ನೃಪವಿಜಯವು ಲಿಂಗಣ್ಣನನ್ನು ಸುಪ್ರಸಿದ್ದ ಇತಿಹಾಸ ಸಂಶೋಧಕನನ್ನಾಗಿಸಿದೆ. ಪೂನಾ ವಿಶ್ವ ವಿದ್ಯಾಲಯದ ಪಾಧ್ಯ್ಯಾಪಕ ಡಾಃ ಚಿಟ್ನೀಸ್ ರವರು-
“The literary sources are generally less authentic than either the inscriptions or the accounts of foreign travellers as far as the present work is concerned. The most important literary works are the Keladi Nrpa Vijayam written by Linganna Kavi or poet Linganna. This work seems to have been written between 1763-1804 AD. This literary work, unlike many others, contains more of historical information than of literary praises about the Keladi monarchs. In the work, the poet mainly gives a narration of the rulers one by one. Incidentally he refers to other contemporary dynasties ruling in India, particularly in Karnataka. Much of the information contained in this work is in agreement with the inscriptions and foreign sources. Hence it seems to be more authentic than other literary works. I have  freely drawn upon this work in my thesis corroborating it, wherever possible, by the inscriptions and other sources. It is interesting to note that Linganna Kavi has, in his work, supplemented the main narration by captions, footnotes given usually at the end of every chapter. They contain the names of various officers serving under their respective rulers. This information is useful in writing about the ministers, military generals and other office bearers.” ಎಂಬುದಾಗಿ ಕೃತಿಯ ಶ್ರೇಷ್ಠತೆಯನ್ನು ಕೊಂಡಾಡಿ ಪಿ.ಎಚ್.ಡಿ. ವಿದ್ವಾಂಸರಿಗೆ ಆಕರಗಳ ಮಹತ್ವವನ್ನು ಪ್ರತಿಬಿಂಬಿಸಿದ್ದಾರೆ. ಕೆಳದಿ ನೃಪ ವಿಜಯದ ಹಸ್ತಪ್ರತಿ ಯೊಂದು ಲಂಡನ್‌ನಲ್ಲಿ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಇದರ ಚಾರಿತ್ರಿಕ ಮಹತ್ವವನ್ನು ಮನಗಂಡ ಕರ್ನಲ್ ಮೆಕೆಂಝಿಯು ೧೭-೧೮ ನೇ ಶತಮಾನದಲ್ಲಿಯೇ ಇದನ್ನು ಇಂಗ್ಲೀಷ್‌ನಲ್ಲಿ ಭಾಷಾಂತರಿಸಿದ ಪ್ರಾಚೀನ ಹಸ್ತಪ್ರತಿಯೂ ಲಂಡನ್ ನಲ್ಲಿದೆ. ಯಾವ ವಿಶ್ವವಿದ್ಯಾಲಯ ಹಾಗೂ ಪಿ.ಹೆಚ್.ಡಿ. ವಿದ್ವಾಂಸನೂ ದಕ್ಷಿಣ ಭಾರತ ಇತಿಹಾಸ ರಚನೆಯಲ್ಲಿ ಲಿಂಗಣ್ಣನ ಈ ಆಕರ ಕೃತಿಯನ್ನು ಆಧರಿಸದಿದ್ದಲ್ಲಿ ಸಂಶೋಧನಾ ಕೃತಿಗೆ ಬೆಲೆ ಬರುವುದಿಲ್ಲವೆಂಬುದು ಕೃತಿ ಹಾಗೂ ವಿದ್ವಾಂಸರ ಹೆಗ್ಗಳಿಕೆ. ಕೆಳದಿ ಸಂಶೋಧನಾಲಯದಲ್ಲಿ ಇದರ ಒಂದೇ ಒಂದು ಓಲೆಗರಿಯಿರುವುದನ್ನು ಮನಗಂಡ ಸರ್ಕಾರ ಗೆಜೆಟೀರ್ ನಲ್ಲಿ ಇದರ ಛಾಯಾ ಚಿತ್ರವನ್ನು ಪ್ರಕಟಿಸಿದೆ. ಪ್ರಸಿದ್ಧ ಏ.ಆರ್. ಕೃಷ್ಣಶಾಸ್ತ್ರಿ ಆದಿಯಾಗಿ ಖ್ಯಾತ ವಿದ್ವಾಂಸರು ಕೆಳದಿ ಕವಿ ಲಿಂಗಣ್ಣನ ಕವಿತಾ ಸಾಮರ್ಥ್ಯ ವನ್ನು ಮನಸಾರೆ ಕೊಂಡಾಡಿದ್ದಾರೆ.
ಸ ಕವಿಃ ಕಥ್ಯತೇ ಸೃಷ್ಟಾ
  ರಮತೇ ಯತ್ರ ಭಾರತೀ!
   ರಸಭಾವ ಗುಣೀ ಭೂತೈಃ
       ಅಲಂಕಾರೈಃ ಗುಣೋದಯೈಃ!!
ಎಂಬಂತೆ ಕೆಳದಿ ಕವಿ ಲಿಂಗಣ್ಣನು ಆದರ್ಶ ಪ್ರಾಯ ಇತಿಹಾಸ ಸಂಶೋಧಕ ಹಾಗೂ ಕವಿಯಾಗಿರುವುದು ಕನ್ನಡಿಗರ ಹೆಮ್ಮೆ. ಇವನ ಸ್ಮರಣೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದ್ದು, ಶಿವಮೊಗ್ಗ, ಬೆಂಗಳೂರು ಹಾಗೂ ಸಾಗರದ ವೃತ್ತ ಅಥವಾ ಪ್ರಮುಖ ಮಾರ್ಗಗಳಲ್ಲಿ ಈತನ ನಾಮಾಂಕಿತವನ್ನಿಡಲು ಕವಿ ಬಾಂಧವರು ಹೋರಾಡಲು ಮನಸ್ಸು ಮಾಡುವರೇ?
                      -ಸಂಶೋಧನಾ ರತ್ನ ಕೆಳದಿ ಗುಂಡಾ ಜೋಯಿಸ್.
(ಕವಿಕಿರಣದ ಡಿಸೆಂಬರ್, ೨೦೦೮ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ) 

Sunday, November 14, 2010

ಸುಬ್ಬ ಕವಿ ವಿರಚಿತ 'ಪಾರಿಜಾತ' ಯಕ್ಷಗಾನ ಕೃತಿಯಲ್ಲಿನ ಕೃಷ್ಣ-ಭಾಮೆಯರ ಸಂಭಾಷಣೆ

ರಾಗ: ಸೌರಾಷ್ಟ್ರ            :      ಏಕತಾಳ

ಕೃಷ್ಣ : ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲ ತೆಗೆಯೆ ||

ಭಾಮೆ: ದ್ವಾರದಿ ದನಿಯನ್ನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು ||

ಕೃಷ್ಣ : ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ ||

ಭಾಮೆ : ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ ||

ಕೃಷ್ಣ : ಕ್ರೂರ ಕಾಳಿಂಗನ ಪಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ ||

ಭಾಮೆ : ಧೀರ ನೀನಾದರೆ ಪಾವನಾಡಿಸಿಕೊಂಡು ಗಾರುಡಿಗಾರ ಹೋಗಯ್ಯ ||

ಕೃಷ್ಣ : ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ ||

ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ ||

ಕೃಷ್ಣ : ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ ||

ಭಾಮೆ: ಆದರೊಳ್ಳಿತು ಘೋರಾಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ ||

ಕೃಷ್ಣ : ಕಾಂತೆ ಕೇಳಾದರೇಳು ವೃಷಭವ ಕಟ್ಟೆ ನೀಲಕಾಂತೆಯ ತಂದವ ಕಾಣೆ ||

ಭಾಮೆ: ಅಂತಾದರಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ ||

ಕೃಷ್ಣ : ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ ||

ಭಾಮೆ: ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ ||

ಚೌಡಮ್ಮ ದೇವಿ - ಕವಿ ವಂಶದ ಕಾವಲು ದೇವತೆ


ಕೆಳದಿ ಕವಿ ಮನೆತನವನ್ನು ಅನಾದಿ ಕಾಲದಿಂದಲೂ ಚೌಡಮ್ಮ ದೇವಿ ರಕ್ಷಿಸುತ್ತಿರುವಳು ಎಂದು ತಿಳಿದುಬಂದಿದೆ. ಚೌಡಮ್ಮ ದೇವಿ ಸ್ವರೂಪವಾದ ಮೇಲಿನ ಕಲ್ಲು ಕೆಳದಿ ಕವಿ ಮನೆತನಕ್ಕೆ ಸೇರಿದ ಶ್ರೀ ಕವಿ ನಾಗರಾಜಭಟ್ಟರ ನಿವೇಶನದಲ್ಲಿರುತ್ತದೆ. ಈಗಲೂ ಕವಿ ಮನೆತನದವರ ಕೆಲವು ಮನೆಗಳಲ್ಲಿ ಶುಭ ಕಾರ್ಯ ನಡೆಯುವಾಗ ದೇವಿಗೆ ಬಾಗಿನ-ನೈವೇದ್ಯ ಸಲ್ಲಿಸುವ ಪ್ರತೀತಿ ಇದೆ. ಕವಿ ಮನೆತನದ ಎರಡನೇ ಸಮಾವೇಶ ಕೆಳದಿಯ ಶ್ರೀ ಕವಿ ರಾಮಮೂರ್ತಿಯವರ ಮನೆಯಲ್ಲಿ ನಡೆದ ಸಂದರ್ಭದಲ್ಲಿಯೂ ಕೂಡ ಪೂರ್ವಭಾವಿಯಾಗಿ ಚೌಡಮ್ಮ ದೇವಿಗೆ ವಿದ್ಯುಕ್ತ ಪೂಜೆ ಸಲ್ಲಿಸಲಾಯಿತು. ಇದನ್ನು ಸಂರಕ್ಷಿಸಲು ಮತ್ತು ಸೂಕ್ತ ಕಟ್ಟಡ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

[ಫೋಟೋ: ಕವಿ ಬಿ.ಎಸ್.ಆರ್.ದೀಪಕ್]

Saturday, November 13, 2010

ತೋರಣ ಗಣಪತಿ



ಕೆಳದಿ ಕವಿ ಮನೆತನಸ್ಥರ ಮನೆಯಲ್ಲಿದ್ದ  ಈ ತೋರಣ ಗಣಪತಿ ಈಗ ಸಾಗರದ ಒಬ್ಬರ* ಮನೆಯಲ್ಲಿದೆ. ಕವಿ ವಂಶದವರು ಯಾವುದೇ ಕಾರ್ಯಕ್ಕೆ ಮೊದಲು ಈ ಗಣಪತಿಯನ್ನು ಪೂಜಿಸುತ್ತಿದ್ದರೆಂದು ಹೇಳಲಾಗಿದೆ.

*ಸಾಗರದಲ್ಲಿರುವ ನಿವೃತ್ತ ಗ್ರಾಮಲೆಕ್ಕಿಗ ಶ್ರೀ ನಾಗರಾಜರಾವ್ ರವರ ಮನೆಯಲ್ಲಿ ಇದು ಈಗ ಇದೆ. ಇವರು ದಿ. ಕವಿ ತಮ್ಮಣ್ಣಭಟ್ಟರ ಭಾವ (ತಂಗಿಯ ಪತಿ). ತಮ್ಮಣ್ಣಭಟ್ಟರಿಗೆ ಮಕ್ಕಳಿಲ್ಲ. [ಕವಿ ನಾಗರಾಜ್]

[ಮಾಹಿತಿ ಕೃಪೆ: ಕವಿ ರಾಮಮೂರ್ತಿ, ಕೆಳದಿ]

ಏನ ಬೇಡಲಿ ನಿನ್ನ....?

ರಾಗ: ಕಾಂಬೋಜಿ     :     ಝಂಪೆ ತಾಳ


ನಿನ್ನ ಸೇವೆಯನೊಂದನಿತ್ತು ಸಲಹೋ
ಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ                                        || ಪ ||

ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷ-
ವನ್ನು ಕುಡಿದಿಹ ನೀಲಕಂಠನೊಡನೆ
ಸನ್ನುತಾಂಬರವ ಬೇಡುವುದೆಂತು ಕರಿಚರ್ಮ-
ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ                              || 1 ||


ಮಿರುಗುವಾಭರಣಗಳ ಬೇಡಿಕೊಂಬುದದೆಂತು
ಉರಗಕುಂಡಲ ಹಾರ ವಲಯನೊಡನೆ
ಪರಮಭಾಗ್ಯವ ಬೇಡಿಕೊಂಬೆ ನಾನೆಂತು ವಿಧಿ
ಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ                                         || 2 ||

ಕರಿತುರಗ ಮುಖ್ಯವಾಹನವ ಬೇಡುವುದೆಂತು
ನಿರುತ ಬಸವನ ಮೇಲೆ ಚರಿಪನೊಡನೆ
ಕರುಣದಿಂದೆನಗೆ ಕೊಡಲೇನುಂಟೋ ಕೆಳದಿಪುರ-
ದೆರೆಯ ರಾಮೇಶ ಶ್ರೀಕರ ಪಾರ್ವತೀಶ                                          || 3 ||


ರಾಮೇಶ್ವರನ ಸ್ತುತಿ

ರಾಗ: ತೋಡಿ   :   ಝಂಪೆ ತಾಳ

ಇನ್ನೇನು ಗತಿ ಎನಗೆ ಈ ಉದರ ಪೋಷಣಕೆ
ನಿನ್ನ ಸೇವೆಯನಿತ್ತು ಸಲಹೋ ರಾಮೇಶ                                       || ಪ ||

ಊರೂರ ತಿರುಗಿ ಭಿಕ್ಷವ ಬೇಡಲಾರೆ ನಾಂ-
ಘೋರ ವಿಷವನು ಮೊದಲೆ ಕುಡಿಯಲಾರೆ
ನೀರ ಹೊರಲಾರೆ ಬಾಗಿಲು ಕಾಯಲಾರೆ                                       || 1  ||

ಧರಿಸುವರೆ ವಸ್ತ್ರವಿಲ್ಲದೆ ಲೋಕದೊಳ್ ದಿಗಂ-
ಬರನಾಗಿ ನಿನ್ನಂತೆ ಚರಿಸಲಾರೆ
ಕರಿವ್ಯಾಘ್ರ  ಚರ್ಮವನು ಪೊದೆದು ವರ್ತಿಸಲಾರೆ
ಧರೆಯರಿಯೆ ನಟನಾಗಿ ಕುಣಿದಾಡಲಾರೆ                                       || 2 ||

ಚಲ್ಲೆದ್ದು ಕುಂಟಣಿತನವ ರಚಿಸಲಾರೆ ನಾ
ಮಲ್ಲಗಾಳಗವ ನಾ   ಮಾಡಲಾರೆ
ಕಲ್ಲೆದೆಯದೇಕೋ ಕೆಳದಿಯ ಪುರಾಧೀಶ್ವರನೆ
ಫುಲ್ಲಶರಮದ ಭಂಗ ರಾಮಲಿಂಗೇಶ                                    || 3 ||            

Wednesday, November 10, 2010

ಮನೆತನದ ಪತ್ರಿಕೆ 'ಕವಿಕಿರಣ'

     'ಕವಿಕಿರಣ' ಪತ್ರಿಕೆಯ ಆರಂಭಕ್ಕೆ ಬಂದ ಶುಭ ಕೋರಿದ ಸಂದೇಶಗಳು

                                     ಶುಭ ಆಶೀರ್ವಾದ

ಸಂಪಾದಕರಿಗೆ,
     ನೀವು ದಿನಾಂಕ ೧೨-೦೯-೦೮ರಂದು ಬರೆದ ಪತ್ರವು ತಲುಪಿ, ಶ್ರೀ ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಪಾದಾರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮಪೂರ್ವಕ ಸಮರ್ಪಿಸಲಾಯಿತು.
     ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ಹಿಂದಿನ ಸಾಧಕರುಗಳನ್ನು ಮತ್ತು ಅವರ ಕೃತಿಗಳನ್ನು ಪರಿಚಯಿಸುವ ಹಾಗೂ ಉತ್ತಮ ಸಾಧನೆಯ ಪರಂಪರೆಯ ಮುನ್ನಡೆಯೊಂದಿಗೆ ಸಜ್ಜನ ಶಕ್ತಿಯ ಜಾಗೃತಗೊಳಿಸುವ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆ ಪ್ರಕಟಗೊಳ್ಳಲಿರುವ ವಿಚಾರವನ್ನು ಅರಿತು ಶ್ರೀ ಶ್ರೀ ಗಳವರು ಸಂತೋಷಪಟ್ಟಿರುತ್ತಾರೆ.
     ಶ್ರೀ ಶಾರದಾ ಚಂದ್ರಮೌಳೀಶ್ವರರ ಕೃಪೆಯಿಂದ ಪತ್ರಿಕೆಯು ವಿದ್ವತ್ಪೂರ್ಣ ಲೇಖನಗಳೊಂದೊಡಗೂಡಿ ಪ್ರಕಟಗೊಳ್ಳಲಿ ಹಾಗೂ ಬಹು ಜನಪ್ರಿಯತೆಯನ್ನು ಗಳಿಸುವಂತಾಗಲಿ ಎಂದು ಶ್ರೀ ಶ್ರೀಗಳವರು ಆಶೀರ್ವದಿಸಿ, ಅನುಗ್ರಹಿಸಿರುವ ಆಶೀರ್ಮಂತ್ರಾಕ್ಷತೆ, ಶ್ರೀ ಶಾರದಾ ಅರ್ಚನಾ ಪ್ರಸಾದವನ್ನು ಕಳುಹಿಸಿರುತ್ತೇನೆ.
ವಂದನೆಗಳೊಂದಿಗೆ,


ಗೌರೀಶಂಕರ್,
ಆಡಳಿತಾಧಿಕಾರಿಗಳು, ಶ್ರೀ ಶೃಂಗೇರಿ ಮಠ, ಶೃಂಗೇರಿ .


*******************************
                                                        

                                    ಶುಭ ಆಶೀರ್ವಾದ


ಸಂಪಾದಕರಿಗೆ,
     ಕವಿಕಿರಣ ಎಂಬ ನೂತನ ಪತ್ರಿಕೆಯೊಂದನ್ನು ಹೊರತರಲಿರುವ ವಿಚಾರ ತಿಳಿದು ಸಂತೋಷವಾಯಿತು.
     ಕೆಳದಿ ಕವಿ ಮನೆತನದ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯಾತ್ಮಕ ಲೇಖನಗಳಿಂದೊಡಗೂಡಿ ಸಂಚಿಕೆಯು ಆಕರ್ಷಕವಾಗಿ ಪ್ರಕಟವಾಗಲೆಂದು ಆಶಿಸುತ್ತೇನೆ.
     ಈ ದಿಸೆಯಲ್ಲಿ ನಿಮ್ಮೆಲ್ಲ ಪ್ರಯತ್ನ ಪರಿಶ್ರಮ ಸಫಲವಾಗುವಂತೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.
ಇತಿ,

ಡಿ. ವೀರೇಂದ್ರ ಹೆಗ್ಗಡೆಯವರು,
ಶ್ರೀ ಧರ್ಮಸ್ಥಳ.


 
***************
                                                    
  ಶುಭ ಆಶೀರ್ವಾದ
ಸಂಪಾದಕರಿಗೆ,
     ಸೂರ್ಯಃ ಆತ್ಮಾ ಜಗತಃ. ಈ ಚರಾಚರ ಪ್ರಪಂಚವನ್ನು ಬೆಳಗುವವ ಭಗವಾನ್ ಸೂರ್ಯದೇವ. ಕಿರಣ ಸ್ಪರ್ಷ ಮಾತ್ರದಿಂದ ಈ ಜೀವಜಗತ್ತಿಗೆ ಚೈತನ್ಯೋದಯ ಅರಳಿಸುವ - ಬೆಳಗಿಸುವ - ಬಾಳಿಸುವ ಗುಣವಿಶೇಷ ಕಿರಣಕ್ಕಿದೆ. ನೇರ - ನಿರಂತರತೆಯೇ ಕಿರಣದ ಗತಿ.
     ಕವಿ ಕ್ರಾಂತದರ್ಶಿ. ತನ್ನಂತರಂಗದ ಅನುಭಾವಕ್ಕೆ ಕ್ಷರರಹಿತವಾದ ಅಕ್ಷರರೂಪ ನೀಡಿ ಸಹೃದಯರಲ್ಲಿ ನವ್ಯಲೋಕವನ್ನು ಸೃಷ್ಟಿಸುವ ಅಭಿನವ ಶಬ್ಧಬ್ರಹ್ಮ. ಪ್ರಕೃತ ಕೆಳದಿಯ ಸಂಸ್ಥಾನದಲ್ಲಿ ಅರಳಿದ ಕವಿವಂಶದ ವೃಕ್ಷವಾಹಿನಿ ತನ್ನತನದ ಮೆರಗಿನೊಂದಿಗೆ ಕವಿಕಿರಣ ಎಂಬ ಪತ್ರಿಕೆಯ ಲೋಕಾರ್ಪಣೆಯ ನವವಸಂತವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಈ ವಿಷಯವರಿತ ಶ್ರೀ ಸಂಸ್ಥಾನದವರು ಸಂತಸ ವ್ಯಕ್ತಪಡಿಸಿರುತ್ತಾರೆ.
     ಭೂತ - ವರ್ತಮಾನ - ಭವ್ಯಭವಿಷ್ಯತ್ತಿನ ಕೊಂಡಿಯಾಗಿ ಬೆಳಗಿದ ಕೆಳದಿಯ ಕವಿ ವಂಶವೃಕ್ಷ ಬಾಳಲಿ, ಬೆಳೆಯಲಿ, ಬೆಳಗಲಿ. ತನ್ನ ಜ್ಞಾನಕಿರಣದಿಂದ ಪ್ರಪಂಚವನ್ನು ಪೂರ್ಣತೆಯೆಡೆಗೆ ಒಯ್ಯುವಂತಾಗಲಿ ಎಂದು ಶ್ರೀ ಮಹಾ ಸಂಸ್ಥಾನದವರು ಹಾರೈಸಿದ ಸಂಗ್ತಿ ಶೃತಪಡಿಸಿದೆ.
ಶ್ರೀ ಮಹಾಸಂಸ್ಥಾನದ ಅಪ್ಪಣೆಯ ಮೇರೆಗೆ
ರಾಘವೇಂದ್ರ ಮಧ್ಯಸ್ಥ, ವ್ಯವಸ್ಥಾಪಕರು,
ಶ್ರೀ ರಾಮಚಂದ್ರಾಪುರ ಮಠ,
ಹನಿಯ ಅಂಚೆ, ಹೊಸನಗರ ತಾ., ಶಿವಮೊಗ್ಗ ಜಿಲ್ಲೆ.


*********************


ಶುಭ ಹಾರೈಕೆ
    

      ಇತಿಹಾಸ ಪ್ರಸಿದ್ಧ ಕೆಳದಿ ಸಂಸ್ಥಾನದ ಕವಿ ಮನೆತನದ ಕುಟುಂಬಗಳ ಸಾಧನೆ, ಸಾಧಕರ ಪರಿಚಯಿಸುವುದರೊಂದಿಗೆ ಕವಿಕಿರಣ ಪತ್ರಿಕೆಯನ್ನು ಹೊರತರುತ್ತಿರುವುದು ಸಂತಸದ ಮತ್ತು ಅಭಿನಂದನೀಯ ಸಂಗತಿಯಾಗಿದೆ. ನಾಡಿನ ಇತಿಹಾಸದಲ್ಲಿ ಕೆಳದಿ ಸಂಸ್ಥಾನಕ್ಕೆ ವಿಶಿಷ್ಟ ಸ್ಥಾನ, ಮಾನ ಇದೆ.
ಕವಿಕಿರಣ ಪತ್ರಿಕೆಗೆ ಹಾರ್ದಿಕ ಶುಭ ಕಾಮನೆಗಳು.

ಗೋಪಾಲಕೃಷ್ಣ ಬೇಳೂರು,
ವಿಧಾನ ಸಭಾ ಸದಸ್ಯರು, ಸಾಗರ

***************


                                                   ಸಂದೇಶ     
      ಕೆಳದಿ ಅರಸರ ಸತ್ಯನಿಷ್ಟ ಆಳ್ವಿಕೆಯಿಂದ ಐತಿಹಾಸಿಕ ಮನ್ನಣೆಯನ್ನು ಪಡೆದಿರುವ ಕೆಳದಿಯು, ಕವಿಲಿಂಗಣ್ಣ, ಕವಿ ವೆಂಕಣ್ಣ, ಕವಿ ಕೃಷ್ಣಪ್ಪ ಮೊದಲಾದ ಕವಿಗಳಿಂದಾಗಿ ಕವಿಗಳ ನಾಡೆಂದೇ ಪ್ರಸಿದ್ಧಿಯನ್ನು ಪಡೆದಿದೆ, ಈ ಕವಿ ಕುಟುಂಬದವರು ಹಲವೆಡೆ ಹರಡಿ ಹಂಚಿಹೋಗಿರುವ ಈ ಕವಿ ಮನೆತನದವರನ್ನು ಒಂದೆಡೆ ಸೇರಿಸಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದು ಅಭಿನಂದನೀಯ.
     ಕವಿ ಕುಟುಂಬಗಳ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯ ಮಾಡಿಕೊಡುವ ಹಾಗು ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮುಖ್ಯ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆಯನ್ನು ಪ್ರಾರಂಭಿಸುವ ತಮ್ಮ ಉದ್ದೇಶ ಸಾರ್ಥಕವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
                      

   - ಡಾ. ನಲ್ಲೂರು ಪ್ರಸಾದ್  ಆರ್.ಕೆ                                    
  ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

********************

ಶುಭ ಸಂದೇಶ
  
       ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರ್ನಾಟಕದ ಐತಿಹಾಸಿಕ ಕೆಳದಿ ಸಂಸ್ಥಾನದ ಗತವೈಭವದ ನೆನಪಿನಲ್ಲಿ ಶ್ರೀ ಕವಿ ಲಿಂಗಣ್ಣ ಮುಂತಾದ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ನೆನಪಿಗಾಗಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ಮರೆತು ಹೋಗುತ್ತಿರುವ ಎಷ್ಟೋ ವೈಶಿಷ್ಟ್ಯಗಳನ್ನು ನೆನಪು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಪ್ರಶಂಸನೀಯವಾಗಿದೆ. ಹಾಲಿ ಮೂರನೇ ವಾರ್ಷಿಕ ಸಮಾವೇಶದಲ್ಲಿ ಹೊರತರಲಿರುವ ಉದ್ದೇಶಿತ ಕವಿಕುಟುಂಬದ ಪತ್ರಿಕೆ ಕವಿಕಿರಣ ಪತ್ರಿಕೆಯು ಯುವ ಪೀಳಿಗೆಗೆ ದಾರಿದೀಪವಾಗಿ ಕವಿಹೃದಯ ಚಿಗುರೊಡೆಯಲಿ, ಸಮಾಜಕ್ಕೆ ಆಶಾದಾಯಕವಾಗಿ ಉತ್ತಮ ರೀತಿಯಲ್ಲಿ ಹೊರಹೊಮ್ಮಿ, ಯೋಜಿತ ಉದ್ದೇಶ ಸಫಲವಾಗಲಿ ಎಂದು ಹಾರೈಸುತ್ತೇನೆ.
       

   ಡಾ|| ಪ್ರವೀಣ್ ಕುಮಾರ್ ಜಿ.ಎಲ್., ಕ.ಆ.ಸೇ.,
                         ಉಪವಿಭಾಗಾಧಿಕಾರಿ 

          ಮತ್ತು  ಉಪವಿಭಾಗೀಯ   ದಂಡಾಧಿಕಾರಿ,     ಸಾಗರ.    
     
****************

                                                  ಶುಭನುಡಿ
    
      ನಮ್ಮ ಪೂರ್ವಿಕರು ಪ್ರತಿಭಾಸಂಪನ್ನರಾಗಿದ್ದು, ನಮ್ಮ ಮನೆತನದ ಈಗಿನವರೂ ಸಹ ಪ್ರತಿಭಾಶಾಲಿಗಳಾಗಿದ್ದಾರೆ. ಪ್ರತಿವರ್ಷ ಕವಿವಂಶಸ್ಥರ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಕವಿಮನೆತನದ ಪತ್ರಿಕೆ ಕವಿಕಿರಣ ಹೊರತರುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.
     ಕೊಲ್ಲೂರು ಮೂಕಾಂಬಿಕೆ ಮತ್ತು ವೆಂಕಟರಮಣ ಸ್ವಾಮಿಯ ಅನುಗ್ರಹದಿಂದ ಪತ್ರಿಕೆಯ ಸದುದ್ದೇಶ ನೆರವೇರಲಿ.


- ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ.

***************

                                                   ಶುಭಾಶಯ  
      ಇತಿಹಾಸವನ್ನು ಅಭ್ಯಾಸ ಮಾಡಿರಿ. ಚರಿತ್ರೆಯಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಈ ಕಾಲದಲ್ಲಿ ಉತ್ತಮ ನಾಗರಿಕರಾಗಿ ಬಾಳಿರಿ. ಮುಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದೋರಿ ಭಾರತವನ್ನು ಮತ್ತು ಕನ್ನಡ ನೆಲವನ್ನು ಉಜ್ವಲವಾಗಿ ಬೆಳಗಲು ಪಣತೊಟ್ಟು ಕಾರ್ಯಶೀಲರಾಗಿ ದುಡಿಯಿರಿ.
ಕವಿಕಿರಣಕ್ಕೆ ಶುಭವಾಗಲಿ.

 
-ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್

**********************

                                                   ದಾರಿದೀಪವಾಗಲಿ

     ಪ್ರತಿವ್ಯಕ್ತಿಯೂ ಒಂದೊಂದು ಜನ್ಮದಲ್ಲೂ ಆಯಾ ಜನ್ಮದ ಹಿರಿಯರ ಬಳುವಳಿಯಿಂದ ಹೊಸ ಹೊಸ ಸಂಸ್ಕಾರಗಳನ್ನು ಪಡೆಯುತ್ತಾ ಮುಕ್ತಿಪಥದಲ್ಲಿ ವಿಕಾಸ ಗೊಳ್ಳುತ್ತಾನೆ. ಅದರಂತೆ ಕವಿವಂಶದಲ್ಲಿ ಜನಿಸಿರುವ ನಮಗೆ ನಮ್ಮ ಪೂರ್ವಜರಿಂದ ಪ್ರಾಪ್ತವಾಗಿರುವ ಸದ್ಗುಣ ಸಂಪತ್ತುಗಳಿಗಾಗಿ ಅವರೆಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಶಿರಬಾಗಿ ನಮಿಸೋಣ.
     ಇಂತಹ ಸದ್ಗುಣ ಸಂಪತ್ತುಗಳ ವೃದ್ಧಿಗೆ ಸಹಕಾರಿ ಯಾಗಿ, ದಾರಿದೀಪವಾಗಿ ಕವಿಕಿರಣ ಬೆಳಗಲಿ ಎಂದು ಆಶಿಸುತ್ತೇನೆ.
-ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು.

********************



Monday, November 8, 2010

ಮನೆತನದ ಪತ್ರಿಕೆ 'ಕವಿಕಿರಣ'

ಮನೆತನದ ಪತ್ರಿಕೆ
'ಕವಿಕಿರಣ'
     ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ವಾರ್ಷಿಕ ಸಮಾವೇಶ ದಿನಾಂಕ ೨೮-೦೧-೨೦೦೭ರಲ್ಲಿ ಶಿವಮೊಗ್ಗದ ಕವಿ ಸುರೇಶರ ಮನೆಯಲ್ಲಿ ಮತ್ತು ದ್ವಿತೀಯ ಸಮಾವೇಶ ೨೫-೧೨-೨೦೦೭ರಲ್ಲಿ ಕೆಳದಿಯ ಶ್ರೀ ರಾಮಮೂರ್ತಿಯವರ ಮನೆಯಲ್ಲಿ ನಡೆದ ಸಂದರ್ಭಗಳಲ್ಲಿ ಮೂಡಿಬಂದ ಅಭಿಪ್ರಾಯ, ನೀಡಿದ ಸಹಕಾರ, ಆಸಕ್ತರ ಶ್ರಮಗಳಿಂದಾಗಿ ಮನೆತನದ ಪತ್ರಿಕೆ 'ಕವಿಕಿರಣ' ಉದಯವಾಯಿತು. ಪ್ರಥಮ ಸಂಚಿಕೆ ಡಿಸೆಂಬರ್. ೨೦೦೮ರಲ್ಲಿ ದಿನಾಂಕ ೨೮-೧೨-೨೦೦೮ರಲ್ಲಿ ಬೆಂಗಳೂರಿನ ಶ್ರೀ ಎಂ.ಎಸ್.ನಾಗೇಂದ್ರ ಮತ್ತು ಕುಟುಂಬವರ್ಗದವರು ಆಯೋಜಕರಾಗಿ ನಡೆಸಿಕೊಟ್ಟ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಯಾಯಿತು. ದಿ. ಕವಿ ವೆಂಕಟಸುಬ್ಬರಾಯರ ಕಿರಿಯ ಪುತ್ರ ಅಮೆರಿಕಾದಲ್ಲಿರುವ ಶ್ರೀ ಕ.ವೆಂ.ಅನಂತ ಈ ಸಂಚಿಕೆಯ ಪ್ರಾಯೋಜಕರು.  'ಕವಿಕಿರಣ'ದ ಧ್ಯೇಯೋದ್ದೇಶಗಳನ್ನು ವಿವರಿಸುವ ಪ್ರಥಮ ಸಂಚಿಕೆಯ ಸಂಪಾದಕೀಯ ಇಲ್ಲಿ ಪ್ರಕಟಿಸಿದೆ.
*****
     
     ಅಂತಃಕಿರಣ

      ಸುಪ್ತ ಜಾಗೃತವಾಗಿದೆ. ಅಮೂರ್ತ ಮೂರ್ತ ವಾಗಿದೆ. ಕೆಳದಿ ಕವಿ ಮನೆತನದ ಪತ್ರಿಕೆ ಕವಿಕಿರಣ ಪ್ರಭೆ ಬೀರಿ  ನಮ್ಮೆಲ್ಲರ ಅಂತಃಕರಣ ತಲುಪಲು ಸಜ್ಜಾಗಿದೆ. ನಮ್ಮದೇ ಆದ, ನಮ್ಮಿಂದಲೇ ಆದ, ನಾವೇ ನಮಗಾಗಿ ಮಾಡುತ್ತಿರುವ ಪ್ರಯತ್ನದ ಫಲನಮ್ಮ ಮುಂದಿದೆ. ಸ್ವಾಗತಿಸೋಣ, ಉಳಿಸೋಣ, ಬೆಳೆಸೋಣ.
      ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳು ಹತ್ತು ಹಲವು ಕಾರಣಗಳಿಂದ ಹಲವೆಡೆ ಹರಡಿ ಹಂಚಿಹೋಗಿದ್ದವರನ್ನು ವರ್ಷಕ್ಕೊಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಂಬಂಧಗಳನ್ನು ಉಳಿಸಿ ಬೆಳೆಸುವ ಕಾರ್ಯ ಕಳೆದ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲರನ್ನೂ ನೆನೆಸೋಣ.
      ೧೮ನೆಯ ಶತಮಾನದಲ್ಲಿ ಕೆಳದಿ ಸಂಸ್ಥಾನದ ಆಸ್ಥಾನಕವಿಯಾಗಿ ಕೆಳದಿ ನೃಪವಿಜಯವೆಂಬ ಕೃತಿಯಿಂದ ಕನ್ನಡನಾಡಿನ ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ ಕವಿ ಲಿಂಗಣ್ಣನಿಂದ ಆರಂಭವಾಗಿ ಮುಂದು ವರೆಯುತ್ತಿರುವ ನಮ್ಮ ಮನೆತನದ ಹತ್ತು ತಲೆಮಾರುಗಳ ವಿವರಗಳಿರುವ ವಂಶವೃಕ್ಷ ಲಭ್ಯವಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಇದರ ಪ್ರತಿಯನ್ನು ಈಗ ಕುವೆಂಪು ವಿ.ವಿ.ಗೆ ಹಸ್ತಾಂತರವಾಗಿರುವ ಕೆಳದಿಯ ವಸ್ತು ಸಂಗ್ರಹಾಲಯಕ್ಕೂ ನೀಡಲಾಗಿದ್ದು ಅಲ್ಲಿ ಇದನ್ನು ಸಂರಕ್ಷಿಸಿ ಇಡಲಾಗಿದೆ. ನಮ್ಮ ಪೂರ್ವಜರು ಪ್ರತಿಭಾಸಂಪನ್ನ ರಾಗಿದ್ದು ಅವರ ಸಾಧನೆಗಳ ಪರಿಚಯ ಮಾಡಿ ಕೊಳ್ಳುವುದಲ್ಲದೆ ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಿರಿಯ ಸಾಧಕರ ಪರಿಚಯ ಮಾಡಿಕೊಡುವ ಕವಿಕಿರಣದ ಪ್ರಯತ್ನಕ್ಕೆ ಸಹಕರಿಸೋಣ. ನಾವು ಉತ್ತಮವಾದ ಹಿನ್ನೆಲೆಯ ಕುಟುಂಬಗಳಿಗೆ ಸೇರಿದವರೆಂಬ ಹೆಮ್ಮೆಯೊಂದಿಗೆ ಹಿರಿಮೆ ಹೆಚ್ಚಿಸಲು ನಮ್ಮ ಕಾಣಿಕೆಯನ್ನೂ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಶೋಗಾಥೆ ಮುಂದುವರೆಸೋಣ.
     
     ಈ ಪತ್ರಿಕೆ ಮುಂದೆ ಕವಿಕುಟುಂಬಗಳ ಐತಿಹಾಸಿಕ ದಾಖಲೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಐತಿಹಾಸಿಕ ಸಂಗತಿಗಳಲ್ಲಿ ಆಸಕ್ತಿಯಳ್ಳ ವಿದ್ಯಾರ್ಥಿಗಳಿಗೂ ಇದು ಉಪಯಕ್ತವಾಗಲಿದೆ. ಓದಿ ಎಸೆಯುವ ಪತ್ರಿಕೆಗಳ ಸಾಲಿಗೆ ಸೇರದೆ ಸಂಗ್ರಹಯೋಗ್ಯ ಮೌಲಿಕ ಪತ್ರಿಕೆಯಾಗಿ ಬೆಳೆಯಲು ಭದ್ರ ಅಡಿಪಾಯ ಹಾಕುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸೋಣ.
      ಕವಿ ಕುಟುಂಬಗಳ ನಡುವೆ ಪರಸ್ಪರ ಉತ್ತಮ ಸಂಬಂಧ, ಸಂವಹನ, ಸಜ್ಜನ ಶಕ್ತಿಯ ಜಾಗರಣಕ್ಕೆ ಕವಿಕಿರಣ ಮಾಧ್ಯಮವಾಗಲಿದೆ. ಕುಟುಂಬದ ಸದಸ್ಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಯಾಗಲಿದೆ. ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಕವಾಗಲಿದೆ. ಪರಸ್ಪರ ಆರೋಗ್ಯಕರ ಸ್ಪರ್ಧೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕವಿ ಕುಟುಂಬದ ಸದಸ್ಯರನ್ನು ಸಜ್ಜು ಗೊಳಿಸುವ ಘನ ಉದ್ದೇಶ ಹೊಂದಿರುವ ಈ ಪತ್ರಿಕೆಗೆ ಕುಟುಂಬಗಳ ಎಲ್ಲಾ ಸದಸ್ಯರುಗಳೂ ಬೆಂಬಲಿಸಬೇಕಾಗಿದೆ. ಭಾವನೆಗಳು ಬರಡಾಗುತ್ತಿರುವ ಈ ಪುರುಸೊತ್ತಿಲ್ಲದ ಕಾಲದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿದ್ದೀರಾ ಎಂದು ವಿಚಾರಿಸಿದರೆ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಪರಿಸ್ಥಿತಿಯಲ್ಲಿ ಭಾವನೆಗಳಿಗೆ ನೀರೆರೆದು ಪೋಷಿಸುವ ಉದ್ದೇಶಕ್ಕೆ ಆಸರೆಯಾಗೋಣ.
      ಕವಿಕಿರಣಕ್ಕೆ ಗುರುಹಿರಿಯರು ಆಶೀರ್ವದಿಸಿದ್ದಾರೆ; ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಲೋಚಿಸಿ, ಚರ್ಚಿಸಿ ಪತ್ರಿಕೆಯ ರೂಪು ರೇಷೆಗಳನ್ನು ನಿರ್ಧರಿಸಲಾಗಿದೆ. ನಿರೀಕ್ಷಿತ ಸಹಕಾರ ಸಿಗುತ್ತಿದೆ. ಉದಾತ್ತ ಗುರಿಯಿದೆ. ದಾರಿ ನಿಚ್ಛಳವಿದೆ. ಮುನ್ನಡೆಯುವುದೊಂದೇ ಬಾಕಿ. ಬನ್ನಿ, ಒಟ್ಟಿಗೆ ಹೆಜ್ಜೆ ಹಾಕೋಣ.
      ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ ಎಂಬ ಸದಾಶಯದೊಂದಿಗೆ, ಸದುದ್ದೇಶಕ್ಕೆ ಸದಾ ತಮ್ಮೊಂದಿಗೆ ಇರಬಯಸುವ,
-                                       ಕ.ವೆಂ.ನಾಗರಾಜ್.

   
ಪ್ರಥಮ ಸಂಚಿಕೆಯ ಮುಖಪುಟ

Sunday, November 7, 2010

ಭಾವಚಿತ್ರರಚನೆ ಮತ್ತು ಫೋಟೋಗ್ರಫಿ




1] ನೀರುಬಣ್ಣಗಳಿಂದ ಭಾವಚಿತ್ರಗಳನ್ನು ಬರೆಯುವ ಕ್ರಮ (Portrait Painting in Water Colours): * ಬೆಂಗಳೂರಿನ ಶ್ರೀ ಗೌರೀಮುದ್ರಣಾಲಯದಲ್ಲಿ 1933 ರಲ್ಲಿ ಪ್ರಕಟ: ಬೆಲೆ: 9 ಆಣೆ.

ಪುಸ್ತಕದಲ್ಲಿ ಭಾವಚಿತ್ರಗಳನ್ನು ಬರೆಯಲು ಬೇಕಾದ ಸಾಮಗ್ರಿಗಳ ಜೊತೆಗೆ, ಉಡಿಗೆ-ತೊಡಿಗೆಗಳು, ಬೆಳಕು ಛಾಯೆಗಳು, ಬಣ್ಣ ಹಾಕುವ ವಿಧಾನಗಳು, ಬಣ್ಣ ಹಾಕುವುದರಲ್ಲಿ ತಿಳಿದುಕೊಳ್ಳಬೇಕಾಗಿರುವ ಮುಖ್ಯ ಸಂಗತಿಗಳು, ಮೈಬಣ್ಣಗಳನ್ನು ಸಿದ್ಧಪಡಿಸಿ ಕೊಳ್ಳುವುದು, ಛಾಯೆಗಳು, ಶಿರಸ್ಸಿನ ಕೂದಲು ಬಣ್ಣಗಳು, ರೇಷ್ಮೆ ದಮಾಸ್ ಮುಂತಾದ ಬಟ್ಟೆಗಳು, ಚಿತ್ರದ ಹಿಂಭಾಗಗಳು ಇತ್ಯಾದಿ ವಿಚಾರಗಳ ಬಗ್ಗೆ ಸಚಿತ್ರವಾಗಿ ವಿವರಣೆಗಳನ್ನು ನೀಡಲಾಗಿದೆ.

2] ಚಿತ್ರಪಟಗಳನ್ನು ಬರೆಯುವ ಕ್ರಮ (Principles of Free Hand Drawing):
* ಇದು ಆಗಿನ ಮೈಸೂರು ಸರ್ಕಾರದ ಮುದ್ರಣಾಲಯದಲ್ಲೇ 1927 ರಲ್ಲಿ ಮುದ್ರಿತವಾಗಿರುವುದು ವಿಶೇಷ ಸಂಗತಿ.

ಪುಸ್ತಕದಲ್ಲಿ ಇದಕ್ಕಾಗಿ ಬೇಕಾಗಿರುವ ಸಲಕರಣೆಗಳು, ನೆಟ್ಟಗೆ ಮತ್ತು ಬಾಗಿದ ಗೆರೆಗಳನ್ನು ಅಭ್ಯಾಸಮಾಡುವ ಕ್ರಮ, ಗುಂಡಾಗಿರುವ ವಸ್ತುಗಳನ್ನು ಚಪ್ಪಟೆಯಾಗಿ ತೋರಿಸುವುದು, ಮನುಷ್ಯನ ಆಕಾರವನ್ನು ಬರೆಯುವ ಕ್ರಮ, ಉಡಿಗೆಗಳು, ಭಾವಚಿತ್ರಗಳನ್ನು ಬರೆಯುವ ಕ್ರಮ, ಬೆಳಕು ಮತ್ತು ಛಾಯೆಗಳು, perspective, ಭೂಚಿತ್ರಗಳನ್ನು ಬರೆಯುವ ಕ್ರಮ ಮುಂತಾದ ವಿಷಯಗಳನ್ನು ಸಚಿತ್ರವಾಗಿ ವಿವರಿಸಲಾಗಿದೆ.

3] ತಸ್ಬೀರು ತೆಗೆಯುವ ಕ್ರಮ (Photography) - ಭಾಗ 1 - ಬೆಂಗಳೂರಿನ ಗೌರೀ ಮುದ್ರಣಾಲಯದಲ್ಲಿ 1933 ರಲ್ಲಿ ಪ್ರಕಟ: ಬೆಲೆ: 8 ಆಣೆ.


ಪುಸ್ತಕದಲ್ಲಿ ಫೋಟೋ ತೆಗೆಯಲು ಬೇಕಾದ ಸಲಕರಣೆಗಳು, ಕ್ಯಾಮರಾ, ಸ್ಟ್ಯಾಂಡ್ ಕ್ಯಾಮರಾಗಳು, ಅಡ್ಡಣಿಗೆ, ಫೋಕಸಿಂಗ್ ಗ್ಲೌಸು, ಹ್ಯಾಂಡ್ ಕ್ಯಾಮರಾಗಳು, ಪ್ಲೇಟುಗಳು, ಫಿಲ್ಮುಗಳು, ಬಿಂಬ ಪ್ರದರ್ಶನ, ಬಿಂಬವಿಕಾಸಕ್ರಮ, ನೆಗೆಟಿವ್ ಗಳನ್ನು ಪ್ರಬಲ ಮಾಡುವುದು, ತಸ್ಭೀರಿನ ಕಾಗದಗಳು, ಪ್ರಿಂಟಿಂಗ್ ಫ್ರೇಮ್ ಇತ್ಯಾದಿಗಳ ಬಗ್ಗೆ ಸಚಿತ್ರ ವಿವರಣೆಗಳಿವೆ. ಪುಸ್ತಕ ಬಹಳ ಜೀರ್ಣಾವಸ್ಥೆಯಲ್ಲಿದೆ.

[Dr.Hanumantha Jois, President of Photographers' Association (aged over 80) and has won many awards for his works, is preparing a book on historical development of photography. In this connection, he had contacted me for information and I had given the above books written by late SK Lingannaiyya. He categorically and specifically mentioned THAT THIS IS THE FIRST BOOK ON PHOTOGRAPHY WRITTEN IN KANNADA LANGUAGE and he also mentioned that he would mention this in his work on Photography. This is really a great credit to late SK Lingannaiyya and a proud matter to all Keladi Kavi family members]

[ಕೃಪೆ: ಶ್ರೀ ಎಸ್.ಕೆ.ರಾಮರಾವ್ ಮತ್ತು ಶ್ರೀ ಕೆಳದಿ ಗುಂಡಾ ಜೊಯಿಸ್]

ರಾಮಾಯಣ ಸಾರ



ಎಸ್.ಕೆ.ಲಿಂಗಣ್ಣಯ್ಯನವರು "ರಾಮಾಯಣ ಸಾರ" ಎಂಬ ಶೀರ್ಷಿಕೆಯಡಿಯಲ್ಲಿ ರಾಮಾಯಣದ ಎಲ್ಲ ಕಾಂಡಗಳ ಶ್ಲೋಕ ಮತ್ತು ಸಂಕ್ಷಿಪ್ತ ವಿವರಣೆಯನ್ನು ಪ್ರಕಟಿಸಿದ್ದಾರೆ. ಬಾಲ ಕಾಂಡ, ಅರಣ್ಯ ಕಾಂಡ, ಸುಂದರ ಕಾಂಡ ಮತ್ತು ಯುದ್ಧ ಕಾಂಡದ ಪುಸ್ತಕಗಳು ಮಾತ್ರಾ ಸಿಕ್ಕಿವೆ (ಅವೂ ಬಹಳ ಜೀಣಾವಸ್ಥೆಯಲ್ಲಿವೆ). ಅವುಗಳ ಮುಖಪುಟಗಳನ್ನು ಮೇಲೆ ನೀಡಲಾಗಿದೆ. ಅರಣ್ಯಕಾಂಡ ಪುಸ್ತಕ 1935 ರಲ್ಲಿ ಪ್ರಕಟವಾಗಿದ್ದರೆ ಉಳಿದವುಗಳು 1934 ರಲ್ಲಿ ಪ್ರಕಟವಾಗಿವೆ. ಶ್ರೀ ಗೌರೀನಿಲಯ ಮುದ್ರಣಾಲಯದಲ್ಲಿ ಇವುಗಳು ಮುದ್ರಿಸಲ್ಪಟ್ಟಿವೆ. ಪ್ರತಿ ಪುಸ್ತಕದ ಆಗಿನ ಬೆಲೆ : ಎರಡೂವರಾಣೆ!!

ಬಾಲಕಾಂಡ ದಿಂದ ಆಯ್ದ ಒಂದು ಶ್ಲೋಕ ಮತ್ತು ವಿವರಣೆಯನ್ನು ಪುಸ್ತಕಗಳಲ್ಲಿರುವ ಒಕ್ಕಣೆಯ ಉದಾಹರಣೆಯಾಗಿ ಇಲ್ಲಿ ನೀಡಲಾಗಿದೆ:

ತಸ್ಯ ಚಿಂತಯಮಾನಸ್ಯ ಮಹರ್ಷೇರ್ಭಾವಿತಾತ್ಮನ: |
ಅಗೃಹ್ಣೀತಾಂತತ: ಪಾದೌ ಮುನಿವೇಷೌ ಕುಶೀಲತೌ ||
ತತಸ್ತು ತೌರಾಮವಚ: ಪ್ರಚೋದಿತಾವಗಾಯತಾಂ ಮಾರ್ಗವಿಧಾನಸಂಪದಾಂ |
ಸಚಾಪಿರಾಮ: ಪರಿಷದ್ಯತಶ್ಯನೈರ್ಬುಭೂಷಯಾಸಕ್ತ ಮನಾಬಭೂವಹ ||

ಹಾಗೇನೇ ವಾಲ್ಮೀಕಿಮುನಿಯು ಆ ರಾಮಚರಿತ್ರೆಯನ್ನು 24000 ಶ್ಲೋಕಪೂರಿತವಾದ ರಾಮಾಯಣ ಕಾವ್ಯವಾಗಿ ರಚಿಸಿ ಸಮೀಪದಲ್ಲಿ ಮುನಿವೇಷಧಾರಿಗಳಾಗಿ ನಿಂತಿದ್ದ ಶ್ರೀ ರಾಮನ ಪುತ್ರರಾದ ಕುಶಲವರಿಗೆ ಉಪದೇಶ ಮಾಡಿದನು.
ಶ್ರೀ ರಾಮನು ಅಶ್ವಮೇಧಯಾಗವನ್ನು ಮಾಡಿದ ಕಾಲದಲ್ಲಿ ಮಹರ್ಷಿಗಳೆಲ್ಲಾ ಸೇರಿದ್ದ ಕಾಲದಲ್ಲಿ ವಾಲ್ಮೀಕರ ಅನುಜ್ಙೆಯಂತೆ ಬಾಲಕರಾದ ಕುಶಲವರು ಸಂಗೀತಶಾಸ್ತ್ರಾನುಸಾರವಾಗಿ ಆ ರಾಮಾಯಣವನ್ನೆಲ್ಲಾ ಗಾನ ಮಾಡಲು, ಶ್ರೀ ರಾಮನು ತನ್ನ ಚರಿತ್ರೆಯ ಶ್ರವಣದಲ್ಲಿ ಬಹು ಉತ್ಸಾಹವುಳ್ಳವನಾದನು.

[ಉಳಿದ ಕಾಂಡಗಳ ಪುಸ್ತಕಗಳು ಯಾರಲ್ಲಾದರೂ ಲಭ್ಯವಿದ್ದಲ್ಲಿ ಅವುಗಳ ಮುಖಪುಟಗಳನ್ನು ಮೇಲಿನಂತೆ ಪ್ರಕಟಿಸಲು ಸಹಕರಿಸಲು ಕೋರಿದೆ]

[ಕ್ರಪೆ: ಶ್ರೀ ಎಸ್.ಕೆ.ರಾಮರಾವ್ ಮತ್ತು ಶ್ರೀ ಕೆಳದಿ ಗುಂಡಾಜೊಯಿಸ್]

Thursday, November 4, 2010

ಸಹಕಾರಿ ಸಂಘದ ನಿರ್ದೇಶಕರಾಗಿ ಎಸ್.ಕೆ.ಲಿಂಗಣ್ಣಯ್ಯನವರು


ಬಹುಮುಖ ಪ್ರತಿಭೆಯುಳ್ಳವರಾಗಿದ್ಧಂತಹ ದಿವಂಗತ ಎಸ್.ಕೆ.ಲಿಂಗಣ್ಣಯ್ಯನವರು ಆಗಿನ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರೂ ಆಗಿದ್ದರು. ಆಗ ಮಾಸ್ತಿ ವೆಂಕಟೇಶ್ ಐಯ್ಯಂಗಾರ್ ರವರು ಅದರು ಅಧ್ಯಕ್ಷರಾಗಿದ್ದರು.

[ಎಸ್.ಕೆ.ಲಿಂಗಣ್ಣಯ್ಯನವರ ಸಂಪೂರ್ಣ ಜೀವನ ಚರಿತ್ರೆಗಾಗಿ ಕವಿ ಸುರೇಶ್ ರ Karma Yogi-Kala Vallabha S.K.LINGANNAIYA - ಆಂಗ್ಲ ಭಾಷಾ ಪುಸ್ತಕವನ್ನು ನೋಡಬಹುದು]

Wednesday, November 3, 2010

ಬದುಕುವ ಪರಿ

ರಾಗ: ಪೂರ್ವಿ ಕಲ್ಯಾಣಿ : ತಾಳ : ಆದಿತಾಳ

ಮನವೆ ಸುಮ್ಮನೆ ಇರಬೇಡ | ಅರೆನಿಮಿಷವಾದರು
ಮನವೆ ಸುಮ್ಮನೆ ಇರಬೇಡ || || ಪಲ್ಲವಿ ||


ಕನಸಿನಂತಹ ಸಂಸಾರವ ನೆಚ್ಚಿ
ಘನತರ ಪಾಪಕೆ ಗುರಿಯಾಗಬೇಡ || || ಅ.ಪ. ||


ರೊಕ್ಕದಾಸೆಯ ಬಿಡಬೇಕು | ಸ್ತ್ರೀ ಮೋಹಕೆ
ಸಿಕ್ಕದೆ ನಡಕೊಳ್ಳಬೇಕು
ಅಕ್ಕರು ದೇಹದೊಳಿರದಿರಬೇಕು
ಶಕ್ತಿಯ ಮೀರಿ ಧರ್ಮವ ಮಾಡಬೇಕು
ಮುಕ್ಕಣ್ಣ ಹರನ ಪೂಜಿಸಬೇಕು
ಮುಕ್ತಿ ಮಾರ್ಗವ ಪಡಕೊಳಬೇಕು || 1 ||


ಸರ್ವನಿಸ್ಪೃಹನಾಗಬೇಕು | ಸಂಸಾರದಿ
ಚರಿಸುತಲೂ ಇರಬೇಕು
ಗುರಿಹಿರಿಯರ ಕಂಡು ನಡೆಯಲು ಬೇಕು
ಪರರ ನಿಂದಿಸಿ ನುಡಿಯದೆ ಇರಬೇಕು
ಬರೆ ಸುಖದು:ಖವು ಸಮಗಾಣಬೇಕು
ಇರುಳು ಹಗಲು ಶಿವ ಶಿವ ಎನ್ನಬೇಕು || 2 ||


ತನ್ನ ತಾನೇ ತಿಳಿಯಬೇಕು | ತೋರುವ ಲೋಕ-
(ವನ್ನು) ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶ್ವರನ ನೆನಹಿರಬೇಕು || 3 ||

Monday, November 1, 2010

ಯಾವ ವೈದ್ಯರೂ ಮಾಡದ ಚಿಕಿತ್ಸೆಯನ್ನು ಆಪ್ತ ಸಮಾವೇಶ ಮಾಡಬಲ್ಲುದು

ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ' ಮತ್ತು ಕುಟುಂಬ ಸಮಾವೇಶದ ಬಗ್ಗೆ ಹಾಸನದ ಚಿಂತನಶೀಲ ಲೇಖಕ ಹರಿಹರಪುರ ಶ್ರೀಧರ ಕಳುಹಿಸಿದ ಮಿಂಚಂಚೆಯನ್ನು ಯಥಾವತ್ ನಕಲು ಮಾಡಿ ಕೆಳಗೆ ಪ್ರಕಟಿಸಿದೆ:

    ನಮ್ಮ ಸುತ್ತ-ಮುತ್ತ ಜನರ ನಿತ್ಯದ ಮಾತು-ಕತೆಯ ಒಂದಿಷ್ಟು ಸ್ಯಾಂಪಲ್ ನೋಡಿ-            "ಕಾರು-ಬಂಗ್ಲೆ, ಚಿನ್ನದಸರ-ಬಳೆ, ಟಿ.ವಿ-ಫ್ರಿಜ್ಜು.......ಜೊತೆಗೆ ಬಿ.ಪಿ-ಶುಗರ್-ಕ್ಯಾನ್ಸರ್...........ಡಯಾಲಿಸಿಸ್, ಹಾರ್ಟ್ ಸರ್ಜರಿ"  " ನನ್ನ ಮಗ ಸಾಫ್ಟ್ ವೇರ್ ಇಂಜಿನಿಯರ್ , ನನ್ನ ಮಗಳು  ಡಾಕ್ಟರ್"  " ಯಾರೋ ಲವ್ ಮಾಡಿದ್ರಂತೆ, ಇಂಟರ್ ಕ್ಯಾಸ್ಟ್ ಮದ್ವೆ ಆಯ್ತಂತೆ, ಡೈವರ್ಸ್ ಆಯ್ತಂತೆ, ಅವರ ಅಪ್ಪ-ಅಮ್ಮ  ವೃದ್ಧಾಶ್ರಮ ಸೇರಿದ್ರಂತೆ"
                  ಸಾಮಾನ್ಯವಾಗಿ ಇದಕ್ಕೆ ಹೊರತಾದ ಮಾತು-ಕತೆ  ಅಪರೂಪ ಅಲ್ವಾ? ನಮ್ಮ ಆರೋಗ್ಯ ಹದಗೆಟ್ಟು  ಹಾಳಾಗಿ ಹೋಗಿದ್ರೂಟಿ.ವಿ-ಇಂಟರ್ ನೆಟ್ ನೋಡಿಕೊಂಡು ಮಕ್ಕಳು  ರಾಕ್ಷಸರಂತೆ ಬೆಳೀತಿದ್ರೂ   ತೆಪ್ಪಗೆ ಮೌನವಾಗಿ ಕುಳ್ತಿರೋ  ನಮ್ಮ ಸಮಾಜದ ದು:ಸ್ಥಿತಿ ಕಂಡು ದು:ಖವಾಗುತ್ತೆ. ಒಂದು ರೀತಿಯ ನಿರಾಶಾಭಾವ ಮೂಡುತ್ತದೆ. ನಮ್ಮ ಸಮಾಜದ ಕತೆ ಇಷ್ಟೇನಾ ಅನ್ನಿಸುತ್ತದೆ.

                  ಆದರೆ ಕವಿಕಿರಣ ದಂತಾ  ಪ್ರಯತ್ನಗಳನ್ನು ನೋಡಿದಾಗ ಎಲ್ಲೋ ಒಂದು ಕಡೆ ಆಶಾಕಿರಣ ಮೂಡುತ್ತದೆ. ನಮಗೆಲ್ಲಾ ಜನ್ಮ ಕೊಟ್ಟ ತಾಯಿ ಭಾರತಿ ಬಂಜೆಯಲ್ಲ. ಸಹಸ್ರಾರು ಮಂದಿ ಸಾದು ಸಂತರು, ಋಷಿ-ಮುನಿಗಳ ತಪಸ್ಸಿನಿಂದ ಪುನೀತವಾಗಿರುವ ನೆಲದಲ್ಲಿ ಧರ್ಮಕ್ಕೆ ಚ್ಯುತಿ ಬರಲು ಸಾಧ್ಯವಿಲ್ಲ. ಎಲ್ಲವೂ ನಿರ್ನಾಮ ವಾಯಿತೆನ್ನುವ ಹೊತ್ತಿಗೆ ಒಬ್ಬ ಮಹಾಪುರುಷನು ಎದ್ದು ಬಂದಿರುವುದನ್ನು ನಮ್ಮ  ಇತಿಹಾಸದಲ್ಲಿ ನೋಡಬಹುದಾಗಿದೆ.
                       ಮನೆತನದ ಸೊಗಡನ್ನು ಉಳಿಸಿ-ಬೆಳೆಸುವ  ನಿಮ್ಮಗಳೆಲ್ಲರ ಶ್ರಮವು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ. ಎಷ್ಟೇ ಸಿರಿವಂತಿಕೆ ಇದ್ದರೂ  ಅದನ್ನು ಸಂತಸದಿಂದ ಅನುಭವಿಸಲು " ನಮ್ಮವರೆನ್ನುವವರು ನಮ್ಮೊಡನೆ ಇರಬೇಕು" ವರ್ಷದಲ್ಲಿ ಒಮ್ಮೆ ಯಾದರೂ ಒಂದೆರಡುದಿನಗಳು  ನಮ್ಮ ನಮ್ಮ ಸ್ವಂತ ವ್ಯವಹಾರವನ್ನು ಬದಿಗಿರಿಸಿ, ಎಲ್ಲವನ್ನೂ ಮರೆತು ನಮ್ಮವರೆನಿಸಿದ ಎಲ್ಲರೊಡನೆ  ಕುಣಿದು ಕುಪ್ಪಳಿಸಬೇಕುಇಂದು ಎಲ್ಲೆಡೆ ಕಾಡುತ್ತಿರುವ ಟೆನ್ಷನ್ ಗಳಿಗೆ ಇದೊಂದೇ ಪರಿಹಾರ. ಯಾವ ವೈದ್ಯರೂ ಮಾಡಲಾಗದ ಚಿಕಿತ್ಸೆಯನ್ನು ಒಂದು ಆಪ್ತ ಸಮಾವೇಶ ಮಾಡಬಲ್ಲದು. ಮುಂದಿನ ಕವಿ ಮನೆತನದ ಸಮಾವೇಶದಲ್ಲಿ ನಾನು ಡಾಕ್ಟರ್, ನಾನು ಉಧ್ಯಮಿ, ನಾನು ಆಗರ್ಭ ಶ್ರೀಮಂತ, ಛೇ! ನಾನು ಬಡವ, ನಾನು  ಡಾಕ್ಟರೇಟ್ ಮಾಡಿದವನು, ಛೇ! ನಾನು ಸಾಮಾನ್ಯ ಗುಮಾಸ್ತ! ಎಲ್ಲಾ  ನಾನುಗಳನ್ನು ಅಂದಿನ ಮಟ್ಟಿಗಾದರೂ ಬದಿಗಿರಿಸಿ ಎಲ್ಲರೊಂದಿಗೆ ಬೆರೆತು ನನ್ನ ನಾ ಮರೆತಾಗ ನಿಜವಾಗಲೂ "ಸಮಾವೇಶವು ಸಾರ್ಥಕವಾಗುತ್ತದೆ" ಎಲ್ಲರೂ ಮುಂದಿನ ಸಮಾವೇಶವನ್ನು ಎದಿರು ನೋಡುವಂತಾಗುತ್ತದೆ.