ರಾಗ: ಕಾಂಬೋಜಿ : ಝಂಪೆ ತಾಳ
ನಿನ್ನ ಸೇವೆಯನೊಂದನಿತ್ತು ಸಲಹೋ
ಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ || ಪ ||
ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷ-
ವನ್ನು ಕುಡಿದಿಹ ನೀಲಕಂಠನೊಡನೆ
ಸನ್ನುತಾಂಬರವ ಬೇಡುವುದೆಂತು ಕರಿಚರ್ಮ-
ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ || 1 ||
ಮಿರುಗುವಾಭರಣಗಳ ಬೇಡಿಕೊಂಬುದದೆಂತು
ಉರಗಕುಂಡಲ ಹಾರ ವಲಯನೊಡನೆ
ಪರಮಭಾಗ್ಯವ ಬೇಡಿಕೊಂಬೆ ನಾನೆಂತು ವಿಧಿ
ಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ || 2 ||
ಕರಿತುರಗ ಮುಖ್ಯವಾಹನವ ಬೇಡುವುದೆಂತು
ನಿರುತ ಬಸವನ ಮೇಲೆ ಚರಿಪನೊಡನೆ
ಕರುಣದಿಂದೆನಗೆ ಕೊಡಲೇನುಂಟೋ ಕೆಳದಿಪುರ-
ದೆರೆಯ ರಾಮೇಶ ಶ್ರೀಕರ ಪಾರ್ವತೀಶ || 3 ||
No comments:
Post a Comment