ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, November 8, 2010

ಮನೆತನದ ಪತ್ರಿಕೆ 'ಕವಿಕಿರಣ'

ಮನೆತನದ ಪತ್ರಿಕೆ
'ಕವಿಕಿರಣ'
     ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ವಾರ್ಷಿಕ ಸಮಾವೇಶ ದಿನಾಂಕ ೨೮-೦೧-೨೦೦೭ರಲ್ಲಿ ಶಿವಮೊಗ್ಗದ ಕವಿ ಸುರೇಶರ ಮನೆಯಲ್ಲಿ ಮತ್ತು ದ್ವಿತೀಯ ಸಮಾವೇಶ ೨೫-೧೨-೨೦೦೭ರಲ್ಲಿ ಕೆಳದಿಯ ಶ್ರೀ ರಾಮಮೂರ್ತಿಯವರ ಮನೆಯಲ್ಲಿ ನಡೆದ ಸಂದರ್ಭಗಳಲ್ಲಿ ಮೂಡಿಬಂದ ಅಭಿಪ್ರಾಯ, ನೀಡಿದ ಸಹಕಾರ, ಆಸಕ್ತರ ಶ್ರಮಗಳಿಂದಾಗಿ ಮನೆತನದ ಪತ್ರಿಕೆ 'ಕವಿಕಿರಣ' ಉದಯವಾಯಿತು. ಪ್ರಥಮ ಸಂಚಿಕೆ ಡಿಸೆಂಬರ್. ೨೦೦೮ರಲ್ಲಿ ದಿನಾಂಕ ೨೮-೧೨-೨೦೦೮ರಲ್ಲಿ ಬೆಂಗಳೂರಿನ ಶ್ರೀ ಎಂ.ಎಸ್.ನಾಗೇಂದ್ರ ಮತ್ತು ಕುಟುಂಬವರ್ಗದವರು ಆಯೋಜಕರಾಗಿ ನಡೆಸಿಕೊಟ್ಟ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಯಾಯಿತು. ದಿ. ಕವಿ ವೆಂಕಟಸುಬ್ಬರಾಯರ ಕಿರಿಯ ಪುತ್ರ ಅಮೆರಿಕಾದಲ್ಲಿರುವ ಶ್ರೀ ಕ.ವೆಂ.ಅನಂತ ಈ ಸಂಚಿಕೆಯ ಪ್ರಾಯೋಜಕರು.  'ಕವಿಕಿರಣ'ದ ಧ್ಯೇಯೋದ್ದೇಶಗಳನ್ನು ವಿವರಿಸುವ ಪ್ರಥಮ ಸಂಚಿಕೆಯ ಸಂಪಾದಕೀಯ ಇಲ್ಲಿ ಪ್ರಕಟಿಸಿದೆ.
*****
     
     ಅಂತಃಕಿರಣ

      ಸುಪ್ತ ಜಾಗೃತವಾಗಿದೆ. ಅಮೂರ್ತ ಮೂರ್ತ ವಾಗಿದೆ. ಕೆಳದಿ ಕವಿ ಮನೆತನದ ಪತ್ರಿಕೆ ಕವಿಕಿರಣ ಪ್ರಭೆ ಬೀರಿ  ನಮ್ಮೆಲ್ಲರ ಅಂತಃಕರಣ ತಲುಪಲು ಸಜ್ಜಾಗಿದೆ. ನಮ್ಮದೇ ಆದ, ನಮ್ಮಿಂದಲೇ ಆದ, ನಾವೇ ನಮಗಾಗಿ ಮಾಡುತ್ತಿರುವ ಪ್ರಯತ್ನದ ಫಲನಮ್ಮ ಮುಂದಿದೆ. ಸ್ವಾಗತಿಸೋಣ, ಉಳಿಸೋಣ, ಬೆಳೆಸೋಣ.
      ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳು ಹತ್ತು ಹಲವು ಕಾರಣಗಳಿಂದ ಹಲವೆಡೆ ಹರಡಿ ಹಂಚಿಹೋಗಿದ್ದವರನ್ನು ವರ್ಷಕ್ಕೊಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಂಬಂಧಗಳನ್ನು ಉಳಿಸಿ ಬೆಳೆಸುವ ಕಾರ್ಯ ಕಳೆದ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲರನ್ನೂ ನೆನೆಸೋಣ.
      ೧೮ನೆಯ ಶತಮಾನದಲ್ಲಿ ಕೆಳದಿ ಸಂಸ್ಥಾನದ ಆಸ್ಥಾನಕವಿಯಾಗಿ ಕೆಳದಿ ನೃಪವಿಜಯವೆಂಬ ಕೃತಿಯಿಂದ ಕನ್ನಡನಾಡಿನ ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ ಕವಿ ಲಿಂಗಣ್ಣನಿಂದ ಆರಂಭವಾಗಿ ಮುಂದು ವರೆಯುತ್ತಿರುವ ನಮ್ಮ ಮನೆತನದ ಹತ್ತು ತಲೆಮಾರುಗಳ ವಿವರಗಳಿರುವ ವಂಶವೃಕ್ಷ ಲಭ್ಯವಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಇದರ ಪ್ರತಿಯನ್ನು ಈಗ ಕುವೆಂಪು ವಿ.ವಿ.ಗೆ ಹಸ್ತಾಂತರವಾಗಿರುವ ಕೆಳದಿಯ ವಸ್ತು ಸಂಗ್ರಹಾಲಯಕ್ಕೂ ನೀಡಲಾಗಿದ್ದು ಅಲ್ಲಿ ಇದನ್ನು ಸಂರಕ್ಷಿಸಿ ಇಡಲಾಗಿದೆ. ನಮ್ಮ ಪೂರ್ವಜರು ಪ್ರತಿಭಾಸಂಪನ್ನ ರಾಗಿದ್ದು ಅವರ ಸಾಧನೆಗಳ ಪರಿಚಯ ಮಾಡಿ ಕೊಳ್ಳುವುದಲ್ಲದೆ ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಿರಿಯ ಸಾಧಕರ ಪರಿಚಯ ಮಾಡಿಕೊಡುವ ಕವಿಕಿರಣದ ಪ್ರಯತ್ನಕ್ಕೆ ಸಹಕರಿಸೋಣ. ನಾವು ಉತ್ತಮವಾದ ಹಿನ್ನೆಲೆಯ ಕುಟುಂಬಗಳಿಗೆ ಸೇರಿದವರೆಂಬ ಹೆಮ್ಮೆಯೊಂದಿಗೆ ಹಿರಿಮೆ ಹೆಚ್ಚಿಸಲು ನಮ್ಮ ಕಾಣಿಕೆಯನ್ನೂ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಶೋಗಾಥೆ ಮುಂದುವರೆಸೋಣ.
     
     ಈ ಪತ್ರಿಕೆ ಮುಂದೆ ಕವಿಕುಟುಂಬಗಳ ಐತಿಹಾಸಿಕ ದಾಖಲೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಐತಿಹಾಸಿಕ ಸಂಗತಿಗಳಲ್ಲಿ ಆಸಕ್ತಿಯಳ್ಳ ವಿದ್ಯಾರ್ಥಿಗಳಿಗೂ ಇದು ಉಪಯಕ್ತವಾಗಲಿದೆ. ಓದಿ ಎಸೆಯುವ ಪತ್ರಿಕೆಗಳ ಸಾಲಿಗೆ ಸೇರದೆ ಸಂಗ್ರಹಯೋಗ್ಯ ಮೌಲಿಕ ಪತ್ರಿಕೆಯಾಗಿ ಬೆಳೆಯಲು ಭದ್ರ ಅಡಿಪಾಯ ಹಾಕುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸೋಣ.
      ಕವಿ ಕುಟುಂಬಗಳ ನಡುವೆ ಪರಸ್ಪರ ಉತ್ತಮ ಸಂಬಂಧ, ಸಂವಹನ, ಸಜ್ಜನ ಶಕ್ತಿಯ ಜಾಗರಣಕ್ಕೆ ಕವಿಕಿರಣ ಮಾಧ್ಯಮವಾಗಲಿದೆ. ಕುಟುಂಬದ ಸದಸ್ಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಯಾಗಲಿದೆ. ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಕವಾಗಲಿದೆ. ಪರಸ್ಪರ ಆರೋಗ್ಯಕರ ಸ್ಪರ್ಧೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕವಿ ಕುಟುಂಬದ ಸದಸ್ಯರನ್ನು ಸಜ್ಜು ಗೊಳಿಸುವ ಘನ ಉದ್ದೇಶ ಹೊಂದಿರುವ ಈ ಪತ್ರಿಕೆಗೆ ಕುಟುಂಬಗಳ ಎಲ್ಲಾ ಸದಸ್ಯರುಗಳೂ ಬೆಂಬಲಿಸಬೇಕಾಗಿದೆ. ಭಾವನೆಗಳು ಬರಡಾಗುತ್ತಿರುವ ಈ ಪುರುಸೊತ್ತಿಲ್ಲದ ಕಾಲದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿದ್ದೀರಾ ಎಂದು ವಿಚಾರಿಸಿದರೆ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಪರಿಸ್ಥಿತಿಯಲ್ಲಿ ಭಾವನೆಗಳಿಗೆ ನೀರೆರೆದು ಪೋಷಿಸುವ ಉದ್ದೇಶಕ್ಕೆ ಆಸರೆಯಾಗೋಣ.
      ಕವಿಕಿರಣಕ್ಕೆ ಗುರುಹಿರಿಯರು ಆಶೀರ್ವದಿಸಿದ್ದಾರೆ; ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಲೋಚಿಸಿ, ಚರ್ಚಿಸಿ ಪತ್ರಿಕೆಯ ರೂಪು ರೇಷೆಗಳನ್ನು ನಿರ್ಧರಿಸಲಾಗಿದೆ. ನಿರೀಕ್ಷಿತ ಸಹಕಾರ ಸಿಗುತ್ತಿದೆ. ಉದಾತ್ತ ಗುರಿಯಿದೆ. ದಾರಿ ನಿಚ್ಛಳವಿದೆ. ಮುನ್ನಡೆಯುವುದೊಂದೇ ಬಾಕಿ. ಬನ್ನಿ, ಒಟ್ಟಿಗೆ ಹೆಜ್ಜೆ ಹಾಕೋಣ.
      ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ ಎಂಬ ಸದಾಶಯದೊಂದಿಗೆ, ಸದುದ್ದೇಶಕ್ಕೆ ಸದಾ ತಮ್ಮೊಂದಿಗೆ ಇರಬಯಸುವ,
-                                       ಕ.ವೆಂ.ನಾಗರಾಜ್.

   
ಪ್ರಥಮ ಸಂಚಿಕೆಯ ಮುಖಪುಟ

No comments:

Post a Comment