ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Wednesday, November 3, 2010

ಬದುಕುವ ಪರಿ

ರಾಗ: ಪೂರ್ವಿ ಕಲ್ಯಾಣಿ : ತಾಳ : ಆದಿತಾಳ

ಮನವೆ ಸುಮ್ಮನೆ ಇರಬೇಡ | ಅರೆನಿಮಿಷವಾದರು
ಮನವೆ ಸುಮ್ಮನೆ ಇರಬೇಡ || || ಪಲ್ಲವಿ ||


ಕನಸಿನಂತಹ ಸಂಸಾರವ ನೆಚ್ಚಿ
ಘನತರ ಪಾಪಕೆ ಗುರಿಯಾಗಬೇಡ || || ಅ.ಪ. ||


ರೊಕ್ಕದಾಸೆಯ ಬಿಡಬೇಕು | ಸ್ತ್ರೀ ಮೋಹಕೆ
ಸಿಕ್ಕದೆ ನಡಕೊಳ್ಳಬೇಕು
ಅಕ್ಕರು ದೇಹದೊಳಿರದಿರಬೇಕು
ಶಕ್ತಿಯ ಮೀರಿ ಧರ್ಮವ ಮಾಡಬೇಕು
ಮುಕ್ಕಣ್ಣ ಹರನ ಪೂಜಿಸಬೇಕು
ಮುಕ್ತಿ ಮಾರ್ಗವ ಪಡಕೊಳಬೇಕು || 1 ||


ಸರ್ವನಿಸ್ಪೃಹನಾಗಬೇಕು | ಸಂಸಾರದಿ
ಚರಿಸುತಲೂ ಇರಬೇಕು
ಗುರಿಹಿರಿಯರ ಕಂಡು ನಡೆಯಲು ಬೇಕು
ಪರರ ನಿಂದಿಸಿ ನುಡಿಯದೆ ಇರಬೇಕು
ಬರೆ ಸುಖದು:ಖವು ಸಮಗಾಣಬೇಕು
ಇರುಳು ಹಗಲು ಶಿವ ಶಿವ ಎನ್ನಬೇಕು || 2 ||


ತನ್ನ ತಾನೇ ತಿಳಿಯಬೇಕು | ತೋರುವ ಲೋಕ-
(ವನ್ನು) ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶ್ವರನ ನೆನಹಿರಬೇಕು || 3 ||

4 comments:

  1. ಸುರೇಶ, ಮುಂದಿನ ಸಮಾವೇಶದಲ್ಲಿ ವೆಂಕಣ್ಣನ ಕೃತಿಗಳಿಗೆ ರಾಗ ಸಂಯೋಜಿಸಿ ಹಾಡುವ/ಹಾಡಿಸುವ ಬಗ್ಗೆ ಚಿಂತಿಸಲು ಶ್ರೀಮತಿ ಕಾಶಿಬಾಯಿಯವರೊಂದಿಗೆ ಚರ್ಚಿಸುವೆಯಾ?

    ReplyDelete
  2. ವೆಂಕಣ್ಣ ಕವಿಯ ಎಲ್ಲಾ ಕೃತಿಗಳನ್ನೂ ಪ್ರಕಟಿಸಿ, ಸುರೇಶ್.

    ReplyDelete
  3. ಖಂಡಿತವಾಗಿ. ಲಭ್ಯವಿರುವ ಕವಿವಂಶದ ಎಲ್ಲಾ ದಾಖಲೆಗಳನ್ನು ಬ್ಲಾಗಿಗೆ ಪೇರಿಸುವ ಉದ್ದೇಶವಿದೆ. ನಿಮ್ಮ ಆಸಕ್ತಿಗಾಗಿ ಧನ್ಯವಾದಗಳು.

    ReplyDelete