'ಕವಿಕಿರಣ' ಪತ್ರಿಕೆಯ ಆರಂಭಕ್ಕೆ ಬಂದ ಶುಭ ಕೋರಿದ ಸಂದೇಶಗಳು
ಶುಭ ಆಶೀರ್ವಾದ
ಸಂಪಾದಕರಿಗೆ,
ನೀವು ದಿನಾಂಕ ೧೨-೦೯-೦೮ರಂದು ಬರೆದ ಪತ್ರವು ತಲುಪಿ, ಶ್ರೀ ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಪಾದಾರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮಪೂರ್ವಕ ಸಮರ್ಪಿಸಲಾಯಿತು.
ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ಹಿಂದಿನ ಸಾಧಕರುಗಳನ್ನು ಮತ್ತು ಅವರ ಕೃತಿಗಳನ್ನು ಪರಿಚಯಿಸುವ ಹಾಗೂ ಉತ್ತಮ ಸಾಧನೆಯ ಪರಂಪರೆಯ ಮುನ್ನಡೆಯೊಂದಿಗೆ ಸಜ್ಜನ ಶಕ್ತಿಯ ಜಾಗೃತಗೊಳಿಸುವ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆ ಪ್ರಕಟಗೊಳ್ಳಲಿರುವ ವಿಚಾರವನ್ನು ಅರಿತು ಶ್ರೀ ಶ್ರೀ ಗಳವರು ಸಂತೋಷಪಟ್ಟಿರುತ್ತಾರೆ.
ಶ್ರೀ ಶಾರದಾ ಚಂದ್ರಮೌಳೀಶ್ವರರ ಕೃಪೆಯಿಂದ ಪತ್ರಿಕೆಯು ವಿದ್ವತ್ಪೂರ್ಣ ಲೇಖನಗಳೊಂದೊಡಗೂಡಿ ಪ್ರಕಟಗೊಳ್ಳಲಿ ಹಾಗೂ ಬಹು ಜನಪ್ರಿಯತೆಯನ್ನು ಗಳಿಸುವಂತಾಗಲಿ ಎಂದು ಶ್ರೀ ಶ್ರೀಗಳವರು ಆಶೀರ್ವದಿಸಿ, ಅನುಗ್ರಹಿಸಿರುವ ಆಶೀರ್ಮಂತ್ರಾಕ್ಷತೆ, ಶ್ರೀ ಶಾರದಾ ಅರ್ಚನಾ ಪ್ರಸಾದವನ್ನು ಕಳುಹಿಸಿರುತ್ತೇನೆ.
ವಂದನೆಗಳೊಂದಿಗೆ,
ಗೌರೀಶಂಕರ್,
ಆಡಳಿತಾಧಿಕಾರಿಗಳು, ಶ್ರೀ ಶೃಂಗೇರಿ ಮಠ, ಶೃಂಗೇರಿ .
*******************************
ಶುಭ ಆಶೀರ್ವಾದ
ಸಂಪಾದಕರಿಗೆ,
ಕವಿಕಿರಣ ಎಂಬ ನೂತನ ಪತ್ರಿಕೆಯೊಂದನ್ನು ಹೊರತರಲಿರುವ ವಿಚಾರ ತಿಳಿದು ಸಂತೋಷವಾಯಿತು.
ಕೆಳದಿ ಕವಿ ಮನೆತನದ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯಾತ್ಮಕ ಲೇಖನಗಳಿಂದೊಡಗೂಡಿ ಸಂಚಿಕೆಯು ಆಕರ್ಷಕವಾಗಿ ಪ್ರಕಟವಾಗಲೆಂದು ಆಶಿಸುತ್ತೇನೆ.
ಈ ದಿಸೆಯಲ್ಲಿ ನಿಮ್ಮೆಲ್ಲ ಪ್ರಯತ್ನ ಪರಿಶ್ರಮ ಸಫಲವಾಗುವಂತೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.
ಇತಿ,
ಡಿ. ವೀರೇಂದ್ರ ಹೆಗ್ಗಡೆಯವರು,
ಶ್ರೀ ಧರ್ಮಸ್ಥಳ.
***************
ಶುಭ ಆಶೀರ್ವಾದ
ಸಂಪಾದಕರಿಗೆ,
ಸೂರ್ಯಃ ಆತ್ಮಾ ಜಗತಃ. ಈ ಚರಾಚರ ಪ್ರಪಂಚವನ್ನು ಬೆಳಗುವವ ಭಗವಾನ್ ಸೂರ್ಯದೇವ. ಕಿರಣ ಸ್ಪರ್ಷ ಮಾತ್ರದಿಂದ ಈ ಜೀವಜಗತ್ತಿಗೆ ಚೈತನ್ಯೋದಯ ಅರಳಿಸುವ - ಬೆಳಗಿಸುವ - ಬಾಳಿಸುವ ಗುಣವಿಶೇಷ ಕಿರಣಕ್ಕಿದೆ. ನೇರ - ನಿರಂತರತೆಯೇ ಕಿರಣದ ಗತಿ.
ಕವಿ ಕ್ರಾಂತದರ್ಶಿ. ತನ್ನಂತರಂಗದ ಅನುಭಾವಕ್ಕೆ ಕ್ಷರರಹಿತವಾದ ಅಕ್ಷರರೂಪ ನೀಡಿ ಸಹೃದಯರಲ್ಲಿ ನವ್ಯಲೋಕವನ್ನು ಸೃಷ್ಟಿಸುವ ಅಭಿನವ ಶಬ್ಧಬ್ರಹ್ಮ. ಪ್ರಕೃತ ಕೆಳದಿಯ ಸಂಸ್ಥಾನದಲ್ಲಿ ಅರಳಿದ ಕವಿವಂಶದ ವೃಕ್ಷವಾಹಿನಿ ತನ್ನತನದ ಮೆರಗಿನೊಂದಿಗೆ ಕವಿಕಿರಣ ಎಂಬ ಪತ್ರಿಕೆಯ ಲೋಕಾರ್ಪಣೆಯ ನವವಸಂತವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಈ ವಿಷಯವರಿತ ಶ್ರೀ ಸಂಸ್ಥಾನದವರು ಸಂತಸ ವ್ಯಕ್ತಪಡಿಸಿರುತ್ತಾರೆ.
ಭೂತ - ವರ್ತಮಾನ - ಭವ್ಯಭವಿಷ್ಯತ್ತಿನ ಕೊಂಡಿಯಾಗಿ ಬೆಳಗಿದ ಕೆಳದಿಯ ಕವಿ ವಂಶವೃಕ್ಷ ಬಾಳಲಿ, ಬೆಳೆಯಲಿ, ಬೆಳಗಲಿ. ತನ್ನ ಜ್ಞಾನಕಿರಣದಿಂದ ಪ್ರಪಂಚವನ್ನು ಪೂರ್ಣತೆಯೆಡೆಗೆ ಒಯ್ಯುವಂತಾಗಲಿ ಎಂದು ಶ್ರೀ ಮಹಾ ಸಂಸ್ಥಾನದವರು ಹಾರೈಸಿದ ಸಂಗ್ತಿ ಶೃತಪಡಿಸಿದೆ.ಶ್ರೀ ಮಹಾಸಂಸ್ಥಾನದ ಅಪ್ಪಣೆಯ ಮೇರೆಗೆ
ರಾಘವೇಂದ್ರ ಮಧ್ಯಸ್ಥ, ವ್ಯವಸ್ಥಾಪಕರು,
ಶ್ರೀ ರಾಮಚಂದ್ರಾಪುರ ಮಠ,
ಹನಿಯ ಅಂಚೆ, ಹೊಸನಗರ ತಾ., ಶಿವಮೊಗ್ಗ ಜಿಲ್ಲೆ.
*********************
ಶುಭ ಹಾರೈಕೆ
ಇತಿಹಾಸ ಪ್ರಸಿದ್ಧ ಕೆಳದಿ ಸಂಸ್ಥಾನದ ಕವಿ ಮನೆತನದ ಕುಟುಂಬಗಳ ಸಾಧನೆ, ಸಾಧಕರ ಪರಿಚಯಿಸುವುದರೊಂದಿಗೆ ಕವಿಕಿರಣ ಪತ್ರಿಕೆಯನ್ನು ಹೊರತರುತ್ತಿರುವುದು ಸಂತಸದ ಮತ್ತು ಅಭಿನಂದನೀಯ ಸಂಗತಿಯಾಗಿದೆ. ನಾಡಿನ ಇತಿಹಾಸದಲ್ಲಿ ಕೆಳದಿ ಸಂಸ್ಥಾನಕ್ಕೆ ವಿಶಿಷ್ಟ ಸ್ಥಾನ, ಮಾನ ಇದೆ.
ಕವಿಕಿರಣ ಪತ್ರಿಕೆಗೆ ಹಾರ್ದಿಕ ಶುಭ ಕಾಮನೆಗಳು.
ಗೋಪಾಲಕೃಷ್ಣ ಬೇಳೂರು,
ವಿಧಾನ ಸಭಾ ಸದಸ್ಯರು, ಸಾಗರ
***************
ಸಂದೇಶ
ಕೆಳದಿ ಅರಸರ ಸತ್ಯನಿಷ್ಟ ಆಳ್ವಿಕೆಯಿಂದ ಐತಿಹಾಸಿಕ ಮನ್ನಣೆಯನ್ನು ಪಡೆದಿರುವ ಕೆಳದಿಯು, ಕವಿಲಿಂಗಣ್ಣ, ಕವಿ ವೆಂಕಣ್ಣ, ಕವಿ ಕೃಷ್ಣಪ್ಪ ಮೊದಲಾದ ಕವಿಗಳಿಂದಾಗಿ ಕವಿಗಳ ನಾಡೆಂದೇ ಪ್ರಸಿದ್ಧಿಯನ್ನು ಪಡೆದಿದೆ, ಈ ಕವಿ ಕುಟುಂಬದವರು ಹಲವೆಡೆ ಹರಡಿ ಹಂಚಿಹೋಗಿರುವ ಈ ಕವಿ ಮನೆತನದವರನ್ನು ಒಂದೆಡೆ ಸೇರಿಸಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದು ಅಭಿನಂದನೀಯ.
ಕವಿ ಕುಟುಂಬಗಳ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯ ಮಾಡಿಕೊಡುವ ಹಾಗು ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮುಖ್ಯ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆಯನ್ನು ಪ್ರಾರಂಭಿಸುವ ತಮ್ಮ ಉದ್ದೇಶ ಸಾರ್ಥಕವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
- ಡಾ. ನಲ್ಲೂರು ಪ್ರಸಾದ್ ಆರ್.ಕೆ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
********************
ಶುಭ ಸಂದೇಶ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರ್ನಾಟಕದ ಐತಿಹಾಸಿಕ ಕೆಳದಿ ಸಂಸ್ಥಾನದ ಗತವೈಭವದ ನೆನಪಿನಲ್ಲಿ ಶ್ರೀ ಕವಿ ಲಿಂಗಣ್ಣ ಮುಂತಾದ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ನೆನಪಿಗಾಗಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ಮರೆತು ಹೋಗುತ್ತಿರುವ ಎಷ್ಟೋ ವೈಶಿಷ್ಟ್ಯಗಳನ್ನು ನೆನಪು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಪ್ರಶಂಸನೀಯವಾಗಿದೆ. ಹಾಲಿ ಮೂರನೇ ವಾರ್ಷಿಕ ಸಮಾವೇಶದಲ್ಲಿ ಹೊರತರಲಿರುವ ಉದ್ದೇಶಿತ ಕವಿಕುಟುಂಬದ ಪತ್ರಿಕೆ ಕವಿಕಿರಣ ಪತ್ರಿಕೆಯು ಯುವ ಪೀಳಿಗೆಗೆ ದಾರಿದೀಪವಾಗಿ ಕವಿಹೃದಯ ಚಿಗುರೊಡೆಯಲಿ, ಸಮಾಜಕ್ಕೆ ಆಶಾದಾಯಕವಾಗಿ ಉತ್ತಮ ರೀತಿಯಲ್ಲಿ ಹೊರಹೊಮ್ಮಿ, ಯೋಜಿತ ಉದ್ದೇಶ ಸಫಲವಾಗಲಿ ಎಂದು ಹಾರೈಸುತ್ತೇನೆ.
ಡಾ|| ಪ್ರವೀಣ್ ಕುಮಾರ್ ಜಿ.ಎಲ್., ಕ.ಆ.ಸೇ.,
ಉಪವಿಭಾಗಾಧಿಕಾರಿ
ಮತ್ತು ಉಪವಿಭಾಗೀಯ ದಂಡಾಧಿಕಾರಿ, ಸಾಗರ.
****************
ಶುಭನುಡಿ
ನಮ್ಮ ಪೂರ್ವಿಕರು ಪ್ರತಿಭಾಸಂಪನ್ನರಾಗಿದ್ದು, ನಮ್ಮ ಮನೆತನದ ಈಗಿನವರೂ ಸಹ ಪ್ರತಿಭಾಶಾಲಿಗಳಾಗಿದ್ದಾರೆ. ಪ್ರತಿವರ್ಷ ಕವಿವಂಶಸ್ಥರ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಕವಿಮನೆತನದ ಪತ್ರಿಕೆ ಕವಿಕಿರಣ ಹೊರತರುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.
ಕೊಲ್ಲೂರು ಮೂಕಾಂಬಿಕೆ ಮತ್ತು ವೆಂಕಟರಮಣ ಸ್ವಾಮಿಯ ಅನುಗ್ರಹದಿಂದ ಪತ್ರಿಕೆಯ ಸದುದ್ದೇಶ ನೆರವೇರಲಿ.
- ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ.
***************
ಶುಭಾಶಯ
ಇತಿಹಾಸವನ್ನು ಅಭ್ಯಾಸ ಮಾಡಿರಿ. ಚರಿತ್ರೆಯಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಈ ಕಾಲದಲ್ಲಿ ಉತ್ತಮ ನಾಗರಿಕರಾಗಿ ಬಾಳಿರಿ. ಮುಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದೋರಿ ಭಾರತವನ್ನು ಮತ್ತು ಕನ್ನಡ ನೆಲವನ್ನು ಉಜ್ವಲವಾಗಿ ಬೆಳಗಲು ಪಣತೊಟ್ಟು ಕಾರ್ಯಶೀಲರಾಗಿ ದುಡಿಯಿರಿ.
ಕವಿಕಿರಣಕ್ಕೆ ಶುಭವಾಗಲಿ.
-ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್
**********************
ದಾರಿದೀಪವಾಗಲಿ
ಪ್ರತಿವ್ಯಕ್ತಿಯೂ ಒಂದೊಂದು ಜನ್ಮದಲ್ಲೂ ಆಯಾ ಜನ್ಮದ ಹಿರಿಯರ ಬಳುವಳಿಯಿಂದ ಹೊಸ ಹೊಸ ಸಂಸ್ಕಾರಗಳನ್ನು ಪಡೆಯುತ್ತಾ ಮುಕ್ತಿಪಥದಲ್ಲಿ ವಿಕಾಸ ಗೊಳ್ಳುತ್ತಾನೆ. ಅದರಂತೆ ಕವಿವಂಶದಲ್ಲಿ ಜನಿಸಿರುವ ನಮಗೆ ನಮ್ಮ ಪೂರ್ವಜರಿಂದ ಪ್ರಾಪ್ತವಾಗಿರುವ ಸದ್ಗುಣ ಸಂಪತ್ತುಗಳಿಗಾಗಿ ಅವರೆಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಶಿರಬಾಗಿ ನಮಿಸೋಣ.
ಇಂತಹ ಸದ್ಗುಣ ಸಂಪತ್ತುಗಳ ವೃದ್ಧಿಗೆ ಸಹಕಾರಿ ಯಾಗಿ, ದಾರಿದೀಪವಾಗಿ ಕವಿಕಿರಣ ಬೆಳಗಲಿ ಎಂದು ಆಶಿಸುತ್ತೇನೆ.
-ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು.
********************
No comments:
Post a Comment