ರಾಗ: ಸೌರಾಷ್ಟ್ರ : ಏಕತಾಳ
ಕೃಷ್ಣ : ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲ ತೆಗೆಯೆ ||
ಭಾಮೆ: ದ್ವಾರದಿ ದನಿಯನ್ನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು ||
ಕೃಷ್ಣ : ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ ||
ಭಾಮೆ : ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ ||
ಕೃಷ್ಣ : ಕ್ರೂರ ಕಾಳಿಂಗನ ಪಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ ||
ಭಾಮೆ : ಧೀರ ನೀನಾದರೆ ಪಾವನಾಡಿಸಿಕೊಂಡು ಗಾರುಡಿಗಾರ ಹೋಗಯ್ಯ ||
ಕೃಷ್ಣ : ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ ||
ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ ||
ಕೃಷ್ಣ : ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ ||
ಭಾಮೆ: ಆದರೊಳ್ಳಿತು ಘೋರಾಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ ||
ಕೃಷ್ಣ : ಕಾಂತೆ ಕೇಳಾದರೇಳು ವೃಷಭವ ಕಟ್ಟೆ ನೀಲಕಾಂತೆಯ ತಂದವ ಕಾಣೆ ||
ಭಾಮೆ: ಅಂತಾದರಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ ||
ಕೃಷ್ಣ : ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ ||
ಭಾಮೆ: ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ ||
No comments:
Post a Comment