ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, November 22, 2010

ಕೆಳದಿ ಕವಿ ಲಿಂಗಭಟ್ಟ (ಕವಿ ಲಿಂಗಣ್ಣ)

ಕೆಳದಿ ಕವಿ ಲಿಂಗಭಟ್ಟ       (ಕವಿ ಲಿಂಗಣ್ಣ)               
        ಕ್ರಿ,ಶ. ೧೭೫೦ ರ ಸುಮಾರಿನಲ್ಲಿದ್ದ ಕವಿ ಲಿಂಗಣ್ಣ ಕೆಳದಿ ಸಂಸ್ಥಾನದ ಆಸ್ಥಾನ ಕವಿ, ಇವರ ನಂತರ ಇವರ ವಂಶಸ್ಥರಿಗೆ ಕವಿ ಎಂಬ ಉಪನಾಮ ಬಂದಿದೆ. ಆದುದರಿಂದ ಕವಿ ವಂಶಕ್ಕೆ ಮೂಲಪುರುಷರು ಈ ಕವಿ ಲಿಂಗಣ್ಣ. ಇವರ ತಂದೆ ವೆಂಕಟಪ್ಪ (ತಾಯಿಯ ವಿವರ ತಿಳಿದಿಲ್ಲ). ಇವರ ವಾಸ ಸಾಗರ - ಕೆಳದಿ ಆಗಿತ್ತೆಂದೂ, ಇವರಿಗೆ ಇದೇ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಜಮೀನು ಇತ್ತೆಂದೂ ಉಲ್ಲೇಖಗಳು ತಿಳಿಸುತ್ತವೆ. ಕೆಳದಿ ಮ್ಯೂಜಿಯಂಬಲ್ಲಿರುವ ನವಾಬ್ ಹೈದರಾಲಿಯ ಸಹಿ ಇರುವ ಈ ಅಪೂರ್ವ ಚಾರಿತ್ರಿಕ ದಾಖಲೆಯಲ್ಲಿ ಕೆಳದಿ ಕವಿ ಸುಬ್ಬಾಭಟ್ಟ - ಶ್ಯಾಂಭಟ್ಟರಿಗೆ ಕೆಳದಿ ಅರಸರು ನೀಡಿದ್ದ ಇನಾಂ ಭೂಮಿಯು ಹೈದರನ ಪರಿವಾರದಲ್ಲಿ ಜಫ್ತಿಯಾಗಿದ್ದುದನ್ನು ಕೆಳದಿ ರಾಜಧಾನಿ ನಗರ (ಬಿದನೂರು) ದಿವಾನ್ ಅವಲ್ ನರಸಪ್ಪಯ್ಯನವರು ತಪ್ಪಿಸಿ ಸದರಿ ಕವಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಬಗ್ಗೆ ವಿವರಗಳಿವೆ. ಕೆಳದಿ ಕವಿ ಲಿಂಗಣ್ಣನವರ ಗ್ರಂಥಗಳಿಂದ ಇವರು ಎರಡನೇ ಬಸಪ್ಪನಾಯಕನ ಕಾಲದಲ್ಲಿ (೧೭೩೯-೧೭೫೫)ಜೀವಿಸಿರಬಹುದೆಂದು ತೋರುತ್ತದೆ.
       ಒಮ್ಮೆ ಲಿಂಗಣ್ಣನವರು ಕೊಲ್ಲೂರಿನ ಶ್ರೀ ಮೂಕಾಂಬಿಕೆಯ ಸನಿಹದಲ್ಲಿ ಭಕ್ತಿಯಿಂದ ದೇವಿಯನ್ನು ಕುರಿತು ಪ್ರಾರ್ಥಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಗ ತಾನೇ ಕೊಲ್ಲೂರಿಗೆ ಆಗಮಿಸಿದ್ದ ಕೆಳದಿ ನಾಯಕ ನಿಗೆ ಈತನ ಗಾನಮಾಧುರ್ಯ ಬಹು ಮೆಚ್ಚಿಗೆ ಯಾಯಿತು. (ಕೆಳದಿ ಅರಸರಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕೆಯೂ ಕುಲದೇವರಲ್ಲಿ ಒಂದಾಗಿತ್ತು). ತುಸು ಸಮಯದಲ್ಲಿಯೇ ದೇವಿಯ ಸನಿಹದಿಂದ ಪುಷ್ಪ ವೊಂದು ಲಿಂಗಣ್ಣನ ಮಡಿಲಿಗೆ ಬಿತ್ತು. ಇದನ್ನು ಕಂಡು ಕೆಳದಿ ನಾಯಕನು ಈತನ ಪೂರ್ವೇತಿಹಾಸವನ್ನು ತಿಳಿದು ತನ್ನ ಆಸ್ಥಾನದಲ್ಲಿ ಆಸ್ಥಾನ ಕವಿಯನ್ನಾಗಿ ಸೇರಿಸಿಕೊಂಡನು.* (ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ದಿ. ಜಿ.ವಿ.ಕೆ. ರಾವ್‌ರವರ ಮಾವನವರಾದ ಶ್ರೀ ಮಾಧವರಾಯರು ತೆಗೆದುಕೊಂಡು ಹೋಗಿದ್ದ ಸಾಗರದ ಕವಿ ಲಿಂಗಣ್ಣಯ್ಯ ನವರು ರಚಿಸಿದ್ದ ವೈದೀಕ ಧರ್ಮದ ಶಾಸ್ತ್ರೀಯ ವಿಚಾರ ಎಂಬ ಹಸ್ತ ಪ್ರತಿಯಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ ಎಂದು ಕೆಳದಿಯ ಶ್ರೀ ಗುಂಡಾಜೋಯಿಸ್ ರವರಿಂದ ತಿಳಿದು ಬರುತ್ತದೆ.) *ಮಾನವಿಕ ಕರ್ನಾಟಕ, ಸಂ.೨, ೧೯೭೩, ಪು.೬೧ - ಮೈಸೂರು ವಿಶ್ವವಿದ್ಯಾಲಯ.  
  ಕವಿ ಲಿಂಗಣ್ಣ ರಚಿಸಿದ ಕೆಲವು ಕೃತಿಗಳ ಸೂಕ್ಷ್ಮ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
೧. ಕೆಳದಿ ನೃಪವಿಜಯ: (ಪುನರುಕ್ತಿಯಾಗುವುದರಿಂದ ಈ ಭಾಗ ಕೈಬಿಟ್ಟಿದೆ).
೨. ದಕ್ಷಾಧ್ವರ ವಿಜಯ: ಇದೊಂದು ಖಂಡ ಕಾವ್ಯ. ಸ್ಕಂದ ಪುರಾಣದಲ್ಲಿ ವ್ಯಾಸ ಮಹರ್ಷಿಯ ಶಿಷ್ಯನಾದ ಸೂತನು ಶೌನಕಾದಿ ಮುನಿಗಳನ್ನು ನೈಮಿಷಾರಣ್ಯದಲ್ಲಿ ಸಂಧಿಸಿದಾಗ ಮಹಾದೇವನ ಮಹಾತ್ಮೆಯನ್ನು ಕೇಳು ತ್ತಾರೆ. ಆಗ ಅಲ್ಲಿ ದಕ್ಷನ ವಿಷಯ ಬರುತ್ತದೆ. ಬ್ರಹ್ಮ ಪುತ್ರನಾದ ದಕ್ಷನಿಗೆ ತಾನೇ ಶ್ರೇಷ್ಠನೆಂಬ ಗರ್ವ. ದಕ್ಷನು ಬ್ರಹ್ಮನ ಮಾತಿನಂತೆ ತನ್ನ ಮಗಳಾದ ಸತೀದೇವಿಯನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಿದನಂತೆ. ಮುಂದೊಮ್ಮೆ ಇಂದ್ರಾದಿ ಗಳೂ, ಮಹರ್ಷಿಗಳೂ ನೈಮಿಷಾರಣ್ಯಕ್ಕೆ ಬಂದಾಗ ಇವರನ್ನು ಸ್ತುತಿಸಿದರಂತೆ. ಆದರೆ ಶಿವನು ಅವರನ್ನು ಎದ್ದು ಗೌರವಿಸಲಿಲ್ಲ. ಇದರಿಂದ ಸಿಟ್ಟುಗೊಂಡ ದಕ್ಷನು ಶಿವನನ್ನು ಯಜ್ಞ ಬಾಹ್ಯನನ್ನಾಗಿ ಮಾಡಿರುವುದಾಗಿ ತಿಳಿಸುತ್ತಾನೆ. ತಿಳಿ ಹೇಳಲು ಮುಂದಾದ ನಂದಿಗೂ ಶಾಪವಿತ್ತು ಕನಖಲ ಎಂಬ ಕ್ಷೇತ್ರದಲ್ಲಿ ಯಜ್ಞಕ್ಕೆ ಮುಂದಾಗುತ್ತಾನೆ. ಇದು ಶಿವ ದ್ರೋಹವಾಗಿ ಪರಿಣಮಿಸಿ ನಡೆಸಿದ ಯಾಗವೇ ದಕ್ಷಾಧ್ವರವೆಂದು ಪುರಾಣ ಪ್ರಸಿದ್ಧವಾಗಿದೆ.
     ದಕ್ಷಾಧ್ವರ ವಿಜಯ ಕಾವ್ಯದ ಕೆಲವು ಸಾಲು ಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದ್ದು, ಇವುಗಳು ಸಂಗೀತಾಸಕ್ತರಿಗೆ ಹೆಚ್ಚು ಪ್ರಿಯವಾಗಬಹುದು; ಸಂಗೀತ ಶಾಸ್ತ್ರದಲ್ಲೂ ಕವಿಗೆ ಇದ್ದ ಪ್ರೌಢಿಮೆಯನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ.
ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ| ಮುನಿಭಾವಿತೆ|
ಧರಣೀಧರ ವರಜಾತೆ|
ಬಾಲೆ ಸಕಲ ಜಗನ್ಮೋಹಿನಿ| ಸಿಂಹವಾಹಿನಿ|
ಲಾಲಿತ ಗಣಪ ಸೇನಾನಿ|| . .(ಭೈರವಿ ರಾಗ)
ಕಲ್ಯಾಣಿ ಕುರುವಾಣಿ| ಕಲ್ಯಾಣಂ ಕುರುವಾಣಿ ಸುವೇಣಿ|
ಕಲ್ಯಾಣಿ ವರದೇ ಬ್ರಹ್ಮಾಣಿ|| . .(ಬಿಲಾವರಿ ರಾಗ)
ಸಂತತಮೀಡೇ ಶಂಕರಂ| ಶಂಕರಂ| ಬ್ರಹ್ಮಾದಿದೇವ ಕಿಂಕರಂ|  ವಾರಿಜಭವ ಕಂಕರಂ| ಕುಂಡಲಿತ ದರ್ವೀಕರಂ| ಬಾಲಶೀತಾಂಶೂ ಶೇಖರಂ| ಸಂತತ ಮೀಡೇ ಶಂಕರಂ || (ಮೋಹನಕಲ್ಯಾಣಿ ರಾಗ)
ಲಿಂಗಂ ಭಜೇ ದಿವ್ಯ ಲಿಂಗಂ ಭಜೇ|ಮಹಾಲಿಂಗಂ ಭಜೇ ಶಿವಲಿಂಗಂ ಭಜೇ|| (ಪೂರ್ವಿ ಕಲ್ಯಾಣಿ ರಾಗ)
ಪಾಲಯಮಾಂ ಶಂಕರ| ಪೋಷಿತ ಸುರ|       ಜಾಲ ವ್ಯೋಮ ಗಂಗಾಧರಾ|| ನೀಲಲೋಹಿತ ಭೂರಲೋಲ ಗಾನ ವಿಲೋಲ|| ಕಾಲ ಕಾಲ ಕರುಣಾಲವಾಲ ಧೃತ| ಶೂಲ ನೀಲ ಫಾಲ ವಿಲೋಚನ|| (ತೋಡಿ ರಾಗ)
೩. ಶಿವಪೂಜಾ ದರ್ಪಣ:  ಇದೊಂದು ಖಂಡ ಕಾವ್ಯ. ೫೮೫ ಸಂಖ್ಯೆಯ ಕಂದ, ವೃತ್ತ, ವಚನ, ಗದ್ಯಗಳಿಂದ ಕೂಡಿದ ಕೃತಿ. ಶಿವಪೂಜೆ ಈ ಕಾವ್ಯದ ವಸ್ತು. ಭಕ್ತಿಮಾರ್ಗದ ವೈಶಿಷ್ಟ್ಯ ಇದರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ೧೭ನೇ ಶತಮಾನದಲ್ಲಿ ಪೂಜಾವಿಧಿಯನ್ನು ಕನ್ನಡದಲ್ಲಿ ನಿರೂಪಿಸಿದ ಪ್ರಥಮ ಪ್ರಯತ್ನ ಇದೆನ್ನಬಹುದು, (ಇತ್ತೀಚೆಗೆ ಹಿರೇಮಗಳೂರು ಕಣ್ಣನ್ ರವರೂ ಕೂಡಾ ಪೂಜಾ ಮಂತ್ರಗಳನ್ನು ಕನ್ನಡದಲ್ಲಿ ಅಳವಡಿಸಿರುವುದೂ ಉಲ್ಲೇಖಾರ್ಹ). ಶಿವಪೂಜಾ ದರ್ಪಣ ಆಸ್ತಿಕರ ಕೈಪಿಡಿ; ಶಿವಭಕ್ತರ ಆರಾಧನಾ ಗ್ತಂಥವೆಂದೂ ಬಣ್ಣಿಸಲಾಗಿದೆ.
     ಕವಿಯು ಪ್ರಥಮಾಶ್ವಾಸದಲ್ಲಿ ಶಿವ - ಪಾರ್ವತಿ ಯನ್ನು, ವಿಘ್ನೇಶ್ವರನನ್ನು, ಶಾರದೆಯನ್ನು, ವಾಲ್ಮೀಕಿ, ಕಾಳಿದಾಸ, ಪಂಪ, ರಾಘವಾಂಕರಂಥ ಮಹಾನ್ ಕವಿಗಳನ್ನು ಸ್ಮರಿಸುವ ಪರಿ ಅವರ ಉತ್ತಮ ಸಂಸ್ಕಾರ ವನ್ನು ಹಾಗೂ ದೇವರ ಮತ್ತು ವಿದ್ವಾಂಸರ ಮೇಲಿರುವ ಅಚಲ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಪೂಜೆಯ ವಿವಿಧ ಹಂತಗಳನ್ನು ಬಲು ಸುಂದರವಾಗಿ ನಿರೂಪಿಸ ಲಾಗಿದ್ದು, ಶಿವನಿಗೆ ನೈವೇದ್ಯವನರ್ಪಿಸುವಾಗ ಕೃತಿಯಲ್ಲಿ ಬರುವ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಕೊಟ್ಟೆಯ ಕಡುಬಂ ಗೋಧಿಯ|
ರೊಟ್ಟಿಯನಾ ಕಡಲೆಗಡುಬ ಪೊಯ್ಗಡುಬಮಂ ನುಂ
ಪಿಟ್ಟ ವೃತ್ತಾಸು ಮುಳುಕಗ|
ಳೊಟ್ಪೊಜೆಗಳನಳಕನೇತ್ರ ಭಕ್ಷಿಪುದೊಲವಿಂ||
ಹೆರೆದುಪ್ಪಂ ತಿಳಿದುಪ್ಪಂ|
ನೊರೆದುಪ್ಪಂ ಕಡಿದುಪ್ಪ ನೀರ್ಮಳಲ್ದುಪ್ಪಂ||
ನೆರೆಯುದಿರ್ದುಪ್ಪಮೆನಿಪ್ಪೀ|
ಪರಿಪರಿದುಪ್ಪಗಳ ಸವಿಯ ನೋಳ್ಪುದುಮೇಶಾ||

     ಶಿವಪೂಜಾ ದರ್ಪಣದ ಪ್ರತಿ ಅಧ್ಯಾಯದ ಅಂತ್ಯದಲ್ಲಿ ಕವಿ ತನ್ನ ಹೆಸರು ಹಾಗೂ ಗೋತ್ರ (ಹರಿತಸ)ಗಳನ್ನು ಹೇಳಿಕೊಂಡಿರುವುದನ್ನು ಗಮನಿಸ ಬಹುದಾಗಿದೆ. ಈ ಕಾವ್ಯದ ಅಂತ್ಯದಲ್ಲಿ ಕವಿ ಬರೆದ ಮುಕ್ತಾಯ ಇಂತಿದೆ. (ಬಹುಶಃ ಶಿವಪೂಜಾದರ್ಪಣ ದಲ್ಲಿ ವಿವರವಾಗಿ ನಿರೂಪಿಸಿರುವ ಶಿವ ಪೂಜೆಯ ಪ್ರತಿ ಹೆಜ್ಜೆಗಳ ಸಾರಾಂಶವೇ ಇದರಲ್ಲಿದೆಯೆನ್ನಲಡ್ಡಿಯಿಲ್ಲ).
ಇದಖಿಲ ಸುರನರೋರಗ ನಿಕರ ಮಕುಟ ತಟ ಘಟಿತ ಮಾಣಿಕ್ಯ
ಮಯೂಖಮಂಜರೀಪುಂಜ ಶಬಲೀಕೃತ ಕನತ್ಕನಕ ಪಾದುಕಾ
ವಿರಾಜಮಾನ ಶ್ರೀಮತ್ಸಾಂಬ ಸದಾಶಿವ ಚರಣಾರವಿಂದ ದ್ವಂದ್ವ ಭಕ್ತಿರಸ ಮಕರಂದಮತ್ತ ಮಧುಕರಾಯಣಮಾನಸ ಭೂಸುರ ಕುಲಪ್ರದೀಪ ಹರಿತಸ ಗೋತ್ರೋದ್ಭವ ವೆಂಕಪಾತ್ಮಜ ಲಿಂಗಣಸೂರಿ ವಿರಚಿತ
ಶಿವಪೂಜಾದರ್ಪಣ ಪ್ರಬಂಧದೊಳ್ ರಂಗಪೂಜಾ ದೀಪಾರಾಧನ
ವಿವಿಧ ನೀರಾಜ(ನ) ವಸ್ತ್ರ (ಸಮ)ರ್ಪಣ ಮಂತ್ರಪುಷ್ಪ ಪ್ರದಕ್ಷಿಣ
ನಮಸ್ಕಾರ ಪ್ರಾರ್ಥನ ನಾನಾ ವಿಧ ವಿನಿಯೋಗ ಸೇವಾ ಸಮರ್ಪಣ
ಋಗ್ವೇದಾದಿ ವೇದ ವೇದಾಂಗ ಶಾಸ್ತ್ರಪುರಾಣಾಗಮ ತಂತ್ರೀ ಪಟಹಾದಿ ವಾದ್ಯ ಸುಷಿರ ವಾದ್ಯಾದಿ ವಾದುವಾದನ ಶ್ರವಣ ನೃತ್ಯ ವೃಷಭ ತುರಂಗಾರೋಹಣಾದಿ ನಾನಾ ವಿಧಯಾನೋತ್ಸವ ದೋಲಾರೋಹಣ ಖೇಲನ ಮಣಿಮಂಟಪ ಪ್ರ(ಧಾನ) ಮಂಗಲಾರತಿಕ ಸಮರ್ಪಣ ಕ್ಷೀರ ಪಾನಾತ್ಮಾರೋಪಣಾದಿ ಪೂಜೋಪಚಾರ ಸಮರ್ಪಣ ಕೃತಿ ಪ್ರಶಂಸಾತಚ್ಛ್ರವಣ ಫಲ ವಿವರಣಂ ಪಂಚಮಾಶ್ವಾಸಂ ಸಂಪೂರ್ಣಂ

     ಕವಿ ಲಿಂಗಣ್ಣ ಪಾರ್ವತಿ ಪರಿಣಯ ಮತ್ತು ಶಿವಕಲ್ಯಾಣ (ಯಕ್ಷಗಾನ) ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ.[ದಕ್ಷಾಧ್ವರ ವಿಜಯ (ಮೇಲೆ ಉಲ್ಲೇಖಿಸಿದ ಕೆಲವು ರಚನೆಗಳ ಸಂಪೂರ್ಣ ಸಾಹಿತ್ಯ ಇದರಲ್ಲಿದೆ) ಮತ್ತು ಶಿವಪೂಜಾ ದರ್ಪಣ ಕೃತಿಗಳನ್ನು ಕೆಳದಿಯ ಡಾ: ವೆಂಕಟೇಶ ಜೋಯಿಸರು ಸಂಪಾದಿಸಿ ೨೦೦೨ ರಲ್ಲಿ ಪ್ರಕಟಿಸಿದ್ದಾರೆ.]
     ಒಟ್ಟಿನಲ್ಲಿ ಹೇಳಬೇಕೆಂದರೆ ಕವಿ ಲಿಂಗಣ್ಣ ಓರ್ವ ಉತ್ತಮ ಇತಿಹಾಸಕಾರ, ಶ್ರೇಷ್ಠ ಕವಿ, ಸಂಗೀತಜ್ಞ ಮತ್ತು ಆಸ್ತಿಕ ಪುರುಷ. ಈತ ರಚಿಸಿರುವ ಅನೇಕ ಕೃತಿಗಳು ಸಂಶೋಧನೆಗೆ ಅರ್ಹವಾಗಿದ್ದು, ಚರಿತ್ರೆಯಲ್ಲಿ ಮತ್ತು ಕಾವ್ಯದಲ್ಲಿ ಆಸಕ್ತಿ ಹೊಂದಿದವರೆಲ್ಲರೂ ಈ ದಿಶೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಇನ್ನೂ ಉತ್ತಮವಾದ ಸಂಗತಿ ಗಳನ್ನು ಬೆಳಕಿಗೆ ತರಬಹುದಾಗಿದೆ. ಈತನ ನಂತರದ ಪೀಳಿಗೆಯವರಾದ ಸಾಗರದ ಕವಿ ಲಿಂಗಣ್ಣಯ್ಯ (ಶ್ರೇಷ್ಠ ಚಿತ್ರಕಾರ - ರಾಮಾಯಣ ಮತ್ತು ಭಾಗವತವನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ. ಚಿತ್ರ ರಚನೆ, ಮುದ್ರಣಕಲೆ, ಛಾಯಾಗ್ರಹಣ ಕಲೆ, ಮುಂತಾದ ವಿಷಯಗಳ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ). ಇವರ ಮೊಮ್ಮಗ ಕೆಳದಿ ಗುಂಡಾಜೋಯಿಸ್ (ಕೆಳದಿ ಮ್ಯೂಜಿಯಂ ಸಂಸ್ಥಾಪಕರು, ಸಂಶೋಧಕರು, ಅನೇಕ ಇತಿಹಾಸ ಕೃತಿಗಳ ರಚನೆಕಾರರು, ರಾಜ್ಯ ಪ್ರಶಸ್ತಿ ವಿಜೇತರು) ಮತ್ತು ಕವಿ ವಂಶದ ಇತರ ಅನೇಕರು ವಿವಿಧ ಕ್ಷೇತ್ರಗಳಲ್ಲಿ (ಸಂಗೀತ, ಸಾಹಿತ್ಯ, ಕಲೆ, ಇಂಜನಿಯರಿಂಗ್, ವೈದ್ಯಕೀಯ, ಆಧ್ಯಾತ್ಮಿಕ. ಇತ್ಯಾದಿ) ತಮ್ಮದೇ ಆದ ಅನುಪಮ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ಗಳನ್ನು ನೀಡುತ್ತಿದ್ದು, ಕವಿ ಲಿಂಗಣ್ಣನ ಹಾದಿಯಲ್ಲಿಯೇ ಸಾಗುತ್ತಿರುವುದು ಬಹುಶಃ ಕವಿ ಲಿಂಗಣ್ಣನ ಮತ್ತು ಕುಲಾರಾಧ್ಯ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕೃಪೆಯೆಂದೇ ಹೇಳಬಹುದು. 

  - ಕವಿ ವೆಂ. ಸುರೇಶ್
   (ಲೇಖಕರ 'ಉತ್ಕೃಷ್ಟದೆಡೆಗೆ' ಪುಸ್ತಕದಿಂದ ಆಯ್ದ ಲೇಖನ) 
(ಡಿಸೆಂಬರ್, 2008ರ 'ಕವಿಕಿರಣ' ಪತ್ರಿಕೆಯಲ್ಲಿ ಪ್ರಕಟಿತ ಲೇಖನ).    

No comments:

Post a Comment